– ಡಿ.ವಿ.ರಾಜಶೇಖರ
ಇಸ್ರೇಲ್ ಪಾರ್ಲಿಮೆಂಟ್‍ಗೆ ನಡೆದ ಚುನಾವಣೆಗಳಲ್ಲಿ(ನವೆಂಬರ್ 1) ಬಲಪಂಥೀಯ ಲಿಕುದ್ ಪಕ್ಷ ಮಿಕ್ಕೆಲ್ಲ ಪಕ್ಷಗಳಿಗಿಂತಾ ಹೆಚ್ಚು ಸ್ಥಾನ ಗಳಿಸಿದ್ದು ಆ ಪಕ್ಷದ ನಾಯಕ ಬೆಂಜಿಮಿನ್ ನೇತಾನ್ಯಹು ಪ್ರಧಾನಿಯಾಗುವುದು ಇದೀಗ ಖಚಿತವಾಗಿದೆ. ಅವರಿಗೆ ಇತರ ಉಗ್ರ ಬಲಪಂಥೀಯ ಧಾರ್ಮಿಕ ಪಕ್ಷಗಳು ಬೆಂಬಲ ನೀಡಲಿವೆ. ಭ್ರಷ್ಟಾಚಾರದ ಆರೋಪಕ್ಕೆ ಒಳಗಾಗಿ ಅಧಿಕಾರ ಕಳೆದುಕೊಂಡಿದ್ದ ನೇತಾನ್ಯಹು ತನಿಖೆಯಲ್ಲಿ ಆರೋಪಮುಕ್ತಗೊಂಡು ಒಂದು ವರ್ಷದ ಬಳಿಕ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಬಂದಿದ್ದಾರೆ. ನೇತಾನ್ಯಹು ಮತ್ತೆ ಪ್ರಧಾನಿಯಾಗುವುದೆಂದರೆ ಪ್ಯಾಲೆಸ್ಟೇನ್ ಪ್ರದೇಶದಲ್ಲಿ ಮತ್ತಷ್ಟು ಹಿಂಸಾಚಾರ, ಮತ್ತಷ್ಟು ಸಾವು ನೋವು ಸಂಭವಿಸುವ ಸಾಧ್ಯತೆ ಕಾಣುತ್ತಿದೆ.
ಕಳೆದ ಒಂದು ವರ್ಷದಲ್ಲಿ ಪ್ಯಾಲೆಸ್ಟೇನ್ ಪ್ರದೇಶಗಳಾದ ಪಶ್ಚಿಮ ದಂಡೆ ಮತ್ತು ಗಾಜಾ ಪಟ್ಟಿ ಪ್ರದೇಶದಲ್ಲಿ ರಕ್ತಪಾತವೇ ಆಗಿದೆ. ಹದಿನೇಳು ಮಕ್ಕಳೂ ಸೇರಿದಂತೆ ಕನಿಷ್ಟ ನೂರು ಪ್ಯಾಲೆಸ್ಟೇನ್ ಜನರು ಸತ್ತಿದ್ದಾರೆ. ಪ್ಯಾಲೆಸ್ಟೇನ್ ಉಗ್ರವಾದಿಗಳ ದಾಳಿಗೆ 20 ಮಂದಿ ಇಸ್ರೇಲ್ ಜನರೂ ಪ್ರಾಣ ಕಳೆದುಕೊಂಡಿದ್ದಾರೆ.
ಇಸ್ರೇಲ್‍ನ ಪಾರ್ಲಿಮೆಂಟ್‍ನಲ್ಲಿ (ಕೆನೆಸೆಟ್) 120 ಸ್ಥಾನಗಳಿದ್ದು ನೇತಾನ್ಯಹು ಅವರ ಲಿಕುದ್ ಪಕ್ಷ 32 ಸ್ಥಾನಗಳನ್ನು ಗಳಿಸಿದೆ. ಸರ್ಕಾರ ರಚಿಸಲು ಕನಿಷ್ಠ 61 ಸದಸ್ಯರು ಬೇಕು. ಲಿಕುದ್ ಪಕ್ಷ ಹೆಚ್ಚು ಸ್ಥಾನಗಳಿಸಿದ ಪಕ್ಷವಾಗಿದ್ದು ಸರ್ಕಾರ ರಚಿಸುವ ಅವಕಾಶ ನೇತಾನ್ಯಹು ಅವರಿಗೆ ಸಿಗಲಿದೆ. ಉಗ್ರ ಬಲಪಂಥೀಯ ಪಕ್ಷಗಳು ಅವರಿಗೆ ಬೆಂಬಲ ನೀಡುವುದು ಈಗ ಖಚಿತವಾಗಿದೆ. ಮುಖ್ಯವಾಗಿ ಬೊಜಾಲೆಲ್ ಸ್ಮೋಟ್ರಿಚ್ ಅವರ ಉಗ್ರ ಬಲ ಪಂಥೀಯ ಜಿಯೋನಿಸ್ಟ್ ( ಯಹೂದಿಗಳ ಹಿತ ಕಾಯುವ ಪಕ್ಷ) ಪಕ್ಷವೂ ಸೇರಿದಂತೆ ಹಲವು ಸಣ್ಣಪುಟ್ಟ ಧಾರ್ಮಿಕ ಪಕ್ಷಗಳು ಬೆಂಬಲ ನೀಡಲಿವೆ. ಈ ಲೆಕ್ಕಾಚಾರದ ಪ್ರಕಾರ ಅವರ ಸ್ಥಾನ ಬಲ 64 ಆಗಲಿದೆ. ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಧಾರ್ಮಿಕ ಪಕ್ಷಗಳು ಸರ್ಕಾರ ಸೇರಲಿವೆ. ಈ ಪಕ್ಷಗಳು ಅರಬ್ ಮತ್ತು ಮುಸ್ಲಿಮ್ ವಿರೋಧಿ ನೀತಿಗಳನ್ನು ಅನುಸರಿಸುತ್ತ ಬಂದಿದ್ದು ಪ್ಯಾಲೆಸ್ಟೇನ್ ಜನರ ವಿರುದ್ಧ ಮತ್ತಷ್ಟು ಕಠಿಣ ಕ್ರಮಕ್ಕೆ ಮುಂದಾಗಲಿರುವುದು ಖಚಿತ.
ಈ ಹಿಂದೆ ಅಧಿಕಾರದಲ್ಲಿದ್ದ ಅತಿದ್ ಪಕ್ಷದ ನಾಯಕ ಯಾಯಿರ್ ಲಪಿದ್ 24 ಸ್ಥಾನಗಳನ್ನು ಗೆಲ್ಲುವಲ್ಲಿ ಮಾತ್ರ ಸಫಲರಾಗಿದ್ದು ಅವರ ಪಕ್ಷ ವಿರೋಧಪಕ್ಷದ ಸ್ಥಾನದಲ್ಲಿ ಕೂರಲಿದೆ. ಇಸ್ರೇಲ್‍ನ ರಾಜಕೀಯ ವ್ಯವಸ್ಥೆಯಲ್ಲಿ ಚುನಾವಣೆಗೆ ಇಳಿಯುವ ಪಕ್ಷಗಳು ಹಲವಾರು. ಹೀಗಾಗಿ ಸ್ಥಿರತೆಯದೇ ದೊಡ್ಡ ಸಮಸ್ಯೆ. ಈಗ ತಾನೇ ಮುಗಿದ ಚುನಾವಣೆ ನಾಲ್ಕು ವರ್ಷಗಳ ಅವಧಿಯಲ್ಲಿ ಐದನೆಯದು. ಮುಂದೆ ನೇತಾನ್ಯಹು ರಚಿಸಲಿರುವ ಸರ್ಕಾರವೂ ಸ್ಥಿರತೆಯ ಸಮಸ್ಯೆಯನ್ನು ಎದುರಿಸಲಿದೆ. ಅವರು ಎಷ್ಟು ಕಾಲ ಅಧಿಕಾರದಲ್ಲಿ ಇರುವರು ಎಂಬುದನ್ನು ಅವರಿಗೆ ಬೆಂಬಲ ನೀಡಿರುವ ಪಕ್ಷಗಳು ನಿರ್ಧರಿಸುತ್ತವೆ.
ಇದೇನೇ ಇದ್ದರೂ ನೇತಾನ್ಯಹು ಅವರು ಪ್ಯಾಲೆಸ್ಟೇನ್ ವಿಚಾರದಲ್ಲಿ ಕಟುವಾದ ನಿಲುವನ್ನೇ ತಳೆಯುತ್ತ ಬಂದಿದ್ದಾರೆ. ಅವರು ಮೊದಲ ಸಲ ಪ್ರಧಾನಿಯಾದಾಗ ಸ್ವಲ್ಪ ಉದಾರವಾಗಿದ್ದರು. ಪ್ಯಾಲೆಸ್ಟೇನ್ ಜನರಿಗೆ ಪ್ರತ್ಯೇಕ ದೇಶಕೊಡಬೇಕೆನ್ನುವ ಸಲಹೆಗೆ ಅವರು ಸಹಮತ ವ್ಯಕ್ತಮಾಡಿದ್ದರು.(2009) ಆದರೆ ಈ ಅಭಿಪ್ರಾಯ ಬಹಳ ಕಾಲ ಉಳಿಯಲಿಲ್ಲ. ನೆರೆಯಲ್ಲಿ ಶತ್ರು ದೇಶ ಇಟ್ಟುಕೊಳ್ಳುವುದು ಅಪಾಯಕಾರಿ ಎನ್ನುವ ಅಭಿಪ್ರಾಯನ್ನು ಬಹಿರಂಗವಾಗೆಯೇ ಹೇಳಲಾರಂಬಿಸಿದರು. ಪ್ಯಾಲೆಸ್ಟೇನ್ ಜನರು ಇಸ್ರೇಲ್ ಭಾಗವಾಗಿಯೇ ಇರುವ ಬಗ್ಗೆ ಅವರು ಒಲವು ತೋರಿದ್ದರು. ಹೀಗೆಂದೇ ಪ್ರತ್ಯೇಕ ದೇಶಕ್ಕಾಗಿ ಹೋರಾಡುತ್ತಿರುವ ಪ್ಯಾಲೆಸ್ಟೇನ್ ಜನರ ವಿರುದ್ಧ ಸತತವಾಗಿ ಮಿಲಿಟರಿ ಕಾರ್ಯಾಚರಣೆ ನಡೆಸುತ್ತ ಬಂದರು. ಯಹೂದಿಗಳು ವಿಶ್ವದ ಎಲ್ಲೇ ಇರಲಿ ಇಸ್ರೇಲ್‍ಗೆ ಬಂದು ನೆಲೆಸಲು ಬಯಸಿದರೆ ಅವರಿಗೆ ನೆಲೆ ಕಲ್ಪಿಸುವುದು ಸರ್ಕಾರ ನೀತಿ. ಹೀಗಾಗಿ ಪ್ಯಾಲೆಸ್ಟೇನ್ ಜನರನ್ನು ಒಕ್ಕಲೆಬ್ಬಿಸಿ ಅಲ್ಲಿ ಹೊಸದಾಗಿ ಬಂದ ಯಹೂದಿಗಳಿಗೆ ನೆಲೆ ಕಲ್ಪಿಸಲಾಗುತ್ತಿತ್ತು. ಈ ಪ್ರಕ್ರಿಯೆ ನೇತಾನ್ಯಹು ಕಾಲದಲ್ಲಿ ಹೆಚ್ಚಾಗುತ್ತ ಬಂತು. ಈ ಪ್ರಕ್ರಿಯೆಯನ್ನು ವಿರೋಧಿಸುವ ಪ್ಯಾಲೆಸ್ಟೇನ್ ಜನರ ಮೇಲೆ ಗುಂಡು ಹಾರಿಸಲಾಗುತ್ತಿತ್ತು. ಇದಕ್ಕೆ ಪ್ರತಿಕಿಯ್ರೆಯಾಗಿ ಪ್ಯಾಲೆಸ್ಟೇನ್ ಉಗ್ರವಾದಿ ಗುಂಪು ಹಾಮಾಸ್ ಸತತವಾಗಿ ಇಸ್ರೇಲ್ ಮೇಲೆ ರಾಕೆಟ್ ದಾಳಿ ನಡೆಸುತ್ತ ಬಂತು. ಕೆಲವು ಪ್ಯಾಲೆಸ್ಟೇನ್ ಯುವಕರು ಮಾರು ವೇಶದಲ್ಲಿ ಇಸ್ರೇಲ್ ಹೋಗಿ ಬಾಂಬ್ ಸ್ಫೋಟಿಸುವುದು, ಚೂರಿ ಹಾಕುವುದು ಮುಂತಾದ ಕೃತ್ಯಗಳಲ್ಲಿ ತೊಡಗಿದ್ದಾರೆ. ನೇತಾನ್ಯಹು ಅವರಿಗೆ ಮಾತುಕತೆ, ಸಂಧಾನದಲ್ಲಿ ನಂಬಿಕೆಯೇ ಇದ್ದಂತಿಲ್ಲ. ಹೀಗಾಗಿ ಪ್ಯಾಲೆಸ್ಟೇನ್ ಜನರಿಗೆ ಅವರೇ ಒಂದು ಸಮಸ್ಯೆಯಾಗಿ ಪರಿಣಮಿಸಿದ್ದಾರೆ.
ಯಹೂದಿಗಳಿಗಾಗಿಯೇ ಪ್ರತ್ಯೇಕ ದೇಶ ಇಸ್ರೇಲ್ ಸ್ಥಾಪನೆಗೆ 1948ರಲ್ಲಿ ವಿಶ್ವಸಂಸ್ಥೆ ಒಪ್ಪಿಗೆ ನೀಡಿ, ಪ್ರತ್ಯೇಕ ಪ್ಯಾಲೆಸ್ಟೇನ್ ದೇಶ ರಚನೆ ವಿಚಾರವನ್ನು ಅರಬ್ ದೇಶಗಳ ಗೊಂದಲಗಳಿಂದಾಗಿ ಮುಂದಕ್ಕೆ ಹಾಕಿದಂದಿನಿಂದ ಹಿಂಸಾಚಾರದ ಬಾಗಿಲೇ ತೆರೆದುಕೊಂಡಿತು. ಸಮಸ್ಯೆಯನ್ನು ಬಗೆಹರಿಸುವ ದಿಸೆಯಲ್ಲಿ ಸಂಧಾನಗಳು ನಡೆದಿವೆ. ಕೆಲವು ವಿಚಾರಗಳಲ್ಲಿ ಹೊಂದಾಣಿಕೆ ಸಾಧ್ಯ ಎಂದು ಎರಡೂ ಕಡೆಯವರು ಅಭಿಪ್ರಾಯ ಪಟ್ಟಿದ್ದೂ ಇದೆ. ಆದರೆ ಒಪ್ಪಿತವಾದ ಅಂಶಗಳ ಜಾರಿಯದ್ದೇ ಸಮಸ್ಯೆಯಾಗಿದೆ. ಪ್ಯಾಲೆಸ್ಟೇನ್ ನಾಯಕ ಯಾಸಾರ್ ಅರಾಫತ್ ಬದುಕಿದ್ದಾಗ ನಡೆದ ಮಾತುಕತೆಗಳು ಸಮಸ್ಯೆ ಇತ್ಯರ್ಥದ ಸೂಚನೆಗಳನ್ನು ನೀಡಿದ್ದವು. 1967ರ ಸ್ಥಿತಿ (ಪಶ್ಚಿಮ ದಂಡೆ ಮತ್ತು ಪೂರ್ವ ಜರೂಸಲೆಂ ಅನ್ನು ಇಸ್ರೇಲ್ ಅತಿಕ್ರಮಿಸಿಕೊಳ್ಳುವ ಮೊದಲಿನ ಸ್ಥಿತಿ) ಆಧಾರದ ಮೇಲೆ ಒಂದು ರಾಜಿ ಸೂತ್ರ ರೂಪಿಸಲಾಗಿತ್ತು. ಅದರ ಪ್ರಕಾರ ಪ್ಯಾಲೆಸ್ಟೇನ್ ಜನರ ಸಂಘಟನೆಗಳು ಇಸ್ರೇಲ್ ಅಸ್ತಿತ್ವವನ್ನು ಒಪ್ಪಬೇಕಿತ್ತು. ಪ್ರತ್ಯೇಕ ಪ್ಯಾಲೆಸ್ಟೇನ್ ದೇಶ ರಚನೆಗೆ ಇಸ್ರೇಲ್ ಕೂಡಾ ಒಪ್ಪಿಗೆ ನೀಡಬೇಕಿತ್ತು. ಜರೂಸಲೆಂ ಪ್ಯಾಲೆಸ್ಟೇನ್ ದೇಶದ ರಾಜಧಾನಿಯೆಂದು ಇಸ್ರೇಲ್ ಮಾನ್ಯತೆ ನೀಡಬೇಕಿತ್ತು. ಈ ಸಂಬಂಧವಾಗಿ ಉದ್ಭವಿಸುವ ಸಮಸ್ಯೆಗಳನ್ನು ಮಾತುಕತೆಗಳ ಮೂಲಕ ಬಗೆಹರಿಸಬೇಕೆಂದು ಸೂಚಿಸಲಾಗಿತ್ತು. ಈ ಸೂತ್ರದ ಕೆಲವು ಅಂಶಗಳ ಬಗ್ಗೆ ಇಸ್ರೇಲ್ ನಾಯಕರು ಒಮ್ಮತ ವ್ಯಕ್ತಮಾಡಿದರೂ ಜರೂಸಲೆಂ ವಿಚಾರದಲ್ಲಿ ರಾಜಿಯಿಲ್ಲ ಎಂದು ಹೇಳಿದರು. ಅದು ತಮ್ಮ ದೇಶದ ರಾಜಧಾನಿ ಎಂದು ಎರಡೂ ಕಡೆಯವರು ಕಠಿಣ ನಿಲುವು ತಳೆದರು. ಈ ವಿವಾದ ಬಗೆಹರಿಯದೆ ಇದ್ದುದರಿಂದ ಮುಂದಿನ ಹಂತದ ಮಾತುಕತೆಗಳು ನಡೆಯಲೇ ಇಲ್ಲ. ಈ ಮಧ್ಯೆ ಪ್ಯಾಲೆಸ್ಟೇನ್ ಹೋರಾಟಗಾರರು ಎರಡು ಭಾಗವಾದರು. ಸೌಮ್ಯವಾದಿಗಳು, ಮಾತುಕತೆಯ ಮೂಲಕ ಸಮಸ್ಯೆ ಬಯಸಿಕೊಳ್ಳಬೇಕೆಂದು ಬಯಸಿದವರು ಒಂದು ಕಡೆ (ಪಿಎಲ್‍ಓ), “ಇದು ನಮ್ಮ ಜಾಗ. ಈ ಜಾಗದಲ್ಲಿ ಇಸ್ರೇಲ್ ಅಸ್ತಿತ್ವವನ್ನೇ ನಾವು ಒಪ್ಪುವುದಿಲ್ಲ”ಎನ್ನುವವರು ಮತ್ತೊಂದು ಕಡೆ( ಹಮಾಸ್) ಹೋದರು. ಪರಿಣಾಮವಾಗಿ ಸಂಘಟಿತ ಪ್ರಯತ್ನಗಳು ನಡೆಯದಂತಾದವು. ಹೀಗಾಗಿ ಸಂಘರ್ಷಗಳು ನಡೆಯುತ್ತಲೇ ಇವೆ. ಇಸ್ರೇಲ್ ಸೇನಾ ಕಾರ್ಯಾಚರಣೆ ಮತ್ತು ಕ್ಷಿಪಣಿ ದಾಳಿಗಳನ್ನು ನಡೆಸಿದರೆ ಹಮಾಸ್ ಉಗ್ರವಾದಿಗಳು ರಾಕೆಟ್ ದಾಳಿ ನಡೆಸುತ್ತಿದ್ದಾರೆ. ಸಂಘರ್ಷ ಹಲವಾರು ದಶಕಗಳಿಂದ ನಡೆಯುತ್ತಿರುವುದರಿಂದ ಪ್ಯಾಲೆಸ್ಟೇನ್ ಜನರು ತೀವ್ರ ಸಂಕಷ್ಟದಲ್ಲಿದ್ದಾರೆ. ಇತರ ದೇಶಗಳು ನೀಡುವ ನೆರವು ಹಣದಲ್ಲಿ ಆಸ್ಪತ್ರೆ, ಸಾರಿಗೆ, ಶಿಕ್ಷಣ ಮುಂತಾದ ಮೂಲಸೌಲಭ್ಯಗಳನ್ನು ನಿರ್ವಹಿಸಬೇಕಿದೆ. ನೆರವು ಹಣ ಏನೇನೂ ಸಾಲದು ಎಂದು ಪಶ್ಚಿಮದಂಡೆ ಮತ್ತು ಗಾಜಾ ಪ್ರದೇಶಗಳ ನಾಯಕರು ಹೇಳುತ್ತಾರೆ.
ಜರೂಸಲೆಂ ನಗರ ಇಸ್ಲಾಂ ಧರ್ಮದ ಅನುಯಾಯಿಗಳಷ್ಟೇ ಅಲ್ಲ, ಕ್ರಿಶ್ಚಿಯನ್ನರು ಮತ್ತು ಯಹೂದಿಗಳಿಗೂ ಪವಿತ್ರ ಸ್ಥಳ. ಏಸುಕ್ರಿಸ್ತನನ್ನು ಗಲ್ಲಿಗೇರಿಸಿದ ಮತ್ತು ಅವನ ಪುನರುತ್ಥಾನವಾದ ಸ್ಥಳ ಇದು. ಪ್ರವಾದಿ ಮಹಮ್ಮದ್ ಸ್ವರ್ಗಕ್ಕೆ ಹೋದ ಸ್ಥಳ ಇಲ್ಲಿದೆ. ಯಹೂದಿಗಳ “ಅಳುವ ಗೋಡೆ” ಮತ್ತು ಟೆಂಪಲ್ ಮೌಂಟ್ ಇಲ್ಲಿಯೇ ಇದೆ. ಹೀಗೆ ಈ ಸ್ಥಳ ಮೂರೂ ಧರ್ಮದವರಿಗೆ ಬೇಕಿದೆ. ಹೀಗಾಗಿಯೇ ಸಮಸ್ಯೆ. ಯಾರೊಬ್ಬರ ವಶಕ್ಕೆ ಜರೂಸಲೆಂ ನಗರ ಹೋಗುವುದು ಬೇಡ. ಅದನ್ನು ಅಂತಾರಾಷ್ಟ್ರೀಯ ನಗರವಾಗಿ ಘೋಷಿಸುವ ಮೂಲಕ ವಿವಾದ ಬಗೆಹರಿಸಬಹುದು ಎನ್ನುವುದು ವಿಶ್ವಸಂಸ್ಥೆಯಲ್ಲಿ ಮೂಡಿಬಂದ ಅಭಿಪ್ರಾಯ. ಈ ಸಲಹೆಗೆ ಇಸ್ರೇಲ್ ನಾಯಕರಾಗಲಿ, ಹಮಾಸ್ ನಾಯಕರಾಗಲಿ ಒಪ್ಪಿಲ್ಲ. ಎರಡೂ ಕಡೆಯವರು ತಮ್ಮ ಅಭಿಪ್ರಾಯಕ್ಕೆ ಕಟ್ಟುಬಿದ್ದರೆ ಅದರಿಂದಾಗುವ ಕೆಟ್ಟ ಪರಿಣಾಮಗಳು ಘೋರವಾದುವು.
ಮಿಲಿಟರಿ ಬಲದಿಂದ ಇಸ್ರೇಲ್ ಈ ಸಮಸ್ಯೆಗೆ ಪರಿಹಾರ ಹುಡುಕಲು ಸಾಧ್ಯವಿಲ್ಲ. ಪ್ಯಾಲೆಸ್ಟೇನ್ ಜನರ ಹೆಣಗಳ ಮೇಲೆ ದೇಶ ಕಟ್ಟಲು ಸಾಧ್ಯವಿಲ್ಲ. ಶಾಂತಿ ಮತ್ತು ನೆಮ್ಮದಿಯಿಂದ ಮುಂದಿನ ಜನಾಂಗ ಬದುಕಲು ಸಾಧ್ಯವಾಗುವಂಥ ವಾತಾವರಣವನ್ನು ಸೃಷ್ಟಿಸಬೇಕು. ಎರಡೂ ಕಡೆಯವರು ಈ ನಿಟ್ಟಿನಲ್ಲಿ ಯೋಚಿಸಬೇಕಿದೆ.
ನೇತಾನ್ಯಹು ಮತ್ತೆ ಪ್ರಧಾನಿಯಾಗುತ್ತಾರೆಂದರೆ ಭಾರತ ಮತ್ತು ಇಸ್ರೇಲ್ ನಡುವಣ ಮೈತ್ರಿ ಹೆಚ್ಚುತ್ತದೆಯೆಂದೇ ಅರ್ಥ. ಇಸ್ರೇಲ್‍ಗೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿ ಮೋದಿ. ನೆತಾನ್ಯಹು ಅವರು ಭಾರತಕ್ಕೆ ಬಂದಾಗ ಮೋದಿ ಅವರನ್ನು ಅಪ್ಪಿಕೊಂಡು ಅವರು ಬರಮಾಡಿಕೊಂಡರು. ಉಭಯ ದೇಶಗಳ ನಡುವಣ ವಾಣಿಜ್ಯ ವಹಿವಾಟು 1992ರಲ್ಲಿ ಕೇವಲ 200 ಮಿಲಿಯನ್ ಡಾಲರ್ ಇದ್ದದ್ದು 2021- 22ರಲ್ಲಿ 7.86 ಬಿಲಿಯನ್ ಡಾಲರ್‍ನಷ್ಟು ಆಗಿರುವುದು ಮೈತ್ರಿ ವೃದ್ಧಿಯ ಸೂಚನೆ. ಈ ವಹಿವಾಟು ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚುವುದು ಖಚಿತ. ಈ ಹಿಂದೆ ಇಸ್ರೇಲ್ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳಲು ಸರ್ಕಾರದ ನೀತಿಗಳು ಅವಕಾಶ ಕೊಡುತ್ತಿರಲಿಲ್ಲ. ಭಾರತ ಇಂದಿರಾಗಾಂಧಿ ಅವರ ಕಾಲದಿಂದಲೂ ಪ್ಯಾಲೆಸ್ಟೇನ್ ಪರವಾದ ನಿಲುವುಗಳನ್ನೇ ಅನುಸರಿಸುತ್ತ ಬಂದಿತ್ತು. ಪ್ಯಾಲೆಸ್ಟೇನ್ ನಾಯಕ ಯಾಸಾರ್ ಅರಾಫತ್ ಇಂದಿರಾಗಾಂಧಿ ಅವರನ್ನು ಸೋದರಿ ಎನ್ನುತ್ತಿದ್ದರು. ವಿಶ್ವಸಂಸ್ಥೆಯಲ್ಲಿ ಭಾರತ ಪ್ಯಾಲೆಸ್ಟೇನ್ ಜನರ ಪರವಾಗಿ ಸತತವಾಗಿ ದನಿ ಎತ್ತಿತ್ತು. ಮೋದಿ ಅವರು ಪ್ರಧಾನಿ ಆದ ನಂತರ ಇಸ್ರೇಲ್ ಜೊತೆಗಿನ ಸಂಬಂಧಗಳು ಬದಲಾವಣೆಗೆ ಒಳಪಟ್ಟವು. ಇಸ್ರೇಲ್ ಜೊತೆ ಭಾರತ ರಕ್ಷಣೆ, ಆಹಾರ ತಂತ್ರಜ್ಞಾನ, ವಿಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಬಾಂಧವ್ಯ ಪಡೆದಿದೆ. ಪ್ಯಾಲೆಸ್ಟೇನ್ ಜನರ ಪರವಾಗಿಯೇ ವಾದ ಮಾಡುತ್ತ ಇಸ್ರೇಲ್ ಜೊತೆ ಬಾಂಧವ್ಯ ವೃದ್ಧಿ ಮಾಡಿಕೊಂಡಿರುವುದು ವಿರೋಧಾಭಾಸ ಎಂದು ಭಾರತದ ವಿರೋಧಿ ನಾಯಕರು ಟೀಕಿಸುತ್ತ ಬಂದಿದ್ದಾರೆ. ರಷ್ಯಾ ದೇಶ ಉಕ್ರೇನ್ ಮೇಲೆ ದಾಳಿ ಮಾಡಿದ ಮತ್ತು ಯುದ್ಧ ಮಾಡುತ್ತಿರುವ ವಿಚಾರದಲ್ಲಿಯೂ ಭಾರತ ಇಂಥದ್ದೇ “ಭಾರತ ಹಿತ” ವಿದೇಶಾಂಗ ನೀತಿಯನ್ನು ಅನುಸರಿಸಿದೆ. ಇದೇನೇ ಇದ್ದರೂ ನೇತಾನ್ಯಹು ಅವರ ಹೊಸ ಅವದಿಯಲ್ಲೂ ಉಭಯ ದೇಶಗಳ ಜೊತೆಗಿನ ಬಂಧವ್ಯ ಹೆಚ್ಚುವುದಂತೂ ಖಂಡಿತ.
ಮಂಡ್ಯ: ಆಸ್ತಿಗಾಗಿ ತಂದೆಯನ್ನೇ ಪಾಪಿ ಮಗನೋರ್ವ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದಳವಾಯಿಕೋಡಿಯಲ್ಲಿ ನಡೆದಿದೆ. ಗ್ರಾಮದ…
ಹಾಸನ: ನಿವೃತ್ತ ಯೋಧರೊಬ್ಬರು ಪಿಸ್ತೂಲ್‌ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನದಲ್ಲಿ ನಡೆದಿದೆ. ಹಾಸನ ಜಿಲ್ಲೆ ಬೇಲೂರು…
ಮೈಸೂರು: ಈ ದೇಶದಲ್ಲಿ ಬಂಡವಾಳಶಾಹಿಗಳಾಗಲೀ, ಸಕ್ಕರೆ ಕಾರ್ಖಾನೆ ಮಾಲೀಕರಾಗಲೀ ಅಥವಾ ಉದ್ಯಮಿಗಳು ಸೇರಿ ಯಾರೂ ಸಹ ಆತ್ಮಹತ್ಯೆ ಮಾಡಿಕೊಂಡಿಲ್ಲ. ಆದರೇ,…
ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಭೈರತಿ ಬಸವರಾಜ್ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ. ಈ…
ನವದೆಹಲಿ: ರಾಜಧಾನಿ ಬೆಂಗಳೂರು ಹಾಗೂ ರಾಜ್ಯದ ಕರಾವಳಿ ಪ್ರದೇಶಗಳ ನಡುವೆ ಪ್ರಯಾಣವನ್ನು ಮತ್ತಷ್ಟು ಸುಲಭಗೊಳಿಸುವ ನಿಟ್ಟಿನಲ್ಲಿ ವಂದೇ ಭಾರತ್ ಎಕ್ಸ್…
ಹಾಸನ: ಅಪ್ರಾಪ್ತ ಬಾಲಕಿಯೊಬ್ಬಳಿಗೆ ಚಾಕೋಲೇಟ್ ನೀಡಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಹಿನ್ನೆಲೆಯಲ್ಲಿ ಆಕೆ ಮಗುವಿಗೆ ಜನ್ಮ ನೀಡಿದ ಘಟನೆ…