ಗುರುನಾಥನ್ ಹತ್ಯೆ ಆಗಿದ್ದೇ ಆಗಿದ್ದು. ವೀರಪ್ಪನ್‌ನನ್ನು ಸಮೀಪಿಸುವ ಎಲ್ಲ ದಾರಿಗಳೂ ಬಂದ್ ಆಗಿಬಿಟ್ಟವು. ಹೊಸ ಕಾರ್ಯಾಚರಣೆಯನ್ನು ಮೊದಲಿಂದ ಫ್ರೆಶ್ ಆಗಿ ಶುರು ಮಾಡಬೇಕಿತ್ತು. ಪೊಲೀಸರ ಮೇಲೆ ವೀರಪ್ಪನ್ ಕುದಿ ಕುದಿಯುತ್ತಿದ್ದ. ತನ್ನನ್ನೇ ಏಮಾರಿಸಿ ತನ್ನ ಬಲಗೈ ಭಂಟನನ್ನೇ ಕೊಂದು ಬಿಟ್ಟರಲ್ಲಾ ಎಂಬ ಕಡುಸೇಡು ಕಾರುತ್ತಿದ್ದ. ಏನೇ ಸುಳ್ಳಾಡಿದರೂ ಗುರುನಾಥ ಒಂದು ಮಾತನ್ನಂತೂ ಸತ್ಯವಾಗಿ ಹೇಳಿದ್ದ. ಇನ್ನು ಐದೇ ಐದು ದಿನಕ್ಕೆ ಅವನ ಮದುವೆಯಾಗುವುದಿತ್ತು. ಅದಕ್ಕಾಗಿ ತಂಡದಿಂದ ದೂರಾಗಿ ಪ್ರೇಯಸಿ ಚಾಂದಿನಿಯ ಜೊತೆಗೆ ಇರುತ್ತಿದ್ದ. ಅವನ ಸಾವು ಪೊಲೀಸರಿಗೂ ವ್ಯಥೆ ತಂದಿತ್ತು. ಅವನನ್ನು ನಂಬಿ ತಾಂಡಾದಲ್ಲಿದ್ದವರನ್ನೆಲ್ಲ ಬಿಟ್ಟು ಒಂಟಿಯಾಗಿ ಬಂದಿದ್ದ ಚಾಂದಿನಿ ಅಸಹಾಯಕಳಾಗಿ ಬೋರಾಡಿ ಅಳುತ್ತಿದ್ದಳು.
ಮಾಡುವುದಾದರೂ ಏನು?
ಆಗಬಾರದ್ದು ಆಗಿಯೇ ಹೋಗಿತ್ತು.
ಕೇವಲ ಮೂರೇ ತಿಂಗಳ ಹಿಂದೆ (1992 ರ ಮೇ 19) ವೀರಪ್ಪನ್ ರಾಮಾಪುರ ಠಾಣೆಗೆ ನುಗ್ಗಿ ಐವರು ಪೊಲೀಸರನ್ನು ದಾರುಣವಾಗಿ ಹತ್ಯೆ ಮಾಡಿ ರೈಫಲ್ ಮತ್ತು ಮದ್ದು ಗುಂಡುಗಳನ್ನು ಹಾರಿಸಿಕೊಂಡು ಹೋಗಿ ಸವಾಲೆಸೆದಿದ್ದ. ಈಗ ನರಭಕ್ಷಕನನ್ನು ಕೆಣಕಿ ಎಬ್ಬಿಸಿದಂತಾಗಿತ್ತು.
ಊರ ಮಧ್ಯೆಯೇ ತಮ್ಮನ್ನು ಕತ್ತರಿಸಿ ತುಂಡು ತುಂಡು ಮಾಡುತ್ತಾನೆಂದು ಹೆದರಿ ನಟ್ರಾಜ, ನಾಗ್ರಾಜ ಅದೆಲ್ಲೋ ಅದೃಶ್ಯರಾಗಿದ್ದರು. ಸರ್ಕಾರದ ಬಹುಮಾನವೂ ಬೇಡ. ಬಹುನಾಮವೂ ಬೇಡ. ಜೀವ ಉಳಿದರೆ ಸಾಕು ಎಂದಾಗಿತ್ತು.
ಕೆರಳಿದ ವೀರಪ್ಪನ್‌ನ ಮುಂದಿನ ಪ್ರತೀಕಾರವಿದ್ದದ್ದೇ ಷಕೀಲ್ ಮತ್ತು ಹರಿಕೃಷ್ಣರ ಮೇಲೆ. ಈ ಸುದ್ದಿ ಊರೆಲ್ಲಾ ಹಬ್ಬಿತ್ತು. ಅವನ ಸೇಡಿನ ಜ್ವಾಲೆ ಗೊತ್ತಿದ್ದ ಹಳ್ಳಿಗರಿಗೆ ಮುಂದಿನ ಬಲಿ ಅವರಿಬ್ಬರೇ ಎಂದು ನಿಕ್ಕಿಯಾಗಿತ್ತು.
ಚಿಗಟ ಕಡಿಯುತ್ತೆ ಎಂದು ಕಂಬಳಿ ಹೊದೆಯುವುದ ಬಿಟ್ಟಾರೆಯೇ? ಅವನ ಪ್ರತೀಕಾರದ ಬೆದರಿಕೆಗೆ ಕೆಂದದೆ ಈರ್ವರೂ ತಮ್ಮ ಪತ್ತೆ ಕಾರ್ಯ ಮುಂದುವರಿಸಿದ್ದರು. ಹೊಸ ಹೊಸ ಮಾಹಿತಿದಾರರನ್ನು ಕಲೆಹಾಕಿ ವೀರಪ್ಪನ್ ನನ್ನು ಸಮೀಪಿಸಲಾದೀತೇ ಎಂದು ಹೊಂಚು ಹಾಕುತ್ತಿದ್ದರು. ಆದರೆ ಹಳ್ಳಿಗರಲ್ಲಿ ಅದೆಂತಹ ಭಯ ಆತಂಕ ಮೂಡಿತ್ತೆಂದರೆ ಅವನೆಂದರೆ ತಲ್ಲಣಿಸಿ ಹೋಗುತ್ತಿದ್ದರು. ನಟ್ರಾಜ, ನಾಗ್ರಾಜರನ್ನು ಅನೇಕರು ಹುಡುಕಾಡುತ್ತಿದ್ದುದೂ ಗೊತ್ತಾಗಿತ್ತು. ಅವನ ಹೆಸರೆತ್ತಲು ಸಹ ಜನ ನಡುಗುತ್ತಿದ್ದರು.
ಈ ವೇಳೆಗೆ ವೀರಪ್ಪನ್‌ನನ್ನು ಮುಖಾಮುಖಿಯಾಗಿ ಹಿಡಿಯುವ ಅಥವಾ ಕೂಂಬಿಂಗ್ ( ಬೆಟ್ಟಗುಡ್ಡವನ್ನು ಸಂಪೂರ್ಣವಾಗಿ ಸುತ್ತುವರಿದು ಹಿಡಿಯುವುದು) ಮಾಡಿ ಹಿಡಿಯಲು ಸಾಧ್ಯವೇ ಇಲ್ಲವೆಂದು ಮನವರಿಕೆಯಾಗಿತ್ತು. ಅವನ ಅಡಗುದಾಣಗಳೇ ವಿಚಿತ್ರವಾಗಿರುತ್ತಿದ್ದವು. ತಾನಿದ್ದ ಎತ್ತರದ ಸ್ಥಳದಿಂದ ಎದುರು ಬೆಟ್ಟ ಗುಡ್ಡಗಳ ಮೂಲಕ ಬರುವವರನ್ನು ಆತನ ತಂಡ ಸುಲಭವಾಗಿ ನೋಡಿ ಬಿಡುತ್ತಿತ್ತು. ಬೈನಾಕ್ಯುಲರೇ ಬೇಕಿರಲಿಲ್ಲ ಬರಿಗಣ್ಣೇ ಸಾಕಿತ್ತು.
ಅನೇಕ ಪೊಲೀಸ್ ಅಧಿಕಾರಿಗಳನ್ನು ಡೇರ್ ಅಂಡ್ ಡೆವಿಲ್ಲಾಗಿ ಕೊಂದದ್ದು, ರಾಮಾಪುರ ಠಾಣೆಗೇ ನುಗ್ಗಿ ಕೊಲೆ ಡಕಾಯಿತಿ ಮಾಡಿದ್ದರಿಂದ ವೀರಪ್ಪನ್ ಎಂದರೆ ಎಲ್ಲೆಲ್ಲೂ ತಲ್ಲಣ ಪಸರಿಸಿತ್ತು.
ಪೊಲೀಸರು ಕಾಡಿಗೆ ನಾಲ್ಕಾರು ಜನರು ಕೂಡ ಒಟ್ಟಿಗೆ ಹೋಗುತ್ತಿರಲಿಲ್ಲ. ಯಾವ ದಿಕ್ಕಿನಿಂದ ಗುಂಡು ದೇಹ ಸೀಳುತ್ತದೋ ಎಂಬ ಭಯ. ಸ್ವಂತ ಜೀವದ ಭಯ! ತಂಡದ ಹತ್ತಾರು ಪೊಲೀಸರ ಒಟ್ಟು ಕಾರ್ಯಾಚರಣೆ ಇದ್ದರೆ ಮಾತ್ರ ಹೋಗಬಲ್ಲ ಧೈರ್ಯ.
ಆ ಕಾಡು ಅದೆಷ್ಟು ದಟ್ಟ ಎಂದರೆ ನಾಲ್ಕಾರು ಅಡಿ ದೂರದಲ್ಲಿ ಒಬ್ಬ ಅಡಗಿದ್ದರೂ ಗೊತ್ತಾಗುತ್ತಿರಲಿಲ್ಲ.
ಇದು ವೀರಪ್ಪನ್‌ಗೆ ವರವಾಯಿತು.
ಇಡೀ ಬೆಟ್ಟ ಬೆಟ್ಟವನ್ನೇ ಸಾವಿರಾರು ಪೊಲೀಸರು ಸುತ್ತುವರಿದು ಕೂಂಬಿಂಗ್ ಮಾಡಿದಾಗಲೂ ವೀರಪ್ಪನ್ ಸಿಕ್ಕಿರಲಿಲ್ಲ. ಬೆಟ್ಟವನ್ನೇ ಸುತ್ತುವರಿಯಲು ನೂರಾರು ಪೊಲೀಸರು, ಅಷ್ಟೇ ಕಾರು, ಜೀಪು, ವ್ಯಾನು ಬರುತ್ತಿದ್ದವು. ತಾನಿದ್ದ ಬೆಟ್ಟವನ್ನು ಪೊಲೀಸರು ಸುತ್ತುವರಿಯವುದರೊಳಗೆ, ಫಣಕ್ಕನೆ ಪಕ್ಕದ ಗುಡ್ಡಕ್ಕೆ ಜಾರಿ ಕೊಂಡಿರುತ್ತಿದ್ದ.
ಶೋಧಿಸಿದ ಪೊಲೀಸರಿಗೆ ಅವನ ತಂಡ ಅಡುಗೆ ಮಾಡಿದ್ದ ಒಲೆ, ಉರಿದ ಸೌದೆ , ಪಾತ್ರೆ ಇತ್ಯಾದಿ ಸಿಗುತ್ತಿದ್ದವು. ಸರಿಯಾದ ಬಾತ್ಮೀದಾರರನ್ನು ಸೆಟಪ್ ಮಾಡಿ ವಿಶ್ವಾಸ ಕುದುರಿಸಿ ಅವನನ್ನು ಹಿಡಿಯುವತ್ತ ಹರಿಕೃಷ್ಣ ಹೆಚ್ಚು ಆದ್ಯತೆ ನೀಡಿದ್ದರು.
ವೀರಪ್ಪನ್‌ಗೆ ಆಹಾರ, ಸಾಮಾನು ಸರಂಜಾಮು ಒದಗಿಸುವವರ ಮೂಲಕವೇ ಹಿಡಿಯುವ ಯೋಜನೆ ಅವರದಾಗಿತ್ತು. ಹುಡುಕಾಟ ಸಾಗಿತ್ತು.
ಆಗ ಮಾಹಿತಿದಾರನಾಗಿ ಸಿಕ್ಕವನೇ ಕಮ್ಲಾನಾಯ್ಕ. ಗಂಧದ ಮರ ಕದ್ದು ಮಾರುತ್ತಿದ್ದ ಅವನಿಗೆ ವೀರಪ್ಪನ್ ಚಿಕ್ಕ ಸಂಪರ್ಕವಿತ್ತು. ಅವನಿಗೋ ಮನೆತುಂಬ ಜನ. ದಟ್ಟ ದರಿದ್ರತೆ, ರೋಗರುಜಿನ ಆವರಿಸಿದ್ದ ಕೂಡು ಕುಟುಂಬ. ಮನೆಯವರೆಲ್ಲ ಹೊಟ್ಟೆ ಬಟ್ಟೆಗಿಲ್ಲದೆ ನಿತ್ರಾಣರಾಗಿದ್ದರು. ಕಡು ದಾರಿದ್ರ್ಯ ಕಾಡುತ್ತಿದ್ದರೂ ಕಮ್ಲಾನಾಯ್ಕ ತನ್ನ ಕುಟುಂಬವನ್ನು ಸಲಹಲು ಪರದಾಡುತ್ತಿದ್ದ ನಿಯತ್ತಿನ ಮನುಷ್ಯ. ಅವನ ಈ ಕಡು ಬಡತನ ಮತ್ತು ನಿಯತ್ತಿನ ಮನೋಭಾವ ಷಕೀಲ್‌ಗೆ ವರವಾಯಿತು. ಅಲ್ಲದೆ ಸಣ್ಣ ಪುಟ್ಟ ಧನ ಸಹಾಯ ಮಾಡುತ್ತಾ ಕಮ್ಲಾನಾಯ್ಕನ ವಿಶ್ವಾಸ ಗಳಿಸಿ, ವೀರಪ್ಪನ್ ಕುರಿತ ಮಾಹಿತಿ ಸಂಗ್ರಹಿಸುತ್ತಾ ಹೋದರು. ಅವನು ಕೊಟ್ಟ ಒಂದೇ ಒಂದು ಮಾಹಿತಿಯೂ ಸುಳ್ಳಿರಲಿಲ್ಲ.
ಈ ನಡುವೆ ಮಹತ್ವದ ಸಂಗತಿಯೊಂದು ಗೊತ್ತಾಯಿತು. ವೀರಪ್ಪನ್‌ಗೆ ಹಣಕಾಸಿನ ಮುಗ್ಗಟ್ಟು ಉಂಟಾಗಿ 50-60 ಸಾವಿರ ರೂ. ಬೆಲೆ ಬಾಳುವ ದಂತದ ಕೊಂಬನ್ನು 20-25 ಸಾವಿರ ರೂ.ಗಳಿಗೆ ಮಾರಲು ಮುಂದಾಗಿದ್ದಾನೆ. ಅವನ ತಮ್ಮ ಅರ್ಜುನನ್ ಇದನ್ನು ಕೋವೈನ ಕೆಲವರಲ್ಲಿ ಪ್ರಸ್ತಾಪ ಮಾಡಿದ್ದಾನೆ. ಆದರೆ ಕೊಳ್ಳುವವರು ಯಾರೂ ಸರಿಯಾಗಿ ಸಿಕ್ಕಿಲ್ಲ ಎಂದು ಕಮ್ಲಾನಾಯ್ಕ ಬಾತ್ಮಿ ಕೊಟ್ಟ. ಕಮ್ಲಾನಾಯ್ಕನ ಮಾಹಿತಿಯನ್ನು ಅನುಮಾನಿಸುವಂತಿರಲಿಲ್ಲ. ಹಿಂದೆ ಹೇಳಿದ್ದ ಎಲ್ಲವೂ ಸತ್ಯವಾಗಿದ್ದವು. ಹರಿಕೃಷ್ಣರೂ ಕೈತುಂಬಾ ಕೊಟ್ಟು ನೆರವಾಗಿದ್ದರು. ಸಾವಿನ ರುಗ್ಣಾವಸ್ತೆಯಲ್ಲಿದ್ದ ಅವನ ಕುಟುಂಬದವರನ್ನು ವಾಹನದಲ್ಲಿ ಆಸ್ಪತ್ರೆಗೆ ಸೇರಿಸಿ ತಕ್ಕ ಚಿಕಿತ್ಸೆ ಕೊಡಿಸಿ ಜೀವ ಉಳಿಸಿದ್ದರು. ಅವನಂತೂ ಇವರಿಬ್ಬರೆಂದರೆ ಚಿರ ಕೃತಜ್ಞನಾಗಿದ್ದ. ಇವರ ಮಾತೆಂದರೆ ಅವನಿಗೆ ವೇದವಾಕ್ಯ. ವೀರಪ್ಪನ್ ಹಿಡಿಯಲು ನೆರವಾದರೆ ಇಪ್ಪತ್ತು ಲಕ್ಷ ರೂ. ಸಿಗುತ್ತೆ. ನಿನ್ನ ಕಷ್ಟ ನೀಗುತ್ತೆ ಎಂದು ರಸವತ್ತಾಗಿ ಹೇಳಿ ಬಾಯಲ್ಲಿ ಬುರುಬುರು ನೀರೂರಿಸಿದ್ದರು.
ಷಕೀಲ್ ಮತ್ತು ಹರಿಕೃಷ್ಣ ಈಗ ಹೊಸ ಕಾರ್ಯತಂತ್ರ ರೂಪಿಸಿದರು. ದಂತ ಖರೀದಿಸುವ ವ್ಯಾಪಾರಿಗಳಂತೆ ಹೋಗಿ ವೀರಪ್ಪನ್ ಅನ್ನು ಉಡಾಯಿಸುವುದೆಂದಾಯಿತು. ವ್ಯಾಪಾರಸ್ಥರು ದಂತ ಕೊಳ್ಳಲು ಸಿದ್ಧರಿದ್ದಾರೆಂಬ ಸಂದೇಶವನ್ನು ಕಮ್ಲಾನಾಯ್ಕನ ಮೂಲಕ ಕಳಿಸಿದರು.
‘ಎಂಎಂ ಹಿಲ್ಸ್‌ನ ಮೀಣ್ಯಂ ರಸ್ತೆಯಲ್ಲಿ ರಾಮಾಪುರ ಕಡೆಯಿಂದ ಬಿಳಿ ಅಂಬಾಸಡರ್ ಕಾರಿನಲ್ಲಿ ಬರಬೇಕು. ರಸ್ತೆ ಮಧ್ಯೆ ಎಲ್ಲೋ ಒಂದು ಕಡೆ ಮಧ್ಯಾಹ್ನ ಎರಡು ಗಂಟೆ ಹೊತ್ತಿಗೆ ನಾವು ಕಾರನ್ನು ತಡೆದು ನಿಲ್ಲಿಸುತ್ತೇವೆ. ನಂತರ ಅರ್ಜುನನ್ ಜೊತೆಗಾರರು ಭೆಟ್ಟಿ ಮಾಡಿ ವ್ಯಾಪಾರ ಕುದುರಿಸುತ್ತಾರೆ’ ಎಂಬ ಮರು ಸಂದೇಶ ಬಂದಿತು.
ಹರಿಕೃಷ್ಣ ಸರ್ವಸಿದ್ದತೆ ಮಾಡಿಕೊಂಡು ಸಜ್ಜಾದರು. ಅವರ ದುಡುಕು ಮತ್ತು ಆತುರಗೇಡಿ ಮನೋಭಾವ ಅರಿತಿದ್ದ ಅಂದಿನ ಡಿಐಜಿ ಕೆ.ಆರ್.ಶ್ರೀನಿವಾಸನ್ ಅವರು ಯಾವುದಕ್ಕೂ ಒಂದು ಬೆಂಗಾವಲು ಲಾರಿ ಮುಂಜಾಗ್ರತೆಯಾಗಿ ಹಿಂಬಾಲಿಸಲಿ ಮತ್ತು ಅದರ ಅಂತರ ಒಂದು ಕಿಲೋಮೀಟರ್ ಇರಲಿ ಎಂದು ನೇಮಕ ಮಾಡಿದರು. ಯಾಕೆಂದರೆ ವೀರಪ್ಪನ್‌ನನ್ನು ಈಗ ಲಘುವಾಗಿ ತೆಗೆದುಕೊಳ್ಳುವ ಕಾಲ ಮೀರಿ ಹೋಗಿತ್ತು. ಆತ ಅಪಾಯಕಾರಿಯಾಗಿ ಬೆಳೆದಿದ್ದ.
ಬಿಳಿಯ ಕಾರಿಗೆ ಹರಿಕೃಷ್ಣರೇ ಡ್ರೈವರ್. ಅವರೊಂದಿಗೆ ಷಕೀಲ್ ಅಹಮದ್, ಕಮ್ಲಾನಾಯ್ಕ ಮತ್ತು ಸಿಬ್ಬಂದಿ ಕುಳಿತರು. ಮೊದಲಿನ ಪ್ಲ್ಯಾನ್‌ನಂತೆ ಮುಂಭಾಗದ ಸೀಟಿನಲ್ಲಿ ಟೈಗರ್ ಅಶೋಕ್ ಕುಮಾರ್ ಕೂರಬೇಕಿತ್ತು. ಅವರು ಬೆಂಗಳೂರಿನಿಂದ ಆಗಲೇ ಹೊರಟಿದ್ದರೂ ಇನ್ನೂ ತಲುಪಿಲ್ಲವಾದ್ದರಿಂದ ಬದಲಿಗೆ ಡಿವೈಎಸ್ಪಿ ಮಂದಪ್ಪನವರೇ ಕುಳಿತುಕೊಂಡರು. ಅವರ ಪೊದೆ ಮೀಸೆಯನ್ನು ನೋಡಿದ ತಕ್ಷಣ ಪೊಲೀಸ್ ಅಂತ ಗೊತ್ತಾಗಿ ಕೆಲಸ ಕೆಡುತ್ತದೆ ಎಂದು ಹರಿಕೃಷ್ಣ, ಅವರನ್ನು ಹಿಂಭಾಗದ ಲಾರಿಯಲ್ಲಿ ಬರುವಂತೆ ಹೇಳಿದರು.
ಅದೃಷ್ಟ ಯಾರನ್ನು ಎಲ್ಲಿ ಹೇಗೆ ಹರಸುತ್ತೋ? Blessing in disguise ಎಂಬಂತೆ ಅಶೋಕ್ ಕುಮಾರ್ ಮತ್ತು ಮಂದಪ್ಪ ಇಬ್ಬರೂ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದರು.
ಎಕೆ ೪೭ ಮುಂತಾದ ಶಸ್ತಾಸ್ತ್ರಗಳನ್ನು ಅಡಗಿಸಿಕೊಂಡು ಕಾರು ಹೊರಟಿತು. ಕಾರನ್ನು ಹಿಂಬಾಲಿಸುವ ಬೆಂಗಾವಲು ಲಾರಿಯಲ್ಲಿ ಡಿವೈಎಸ್ಪಿ ಮಂದಪ್ಪ ಕೂತರು. ಅವರೊಂದಿಗೆ ಗಣಿಗಾರಿಕೆ ಕೂಲಿಗಳಂತಿದ್ದ ಇಪ್ಪತ್ತೆರಡು ಪೊಲೀಸರು ದಾಳಿಗೆ ಸಜ್ಜಾಗಿ ಹೊರಟರು. ವೈರ್‌ಲೆಸ್ ಸಂಪರ್ಕವಿದ್ದ ಎರಡೂ ವಾಹನಗಳಿಗೂ ಒಂದು ಕಿಮೀ ಅಂತರವಿತ್ತು. ಮುಖಾಮುಖಿಯಾಗುವ ವೀರಪ್ಪನ್‌ಗೆ ಅಂತ್ಯ ಕಾಣಿಸಲೇಬೇಕೆಂಬ ನಿರ್ಧಾರದಲ್ಲಿ ತಂಡವಿತ್ತು.
(ಮುಂದಿನ ವಾರಕ್ಕೆ ಮುಕ್ತಾಯ)
ಬೆಂಗಳೂರು: ನಾಯಕತ್ವ ಬದಲಾವಣೆ ಗೊಂದಲ, ಸರ್ಕಾರದಲ್ಲಿ ಶೇಕಡಾ.63 ರ್ಷಟು ಕಮಿಷನ್ ಕುರಿತು ಉಪಲೋಕಾಯುಕ್ತರ ಹೇಳಿಕೆ, ವಿವಿಧ ಇಲಾಖೆಗಳಲ್ಲಿ ನಡೆದಿರುವ ಭ್ರಷ್ಟಾಚಾರ…
ರಾಜ್ಯದಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಗರಿಗೆದರಿದ ಬಳಿಕ ಅಲ್ಲಲ್ಲಿ ಕೆರೆ-ಕಟ್ಟೆ, ಸರ್ಕಾರಿ ಜಾಗಗಳ ಒತ್ತುವರಿ ಪ್ರಕರಣ ಮೇಲಿಂದ ಮೇಲೆ ಭಾರೀ…
ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಗೆ ಕಾರಣವಾಯಿತೇ ಹೈಕಮಾಂಡ್ ಮೌನ? ರಾಜ್ಯ ಕಾಂಗ್ರೆಸ್‌ನಲ್ಲಿ ಮುಂದುವರಿದಿರುವ ಗೊಂದಲ ಬಿಜೆಪಿ ಮತ್ತು ಜಾ.ದಳ ಪಾಳೆಯಗಳ ಆತ್ಮವಿಶ್ವಾಸ…
ಏ.೨ರಿಂದ ೨೮ ದಿನಗಳ ಕಾಲ ನಡೆಯಲಿರುವ ಪಂದ್ಯಾವಳಿ; ೩೦೦ಕ್ಕೂ ಅಧಿಕ ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಮಡಿಕೇರಿ:ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ…
ಮೈಸೂರು: ನಗರದ ಹೊರವಲಯದ ನಾಲ್ಕು ದಿಕ್ಕುಗಳಲ್ಲಿರುವ ಹಲವು ಪ್ರದೇಶಗಳನ್ನು ಸೇರಿಸಿ ಗ್ರೇಡ್- ೧ ಮೈಸೂರು ಮಹಾನಗರ ಪಾಲಿಕೆಯನ್ನಾಗಿ ರಚಿಸಲು ರಾಜ್ಯಸರ್ಕಾರ…
ಮಂಜು ಕೋಟೆ ಕುರುಬ ಸಮಾಜದ ಎರಡು ಬಣಗಳ ನಡುವೆ ಉಂಟಾಗಿದ್ದ ಗೊಂದಲ; ಸಿಎಂ ಸಿದ್ದರಾಮಯ್ಯ ಸೂಚನೆಯಂತೆ ಕ್ರಮ ಎಚ್.ಡಿ.ಕೋಟೆ: ಮುಖ್ಯಮಂತ್ರಿ…