ಬೆಳಿಗ್ಗೆ ಪೇಪರ್ ಓದುವ ಹೊತ್ತಿಗೆ ಮಡಿದೆ ಕಾಫಿ ಕಪ್ಪನ್ನು ಕುಕ್ಕಿ ಹೋದಳು. ಒಂದೇ ಸಿಪ್ಪಿಗೆ ಸಪ್ಪೆ ಎನಿಸಿತು. ‘ಲೇ.. ಸಕ್ಕರೆ ಕಮ್ಮಿಯಾಗಿದೆ ಕಣೆ’ ಎಂದೆ. ‘ಸುಮ್ನೆ ಕುಡೀರಿ.. ಸಕ್ಕರೆ ಸರಿಯಾಗಿಯೇ ಇದೆ. ಹಾಲು ಡಿಕಾಕ್ಷನ್ ಒಂಚೂರು ಜಾಸ್ತಿ ಆಗಿದೆ’ ಅಂದಳು.
ಯಾವತ್ತೂ ಇಲ್ಲದ ಇಂತಹ ಲಾಜಿಕ್ಕು ಇವಳಿಗೆ ಹೇಗೆ ಗೊತ್ತಾಯ್ತು ಅಂತಾ ತಲೆ ಕೆಡಿಸಿಕೊಂಡೆ. ಏನೂ ಗೊತ್ತಾಗದೇ ಪೇಪರ್ ನತ್ತ ಕಣ್ಣಾಡಿಸಿದೆ.
ಯೂನಿಫಾರ್ಮ್ ಹಾಕಿಕೊಂಡು ಬ್ಯಾಗು ಹೆಗಲಿಗೇರಿಸಿಕೊಂಡು ಮಗ ಬಂದು, ‘ಅಪ್ಪಾ ಟೆಸ್ಟ್ ಪೇಪರ್ ಗೆ ಸೈನ್ ಹಾಕಿ’ ಅಂತಾ ಮುಂದಿಟ್ಟ. ನೋಡಿದೆ. ಎಲ್ಲಾ ಸಬ್ ಜೆಕ್ಟಿನಲ್ಲೂ ಕಮ್ಮಿ ಮಾರ್ಕ್ಸ್ ಬಂದಿದೆ. ರೂಪಾಯಿ ಮೌಲ್ಯದಂತೆ ಇವನ ಬುದ್ದಿಮತ್ತೆಯೂ ಕುಸಿಯುತ್ತಿದೆಯೇ ಎಂಬ ಆತಂಕವಾಯಿತು.
‘ಯಾಕೋ ಮಗನೇ, ಎಲ್ಲಾ ಸಬ್ ಜೆಕ್ಟ್ ನಲ್ಲೂ ಕಮ್ಮಿ ಮಾರ್ಕ್ಸ್ ತೆಗೆದಿದ್ದೀಯಾ?’ ಅಂತಾ ಮೃದುವಾಗಿಯೇ ಕೇಳಿದೆ.
‘ಅಪ್ಪಾ, ನಾನು ಕಮ್ಮಿ ಮಾರ್ಕ್ಸ್ ತೆಗೆದಿಲ್ಲಾ.. ಎಲ್ಲಾ ಟೀಚರ್ಸ್ ಕಮ್ಮಿ ಮಾರ್ಕ್ಸ್ ಕೊಟ್ಟಿದ್ದಾರೆ..’ ಎಂದು ಮುಖಕ್ಕೆ ಹೊಡೆದಂತೆ ಹೇಳಿದ. ಮರುಮಾತನಾಡದೇ ಟೆಸ್ಟ್ ಪೇಪರಿನ ಮೈಲೆ ಸಹಿ ಹಾಕಿದೆ.
ಮಗಳು ಕಾಲೇಜಿಗೆ ಹೊರಟಿದ್ದಳು. ಬುದ್ಧಿವಂತೆ, ಜಾಣೆ, ಜತೆಗೆ ಅವಳ ಅಮ್ಮನಂತೆ ಸುಂದರಿ ಕೂಡ. ಮೈಗಂಟುವ ಟೀಶರ್ಟ್, ತುಂಡು ಸ್ಕರ್ಟ್ ಹಾಕಿಕೊಂಡು ಎದುರು ನಿಂತು ‘ಅಪ್ಪಾ ಹೇಗಿದೆ ಡ್ರೆಸ್?’ ಎಂದಳು. ‘ಮಗಳೇ ಸ್ಕರ್ಟು, ಟೀಶರ್ಟು ಎರಡೂ ಚಿಕ್ಕದಾಗಿವೆ’ ಎಂದೆ.
ಮಗಳು ನಗುತ್ತಾ ‘ಅಯ್ಯೋ ಪೆದ್ದು ಅಪ್ಪಾ ನೀವು.. ಸ್ಕರ್ಟು, ಟೀಶರ್ಟ್ ಚಿಕ್ಕದಾಗಿಲ್ಲ ಅಪ್ಪಾ.. ನಾನು ದೊಡ್ಡವಳಾಗಿದ್ದೇನೆ…’ ಎಂದು ಮತ್ತೆ ನಕ್ಕು ನನ್ನ ತಲೆಕೂದರಲ್ಲಿ ಬೆರಳಾಡಿಸಿ ಸ್ಕೂಟಿ ಏರಿ ಹೊರಟಳು. ಇವಳು ನನ್ನ ಮಗಳೋ ಅಥವಾ ನಾನೇ ಇವಳ ಮಗನೋ ಎಂಬ ಡೌಟು ಬಂತು!
ಕೆಇಬಿ ಬಿಲ್ ಕಲೆಕ್ಟರ್ ಬಂದು ಮೀಟರ್ ರೀಡ್ ಮಾಡಿ ಬಿಲ್ಲು ಕೊಟ್ಟರು. ‘ಏನಪ್ಪಾ ಇದು ಬಿಲ್ಲು ಇಷ್ಟೊಂದು ಬಂದಿದೆ, ಕಳೆದ ತಿಂಗಳಿಗಿಂತ ಶೇ.10ರಷ್ಟು ಜಾಸ್ತಿಯಾಗಿದೆ, ಯಾಕೆ?’ ಅಂದೆ. ‘ಖುಷಿ ಪಡೀ ಸಾರ್.. ಇವತ್ತುಂದಿನಾ ಪೆಟ್ರೋಲು, ಡೀಸೆಲು, ಅಕ್ಕಿ ಬೇಳೆ, ಎಣ್ಣೆ ಎಲ್ಲಾ ಶೇ.25ರಿಂದ 30ರಷ್ಟು ಹೆಚ್ಚಾಗಿದೆ. ಅಂತಾದ್ರದಲ್ಲಿ ಶೇ.10ರಷ್ಟು ಏರಿಕೆ ಏನ್ ಮಹಾ’ ಅಂದ.
ಪ್ರತಿಯುತ್ತರ ಹೇಳಲಾಗಲಿಲ್ಲ.
ಅಷ್ಟರಲ್ಲಿ ನನ್ನ ಪಟ್ಟ ಶಿಷ್ಯ ಕೊಟ್ರ ಬಂದ.
‘ಏನ್ ಸಾ.. ಏನೋ ಚಿಂತೆ ಮಾಡ್ತಾ ಇದ್ದೀರಿ.. ಇನ್ ಫ್ಲೇಸನ್ ಬಗ್ಗೆನಾ ರುಪಿ ಡಿವ್ಯಾಲ್ಯುಯೆಸನ್ ಬಗ್ಗೆನಾ?’ ಅಂತಾ ಕೇಳಿದ.
ನಾನು ಅರ್ಥಶಾಸ್ತ್ರ ಕಲಿಸೋ ಅಧ್ಯಾಪಕ ಅಂತಾ ಯಾವಾಗಲೂ ಇಂತಹದ್ದೇ ಪ್ರಶ್ನೆ ಕೇಳ್ತಾನೆ ಕೊಟ್ರ.
‘ನನ್ನ ಸಮಸ್ಯೆ ಅದಲ್ಲಪಾ.. ಮನೆಲೀ ಎಲ್ರೂ ಉಲ್ಟಾ ಹೊಡೀತಿದ್ದಾರೆ.. ಎಲ್ಲರಿಗೂ ಏನಾಗಿದೆ ಅನ್ನೋದೇ ಅರ್ಥ ಆಗ್ತಾ ಇಲ್ಲ..’ ಅಂತಾ ಬೆಳಿಗ್ಗೆಯಿಂದಾದ ಅನುಭವನಗಳನ್ನು ಕೊಟ್ರನ ಮುಂದೆ ಹೇಳಿಕೊಂಡೆ.
ಕೊಟ್ರ ಜೋರಾಗಿ ನಕ್ಕ. ‘ಯಾಕಲೇ ನೀನೂ ನನ್ನ ಕಿಂಡಲ್ ಮಾಡ್ತೀಯೇನೋ?’ ಅಂತ ಕೋಪಿಸಿಕೊಂಡೆ.
‘ಸಾ.. ನೀವು ಎಕಾನಾಮಿಕ್ಸ್ ಲೆಕ್ಚರರ್ ಆಗಿದ್ದು ವೆಸ್ಟು ಸಾ..’ ಅಂದು ಮತ್ತ ನಕ್ಕ.
‘ಲೇ ಕೊಟ್ರಾ.. ಅದೇನು ಅಂತ ಬಿಡಿಸಿ ಹೇಳು.. ನಕ್ಕಿದ್ದು ಸಾಕು…’ ಅಂದೆ.
‘ಸಾ.. ನೀವು ಬರೀ ಟೆಕ್ಸ್ಟ್ ಬುಕ್ ಎಕನಾಮಿಕ್ಸ್ ಕಲಿತ್ರೆ, ಕಲಿಸಿದ್ರೆ ಸಾಲ್ದು ಸಾ… ಲೈಫಿನ ಎಕನಾಮಿಕ್ಸು ಕಲೀಬೇಕು ಸಾ..’ ಅಂದ.
‘ಅದೇನೋ ಅದು ಲೈಫಿನ ಎಕನಾಮಿಕ್ಸು’ ಅಂದೆ
‘ನೋಡಿ ಸಾ.. ನಮ್ಮ ರೂಪಾಯಿ ಡಾಲರ್ ವಿರುದ್ಧ ಡಿವ್ಯಾಲ್ಯುಯೆಸನ್ ಆಗಿದೆ ಅಲ್ವಾ.. ಆಗ್ತಾನೇ ಇದೆ ಅಲ್ವಾ.. ಆ ಬಗ್ಗೆ ನೀವು ಚಿಂತೆ ಮಾಡಿದ್ದೀರಿ ಅಲ್ವಾ.. ಆದರೆ ಇವತ್ತುಂದಿನಾ ನಮ್ ಫೈನಾನ್ಸ್ ಮಿನಿಸ್ಟ್ರು ರೂಪಾಯಿ ಡಿವ್ಯಾಲ್ಯುಯೆಸ್ ಆಗಿರೋ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಅವರ ಪ್ರಕಾರ ರೂಪಾಯಿ ಮೌಲ್ಯ ಕುಸಿದಿಲ್ಲ.. ಸಾ.. ಡಾಲರ್ ಮೌಲ್ಯ ಹೆಚ್ಚಾಗಿದೆ.. ಅದಲ್ವಾ ಸಾ ಲಾಜಿಕ್ಕು…’
ಅಂದ.
‘ಅಲ್ಲಲೇ ಕೊಟ್ರ ಫೈನಾನ್ಸ್ ಮಿನಿಸ್ಟ್ರು ರೂಪಾಯಿ ಮೌಲ್ಯ ಕುಸಿದಿಲ್ಲ ಡಾಲರ್ ಮೌಲ್ಯ ಹೆಚ್ಚಾಗಿದೆ ಅಂತಾ ಹೇಳೋದಕ್ಕೂ ನಮ್ಮ ಮನೇಲಿ ಎಲ್ಲರೂ ಉಲ್ಟಾ ಹೊಡೆಯುದಕ್ಕೂ ಏನೋ ಸಂಬಂಧ..’ ಅಂತ ಕೇಳಿದೆ.
‘ನಿಮ್ಮ ಪ್ರಶ್ನೆಯಲ್ಲೇ ಉತ್ತರ ಇದೆ. ಸಾ.. ರೂಪಾಯಿ ಮೌಲ್ಯ ಕುಸಿದಿಲ್ಲ, ಡಾಲರ್ ಮೌಲ್ಯ ಹೆಚ್ಚಾಗಿದೆ ಅಂತ ಹೇಳೋದೂ, ಟೆಸ್ಟಲ್ಲಿ ನಾನು ಕಡಿಮೆ ಮಾರ್ಕ್ಸ್ ತಗೊಂಡಿಲ್ಲ ಟೀಚರ್ಸ್ಸೇ ಕಡಿಮೆ ಮಾರ್ಕ್ಸ್ ಕೊಟ್ಟಿದ್ದಾರೆ ಅನ್ನೋದು ಎರಡೂ ಲಾಜಿಕ್ಕುಗಳು ಒಂದೆಯಾ ಸಾ..’
ಅಂತ ಗಹಗಹಿಸಿ ನಕ್ಕ!
ಕಾಪಿ ಸಪ್ಪೆ ಅಂದಿದ್ದಕ್ಕೆ ಹೆಂಡ್ತಿ ಏಕೆ ‘ಸಕ್ಕರೆ ಸರಿಯಾಗಿಯೇ ಇದೆ. ಹಾಲು, ಡಿಕಾಕ್ಷನ್ ಜಾಸ್ತಿ ಆಗಿದೆ’ ಅಂದ್ಲು ಅನ್ನೋದು ಅರ್ಥ ಆಯ್ತು. ನಮ್ಮ ಮನೆಯವರೆಲ್ಲಾ ಅದ್ಯಾವಾಗ ಫೈನಾನ್ಸ್ ಮಿನಿಸ್ಟ್ರು ನಿರ್ಮಲಾ ಸೀತಾರಾಮನ್ ಫಾಲೋವರ್ಸ್ ಆದ್ರು ಅಂತಾ ತಲೆಕೆಡಿಸಿಕೊಂಡೆ!
-‘ಅಷ್ಟಾವಕ್ರಾ’
ಮೈಸೂರು: ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಜಗಮಗಿಸುವ ದೀಪಾಲಂಕಾರ, ಫಲಪುಷ್ಪ ಪ್ರದರ್ಶನದ ಸೊಬಗಿನ ಮಧ್ಯೆ ಪಾರಂಪರಿಕ ಪೊಲೀಸ್ ಬ್ಯಾಂಡ್‌ನ ಸದ್ದಿನೊಂದಿಗೆ…
ಕೊಳ್ಳೇಗಾಲ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯಲ್ಲಿರುವ ಸಾಕಮ್ಮಾಸ್ ಕಾಫಿ ಪುಡಿ ಅಂಗಡಿ ಬುಧವಾರ ರಾತ್ರಿ ಸಂಪೂರ್ಣ…
ಮೈಸೂರು: ರಾಜ್ಯದ ವಿವಿಧೆಡೆ ಸೇವೆ ಸಲ್ಲಿಸುತ್ತಿದ್ದ 25 ಮಂದಿ ಐಪಿಎ ಅಧಿಕಾರಿಗಳನ್ನು ರಾಜ್ಯ ಸರ್ಕಾರ ವರ್ಗಾವಣೆಗೊಳಿಸಿ ಆದೇಶ ನೀಡಿದೆ. ಅವರಲ್ಲಿ…
ಕೊಡಗು: ಕರ್ನಾಟಕ ಸರ್ಕಾರದ ಆದೇಶದಂತೆ ಕೊಡಗಿನ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಅವರನ್ನು ಬೆಳಗಾವಿ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ. ಖಾಲಿಯಾದ ಸ್ಥಳಕ್ಕೆ…
ಬೆಂಗಳೂರು: ಸಣ್ಣ ವಯಸ್ಸಿನಿಂದಲೇ ಬರವಣಿಗೆ ರೂಢಿಸಿಕೊಂಡು 9ನೇ ವಯಸ್ಸಿಗೆ 'ಟೇಲ್ಸ್ ಬೈ ಪರಿ' ಪುಸ್ತಕವನ್ನು ಬರೆದು ಹೆಸರು ಮಾಡಿರುವ ನಮ್ಮ…
ನವದೆಹಲಿ: ಕೋಗಿಲು ಲೇಔಟ್‌ನಲ್ಲಿ ಅಕ್ರಮ ನಿವಾಸಿಗಳಿಗೆ ಮನೆ ನೀಡುತ್ತಿದ್ದಾರೆ. ಇದು ರಾಜ್ಯ ಸರ್ಕಾರದ ದಡ್ಡತನದ ಪರಮಾವಧಿ ಎಂದು ಕೇಂದ್ರ ಸಚಿವ…