ಎಡಿಟೋರಿಯಲ್

ವಾರೆ ನೋಟ : ತೇಲುವ ರೆಸ್ಟೋರೆಂಟಿನಲ್ಲಿ ಮಹಾಮಳೆ – ಮಸಾಲೆದೋಸೆ ಮುಖಾಮುಖಿ!

ತೇಲುವ ರೆಸ್ಟೋರೆಂಟಿನಲ್ಲಿ ಮಹಾಮಳೆ- ಮಸಾಲೆದೋಸೆ ಮುಖಾಮುಖಿ!

ಸಿಲಿಕಾನ್ ಸಿಟಿಯಲ್ಲಿ ಸೃಷ್ಟಿಯಾಗಿದ್ದ ಆರ್ಟಿಫಿಷಿಯಲ್ ಲೇಕ್‌ನಲ್ಲಿ ಹೊಸದಾಗಿ ಪ್ರಾರಂಭವಾಗಿದ್ದ ತೇಲುವ ರೆಸ್ಟೋರೆಂಟಿನಲ್ಲಿ ಅಚಾನಕ್ಕಾಗಿ ಮಹಾಮಳೆ ಮತ್ತು ಮಸಾಲೆದೋಸೆ ಮುಖಾಮುಖಿಯಾದರು! ಇಬ್ಬರಿಗೂ ಖುಷಿಯೋ ಖುಷಿ!!
‘ಏನಪ್ಪಾ ಮಳೆರಾಯ ನೀನು ಪ್ರೌಢಾವಸ್ಥೆಗೆ ಬಂದಿದ್ದೀಯಾ ಅನಿಸುತ್ತೆ.. ನಿನ್ ಹೆಸ್ರೂ ಕೂಡ ಮಹಾಮಳೆ ಅಂತಾ ಬದಲಾಗಿದೆ. ನೀನ್ ಸುರಿಯೋ ವರಸೆ ನೋಡಿದ್ರೆ ಪ್ರಳಯಾಂತಕ ಆಗಿಬಿಟ್ಟಿದ್ದೀಯಾ ಅನಿಸುತ್ತೆ ಈಗ ಎಲ್ಲೆಲ್ಲೂ ನಿಂದೇ ಹವಾ..’ ನಗುನಗುತ್ತಲೇ ಮಸಾಲೆದೋಸೆ ಕೇಳಿತು.
‘ಲೇ ಮಸಾಲೆದೋಸೆ, ನೀನೇನ್ ಕಮ್ಮೀನಾ? ನಿನ್ ಹವಾ ಏನ್ ಕಮ್ಮೀನಾ? ಎಲ್ಲೆಲ್ಲೂ ನೀನೇ.. ಎಲ್ರಿಗೂ ನೀನೇ ಬೇಕು, ನೀನಿಲ್ಲದೇ ಹೋದರೆ ಜಗತ್ತೇ ಮುಳುಗಿ ಹೋಗುತ್ತೆ’ ಮಳೆರಾಯನೂ ಹೊಗಳಿದ.
‘ಬಾ ಕೂತ್ಕೊಂಡು ಕಾಫಿ ಕುಡಿಯುಮಾ.. ಇವತ್ತುಂದಿನಾ ಈ ಚಳಿ, ಈ ಫ್ಲೋಟಿಂಗ್ ರೆಸ್ಟೋರೆಂಟು, ಈ ಮಳೆ, ಈ ಗಾಳಿ, ಈ ಜನ… ಎಲ್ಲಾ ನೋಡ್ತಾ ಇದ್ರೆ ನನ್ನುನ್ನೇ ನಾನು ತಿನ್ಕೊಬಿಡಾಣ ಅನಿಸ್ತಾ ಇದೆ’ ಅಂತಾ ಮಸಾಲೆದೋಸೆ ಹೇಳಿತು.
‘ಲೇ, ಗುರು ನಿನ್ನುನ್ನಾ ನೀನೇ ತಿನ್ಕೊಂಡ್ರೆ ನಿನ್ನುನ್ನಾ ನೀನೇ ಕೊಂದುಕೊಂಡಂಗಾಗುತ್ತೆ, ನೀನು ಇದ್ರೆನೇ ಈ ಜಗತ್ತಿಗೆ ಒಂದು ಗತ್ತು, ನೀನು ಇದ್ರೆನೇ ಜನರಿಗೆ ಒಂದು ರುಚಿ! ಬೇಕಾದ್ರೆ ಹೇಳು ಮದ್ದೂರ್ ವಡೆ ತಿನ್ನುಮಾ..’ ಅಂತಾ ಮಹಾಮಳೆ ಹೇಳಿದ. ಮಸಾಲೆದೋಸೆಗೆ ಖುಷಿಯಾಯ್ತು. ‘ಟೀವಿಗೀವಿ ನೋಡ್ತೀಯೋ ಅಥ್ವಾ ಬರೀ ಸೋಷಿಯಲ್ ಮಿಡಿಯಾದಲ್ಲೇ ಇರ್ತಿಯೋ?’ ಮಸಾಲೆದೋಸೆ ಕೇಳಿತು.
‘ಅಯ್ಯೋ ಟೀವಿ ನೋಡ್ತಾ ಇದ್ದೆ ಮಾರಾಯ ಆದ್ರೆ ಕಳೆದ ಮೂರ್ನಾಲ್ಕು ದಿನಗಳಿಂದ ಟೀವಿ ನೋಡೋಕೆ ಆಗ್ತಾ ಇಲ್ಲಾ ಟೀವಿ ಸವಾಸನೇ ಬೇಡ ಅನಿಸ್ಬಿಟ್ಟಿದೆ’ ಶಾನೆ ಬೇಜಾರಿನಲ್ಲಿ ಮಳೆರಾಯ ಹೇಳಿದ.
‘ಅಯ್ಯೋ ಅಂತಾದ್ದೇನಾಯ್ತಪ್ಪಾ.. ಇವತ್ತುಂದಿನಾ ಟ್ವೆಂಟಿಫೋರ್ ಇಂಟು ಸೆವೆನ್ ನಿನ್ ಸುದ್ದಿನೇ ಹಾಕೊಂಡು ಉಜ್ಜುತ್ತಾ ಇದ್ದಾರೆ ಖುಷಿ ಪಡೋ ವಿಷ್ಯಾ ಅಲ್ವಾ?’ ಮಸಾಲೆದೋಸೆ ಮಳೆರಾಯನಿಗೆ ಸಮಾಧಾನ ಮಾಡುವ ದನಿಯಲ್ಲಿ ಕೇಳಿತು. ‘ಏನ್ ಟಾರ್ಚರ್ ಗುರೂ ಈ ಟೀವಿಯವರದ್ದು.. ಗಂಟೆಗೊಂದು ಬಾರಿ ನನ್ನ ಹೆಸರು ಬದಲಾಯಿಸ್ತಾರೆ. ನಾನು ಸ್ತ್ರೀಲಿಂಗಾನಾ ಪುಲ್ಲಿಂಗಾನಾ ಅಥವಾ ತಟಸ್ಥ ಲಿಂಗಾನಾ ಅನ್ನೋದು ನಂಗೇ ಡೌಟು ಬರೋಕೆ ಶುರುವಾಗಿದೆ.. ರಣಚಂಡಿ ಮಳೆ ಅಂತಾರೆ.. ವರುಣಾಘಾತ ಅಂತಾರೆ.. ಪ್ರಳಯಸದೃಶ ಮಳೆ ಅಂತಾರೆ.. ಬದುಕು ಕಿತ್ತುಕೊಂಡ ಭಯಾನಕಮಳೆ ಅಂತಾರೆ.. ಯಮಸದೃಶ ಮಳೆಗೆ ಬದುಕು ಹೈರಾಣಾಯ್ತು ಅಂತಾರೆ… ಅಲ್ಲಾ ಗುರೂ ಇದೆಲ್ಲಾನೂ ತಡ್ಕೊಬಹುದು.. ಆದ್ರೆ, ಮಹಾಮಳೆ ಅವಾಂತರ ಅಂತಾನೂ ಹೇಳ್ತಾರೆ. ನೀನೇ ಹೇಳಪ್ಪಾ , ಅವಾಂತರ ಮಾಡಿರೋದು ನಾನಾ? ಅಥವಾ ಅವಾಂತರ ಮಾಡ್ಕೊಂಡಿರೋದು ಜನರು ಮತ್ತು ಸರ್ಕಾರಾನಾ?’ ಕೋಪ ಮತ್ತು ನೋವು ಎರಡೂ ಸೇರಿದ ಆಕ್ರೋಶದ ದನಿಯಲ್ಲಿ ಮಹಾಮಳೆ ಪ್ರಶ್ನಿಸಿದ.. ಮಸಾಲೆದೋಸೆಗೆ ಮಹಾಮಳೆ ಬಗ್ಗೆ ಕನಿಕರ ಮೂಡಿತು. ಇವತ್ತುಂದಿನಾ ಇಡೀ ರಾಜ್ಯಾನೇ ಅಲ್ಲಾಡುಸುತ್ತಿರುವ ಮಹಾಮಳೆಗೂ ಇಷ್ಟೆಲ್ಲಾ ಬೇಜಾರಾಗುತ್ತಾ ಅಂತಾ ಅಚ್ಚರಿ ಆಯ್ತು.
‘ಹೌದು ಬಿಡು ಮಾರಾಯಾ ಈ ಟೀವಿಯವರದ್ದು ಇದೇನು ಹೊಸಾದಾ? ಅವರೆಲ್ಲ ಸೆನ್‌ಸೆಷನ್ನಿಗೆ ಅಡಿಕ್ಟ್ ಆಗಿದ್ದಾರೆ.. ಏನೂ ಸೆನ್‌ಸೆಷನ್ ಸಿಗಲಿಲ್ಲ ಅಂದ್ರೆ, ಸಿಕ್ಕಿದ್ದನ್ನೆಲ್ಲಾ ಸೆನ್‌ಸೆಷನ್ ಮಾಡಿ ದಿನವಿಡೀ ಉಜ್ಜುತ್ತಾರೆ.. ನೀನು ಬೇಜಾರಾಗಬೇಡ ಬಿಡು.. ಯಾವುದಾದ್ರೂ ಸೆಕ್ಸ್ ಸ್ಕ್ಯಾಂಡಲ್ಲೋ, ಕರಪ್ಶನ್ ಸ್ಕಾಂಡಲ್ ವಿಡಿಯೋ ಹೊರಗೆ ಬಂದ್ರೆ ನೀನು ಯಾರು ಅಂತಾನು ಮೂಸಿ ನೋಡಲ್ಲಾ.’ ಅಂತಾ ಮಸಾಲೆ ದೋಸೆ ಸಮಾಧಾನ ಮಾಡಿತು.
ಮಸಾಲೆದೋಸೆ ಮಾತು ಕೇಳಿದ ಮೇಲೆ ಮಹಾಮಳೆಯ ಕೋಪವು ಇಳಿಯಿತು. ‘ನೀನ್ ಹೇಳೋದು ನಿಜಾ.. ಅದುಕ್ಕೆ ನಾನ್ ಟೀವಿನೇ ನೋಡಲ್ಲಾ, ಇನ್‌ಫರ್ಮೇಶನ್ನಿಗಾಗಿ ಸ್ವಲ್ಪ ಟ್ವಿಟ್ಟರ್, ಎಂಟರ್‌ಟೈನ್‌ಮೆಂಟಿಗಾಗಿ ಇನ್‌ಸ್ಟಾಗ್ರಾಮ್ ನೋಡ್ತೀನಿ.. ಅಷ್ಟೆಯಾ.. ಇರಲಿ ಬಿಡು.. ನಂಗೆ ನಿನ್ನುನ್ನ ನೋಡಿ ಖುಷಿಯಾಯ್ತು. ನಿನ್ನ ಹಿರಿಮೆ ಗರಿಮೆ ಯದ್ವಾತದ್ವಾ ಏರಿಬಿಟ್ಟಿದೆ.. ಇವತ್ತುಂದಿನಾ ಬರೀ ಸಾಮಾನ್ಯ ಜನರಷ್ಟೇ ಅಲ್ಲ ಸೂರ್ಯನಂತಹ ತೇಜಸ್ಸು ಇರುವ ಮಹಾವ್ಯಕ್ತಿಗಳೂ ನಿನ್ನುನ್ನಾ ಬಯಸ್ತಾರೆ. ನಾನು ಜನರಿಗೆ ಕೊಟ್ಟ ಕಷ್ಟವನ್ನು ಬದಿಗೊತ್ತಿ ನಿನಗಾಗಿ ಬರುತ್ತಾರೆ.. ನಿನಗೆ ಪ್ರಚಾರ ಕೊಡುತ್ತಾರೆ ನಂಗೆ ನೆಗೆಟಿವ್ ಪ್ರಚಾರ ಸಿಕ್ಕರೆ ನಿಂಗೆ ಒಳ್ಳೆ ಪ್ರಚಾರ ಸಿಗ್ತಾ ಇದೆ. ನಿಂದೇ ಎಲ್ಲಾ ಕಡೆ ವೈರಲ್ಲಾಗ್ತಾ ಇದೆ. ಅದೇನು ಗರಿ ಗರಿಯಾಗಿ ಕಾಣಿಸಿಕೊಂಡಿದ್ದೀಯಪ್ಪಾ ನಂಗಂತ್ತು ಖುಷಿಯಾಯ್ತು’ ಅಂತಾ ಮಳೆರಾಯ ಹೇಳಿದ. ‘ಮಳೆರಾಯ ಆದ್ರೂ ಒಂದ್ಮಾತು ಹೇಳ್ತಿನಿ.. ಕೇಳು.. ಮನೇಲಿ ಮಕ್ಳುಮರೀಗೆ ಉಷಾರಿಲ್ಲದಿದ್ದಾಗ, ಕಷ್ಟದಲ್ಲಿದ್ದಾಗ ಮನೆ ಯಜಮಾನ ಅನ್ನಿಸಿಕೊಂಡೋನು ನನ್ನುನ್ನ ಬಯಸುದ್ರೆ ನಂಗೆ ಖುಷಿಯಾಗಲ್ಲ.. ಬೇಜಾರಾಗುತ್ತೆ… ಇವತ್ತುಂದಿನಾ ನಾನು ಮಸಾಲೆದೋಸೆನೇ ಇರಬಹುದು. ಆದ್ರೆ ನಂಗೂ ಒಂಚೂರು ಮಾನವೀಯತೆ ಅನ್ನೋದು ಇದೆ. ಹಂಗಾಗಿ ಜನರ ಸಂಕಷ್ಟದ ಸಂದರ್ಭದಲ್ಲಿ ನನ್ನುನ್ನಾ ತಿಂದವರು ನಂಗೆ ಪ್ರಚಾರ ಕೊಟ್ರೆ ಇಷ್ಟಾ ಆಗಲ್ಲ. ಅದರಿಂದ ನೆಗೆಟಿವ್ ಪ್ರಚಾರವೇ ಹೆಚ್ಚಾಗುತ್ತೆ..’ ಅಂತಾ ಮಸಾಲೆದೋಸೆ ವಿವರಿಸಿತು. ‘ನಿಜಾ ಮಸಾಲೆದೋಸೆ.. ಇವತ್ತುಂದಿನಾ ಪ್ರಚಾರಕ್ಕಿಂತಾ ಮಾನವೀಯತೇನೇ ದೊಡ್ಡದು ಅನ್ನೋದುನ್ನಾ ಕಲಿಸಿದ್ದೀಯಾ ಥ್ಯಾಂಕ್ಯೂ .. ನಾನೂ ಇನ್ಮೇಲೆ ಸುರಿಯುವಾಗ ಸ್ವಲ್ಪ ಕಡಿಮೇನೇ ಸುರೀತಿನಿ.. ಜನಾ ಕಷ್ಟ ಪಡೋದು ನಂಗೂ ನೋಡೋಕಾಗಲ್ಲ.. ಜನಾ ಕಷ್ಟದಲ್ಲಿದ್ದಾಗಲೂ ನಿನ್ನುನ್ನ ಯಾರೂ ಚಪ್ಪರಿಸಿ ತಿನ್ನೋದನ್ನೂ ನೋಡೋಕಾಗಲ್ಲ’ ಎಂದ ಮಳೆರಾಯ. ‘ಮುುಳುಗು’ನಗೆ ಚೆಲ್ಲಿದ ಮಸಾಲೆದೋಸೆ ಕಾಫಿ ಹೀರತೊಡಗಿತು!! -‘ಅಷ್ಟಾವಕ್ರಾ’

andolanait

Recent Posts

ಮೋಟಾರ್ ವಾಹನ ಸೆಸ್ ಕೈಬಿಟ್ಟ ಮೈಸೂರು ಮಹಾನಗರ ಪಾಲಿಕೆ

ಮೈಸೂರು : ಮೈಸೂರು ಮಹಾನಗರಪಾಲಿಕೆ 2026-27ನೇ ಹಣಕಾಸು ವರ್ಷಕ್ಕೆ ಜಾರಿಗೊಳಿಸಲು ಘೋಷಿಸಿದ್ದ ಮೋಟಾರ್ ವಾಹನ ಸೆಸ್ ಅನ್ನು ರದ್ದುಗೊಳಿಸಿದೆ. ಇತ್ತೀಚಿಗೆ…

3 hours ago

ದಿಢೀರ್‌ ಕುಸಿದುಬಿದ್ದ ಲೋಕಾಯುಕ್ತ ನಿ.ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ, ಆಸ್ಪತ್ರೆಗೆ ದಾಖಲು

ಬೆಂಗಳೂರು : ಕರ್ನಾಟಕದ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್‌ ಹೆಗ್ಡೆ ಅವರ ಆರೋಗ್ಯದಲ್ಲಿ ಏರುಪೇರೆ ಉಂಟಾಗಿ ಕುಸಿದು ಬಿದ್ದಿದ್ದು, ಆಸ್ಪತ್ರೆಗೆ…

4 hours ago

ರೋಹಿಣಿ ಸಿಂಧೂರಿ ವಿರುದ್ಧ ತನಿಖೆ : ಮಾಜಿ ಸಚಿವ ಸಾ.ರಾ.ಮಹೇಶ್‌ ಹೇಳಿದಿಷ್ಟು?

ಮೈಸೂರು : ಬಟ್ಟೆ ಬ್ಯಾಗ್ ಖರೀದಿಯಲ್ಲಿ ಆಗಿರುವ ಅವ್ಯವಹಾರದ ಬಗ್ಗೆ ತನಿಖೆ ನಡೆಸಲು ಹೈಕೋರ್ಟ್ ಅನುಮತಿ ನೀಡಿರುವ ಕುರಿತು ಪ್ರತಿಕ್ರಿಯಿಸಿದ…

4 hours ago

ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಧೋನಿ ಲಭ್ಯ?

ಬೆಂಗಳೂರು : ಮಹೇಂದ್ರ ಸಿಂಗ್ ಧೋನಿ ಅವರು ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳಲ್ಲಿ ಹೊಸ ಆಶಾಕಿರಣ ಮೂಡಿಸಿದ್ದಾರೆ. ಸ್ನಾಯು ಸೆಳೆತದಿಂದ…

5 hours ago

24 ಗಂಟೆಗಳಲ್ಲಿ ಅಮೆರಿಕದ ಎರಡು F-35 ಜೆಟ್‌ಗಳನ್ನು ಹೊಡೆದುರುಳಿಸಿದ್ದೇವೆ : ಇರಾನ್

ಟೆಹ್ರಾನ್ : ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಕಳೆದ 24 ಗಂಟೆಗಳಲ್ಲಿ ಅಮೆರಿಕದ ಎರಡು F-35 ಸ್ಟೆಲ್ತ್…

6 hours ago

ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು : ಮುಖ್ಯಮಂತ್ರಿ ಟೀಕೆ

ಬಾಗಲಕೋಟೆ : ಸೋಮಣ್ಣ ಬಿಜೆಪಿಯಲ್ಲಿ ಕೆಲಸವಿಲ್ಲದಿರುವ ಮಂತ್ರಿ. ಅವರಿಗೆ ಯಾವ ಕಡತವೂ ಹೋಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು.…

6 hours ago