ದೆಹಲಿಯ 70 ವರ್ಷ ಪ್ರಾಯದ ದುರ್ಗಾ ಗೋಪಾಲ್ ಅವರು ನಿವೃತ್ತ ಬ್ಯಾಂಕ್ ಉದ್ಯೊಗಿ. ಎರಡು ಬಾರಿ ಕ್ಯಾನ್ಸರ್ ದಾಳಿಯಿಂದ ಬದುಕುಳಿದವರು. 2010ರಲ್ಲಿ ಅವರ ಮೇಲೆ ಸ್ತನ ಕ್ಯಾನ್ಸರ್ ದಾಳಿ ಮಾಡಿದಾಗ ಅವರ ಪತಿ ತೀರಿಕೊಂಡು ಕೆಲವು ತಿಂಗಳಾಗಿದ್ದವಷ್ಟೆ ಮತ್ತು ಅವರ ಮಕ್ಕಳು ದೂರದ ಜರ್ಮನಿ ಮತ್ತು ಅಮೆರಿಕದಲ್ಲಿದ್ದರು. ಉಳಿದ ಸಂಬಂಧಿಕರು ಹೈದರಾಬಾದ್‌ನಲ್ಲಿದ್ದರು. ವೈದ್ಯಕೀಯ ಆರೈಕೆಯ ಖರ್ಚು ದಿನದಿಂದ ದಿನಕ್ಕೆ ಏರತೊಡಗಿದಾಗ ಅವರು ದೆಹಲಿಯ ತಮ್ಮ ಮನೆಯನ್ನು ಮಾರಬೇಕಾಯಿತು. ‘ಕ್ಯಾನ್ಸರ್ ದಾಳಿ ಮಾಡಿದಾಗ ಅದು ನಿಮ್ಮಲ್ಲಿ ಮೊದಲು ಋಣಾತ್ಮಕ ಭಾವನೆಗಳನ್ನು ತುಂಬಿ ನಿಧಾನವಾಗಿ ಸಾಯಿಸುತ್ತದೆ. ನಂತರ, ನಿಮ್ಮನ್ನು ದೈಹಿಕವಾಗಿ ಸಾಯಿಸಲು ಅದಕ್ಕೆ ಹೆಚ್ಚು ಸಮಯ ಬೇಕಾಗುವುದಿಲ್ಲ’ ಎಂದು ಅವರು ಕ್ಯಾನ್ಸರಿನ ಭೀಕರತೆಯನ್ನು ವಿವರಿಸುತ್ತಾರೆ.
ಒಂದು ತಿಂಗಳ ರೇಡಿಯೇಷನ್ ಚಿಕಿತ್ಸೆ ಮತ್ತು ಐದು ವರ್ಷಗಳ ಇತರ ವೈದ್ಯಕೀಯ ಆರೈಕೆಯ ಫಲವಾಗಿ ದುರ್ಗಾ ಗೋಪಾಲ್ ಕ್ಯಾನ್ಸರ್ ಮುಕ್ತರೆಂದು ವೈದ್ಯರು ಘೋಷಿಸಿದರು. ಆದರೆ, ಏಳು ವರ್ಷಗಳ ನಂತರ ಕ್ಯಾನ್ಸರ್ ಮರು ದಾಳಿ ನಡೆಸಿತು. ಈ ಬಾರಿ ಅದು ಅವರ ಶ್ವಾಸಕೋಶದ ಮೇಲೆ ದಾಳಿ ಮಾಡಿತು. ಅದು ನಾಲ್ಕನೇ ಹಂತದ ಕ್ಯಾನ್ಸರ್ ಆದ್ದರಿಂದ ಈ ಬಾರಿ ಅದು ಹಿಂದಿಗಿಂತ ಹೆಚ್ಚು ತೀವ್ರವಾಗಿತ್ತಲ್ಲದೆ, ಹೆಚ್ಚು ನೋವಿನದಾಗಿತ್ತು. ಸಾಮಾನ್ಯವಾಗಿ, ನಾಲ್ಕನೇ ಹಂತದ ಕ್ಯಾನ್ಸರ್ ದಾಳಿಯಲ್ಲಿ ಬದುಕುಳಿಯುವವರ ಸಂಖ್ಯೆ ಬಹಳ ಕಡಿಮೆ. ಆದರೆ, ಕ್ಯಾನ್ಸರಿಗೆ ಅಷ್ಟು ಸುಲಭದಲ್ಲಿ ಬಲಿ ಯಾಗಲು ತಯಾರಿಲ್ಲದ ದುರ್ಗಾ ಗೋಪಾಲ್ ಹೋರಾಟಕ್ಕೆ ಅಣಿಯಾದರು.
ಮೊದಲಿಗೆ, ಅವರು ತಮ್ಮ ಸಹೋದರನಿರುವ ಹೈದರಾಬಾದಿಗೆ ನೆಲೆ ಬದಲಾಯಿಸಿದರು. ನಂತರ, ಮತ್ತೊಂದು ಸುತ್ತಿನ ರೇಡಿಯೇಷನ್ ಮತ್ತು ಚಿಕಿತ್ಸೆಗೆ ಒಳಗಾದರು. ಈ ಬಾರಿ ಮಾನಸಿಕವಾಗಿ, ದೈಹಿಕವಾಗಿ ಮತ್ತು ಆರ್ಥಿಕವಾಗಿ ಹಿಂದಿಗಿಂತ ಹೆಚ್ಚು ಜರ್ಜರಿತರಾದರೂ, ಎರಡನೇ ಬಾರಿಯೂ ಕ್ಯಾನ್ಸರನ್ನು ಗೆಲ್ಲುವಲ್ಲಿ ಯಶಸ್ವಿಯಾದರು. ಈಗ ಅವರ ದೇಹದಲ್ಲಿ ಕ್ಯಾನ್ಸರ್ ಇಲ್ಲವಾದರೂ ಮುಂದೆ ಯಾವತ್ತಾದರೂ ವಾಪಸಾಗಬಹುದು ಎಂದು ವೈದ್ಯರು ಹೇಳಿದ್ದಾರೆ. ಆ ಕಾರಣಕ್ಕಾಗಿ ಅವರು ಪ್ರತೀ 21 ದಿನಗಳಿಗೊಮ್ಮೆ ಆಸ್ಪತ್ರೆಗೆ ಹೋಗಿ ಕೆಲವು ವಿಶೇಷ ವೈದ್ಯಕೀಯ ಆರೈಕೆಯನ್ನು ಪಡೆಯುತ್ತಾರೆ. ಪ್ರತಿಬಾರಿ ಆ ಆರೈಕೆಗೆ ಅವರಿಗೆ ಸುಮಾರು 40 ಸಾವಿರ ರೂಪಾಯಿ ಖರ್ಚಾಗುತ್ತದೆ.
ಈ ಬಾರಿಯ ಗೆಲುವು ದುರ್ಗಾ ಗೋಪಾಲರಲ್ಲಿ ಹೊಸ ಚೈತನ್ಯವೊಂದನ್ನು ಹುಟ್ಟಿ ಹಾಕಿತು. ಈವರೆಗೆ ಕ್ಯಾನ್ಸರ್ ವಿರುದ್ಧ ವೈಯಕ್ತಿಕ ಹೋರಾಟವನ್ನು ಮಾಡುತ್ತಿದ್ದ ಅವರು ಇನ್ನು ಮುಂದೆ ಬೇರೆಯವರ ಕ್ಯಾನ್ಸರ್ ಹೋರಾಟಕ್ಕೆ ಸಾಥ್ ನೀಡಲು ತೀರ್ಮಾನಿಸಿದರು. ಇತರರ ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಸಾಥ್ ನೀಡುವುದೆಂದರೆ ಮುಖ್ಯವಾಗಿ ಕ್ಯಾನ್ಸರ್ ಪೀಡಿತರಿಗೆ ಕೌನ್ಸಿಲಿಂಗ್ ನೀಡುವುದು ಮತ್ತು ಆರ್ಥಿಕ ನೆರವು ಒದಗಿಸುವುದು. ಕ್ಯಾನ್ಸರಿನೊಂದಿಗೆ ಜೀವಿಸು ವುದು ಅತ್ಯಂತ ಯಾತನಾಮಯವಾದುದು. ಅದು ವ್ಯಕ್ತಿಯನ್ನು ಭಾವನಾತ್ಮಕ ವಾಗಿ, ಮಾನಸಿಕವಾಗಿ, ದೈಹಿಕವಾಗಿ ಮತ್ತು ಆರ್ಥಿಕವಾಗಿ ಹಿಂಡಿ ಹಿಪ್ಪೆ ಮಾಡುತ್ತದೆ. ಉಸಿರು ಕಟ್ಟಿಕೊಳ್ಳುವುದು, ನಿತ್ರಾಣ, ವಾಂತಿಯಾಗುವುದು, ತಲೆ ನೋಯುವುದು ದೈನಂದಿನ ದಿನಚರಿಯಾಗುತ್ತದೆ. ಇದರ ಮಧ್ಯೆ, ಆಶಾವಾದಿಯಾಗಿ ಮತ್ತು ಧನಾತ್ಮಕವಾಗಿ ಆಲೋಚಿಸುವುದು ಸವಾಲಿನದಾಗುತ್ತದೆ. ಎಷ್ಟೋ ಬಾರಿ ಕ್ಯಾನ್ಸರ್ ವ್ಯಕ್ತಿಯ ಚೈತನ್ಯವನ್ನು ಸಂಪೂರ್ಣವಾಗಿ ಉಡುಗಿಸಿ, ಆತನ ಅಥವಾ ಆಕೆಯ ಬದುಕುವ ಇಚ್ಛೆಯನ್ನೇ ಅಳಿಸಿ ಹಾಕುತ್ತದೆ.
‘ಕ್ಯಾನ್ಸರಿನ ಆರೈಕೆ ಬಹಳ ದುಬಾರಿ. ಈವರೆಗೆ ನಾನು ನನ್ನ ಇನ್ಶುರೆನ್ಸ್ ಹಣವನ್ನು ಅದಕ್ಕಾಗಿ ವ್ಯಯಿಸುತ್ತಿದ್ದೆ. ಈಗ ಅದು ಮುಗಿದು ಹೋಗಿರುವುದರಿಂದ ನನ್ನ ಉಳಿತಾಯದ ಹಣವನ್ನು ವ್ಯಯಿಸುತ್ತಿದ್ದೇನೆ. ಆದರೆ, ಎಷ್ಟು ಜನರಿಗೆ ಈ ಅನುಕೂಲತೆ ಇದೆ? ಎಷ್ಟೋ ಜನ ಇನ್ನೊಂದು ನಾಲ್ಕುದಿನ ಹೆಚ್ಚು ಬದುಕುವ ಸಲುವಾಗಿ ಅವರಿವರಿಂದ ಸಾಲ ತೆಗೆದು ಕೊಳ್ಳಬೇಕಾದ ದುರ್ಗತಿಗೆ ತಳ್ಳಲ್ಪಡುತ್ತಾರೆ. ಇಂತಹ ವ್ಯಕ್ತಿಗಳಿಗೆ ನನ್ನಿಂದಾದ ಸಹಾಯ ಮಾಡುವ ಮೂಲಕ ಅವರಿಗೆ ನೆರವಾಗುತ್ತಿದ್ದೇನೆ ಹಾಗೂ ಆ ಮೂಲಕ ನನ್ನನ್ನು ನಾನು ಬ್ಯುಸಿಯಾಗಿರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ’ ಎನ್ನುವ ದುರ್ಗಾ ಗೋಪಾಲ್, ಕ್ಯಾನ್ಸರ್ ಪೀಡಿತರಿಗಾಗಿ ಫಂಡ್ ರೈಸಿಂಗ್ ಕಾರ್ಯಕ್ರಮಗಳನ್ನು ನಡೆಸಲು ಶುರು ಮಾಡಿದರು.
ಕೆಲವು ಎನ್‌ಆರ್‌ಐಗಳು ನಡೆಸುವ ಮೈನಾ ಫೌಂಡೇಷನ್‌ನ ಸಹಕಾರ ಮತ್ತು ತನ್ನ ಸ್ನೇಹಿತರು, ಕುಟುಂಬಸ್ಥರು, ಹಳೆಯ ಬ್ಯಾಂಕ್ ಸಹೋದ್ಯೋಗಿಗಳು ಮೊದಲಾದವರ ನೆರವಿನಿಂದ ದುರ್ಗಾ ಗೋಪಾಲ್ 16 ದಿನಗಳ ಒಂದು ಫಂಡ್ ರೈಸಿಂಗ್ ಕಾರ್ಯಕ್ರಮ ನಡೆಸಿ, 20 ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿದರು. ಅದರಿಂದ ಕೆಳ ಆರ್ಥಿಕ ವರ್ಗದ 50 ಜನ ಸ್ತನ ಕ್ಯಾನ್ಸರ್ ಪೀಡಿತ ಹೆಂಗಸರಿಗೆ ಉಚಿತ ಮ್ಯಮ್ಮೋಗ್ರಾಮ್ ಚಿಕಿತ್ಸೆ ಮತ್ತು ಹತ್ತು ಜನ ಕ್ಯಾನ್ಸರ್ ಪೀಡಿತರಿಗೆ ಉಚಿತ ಕೀಮೋಥೆರಪಿ ಕೊಡಿಸಿದರು. ಹೀಗೆ, ದುರ್ಗಾ ದಾಸ್ ಏಕಾಂಗಿಯಾಗಿ ಈವರೆಗೆ ಸುಮಾರು 50 ಜನ ಕ್ಯಾನ್ಸರ್ ರೋಗಿಗಳಿಗೆ ಆರ್ಥಿಕವಾಗಿ ಮತ್ತು ಭಾವನಾತ್ಮಕವಾಗಿ ನೆರವು ನೀಡಿದ್ದಾರೆ. 70 ವರ್ಷ ಮೀರಿದ ಒಬ್ಬ ಹಿರಿಯ ನಾಗರಿಕರಿಗೆ ಹೀಗೆ ಫಂಡ್ ರೈಸ್ ಮಾಡುವ ಸಲುವಾಗಿ ಜನರನ್ನು ಸಂಪರ್ಕಿಸುವುದು, ವಿವಿಧ ಸ್ಥಳಗಳಿಗೆ ಪ್ರಯಾಣಿಸುವುದು ಸುಲಭದ ಕೆಲಸವಲ್ಲ. ಆದರೆ, ದುರ್ಗಾ ಗೋಪಾಲ್ ಈ ಕಾರ್ಯ ನಡೆಸಲು ತನ್ನ ವಯಸ್ಸು ಒಂದು ಅಡ್ಡಿ ಎಂದು ಭಾವಿಸುವುದೇ ಇಲ್ಲ. ಅಷ್ಟೇ ಅಲ್ಲ, ತಾನು ಚಿಕಿತ್ಸೆ ಪಡೆಯಲು ಹೋಗುವ ಒಮೆಗಾ ಆಸ್ಪತ್ರೆಯಲ್ಲಿ ಕ್ಯಾನ್ಸರ್ ರೋಗಿಗಳೊಂದಿಗೆ ಮಾತುಕತೆ ನಡೆಸುತ್ತಾ ಅವರಲ್ಲಿ ಸೂರ್ತಿ ತುಂಬುತ್ತಾರೆ. ತಾವು ಕ್ಯಾನ್ಸರ್ ವಿರುದ್ಧ ನಡೆಸಿದ ಹೋರಾಟದ ಬಗ್ಗೆ ‘ರೆಂಡಿವೂ ವಿ- ಕ್ಯಾನ್ಸರ್’ ಎಂಬ ಒಂದು ಪುಸ್ತಕವನ್ನು ಬರೆದು ಪ್ರಕಟಿಸಿದ್ದಾರೆ.
ಮಂಡ್ಯ: ಡಿವೈಡರ್ಗೆ ಡಿಕ್ಕಿ ಹೊಡೆದ ಕಾರು ಪಲ್ಟಿಯಾಗಿ ಬಿದ್ದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ಧಾರುಣ ಘಟನೆ ಮಂಡ್ಯದಲ್ಲಿ ನಡೆದಿದೆ.…
ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಬೆಳಗಿನ ಜಾವ ದಟ್ಟವಾದ ಮಂಜು ಕವಿದ ವಾತಾವರಣ ಇರಲಿದೆ.…
ಕೊಳ್ಳೇಗಾಲ: ಮೇಯಲು ಬಿಟ್ಟಿದ್ದ ಮೇಕೆಗಳು ಯೂರಿಯಾ ಗೊಬ್ಬರ ತಿಂದು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಜಾಗೇರಿ ಹಳೆ…
ಚಾಮರಾಜನಗರ: ಪಾದಾಚಾರಿಗಳ ಮೇಲೆ ಏಕಾಏಕಿ ಹುಚ್ಚುನಾಯಿ ದಾಳಿ ನಡೆಸಿದ ಪರಿಣಾಮ 7 ಮಂದಿ ಗಾಯಗೊಂಡಿರುವ ಘಟನೆ ಯಳಂದೂರು ಪಟ್ಟಣದಲ್ಲಿ ನಡೆದಿದೆ.…
ಮಡಿಕೇರಿ: ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಮ್ಮ ವಸ್ತುಗಳು ಏನೇ ಇದ್ದರೂ ಅಫಿಡವಿಟ್ನಲ್ಲಿ ತೋರಿಸಿದ್ದರೆ ಯಾವುದೇ ಸಮಸ್ಯೆ ಆಗಲ್ಲ. ಈ ಹಿಂದೆ…
ಬೆಂಗಳೂರು: ನಟ ಕಿಚ್ಚ ಸುದೀಪ್ ಅಭಿನಯದ ಮಾರ್ಕ್ ಸಿನಿಮಾ ಟ್ರೈಲರ್ ಅದ್ಧೂರಿಯಾಗಿ ಬಿಡುಗಡೆ ಮಾಡಲಾಗಿದೆ. ವಿಜಯ್ ಕಾರ್ತಿಕೇಯ-ಸುದೀಪ್ ಕಾಂಬಿನೇಷನ್ನಲ್ಲಿ ಮೂಡಿಬಂದಿರುವ…