ಡಾ. ಮೈಸೂರು ಉಮೇಶ್
ಕಿತ್ತು ತಿನ್ನುವ ಬಡತನ. ಒಪ್ಪೊತ್ತಿನ ತುತ್ತಿಗೂ ತತ್ವಾರ. ಹಸಿದೊಡಲಿಗೆ ಅನ್ನ ನೀಡಿ ಸಂತೈಸಿಸುವ ಕಾತರ. ಹುಟ್ಟಿದ ಮನೆ, ಹೋದ ಮನೆಯಲ್ಲೂ ಕಡುಕಷ್ಟದ ನೋವಿನ ಬದುಕು.
ಕಲಕಂಠದರಸಿಯ ಅರಸಿ ಹಸಿವ ಗೆಲ್ಲುವ ಹಂಬಲ. ಹಾಡುಹಾಡುತ್ತಲೇ ಅರವತ್ತನ್ನು ತುಂಬಿಸಿಕೊಂಡ ಜೀವ ಚಾಮರಾಜನಗರ ಜಿಲ್ಲೆ ರಾಮಸಮುದ್ರದ ತುಳಸಮ್ಮ ನಮ್ಮ ನಡುವೆ ಇರುವ ಕಂಚಿನ ಕಂಠದ ಜನಪದ ಗಾಯಕಿ.
ಏರುದನಿಯಲ್ಲಿ ಹಾಡುವ ಇವರಿಗೆ ಹಾಡುವುದೇ ಜೀವನ. ಕರೆದಲ್ಲಿಗೆ ಹೋಗಿ ಹಾಡುತ್ತಾ ಹಟ್ಟಿಯೊಳಗೆ ಉಸಿರಾಡುತ್ತಿರುವ ಜೀವಗಳಿಗೆ ಆಸರೆಯಾಗಿದ್ದಾರೆ. ಇವರು ಹಾಡಿನಷ್ಟೇ ಲಯಬದ್ಧವಾಗಿ ಮಾತನ್ನಾಡುತ್ತಾರೆ. ಇವರ ಮಾತಿನಲ್ಲಿ ನೋವು, ವಿಷಾದ, ಸಂಕಟಗಳಿದ್ದರೂ ಬದುಕುವ ಅಚಲವಾದ ಆತ್ಮ ವಿಶ್ವಾಸವಿದೆ. ‘ ನಮ್ಮವ್ವ ಸಿದ್ದಮ್ಮ, ಅಪ್ಪ ಮನೆಯಯ್ಯ. ಕೂಲಿನಾಲಿ ಮಾಡ್ಕಂಡು ರಾಮ್ಸಮುದ್ರದಲ್ಲೆ ಇದ್ರು. ಆಗೆಲ್ಲಾ ಹೊಟ್ಟೆತುಂಬುಸ್ಕಳ್ಳದೇ ಕಷ್ಟ. ಇವುರ್ಗೆ ಏಳ್ಜನ ಮಕ್ಕ. ಆರು ಹೆಣ್ಣು ಒಂದು ಗಂಡು. ರಾಮ್ಸಮುದ್ರದಲ್ಲಿರುವಾಗ್ಲಿಯೆ ಮೂರ್ ಹೆಣ್ಮಕ್ಳು ಹುಟ್ಟಿದ್ರು. ಊರಲ್ಲಿ ಜೀವ್ನ ನಡ್ಸಾದು ಕಷ್ಟ ಅಂದ್ಕಂಡು ಸ್ರೀರಂಗ್ಪಟ್ಣ ಹತ್ರ ಇರೋ ಚಂದ್ಗಾಲ್ಗೆ ಬಂದ್ಬುಟ್ರು. ಆಮ್ಯಾಕೆ ಇನ್ನುಳ್ದವ್ತ್ಯ್ರು ಹುಟ್ಟುದ್ರು. ಒಬ್ನೆ ಗಂಡ್ಮಗ. ಚಂದ್ಗಾಲದ ಗೌಡ್ರಟ್ಟಿಲಿ ನಮ್ ಅಪ್ಪ ಅವ್ವ ಇಬ್ರೂವೆ ಜೀತ ಮಾಡರು. ಹಂಗಿಯೇ ಆಲೆಮನೆ ನೋಡ್ಕಳರು. ಹೊತ್ತಾರೆಯಿಂದ ಕತ್ತಲಾಗೊವರ್ಗೂವೆ ಕೆಲ್ಸ ಮಾಡಿದ್ರೂವೆ ಮಕ್ಕಳ್ ಹೊಟ್ಟೆ ತುಂಬ್ಸಾಕೆ ಆಯ್ತಿರ್ನಿಲ್ಲ. ನನ್ ತಂಗೀರ್ನ ಕರ್ಕಂಡು ಊರೋರ್ ಹಟ್ಟಿಗೋಗಿ ಹಿಟ್ಗೋಸ್ಕರ ಬಿಕ್ಷೆ ಬೇಡಮು. ಕೆಲವ್ರು ಹಟ್ಟಿ ಮುಂದೆನೇ ಊಟ ಹಾಕರು. ನಮ್ಗೆ ಹಾಕಿದ್ರಲ್ಲಿ ಒಸಿಯ ಉಳಿಸ್ಕಂಡು ಮನೆಗ್ ತಂದು ಕೊಡದು. ನಮ್ಮವ್ವ ಬಲು ಕಸ್ಟ್ತ್ರ್ಗಾತಿ. ಆಲೆಮನೆ ಕೆಲ್ಸ, ಗೌಡ್ರಟ್ಟಿ ಜೀತ, ಮನೆಕೆಲ್ಸ ಎಲ್ಲಾನೂಮಾಡಳು. ನಮ್ ಅಕ್ಕತಂಗೇರೆಲ್ಲಾ ಗೌಡ್ರು ಹಟ್ಟಿ ಎಮ್ಮೆ ಮೇಯ್ಸಮು. ಹುಲ್ ಕುಯ್ಕಂಡು ಬರಮು, ಹಸ್ಗಳ್ಗೆಲ್ಲಾ ಮೇವ್ ತರಮು. ಹಿಂಗೆ ನಮ್ದೆಲ್ಲಾ ಜೀತದ್ ಬದುಕೇ ಆಗೋಯ್ತು.
ಗೌಡ್ರುನ ನಾಮು ತಂಪೊತ್ತಲ್ಲಿ ನೆನಿಬೇಕು. ಮನಿಕಳಾಕೆ ಆಲೆಮನೆ ಬುಟ್ಕೊಟ್ಟಿದ್ರು. ಹಬ್ಬಹರಿ ಜಿನ ಮಾಡಿ ಎಚ್ಗಟ್ಲೆ ಮಾಡುದ್ರೆ ಕೊಡರು. ಹೊಟ್ಟೆ ತುಂಬುಸ್ಕಳ್ಳದೆ ನಮ್ ಕೆಲ್ಸ ಆಗಿದ್ರಿಂದ ಯಾರೂವೆ ಇಸ್ಕೂಲ್ ಮೊಕ ನೋಡಕಾಗ್ನಿಲ್ಲ. ಆದ್ರೆ ನಮ್ ಅಕ್ಕತಂಗೀರ್ ನಾಲ್ಗೆಗೆ ಸರಸ್ವತಿ ಬಂದು ಕುಂತ್ಕಂಡ್ ಬುಟ್ಳು. ರಾಗಿ ಬೀಸಾಗ, ನಾಟಿ ಹಾಕ್ವಾಗ, ಕಳೆ ಕೀಳ್ವಾಗ ನಮ್ಮವ್ವ ಚೆನ್ನಾಗಿ ಹಾಡಳು. ಜೀತದ ಕಷ್ಟನೆಲ್ಲಾ ಹಾಡ್ತಾ ಹಾಡ್ತಾ ಮರುತ್ಕಳ್ಳಮು. ನಮ್ಮಕ್ಕ ತಂಗೀರ್ಗೆಲ್ಲಾ ಗುರು ನಮ್ ಅವ್ವನೆ. ಜೀತ ಮಾಡ್ತಾ ಮಾಡ್ತಾನೆ ಹೆಣ್ ಐಕ ಬೆಳ್ಕಂಡೊ. ಆಮ್ಯಾಲೆ ಮದುವೆ ಮಾಡ್ಬುಟ್ರು. ನನಗೆ ನಮ್ಮೊವ್ನ ಅಣ್ಣನ್ ಮಗನ್ಗೆ ಕೊಟ್ರು ಅಳಿ. ನಮ್ ಸ್ವಾದುರ್ಮಾವ ತಂಬೂರಿ ಚಿನ್ನಯ್ಯ ಅಂತ. ಒಳ್ಳಿ ಕಂಠ ಸುತ್ಮುತ್ ಹಳ್ಳಿಗೆಲ್ಲಾ ಹೆಸುರ್ವಾಸಿ ಆಗಿದ್ರು. ನಮ್ಮತೆ ಒಸಿ ಕಸ್ಬಿಸಿ. ಅತ್ತೆ ಯೇನಾದ್ರು ಬೊಯ್ದ್ರೆ ನಾನು ಅಳ್ತಾ ಕುಂತ್ಕಂಡ್ ಬುಡನಿ.
ಕ್ವಾರಣ್ಯಕ್ಕೋಗಿ ಬಂದ ನಮ್ಮ ಮಾವ ತಂಗಿ ಮಗಳುಅಂದ್ಕಂಡು ನನ್ ಪರ್ವಾಗಿವಾದ್ಸರು. ಕ್ವಾರಣ್ಯದ ಜ್ವಾಳ್ಗೆಗೆ ಬಿದ್ದ ನಾಕಾಣಿ, ಎಂಟಾಣಿ, ಹತ್ಪ್ತ್ಯೈಸ, ಟಮಟೆ, ಬದನೆ, ಪೇಪ್ರುಮಿಂಟು ಎಲ್ಲಾನೂ ಇಂಗಡಸ್ವಾಗ ನಂಗೆ ಯಾರ್ಗೂ ಕಾಣ್ದೆ ಇದ್ದಂಗೆ ಕಾಸ್ಕೊಡರು. ನಾನು ಅಳ್ತಾನೋ,ಸಪ್ಗೋ ಇದ್ರೆ ಮಾದೇಸ್ಪುರ, ಮಂಟೇದಯ್ಯ, ಸಂಕಮ್ಮ ಇವ್ರ ಹಾಡ್ಗಳನ್ನೆಲ್ಲಾ ಹಾಡರು. ನಾನು ನಮ್ ಅವ್ವನ್ ಹೊಟ್ಟೆಲಿರುವಾಗ್ಲೆ ನಮ್ ಮಾವ ತಂಬೂರಿ ಹಿಡ್ಕಂಡು ಹಾಡ್ತಾ ಇದ್ರಂತೆ. ಇದ ನಮ್ಮವ್ವ ಹೇಳಳು. ಬಾಯ್ ತಗುದ್ರೆ ಪದ ಬತ್ತವೆ. ಆದ್ರೆ ಬಾಯ್ ತುಂಬ ಅನ್ನ ಇಲ್ದೆ ಬೆಳ್ದೋ. ‘ಹೀಗೆ ಕಷ್ಟದ ಬದುಕಿನ ಪಯಣವನ್ನು ಹೇಳುತ್ತಲೇ ಹೆಣ್ಣಿನ ಹುಟ್ಟನ್ನು ಶಪಿಸುತ್ತಾ ಕಣ್ಣೀರ್ಗರೆದರು. ಇದ್ದ ಒಬ್ಬ ತಮ್ಮ ಹೃದಯಾಘಾತದಿಂದ ಪ್ರಾಣ ಬಿಟ್ಟರು.
ಬಡತನವನ್ನುಂಡ ಹೆಣ್ಣು ಜೀವಗಳು ಬಹುಕಾಲ ಉಳಿಯದೆ ಕೆಲವರು ತೀರಿಹೋದರು. ಉಳಿದ ಹೆಣ್ಣು ಮಕ್ಕಳಲ್ಲಿ ತುಳಸಮ್ಮ ಮತ್ತು ಲಕ್ಷಮ್ಮ ಈಗಲೂ ಹಾಡುತ್ತಿದ್ದಾರೆ. ಮೊಮ್ಮಕ್ಕಳು ಅಜ್ಜಿ ಹಾಡುವ ಸೋಬಾನೆಗೆ ಸೊಲ್ಲು ಕೊಡುತ್ತಿದ್ದಾರೆ. ಕೈಹಿಡಿದ ಗಂಡ ಆಟೋ ಚಾಲಕ. ಈಗ ಕಣ್ಣು ಕಾಣದೆ ಮನೆಬಿಟ್ಟು ಹೊರಗೆಲ್ಲೂ ಹೋಗುತ್ತಿಲ್ಲ. ಮಗ ಓದಲಿಲ್ಲ. ಮೈಸೂರಿನ ಫ್ಯಾಕ್ಟರಿಯೊಂದರಲ್ಲಿ ಉದ್ಯೋಗಿ. ಇಷ್ಟೆಲ್ಲಾ ಬವಣೆಯ ನಡುವೆ ಹಸಿವ ನೀಗಿಸಿದ ಗೌಡ್ರಟ್ಟಿಯನ್ನು ಮರೆಯದೆ ‘ಬುದ್ಧಿ ಗೌಡರ ಮನೆಯವರ ಊರಿನ ಜನರ ಅನ್ನ ನನ್ನ ಕರುಳಲ್ಲಿ ಇನ್ನೂ ಅರ್ಗಿಲ್ಲಾ’ ಎಂದು ಕೃತಜ್ಞತಾಭಾವದಿಂದ ನೆನೆಯುತ್ತಾರೆ. ಚಂದಗಾಲಿನಲ್ಲಿ ವರುಷಕ್ಕೊಮ್ಮೆ ನಡೆಯುವ ಕಾಲಭೈರವನ ಹಬ್ಬಕ್ಕೆ ಇವರು ತಪ್ಪದೆ ಹೋಗಿ ಗೌಡರ ಔತಣವನ್ನು ಸ್ವೀಕರಿಸಿ ಬರುತ್ತಾರೆ.
” ಪಟ್ಟಪಾಡುಗಳನ್ನೆಲ್ಲಾ ಹುಟ್ಟು ಹಾಡಾಗಿಸುತ್ತಾ ಜೀವಿಸುತ್ತಿರುವ ತುಳಸಮ್ಮ ಸೋಬಾನೆಪದ, ನಾಟಿಪದ, ಅಣ್ಣ ತಂಗೇರ ಹಾಡು, ದೇವರ ಪದಗಳಲ್ಲದೆ ಮಾದೇಶ್ವರ ಮಂಟೇಸ್ವಾಮಿ ಕಾವ್ಯದ ಕೆಲವು ಭಾಗಗಳನ್ನೂ ಹಾಡುತ್ತಾರೆ. ಇತ್ತೀಚೆಗೆ ಅವರ ಹೆಗಲಿಗೆ ಒಂದು ತಂಬೂರಿ ಬಂದಿದೆ. ತಂಬೂರಿ ತಂತಿ ಹೊಮ್ಮಿಸುವ ಸ್ವರಕ್ಕೆ ತುಳಸಮ್ಮ ಅವರ ದನಿ ಮಾರ್ದನಿಯಾಗಿ ಮೊಳಗಲಿ.”
ಮೈಸೂರು : ನಗರದ ಎಲ್ಲ ಸಮಸ್ಯೆಗಳಿಗೆ ಕಾಲಮಿತಿಯಲ್ಲಿ ಪರಿಹಾರ ದೊರಕಿಸಿಕೊಡಲಾಗುವುದು. ಈ ನಿಟ್ಟಿನಲ್ಲಿ ಸಲ್ಲಿಕೆಯಾಗಿರುವ ಅಹವಾಲುಗಳನ್ನು ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳಲಾಗುವುದು…
ಬೆಂಗಳೂರು: ಮುಂಬರುವ ಮಾರ್ಚ್ ತಿಂಗಳಲ್ಲಿ ಬಜೆಟ್ ಮಂಡಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಮಾರ್ಚ್.6ರಂದು ಬಜೆಟ್ ಮಂಡಿಸುವ ಬಗ್ಗೆ ಸಿಎಂ…
ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಭೀಮನಬೀಡು ಗ್ರಾಮದ ಸಮೀಪ ಎರಡು ಕಾರುಗಳ ನಡುವೆ ಮುಖಾಮುಕಿ ಡಿಕ್ಕಿ ಸಂಭವಿಸಿ ಪ್ರಯಾಣಿಕರಿಗೆ ಗಂಭೀರವಾದ…
ಮೈಸೂರು: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೇರಳದಲ್ಲಿ ಕನ್ನಡ ಶಾಲೆಗಳನ್ನು ಬಂದ್ ಮಾಡಿಸಲು ಹೊರಟಿದ್ದಾರೆ ಎಂದು ಆರೋಪಿಸಿ ಕನ್ನಡಪರ…
ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ನೂತನವಾಗಿ ಉದ್ಘಾಟನೆ ಮಾಡಿರುವ ಸೋಲಾರ್ ಘಟಕದಿಂದ ಪ್ರಾಧಿಕಾರಕ್ಕೆ ಪ್ರತಿ ತಿಂಗಳು 15…
ಸೋಮವಾರಪೇಟೆ: ತಾಲ್ಲೂಕಿನ 9ನೇ ಕನ್ನಡ ಸಾಹಿತ್ಯ ಸಮ್ಮೇಳನವು ಫೆಬ್ರವರಿ.9, 2026ರಂದು ಐಗೂರು ಗ್ರಾಮದಲ್ಲಿ ನಡೆಯಲಿದ್ದು, ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ…