ರಾಜ್ಯ ರಾಜಕೀಯ ದಿನದಿಂದ ದಿನಕ್ಕೆ ರಂಗೇರತೊಡಗಿದೆ. ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮೂರೂ ರಾಜಕೀಯ ಪಕ್ಷಗಳು ತಮ್ಮದೇ ಲೆಕ್ಕಾಚಾರದಲ್ಲಿವೆ. ಆದರೆ, ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳ್ಳುತ್ತಿರುವ ರೀತಿ ಇಂತಹ ಲೆಕ್ಕಾಚಾರಗಳನ್ನು ಬದಲಿಸುವುದು ನಿಶ್ಚಿತ.
ಕರ್ನಾಟಕದ ರಾಜಕಾರಣ ದಿನ ದಿನಕ್ಕೂ ರಂಗೇರುತ್ತಿರುವಂತೆ ಕಾಣುತ್ತಿದ್ದರೆ, ಅದಕ್ಕೆ ಇದೇ ಮುಖ್ಯ ಕಾರಣ. ಅಂದ ಹಾಗೆ ಟಿಕೆಟ್ ಹಂಚಿಕೆಯ ವಿಷಯದಲ್ಲಿ ಕಸರತ್ತು ನಡೆಸುತ್ತಿರುವ ಮೂರೂ ರಾಜಕೀಯ ಪಕ್ಷಗಳು ದೊಡ್ಡ ಮಟ್ಟದಲ್ಲೇ ಪರದಾಡಿವೆ. ಅಷ್ಟೇ ಅಲ್ಲ, ಟಿಕೆಟ್ ಹಂಚಿಕೆಯ ನಂತರ ತಮ್ಮ ಪಕ್ಷದ ಅಂತರಂಗದಲ್ಲಿ ಮೂಡುವ ಬಿಕ್ಕಟ್ಟು ದೊಡ್ಡ ಮಟ್ಟದ ಧ್ರುವೀಕರಣಕ್ಕೆ ದಾರಿ ಮಾಡಿಕೊಡಲಿದೆ ಎಂಬುದು ಈ ಪಕ್ಷಗಳಿಗೆ ಗೊತ್ತಿದೆ.
ಅಂದ ಹಾಗೆ ಟಿಕೆಟ್ ಪಡೆಯಲು ವಿಫಲರಾದವರು ಹಲವು ರೀತಿಯಲ್ಲಿ ಪ್ರತಿಕ್ರಿಯಿಸಬಹುದು. ಮೊದಲನೆಯದಾಗಿ ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧ ಬಂಡಾಯ ಏಳಬಹುದು. ಒಂದು ವೇಳೆ ಬಂಡಾಯ ಏಳದಿದ್ದರೆ ಪಕ್ಷ ತೊರೆದು ಬೇರೆ ಪಕ್ಷಕ್ಕೂ ಹೋಗಬಹುದು. ಇವೆರಡು ಮಾರ್ಗಗಳೂ ಸರಿಯಲ್ಲ ಅನಿಸಿದರೆ ಒಳಗಿಂದೊಳಗೇ ಸಿಟ್ಟು ಕಾರುತ್ತಾ ಪಕ್ಷದ ಅಭ್ಯರ್ಥಿಯ ಸೋಲಿಗೆ ಕಾರಣವಾಗಬಹುದು.
ಅರ್ಥಾತ್, ಇವೇ ಅಂಶಗಳು ರಾಜಕೀಯ ಧ್ರುವೀಕರಣಕ್ಕೆ ಮೂಲವಾಗಲಿವೆ ಮತ್ತು ಇಂತಹ ಧ್ರುವೀಕರಣ ಘಟಿಸಿದ ನಂತರವೇ ಎಲ್ಲ ರಾಜಕೀಯ ಪಕ್ಷಗಳ ನೈಜ ಬಲಾಬಲ ಏನು ಅನ್ನುವುದರ ಚಿತ್ರಣ ಸಿಗುತ್ತದೆ.
ಅಂದ ಹಾಗೆ ಇವತ್ತಿನ ಸ್ಥಿತಿಯಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ತಮ್ಮದೇ ಕಲ್ಪನಾ ವಿಹಾರದಲ್ಲಿ ಮುಳುಗಿವೆ. ಈ ಪೈಕಿ ರಾಜ್ಯ ಕಾಂಗ್ರೆಸ್ ಪಾಳೆಯವನ್ನು ಪ್ರವೇಶಿಸಿದರೆ ಅಪಾರ ಆತ್ಮವಿಶ್ವಾಸ ಕಾಣುತ್ತದೆ. ಕಾಂಗ್ರೆಸ್ ನಾಯಕರ ಪ್ರಕಾರ, ಈ ಬಾರಿಯ ಚುನಾವಣೆಯಲ್ಲಿ
ಪಕ್ಷ ನೂರಾ ಇಪ್ಪತ್ತರಿಂದ ನೂರಿಪ್ಪತ್ತೈದು ಕ್ಷೇತ್ರಗಳಲ್ಲಿ ಗೆಲುವು ಗಳಿಸಲಿದೆ.
ಅಂದರೆ ಸ್ವಯಂಬಲದ ಮೇಲೆ ಅಧಿಕಾರ ಹಿಡಿಯುವ ಶಕ್ತಿ ತಮ್ಮ ಪಕ್ಷಕ್ಕಿದೆ ಎಂಬುದು ಕಾಂಗ್ರೆಸ್ ನಾಯಕರ ನಂಬಿಕೆ. ಅವರ ಈ ನಂಬಿಕೆಗೆ ಸನ್ನಿವೇಶದ ಸಾಕ್ಷ್ಯಾಧಾರಗಳೇ ಕಾರಣ. ಉದಾಹರಣೆಗೆ ಹೇಳಬೇಕೆಂದರೆ ಆಡಳಿತ ವಿರೋಧಿ ಅಲೆ ಎದ್ದು ಕಾಣುತ್ತಿರುವುದು.
ಬೊಮ್ಮಾಯಿ ಸರ್ಕಾರ ನಲವತ್ತು ಪರ್ಸೆಂಟ್ ಕಮಿಷನ್ ಸರ್ಕಾರ ಎಂಬ ತನ್ನದೇ ಆರೋಪ ಏನಿದೆ ಇದು ಜನರ ಮನಸ್ಸನ್ನು ನಾಟಿದೆ ಎಂಬುದು ಕಾಂಗ್ರೆಸ್ಸಿನ ನಂಬಿಕೆ. ಇವತ್ತು ಸರ್ಕಾರದ ಯಾವುದೇ ಕಚೇರಿಗಳಿಗೆ ಹೋಗಿ ನೋಡಿದರೂ ಅಲ್ಲಿ ಭ್ರಷ್ಟಾಚಾರದ ಉಪಸ್ಥಿತಿ ಇರುತ್ತದೆ. ಹೀಗೆ ಪ್ರತಿಯೊಂದು ಕೆಲಸಕ್ಕೂ ಜನ ಲಂಚ–ರುಷುವತ್ತು ನೀಡುವುದು ಅನಿವಾರ್ಯವಾದರೆ ಅದರರ್ಥ ಏನು? ಆಡಳಿತ ಯಂತ್ರದ ಮೇಲೆ ಸರ್ಕಾರಕ್ಕೆ ಹಿಡಿತ ಇಲ್ಲ ಅಂತಲ್ಲವೇ
ಅಂದ ಮೇಲೆ ಜನರಾದರೂ ಏಕೆ ಬಿಜೆಪಿಯನ್ನು ಮರಳಿ ಅಧಿಕಾರಕ್ಕೆ ತರುತ್ತಾರೆ, ಹೀಗಾಗಿಯೇ ಬಿಜೆಪಿಗೆ ಪರ್ಯಾಯವಾಗಿ ತಾವು ಅಧಿಕಾರಕ್ಕೆ ಬರುವುದು ನಿಶ್ಚಿತ ಎಂಬುದು ಕಾಂಗ್ರೆಸ್ ನಾಯಕರ ವಿಶ್ವಾಸ. ಈ ಮಧ್ಯೆ ಆಡಳಿತಾರೂಢ ಬಿಜೆಪಿಗೆ ಸ್ವಯಂಬಲದ ಮೇಲೆ ಅಧಿಕಾರ ಹಿಡಿಯುವ ಆತ್ಮವಿಶ್ವಾಸವಿಲ್ಲ.
ಕಮಲ ಪಾಳೆಯದ ಮೂಲಗಳ ಪ್ರಕಾರ, ತಕ್ಷಣ ಚುನಾವಣೆ ನಡೆದರೆ ಬಿಜೆಪಿಗೆ ಎಂಬತ್ತರಿಂದ ಎಂಬತ್ತೈದು ಕ್ಷೇತ್ರಗಳಲ್ಲಿ ಗೆಲುವು ಸಿಗಬಹುದು.
ಇತ್ತೀಚೆಗೆ ಕರ್ನಾಟಕಕ್ಕೆ ಬಂದಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೂಡ ಈ ಬಾರಿಯ ಚುನಾವಣೆಯಲ್ಲಿ ನಾವು ಕನಿಷ್ಠ ತೊಂಬತ್ತು ಸ್ಥಾನ ಗಳಿಸಬೇಕು ಎಂದು ಹೇಳಿದ್ದಾರಂತೆ. ಅರ್ಥಾತ್, ತಮಗೆ ಸ್ವಯಂಬಲದ ಮೇಲೆ ಅಽಕಾರ ದಕ್ಕದಿದ್ದರೂ ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ರಚನೆಯಾಗುವುದು ಗ್ಯಾರಂಟಿ ಎಂಬುದು ಬಿಜೆಪಿ ಲೆಕ್ಕಾಚಾರ. ಹಾಗಾದಾಗ ಜಾತ್ಯತೀತ ಜನತಾದಳ ಜತೆಗೂಡಿ ಮೈತ್ರಿ ಸರ್ಕಾರ ರಚಿಸುವಂತಾಗಬೇಕು ಎಂಬುದು ಅದರ ಯೋಚನೆ.
ಈ ಮಧ್ಯೆ ದೇವೇಗೌಡ–ಕುಮಾರಸ್ವಾಮಿ ನೇತೃತ್ವದ ಜಾ.ದಳ ಕೂಡ ತನ್ನದೇ ಲೆಕ್ಕಾಚಾರಗಳಲ್ಲಿ ಮುಳುಗಿದೆಯಲ್ಲದೆ, ಕನಿಷ್ಠ ಐವತ್ತು ಕ್ಷೇತ್ರಗಳಲ್ಲಿ ತಾನು ಗೆಲುವು ಸಾಧಿಸುವುದು ಖಚಿತ ಎಂಬ ಲೆಕ್ಕಾಚಾರದಲ್ಲಿದೆ. ಅಂದರೆ ಯಾರೇ ಸರ್ಕಾರ ರಚಿಸಲಿ, ತನ್ನ ನೆರವು ಇಲ್ಲದೆ ಸರ್ಕಾರ ರಚನೆಯಾಗುವುದಿಲ್ಲ ಎಂಬುದು ಜಾ.ದಳ ಯೋಚನೆ.
ಹೀಗೆ ಮೂರೂ ರಾಜಕೀಯ ಪಕ್ಷಗಳು ತಮ್ಮದೇ ಲೆಕ್ಕಾಚಾರದಲ್ಲಿ ಮುಳುಗಿರುವುದೇನೋ ನಿಜ. ಆದರೆ ಟಿಕೆಟ್ ಹಂಚಿಕೆಯ ನಂತರ ನಡೆಯುವ ರಾಜಕೀಯ ಧ್ರುವೀಕರಣ ಕರ್ನಾಟಕದ ರಾಜಕೀಯ ಚಿತ್ರವನ್ನು ಸ್ಪಷ್ಟಗೊಳಿಸುತ್ತದೆ. ಇದಕ್ಕೆ ತುಂಬ ದಿನಗಳು ಕಾಯಬೇಕಿಲ್ಲ.
ಹೊಸದಿಲ್ಲಿ : ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಮಹತ್ವದ ಸುದ್ದಿಯೊಂದನ್ನು ನೀಡಿದೆ.…
ಹೊಸದಿಲ್ಲಿ : ಪ್ರಧಾನ ಮಂತ್ರಿ ಕಾರ್ಯಾಲಯ (ಪಿಎಂಒ), ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯ ಮತ್ತು ಸಂಪುಟ ಸಚಿವಾಲಯಗಳನ್ನು ಒಳಗೊಂಡಿರುವ ‘ಸೇವಾ…
ಹೊಸದಿಲ್ಲಿ : ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ‘ಡಿ’ಗುಂಪಿನ ಪಂದ್ಯದಲ್ಲಿ ಯುಎಇ ಕ್ರಿಕೆಟ್ ತಂಡವು ಕೆನಡಾ ತಂಡವನ್ನು ಐದು…
ಸೇಲಂ : ತಮಿಳಿಗ ವೆಟ್ರಿ ಕಳಗಂ(ಟಿವಿಕೆ) ಪಕ್ಷದ ರ‍್ಯಾಲಿ ವೇಳೆ ಕುಸಿದು ಬಿದ್ದ ವ್ಯಕ್ತಿಯೊಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗದ ಮಧ್ಯೆ…
ಬೆಂಗಳೂರು : ಭಾರತೀಯ ರೈಲ್ವೆಯು ತನ್ನ ಅಧಿಕೃತ ಆಪ್ ‘ರೈಲ್‌ಒನ್’ ಅನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಇದರಲ್ಲಿ ರೈಲ್ವೆ ಸೇವೆಗಳೆಲ್ಲವೂ…
ಢಾಕಾ : ಬಾಂಗ್ಲಾದೇಶ ಸಾರ್ವತ್ರಿಕ ಚುನಾವಣೆಯಲ್ಲಿ ಬಾಂಗ್ಲಾದೇಶ ನ್ಯಾಷನಲ್ ಪಾರ್ಟಿ(ಬಿಎನ್‌ಪಿ) ಗೆದ್ದು ಬೀಗಿದೆ. ಸಂಸತ್ತಿನ ಒಟ್ಟು 300 ಸ್ಥಾನಗಳ ಪೈಕಿ…