ನಮ್ಮ ಹಿರೀಕರು ನನ್ನ ಎಳವೆಗೆ ಸಂಬಂಧಿಸಿದ ಕೆಲವು ಘಟನೆಗಳನ್ನು ರೇಜಿಗೆ ಬರುವಷ್ಟು ಸಲ ಹೇಳುತ್ತಿದ್ದರು:
ಮೊದಲನೆಯದು– ನನಗೆ ‘ಅಮ್ಮ’ ಬಂದ ಘಟನೆ. ಕೂಸಿಗೆ ವರ್ಷ ತುಂಬುವ ಮೊದಲೇ ಮೈತುಂಬ ದಡಾರದ ಗುಳ್ಳೆಗಳೆದ್ದು ಒಡೆದು, ದೇಹ ರಸಿಕೆಯಲ್ಲದ್ದಿದ ಗೊಂಬೆಯಾಯಿತಂತೆ. ಉಡಿಸಿದ ಬಟ್ಟೆ ಕಳೆವಾಗ ಚರ್ಮವೂ ಕಿತ್ತು ಬರುತ್ತಿತ್ತಂತೆ. ಕೂಸನ್ನು ತೆಂಗಿನೆಣ್ಣೆ ಸವರಿದ ಬಾಳೆಯೆಲೆಯ ಮೇಲೆ ಮಲಗಿಸಬೇಕಾಯಿತಂತೆ. ಅದು ರಾತ್ರಿಯಿಡೀ ಅಳುತ್ತ ಬೀದಿಯವರಿಗೆ ರೇಜಿಗೆ ಮಾಡುತ್ತಿದ್ದರಿಂದ, ಅದನ್ನು ಸೋದರಮಾವ ಗದ್ದೆಯಲ್ಲಿದ್ದ ಗುಡಿಸಲಲ್ಲಿ ಇರಿಸಿಕೊಂಡಿದ್ದನಂತೆ. ಬೇವಿನಸೊಪ್ಪಿಂದ ಗಾಳಿ ಹಾಕುತ್ತ ಮನೆಯವರು ಪಾಳಿಯ ಮೇಲೆ ಜಾಗರಣೆ ನಡೆಸುತ್ತಿದ್ದರಂತೆ. ‘ಉಳಿಯುವುದು ಕಷ್ಟ’ ಎಂದುಕೊಂಡಿದ್ದಾಗ, ದೇವರು ಉಗುಳಿ ‘ಬದುಕಿಕೊ’ ಎಂದು ಬಿಟ್ಟನಂತೆ. ಕೂಸೇನೊ ಉಳಿಯಿತು. ಆದರೆ ನಿತ್ರಾಣಿಯಾಯಿತು. ಹದಿನೈದು ವರ್ಷ ತುಂಬಿದರೂ, ತುಂಬಿದ ಕೊಡ ಎತ್ತಲು, ಎತ್ತನ್ನು ಜಗ್ಗಿ ನಿಲ್ಲಿಸಲು, ಕೊರೆಚೀಲ ರಾಗಿ ಎತ್ತಲು ಆಗುತ್ತಿರಲಿಲ್ಲ. ನಾನು ಹೊಯ್ದಾಡುತ್ತ ನಡೆವುದನ್ನು ಕಂಡವರು ‘ದಸ್ತಣ್ಣ, ಇದು ಒಂಟೆಲುಬಿನ ಕೇಸು ಕಂಡ್ರಿ. ದಿಮ್ಮನೆ ಕೆಲಸಕ್ಕಲ್ಲ’ ಎಂದು ಶರಾ ಬರೆಯುತ್ತಿದ್ದರು. ಇದರಿಂದ ಅಂಗಡಿಗೆ ಓಡಾಡುವ, ಕುಲುಮೆಯಲ್ಲಿ ತಿದಿ ಜಗ್ಗುವ, ಹಾಲು ಹಿಂಡುವ, ಸೆಗಣಿ ಬಾಚುವ, ಅಂಗಳ ಗುಡಿಸುವ, ಸಂತೆಯಲ್ಲಿ ಕಬ್ಬಿಣದ ಸಾಮಗ್ರಿ ಮಾರುವ ಲಘುಕಾಯಕಗಳು ನನ್ನ ಖಾತೆಗೆ ಬಂದವು.
ಎರಡನೆಯದು–ಅಮ್ಮನಿಗೆ ಕಾಯಿಲೆಯಾಗಿ, ಎದೆಹಾಲು ಬಿಡಿಸಿ ಪಾರ್ವತಕ್ಕನ ಮನೆಗೆ ಕಳಿಸಿದ ಘಟನೆ. ಈಕೆ ಪಕ್ಕದ ಬೆಟ್ಟತಾವರೆಕೆರೆಯವಳು. ಸಂತೆಗೆ ಕಪ್ಪು ಬಲೂನುಗಳಂತಹ ಮಡಕೆಗಳನ್ನು ಗಾಡಿ ಮೇಲೆ ಹೇರಿಕೊಂಡು ಹುಷಾರಾಗಿ ತರುತ್ತಿದ್ದವಳು. ಅಮ್ಮನ ಗೆಳತಿ. ಇಬ್ಬರೂ ಗಾಡಿ ಕಟ್ಟಿಸಿಕೊಂಡು ಸಂತೆಗೆ–ಸಿನಿಮಾಕ್ಕೆ ಹೋಗುತ್ತಿದ್ದರು. ಪಾರ್ವತಕ್ಕನ ಗಂಡ ದೇವೀರಣ್ಣ, ಅಪ್ಪನ ದೋಸ್ತ. ನಮ್ಮನೆಯ ಆಲೆಮನೆ–ಕಣಸುಗ್ಗಿ ಕೆಲಸಗಳಿಗೆ ದೇವೀರಣ್ಣನ ಮಗ ತಿಪ್ಪೇಶಿ ಬರುತ್ತಿದ್ದನು. ಅಲ್ಲಿಂದ ತರಕಾರಿ, ಕಾಳು–ಕಡ್ಡಿ ನಮ್ಮನೆಗೆ ಬರುತ್ತಿದ್ದವು. ಅಮ್ಮ ನನಗೆ ಎದೆಹಾಲು ಬಿಡಿಸಿದಾಗ ಪಾರ್ವತಕ್ಕ ತನ್ನಲ್ಲಿ ಇರಿಸಿಕೊಂಡಿದ್ದಳು. ನಾನು ಅವಳಿಗೆ ‘ಪಾಲತಾ’ ಎನ್ನುತ್ತಿದ್ದೆನಂತೆ. ಅಮ್ಮನನ್ನು ನೆನೆದು ಅಳುತ್ತಿದ್ದೆನಂತೆ. ರಾತ್ರಿ ಎದ್ದು ಎರಡಕ್ಕೆ ಹೋಗಲು ‘ಪಾಲತಾ ಪಾಖನಾ…’ ಎಂದೆನಂತೆ. ಭಾಷೆ ತಿಳಿಯದ ಪಾರ್ವತಕ್ಕ ‘ಬೆಲ್ಲ ಬೇಕೆ, ಹಪ್ಪಳ ಸುಟ್ಟುಕೊಡನೇ’ ಎಂದು ಕೇಳುತ್ತಿದ್ದಳಂತೆ. ದೊಡ್ಡವನಾದ ಮೇಲೂ ಆಕೆ ಇದನ್ನು ಎಲ್ಲರೆದುರು ಹೇಳಿ ಗೋಳು ಹಾಕುತ್ತಿದ್ದಳು. ಆಕೆ ಕೆಂಪಗಿದ್ದಳು. ಸುಂದರವಾಗಿದ್ದಳು. ನಕ್ಕಾಗ ಕಣ್ಣಸುತ್ತ ನಿರಿಗೆಗಳಾಗುತ್ತಿದ್ದವು. ಅವಳ ಸಮಸ್ತ ಚೈತನ್ಯವೇ ನಗುವಲ್ಲಡಗಿತ್ತು.
ಪಾರ್ವತಕ್ಕ ಸಾಯುವ ಮುಂಚೆ ನನ್ನನ್ನು ನೋಡಬೇಕೆಂದು ಯಾರ‍್ಯಾರದೊ ಕೈಯಲ್ಲಿ ಹೇಳಿ ಕಳುಹಿಸಿದಳು. ಹಂಪಿ ಸೇರಿದ ಬಳಿಕ ದೇಶಾಂತರ ತಿರುಗುತ್ತಿದ್ದ ನಾನು, ಹೋದೆ. ಸುಟ್ಟಬತ್ತಿಯಂತೆ ಅಂಗಳದಲ್ಲಿ ಮಲಗಿದ್ದಳು. ಮುಪ್ಪು ಕಾಯಿಲೆ ಜರ್ಜರಿತವಾಗಿಸಿದ್ದವು. ಹೇನೆಂದು ತಲೆ ಬೋಳಿಸಿದ್ದರಿಂದ ಬೌದ್ಧ ಸನ್ಯಾಸಿನಿಯಂತಿದ್ದಳು. ಮಲಗಿ ಚರ್ಮ ಸುಲಿದು ಮೈಯಿಂದ ಕಟುವಾಸನೆ ಬರುತ್ತಿತ್ತು. ಕಣ್ಣಸುತ್ತ ನಿರಿಗೆಯಾಗುವಂತೆ ನಗು ಮುಕ್ಕಳಿಸುತ್ತ ಪ್ರೀತಿ ಸೂಸುತ್ತಿದ್ದ ಪಾಲತಳ ಚಿತ್ರ ಭಗ್ನಗೊಂಡಿತ್ತು. ಈ ರೂಪಾಂತರ ನಂಬಲು ಕಷ್ಟವಾಯಿತು. ನನ್ನ ಪಾಲತ ಹೀಗಾದಳೆ ಎಂದು ವಿಸ್ಮಯಪಡುತ್ತ, ಹೊಂಚಿಕೊಂಡು ಸುಳಿದಾಡುತ್ತಿರುವ ಸಾವನ್ನು ಕಾಣುತ್ತ, ವಾಸನೆಯನ್ನು ಕಷ್ಟದಿಂದ ಸಹಿಸುತ್ತ, ಕೈಒಣಗಿ ಚಕ್ಕಳವಾಗಿದ್ದ ಆಕೆಯ ಕೈಹಿಡಿದುಕೊಂಡು ಏನೂ ತೋಚದೆ ಸುಮ್ಮನೆ ಕೂತೆ. ಇದೇ ಕೈಯೇನು ನನಗೆ ಉಣಿಸಿದ್ದು? ಪಾಲತಾ ಗೆಳತಿಯನ್ನು ಅರ್ಥಾತ್ ಅಮ್ಮನನ್ನು ನೆನೆದು ಅತ್ತಳು. ನಾನು ಎಳವೆಯಲ್ಲಿ ಅವಳ ಗೋಳು ಹಾಕಿಕೊಂಡದ್ದನ್ನು ಕೊನೆಯ ಸಲವೆಂಬಂತೆ ಹೇಳಿದಳು. ಅವಳ ಸುಕ್ಕುದುಟಿಗಳಲ್ಲಿ ನಗು ಸುಳಿಯಿತೇ? ಮುಸ್ಸಂಜೆ ಮಸುಕಿನಲ್ಲಿ ಗೊತ್ತಾಗಲಿಲ್ಲ. ಕೈಯಮೇಲೆ ಬೆಚ್ಚನೆಯ ಕಣ್ಣೀರ ಹನಿಗಳು ಬಿದ್ದವು. ಸಾವಿಗೆ ದುಃಖಿಸಿದಳೊ? ಬೆಳೆದು ದೊಡ್ಡ ಮನುಷ್ಯನಾಗಿರುವುದಕ್ಕೆ ಆನಂದದಿಂದ ಅತ್ತಳೋ? ತಡವಾಗಿ ಬಂದ ನಾನು ಪಾಪಪ್ರeಯಿಂದ ಪರಿತಾಪದಿಂದ ಕಾಲು ಮುಟ್ಟಿ ನಮಸ್ಕರಿಸಿದೆ. ಭಾವನಾತ್ಮಕವಾಗಿ ತಾನು ಒಳಗೊಳ್ಳಲಾಗದ ಈ ನಾಟಕೀಯ ಮಿಲನವನ್ನು ನೋಡುತ್ತ ಬಳಲಿದಂತಿದ್ದ ಬಾನುವನ್ನು ಮತ್ತಷ್ಟು ಬಳಲಿಸಬಾರದು ಎಂದು, ಕೊನೆಯ ಬಸ್ಸನ್ನು ತಪ್ಪಿಸಿ ಕೊಳ್ಳಬಾರದು ಎಂದು, ಮರಳಿದೆ. ಮಾರನೆಯ ದಿನ ಪ್ರಾಣ ಹೋಯಿತಂತೆ. ನನಗಾಗೇ ಜೀವ ಹಿಡಿದಿದ್ದಳೇ? ಈಗಲೂ ತಾಯಿ ಪ್ರೀತಿ ಎಂದಾಗ ಸಂಸಾರ ಸಂಭಾಳಿಸುತ್ತ ಸಿಡುಕಿಯಾಗಿದ್ದ ಅಮ್ಮನ ನೆನಪಾಗುವುದಿಲ್ಲ. ನಕ್ಕಾಗ ನಿರಿಗೆಗಟ್ಟುತ್ತಿದ್ದ ಪಾರ್ವತಕ್ಕಳ ಸುಂದರ ಕೆಂಪುಮುಖ ಸುಳಿಯು ತ್ತದೆ. ಬೇಂದ್ರೆ ತಾನು ಐದು ತಾಯಂದಿರ ಮಗನೆಂದು ಹೇಳಿಕೊಳ್ಳುವುದುಂಟು. ನನ್ನ ಮಟ್ಟಿಗೆ ದಡಾರದಮ್ಮನೂ ಸೇರಿದರೆ ಮೂವರು ತಾಯಂದಿರು.
ಮೂರನೆಯದು– ಬಣವೆಗೆ ಅಗ್ನಿಸ್ಪರ್ಶವಾದ ಘಟನೆ. ಊರಲ್ಲಿ ನಮ್ಮನೆ ಗಲ್ಲಿಯ ಕೊನೆಗಿತ್ತು. ಗಲ್ಲಿಯ ನಡುವಿದ್ದ ಬೇವಿನಮರಕ್ಕೆ ಸೂಫಿಸಂತ ಅಬ್ದುಲ್ ಖಾದರ್ ಜೀಲಾನಿಯವರ ಪುಣ್ಯತಿಥಿ ಆಚರಿಸುವವರೆಲ್ಲ ಹಸಿರುಬಾವುಟ ಕಟ್ಟುತ್ತಿದ್ದರು. ಅದರ ಬುಡಕ್ಕಾನಿಸಿ ನಿಲ್ಲಿಸಿದ್ದ ಬಾವುಟಗಳ ಬಟ್ಟೆ ಬಣ್ಣಗೆಟ್ಟು ಹರಿದುಹೋಗಿದ್ದು, ಬಿದಿರುಗಳು ಮಾತ್ರ ನಿಂತಿರುತ್ತಿದ್ದವು. ಈ ಮರದಡಿ ದಿನವೆಲ್ಲ ನಾವು ಹಳೇಬಟ್ಟೆ ಸೇರಿಸಿ ಮಾಡಿದ ಮೂಸಂಬಿ ಗಾತ್ರದ ಚೆಂಡಿನಿಂದ ಸಿಕ್ಕವರಿಗೆ ಬೀಸುವುದು, ಬಟ್ಟೆಯನ್ನು ನುಲಿಮಾಡಿ ಕಾಲ್ಬೆರಳಲ್ಲಿ ಸಿಕ್ಕಿಸಿಕೊಂಡು ಹಿಂದರಮುಖಿ ಚಿಮ್ಮಿಸುವುದು, ಬಳೆಚೂರನ್ನು ಮಣ್ಣಿನ ದಿಬ್ಬದಲ್ಲಿ ಅಡಗಿಸುವುದು, ಉಯ್ಯಾಲೆ, ಗೋಲಿ, ಲಗೋರಿ, ಬುಗುರಿ, ಮರಕೋತಿ ಇತ್ಯಾದಿ ಆಡುತ್ತಿದ್ದೆವು. ಜಗುಲಿಯ ಮೇಲೆ ಕೂತು ಎಲೆ ಅಡಿಕೆ ಮೆಲ್ಲುತ್ತ ಸಖಿಯರೊಡನೆ ಹರಟುತ್ತ ಅಮ್ಮ ನಮ್ಮ ಬಾಲಲೀಲೆ ಗಮನಿಸುತ್ತಿದ್ದಳು. ಬೀದಿಯಾಟ ಬೇಸರವಾದರೆ ಈಜಲು ಕಟ್ಟೆಹೊಳೆಗೆ ಹೋಗುತ್ತಿದ್ದೆವು. ಬೇಲಿಸಾಲಿಗೆ ಹೋಗಿ ಹಕ್ಕಿಗಳನ್ನು ಚಾಟರಬಿಲ್ಲಿನಿಂದ ಹೊಡೆಯುತ್ತಿದ್ದೆವು. ಬಾವಿಕಟ್ಟೆ ಬಳಿ ಮದುವೆ ಆಟವಾಡುತ್ತಿದ್ದೆವು. ಒಮ್ಮೆ ಹುಡುಗರೆಲ್ಲ ಸೇರಿ, ನೂರ್ ಎಂಬ ಹುಡುಗಿಗೂ ನನಗೂ ಮದುವೆ ಮಾಡಿಸಿದರು. ಮೊಮ್ಮಕ್ಕಳಾಗಿ ಮುದುಕಿಯಾಗಿರುವ ಈಕೆ ಎಲ್ಲಾದರೂ ಕಂಡಾಗ ‘ರಹಮತಿ, ನೀನು ನನಗೆ ಮದುವೆ ಆಗಿದ್ದೆ ಮರೀಬೇಡ’ ಎಂದು ನವವಧುವಿನಂತೆ ನಾಚುತ್ತ ಹೇಳುವುದುಂಟು.
ನಮ್ಮ ಅಡುಗೆಯಾಟದಿಂದ ಒಂದು ದಿನ ಅನಾಹುತವಾಯಿತು. ಕಣದಲ್ಲಿ ಒಕ್ಕಲಿಗೆ ಒಟ್ಟಿದ್ದ ಬಣವೆಗಳ ಬುಡದಲ್ಲಿ ಆಟವಾಡುತ್ತಿದ್ದೆವು. ತೆಂಗಿನಚಿಪ್ಪುಗಳಲ್ಲಿ ಮಣ್ಣುಕಲಸಿ ಅನ್ನ ಮುದ್ದೆ, ಹಸಿರುಸೊಪ್ಪನ್ನು ಅರೆದು ಸಾರು, ಯಾರೊ ಒಬ್ಬ ಮನೆಯಿಂದ ಬೆಂಕಿ ಪೊಟ್ಟಣವನ್ನು ತಂದಿದ್ದ. ಒಲೆ ಹೊತ್ತಿಸಿದ್ದೆವು. ಅದು ನಮ್ಮ ದಾದಾನ ಕಿರಿಯ ಮಗಳ ಜಂಪರಿಗೆ ಹತ್ತಿತು.
ಅವಳು ರಾಗಿಬಣವೆಗಳತ್ತ ಓಡಲು ಜ್ವಾಲೆ ಅವಕ್ಕೆ ದಾಟಿತು. ವರ್ಷವಿಡೀ ಕಷ್ಟಪಟ್ಟು ಬೆಳೆದ ಪೈರು. ಹಾಹಾಕಾರ ಪಡುತ್ತ ಜನ ಬಣವೆಗೆ ನೀರು ಹೊಯ್ಯುತೊಡಗಿದರು. ಮಗಳ ಬಟ್ಟೆಗೆ ತಗುಲಿದ ಬೆಂಕಿ ಆರಿಸಲು ದಾದಾ ಸಮೀಪಿಸಿದಾಗ, ಆಕೆ ‘ಅಪ್ಪಾ ಹೊಡೆಯಬೇಡಿ. ಇನ್ನೊಮ್ಮೆ ಮಾಡುವುದಿಲ್ಲ’ ಎಂದು ಗೋಗರೆದಳು. ಸುಟ್ಟಗಾಯದ ಬಾಲ ಸತ್ತುಹೋದಳು. ಆದರೆ ಅವಳಾಡಿದ ಕೊನೆಯ ಮಾತನ್ನು ಊರು ಬಹಳ ಕಾಲ ನೆನೆದು ದುಃಖಿಸುತ್ತಿತ್ತು. ನನ್ನ ಚಿಕ್ಕಮ್ಮ ಈಗಲೂ ಕಂಡರೆ, ‘ಅಗೊ ನೋಡು, ಬಣವೆಗೆ ಬೆಂಕಿಯಿಟ್ಟವನು ಬಂದ’ ಎನ್ನುತ್ತಾಳೆ. ಆಡೊ ಹುಡುಗರ ಗುಂಪಲ್ಲಿ ಯಾರಿಟ್ಟರೊ ಬೆಂಕಿ, ಬಾಲಾಪರಾಧದ ಅಪಕೀರ್ತಿ ನನಗೆ ಸುತ್ತಿಕೊಂಡಿತು. ಬಾಳ ನೆನಪುಗಳಲ್ಲಿ ಸಂಭ್ರಮಕ್ಕೆ ನೋವಿನೆಳೆಗಳು ಸುತ್ತಿಕೊಂಡಿರುವುದು ಒಂದು ವೈರುಧ್ಯ.
• ರಮೇಶ್ ಪಿ.ರಂಗಸಮುದ್ರ ಪಕ್ಷಿಗಳಿಗೂ ಕೃಷಿಗೂ ಅವಿನಾಭಾವ ಸಂಬಂಧವಿದೆ. ಪಕ್ಷಿಗಳು ಮಾನವನಿಗಿಂತಲೂ ಹೆಚ್ಚಾಗಿ ಪ್ರಕೃತಿಯೊಡನೆ ಬೆರೆತಿವೆ. ಸಸ್ಯ ವೈವಿಧ್ಯತೆಯ ನಡುವೆ…
ಪ್ರತಿ ಕ್ವಿಂಟಾಲ್ ಉಂಡೆ ಕೊಬ್ಬರಿಗೆ 100 ರೂ. ಹಾಗೂ ಹೋಳಾದ ಕೊಬ್ಬರಿಗೆ 420 ರೂ. ದರ ಹೆಚ್ಚಿಸಲಾಗಿದೆ ಎಂದು ಕೇಂದ್ರ…
• ಜಿ.ಕೃಷ್ಣ ಪ್ರಸಾದ್ ಕಾವೇರಿ ಬಯಲಿನಲ್ಲಿ ಭತ್ತದ ಕಟಾವು ಶುರುವಾಗಿದೆ. ದೈತ್ಯ ಗಾತ್ರದ ಕಟಾವು ಯಂತ್ರಗಳು ಗದ್ದೆಗೆ ಲಗ್ಗೆ ಇಟ್ಟಿವೆ.…
ರಾಜ್ಯ ಬಿಜೆಪಿಯ ಆಂತರಿಕ ಸಂಘರ್ಷ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಒಂದು ಕಡೆ ಪಕ್ಷಾಧ್ಯಕ್ಷ ವಿಜಯೇಂದ್ರ ಅವರ ಬಣ ಮತ್ತೊಂದು ಕಡೆ…
ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಹೆಸರಿನಲ್ಲಿ ವರ್ಷಕ್ಕೊಮ್ಮೆ ಬೆಳಗಾವಿಯಲ್ಲಿ ನಡೆಸುವ ವಿಧಾನಮಂಡಲ ಅಧಿವೇಶನದಲ್ಲಿ ಕರ್ನಾಟಕದ ಹಿರಿಯರ ಮನೆ ಎಂದೇ ಕರೆಯಲಾಗುವ…
ಸಮ್ಮೇಳನ ಯಶಸ್ಸಿಗೆ ಪ್ರಮುಖ ಪಾತ್ರ ವಹಿಸಿದ ಸಚಿವ ಸಿಆರ್‌ಎಸ್ ಜಿಲ್ಲೆಯ ಶಾಸಕರು, ಜನಪ್ರತಿನಿಧಿಗಳು, ಜಿಲ್ಲಾಡಳಿತ, ಪೊಲೀಸ್ ಇಲಾಖೆ ಸಾಥ್ ಬಿ.ಟಿ.ಮೋಹನ್‌ಕುಮಾರ್…