ವಾಣಿಶ್ರೀಯ ಹೇಳಿಕೆ ತೆಗೆದುಕೊಳ್ಳಲು ವಾರ್ಡಿನತ್ತ ಹೋದಾಗ ಆಕೆಯ ಅಣ್ಣನೂ ಜೊತೆಯಲ್ಲಿ ಬಂದ.
‘ಇವರು ಬೇಕಾ ಸರ್?’ ಎಂದು ಕೇಳಿದೆ.
‘ಇರಲಿ ಬಿಡಿ. ವಾಣಿಶ್ರೀಯವರ ಹೇಳಿಕೆಗೆ ಇವರೂ ಸಹಿ ಹಾಕಲಿ. ಆಗ ಕೇಸು ಗಟ್ಟಿಯಾಗುತ್ತೆ’ ಎಂದರು ಇನ್‌ಸ್ಪೆಕ್ಟರು.
ಮೆಮೋ ಪಡೆದುಕೊಂಡ ಡ್ಯೂಟಿ ಡಾಕ್ಟರು, ‘ಕಂಡಿಷನ್ನು ವೆರಿ ಕ್ರಿಟಿಕಲ್. ಅದಕ್ಕೇ inform ಮಾಡಿದೆ’ ಎಂದರು.
‘ಸರಿ ಸರ್. ಅವರ ಹೇಳಿಕೆ ಏನಿದೆಯೋ ಅದನ್ನು ರೆಕಾರ್ಡ್ ಮಾಡ್ತೀನಿ. ತಾವೂ ಎದುರಿಗಿರಬೇಕು. ಅವಳೀಗ sedetion ಮೇಲಿಲ್ಲ ಅಲ್ಲವೇ?’
ರುಗ್ಣಾವಸ್ತೆಯಲ್ಲಿದ್ದರೂ ವಾಣಿಶ್ರೀಗೆ ಪ್ರಜ್ಞೆ ಇತ್ತು. ‘ನೋಡಮ್ಮಾ ಆವತ್ತು ನಿಜವಾಗಿ ಏನೇನು ನಡೀತು ಅದಷ್ಟನ್ನು ಸತ್ಯವಾಗಿ ಹೇಳಿ. ಸತ್ಯ ಧರ್ಮ ತಿಳ್ಕೊಂಡು ಹೇಳಿ. ನೋಡಿ ಡಾಕ್ಟರು, ನಿಮ್ಮಣ್ಣ ಎಲ್ರೂ ಇದ್ದೇವೆ’
ಇನ್‌ಸ್ಪೆಕ್ಟರ್ ದನಿಯಲ್ಲಿ ಒಂದು ಬಗೆಯ ಸಾಂತ್ವನ, ಭರವಸೆ ತುಂಬಿತ್ತು.
‘ಯಾರ ಮೇಲೋ ಯಾಕೇಳಲಿ ಸಾರ್. ಯಾರೂ ಇಲ್ಲ. ವೆಂಕಟ್ರಮಣಸ್ವಾಮೀ ಎಲ್ಲ ನಿಂಗೇ ಗೊತ್ತು’ ಎಂದರು ಆಕೆ ನಿಡುಸುಯ್ಯುತ್ತಾ.
‘ನಿನ್ ಗಂಡ ಆ ಬೋ*ಮಗ ಎಲ್ಲಿದ್ದ? ನಿಮ್ಮತ್ತೆ, ಗಂಡ ಏನೇನ್ಮಾಡುದ್ರು ಅದನ್ನು ಮೊದ್ಲು ಹೇಳು’ ಅವಳಣ್ಣ ಬಾಯಿ ತೆಗೆದ. ‘ಎತ್ತಿ ಎದೆಗೊದ್ದರೆ ನನ್ಮಗನೇ ತಿಂದಿದ್ನೆಲ್ಲ ಕಕ್ಕಂಬೇಕು. ಟಿಬಿ ಮುಚ್ಕಂಡು ನಿಂತ್ಕಳಯ್ಯಾ. ಈ ಯಮ್ಮ ಏನು ಹೇಳ್ತಾರೋ ಅದನ್ನು ಕೇಳಿಸಿಕೋ. ನಿನ್ನ ಪುರಾಣ ಊದಬೇಡ’ ಗೌಡರು ಅಬ್ಬರಿಸಿದರು. ‘ಹ್ಞೂಂ ಹೇಳಿ ತಾಯೀ! ಆವತ್ತು ಏನೇನಾಯ್ತು ತಪ್ಪದೆ ನಿಧಾನವಾಗಿ ಹೇಳಿ’ ಎಂದರು ನಯವಾಗಿ. ‘ವಾರದಿಂದ ಮನೇಲಿ ಏನೇನೋ ಗಲಾಟೆ ಆಯ್ತಾನೇ ಇತ್ತು. ಆವತ್ತೂ ಕೂಡ ಜಗಳ ಆಗಿತ್ತು. ನಮ್ಮತ್ತೆ ಹಾಲ್‌ನಲ್ಲಿ ಟಿವಿ ನೋಡ್ತಾ ಕೂತಿದ್ದರು. ಮಕ್ಕಳು ಸ್ಕೂಲಿಗೆ ಹೋಗಿದ್ದರು. ಯಾಕೋ ಈ ಜೀವನ ಸಾಕು ಅನ್ನಿಸಿಬಿಡ್ತು. ಅಡುಗೆ ಮನೆಗೆ ಪೆಟ್ರೋಲ್ ಕ್ಯಾನ್ ತಗೊಂಡೋಗಿ ಮೈಮೇಲೆ ಸುರ್ಕೊಂಡು ಬೆಂಕಿ ಹಾಕ್ಕಂಡೆ’
ನಿಧಾನವಾಗಿ, ಅಸ್ಪಷ್ಟವಾಗಿ ಗೊಗ್ಗರ ದನಿಯಲ್ಲಿ ಆಕೆ ನೆನೆಸಿಕೊಳ್ಳುತ್ತಿದ್ದಳು. ಒಂದು ಮಾತಿಗೂ ಕಂಟಿನ್ಯುಟಿ ಇರಲಿಲ್ಲ. ಅಸ್ಪಷ್ಟ ಅಸಂಬದ್ಧತೆ (incoherance) ಇತ್ತು. ಆದರೆ ನಡೆದಿದ್ದ ಚಿತ್ರಣ ಭಾಸವಾಗುತ್ತಿತ್ತು.
‘ಪೆಟ್ರೋಲ್ ಎಲ್ಲಿತ್ತು? ಬಂಕಿಗೆ ಹೋಗಿ ನೀವೇ ತಂದಿದ್ರಾ?’
‘ಇಲ್ಲ. ನಮ್ಮೆಜಮಾನ್ರ ಬೈಕಿನಿಂದ ಎರಡು ದಿನ ಮೊದಲೇ ಪೆಟ್ರೋಲ್ ಇಳಿಸಿಕೊಂಡಿದ್ದೆ. ಪ್ಲಾಸ್ಟಿಕ್ ಕ್ಯಾನಲ್ಲಿ ಮುಚ್ಚಳ ಹಾಕಿಟ್ಟಿದ್ದೆ. ಮೊದಲು ಧೈರ್ಯವಾಗದೆ ಸುಮ್ಮನಾಗಿದ್ದೆ. ಆವತ್ತು ಕ್ಯಾನು ತಗೊಂಡು ಬಂದು ಮೈಮೇಲೆ ಸುರಕೊಂಡೆ’
‘ಎಷ್ಟು ದೊಡ್ಡ ಕ್ಯಾನು ಅದು?’
‘ಚಿಕ್ಕದು ಎರಡು ಲೀಟರಿನದ್ದು. ಒಂದು ಮುಕ್ಕಾಲು ಕ್ಯಾನು ಮೊದ್ಲೇ ತುಂಬಿಸಿಟ್ಟಿದ್ದೆ’
‘ಬೆಂಕಿ ಹಚ್ಚಿಕೊಳ್ಳುವ ಮೊದಲು ನಿಮ್ಮತ್ತೆ ಏನಂತ ಬೈದಿದ್ರು?’
‘ಅವತ್ತೇನೂ ಬೈಲಿಲ್ಲ. ಅವರ ಪಾಡಿಗೆ ಅವರು ಹಾಲಲ್ಲಿದ್ರು. ಆವತ್ತು ಮಾತೇ ಆಗ್ಲಿಲ್ಲ. ನಂಗೇ ಮನ್ಸಿಗೆ ಬೇಜಾರಾಗಿತ್ತು. ಹಾಕ್ಕಂಡೆ. ಯಾರೂ ಹೇಳ್ಲಿಲ್ಲ. ಆ ಸ್ವಾಮೀನೆ ಹೇಳಿದ’
‘ಸ್ವಾಮೀ ಅಂದ್ರೆ ಯಾರು?’
‘ನಂ ಮಂದೇವರು ವೆಂಕಟ್ರಮಣಸಾಮಿ’ ಎಂದಳಾಕೆ.
‘ಹೋಗಲಿ ಈ ಗಾಯ ಆಗೋದಿಕ್ಕೆ ಕಾರಣ ಯಾರು ಅದನ್ನ ಸರಿಯಾಗಿ ಹೇಳಮ್ಮಾ’
‘ನಾನೇ ಬದುಕೋಲ್ಲ. ಇನ್ನು ಯಾರ ಮೇಲೋ ಏಕೆ ಸುಳ್ಳು ಹೇಳಲಿ. ಆ ಸ್ವಾಮಿನೇ ಹೇಳಿ ಮಾಡಿಸಿದ’
ಇಷ್ಟು ಹೇಳಿಕೆ ಪಡೆಯಲು ಎರಡೂವರೆ ಗಂಟೆ ಹಿಡಿದಿತ್ತು. ಯಾವುದೇ ಬಗೆಯ suggestive ಆದ ಸೂಚನಾತ್ಮಕ ಮಾತನ್ನೂ ಇನ್‌ಸ್ಪೆಕ್ಟರ್ ಆಡಲಿಲ್ಲ. ನಾನಾ ಪ್ರಶ್ನೆಗಳು ನಾಲಿಗೆ ತುದಿಯಲ್ಲಿದ್ದರೂ ಕಂಟ್ರೋಲ್ ಮಾಡಿಕೊಂಡು, ವಾಣಿಶ್ರೀ ತಾನಾಗಿ ಹೇಳುವಂತೆ ಪ್ರಶ್ನೆ ಕೇಳುತ್ತಿದ್ದರು. ಅದರಲ್ಲಿ ಒಂದೇ ಒಂದೂ leading ಪ್ರಶ್ನೆಗಳಿರಲಿಲ್ಲ (ತಮಗೆ ಬೇಕಾದ ಉತ್ತರವನ್ನು ಹೊರ ಸೆಳೆಯಲು ತಾನೇ ಮುಂದಾಗಿ ಕೆದಕಿ ಕೇಳುವ ಪ್ರಶ್ನೆ). ನನ್ನಲ್ಲಿದ್ದ ಡಿಕ್ಟಾಫೋನಿನಿಂದ (ಆ ಕಾಲದ sanyo ವಾಯ್ಸ್ ರೆಕಾರ್ಡರ್) ಅಲ್ಲಿಯ ಸಂಪೂರ್ಣ ವಿದ್ಯಮಾನವನ್ನು ರೆಕಾರ್ಡ್ ಮಾಡಿಕೊಳ್ಳುತ್ತಿದ್ದೆ. ಗಾಯಾಳುವಿನ ಹೇಳಿಕೆಯನ್ನು ಠಾಣಾ ರೈಟರ್ ಬಾಷಾ ಬರೆದುಕೊಳ್ಳುತ್ತಿದ್ದರು.
ಆಕೆಯ ಬಲಗೈ ಹೆಬ್ಬೆರಳು ಸುಟ್ಟಿರಲಿಲ್ಲ. ಹೇಳಿಕೆಗೆ ಹೆಬ್ಬೆರಳನ್ನು ಒತ್ತಿಸಿದೆವು. ವೈದ್ಯರು, ನರ್ಸ್, ಅವಳಣ್ಣ ಎಲ್ಲರೂ ಸಾಕ್ಷಿ ಸಹಿ ಹಾಕಿದರು. ದಿನಾಂಕ ಸಮಯದೊಂದಿಗೆ ಎಲ್ಲರ ಸಹಿ ಬಿದ್ದಿತು.
‘ಇಷ್ಟೆಲ್ಲಾ ಬೇಕಿತ್ತೇ ಸರ್?’ ಕೇಳಿದೆ.
‘ತಣ್ಣೀರನ್ನು ಆರಿಸಿಕೊಂಡು ಕುಡಿಯೋ ಕಾಲ ಇದಪ್ಪಾ.
ಈಗಾಗಲೇ ಗಂಡನ ಮನೆಯವರ ಮೇಲೆ ಅನುಮಾನ ಪಟ್ಕೊಂಡು ಕೂಗಾಡ್ತಾ ಇದ್ದಾರೆ. ಸತ್ತರೆ ಪೊಲೀಸರನ್ನೇ ಅವರು ದೂರೋದು. ಸಂಭಾಷಣೆ ರೆಕಾರ್ಡ್ ಆಗಿದೆ. ವಿಡಿಯೋನೂ ಇದೆ. ಯಾವನಾದ್ರೂ ರಾಗ ಎಳುದ್ರೆ ತೋರಿಸೋದಿಕ್ಕೆ ಇರಲಿ ಅಂತ. ಪೊಲೀಸ್ ಕೆಲಸಾ ಅಂದ್ರೆ ಬೇಲಿ ಹಾಕ್ಕೊಂಡು ಬೆಳೆ ಬೆಳಿಯೋ ಕೆಲಸ’
‘ಹಾಗಂತ ಪ್ರತಿಯೊಂದ್ರಲ್ಲೂ ದೂಷಣೆ ನಿರೀಕ್ಷಿಸುತ್ತಾ ಹೆದರಿಕೊಂಡು ಕೆಲ್ಸಾ ಮಾಡೋ ಅಗತ್ಯ ಇದ್ಯಾ ಸಾರ್. ಪುಕ್ಕಲು ಅನ್ನೊದಿಲ್ವಾ?’
‘ಪೊಲೀಸ್ನೋರು ಎಷ್ಟೇ ಒಳ್ಳೆಯ ಕೆಲ್ಸಾ ಮಾಡಲಿ. ಅನುಮಾನದಿಂದ್ಲೇ ನೋಡ್ತಾರೆ. ಜನರ ದೃಷ್ಟಿಯೇ ಹಾಗಿದೆ. ನಗುವವರ ಮುಂದೆ ನಾಚಿಕೆಗೇಡಾಗಬಾರದು ಅಂದ್ರೆ, ನಾವು ಏನೋ ಕೆಡುಕಾಗುತ್ತೆ ಅಂತ ತಿಳ್ಕಂಡೇ ಕೆಲಸ ಮಾಡ್ಬೇಕಾಗುತ್ತೆ.’ ‘ಇವಳು ಹೀಗೆ ಹೇಳಿಕೆ ಕೊಡಬಹುದು ಅಂತಾನೆ ಗೊತ್ತಿರಲಿಲ್ಲ. ಅಲಿಗೇಷನ್ ಬಂದಾಗಲೇ ನಾವು ಅತ್ತೆ, ಗಂಡನನ್ನು ಮೊದಲು ಅರೆಸ್ಟ್ ಮಾಡಬೇಕಿತ್ತು ಅಲ್ವಾ ಸಾರ್. ಅನಗತ್ಯವಾಗಿ ಪೊಲೀಸರ ಮೇಲೆ ಆಪಾ ದನೆ ಮಾಡೋದು ತಪ್ಪುತ್ತಿತ್ತು’
‘ಜನ ಬಾಯಿಗೆ ಬಂದದ್ದು ಮಾತಾಡ್ತಾರೆ ಅಂತ ಡುಬುಕ್ ಅಂತ ಅರೆಸ್ಟ್ ಮಾಡೋದಿಕ್ಕಾಗುತ್ತಾ? ಅವಳು ಅಡ್ಮಿಟ್ ಆದ ಮೊದಲ ದಿನವೇ ತಾನೇ ಪೆಟ್ರೋಲ್ ಹಾಕ್ಕಂಡಿದ್ದೆ ಅಂತ ಸಬ್ ಇನ್‌ಸ್ಪೆಕ್ಟರ್ ಹತ್ರ ಹೇಳಿಕೆ ಕೊಟ್ಟಿದ್ದಳು. ಆದರೆ ಆವತ್ತು ಔಷಧಿ ಮಂಪರಿನಲ್ಲಿ ಕೊಟ್ಟಿದ್ದರಿಂದ ಕೋರ್ಟಿನಲ್ಲಿ ನಿಲ್ತಿರಲಿಲ್ಲ. ಅದಕ್ಕೇ ಇಲ್ಲೀತನಕ ಕಾದಿದ್ದಾಯ್ತು’ ಹೇಳಿಕೆ ಪಡೆದ ಎರಡೇ ದಿನಕ್ಕೆ ವಾಣಿಶ್ರೀ ತೀರಿಕೊಂಡಳು. ಆಕೆ ಸಾವಿಗೆ ಅನ್ಯರ ಕೈವಾಡವಿದ್ದ ಬಗ್ಗೆ ಯಾವುದೇ ಸಾಕ್ಷ್ಯವಾಗಲೀ ಸಾಕ್ಷಿಯಾಗಲೀ ಇರಲಿಲ್ಲ. ಹೇಳಿಕೆ ನೀಡುವ ಸಮಯದಲ್ಲಿ ಆಕೆ ಮಾನಸಿಕವಾಗಿ ಸ್ಥಿಮಿತದಲ್ಲಿದ್ದಳು. ಅದನ್ನು ವೈದ್ಯರೂ ದೃಢೀಕರಿಸಿದ್ದರು. ಹೀಗಾಗಿ ಆಕೆ ನೀಡಿದ ಆ ಕೊನೆಯ ಹೇಳಿಕೆಯೇ ಮರಣ ಕಾಲದ ಹೇಳಿಕೆ ಎಂದು ಪರಿಗಣಿತವಾಯಿತು. ಅಲ್ಲದೆ ಸುಟ್ಟು ಆಸ್ಪತ್ರೆಗೆ ಸೇರಿದ ದಿನವೇ, ತಾನಾಗೆ ಬೆಂಕಿ ಹಚ್ಕೊಂಡೆ ಎಂದು ಬಂಧುಗಳೆದುರು ಹೇಳಿದ್ದಳು. ಆದರೆ ದಿನಗಳೆದಂತೆ ಆರೋಪ ಗಂಡ, ಅತ್ತೆಯ ಮೇಲೆ ತಿರುಗಿತ್ತು.
ಗಂಡ, ಅತ್ತೆ ಮೇಲಿನ ವೃಥಾರೋಪ ಮಂಜಿನಂತೆ ಕರಗಿತು.
(ಮುಗಿಯಿತು)
ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…
ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…
ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪದ ಮೇಲೆ ಬಂಧಿತಾರಾಗಿರುವ ಬಿಜೆಪಿ ಎಂಎಲ್‌ಸಿ ಸಿ.ಟಿ…
ಮೈಸೂರು: ನಗರದ ಅಲ್ ಅನ್ಸಾರ್ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…
' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…
ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…