ಎಡಿಟೋರಿಯಲ್

ಹುತಾತ್ಮರಾದ ಹರಿಕೃಷ್ಣ, ಷಕೀಲ್ ಮತ್ತವರ ತಂಡ

ಜೆ.ಬಿ.ರಂಗಸ್ವಾಮಿ

ಅಪಾಯದ ಮುನ್ಸೂಚನೆ ಅರಿತ ಹರಿಕೃಷ್ಣ ತಮ್ಮ ಕಾಲಿನ ಬಳಿ ಲೋಡ್ ಮಾಡಿಟ್ಟುಕೊಂಡಿದ್ದ ಎಕೆ – ೪೭ ರೈಫಲ್ ಕೈಗೆತ್ತಿಕೊಂಡರು. ಎಲ್ಲಿಂದಲೋ ರೊಂಯ್ಯನೆ ಬಂದ ಗುಂಡು ದಿಢೀರ್ ಕಾರಿಗೆ ಬಡಿಯಿತು. ಕಾರೊಳಗಿಂದಲೇ ಹರಿಕೃಷ್ಣ ಗುಂಡು ಹಾರಿಸಿದರು. ಅಷ್ಟರಲ್ಲಾಗಲೇ ಕಾರಿನ ಮೇಲೆ ಒಂದೇ ಸಮನೆ ಗುಂಡಿನ ಸುರಿಮಳೆಯಾಗುತ್ತಿತ್ತು.

ಒಳಗಿದ್ದರೆ ಅಪಾಯವೆಂದರಿತ ಹರಿಕೃಷ್ಣ ಹೊರಬಂದು ಗುಂಡು ಹಾರಿಸತೊಡಗಿದರು. ಗುಂಡೊಂದು ಅವರ ಬಲಗಣ್ಣಿನೊಳಕ್ಕೆ ನೇರ ನುಗ್ಗಿದ್ದಷ್ಟೇ. ತಲೆಯನ್ನು ಭೇದಿಸಿ  ಹೊರಹೋಯಿತು. ಹಿಂಭಾಗದಲ್ಲಿ ಕುಳಿತಿದ್ದ ಷಕೀಲರ ತಲೆಗೂ ಗುಂಡೇಟು ಬಿದ್ದು ಆ ಏಟಿಗೆ ಅವರಲ್ಲೇ ಅಸು ನೀಗಿದ್ದರು. ಕಾರಲ್ಲಿದ್ದ ಎಲ್ಲರೂ ಗುಂಡಿನ ಸುರಿಮಳೆಗೆ ಸಿಲುಕಿದರು. ಕಾರೊಳಗೆ ರಕ್ತದ ಕೋಡಿ ಹರಿಯತೊಡಗಿತು.

ಹಿಂದೆ ಕುಳಿತಿದ್ದ ಪೇದೆ  ಶಫೀಯುಲ್ಲಾಗೆ ಗುಂಡೇಟು ಬಿದ್ದಿದ್ದರೂ ಎದೆಗುಂದದೆ  ಹೊರಬಂದು ಕಾರಿನ  ಕೆಳಗೆ ಆಸರೆ ಪಡೆದು ವೀರಪ್ಪನ್ ಗ್ಯಾಂಗಿನತ್ತ ಗುಂಡು ಹಾರಿಸಿ ಶೌರ್ಯ ಮೆರೆದರು.

ಅಲ್ಲಿಗೆ ಹೊಡಿ, ಇಲ್ಲಿಗೆ ಬಾರಿಸು. ಒಬ್ಬರನ್ನೂ ಬಿಡ ಬೇಡಿ ಎಂದು ವೀರಪ್ಪನ್ ತಂಡದವರು ರಸ್ತೆ ಮೇಲ್ಭಾಗದ ಇಳಿಜಾರಿನಲ್ಲಿ  ಕಿರುಚಾಡುತ್ತಿದ್ದರು. ಗುಳಿಗಳಲ್ಲಿ ಅವಿತಿದ್ದರಿಂದ ಒಬ್ಬರೂ ಕಾಣುತ್ತಿರಲಿಲ್ಲ. ಹರಿಕೃಷ್ಣರ ಕಾರನ್ನು ಹಿಂಬಾಲಿಸಿಕೊಂಡು ಬರುತ್ತಿದ್ದ ಲಾರಿ ಸ್ವಲ್ಪ ಹೊತ್ತಿಗೆ ಅಲ್ಲಿಗೆ ಬಂತು. ಇದು ಗಣಿಕಲ್ಲಿನ ಕೂಲಿಗಳನ್ನು ಸಾಗಿಸುತ್ತಿರುವ ಲಾರಿ ಎಂದು ತಿಳಿದು, ಅಡ್ಡಗಲ್ಲುಗಳ ಪಕ್ಕದಿಂದ ಲಾರಿ ತಗೊಂಡು ಹೋಗು  ಎಂದು ವೀರಪ್ಪನ್ ಗ್ಯಾಂಗಿನವರು ತಮಿಳಿನಲ್ಲಿ ಅರಚಿದರು.

ಆದರೆ ಕೂಲಿ ವೇಷದ ಪೊಲೀಸರು ರೈಫಲ್‌ನೊಂದಿಗೆ ಒಬ್ಬೊಬ್ಬರಾಗಿ ಜಿಗಿಯುತ್ತಿದ್ದಂತೆ, ಅವರೆಲ್ಲಾ ಪೊಲೀಸರು ಎಂಬುದು ವೇದ್ಯವಾಯಿತು. ತಕ್ಷಣವೇ ಲಾರಿಯ ಮೇಲೆ ಬಡ ಬಡಾ ಗುಂಡಿನ ಸುರಿಮಳೆಯಾಯಿತು. ಮೂವರು ಪೊಲೀಸರು ಸ್ಥಳದಲ್ಲೇ ಅಸು ನೀಗಿದರು. ನೇತೃತ್ವ ವಹಿಸಿದ್ದ ಡಿವೈಎಸ್ಪಿ ಮೀಸೆ ಮಂದಪ್ಪನವರ ಬೆನ್ನಿಗೂ ಗುಂಡು ಬಿದ್ದವು. ಲಾರಿ ಹಿಂಬದಿಯಲ್ಲಿದ್ದ ಕೂಲಿ ವೇಷದ ಪೊಲೀಸರು ಪ್ರತಿದಾಳಿ ನಡೆಸಿದರು. ಸುಮಾರು ಇಪ್ಪತ್ತು ನಿಮಿಷ ದಾಳಿ   ಪ್ರತಿದಾಳಿ ನಡೆಯಿತು. ಗುಡ್ಡದ ಮೇಲ್ಭಾಗದಲ್ಲಿದ್ದ ವೀರಪ್ಪನ್ ಗ್ಯಾಂಗ್ ತೋಡಿದ್ದ ಗುಳಿಗಳಲ್ಲಿ ಅವಿತುಕೊಂಡು ಗುಂಡು ಹಾರಿಸುತ್ತಿದ್ದುದರಿಂದ ಅವರು ಸುರಕ್ಷಿತರಾಗಿದ್ದರು. ದಟ್ಟ ದೂಳಿನ ಕಪ್ಪು ಹೊಗೆ ಕವಿದಿತ್ತು. ಕೆಳಗಿನ ರಸ್ತೆಯಲ್ಲಿದ್ದ ಪೊಲೀಸರಿಗೆ ಅವಿತಿದ್ದ ಗ್ಯಾಂಗಿನವರು ಕಾಣಿಸುತ್ತಿರಲಿಲ್ಲ. ಆದರೂ ಗುಂಡು ಬರುತ್ತಿದ್ದ ದಿಕ್ಕಿಗೆ ಎರ್ರಾಬಿರ್ರಿ ಗುಂಡಿನ ಸುರಿಮಳೆಗೈದಿದ್ದರಿಂದ ೬೦- ೭೦ ಜನರಿದ್ದ ವೀರಪ್ಪನ್ ತಂಡ ಎತ್ತಲೋ ಪಲಾಯನ ಮಾಡಿತು. ಆದರೆ ಕೆಳಗಿನಿಂದ ಇಳಿಜಾರಿಂದ ಮೇಲಕ್ಕೆ ಹತ್ತಿ ಹೋಗಿ ಅವರನ್ನು ಬೆನ್ನಟ್ಟುವ ಸ್ಥಿತಿಯಲ್ಲಿ ಪೊಲೀಸರು ಇರಲಿಲ್ಲ.

ಅನಾಹುತವೇನೋ ದಾರುಣವಾಗಿ ಆಗಿ ಹೋಗಿತ್ತು. ಮುಂದಿನ ಕೆಲಸವೇ ಮುಖ್ಯ. ಧೈರ್ಯದಿಂದ ಮುನ್ನುಗ್ಗದಿದ್ದರೆ ಬದುಕಿದ್ದವರೆಲ್ಲಾ ಹತರಾಗುವ ಸನ್ನಿವೇಶವಿತ್ತು. ಸ್ವತಃ ತಾವೇ ಗಾಯಗೊಂಡಿದ್ದರೂ, ಡಿವೈಎಸ್ಪಿ ಮಂದಪ್ಪನವರು ವಿಮುಖರಾಗದೆ ಮುಂದಿನ ಪರಿಹಾರ ಕಾರ್ಯ ಮುನ್ನಡೆಸಿದರು. ದಾರಿಯಲ್ಲಿ ಬಂದ ಬಸ್ಸನ್ನು ಅಡ್ಡಗಟ್ಟಿ ನಿಲ್ಲಿಸಿ ಹರಿಕೃಷ್ಣ , ಷಕೀಲ್, ಪೇದೆ ಶಫಿಯುಲ್ಲಾ ಹೀಗೆ ಒಟ್ಟು ಎಂಟು ಜನರನ್ನು ಕೊಳ್ಳೇಗಾಲದ ಆಸ್ಪತ್ರೆಗೆ ತಕ್ಷಣವೇ ಸಾಗಿಸಿದರು. ತಲುಪುವ ವೇಳೆಗೆ ಅರೆಜೀವವಾಗಿದ್ದ ಏಳೂ ಜನರೂ ಹುತಾತ್ಮರಾಗಿದ್ದರು. ಶಫೀಯುಲ್ಲಾ ಮಾತ್ರ ಬದುಕುಳಿದರು.

ಈ ನಡುವೆ ದಾರುಣ ಘಟನೆಯೊಂದು ನಡೆಯಿತು. ವೈರ್‌ಲೆಸ್ ಎಎಸ್‌ಐ ಪೆನುಗೊಂಡ ಎಂಬುವವರಿಗೆ ಗುಂಡೇಟು ಬಿದ್ದಿದ್ದು ಮರು ದಾಳಿ ತಪ್ಪಿಸಿಕೊಳ್ಳಲು ಲಾರಿ ಟಾರ್ಪಾಲಿನೊಳಗೆ ತೂರಿಕೊಂಡಿದ್ದರು. ಲಾರಿ ಹೋದ ಸುಮಾರು ಹೊತ್ತಿನ ಬಳಿಕ, ಹೊಂಚು ಹಾಕಿ ಕುಳಿತಿದ್ದ  ವೀರಪ್ಪನ್ ತಂಡ ಪುನಃ ಹತ್ಯೆ ಜಾಗಕ್ಕೆ ಬಂದಿತು. ಬಂದೂಕು ಮದ್ದುಗುಂಡುಗಳಿಗಾಗಿ ಹುಡುಕತೊಡಗಿತು. ಅರೆಜೀವವಾಗಿ ಟಾರ್ಪಾಲಿನೊಳಗೆ ಬಿದ್ದಿದ್ದ ಪೆನುಗೊಂಡ ಕಾಣಿಸಿದರು. ಆಗ ತಂಡದವನೊಬ್ಬ ನಿಸ್ಸಹಾಯಕರಾಗಿದ್ದ    ಪೆನುಗೊಂಡರ ಎದೆಗೆ ನೇರ ಬಂದೂಕಿಟ್ಟು ಟಜ್ಞಿಠಿ ಚ್ಝಿಚ್ಞ ಆಗಿ ಉಡಾಯಿಸಿ ಕೊಂದ. ಅಲ್ಲಲ್ಲಿ ಬಿದ್ದಿದ್ದ ಪೊಲೀಸ್ ಶಸ್ತಾಸ್ತ್ರಗಳನ್ನು ಎತ್ತಿಕೊಂಡು ವೀರಪ್ಪನ್ ಗ್ಯಾಂಗ್ ಪರಾರಿಯಾಯಿತು.

* * * *

ಈ ಹಿಂದೆ ಷಕೀಲ್ ಮತ್ತು ಹರಿಕೃಷ್ಣ ಆನೆದಂತ ಹಾಗೂ ಬಂದೂಕು ವ್ಯಾಪಾರಿಗಳ ಸೋಗಿನಲ್ಲಿ ಹೋಗಿ ವೀರಪ್ಪನ್ ಬಲಗೈ ಭಂಟ  ಮದುವೆಯ ಗಂಡು ಗುರುನಾಥನ ಕತೆ ಮುಗಿಸಿದ್ದರು. ಇದಕ್ಕೆ ಪ್ರತೀಕಾರವೆಂಬಂತೆ ವೀರಪ್ಪನ್ ಅದೇ ತಂತ್ರ ಬಳಸಿ ಮೀಣ್ಯಂ ಜಾಗಕ್ಕೆ ಅವರನ್ನು  ಕರೆಸಿದ್ದ. ತಿರುವು ಮುರುವಿನ

ಅವರನ್ನು ಕರೆದುಕೊಂಡು ಬರುವಾಗ ಕೆಂಪು ಷರಟು ಹಾಕಿಕೊಂಡು ಬಾ ಎಂದು ಹೇಳಿ ಕಳಿಸಿದ್ದ ವೀರಪ್ಪನ್,  ಕಾರಿಂದ ನೀನು ಮೊದಲು ಇಳಿದು ಅಲ್ಲಿಂದ ಹಿಂದಕ್ಕೆ ಓಡು. ಅಕಸ್ಮಾತ್ ಮೋಸ ಇದ್ದರೆ ನಿನಗೇನೂ ಏಟಾಗುವುದು ಬೇಡ! ದೂರ ಇದ್ದುಬಿಡು ಎಂದು ಪರಮ ಹಿತೈಷಿಯಂತೆ ಹೇಳಿ ಕಳಿಸಿದ್ದ.  ಕಮ್ಲಾನಾಯ್ಕನಿಗೆ ಇಪ್ಪತ್ತು ಲಕ್ಷ ರೂ. ಬಹುಮಾನವೂ ಮುಖ್ಯ. ತನ್ನ ಸ್ವಂತಜೀವವೂ ಅತಿ ಮುಖ್ಯ!

ಅದರಂತೆ  ಕಾರನ್ನು ನಿಲ್ಲಿಸಿದಾಗ ಮೊದಲು ಕಾರಿಂದ ಇಳಿದು ಹಿಂದಕ್ಕೆ ಓಡಿದ್ದ ಕಮ್ಲಾನಾಯ್ಕ. ಅವನ ಮೋಸದಿಂದಾಗಿಯೇ ತಮ್ಮವರು ಸತ್ತರು ಎಂಬ ಕ್ರೋಧದಿಂದ ಅವನನ್ನು ಪೊಲೀಸರು ಅಲ್ಲೇ ಮುಗಿಸಿದರು.

ಕಮ್ಲಾನಾಯ್ಕನನ್ನೂ ತನ್ನ ಕಡೆಯ de coy ದಾಳವಾಗಿ ಬಳಸಿಕೊಂಡಿದ್ದ ವೀರಪ್ಪನ್ನನ ನೈಪುಣ್ಯತೆಗೆ ಸಾಟಿಯೇ ಇರಲಿಲ್ಲ. ಅವಿದ್ಯಾವಂತನಾಗಿದ್ದರೇನು? ಯುದ್ಧತಂತ್ರದ ತರಬೇತಿಯೇ ಇಲ್ಲದಿದ್ದರೇನು?  ಕಾಡಲ್ಲೇ ಕುಳಿತು ನಾಡನ್ನು ಗ್ರಹಿಸಬಲ್ಲ ಚಾಣಾಕ್ಷನಾಗಿದ್ದ. ಡಿಸಿಎಫ್ ಶ್ರೀನಿವಾಸ್, ನಾಲ್ಕಾರು ಯುವ ಪೊಲೀಸ್ ಅಧಿಕಾರಿಗಳು, ರಾಮಾಪುರ ಪೊಲೀಸ್ ಠಾಣೆ ದಾಳಿ, ತಮಿಳು ನಾಡಿನ ಪೊಲೀಸರು ಮತ್ತು ಅರಣ್ಯಾಧಿಕಾರಿಗಳು, ಈಗ ಷಕೀಲ್, ಹರಿಕೃಷ್ಣ ಸೇರಿದಂತೆ ಹತ್ತಾರು ಪೊಲೀಸರನ್ನು ಕೊಂದು ಅಜೇಯನಾಗಿದ್ದ. ಗುರುನಾಥನನ್ನು ಕೊಂದದ್ದಕ್ಕೆ ಪ್ರತೀಕಾರವೆಂಬಂತೆ ಆರು ತಿಂಗಳ ಒಳಗೆ ಅದೇ ರಸ್ತೆಯಲ್ಲಿ ತಂತ್ರ ಮಾಡಿ ಹರಿಕೃಷ್ಣ ತಂಡವನ್ನು ಪುಡಿಗುಟ್ಟಿಸಿದ್ದ. ತನ್ನನ್ನು ಹುಡಿಗುಟ್ಟಿಸಲು ದಂಡುಗಟ್ಟಿ ಬರುವ ಪೊಲೀಸ್ ಪಡೆಗೇ ಛಡ ಸವಾಲು ಹಾಕುವ ಧಾರ್ಷ್ಟ್ಯ! ಎದುರು ಪಾಳೆಯದ ದಂಡನಾಯಕನನ್ನೇ ಉರುಳಿಸಿದರೆ ದಿಕ್ಕೆಡಿಸಬಹುದು ಎಂಬುದು ಮಹಾಭಾರತ ಕಾಲದಿಂದಲೂ ಬಂದ ಯುದ್ಧತಂತ್ರ. ಅದನ್ನು ಕರಗತ ಮಾಡಿಕೊಂಡಿದ್ದ ವೀರಪ್ಪನ್.

ಇದಾದ ನಂತರ ಮುಂದಿನ ಹನ್ನೆರಡು ವರ್ಷಗಳ ಕಾಲ ಅವನು ಆಡಿದ ಆಟಗಳಿಗೆ, ಹೂಡಿದ ಲಗ್ಗೆಗಳಿಗೆ ಲೆಕ್ಕವಿಲ್ಲ. ಒಟ್ಟು ಮೂವತ್ತಾರು ವರ್ಷಗಳ ಕಾಲ ನಿರಂತರ ನಡೆಸಿದ ತನ್ನ ಕ್ರಿಮಿನಲ್ ಕೃತ್ಯಗಳಲ್ಲಿ ಒಮ್ಮೆ ಕೂಡ ಬಂಧನಕ್ಕೊಳಗಾಗದಂತೆ   ಮೆರೆದು ಬಿಟ್ಟ. ಅವನು ನಿರ್ದಯವಾಗಿ ಕಗ್ಗೊಲೆಗೈದವರ ಸಂಖ್ಯೆ ೧೮೬ನ್ನು ಮೀರಿತ್ತು. ೨೦೦೦ ಗಂಡಾನೆಗಳ  ಹತ್ಯೆ. ೧೬ ಕೋಟಿ ರೂ. ಬೆಲೆ ಬಾಳುವ ಆನೆ ದಂತ ಮತ್ತು ೧೪೩ ಕೋಟಿ ರೂ. ಬೆಲೆ ಬಾಳುವ ಶ್ರೀಗಂಧದ ಕಳ್ಳಸಾಗಾಣಿಕೆ. ಈ ಅಟ್ಟಹಾಸಕ್ಕೆ, ಒಳಸಂಚಿಗೆ ಡಿಸಿಎಫ್ ಶ್ರೀನಿವಾಸ್, ಹರಿಕೃಷ್ಣ, ಷಕೀಲ್ ಮುಂತಾದ ಪ್ರಾಮಾಣಿಕ ನಿಷ್ಠಾವಂತ ಅಧಿಕಾರಿಗಳು ಜೀವತೆತ್ತರು. ಹತ್ಯೆಯಾದ ಅಧಿಕಾರಿಗಳ ಬಗ್ಗೆ, ಅವರ ಮುಂಗೋಪ, ದುಡುಕು, ಹುಂಬತನದ ಬಗ್ಗೆ ಈಗ ಲಘುವಾಗಿ ಮಾತನಾಡುವವರು ಇದ್ದಾರೆ. ಅವರೆಲ್ಲರೂ ತಮ್ಮ ಪ್ರಾಣವನ್ನೇ ಒತ್ತೆಯಾಗಿಟ್ಟು ಮಾಡಿದ ಕೆಲಸಗಳು ಅವು. ಅವರಿದ್ದ ಸಂದರ್ಭವೇ do or die situation/ ಮಾಡು ಇಲ್ಲವೇ ಮಡಿ ಸನ್ನಿವೇಶ. ಟೀಕಾಕಾರರ ಮಾತುಗಳು ಹೇಗಿವೆ ಎಂದರೆ ಆಕ್ಸಿಡೆಂಟ್ ಆಗಿ ಹೋದ ಮೇಲೆ ಹೇಳುವ  ಸ್ವಲ್ಪ ಲೆಫ್ಟಿಗೆ ತಿರುಗಿಸಬೇಕಿತ್ತು. ಜೋರಾಗಿ ಬಲಕ್ಕೆ ಹೋಗಬೇಕಿತ್ತು  ಬಗೆಯ ಪೊಳ್ಳು ಹರಟೆಗಳು. ಆಯಾ ಸಂದರ್ಭಕ್ಕೆ ತಕ್ಕ ನಿರ್ಣಯ ಕೈಗೊಂಡು ಧೈರ್ಯದಿಂದ ಕಾರ್ಯಾಚರಣೆ ಮಾಡಿದವರು ಈ ಎಲ್ಲ ಅಧಿಕಾರಿಗಳು. ಆವತ್ತಿನ ಸಂಘರ್ಷಕ್ಕೆ, ಸಂದರ್ಭಕ್ಕೆ ಅವರೇ ಜಡ್ಜ್‌ಗಳು. ಸರಿಯೋ ತಪ್ಪೋ? ಅದು ಆಯಾ ಘಳಿಗೆಯ ಗುರುತರ ನಿರ್ಣಯ.

ಹೋರಾಟ ಅಂದ ಮೇಲೆ ಯಾರಾದರೊಬ್ಬರು ಗೆಲ್ಲಲೇ ಬೇಕು. ಆದರೆ ಇವರ ಹೋರಾಟ ಸ್ವಂತಕ್ಕಲ್ಲ, ಸ್ವಾರ್ಥಕ್ಕಾಗಿಯಲ್ಲ. ಇವರ ಪ್ರಾಣಾರ್ಪಣೆ ಯಲ್ಲಿ ತ್ಯಾಗವಿದೆ, ಶೌರ್ಯವಿದೆ ಮತ್ತು ಕರ್ತವ್ಯದ ಪರಮ ನಿಷ್ಠೆ ಇದೆ. ಅದನ್ನು ಕೃತಜ್ಞತೆಯಿಂದ ನೆನೆಯಬೇಕಾದ್ದು ಕರ್ತವ್ಯ.
ಹುತಾತ್ಮರೆಲ್ಲರಿಗೆ ಹೃತ್ಪೂರ್ವಕ ನಮನಗಳು! (ಮುಗಿಯಿತು)

andolana

Recent Posts

‘ಸಾಹಿತ್ಯ ರಾಜಕಾರಣಿಗಳ ಎಚ್ಚರಿಸಬೇಕು’

ಮಂಡ್ಯ: ರಾಜಕಾರಣಿಗಳನ್ನು ಹೆದರಿಸ ಬಲ್ಲಂತಹ ಶಕ್ತಿ ಸಾಹಿತ್ಯಕ್ಕಿದೆ. ಹಾಗಾಗಿ ರಾಜ ಕಾರಣಿಗಳು ಹಾದಿ ತಪ್ಪದಂತೆ ಸಾಹಿತಿಗಳು ಎಚ್ಚರಿಸಬೇಕು ಎಂದು ಕಾನೂನು…

18 mins ago

ಮಂಡ್ಯದಲ್ಲಿ ದರೋಡೆ ಮಾಡಲು ಬಂದವನಿಂದ ವ್ಯಕ್ತಿಯ ಬರ್ಬರ ಹತ್ಯೆ

ಮಂಡ್ಯ: ಪಾರ್ಸೆಲ್‌ ಕೊಡುವ ನೆಪದಲ್ಲಿ ಬಂದು ವ್ಯಕ್ತಿಯೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಂಡ್ಯದ ಕ್ಯಾತನಹಳ್ಳಿ ಗ್ರಾಮದಲ್ಲಿ ನಡೆದಿದೆ. ರಮೇಶ್‌…

9 hours ago

ನಿವೃತ್ತ ಸಾರಿಗೆ ನೌಕರರಿಗೆ ಸಿಹಿಸುದ್ದಿ ನೀಡಿದ ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು: ನಿವೃತ್ತ ಸಾರಿಗೆ ನೌಕರರಿಗೆ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದ್ದು, ಗ್ರಾಚ್ಯುಟಿ ಹಣವನ್ನು ಬಿಡುಗಡೆ ಮಾಡಿದೆ. ಗ್ರಾಚ್ಯುಟಿ ಮತ್ತು ಗಳಿಕೆ…

10 hours ago

ಸಾಹಿತ್ಯ ಸಮ್ಮೇಳನ ವೇದಿಕೆಯಲ್ಲಿ ಸಿಎಂ ರಾಜಕೀಯ ಭಾಷಣ ಮಾಡಿದ್ದಾರೆ: ಬಿಜೆಪಿ ಕಿಡಿ

ಬೆಂಗಳೂರು: ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ವೇದಿಕೆಯನ್ನು ಸಿಎಂ ಸಿದ್ದರಾಮಯ್ಯ ದುರುಪಯೋಗಪಡಿಸಿಕೊಂಡಿದ್ದಾರೆ…

11 hours ago

ನನ್ನ ವಿರುದ್ಧದ ಆರೋಪಗಳು ಅವಮಾನಕರ: ನಟ ಅಲ್ಲು ಅರ್ಜುನ್‌ ಬೇಸರ

ಹೈದರಾಬಾದ್:‌ ಡಿಸೆಂಬರ್.‌4ರಂದು ಸಂಧ್ಯಾ ಥಿಯೇಟರ್‌ ಬಳಿ ನಡೆದ ಕಾಲ್ತುಳಿತದಲ್ಲಿ ಮಹಿಳೆಯೋರ್ವರು ಮೃತಪಟ್ಟಿದ್ದು ದುರದೃಷ್ಟಕರ ಎಂದು ನಟ ಅಲ್ಲು ಅರ್ಜುನ್‌ ಬೇಸರ…

11 hours ago

ನೆಲಮಂಗಲದಲ್ಲಿ ಭೀಕರ ಅಪಘಾತ: ಒಂದೇ ಕುಟುಂಬದ 6 ಮಂದಿ ದುರ್ಮರಣ

ಬೆಂಗಳೂರು: ಎರಡು ಕಾರು, ಎರಡು ಲಾರಿ ಹಾಗೂ ಶಾಲಾ ಬಸ್‌ ನಡುವಿನ ಸರಣಿ ಅಪಘಾತದಲ್ಲಿ ಒಂದೇ ಕುಟುಂಬದ ಆರು ಮಂದಿ…

11 hours ago