ಎಡಿಟೋರಿಯಲ್

ಮಳೆಹಾನಿ ನಿಭಾಯಿಸಲು ಸಜ್ಜಾದ ಜಿಲ್ಲಾಡಳಿತ ಭವನದ ಬುಡದಲ್ಲಿಯೇ ಸಮಸ್ಯೆ!

ಮಡಿಕೇರಿಯಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಭಾರೀ ತಡೆಗೋಡೆ, ಒಂದೆರಡು ವರ್ಷಗಳಲ್ಲೇ ಕುಸಿಯುವ ಭೀತಿ ಎದುರಾಗಿದೆ. ಅತ್ಯಾಧುನಿಕ ತಂತ್ರಜ್ಞಾನ, ಜರ್ಮನ್ ಟೆಕ್ನಾಲಜಿ ಎಲ್ಲವೂ ಪ್ರಕೃತಿ ಮುಂದೆ ಕೈಚೆಲ್ಲಿವೆ. ಎಲ್ಲರ ಊಹೆ, ಆತ್ಮವಿಶ್ವಾಸಗಳೂ ತಲೆಕೆಳಗಾಗುವಂತಾಗಿದೆ. ತಡೆಗೋಡೆಗೆ ಕಂಟಕ ಎಂಬ ಸುದ್ದಿ ಬರುತ್ತಿದ್ದಂತೆಯೇ, ಕಾಮಗಾರಿ ಅವೈಜ್ಞಾನಿಕ ಎಂಬ ಮನದಾಳದ ಜನಧ್ವನಿ ಹೊರಬರುತ್ತಿದೆ.

ಜಿಲ್ಲಾಡಳಿತ ಭವನಕ್ಕೆ ಸೂಕ್ತ ಜಾಗ ಇದಲ್ಲ ಎಂಬ ಸ್ಪಷ್ಟ ಅಭಿಪ್ರಾಯಗಳು ಹಿಂದೆ ವ್ಯಕ್ತವಾಗಿದ್ದವು. ಆದರೆ, ನಗರದೊಳಗೆ ಎಲ್ಲೂ ಸರ್ಕಾರಿ ಜಾಗ ಇಲ್ಲ ಎಂಬ ಕಾರಣದಿಂದ ಮತ್ತು ಐತಿಹಾಸಿಕ ಕೋಟೆಯೊಳಗಿಂದ ಸರ್ಕಾರಿ ಕಚೇರಿಗಳನ್ನು ಖಾಲಿ ಮಾಡಲೇಬೇಕೆಂಬ ಪ್ರಮೇಯ ಬಂದ ಹಿನ್ನೆಲೆಯಲ್ಲಿ, ಅದಾಗಲೇ ಕೊನೆಯುಸಿರು ಎಳೆಯುತ್ತಿದ್ದ ಸೆಂಟ್ರಲ್ ವರ್ಕ್‌ಶಾಪ್‌ಅನ್ನು ಶಾಶ್ವತವಾಗಿ ಮುಚ್ಚಿ, ಅಲ್ಲಿನ ೨.೨೫ ಎಕರೆ ಜಾಗದಲ್ಲಿ ಜಿಲ್ಲಾಡಳಿತ ಭವನ ನಿರ್ಮಿಸಲಾಯಿತು.

ಇದಕ್ಕೂ ಮುನ್ನ ಸುಮಾರು ೪೪ ವರ್ಷಗಳಿಗೆ ಜಾಗವನ್ನು ಸೆಂಟ್ರಲ್ ವರ್ಕ್ ಶಾಪ್‌ಗೆ ನೀಡಲಾಗಿತ್ತು. ನಗರದ ಹೊರವಲಯದ ಕರವಾಲೆ ಬಾಡಗದಲ್ಲಿ ಜಿಲ್ಲಾಡಳಿತ ಭವನ ನಿರ್ಮಿಸುವುದೆಂದು ನಿರ್ಧಾರವಾಗಿ, ಸರ್ಕಾರದಿಂದ ೩ ಕೋಟಿ ರೂ. ಮಂಜೂರಾಗಿದ್ದರೂ, ನಗರದೊಳಗೆ ಸುಲಭವಾಗಿ ಸಿಕ್ಕ ವರ್ಕ್‌ಶಾಪ್ ಜಾಗವನ್ನೇ ಫೈನಲ್ ಮಾಡಲಾಯಿತು. ಜಿಲ್ಲಾಡಳಿತ ಭವನ ದೂರದಿಂದ ನಯನ ಮನೋಹರವಾಗಿ ಕಂಡರೂ, ವಾಸ್ತವದಲ್ಲಿ ಭಯ ಹುಟ್ಟಿಸುತ್ತಿದೆ. ಕಾರಣ, ಈ ಭವ್ಯ ಕಟ್ಟಡ ಸಮುಚ್ಚಯ ನಿಂತಿರುವುದು ಭಯಾನಕ ದಿಬ್ಬದ ತುದಿಯಲ್ಲಿ.

ಹಲವು ಕೋಟಿ ರೂ.ಗಳನ್ನು ಖರ್ಚು ಮಾಡಿದ ಭವನದ ಭದ್ರತೆಗೆ, ಇನ್ನಷ್ಟು ಕೋಟಿ ಸುರಿದು ಹೆದ್ದಾರಿಗೂ ಭದ್ರತೆಯಿರಲೆಂದು ತಡೆಗೋಡೆ ನಿರ್ಮಿಸಲಾಯಿತು. ಜರ್ಮನ್ ಟೆಕ್ನಾಲಜಿ ಎಂಬ ಹಣೆಪಟ್ಟಿ ಹೊತ್ತು ಎದ್ದು ನಿಂತ ತಡೆಗೋಡೆ ಇಂದು ಜನರನ್ನೇ ಅಣಕಿಸಿ ನಗುತ್ತಿದೆ.

ಹೌದು. ಜಿಲ್ಲೆಯ ಮಳೆಹಾನಿಯನ್ನು ನಿಭಾಯಿಸಲು ಸಜ್ಜಾಗಿರುವ ಜಿಲ್ಲಾಡಳಿತ ಭವನದ ಬುಡದಲ್ಲಿಯೇ ಸಮಸ್ಯೆ ಎದುರಾಗಿದೆ.

೨೦೧೮ ರಲ್ಲಿ ಸಣ್ಣ ಪ್ರಮಾಣದಲ್ಲಿ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಕುಸಿತವಾಗಿತ್ತು. ಅದು ಮತ್ತಷ್ಟು ಕುಸಿಯದಂತೆ ಕೋಟ್ಯಂತರ ರೂಪಾಯಿ ವ್ಯಯಿಸಿ ತಡೆಗೋಡೆ ಮಾಡಲಾಗುತ್ತಿತ್ತು. ಆದರೆ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಇಲ್ಲಿ ತಡೆಗೋಡೆ ಕುಸಿದು ಬೀಳುವ ಸ್ಥಿತಿ ಎದುರಾಗಿದೆ. ತಡೆಗೋಡೆಗೆ ಅಳವಡಿಸಿದ್ದ ಸ್ಲ್ಯಾಬ್‌ಗಳು ಸಂಪೂರ್ಣ ಹೊರಕ್ಕೆ ಭಾಗಿದ್ದು ಯಾವುದೇ ಕ್ಷಣದಲ್ಲಾದರೂ ಹೆದ್ದಾರಿ ೨೭೫ಕ್ಕೆ ಅಡ್ಡಲಾಗಿ ತಡೆಗೋಡೆ ಕುಸಿದು ಬೀಳುವ ಸಾಧ್ಯತೆ ನಿಚ್ಚಳವಾಗಿದೆ.

ಕೋಟಿ ಕೋಟಿ ರೂ.ವ್ಯಯಿಸಿ ಮಾಡುತ್ತಿದ್ದ ತಡೆಗೋಡೆ ಕುಸಿದು ಬಿದ್ದಿದ್ದೇ ಆದಲ್ಲಿ ಹೆದ್ದಾರಿಯ ಕೆಳಭಾಗದಲ್ಲೇ ಇರುವ ಐದಾರು ಮನೆಗಳು ಸಾವಿರಾರು ಲೋಡ್ ಮಣ್ಣಿನಲ್ಲಿ ಸಮಾಧಿಯಾಗಿ ಬಿಡುವ ಆತಂಕವಿದೆ. ಆಗಸ್ಟ್ ೨೦೨೦ರಲ್ಲಿ, ಕೊಡಗು ಜಿಲ್ಲಾಡಳಿತ, ಡಿಸಿ ಕಚೇರಿ ಸ್ಥಳದಲ್ಲಿ ಸಣ್ಣ ಭೂಕುಸಿತ ವರದಿಯಾಗಿತ್ತು.

ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕಚೇರಿ ಪ್ರದೇಶದ ಹಿಂಭಾಗದಲ್ಲಿ ಭೂಮಿ ಕುಸಿದಿದ್ದು, ಇದನ್ನು ಟಾರ್ಪಾಲಿನ್ ಹೊದಿಕೆಗಳನ್ನು ಬಳಸಿ ರಕ್ಷಿಸುವವರೆಗೂ ಡಿಸಿ ಕಚೇರಿಯನ್ನು ಸ್ಥಳಾಂತರಿಸಲಾಗಿತ್ತು. ಇದಲ್ಲದೆ, ಡಿಸಿ ಅನ್ನೀಸ್ ಕಣ್ಮಣಿ ಜಾಯ್ ಅವರ ಅವಧಿಯಲ್ಲಿ ಕಚೇರಿ ಕಟ್ಟಡವನ್ನು ರಕ್ಷಿಸಲು ರೂ. ೭ ಕೋಟಿ ರಿಟೈನಿಂಗ್ ವಾಲ್ ಯೋಜನೆಯನ್ನು ಮಂಜೂರು ಮಾಡಲಾಗಿತ್ತು. ಈ ಯೋಜನೆಯು ಜನವರಿ ೨೦೨೨ ರೊಳಗೆ ಪೂರ್ಣಗೊಳ್ಳುವ ಭರವಸೆ ನೀಡಿದ್ದರೂ, ಈ ಕಾಮಗಾರಿ ಇನ್ನೂ ನಡೆಯುತ್ತಿದೆ. ಅದಾಗಲೇ ಮತ್ತೆ ಮಳೆಯಿಂದಾಗಿ ಈ ಗೋಡೆ ಕುಸಿಯುವ ಭೀತಿ ಎದುರಾಗಿದೆ.

೪೦ ಅಡಿ ಎತ್ತರ ೧೪೦ ಮೀಟರ್ ಉದ್ದದ ತಡೆಗೋಡೆಯ ಸ್ಲ್ಯಾಬ್‌ಗಳು ಉಬ್ಬುತ್ತಿದ್ದು, ಕುಸಿಯುವ ಅಪಾಯವಿದೆ. ಕಾಮಗಾರಿ ಅಪೂರ್ಣವಾದ ಗೋಡೆಯ ಮೇಲೆ ಟಾರ್ಪಾಲಿನ್‌ಗಳನ್ನು ಹೊದಿಸಲಾಗಿದ್ದು, ಗೋಡೆಯೊಳಗೆ ನೀರು ಸೋರಿಕೆಯಾಗಿ ಗೋಡೆ ಸಡಿಲಗೊಂಡಿದೆ ಎನ್ನಲಾಗಿದೆ.

ಮುಂಜಾಗ್ರತಾ ಕ್ರಮವಾಗಿ ನಗರದ ತಿಮ್ಮಯ್ಯ ವೃತ್ತದಿಂದ ಮಡಿಕೇರಿ-ಮಂಗಳೂರು ರಸ್ತೆ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಮಡಿಕೇರಿ-ಮಂಗಳೂರು ಎನ್‌ಎಚ್ ೨೭೫ ತಲುಪಲು ಪ್ರಯಾಣಿಕರು ಈಗ ಮೇಕೇರಿ ರಸ್ತೆಯ ಮೂಲಕ ತಾಳತ್ಮನೆ ಕಡೆಗೆ ಹೋಗಬೇಕಾದ ಅನಿವಾರ್ಯತೆ ಇದೆ.

ಇದೆಲ್ಲದರ ನಡುವೆ ತಾತ್ಕಾಲಿಕ ಪರಿಹಾರವಾಗಿ ಸ್ಥಳದಲ್ಲಿ ಮರಳು ಚೀಲಗಳಿಂದ ತಡೆಗೋಡೆಗೆ ಭದ್ರತೆ ಒದಗಿಸುವ ಕಾರ್ಯಕ್ಕೆ ಲೋಕೋಪಯೋಗಿ ಇಲಾಖೆ ಮುಂದಾಗಿದೆ. ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಾಣವಾದ ತಡೆಗೋಡೆಗೆ ಮರಳು ಚೀಲದ ಭದ್ರತೆಯೇ ಎಂದು ಜನರು ನಗುವಂತಾಗಿದೆ.

ಇಂತಹ ಹಲವು ಉದಾಹರಣೆಗಳು ಕೊಡಗು ಜಿಲ್ಲೆಯಲ್ಲಿವೆ. ಹಳೇ ಖಾಸಗಿ ಬಸ್ ನಿಲ್ದಾಣದ ತಡೆಗೋಡೆ, ನೂತನ ಖಾಸಗಿ ಬಸ್ ನಿಲ್ದಾಣ, ಹೈಟೆಕ್ ಮಾರುಕಟ್ಟೆ ಮತ್ತಿತರ ಎಲ್ಲ ಕಾಮಗಾರಿಗಳಲ್ಲೂ ಅವೈಜ್ಞಾನಿಕತೆ ಎದ್ದು ಕಾಣುತ್ತಿದೆ. ಇನ್ನಾದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಈ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ. ಕೋಟ್ಯಂತರ ರೂ. ಜನರ ತೆರಿಗೆ ಹಣದಲ್ಲಿ ನಡೆಸುವ ಕಾಮಗಾರಿಗಳನ್ನು ಸಮರ್ಪಕವಾಗಿ ಮಾಡಬೇಕಿದೆ.

andolana

Recent Posts

75 ವರ್ಷದ ಸಂಪ್ರದಾಯ ಮುರಿಯಲಿರುವ ನಿರ್ಮಲಾ ಸೀತಾರಾಮನ್‌

ನವದೆಹಲಿ: ಕೇಂದ್ರ ಬಜೆಟ್‌ ಮಂಡನೆಗೆ ಕ್ಷಣಗಣನೆ ಶುರುವಾಗಿದ್ದು, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಇಂದು 9ನೇ ಬಜೆಟ್‌ ಮಂಡನೆ…

5 mins ago

ರೀಲ್ ಹುಚ್ಚಿಗೆ ಬಲಿಯಾದ ಒಂದು ಅಮಾಯಕ ಜೀವ

ಸೂರ್ಯ ಪುತ್ರ ಆತನ ಹೆಸರು ದೀಪಕ್. ಮಲ್ಟಿ ನ್ಯಾಷನಲ್ ಕಂಪೆನಿ ಉದ್ಯೋಗಿ. ಕೇರಳದ ಕಣ್ಣೂರಿನ ರೈಲ್ವೇ ಸ್ಟೇಷನ್ ಪಕ್ಕದಿಂದ ಜನ…

3 hours ago

ಕಣಗಾಲ್ ಪುಟ್ಟಣ್ಣನವರ ಕರುಣಾಜನಕ ಮನೆ

ಸಿರಿ ಮೈಸೂರು ಬೆಳ್ಳಿಮೋಡ, ಗೆಜ್ಜೆಪೂಜೆ, ಎಡಕಲ್ಲು ಗುಡ್ಡದ ಮೇಲೆ, ಬಿಳಿ ಹೆಂಡ್ತಿ, ನಾಗರ ಹಾವು, ರಂಗನಾಯಕಿ, ಮಸಣದ ಹೂವು, ಶರಪಂಜರ...…

3 hours ago

ಮುದ್ದಿನ ಬೆಕ್ಕುಗಳಿಗೆ ಬೆಚ್ಚಗಿನ ಸಂಗ್ರಹಾಲಯ

ಅಕ್ಷತಾ ನೀವು ಬೆಕ್ಕುಪ್ರಿಯರಾಗಿದ್ದರೆ ಮೈಸೂರು-ನಂಜನಗೂಡು ರಸ್ತೆಯ ಈ ಮಾರ್ಜಾಲ ಸಂಗ್ರಹಾಲಯಕ್ಕೆ ಭೇಟಿಕೊಡಿ. ಮುದ್ದಿನ ಸಾಕುಪ್ರಾಣಿಯಾಗಿ ಮನೆಯೊಳಗಿರುವ ಬೆಕ್ಕನ್ನು ಕೌತುಕದ ಕಣ್ಣಿನಿಂದ…

3 hours ago

ಶಿವಾಜಿ ಗಣೇಶನ್‌ ಅವರ ವಾರದ ಅಂಕಣ: ಉತ್ತರದ ಕಾಲೇಜುಗಳ ‘ಚಹ ಕಪ್ಪಿನಲ್ಲಿ ಬಿರುಗಾಳಿ’

ತಾಯಿಯೇ ಮೊದಲ ಶಿಕ್ಷಕಿ; ಮನೆಯೇ ಮೊದಲ ಪಾಠ ಶಾಲೆ’ ಎನ್ನುವ ನಾಣ್ಣುಡಿಯನ್ನು ಆಗಾಗ್ಗೆ ಕೇಳುತ್ತಿರುತ್ತೇವೆ. ದಲಿತರಲ್ಲದ ಬಲಿಷ್ಠ ಜಾತಿಗಳ ಅಷ್ಟೇ…

3 hours ago

ಓದುಗರ ಪತ್ರ: ಜಗಕೆ ಮಾದರಿ!

ಜಗಕೆ ಮಾದರಿ! ಭಲೆ ಭಲೇ ಅಂಕೇಗೌಡರೆ ಜಗಕೆ ಮಾದರಿ ನಿಮ್ಮ ಪುಸ್ತಕಪ್ರೀತಿ ಅರಿವಿನ ಆಕರಗಳು ಪುಸ್ತಕಗಳು! ದುಡಿದ ಲಕ್ಷಾಂತರ ಹಣವನು…

4 hours ago