ಎಡಿಟೋರಿಯಲ್

ಡಿಜಿಟಲ್ ತಂತ್ರಜ್ಞಾನ ಬಳಸಿಕೊಂಡು ಸರಕು ಸಾರಿಗೆಯ ಕಾರ್ಯಕ್ಷಮತೆ ಹೆಚ್ಚಿಸಿ, ವೆಚ್ಚ ತಗ್ಗಿಸುವುದು ಹೊಸ ನೀತಿ ಉದ್ದೇಶ

ನೂತನ ರಾಷ್ಟ್ರೀಯ ಸರಕು ಸಾಗಾಣಿಕೆ ನೀತಿ

ಪ್ರೊ.ಆರ್.ಎಂ.ಚಿಂತಾಮಣಿ
ವಿಶ್ವ ಆರ್ಥಿಕ ವೇದಿಕೆಯ ಒಂದು ಅಂದಾಜಿನಂತೆ ಜಗತ್ತಿನಾದ್ಯಂತ ಪ್ರತಿ ದಿನ ೮೫ ದಶ ಲಕ್ಷ ಪ್ಯಾಕೇಜುಗಳು (ಪೊಟ್ಟಣಗಳು), ಮೂಟೆಗಳು, ಬಾಕ್ಸ್ ಗಳು, ಲಾರಿ ವ್ಯಾಗನ್ ಕಂಟೇನರ್ ಲೋಡ್‌ಗಳು ಮತ್ತು ಪ್ರವಾಹಿಗಳು ಮತ್ತು ಅವುಗಳಿಗೆ ಸಂಬಂಧಿಸಿದ ದಾಖಲೆ ಪತ್ರಗಳು ತಮ್ಮ ಮೂಲಸ್ಥಳದಿಂದ ತಲುಪಬೇಕಾದ ಸ್ಥಳಗಳಿಗೆ ಸಾಗಾಣಿಕೆಯಾಗುತ್ತವೆ. ಇದನ್ನೇ ಸಂಕ್ಷಿಪ್ತವಾಗಿ ಸರಕು ಸಾಗಾಣಿಕೆ ಎನ್ನುವುದು. ಈ ಸಾರಿಗೆಯಲ್ಲಿ ಉತ್ಪಾದಕರ (ಕೃಷಿಯೂ ಸೇರಿ) ಅವಶ್ಯಕತೆಗಳಾದ ಕಚ್ಚಾ ವಸ್ತುಗಳು ಮತ್ತು ಉತ್ಪಾದಿತ ಉತ್ಪನ್ನಗಳನ್ನು (ಸಿದ್ಧ ವಸ್ತುಗಳನ್ನು ಉಪಭೋಗಕರ ಸ್ಥಳಗಳಿಗೆ ಸಾಗಿಸುವುದು (ಗುಣಮಟ್ಟ ಕಾಯ್ದುಕೊಂಡು)ಸೇರಿರುತ್ತವೆ.
ಭಾರತದ ಜನ ಸಂಖ್ಯೆ ಮತ್ತು ಅರ್ಥ ವ್ಯವಸ್ಥೆಯ ಆಧಾರದಲ್ಲಿ ಜಾಗತಿಕ ಸರಕು ಸಾಗಣೆಯ ಗಾತ್ರದಲ್ಲಿ ನಾಲ್ಕನೇ ಒಂದು ಭಾಗದಷ್ಟಾದರೂ ನಮ್ಮ ಸರಕು ಸಾರಿಗೆ ಉದ್ದಿಮೆ ಇರಲೇಬೇಕು. ಇದು ದೇಶದ ಒಳಗೆ ಸರಕು ಸಾಗಾಣಿಕೆ ಮತ್ತು ಆಯಾತ- ನಿರ್ಯಾತಗಳ (ಹೊರಗೂ ಸೇರಿ) ಸಾಗಾಣಿಕೆ ಒಳಗೊಂಡಿರುತ್ತದೆ. ಯುರೋಪ್, ಅಮೆರಿಕ ಮತ್ತು ಚೀನಗಳಲ್ಲಿ ಸರಕು ಸಾರಿಗೆ ವೆಚ್ಚವು ಆಯಾ ದೇಶಗಳ ಜಿಡಿಪಿಯ (GDP) ಶೇ.೦೮ರಿಂದ ೧೦ರವರೆಗೆ ಇರುತ್ತದೆ. ಆದರೆ ನಮ್ಮಲ್ಲಿ ಈ ವೆಚ್ಚಗಳು ನಮ್ಮ ಜಿಡಿಪಿಯ ಶೇ.೧೩-೧೪ರವರೆಗೆ ಇರುತ್ತದೆ. ಇದು ಅತಿ ಹೆಚ್ಚಾಗಿದ್ದು, ನಮ್ಮ ಉತ್ಪಾದನಾ ವೆಚ್ಚಗಳ ಮೇಲೆ ಪರಿಣಾಮ ಬೀರುತ್ತದೆ. ಗ್ರಾಹಕ ಬೆಲೆಗಳೂ ಹೆಚ್ಚುತ್ತವೆ. ಈ ಪ್ರಮಾಣವನ್ನು ಶೇ.೯-೧೦ಕ್ಕಾದರೂ ಮುಂದಿನ ವರ್ಷಗಳಲ್ಲಿ ಇಳಿಸಬೇಕಾಗಿದೆ.
ಅದಕ್ಕಾಗಿಯೇ ಕೇಂದ್ರ ಸರ್ಕಾರ ರಾಷ್ಟ್ರೀಯ ಸರಕು ಸಾಗಾಣಿಕೆ ನೀತಿಯನ್ನು (National Logistics Policy) ಇದೆ ತಿಂಗಳ ೧೭ರಂದು ಪ್ರಕಟಿಸಿದೆ. ನಂತರ ಅದಕ್ಕೆ ಸಚಿವ ಸಂಪುಟದ ಅಂಗೀಕಾರವೂ ದೊರೆತಿದೆ. ಅದರಂತೆ ಹೊಸ ಡಿಜಿಟಲ್ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡು ಸರಕು ಸಾರಿಗೆಯ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಉದ್ದೇಶವಿದೆ. ವಿವಿಧ ಸಾರಿಗೆ ಮಾಧ್ಯಮಗಳಲ್ಲಿ ಹೊಂದಾಣಿಕೆ ತಂದು ಸಮನ್ವಯ ಸಾಧಿಸಿ ವ್ಯಯವಾಗುವ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡುವ ಗುರಿಯೂ ಇದೆ. ಸಾರಿಗೆ ಸಮಯದಲ್ಲಿ ಸರಕುಗಳ ಗುಣಮಟ್ಟವನ್ನು ಕಾಯ್ದುಕೊಳ್ಳುವ ವ್ಯವಸ್ಥೆಗಳನ್ನು ಮೇಲ್ದರ್ಜೆಗೆ ಏರಿಸಿ ಉಪಬೋಗಕರ ಹಿತ ಕಾಪಾಡುವ ಗುರಿಯೂ ಒಂದಾಗಿದೆ.
ಸರಕು ಸಾಗಣೆ ಮಾಧ್ಯಮಗಳು ರಸ್ತೆ, ರೈಲು, ಜಲ ಮತ್ತು ವಾಯು ಮಾರ್ಗಗಳಿಂದ ಸರಕುಗಳನ್ನು ಸಾಗಿಸಲಾಗುತ್ತದೆ. ಆಯಾತ ನಿರ್ಯಾತಗಳಿಗೆ ಜಲ ಮತ್ತು ರೈಲು ಮಾರ್ಗಗಳು ಉಪಯುಕ್ತವಾಗಿದ್ದರೆ ಆಂತರಿಕ ಸಾರಿಗೆಗೆ ರಸ್ತೆ ಮತ್ತು ರೈಲು ಹೆಚ್ಚು ಉಪಯೋಗವಾಗುತ್ತವೆ. ದೂರದ ಹಳ್ಳಿಗಳಿಗೆ ಮತ್ತು ಮನೆ ಮನೆ ತಲುಪಿಸಲು ರಸ್ತೆ ಸಾರಿಗೆಯೇ ಬೇಕು. ಕಲ್ಲಿದ್ದಲು ಮುಂತಾದ ಸರಕುಗಳನ್ನು ದೂರದ ಪ್ರದೇಶಗಳಿಗೆ ಸಾಗಿಸಲು ರೈಲ್ವೆಯೇ ಸೂಕ್ತ. ಇಂತಹ ವಸ್ತುಗಳನ್ನು ದೊಡ್ಡ ಗಾತ್ರದಲ್ಲಿ ಕರಾವಳಿಯಲ್ಲಿ ಮತ್ತು ವಿದೇಶಗಳಿಗೆ ಸಾಗಿಸಬೇಕಾದರೆ ಜಲ ಮಾರ್ಗವೇ ಅಗ್ಗ.
ನಮ್ಮಲ್ಲಿ ಸಾಗಾಣಿಕೆ ವೆಚ್ಚಗಳ ಅಧ್ಯಯನ ಮಾಡಿರುವ ಸ್ಟ್ಯಾಟಿಸ್ಟಾ ಸಂಶೋಧನಾ ಸಂಸ್ಥೆಯ ಅಂದಾಜುಗಳಂತೆ ಒಂದು ಮೆಟ್ರಿಕ್ ಟನ್ ಒಂದು ಕಿಲೋ ಮೀಟರ್ ಸಾಗಾಣಿಕೆ ವೆಚ್ಚ (Freight) ರೈಲ್ವೆಯಲ್ಲಿ ೧.೬೦ ರೂ., ಜಲ ಸಾರಿಗೆಯಲ್ಲಿ  ೨.೦೦ ರೂ., ರಸ್ತೆ ಸಾರಿಗೆಯಲ್ಲಿ ೩.೬೦ ರೂ. ಮತ್ತು ವಾಯು ಸಾರಿಗೆಯಲ್ಲಿ ೧೮.೦೦ ರೂ. ಆಗುತ್ತದೆ. ರೈಲ್ವೆ ಅತಿ ಅಗ್ಗ ಮತ್ತು ವಾಯು ಸಾರಿಗೆ ಭಾರಿ ತುಟ್ಟಿ.
ಇಲ್ಲಿಯವರೆಗೆ ಎಲ್ಲ ಸಾರಿಗೆ ಮಾಧ್ಯಮಗಳಲ್ಲಿಯೂ ಸಾಕಷ್ಟು ಪ್ರಗತಿ ಸಾಧಿಸಲಾಗಿದೆ. ಎಲ್ಲದರಲ್ಲಿಯೂ ಆಧುನೀಕರಣ ಮುಂದುವರಿದಿದೆ. ಬಹುಬೇಗ ಹಾಳಾಗಬಹುದಾದ ಹಾಲು, ತರಕಾರಿ, ಹಣ್ಣುಗಳು ಮತ್ತು ಮಾಂಸ ಮುಂತಾದವುಗಳ ಸಾಗಾಣಿಕೆಗಾಗಿ ಶೀತಲೀಕೃತ ವಾಹನಗಳು ವ್ಯಾನ್‌ಗಳು ಮತ್ತು ಶಿಪ್ ಕಂಟೇನರ್‌ಗಳು  ದೊಡ್ಡ ಸಂಖ್ಯೆಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಬಂದರು ಮತ್ತು ನಿಲ್ದಾಣಗಳಲ್ಲಿ  ಗುಣಮಟ್ಟ  ಕಾಯ್ದುಕೊಳ್ಳುವ ಎಲ್ಲ ಸೌಲಭ್ಯಗಳೂ ದೊರೆಯುತ್ತಿವೆ.
ಆದರೂ ಭಾರತದಲ್ಲಿ ಇಂದಿಗೂ ಶೇ.೬೦ಕ್ಕಿಂತಲೂ ಹೆಚ್ಚು ರಸ್ತೆ ಸಾರಿಗೆಯನ್ನೆ ಅವಲಂಬಿಸಿರುವುದು ಕಂಡು ಬಂದಿದೆ. ಜಾಗತಿಕ ಮಟ್ಟದಲ್ಲಿ ಈ ಪ್ರಮಾಣ ಶೇ.೨೫ರಷ್ಟು ಇರಲಿದೆ. ಉಳಿದಂತೆ ಶೇ.೩೦ರಷ್ಟು ರೈಲ್ವೆಯನ್ನು ಅವಲಂಬಿಸಿದ್ದು, ಶೇ.೫ರಷ್ಟು ಮಾತ್ರ ಜಲ ಸಾರಿಗೆ ಬಳಸಲಾಗುತ್ತದೆ. ಇತರ ದೇಶಗಳಲ್ಲಿ ರೈಲ್ವೆ ಬಳಕೆಯು ಶೇ.೫೫-೬೦ ಇರುತ್ತದೆ. ಆದ್ದರಿಂದ ಹೊಸ ನೀತಿಯಂತೆ ಮುಂದಿನ ಐದು ವರ್ಷಗಳಲ್ಲಿ ರೈಲ್ವೆ ಮತ್ತು ರಸ್ತೆ ಸಾರಿಗೆ ಅವಲಂಬನೆಯನ್ನು ಅದಲಿ-ಬದಲಿ ಮಾಡಿ ರೈಲ್ವೆ ಪಾಲು ಶೇ.೬೦ಕ್ಕೆ ಏರುವಂತೆ ಮತ್ತು ರಸ್ತೆ ಪಾಲು ಶೇ.೨೫-೩೦ಕ್ಕೆ  ಇಳಿಯುವಂತೆ ಎಲ್ಲ ರೀತಿಯ ಕ್ರಮಗಳನು ್ನ ಕೈಕೊಳ್ಳಲಾಗುವುದು. ಇದರಿಂದ ಸರಾಸರಿ ವೆಚ್ಚ ತಂತಾನೆ ಇಳಿಯುವಂತಾಗುತ್ತದೆ.
ಡಿಜಿಟಲ್ ತಂತ್ರಜ್ಞಾನ ಅಳವಡಿಕೆಗೆ ಒತ್ತು
ಈಗ, ಮಾಹಿತಿ ಮತ್ತು ದಾಖಲೆಗಳು ಹಲವು ಇಲಾಖೆಗಳಲ್ಲಿ ಹರಿದು ಹಂಚಿ ಹೋಗಿರುವುದರಿಂದ ಸಾಗಾಣಿಕೆ ದಾಖಲೆಗಳನ್ನು ತಯಾರಿಸುವಲ್ಲಿ ಮತ್ತು ಸಂಬಂಧಪಟ್ಟವರಿಗೆ ತಲುಪಿಸುವಲ್ಲಿ ಸಾಕಷ್ಟು ಸಮಯ ಮತ್ತು ಹಣ ವ್ಯಯವಾಗುತ್ತದೆ. ಒಂದು ಉದಾಹರಣೆ ಎಂದರೆ ಶೇ.೮೫ರಷ್ಟು ನಮ್ಮ ವಿದೇಶಿ ವ್ಯಾಪಾರ ಸಮುದ್ರ ಮಾರ್ಗವಾಗಿ ಬಂದರುಗಳ ಮೂಲಕ ನಡೆಯುತ್ತದೆ. ನಮ್ಮ ದೊಡ್ಡ ಬಂದರುಗಳಲ್ಲಿಯೇ ಸರಕು ಪಡೆಯಲು ಅಥವಾ ರವಾನೆ ಮಾಡಲು ಕನಿಷ್ಠ ೨.೫ರಿಂದ ೩ ದಿನಗಳು ಬೇಕು. ಆದರೆ, ಜಾಗತಿಕ ಸರಾಸರಿ ಕೇವಲ ೧.೨ ದಿನ ಮಾತ್ರ ಇರುತ್ತದೆ.
ಆದ್ದರಿಂದ ಹೊಸ ನೀತಿಯಂತೆ ಎಲ್ಲವನ್ನೂ ಒಳಗೊಂಡಿರುವ ‘ಯುನಿಫೈಡ್ ಲಾಜಿಸ್ಟಿಕ್ ಇಂಟರ್‌ಫೇಸ್ ಪ್ಲಾಟ್‌ಫಾರ್ಮ’ ಪೋರ್ಟಲ್ ಸಿದ್ಧವಾಗುತ್ತಿದೆ. ನೀವಿದ್ದಲ್ಲಿಯೇ ನಿಮ್ಮ ಸಿಸ್ಟಿಮ್‌ನಲ್ಲಿ  ಎಲ್ಲ ಮಾಹಿತಿ ಮತ್ತು ವಿಧಾನಗಳು ಲಭ್ಯ. ಎಲ್ಲ ಕಚೇರಿಗಳನ್ನೂ ಆನ್‌ಲೈನ್‌ನಲ್ಲಿಯೇ ಸಂಪರ್ಕಿಸಿ ದಾಖಲೆಗಳನ್ನು ಪಡೆದು ರವಾನಿಸಬಹುದು. ಇದರಡಿಯಲ್ಲಿಯೇ ಬೇರೆ ಬೇರೆ ಉದ್ದೇಶಗಳಿಗಾಗಿ ಇನ್ನೂ ಮೂರು ಉಪ ಪ್ಲಾಟ್‌ಫಾರ್ಮ್‌ಗಳಿವೆ. ಅವುಗಳೆಂದರೆ  ೧.ಇ ಲಾಗ್ (ಈಜ್ ಆಫ್ ಲಾಜಿಸ್ಟಿಕ್ ಸರ್ವಿಸಸ್), ೨.ಎಸ್‌ಐಜಿ (ಸಿಸ್ಟೆಂ ಇಂಪ್ರುವ್‌ಮೆಂಟ್ ಗ್ರೂಪ್), ಇದು ಸಾರಿಗೆ ಪೂರಕ ಸೇವೆಗಳಿಗೆ ಸಂಬಂಧಿಸಿದ್ದು ಮತ್ತು ೩. ಐಡಿಎಸ್ (ಇಂಟೆಗ್ರೇಟೆಡ್ ಡಿಜಿಟಲ್ ಸಿಸ್ಟೆಮ್). ಇನ್ನೂ ಹಲವು ಉತ್ತಮ ಯೋಜನೆಗಳನ್ನು ನೀತಿ ಒಳಗೊಂಡಿದೆ.
ಇನ್ನೂ ಒಂದು ಗಮನಿಸಬೇಕಾದ ಅಂಶವೆಂದರೆ ಈಗಾಗಲೇ ಪ್ರಕಟಗೊಂಡಿರುವ ದೀರ್ಘಾವಧಿಯ ‘ಗತಿ ಶಕ್ತಿ’ ಪೈಪಲೈನ್, ಭಾರತ ಮಾಲಾ ಮತ್ತು ಸಾಗರ ಮಾಲಾ ಮುಂತಾದ ಮೂಲ ಸೌಲಭ್ಯ ಯೋಜನೆಗಳೊಡನೆ ಸೂಕ್ತ ಹೊಂದಾಣಿಕೆಯೊಡನೆ ಹೊಸ ಸರಕು ಸಾರಿಗೆ ನೀತಿಯನ್ನು ಅನುಷ್ಠಾನಗೊಳಿಸಿದರೆ ಹೆಚ್ಚು ಅರ್ಥಪೂರ್ಣವಾಗುತ್ತದೆ. ಉದ್ದೇಶಿತ ವೆಚ್ಚಗಳಿಗೆ ಕಡಿವಾಣ ಮತ್ತು ಕಾರ್ಯ ದಕ್ಷತೆ (ಉತ್ಪಾದಕತೆ) ಹೆಚ್ಚಳ ಎರಡನ್ನೂ ಸಾಧಿಸಲು ಅನುಕೂಲವಾದೀತು.
ಒಂದು ಮಾತು: ಯೋಜನೆಗಳು ಮತ್ತು ನೀತಿಗಳು ಕಾಗದದ ಮೇಲೆ ಬಹಳ ಚೆನ್ನಾಗಿ ಕಾಣುತ್ತೇವೆ. ಪ್ರಶ್ನೆ ಇರುವುದು ಅನುಷ್ಠಾನದಲ್ಲಿ. ಅವುಗಳನ್ನು ಪ್ರಾಮಾಣಿಕವಾಗಿ, ಸಮರ್ಥವಾಗಿ ಮತ್ತು ಸಮಯಬದ್ಧವಾಗಿ ಅನುಷ್ಠಾನಗೊಳಿಸಬೇಕು. ಅಷ್ಟೆ!
andolana

Recent Posts

ಸಿ.ಟಿ.ರವಿ, ಲಕ್ಷ್ಮೀ ಹೆಬ್ಬಾಳ್ಕರ್‌ ಕೇಸ್‌ ಮುಗಿದ ಅಧ್ಯಾಯ: ಬಸವರಾಜ ಹೊರಟ್ಟಿ

ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಬಗ್ಗೆ ಬಿಜೆಪಿ ವಿಧಾನ ಪರಿಷತ್‌ ಶಾಸಕ ಸಿ.ಟಿ.ರವಿ ಅವರು ಆಕ್ಷೇಪಾರ್ಹ ನೀಡಿರುವ ಹೇಳಿಕೆಯ ಕೇಸ್‌…

13 mins ago

ಶಿವರಾಜಕುಮಾರ್ ಚಿತ್ರಕ್ಕೆ ತಮಿಳು ನಿರ್ದೇಶಕ; ಮುಂದಿನ ವರ್ಷ ‘#MB’ ಪ್ರಾರಂಭ

ಶಿವರಾಜಕುಮಾರ್‍ ಶಸ್ತ್ರಚಿಕಿತ್ಸೆಗೆಂದು ಇತ್ತೀಚೆಗೆ ಅಮೇರಿಕಾಗೆ ಪ್ರಯಾಣ ಬೆಳಸಿದ್ದಾರೆ. ಜನವರಿ 26ರಂದು ಅವರು ಚಿಕಿತ್ಸೆ ಮುಗಿಸಿ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ. ಬೆಂಗಳೂರಿಗೆ ವಾಪಸ್ಸಾಗಿ…

16 mins ago

ಮತ್ತೊಂದು ಥ್ರಿಲ್ಲರ್ ಚಿತ್ರದಲ್ಲಿ ವಿಜಯ್‍ ರಾಘವೇಂದ್ರ; ‘FIR 6 to 6’ ಟ್ರೇಲರ್‍ ಬಿಡುಗಡೆ

ವಿಜಯ್‍ ರಾಘವೇಂದ್ರ ಅಭಿನಯದ ಮೂರು ಚಿತ್ರಗಳು ಈ ವರ್ಷ ಬಿಡುಗಡೆಯಾಗಿವೆ. ವಿಶೇಷವೆಂದರೆ, ‘ಕೇಸ್ ಆಫ್‍ ಕೊಂಡಾನ’, ‘ಜಾಗ್‍ 101’ ಮತ್ತು…

19 mins ago

ಕುಶಾಲನಗರದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣ

• ಕೆ.ಬಿ.ಶಂಶುದ್ದೀನ್ ಕುಶಾಲನಗರ ತಾಲ್ಲೂಕು ವ್ಯಾಪ್ತಿಯಲ್ಲಿ ಪಟ್ಟಣ ಅಭಿವೃದ್ಧಿಯಾದಂತೆ ಕಳ್ಳತನವೂ ಹೆಚ್ಚಳ; ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲು ಒತ್ತಾಯ…

35 mins ago

ಬಸವನಕಟ್ಟೆ ಏರಿಯಲ್ಲಿ ಬಿರುಕು; ನೀರು ಪೋಲು

ವಡೆಯನಪುರ ಸಮೀಪದ ಕೆರೆ ಒಡೆಯುವ ಆತಂಕ; ಏರಿಯನ್ನು ದುರಸ್ತಿಪಡಿಸಲು ಒತ್ತಾಯ • ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ: ತಾಲ್ಲೂಕಿನ ವಡೆಯನಪುರದ ಸಮೀಪವಿರುವ…

42 mins ago

ಹೊಲಗದ್ದೆಗಳಲ್ಲಿ ಹಕ್ಕಿಪಕ್ಷಿಗಳು ಏಕೆ ಬೇಕು?

• ರಮೇಶ್ ಪಿ.ರಂಗಸಮುದ್ರ ಪಕ್ಷಿಗಳಿಗೂ ಕೃಷಿಗೂ ಅವಿನಾಭಾವ ಸಂಬಂಧವಿದೆ. ಪಕ್ಷಿಗಳು ಮಾನವನಿಗಿಂತಲೂ ಹೆಚ್ಚಾಗಿ ಪ್ರಕೃತಿಯೊಡನೆ ಬೆರೆತಿವೆ. ಸಸ್ಯ ವೈವಿಧ್ಯತೆಯ ನಡುವೆ…

1 hour ago