ಎಡಿಟೋರಿಯಲ್

ಅಕ್ಕಂದಿರ ಎಂದೂ ಮುಗಿಯದ ಶೀತಲಸಮರ

ನನಗೆ ಇಬ್ಬರು ಅಕ್ಕಂದಿರು. ದೊಡ್ಡಕ್ಕ ಅಮ್ಮನ ಕೈಯಿಂದ ದೊಡ್ಡಮಗಳಾಗಿ ಬಹಳ ಪೆಟ್ಟು ತಿಂದು ಬೆಳೆವಳು. ಲಗ್ನವಾಗಿ ವ್ಯಾಪಾರ ಬೇಸಾಯವಿದ್ದ ದೊಡ್ಡ ಕೂಡುಕುಟುಂಬಕ್ಕೆ ಸೇರಿದ ಕಾರಣ, ಆಕೆ ವಿರಾಮವಿಲ್ಲದ ದುಡಿಮೆಯ ಗಾಣಕ್ಕೆ ಕೊರಳೊಡ್ಡಬೇಕಾಯಿತು. ಜತೆಗೆ ನಾದಿನಿಯವರ ಕಿರುಕುಳ. ಹೀಗಾಗಿ ಆಕೆ ಬಗ್ಗೆ ಮನೆಯವರಿಗೆಲ್ಲ ಸಹಾನುಭೂತಿ. ನಾವು ಅಮ್ಮ ಮಾಡಿಕೊಟ್ಟ ಕರ್ಜಿಕಾಯಿ ಚೋಂಗೆಯ ಬುಟ್ಟಿ ಹಿಡಿದುಕೊಂಡು, ಅವಳಿದ್ದ ತಂಗಲಿ ಎಂಬ ಹಳ್ಳಿಗೆ, ಕಡೂರಿನಲ್ಲಿ ಬಸ್ಸಿಳಿದು ನಡೆದುಕೊಂಡು ಹೋಗುತ್ತಿದ್ದೆವು. ಸಾಲುಮರದಲ್ಲಿದ್ದ ಮಂಗಗಳಿಂದ ತಪ್ಪಿಸಿಕೊಂಡು, ಕತ್ತಲು ಕವಿವಂತೆ ಹರಡಿಕೊಂಡಿದ್ದ ಚೌಡಿಯ ದೊಡ್ಡಾಲದಮರದ ಅಂಜಿಕೆಯನ್ನು ಉಂಡು, ಆಕೆಯ ಮನೆ ತಲುಪುತ್ತಿದ್ದೆವು. ಅಕ್ಕ ಅಯ್ಯನಕೆರೆಯಿಂದ ಹರಿದು ಬರುವ ಕಾಲುವೆಯ ಕೆಂಪುನೀರನ್ನು ಎರಡು ದೊಡ್ಡಕೊಡಗಳಲ್ಲಿ ಹೊತ್ತು ತರುತ್ತಿದ್ದಳು. ಅಮ್ಮ ಆಕೆಗೆ ದೊಡ್ಡ ಕೊಡಗಳನ್ನು ಜಹೇಜಿನಲ್ಲಿ ಕೊಟ್ಟಿದ್ದೇ ತಪ್ಪಾಯಿತೆಂದು ಪರಿತಪಿಸುತ್ತಿದ್ದಳು. ಅಕ್ಕ ತನ್ನ ನೆಗೆಣ್ಣಿಯರ ಜತೆಗೂಡಿ ಇಡೀ ಕುಟುಂಬಕ್ಕೆ ಅಡುತ್ತಿದ್ದಳು. ಅಡುಗೆ ಕೆಲಸವಿಲ್ಲದಾಗ ಹೊಗೆಕಡ್ಡಿ ಕುಟ್ಟಬೇಕಾಗುತ್ತಿತ್ತು. ಅವಳಿಗೆ ಹೊಗೆಸೊಪ್ಪಿನ ಘಾಟಿಗೆ ಆಗಾಗ್ಗೆ ಕಾಯಿಲೆಯಾಗುತ್ತಿತ್ತು. ಆಗೆಲ್ಲ ಭಾವನವರು, ಕೆಟ್ಟುಹೋದ ಬಸ್ಸನ್ನು ಗ್ಯಾರೆಜಿನಲ್ಲಿ ಬಿಟ್ಟು ಹೋಗುವಂತೆ ಆಕೆಯನ್ನು ಬಿಟ್ಟು ಹೋಗುತ್ತಿದ್ದರು. ಅಮ್ಮ ತಿಂಗಳಾನುಗಟ್ಟಲೆ ಅಕ್ಕನನ್ನೂ ಮಕ್ಕಳನ್ನೂ ಇಟ್ಟುಕೊಂಡು, ಮದ್ದುಣಿಸಿ ಉಪಚರಿಸಿ ಮರಳಿ ಕಳಿಸುತ್ತಿದ್ದರು.

ಆಕೆ ವೈಕಂ ಅವರ ‘ಪಾತುಮ್ಮಳ ಆಡು’ ಕಾದಂಬರಿಯ ಪಾತುಮ್ಮಳಂತೆ, ತವರನ್ನು ಹಕ್ಕಿನಿಂದ ಅನುಭೋಗಿಸಿದಳು, ಅಮ್ಮ ಇರುವ ತನಕ. ಇದುವೇ ಸಣ್ಣಕ್ಕನ ಹೊಟ್ಟೆಯುರಿಗೆ ಕಾರಣ.
ಸಣ್ಣಕ್ಕನ ಬಗ್ಗೆ ನಮಗೆಲ್ಲ ಹೆಮ್ಮೆ. ಆಕೆ ನಮ್ಮ ಕುಟುಂಬ ಕಷ್ಟದಲ್ಲಿದ್ದಾಗ, ಕಂಡವರ ಮನೆಗೆಲಸಕ್ಕೆ ಹೋಗಿ ಕೈಜೋಡಿಸಿದವಳು. ಮದುವೆಯಾದ ಬಳಿಕವೂ ಸುಖ ಕಂಡಿದ್ದು ಕಡಿಮೆ. ಮದುವೆಯಾದ ಹೊಸತರಲ್ಲಿ ಭಾವನವರು ಕುಲುಮೆ ಕೆಲಸ, ತೆಂಗಿನಕಡ್ಡಿ ವ್ಯಾಪಾರ ಮಾಡುತಿದ್ದರು. ಅಕ್ಕ ತೆಂಗಿನಕಡ್ಡಿಗಳನ್ನು ಮುಂಬೈಗೆ ರಫ್ತಾಗುತ್ತಿದ್ದ ಪೊರಕೆಗಳ ಕಂಪನಿಗಾಗಿ ಕೀಸಿ ಸ್ವಚ್ಛಮಾಡುತಿದ್ದಳು. ಮುಂದೆ ಭಾವನವರಿಗೆ ಆರೋಗ್ಯ ಇಲಾಖೆಯಲ್ಲಿ ಅಟೆಂರ್ಡ ಕೆಲಸ ಸಿಕ್ಕ ಬಳಿಕ, ಆಕೆಗೆ ತುಸು ನೆಮ್ಮದಿ ಸಿಕ್ಕಿತು. ಆಕೆ ಮೆದು ಸ್ವಭಾವದ ಗಂಡನ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದಳು. ನಾವು ಸಾಮಾನ್ಯವಾಗಿ ಬಾಯಿಸತ್ತ ಭಾವನವರ ಪರವಾಗಿ ವಾದ ಮಾಡುತ್ತಿದ್ದೆವು. ಅಪರೂಪಕ್ಕೆ ಅವರು ಅಕ್ಕನ ಮೇಲೆ ಕೋಪಮಾಡಕೊಂಡರೆ, ಜಗತ್ತಿನ ಅಚ್ಚರಿ ಸಂಭವಿಸಿತು ಎಂದು ಸಂತೋಷ ಪಡುತ್ತಿದ್ದೆವು. ಅವರಿಗೆ ಮರೆಯಲ್ಲಿ ಶಹಬಾಸ್‌ಗಿರಿ ನೀಡುತ್ತಿದ್ದೆವು.

ಚಿತ್ರಕೃಪೆ- ಸ್ಮಿತಾಸೊಂಥಾಲಿಯಾ

ಸಣ್ಣಕ್ಕನ ಸಂಸಾರವೆಂದರೆ ಮಹಾ ಅಚ್ಚುಕಟ್ಟು. ಮಿತವ್ಯಯಿ. ಕಾಸುಕಾಸಿಗೂ ಲೆಕ್ಕ ಇಡುವವಳು. ಸಣ್ಣ ಸಂಬಳದಿಂದ ಮಕ್ಕಳನ್ನು ಓದಿಸಿದವಳು. ಮರುಭೂಮಿಗೆ ಎಸೆದರೂ ಅಲ್ಲಿ ತನ್ನದೇ ಆದ ಜಗತ್ತನ್ನು ಕಟ್ಟಿಕೊಳ್ಳುವ ಜಾಣ್ಮೆ ಅವಳಿಗಿದೆ. ನಂಟರ ಮನೆಗೆ ಹೋದರೆ ಎಲ್ಲರಿಗೂ ಮೊದಲು ಸ್ನಾನಮಾಡಿ ತಲೆಗೆ ಎಣ್ಣೆಹಚ್ಚಿಕೊಂಡು ಬಾಚಿ, ತಿಂಡಿ ಮಾಡಿಬಿಡುವಳು. ಅವಳು ನಮ್ಮ ಮನೆಯಲ್ಲಿ ಪ್ರಥಮ ಉದ್ಯಮಶೀಲೆ. ತನ್ನ ಕೈಖರ್ಚಿಗೆ ಮನೆಯ ಅರ್ಥಾತ್ ಕಂಪನಿಯ ಕೋಳಿಗಳ ಜತೆ ತನ್ನವೇ ಪ್ರತ್ಯೇಕ ಕೋಳಿ ಸಾಕಿಕೊಳ್ಳುತ್ತಿದ್ದಳು. ಅವಕ್ಕೆ ಪ್ರತ್ಯೇಕ ಕಾಳು ತಿನ್ನಿಸುವುದು ನೀರುಕುಡಿಸುವುದು, ಮೊಟ್ಟೆ ಇಡಲು ಒಳಬಂದಾಗ ಅವಕ್ಕೆ ಗೋಣಿಚೀಲ ಹಾಸಿ ಪುಟ್ಟಿ ಕವುಚುವುದು, ಕೋಳಿಜ್ವರ ಬಾರದಂತೆ ಬೆಳ್ಳುಳ್ಳಿ ತಿನಿಸುವುದು ಮಾಡುತ್ತ, ಕಂಪನಿ ಕೋಳಿಗಳನ್ನು ಎರಡನೆಯ ದರ್ಜೆಯ ಪ್ರಜೆಯಾಗಿಸಿದ್ದಳು. ಆಕೆ ಹಿಮದ ಮುದ್ದೆಯಂತಿದ್ದ ತನ್ನ ಬಿಳೀ ಕೋಳಿಗೆ ಶಕೀಲ ಎಂದು ಹೆಸರಿಟ್ಟಿದ್ದಳು. ಕಿವಿಯ ಹತ್ತಿರ ಇರುವ ಕೆಂಪು ಚಟ್ಟೆಗೆ ಮುತ್ತನ್ನು ಪೋಣಿಸಿದ್ದಳು. ಅದು ಕಾಳುಹೆಕ್ಕುವಾಗ ಓಡಾಡುವಾಗ ಝುಮುಕಿ ಅಲುಗಾಡುತ್ತ ಗತ್ತಿನಿಂದ ತಿರುಗುತ್ತಿತ್ತು. ಮೊಟ್ಟೆಯನ್ನು ನಮಗೇ ಮಾರಿ ಹಣ ಪಡೆಯುತ್ತಿದ್ದಳು. ನಾವು ಅಮ್ಮನಿಗೆ ಕಂಪನಿಯ ಕೋಳಿಗಳನ್ನು ಆಕೆ ಕಾಳು ತಿನ್ನಲು ಬಿಡದೆ ಓಡಿಸಿದ ಬಗ್ಗೆ ದೂರು ಸಲ್ಲಿಸುತ್ತಿದ್ದೆವು. ಅಮ್ಮ ‘ಹೋಗಲಿ ಬಿಡ್ರೊ, ಆಕೆ ದುಡಿದರೆ ಎಲ್ಲಿಗೆ ಹೋಗುತ್ತೆ? ನಮ್ಮನೆಗೇ ಅಲ್ಲವೇ?’ ಎಂದು ಸಮಾಧಾನ ಮಾಡುತ್ತಿದ್ದಳು. ಸಣ್ಣಕ್ಕನಿಗೆ ಓದಿಸಿದ್ದರೆ ಯಾವುದಾದರೂ ಕಂಪನಿಯ ಸಿಇಒ ಆಗಿರುತ್ತಿದ್ದಳು.

ನಮ್ಮ ಕುಟುಂಬದ ದೊಡ್ಡ ಸಮಸ್ಯೆಯೆಂದರೆ, ಇಬ್ಬರು ಅಕ್ಕಂದಿರ ಬಗೆಹರಿಯದ ಮನಸ್ತಾಪಗಳು. ಈ ಮನಸ್ತಾಪಗಳಿಗೆ ದೀರ್ಘವಾದ ಚರಿತ್ರೆಯಿದೆ. ದೊಡ್ಡಕ್ಕನ ನಸುಗಪ್ಪಿಗೆ ಹೋಲಿಸಿದರೆ ಸಣ್ಣಕ್ಕ ಬೆಳ್ಳಗಿದ್ದಳು. ಆಕೆಗೆ ಮನೆಯವರೆಲ್ಲ ಬಿಳಗಿ ಎನ್ನುತ್ತಿದ್ದೆವು. ಈ ವರ್ಣಸೂಚಕ ಗೌರವವು ಹೇಗೊ ಆಕೆಗೆ ಸಿಟ್ಟು ಬರಿಸುವ ಬೈಗುಳವಾಗಿ ಬದಲಾಯಿತು. ಅವಳನ್ನು ಮದುವೆ ಮಾಡಿಕೊಳ್ಳಲು ವರಗಳು ನಾಮುಂದೆ ತಾಮುಂದೆ ಬರುತ್ತಿದ್ದವು. ಒಮ್ಮೆ ದೊಡ್ಡಕ್ಕನಿಗೆ ನಿಶ್ಚಯವಾದ ವರನೊಬ್ಬ, ಮದುವೆಯಾಗುವುದಿದ್ದರೆ ಚಿಕ್ಕವಳನ್ನೇ ಸೈ ಎಂದನು. ಆಗ ಅಮ್ಮ ‘ಇವನು ನಾಳೆದಿನ ಅತ್ತೇನೇ ಚೆನ್ನಾಗಿದಾರೆ ಅಂತ ನನ್ನನ್ನೇ ಕೇಳಿಯಾನು’ ಎಂದು ಬೈದು ಓಡಿಸಿದ್ದರು. ಇದೆಲ್ಲ ದೊಡ್ಡಕ್ಕಲ್ಲಿ ತಳಮಳ ಹುಟ್ಟಿಸಿರಬಹುದು. ನಿಜವಾದ ಕಾರಣ, ಅಮ್ಮ ಬದುಕಿರುವಾಗಲೇ ದೊಡ್ಡಕ್ಕನಿಗೆ ಮದುವೆ ಆಗಿತ್ತು. ಅಮ್ಮನ ತಿಥಿಗೆ ಜನ ಸೇರಿದ್ದ ಬಂಧುಗಳ ಸಮ್ಮುಖದಲ್ಲಿ ಸಣ್ಣಕ್ಕನ ಲಗ್ನ ಚುಟುಕಾಗಿ ಮುಗಿಸಲಾಯಿತು. ಇದರಲ್ಲಿ ದೊಡ್ಡಕ್ಕನ ಫಿತೂರಿ ಇತ್ತೆಂದು ಸಣ್ಣವಳ ಶಂಕೆ. ಈಕೆ ತನ್ನ ಮದುವೆಯನ್ನು ದೊಡ್ಡಕ್ಕನ ಸಡಗರದ ಮದುವೆಯ ಜತೆಯಿಟ್ಟು ತೌಲನಿಕ ಅಧ್ಯಯನ ನಡೆಸುತ್ತಾಳೆ. ‘ಅಮ್ಮ ಇರುವ ತನಕ ಇವಳೂ ಇವಳ ಗಂಡನೂ ಮಕ್ಕಳೂ ಎಲ್ಲವನ್ನೂ ಪೂರೈಸಿಕೊಂಡರು, ನನಗೇ ಅನ್ಯಾಯವಾಗಿದ್ದು’ ಎಂದು ಸದಾ ಗೊಣಗಾಡುತ್ತಾಳೆ.
‘ನೋಡುನೋಡು, ಹೋದ್ಕಡೆ ಎಲ್ಲ ಹೆಂಗೆ ತನ್ನದೇ ನೋಡ್ಕೊತಾಳೆ. ಮಾಂಸದ ತುಂಡೆಲ್ಲ ತನಗೂ ತನ್ನ ಮಕ್ಕಳಿಗೂ ಗಂಡನಿಗೂ ಬಡಸ್ಕೊಳ್ಳೋದು ನೋಡು. ಹೊಟ್ಟೆಬಾಕಿ. ಇನ್ನೊಬ್ಬರಿಗಿದೆಯೇ ಇಲ್ಲವೇ ಗಮನಿಸೋಲ್ಲ. ಸಣ್ಣಬುದ್ಧಿ’- ಇದು ದೊಡ್ಡಕ್ಕ ವಿಡಂಬನೆ. ಚಿಕ್ಕಕ್ಕನ ಆರೋಪಗಳು ಬೇರೆಯಿವೆ. ‘‘ಯಾವಾಗಲೂ ತನ್ನ ಮಕ್ಕಳ ಕಷ್ಟವನ್ನೇ ಹೇಳ್ಕೊಂಡು ಸುಲಿಗೆ ಮಾಡಿದಳು. ಅವಳ ಗಂಡುಮಕ್ಕಳು ವ್ಯಾಪಾರದಲ್ಲಿ ಲಕ್ಷಾಂತರ ದುಡೀತಿದಾರೆ. ಕಾರ್ ತಗೊಂಡಿದಾರೆ. ಅವಳಿಗೇನಾಗಿದೆ? ತಮ್ಮಂದಿರನ್ನು ನೋಡಿದ ಕೂಡಲೆ ಕಾಯಿಲೆ ಬಂದಂಗೆ ನರಳ್ತಾಳೆ. ಅತ್ತು ಕರಗಿಸಿಬಿಡ್ತಾಳೆ. ಎಲ್ಲಾ ನಾಟಕ’ ಇತ್ಯಾದಿ.

ಇಬ್ಬರಲ್ಲಿ ಯಾರಿಗಾದರೂ ನಾವು ತಮ್ಮಂದಿರು ಒಂದು ಚಿಟಿಕೆ ಉಪ್ಪು ಕೊಟ್ಟರೂ ಮತ್ತೊಬ್ಬಳಿಗೆ ಹೇಗೊ ಪತ್ತೆಯಾಗುತ್ತದೆ. ಇವರ ಸ್ಪರ್ಧೆ ಅಸೂಯೆ ಚೌಕಾಸಿಯನ್ನು ತಪ್ಪಿಸಲು ಅಪ್ಪ ಒಂದು ಉಪಾಯ ಮಾಡಿದ್ದನು. ಇಬ್ಬರಿಗೂ ಒಂದೊಂದು ಹಸು ಬಳುವಳಿ ಕೊಟ್ಟಿದ್ದನು. ಅವು ಕಾಲಕ್ರಮೇಣ ಹಿಂಡು ದನಗಳಿಗೆ ಕಾರಣವಾದವು. ಅಪ್ಪ ತೆಂಗಿನತೋಟದಲ್ಲಿ ದಪ್ಪಕಾಯಿ ಬಿಡುವ ಎರಡು ಮರಗಳನ್ನು ಇಬ್ಬರಿಗೆ ಮೀಸಲಾಗಿಟ್ಟಿದ್ದನು. ನಾವು ಅವನ್ನು ‘ಅಕ್ಕತಂಗಿಯರ ಮರಗಳು’ ಎಂದು ನಾಮಕರಣ ಮಾಡಿದ್ದೆವು. ಇಬ್ಬರೂ ತವರಿಗೆ ಆಕ್ರಮಣ ಮಾಡಿದಾಗ, ಅವುಗಳಲ್ಲಿ ಬಿಡುವ ಕಾಯಿ ಎಳೆನೀರು ಕುಸುರು ಕುರುಂಬಾಳೆ ಗರಿಯನ್ನೂ ಬಿಡದೆ ಎಲ್ಲವನ್ನೂ ಕೆಡವಿಕೊಂಡು ಒಯ್ಯುತ್ತಿದ್ದರು. ನಾವು ಹಬ್ಬಗಳಲ್ಲಿ ಸೀರೆ ಕೊಡಿಸಿದರೆ, ಇಬ್ಬರೂ ತಮಗೆ ಬಂದಿರುವ ಸೀರೆಯ ಬಣ್ಣ ಬೂಟಾ ಸೆರಗು ಅಂಚುಗಳ ಗುಣಮಟ್ಟದಲ್ಲಿ ಏನಾದರೂ ವ್ಯತ್ಯಾಸವಿದೆಯೇ ಎಂದು ಪರಿಶೀಲಿಸಿಕೊಳ್ಳುವರು. ಅವಳ ಸೀರೆ ಕಲ್ಲರೇ ಚೆನ್ನಾಗಿದೆ ಎಂದು ಮರುಗುವರು. ನಗದು ಕೊಟ್ಟರೆ ಅದು ಸರ್ವರಿಗೂ ಸಮಪಾಲು ಬಂದಿದೆಯೇ ಎಂದು ಕ್ರಾಸ್ಚೆಕ್ ಮಾಡಿಕೊಳ್ಳುವರು.

ಆದರೆ ಇಬ್ಬರೂ ಅಕ್ಕಂದಿರಿಗೆ ತಮ್ಮಂದಿರು ಲಚ್ಚರು ಪ್ರೊಫೆಸರು, ಅವರ ಮಕ್ಕಳು ಡಾಕ್ಟರು ಇಂಜಿನಿಯರು ಆಗಿದ್ದಾರೆಂದು ಇನ್ನಿಲ್ಲದ ಹೆಮ್ಮೆ. ನಾವೇನಾದರೂ ಸಣ್ಣ ಕೊಡುಗೆ ಕೊಟ್ಟರೆ, ಅದನ್ನು ಊರಿಗೆಲ್ಲ ತೋರಿಸಿಕೊಂಡು ಬರುತ್ತಾರೆ. ನಾವು ಮನೆಗೆ ಹೋದರೆ, ‘ನಮ್ಮ ತಮ್ಮಂದಿರು ಭಾಳ ಸಿಂಪಲ್. ಅವರೂ ಅವರ ಮಕ್ಕಳೂ ಈಚಲುಚಾಪೆಯ ಮೇಲೆ ಮಲಕ್ಕೋತಾರೆ. ಹಳೇಕೌದಿ ಹೊದ್ದುಕೊಳ್ತಾರೆ. ಮುದ್ದೆ-ಸೊಪ್ಪಿನಸಾರು ತಿಂತಾರೆ, ಚೂರೂ ಜಂಬಯಿಲ್ಲ’ ಎಂದು ಬೀದಿಯಲ್ಲಿ ಕೊಚ್ಚಿಕೊಳ್ಳುತ್ತಾರೆ. ಇಬ್ಬರೂ ಅಮ್ಮನಿಂದ ಬೈಸಿಕೊಂಡು ಪೆಟ್ಟುತಿಂದು ರುಚಿಕರವಾದ ಅಡುಗೆ ಮಾಡುವ ಪಾಕಪ್ರವೀಣರು. ನಾವು ಅವರ ಮನೆಗಳಿಗೆ ಹೋದರೆ, ಅಮ್ಮನ ಕಾಲದ ಸಾರುಗಳನ್ನು ಮಾಡಿಸಿಕೊಂಡು ತಿನ್ನುತ್ತೇವೆ. ಊಟ ಮುಗಿದ ನಂತರ ಒಬ್ಬಳು ಇನ್ನೊಬ್ಬಳ ಮೇಲೆ ಹೇಳುವ ಇತ್ತೀಚಿನ ಆಕ್ಷೇಪಣ ವರದಿಗಳನ್ನು ಆಲಿಸುತ್ತೇವೆ. ಇಬ್ಬರನ್ನೂ ಒಂದುಗೂಡಿಸುವ ಶೃಂಗಸಭೆಗಳನ್ನು ಏರ್ಪಡಿಸುತ್ತೇವೆ. ಸಂಧಾನ ಕಾರ್ಯಕ್ರಮದ ನಿಮಿತ್ತ ಏರ್ಪಡುವ ಔತಣದಲ್ಲಿ ಅನ್ಯೋನ್ಯವಾಗಿರುವ ಅವರು, ಕಾರ್ಯಕ್ರಮ ಮುಗಿದೊಡನೆ ಯಥಾಪ್ರಕಾರ ತಿರಸಟ್ಟಿಗಳು. ರಷ್ಯ ಅಮೆರಿಕಾದ ಶೀತಲ ಯುದ್ಧ ಈ ಶತಮಾನಕ್ಕೆ ಮುಗಿಯದು.

ನಾವು ಸಂದರ್ಭ ನೋಡಿಕೊಂಡು ಪಾಂಡವರ ಇಲ್ಲವೇ ಕೌರವರ ಪಕ್ಷಪಾತಿ ಆಗುತ್ತ ಬಂದಿದ್ದೇವೆ. ಎಷ್ಟೆಂದರೂ ಅವರ ಬೆನ್ನಹಿಂದೆ ಬಿದ್ದವರು. ಅವರು ಕುಡಿದ ಬಿಟ್ಟ ಹಾಲನ್ನು ಕುಡಿದವರು. ಬಂಧ ಹರಿಯಲಾಗದು. ಕಟ್ಟು ಕಡಿಯಲಾರದು.
ನಾನು ಎಸೆಲ್ಸಿಯಲ್ಲಿರುವಾಗ ನಮ್ಮೂರಿಗೆ ಬಂದಿದ್ದ ಎಕ್ಸಿಬಿಶನಿನಲ್ಲಿ, ತಾಜಮಹಲಿನ ಮುಂದೆ ಎರಡು ರೂಪಾಯಿಗೆ ಫೊಟೊ ತೆಗೆಸಿಕೊಂಡಿದ್ದೆ. ಅದರಲ್ಲಿ ಇಬ್ಬರೂ ಕೂತಿದ್ದಾರೆ. ಹಿಂದೆ ಬಿದಿರಗಳು ನೆಟ್ಟಂತೆ ನಾನು ನಿಂತಿರುವೆ. ಅದರಲ್ಲಿ ದೊಡ್ಡಕ್ಕನ ಮುಖದಲ್ಲಿ ಗಂಡನಮನೆಯ ಕಷ್ಟದಿಂದಾದ ಬಳಲಿಕೆ ಕಾಣುವುದು. ಚಿಕ್ಕವಳು ಯೌವನ ಸಹಜ ಆರೋಗ್ಯದಿಂದ ಇದ್ದಾಳೆ. ಈಗಲೂ ಹೀಗೆ. ದೊಡ್ಡವಳಿಗೆ ಹೃದಯದ ಆಪರೇಶನ್ನಾಗಿದೆ. ಸಕ್ಕರೆ ಕಾಯಿಲೆಯಿಂದ ಸುಸ್ತಾಗಿದ್ದಾಳೆ. ಚಿಕ್ಕವಳು ವಯಸ್ಸೇ ಆಗದಂತೆ ಗಟ್ಟಿಮುಟ್ಟಾಗಿದ್ದಾಳೆ. ಯಾವುದೇ ಕಾಯಿಲೆಯಿಲ್ಲ. ಇವರಲ್ಲಿ ಯಾರಾದರೂ ಒಬ್ಬರು ಕಣ್ಮರೆಯಾದರೂ ನಮಗೆ ಒಂದು ಕಣ್ಣುಹೋದಂತೆ. ನಾನು ನನ್ನ ‘ಅಮೀರಬಾಯಿ ಕರ್ನಾಟಕಿ’ ಪುಸ್ತಕವನ್ನು ಇಬ್ಬರಿಗೂ ಅರ್ಪಿಸಿದೆ. ಸೋದರಿಯರಾಗಿ ಅಮೀರಬಾಯಿ-ಗೋಹರಬಾಯಿ ಕೂಡ ಭಯಂಕರ ಜಗಳವಾಡಿಕೊಳ್ಳುತ್ತಿದ್ದರಂತೆ. ಆದರೆ ಒಬ್ಬರನ್ನು ಬಿಟ್ಟು ಇನ್ನೊಬ್ಬರು ಇರುತ್ತಿರಲಿಲ್ಲವಂತೆ.

 

andolana

Recent Posts

ಮನೆ ದೇವರ ದರ್ಶನ ಪಡೆದ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ

ಹಾಸನ: ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ತಮ್ಮ ತವರು ಜಿಲ್ಲೆಗೆ ಆಗಮಿಸಿದ್ದು, ಮನೆ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದ್ದಾರೆ.…

12 mins ago

ಡಿ.24ಕ್ಕೆ ಮಧು ಜಿ.ಮಾದೇಗೌಡ ಷಷ್ಟ್ಯಬ್ಧಿ ಸಮಾರಂಭ

ಮಂಡ್ಯ: ಮಧು ಜಿ.ಮಾದೇಗೌಡ ಅವರ ಅಭಿಮಾನಿಗಳ ಬಳಗದ ವತಿಯಿಂದ ವಿಧಾನ ಪರಿಷತ್ ಸದಸ್ಯ ಹಾಗೂ ಭಾರತಿ ಎಜುಕೇಷನ್ ಟ್ರಸ್ಟ್‌ನ ಅಧ್ಯಕ್ಷ…

30 mins ago

ಮಕ್ಕಳು ಪಠ್ಯಕ್ಕೆ ಸೀಮಿತವಾಗದಿರಲಿ : ಕೆ.ಎಂ ಗಾಯಿತ್ರಿ

ಮೈಸೂರು: ಮಕ್ಕಳು ಕೇವಲ ಪಠ್ಯ ಕ್ರಮಕ್ಕೆ ಮಾತ್ರ ಸೀಮಿತವಾಗದೆ, ತಮ್ಮಲ್ಲಿರುವಂತಹ ಪ್ರತಿಭೆಗಳನ್ನು ಅನಾವರಣಗೊಳಿಸಬೇಕು ಎಂದು ಜಿಲ್ಲಾ ಪಂಚಾಯತ್  ಮುಖ್ಯ ಕಾರ್ಯನಿರ್ವಾಹಕ…

40 mins ago

ಕೆಎಎಸ್‌ ಮರು ಪರೀಕ್ಷೆ | ಕೆಪಿಎಸ್‌ಸಿ ಬೇಜವಾಬ್ದಾರಿ ತೋರಿದರೆ ಹೋರಾಟದ ಎಚ್ಚರಿಕೆ ನೀಡಿದ ವಿಜಯೇಂದ್ರ

ಬೆಂಗಳೂರು: ಕೆಪಿಎಸ್‌ಸಿ ವತಿಯಿಂದ ಇದೇ ಡಿಸೆಂಬರ್‌ 29ಕ್ಕೆ ಕೆಎಎಸ್‌ ಮರು ಪರೀಕ್ಷೆ ನಡೆಯುತ್ತಿದ್ದು, ಮತ್ತೆ ಈ ಪರೀಕ್ಷೆಯಲ್ಲಿ ಮತ್ತೆ ಬೇಜವಾಬ್ದಾರಿತನ…

53 mins ago

ಮೈಸೂರು: ಅಂಬೇಡ್ಕರ್‌, ಬಾಬು ಜಗಜೀವನರಾಂ ಪ್ರತಿಮೆ ಅನಾವರಣ

ಮೈಸೂರು: ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಇಂದು(ಡಿ.23) ಮೈಸೂರಿನ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರ…

1 hour ago

ಸಿಲಿಂಡರ್‌ ಸ್ಫೋಟ : 9 ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಗಂಭೀರ

ಹುಬ್ಬಳ್ಳಿ : ಸಿಲಿಂಡರ್‌ ಸ್ಫೋಟಗೊಂಡ ಪರಿಣಾಮ 9 ಮಂದಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ತಡರಾತ್ರಿ ಹುಬ್ಬಳ್ಳಿಯಲ್ಲಿ…

1 hour ago