ಎಡಿಟೋರಿಯಲ್

ಕಳಚುತ್ತಿದೆ ರಾಜಕಾರಣಿಗಳ ಸಭ್ಯತೆಯ ಸೋಗಿನ ಮುಖವಾಡ

ನುಡಿದರೆ ಮುತ್ತಿನ ಹಾರದಂತಿರಬೇಕು

ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು

ನುಡಿದರೆ ಸಟಿಕದ ಸಲಾಕೆಯಂತಿರಬೇಕು

ನುಡಿದರೆ ಲಿಂಗಮೆಚ್ಚಿ ಅಹುದಹುದೆನಬೇಕು

ನುಡಿಯೊಳಗಾಗಿ ನಡೆಯದಿದ್ದರೆ

ಕೂಡಲಸಂಗಮದೇವನೆಂತೊಲಿವನಯ್ಯಾ

-ಬಸವಣ್ಣ

ಸ್ವಜನ ಪಕ್ಷಪಾತ, ಹಗರಣ, ಭ್ರಷ್ಟಾಚಾರ, ಕುಟುಂಬ ರಾಜಕಾರಣ, ರೌಡಿಸಂ, ಹೆಣ್ಣುಬಾಕತನ, ಅಧಿಕಾರಿಗಳ ಮೇಲೆ ಒತ್ತಡ ಹೇರಿ ತಮ್ಮ ತಮ್ಮ ಹಿಂಬಾಲಕರ ಮೂಲಕ ಕಾನೂನು ಬಾಹಿರ ಕೆಲಸ ಮಾಡಿಸಿ ಕೊಳ್ಳುವುದು ರಾಜಕಾರಣದ ಮಟ್ಟಿಗೆ ಹೊಸದೇನೂ ಅಲ್ಲ. ಪ್ರಜಾಪ್ರಭುತ್ವದ ಆರಂಭದ ದಿನಗಳಿಂದಲೂ ಆಳುವವರ ದೌರ್ಬಲ್ಯ ಹುಡುಕಿ, ಬ್ಲ್ಯಾಕ್‌ಮೇಲ್ ಮಾಡಿ ತಮ್ಮ ತಾಳಕ್ಕೆ ತಕ್ಕಂತೆ ಕುಣಿಸಿ ಕಾರ್ಯ ಸಾಧನೆ ಮಾಡಿಕೊಳ್ಳುವುದು ನಡೆದೇ ಇದೆ.

ಆದರೆ, ರಾಜಕಾರಣಿಗಳ ಈ ಎಲ್ಲ ವರ್ತನೆಗಳು ಬಹಿರಂಗವಾಗಿ ತೆರೆಯ ಮೇಲೆ ಕಾಣಿಸಿಕೊಳ್ಳದೆ ತೆರೆಯ ಮರೆಯಲ್ಲಿ ನಡೆಯುತ್ತಿದ್ದರಿಂದ ರಾಜಕಾರಣಿಗಳು ಮತ್ತು ಅವರ ಹಿಂಬಾಲಕರ ಈ ಆಟಗಳು ಆಡಳಿತದ ಪಡಸಾಲೆಯಿಂದ ಆಚೆ ಕಾಣಿಸಿಕೊಳ್ಳದೆ ರಾಜಕೀಯ ನಾಯಕರುಗಳ ಮೇಲೆ ಗೌರವ ಭಾವನೆ ಉಳಿದುಕೊಂಡಿತ್ತು.

೧೯೭೦-೮೦ರ ದಶಕದವರೆಗೂ ಸ್ಟುಡಿಯೋಗಳಲ್ಲಿ ಸೆಟ್ ಹಾಕಿ ಸಿನಿಮಾ ಚಿತ್ರೀಕರಣ ಮಾಡುತ್ತಿದ್ದರಿಂದ ಚಿತ್ರ ತೆರೆಗೆ ಬಂದಾಗ ಜನ ಕುತೂಹಲದಿಂದ ಚಿತ್ರಮಂದಿರಗಳಿಗೆ ಹೋಗಿ ಸಿನಿಮಾ ನೋಡುತ್ತಿದ್ದರು. ಆದರೀಗ ಒಳಾಂಗಣ ಕ್ಕಿಂತ ಹೊರಾಂಗಣ ಚಿತ್ರೀಕರಣವೇ ಹೆಚ್ಚಾಗಿರುವುದರಿಂದ ಜನರಿಗೆ ಸಿನಿಮಾದ ಬಗೆಗಿನ ಕುತೂಹಲ ಉಳಿಯದೇ ಅದ್ಧೂರಿ ಪ್ರಚಾರದೊಂದಿಗೆ ತೆರೆಕಂಡ ಸಿನಿಮಾ ಪ್ರೇಕ್ಷಕರಿಲ್ಲದೆ ಒಂದೆರಡು ದಿನಗಳಲ್ಲೇ ಚಿತ್ರಮಂದಿರಗಳಿಂದ ಎತ್ತಂಗಡಿಯಾಗುವುದನ್ನು ಕಾಣ ಬಹುದು. ರಾಜಕಾರಣದ ಕತೆಯೂ ಇದಕ್ಕೆ ಹೊರತಾಗಿಲ್ಲ. ಹಿಂದೆಲ್ಲಾ ರಾಜಕಾರಣಕ್ಕೆ ಬರುವವರು ಪ್ರಾಮಾಣಿಕ ಕಳಕಳಿಯಿಂದ ಸಮಾಜದ ಸೇವೆ ಮಾಡಲು ಬರುತ್ತಿದ್ದರು. ಹೀಗಾಗಿ ಕಣದಲ್ಲಿರುವ ಉತ್ತಮರಲ್ಲಿ ಅತ್ಯುತ್ತ ಮರು ಯಾರು ಎಂಬ ಆಯ್ಕೆಯ ಸವಾಲು ಸಮಾಜದ ಮೇಲಿರುತ್ತಿತ್ತು.

ಅಂದಿನ ಅಭ್ಯರ್ಥಿಗಳ ಚುನಾವಣಾ ಖರ್ಚಿಗೆ ಸಮಾಜವೇ ಹಣ ಹೊಂದಿಸಿ ಕೊಡುವ ಪರಿಪಾಠವಿತ್ತು. ಆದರೆ, ಇಂದಿನ ರಾಜಕಾರಣದಲ್ಲಿ ಸಮಾಜ ಸೇವೆ ಗೌಣವಾಗಿ ಚುನಾವಣೆ ಎಂದರೆ ‘ಹಣ ಬಿತ್ತಿ ಬೆಳೆಯುವ’ ಪರಿಸ್ಥಿತಿಗೆ ತಂದು ನಿಲ್ಲಿಸಿಕೊಂಡಿದ್ದೇವೆ. ಗಣಿ, ರಿಯಲ್ ಎಸ್ಟೇಟ್ ಉದ್ದಿಮೆದಾರರು ತಮ್ಮ ಉದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ರಾಜಕಾರಣಕ್ಕೆ ಬರುತ್ತಿರುವುದರಿಂದ ಹಣಬಲ, ತೋಳ್ಬಲ, ಜಾತಿಯ ಬಲದ ಮಧ್ಯೆ ಜನರ ಕಷ್ಟ-ಸುಖ ವಿಚಾರಿಸುವ, ನಾಡಿನ ಅಭಿವೃದ್ಧಿ ಬಗ್ಗೆ ಚಿಂತಿಸುವ ಜನ ನಾಯಕರು ರೂಪುಗೊಳ್ಳುತ್ತಿಲ್ಲ. ಶಾಸನ ಸಭೆಗಳಲ್ಲಿ ಹಿಂದಿನವರು ಅಳೆದು-ತೂಗಿ ಮಾತನಾಡಿದರೆ, ಇಂದು ಯಾವುದೇ ವಿಷಯಗಳ ಮೇಲೆ ಗಂಭೀರ ಚರ್ಚೆ ಗಳಾಗದೆ, ತನ್ನೆದುರು ಕುಳಿತ ಮತ್ತೊಬ್ಬ ಜನಪ್ರತಿನಿಧಿಯನ್ನು ಏಕವಚನದಲ್ಲಿ, ಅಶ್ಲೀಲ ಪದ ಪ್ರಯೋಗ ಮಾಡಿ ನಿಂದಿಸುವ, ತೋಳೇರಿಸಿ, ತೊಡೆತಟ್ಟಿ ಮೇಲೆರಗುವ ಅಸಭ್ಯ ವರ್ತನೆಗಳನ್ನು ಇತ್ತೀಚಿನ ವರ್ಷಗಳಲ್ಲಿ ಕಾಣುವಂತಾಗಿದೆ.

ರಾಜಕಾರಣದಲ್ಲಿ ನಾಯಕರೆನಿಸಿಕೊಂಡವರು ತೋರುತ್ತಿರುವ ಈ ವರ್ತನೆಯನ್ನೇ ಅವರ ಹಿಂಬಾಲಕರೂ ಸಮಾಜದ ಮೇಲೆ ಅದರಲ್ಲೂ ಅಧಿಕಾರಿಗಳ ಮೇಲೆ ಪ್ರಯೋಗಿಸಿ ಕಾರ್ಯಸಾಧನೆ ಮಾಡಿಕೊಳ್ಳುತ್ತಿದ್ದಾರೆ. ಶಿಡ್ಲಘಟ್ಟದಲ್ಲಿ ಸಚಿವರೊಬ್ಬರ ಪುತ್ರ ನಾಯಕ ನಟನಾಗಿ ಅಭಿನಯಿಸಿರುವ ಸಿನಿಮಾ ಪ್ರಮೋಷನ್‌ಗಾಗಿ ಸ್ಥಳೀಯ ಪುರಸಭೆಯ ಅನುಮತಿಯನ್ನೇ ಪಡೆಯದೆ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗುವಂತೆ ಕಟ್ಟಿದ್ದ ಫ್ಲೆಕ್ಸ್ ತೆರವುಗೊಳಿಸಿದ ಕಾರಣಕ್ಕೆ ಅಲ್ಲಿನ ಮುಖ್ಯಾಧಿಕಾರಿಯ ಮೇಲೆ ಅದರಲ್ಲೂ ಆಕೆ ಮಹಿಳೆ ಎಂಬುದನ್ನೂ ಕಾಣದೆ ಆ ಕ್ಷೇತ್ರದ ಪರಾಜಿತ ಅಭ್ಯರ್ಥಿ ವಾಚಾಮಗೋಚರವಾಗಿ ಬೈದು, ಜೀವ ಬೆದರಿಕೆ ಒಡ್ಡುವ ಮಟ್ಟಕ್ಕೆ ಇಳಿಯುವುದು ಆತನ ಅರಿವುಗೇಡಿತನವನ್ನು ತೋರುತ್ತದೆ. ಘಟನೆಯ ಬಳಿಕ ಕನಿಷ್ಠ ಸೌಜನ್ಯಕ್ಕಾದರೂ ನೊಂದ ಮಹಿಳಾ ಅಧಿಕಾರಿಗೆ ವೈಯಕ್ತಿಕವಾಗಿ ಕ್ಷಮೆ ಕೋರಿ ಪ್ರಕರಣವನ್ನು ಅಲ್ಲಿಗೆ ಮುಕ್ತಾಯಗೊಳಿಸುವ ಬದಲಿಗೆ, ತಾನಾಡಿದ್ದೇ ಸರಿ, ತನ್ನ ಮಾತಿನಿಂದ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುವುದಾಗಿ ಹೇಳಿಕೆ ನೀಡುವುದು ಧಾರ್ಷ್ಟ್ಯತನವು ರಾಜ್ಯವನ್ನು ಆಳುವ ಪಕ್ಷ ನಮ್ಮದು ಎಂಬ ಅಧಿಕಾರದ ಮದವಲ್ಲದೇ ಮತ್ತೇನು? ಮುಖ್ಯಾಧಿಕಾರಿ ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಾಗಿ ಮೂರ‍್ನಾಲ್ಕು ದಿನ ಕಳೆದರೂ ನಮ್ಮ ಪೊಲೀಸ್ ವ್ಯವಸ್ಥೆ ಆರೋಪಿಯನ್ನು ಬಂಧಿಸುವ ದುಸ್ಸಾಹಸಕ್ಕೆ ಕೈಹಾಕುವುದಿಲ್ಲ. ಬದಲಿಗೆ ಆತ ನಿರೀಕ್ಷಣಾ ಜಾಮೀನು ಪಡೆದು ಹೊರಬಂದ ಬಳಿಕ ನಡೆಯುವ ಭಾಜಭಜಂತ್ರಿ ಮೆರ ವಣಿಗೆಯ ಬಂದೋ ಬಸ್ತ್‌ಗೆ ಟೊಂಕಕಟ್ಟಿ ನಿಲ್ಲುತ್ತದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವಕ್ಷೇತ್ರ ವರುಣದ ಗುಡಮಾದನಹಳ್ಳಿಯಲ್ಲಿ ಉದ್ದೇಶಿತ ‘ನಿಮ್ಹಾನ್ಸ್’ ಮಾದರಿ ಆಸ್ಪತ್ರೆ ನಿರ್ಮಾಣಕ್ಕಾಗಿ ಸರ್ಕಾರಿ ಭೂಮಿ ಒತ್ತುವರಿ ತೆರವಿಗೆ ಮುಂದಾದ ಮಹಿಳಾ ಅಧಿಕಾರಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆಗೆ ಯತ್ನಿಸಿ, ಕೊಲೆ ಬೆದರಿಕೆಯನ್ನೂ ಹಾಕಲಾಗಿದೆ. ಈ ಸಂಬಂಧ ದೂರು ದಾಖಲಾಗಿದೆ.

ಮೊನ್ನೆ ಶಿಡ್ಲಘಟ್ಟ, ನಿನ್ನೆ ಸಿಎಂ ಸ್ವಕ್ಷೇತ್ರ ಹೀಗೆ ಅಲ್ಲೊಂದು ಇಲ್ಲೊಂದು ಪ್ರಕರಣಗಳಾಗುತ್ತಿವೆ ಎಂಬುದಕ್ಕಿಂತಲೂ ಅಧಿಕಾರಿಗಳಿಗೆ ಕಾನೂನುಬದ್ಧವಾಗಿ ಕೆಲಸ ಮಾಡಲು ಬಿಡದ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದು ಗಮನಿಸ ಬೇಕಾದ ಸಂಗತಿ. ಸರ್ಕಾರಿ ನೌಕರರ ಹಿತಕಾಯಬೇಕಾದ ನೌಕರರ ಸಂಘ ಕೂಡ ಆಳುವವರ ಮರ್ಜಿಗೆ ಒಳಗಾಗಿ ಘಟನೆಯ ಬಗ್ಗೆ ಪ್ರಬಲ ಧ್ವನಿ ಎತ್ತದಿರುವುದು ದುರಂತವೇ ಸರಿ.

ರಾಜಕೀಯ ನಾಯಕರ ಹಿಂಬಾಲಕರುಗಳಾದ ನಾವು ಏನು ಮಾಡಿದರೂ ನಮ್ಮ ಬೆಂಬಲಕ್ಕೆ ನಮ್ಮ ನಾಯಕರು ಇದ್ದಾರೆ ಎಂಬ ಅಹಂನ ಮನಸ್ಥಿತಿ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತಿದೆ. ತಂತ್ರಜ್ಞಾನ ಬೆಳೆದಂತೆಲ್ಲ ಏಕಾಂತವಾಗಿ ಆಡುವ ಮಾತುಗಳೂ ಬಹಿರಂಗಗೊಳ್ಳುತ್ತಾ ರಾಜಕಾರಣಿಗಳ ಸಭ್ಯತೆಯ ಸೋಗಿನ ಮುಖವಾಡವನ್ನು ಕಳಚುತ್ತಿದೆ.

ತಾವು ಧರಿಸುವ ಶ್ವೇತವಸದಂತೆಯೇ ತಮ್ಮ ಚಾರಿತ್ರ್ಯ, ನಡೆ-ನುಡಿ ಇರಬೇಕೆಂದು ಸಮಾಜ ಬಯಸುತ್ತದೆ. ಸಂಸ್ಕೃತಿಹೀನ ನಡವಳಿಕೆಯನ್ನು ಸಮಾಜ ಒಪ್ಪುವುದಿಲ್ಲ ಎನ್ನುವ ಅರಿವು ಇಂದಿನ ರಾಜಕಾರಣಿಗಳಿಗೆ ಬರಬೇಕಿದೆ.

” ರಾಜಕೀಯ ನಾಯಕರ ಹಿಂಬಾಲಕರುಗಳಾದ ನಾವು ಏನು ಮಾಡಿದರೂ ನಮ್ಮ ಬೆಂಬಲಕ್ಕೆ ನಮ್ಮ ನಾಯಕರು ಇದ್ದಾರೆ ಎಂಬ ಅಹಂನ ಮನಸ್ಥಿತಿ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತಿದೆ. ತಂತ್ರಜ್ಞಾನ ಬೆಳೆದಂತೆಲ್ಲ ಏಕಾಂತವಾಗಿ ಆಡುವ ಮಾತುಗಳೂ ಬಹಿರಂಗಗೊಳ್ಳುತ್ತಾ ರಾಜಕಾರಣಿಗಳ ಸಭ್ಯತೆಯ ಸೋಗಿನ ಮುಖವಾಡವನ್ನು ಕಳಚುತ್ತಿದೆ.”

 

 

 

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ಹನೂರು| ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆದಿವಾಸಿ ಸಮುದಾಯದಿಂದ ಪ್ರತಿಭಟನೆ: ಕಾರಣ ಇಷ್ಟೇ

ಮಹಾದೇಶ್‌ ಎಂ ಗೌಡ, ಹನೂರು ತಾಲ್ಲೂಕು ವರದಿಗಾರರು  ಹನೂರು: ಗುಂಡ್ಲುಪೇಟೆ ತಾಲೂಕಿನ ನಂಜದೇವನಪುರ ಗ್ರಾಮ ಸುತ್ತಮುತ್ತಲು ಬೀಡುಬಿಟ್ಟಿದ್ದ ಎರಡು ಹುಲಿ…

29 mins ago

ಹುಣಸೂರಿನಲ್ಲಿ ಚಿನ್ನ ದೋಚಿದ್ದ ಪ್ರಕರಣ: ಬಿಹಾರದಲ್ಲಿ ಖದೀಮರು ಅರೆಸ್ಟ್‌

ಹುಣಸೂರು: ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಆಭರಣ ಮಳಿಗೆಯೊಂದರಲ್ಲಿ ಡಿಸೆಂಬರ್.‌28ರಂದು ನಡೆದ 10 ಕೋಟಿ ಮೌಲ್ಯದ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ…

42 mins ago

ಅಣ್ಣನಿಗೆ ದೆಹಲಿಯಿಂದ ಒಳ್ಳೆಯ ಸುದ್ದಿ ಸಿಗುತ್ತದೆ: ಮಾಜಿ ಸಂಸದ ಡಿ.ಕೆ.ಸುರೇಶ್

ಬೆಂಗಳೂರು: ಅಣ್ಣ ಡಿ.ಕೆ.ಶಿವಕುಮಾರ್‌ ಅವರಿಗೆ ದೆಹಲಿಯಿಂದ ಒಳ್ಳೆಯ ಸುದ್ದಿ ಸಿಗುತ್ತದೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಡಿಸಿಎಂ…

57 mins ago

ದಾವಣಗೆರೆ ಕಿರು ಮೃಗಾಲಯದಲ್ಲಿ ದುರಂತ: ನಾಲ್ಕು ಚುಕ್ಕೆ ಜಿಂಕೆಗಳು ಸಾವು

ದಾವಣಗೆರೆ: ಕೆಲ ದಿನಗಳ ಹಿಂದೆ ಬೆಳಗಾವಿ ಜಿಲ್ಲೆಯ ಕಿತ್ತೂರು ಕಿರು ಮೃಗಾಲಯದಲ್ಲಿ 28 ಕೃಷ್ಣ ಮೃಗಗಳು ಮೃತಪಟ್ಟಿರುವ ಘಟನೆ ನಡೆದ…

2 hours ago

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ: ಕೈ ವರಿಷ್ಠರಿಗೆ ಧರ್ಮ ಸಂಕಟ ತಂದಿಟ್ಟ ರಾಜ್ಯ ರಾಜಕಾರಣ

ಬೆಂಗಳೂರು ಡೈರಿ ಆರ್.ಟಿ.ವಿಠ್ಠಲಮೂರ್ತಿ  ಮುಖ್ಯಮಂತ್ರಿಯನ್ನು ಬದಲಿಸಿದರೆ ಅಹಿಂದ ಮತ ಬ್ಯಾಂಕ್ ಕುಸಿಯುವ ಭೀತಿ ಕರ್ನಾಟಕದ ರಾಜಕಾರಣಕ್ಕೆ ಸಂಬಂಧಿಸಿದಂತೆ ದಿಲ್ಲಿಯ ಕಾಂಗ್ರೆಸ್ ವರಿಷ್ಠರು…

5 hours ago

ಮಡಿಕೇರಿಯಲ್ಲಿ ಕುಡಿಯುವ ನೀರಿಗಿಲ್ಲ ಆತಂಕ

ನವೀನ್ ಡಿಸೋಜ ನಗರಕ್ಕೆ ನೀರು ಸರಬರಾಜಾಗುವ ಎಲ್ಲ ಮೂಲಗಳಲ್ಲೂ ನೀರು ಸಮೃದ್ಧ; ಅಗತ್ಯ ಮುನ್ನೆಚ್ಚರಿಕೆ ಕ್ರಮ ಮಡಿಕೇರಿ: ಕಳೆದ ಸಾಲಿನಲ್ಲಿ…

5 hours ago