ಎಡಿಟೋರಿಯಲ್

ಅಕ್ರಮಗಳ ‘ಚಿಲುಮೆ’ಯೂ ‘ಗಡಿ’ ವಿವಾದದ ಪರದೆಯೂ

 ಯಾವುದೇ ಸರ್ಕಾರವಾದರೂ ಆಡಳಿತ ವೈಫಲ್ಯದಿಂದ ಸಮಸ್ಯೆಗಳು ಉದ್ಭವಿಸಿ ತನ್ನ ಬುಡ ಅಲುಗಾಡಿದಾಗ ಭಾವನಾತ್ಮಕತೆಗೆ ಮೊರೆಹೋಗುತ್ತದೆ !

ನಾ ದಿವಾಕರ

ಗಡಿ ವಿವಾದವು ಉಲ್ಗಣಗೊಳ್ಳುವುದಕ್ಕೂ, ಕರ್ನಾಟಕದಲ್ಲಿ ಚುನಾವಣಾ ಅಕ್ರಮ ಮತ್ತು ಭ್ರಷ್ಟಾಚಾರದ ‘ಚಿಲುಮೆ’ ಹಠಾತ್ತನೆ ಚಿಮ್ಮಿರುವುದಕ್ಕೂ ಸೂಕ್ಷ್ಮ ಸಂಬಂಧ ಇರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಮತದಾರರ ವೈಯಕ್ತಿಕ ಮಾಹಿತಿ ಕಳವು ಹಾಗೂ ದುರ್ಬಳಕೆ ಆರೋಪದಡಿ , ಮತದಾರ ಸಮೀಕ್ಷೆಗೆ ನಿಯೋಜಿಸಲಾಗಿದ್ದ ಚಿಲುಮೆ ಸಂಸ್ಥೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಕೇಂದ್ರ ಚುನಾವಣಾ ಆಯೋಗವೂ ಸಹ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಹೆಚ್ಚುವರಿ ಚುನಾವಣಾಧಿಕಾರಿಗಳಾಗಿರುವ ಇಬ್ಬರು ಐಎಎಸ್ ಅಧಿಕಾರಿಗಳನ್ನೂ ತಕ್ಷಣದಿಂದ ಜಾರಿಯಾಗುವಂತೆ ಅಮಾನತು ಮಾಡಿದೆ. ಹಾಗೆಯೇ ಬಿಬಿಎಂಪಿ ವಿಶೇಷ ಆಯುಕ್ತ ಎಸ್ ರಂಗಪ್ಪ ಮತ್ತು ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ ಶ್ರೀನಿವಾಸ್ ಅವರನ್ನೂ ಅಮಾನತು ಮಾಡುವಂತೆ ನಿರ್ದೇಶಿಸಿದೆ.

ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ೭೫ ವರ್ಷಗಳಿಂದಲೂ ಆಡಳಿತ ವ್ಯವಸ್ಥೆಯನ್ನು ನಿರ್ವಹಿಸುವ ಸರ್ಕಾರಗಳು ವಿಧಿವತ್ತಾಗಿ ಅನುಸರಿಸಿಕೊಂಡು ಬಂದಿರುವ ಏಕೈಕ ಮಾರ್ಗ ಎಂದರೆ, ಸರ್ಕಾರದ ಅಸ್ತಿತ್ವ ಅಲುಗಾಡಿದಾಗ ಭಾವನಾತ್ಮಕ ವಿಚಾರಗಳನ್ನು ಮುನ್ನೆಲೆಗೆ ತಂದು ವಾಸ್ತವವನ್ನು ಮರೆಮಾಚುವ ತಂತ್ರಗಾರಿಕೆ. ೧೯೪೭ರಿಂದಲೂ ಈ ವಿದ್ಯಮಾನವನ್ನು ಭಾರತದ ಸಾರ್ವಭೌಮ ಪ್ರಜೆಗಳು ಗಮನಿಸುತ್ತಲೇ ಇದ್ದಾರೆ, ಅನುಭವಿಸುತ್ತಲೇ ಇದ್ದಾರೆ. ಜಾತಿ, ಮತ, ಭಾಷೆಗಳೊಂದಿಗೇ ಜನಸಾಮಾನ್ಯರ ಭಾವನೆಗಳೊಂದಿಗೆ ಚೆಲ್ಲಾಟವಾಡಲು ಒದಗಿಬರುವ ಮತ್ತೊಂದು ಅಂಶ ಎಂದರೆ, ಒಕ್ಕೂಟ ವ್ಯವಸ್ಥೆಯಲ್ಲಿ ಇಂದಿಗೂ ಪರಿಪೂರ್ಣವಾಗಿ ಬಗೆಹರಿಯದ ಭೌಗೋಳಿಕ ಗಡಿ ವಿವಾದಗಳು. ಜಾತಿ-ಮತ-ಧಾರ್ಮಿಕ ವಿಚಾರಗಳಲ್ಲಿ ವಿಘಟಿತವಾಗಿರುವ ಸಮಾಜಗಳೂ ಸಹ ಭಾಷೆ ಮತ್ತು ಭೌಗೋಳಿಕ ಗಡಿಯ ಪ್ರಶ್ನೆ ಎದುರಾದಾಗ ಐಕ್ಯತೆಯೊಂದಿಗೆ ಹೋರಾಡುವುದನ್ನು ಗಮನಿಸುತ್ತಲೇ ಬಂದಿದ್ದೇವೆ.

ಡಾ ಬಿ ಆರ್ ಅಂಬೇಡ್ಕರ್ ಆದಿಯಾಗಿ ಸ್ವಾತಂತ್ರ್ಯ ಪೂರ್ವದ ಎಲ್ಲ ನೇತಾರರೂ ಈ ಅಂಶವನ್ನು ಮನಗಂಡಿದ್ದರಿಂದಲೇ ಭಾರತವನ್ನು ಒಂದು ಒಕ್ಕೂಟ ಎಂದು ಕರೆಯಲಾಗಿದೆ. ಈ ಒಕ್ಕೂಟ ವ್ಯವಸ್ಥೆಯೇ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಸುಭದ್ರ ಬುನಾದಿಯನ್ನೂ ಒದಗಿಸಿದೆ. ಭಾಷಾ ವೈವಿಧ್ಯತೆ ಮತ್ತು ಸಾಂಸ್ಕೃತಿಕ ಬಹುತ್ವದ ಪ್ರಾದೇಶಿಕ ನೆಲೆಗಳೇ, ಭಾಷಾವಾರು ರಾಜ್ಯಗಳ ಭೌತಿಕ-ಭೌಗೋಳಿಕ ಅಸ್ಮಿತೆ ಮತ್ತು ಅಸ್ತಿತ್ವವನ್ನೂ ನಿರ್ಧರಿಸುತ್ತದೆ. ಭಾರತದಾದ್ಯಂತ ಇನ್ನೂ ಬಗೆಹರಿಯದ ಗಡಿ ವಿವಾದಗಳು ಆಗಿಂದ್ದಾಗ್ಗೆ ತಲೆದೋರುತ್ತಲೇ ಇರುವುದನ್ನೂ ಈ ಹಿನ್ನೆಲೆಯಲ್ಲೇ ಗಮನಿಸಬೇಕಿದೆ. ಈಗಲೂ ಸಹ ಅಸ್ಸಾಂ ಮತ್ತು ಮೇಘಾಲಯದ ಗಡಿ ಪ್ರದೇಶದಲ್ಲಿ ಪ್ರಕ್ಷುಬ್ಧ ವಾತಾವರಣ ಉಂಟಾಗಿದೆ. ಈ ಎರಡೂ ರಾಜ್ಯಗಳನ್ನು ಬೇರ್ಪಡಿಸಿರುವ ೮೮೪ ಕಿಮೀ ವ್ಯಾಪ್ತಿಯ ಗಡಿ ಪ್ರದೇಶವು ವಿವಾದಾಸ್ಪದವಾಗಿದ್ದು, ಮಾರ್ಚ್ ತಿಂಗಳಲ್ಲಿ ನಡೆದ ಸಂಧಾನ ಸಭೆಯಲ್ಲಿ ವಿವಾದಕ್ಕೊಳಗಾಗಿರುವ ೧೨ ಪ್ರದೇಶಗಳ ಪೈಕಿ ಆರು ಪ್ರದೇಶಗಳ ಬಗ್ಗೆ ಒಪ್ಪಂದಕ್ಕೆ ಸಹಿ ಮಾಡಲಾಗಿತ್ತು. ಈಗ ಎರಡನೆ ಸುತ್ತಿನ ಮಾತುಕತೆ ನಡೆಯುತ್ತಿದ್ದು, ಈ ಸಂದರ್ಭದಲ್ಲೇ ಅಸ್ಸಾಂ ಗಡಿ ಪ್ರದೇಶದಲ್ಲಿ ನಡೆದಿರುವ ಘರ್ಷಣೆ ಗಂಭೀರ ಸ್ವರೂಪ ಪಡೆದಿದೆ.

ಏಕ ರಾಷ್ಟ್ರ-ಏಕ ಭಾಷೆ-ಏಕ ಸಂಸ್ಕೃತಿಯ ಘೋಷಣೆಯ ನಡುವೆಯೂ ಗಮನಿಸಬೇಕಾದ ಅಂಶ ಎಂದರೆ, ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳು ತಮ್ಮದೇ ಆದ ಸಾಂಸ್ಕೃತಿಕ ನೆಲೆಗಳಿಗಾಗಿ, ಭಾಷಿಕ ಅಸ್ಮಿತೆಗಾಗಿ, ಪ್ರಾದೇಶಿಕ ಅಸ್ತಿತ್ವಕ್ಕಾಗಿ ಹೋರಾಟಗಳನ್ನು ನಡೆಸುತ್ತಲೇ ಇವೆ. ಕರ್ನಾಟಕ ಮತ್ತು ಮಹಾರಾಷ್ಟ್ರದ ನಡುವೆಯೂ ಇಂತಹುದೇ ಗಡಿ ವಿವಾದ ಕಳೆದ ಆರು ದಶಕಗಳಿಂದಲೂ ಜೀವಂತವಾಗಿದೆ. ಬ್ರಿಟೀಷ್ ವಸಾಹತು ಆಳ್ವಿಕೆಯಲ್ಲಿ ಬಾಂಬೆ ಪ್ರೆಸಿಡೆನ್ಸಿಯ ಭಾಗವಾಗಿದ್ದ ಬೆಳಗಾವಿಯನ್ನು ೧೯೫೬ರಲ್ಲಿ ಭಾಷಾವಾರು ರಾಜ್ಯಗಳ ವಿಂಗಡನೆಯಾದ ಸಂದರ್ಭದಲ್ಲಿ ಕರ್ನಾಟಕಕ್ಕೆ ಸೇರಿಸಲಾಗಿತ್ತು. ೧೮೮೧ರ ಜನಗಣತಿಯ ಅನುಸಾರ ಬೆಳಗಾವಿಯಲ್ಲಿ ಕನ್ನಡ ಭಾಷಿಕರ ಪ್ರಮಾಣ ಶೇ ೬೪.೩೯ರಷ್ಟಿದ್ದು, ಮರಾಠಿ ಭಾಷಿಕರು ಶೇ ೨೬.೦೪ರಷ್ಟಿದ್ದರು. ೧೯೫೧ರ ಜನಗಣತಿಯಲ್ಲಿ ಬೆಳಗಾವಿಯ ನಗರ ಪ್ರದೇಶದಲ್ಲಿ ಮರಾಠಿ ಭಾಷಿಕರ ಪ್ರಮಾಣ ಶೇ ೬೦ರಷ್ಟಿತ್ತೆಂದೂ, ಶಹಾಪುರದಲ್ಲಿ ಶೇ ೫೭, ಬೆಳಗಾವಿಯ ಕಂಟೋನ್ಮೆಂಟ್ನಲ್ಲಿ ಶೇ ೩೩.೬ ಹಾಗೂ ಉಪನಗರಗಳಲ್ಲಿ ಶೇ ೫೦.೯ರಷ್ಟಿತ್ತು ಎಂದು ದಾಖಲಾಗಿದೆ. ಈ ಹಿನ್ನೆಲೆಯಲ್ಲೇ ೧೯೫೬ರಲ್ಲಿ ಮಹಾರಾಷ್ಟ್ರ ಸರ್ಕಾರವು ಈ ಪ್ರದೇಶಗಳು ತನಗೆ ಸೇರಬೇಕು ಎಂದು ಆಗ್ರಹಿಸಿತ್ತು.

ಈ ಆಗ್ರಹದ ಹಿನ್ನೆಲೆಯಲ್ಲೇ ಮಹಾಜನ್ ಆಯೋಗವನ್ನೂ ರಚಿಸಲಾಗಿತ್ತು. ಆಯೋಗವು ಮಹಾರಾಷ್ಟ್ರ ಸರ್ಕಾರದ ಆಗ್ರಹವನ್ನು ತಿರಸ್ಕರಿಸಿತ್ತು. ಬೆಳಗಾವಿ ನಗರ ಮತ್ತು ಸುತ್ತಲಿನ ೮೧೪ ಗ್ರಾಮಗಳು ತನಗೆ ಸೇರಬೇಕೆಂದು ಆಗ್ರಹಿಸಿದ್ದ ಮಹಾರಾಷ್ಟ್ರ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ದಾವೆ ಹೂಡಿತ್ತು. ಇದೇ ಪ್ರಕರಣವೇ ಈಗ ಮತ್ತೊಮ್ಮೆ ವಿಚಾರಣೆಗೆ ಬಂದಿದ್ದು, ಎರಡೂ ರಾಜ್ಯಗಳ ನಡುವೆ ವಿವಾದ ಭುಗಿಲೆದ್ದಿದೆ. ಆದರೆ ಮಹಾಜನ್ ಆಯೋಗವು ತನ್ನ ಅಂತಿಮ ವರದಿಯಲ್ಲಿ ಬೆಳಗಾವಿ ನಗರವು ಮೂರು ದಿಕ್ಕುಗಳಲ್ಲಿ ಕನ್ನಡ ಭಾಷಿಕ ಪ್ರದೇಶಗಳಿಂದ ಆವೃತವಾಗಿರುವುದರಿಂದ ಬೆಳಗಾವಿ ಕರ್ನಾಟಕದಲ್ಲೇ ಉಳಿಯಬೇಕು ಎಂದು ಹೇಳಿತ್ತು. ಹಾಗೆಯೇ ಜಟ್ಟಾ, ಅಕ್ಕಲಕೋಟೆ ಮತ್ತು ಶೋಲಾಪುರ ಹಾಗೂ ೨೪೭ ಗ್ರಾಮಗಳು ಕರ್ನಾಟಕಕ್ಕೆ ಸೇರಬೇಕೆಂದೂ, ನಂದಗಡ್, ಖಾನಾಪುರ ಹಾಗೂ ೨೬೪ ಗ್ರಾಮಗಳು ಮಹಾರಾಷ್ಟ್ರಕ್ಕೆ ಸೇರಬೇಕೆಂದೂ ಶಿಫಾರಸು ಮಾಡಿತ್ತು. ಕರ್ನಾಟಕ ಸರ್ಕಾರ ಆಯೋಗದ ವರದಿಯನ್ನು ಸ್ವೀಕರಿಸಿದ್ದರೂ ಮಹಾರಾಷ್ಟ್ರ ಸರ್ಕಾರ ತಿರಸ್ಕರಿಸಿದೆ.

ಬೆಳಗಾವಿ, ಬೀದರ್, ಭಾಲ್ಕಿ, ಕಾರವಾರ ಸೇರಿದಂತೆ ೮೬೫ ಗ್ರಾಮಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ವಾದಿಸಿ ಮಹಾರಾಷ್ಟ್ರ ಸರ್ಕಾರ ೨೦೦೪ರಲ್ಲಿ ಹೂಡಿದ್ದ ದಾವೆ ಮುಂದಿನ ಬುಧವಾರ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ. ಈ ನಡುವೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಕರ್ನಾಟಕದಲ್ಲಿರುವ ಮರಾಠಿ ಭಾಷಿಕರ ಪ್ರದೇಶಗಳಾದ ಕಾರವಾರ, ನಿಪ್ಪಾಣಿ ಮತ್ತು ಬೆಳಗಾವಿ ತಮ್ಮ ರಾಜ್ಯಕ್ಕೆ ಸೇರಬೇಕು ಎಂದು ಹೇಳಿಕೆ ನೀಡಿದ್ದು, ವಿವಾದ ಉಲ್ಬಣಿಸಲು ಕಾರಣವಾಗಿದೆ, ಮಹಾರಾಷ್ಟ್ರವು ತನ್ನದೆನ್ನುತ್ತಿರುವ ನೆರೆ ರಾಜ್ಯಗಳ ಪ್ರದೇಶಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ಪಿಂಚಣಿ ಯೋಜನೆ ಮತ್ತು ಈ ಪ್ರದೇಶದ ನಿವಾಸಿಗಳಿಗೆ ಮಹಾತ್ಮ ಫುಲೆ ಆರೋಗ್ಯ ಯೋಜನೆಯನ್ನು ವಿಸ್ತರಿಸುವುದಾಗಿಯೂ ಫಡ್ನವಿಸ್ ಹೇಳಿದ್ದರು. ಫಡ್ನವಿಸ್ ಅವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಯಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರ್ನಾಟಕವು ಒಂದು ಇಂಚು ಭೂಮಿಯನ್ನೂ ಬಿಟ್ಟುಕೊಡುವುದಿಲ್ಲ ಎಂದು ಹೇಳಿರುವುದೇ ಅಲ್ಲದೆ, ಮಹಾರಾಷ್ಟ್ರದ ಜತ್ ತಾಲ್ಲೂಕು ಅಲ್ಲಿನ ಗ್ರಾಮ ಪಂಚಾಯತಿಗಳು ನಿರ್ಧರಿಸಿರುವುದರಿಂದ ರಾಜ್ಯ ಸರ್ಕಾರ ಈ ಕುರಿತು ಗಂಭೀರ ಚಿಂತನೆ ಮಾಡುತ್ತಿದೆ ಎಂದು ಹೇಳಿದ್ದಾರೆ. ಕನ್ನಡ ಭಾಷಿಕರೇ ಹೆಚ್ಚಾಗಿರುವ ಶೋಲಾಪುರ ಮತ್ತು ಅಕ್ಕಲಕೋಟೆ ಪ್ರದೇಶಗಳೂ ಕರ್ನಾಟಕಕ್ಕೇ ಸೇರಬೇಕಿದೆ ಎಂದೂ ಹೇಳಿದ್ದಾರೆ.

ಗಡಿ ವಿವಾದದ ನಡುವೆ ಅಕ್ರಮದ ಚಿಲುಮೆ

ಈ ಪ್ರಕರಣವು ಮುಂದಿನ ಬುಧವಾರ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೊಳಪಡಲಿದ್ದು, ಈ ಸಂದರ್ಭದಲ್ಲಿ ವಿವಾದ ಉಲ್ಬಣಿಸಬೇಕಿತ್ತೇ ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ. ಎರಡೂ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರಗಳೇ ಇರುವಾಗಲೂ ಈ ವಿವಾದ ಉಲ್ಬಣಿಸಬೇಕಿರಲಿಲ್ಲ. ಮುಂದಿನ ವಾರದಲ್ಲಿ ಮಾತುಕತೆ ನಡೆಸಲು ಸಿದ್ಧವಾಗಿರುವುದಾಗಿ ಮಹಾರಾಷ್ಟ್ರದ ಮುಖ್ಯಮಂತ್ರಿ ಫಡ್ನವಿಸ್ ಹೇಳಿದ್ದರೂ, ಈಗಾಗಲೇ ಎರಡೂ ರಾಜ್ಯಗಳ ಗಡಿ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ. ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್ಸುಗಳಿಗೆ ಮಸಿ ಬಳಿದ ಪ್ರಕರಣವೂ ನಡೆದಿದ್ದು ಇದಕ್ಕೆ ಪ್ರತಿಯಾಗಿ ಕರ್ನಾಟಕದಲ್ಲೂ ಕೆಲವು ಸಂಘಟನೆಗಳು ಆ ರಾಜ್ಯದ ಬಸ್ಸುಗಳಿಗೆ ಮಸಿ ಬಳಿಯುವ ಮೂಲಕ ಪ್ರತಿಭಟನೆ ನಡೆಸಿವೆ. ಮಹಾರಾಷ್ಟ್ರದ ಕೊಲ್ಹಾಪುರ, ಪುಣೆ, ಔರಂಗಾಬಾದ್ ಮುಂತಾದೆಡೆ ಕರ್ನಾಟಕದ ಬಸ್ಸುಗಳಿಗೆ ತಡೆ ಒಡ್ಡಲಾಗಿದೆ. ಈ ಹಿನ್ನೆಲೆಯಲ್ಲೇ ಉಭಯ ರಾಜ್ಯಗಳ ನಡುವೆ ಸಂಚರಿಸುವ ೩೦೦ಕ್ಕೂ ಹೆಚ್ಚು ಬಸ್ಸುಗಳನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ.

ರಾಜ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂದಿನ ವಾರದಲ್ಲಿ ಸರ್ವಪಕ್ಷ ಸಭೆಯನ್ನು ಕರೆದಿದ್ದು, ರಾಜ್ಯ ಸರ್ಕಾರದ ನಿಲುವನ್ನು ಸಮರ್ಥಿಸಿಕೊಳ್ಳಲು ಸುಪ್ರೀಂಕೋರ್ಟ್‌ನಲ್ಲಿ ಸಮರ್ಥವಾಗಿ ವಾದ ಮಂಡಿಸುವ ವಕೀಲರನ್ನು ನೇಮಿಸಲೂ ಯೋಚಿಸಲಾಗಿದೆ. ಗಡಿ ವಿವಾದವು ಉಲ್ಗಣಗೊಳ್ಳುವುದಕ್ಕೂ, ಕರ್ನಾಟಕದಲ್ಲಿ ಚುನಾವಣಾ ಅಕ್ರಮ ಮತ್ತು ಭ್ರಷ್ಟಾಚಾರದ ‘ಚಿಲುಮೆ’ ಹಠಾತ್ತನೆ ಚಿಮ್ಮಿರುವುದಕ್ಕೂ ಸೂಕ್ಷ್ಮ ಸಂಬಂಧ ಇರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಮತದಾರರ ವೈಯಕ್ತಿಕ ಮಾಹಿತಿ ಕಳವು ಹಾಗೂ ದುರ್ಬಳಕೆ ಆರೋಪದಡಿ , ಮತದಾರ ಸಮೀಕ್ಷೆಗೆ ನಿಯೋಜಿಸಲಾಗಿದ್ದ ಚಿಲುಮೆ ಸಂಸ್ಥೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಕೇಂದ್ರ ಚುನಾವಣಾ ಆಯೋಗವೂ ಸಹ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಹೆಚ್ಚುವರಿ ಚುನಾವಣಾಧಿಕಾರಿಗಳಾಗಿರುವ ಇಬ್ಬರು ಐಎಎಸ್ ಅಧಿಕಾರಿಗಳನ್ನೂ ತಕ್ಷಣದಿಂದ ಜಾರಿಯಾಗುವಂತೆ ಅಮಾನತು ಮಾಡಿದೆ. ಹಾಗೆಯೇ ಬಿಬಿಎಂಪಿ ವಿಶೇಷ ಆಯುಕ್ತ ಎಸ್ ರಂಗಪ್ಪ ಮತ್ತು ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ ಶ್ರೀನಿವಾಸ್ ಅವರನ್ನೂ ಅಮಾನತು ಮಾಡುವಂತೆ ನಿರ್ದೇಶಿಸಿದೆ. (ಮುಂದುವರೆಯುತ್ತದೆ.)

andolana

Recent Posts

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

6 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

8 hours ago

ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ಖಾನ್‌ ತಂದೆಗೆ ಜೀವ ಬೆದರಿಕೆ: ಮಹಿಳೆ ಸೇರಿ ಇಬ್ಬರ ಬಂಧನ

ಮುಂಬೈ:‌ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್‌ ಖಾನ್‌ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…

8 hours ago

ಶಾಸಕ ಮುನಿರತ್ನಗೆ ಜಾಮೀನು: ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧನ ಸಾಧ್ಯತೆ

ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…

9 hours ago

ನುಡಿ ಹಬ್ಬಕ್ಕೆ ಆಹ್ವಾನಿಸಲು ಸಿದ್ಧವಾಗಿದೆ ಕನ್ನಡ ರಥ

ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…

10 hours ago

ಬಸ್‌ನಲ್ಲಿ ಪ್ರಯಾಣ: ಮಹಿಳೆಯರಿಂದ ಶಕ್ತಿಯೋಜನೆಯ ಅಭಿಪ್ರಾಯ ಪಡೆದ ಪುಷ್ಪ ಅಮರನಾಥ್‌

ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…

10 hours ago