ಎಡಿಟೋರಿಯಲ್

ಅಕ್ರಮಗಳ ‘ಚಿಲುಮೆ’ಯೂ ‘ಗಡಿ’ ವಿವಾದದ ಪರದೆಯೂ : ಭಾಗ-2

 

ನಾ ದಿವಾಕರ

ಮತದಾರರ ಜಾಗೃತಿ ಅಭಿಯಾನದ ಅಡಿಯಲ್ಲಿ ಚಿಲುಮೆ ಸಂಸ್ಥೆಯು ಮತದಾರರ ಮಾಹಿತಿ ಕಳವು ಮಾಡಿರುವುದೇ ಅಲ್ಲದೆ ಮತಪೆಟ್ಟಿಗೆಗೆ ಅಕ್ರಮವಾಗಿ ಹೆಸರು ಸೇರ್ಪಡೆ ಮತ್ತು ಕೈಬಿಡುವ ಕೃತ್ಯ ಎಸಗಿದೆ ಎಂದು ಆರೋಪಿಸಲಾಗಿದೆ. ಈ ಪ್ರಕರಣದಲ್ಲಿ ಚಿಲುಮೆ ಸಂಸ್ಥೆಯ ಅಡಳಿತಾಧಿಕಾರಿಯನ್ನೂ ಬಂಧಿಸಲಾಗಿದ್ದು ಸಂಸ್ಥೆಯ ಸಂಸ್ಥಾಪಕ ರವಿ ಕುರ್ಮಾ, ಅವರ ಸೋದರ ಕೆಂಪೇಗೌಡ ಮತ್ತಿತರ ಏಳು ಜನರನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ. ಈ ಹಗರಣದಲ್ಲಿ ಬಿಬಿಎಂಪಿಯ ಹಿರಿಯ ಅಧಿಕಾರಿಗಳು, ರಾಜ್ಯ ಸರ್ಕಾರದ ಅಧಿಕಾರಿಗಳು ಮತ್ತು ಇತರ ವಿಭಾಗಗಳ ಸಿಬ್ಬಂದಿಯೂ ಭಾಗಿಯಾಗಿರುವ ಶಂಕೆ ವ್ಯಕ್ತವಾಗುತ್ತಿದ್ದು, ವಿರೋಧ ಪಕ್ಷಗಳು ಮುಖ್ಯಮಂತ್ರಿಗಳ ರಾಜೀನಾಮೆಗೂ ಆಗ್ರಹಿಸುತ್ತಿವೆ. ಮತದಾರರ ಪಟ್ಟಿಯಿಂದ ಸಾವಿರಾರು ಹೆಸರುಗಳನ್ನು ಕೈಬಿಡಲಾಗಿದ್ದು, ಈ ಕುರಿತ ಸಮಗ್ರ ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಿದೆ.

ಆದರೆ ಈ ಭ್ರಷ್ಟಾಚಾರದ ಚಿಲುಮೆಗೆ ರಾಜ್ಯ ಸರ್ಕಾರವೇ ಹೊಣೆ ಹೊರಬೇಕಿದೆ. ಈ ಸಂಸ್ಥೆಯನ್ನು ಹಿಂದಿನ ಸಿದ್ಧರಾಮಯ್ಯ ಸರ್ಕಾರದ ಅವಧಿಯಲ್ಲೇ ನೇಮಿಸಲಾಗಿದ್ದರೂ, ವರ್ತಮಾನದಲ್ಲಿ ನಡೆಯುತ್ತಿರುವ ಅಕ್ರಮ ಮತ್ತು ಭ್ರಷ್ಟಾಚಾರಗಳಿಗೆ ಹಿಂದಿನ ಸರ್ಕಾರಗಳನ್ನು ಮಾತ್ರವೇ ದೂಷಿಸಲಾಗುವುದಿಲ್ಲ. ಈಗ ಆಡಳಿತ ನಡೆಸುತ್ತಿರುವ ಸರ್ಕಾರವೂ ಸಮಾನ ಜವಾಬ್ದಾರಿ ಹೊರಬೇಕಾಗುತ್ತದೆ. ಈಗಾಗಲೇ ಪೊಲೀಸ್ ನೇಮಕಾತಿಯಲ್ಲಿ ಅಕ್ರಮಗಳು ಒಂದೊಂದಾಗಿ ಹೊರಬರುತ್ತಿದ್ದು ಬೃಹದಾಕಾರವಾಗಿ ಬೆಳೆಯುತ್ತಿರುವಾಗಲೇ ಮತ್ತೊಂದು ಅಕ್ರಮವೂ ಬಯಲಾಗಿರುವುದು ರಾಜ್ಯ ಸರ್ಕಾರವನ್ನು ತೀವ್ರ ಮುಜುಗರಕ್ಕೀಡುಮಾಡಿದೆ. ಆಡಳಿತ ವ್ಯವಸ್ಥೆಯಲ್ಲಿ, ಅಧಿಕಾರಶಾಹಿಯಲ್ಲಿ ಮತ್ತು ಸರ್ಕಾರದ ವಿವಿಧ ವಿಭಾಗಗಳಲ್ಲಿ, ಭ್ರಷ್ಟಾಚಾರದ ಬೇರುಗಳು ಅಗೆದಷ್ಟೂ ಆಳಕ್ಕೆ ಇಳಿಯುತ್ತಿರುವುದು ಹೊಸ ವಿದ್ಯಮಾನವೇನಲ್ಲ. ಪ್ರಾಮಾಣಿಕ ತನಿಖೆ ಮತ್ತು ವಿಚಾರಣೆಗಳ ಮೂಲಕವೇ ಜನಸಾಮಾನ್ಯರಿಗೆ ಈ ವಾಸ್ತವಗಳ ದರ್ಶನವಾಗಲು ಸಾಧ್ಯ.

ಮತದಾರರು ಜಾಗೃತರಾಗಲೇಬೇಕಲ್ಲವೇ ?

ಮತದಾರರ ವೈಯಕ್ತಿಕ ಮಾಹಿತಿ ಕಲೆ ಹಾಕಲು ಯೋಜನೆ ರೂಪಿಸಿದ್ದ ‘ಚಿಲುಮೆ’ ಸಂಸ್ಥೆ ಕರ್ನಾಟಕದ ರಾಜಕಾರಣದ ಬೃಹತ್ ಅಕ್ರಮ ಮತ್ತು ಭ್ರಷ್ಟಾಚಾರದ ಚಿಲುಮೆಯಾಗಿ ಸಾರ್ವಜನಿಕರ ಮುಂದೆ ಬೆತ್ತಲಾಗಿದೆ. ಡಿಜಿಟಲ್ ಸಮೀಕ್ಷಾ ಅಪ್ಲಿಕೇಷನ್ ಬಗ್ಗೆ ತರಬೇತಿ ನೀಡಿ, ಈ ಕೆಲಸದಕ್ಕಾಗಿ ೫೦೦ ಸಿಬ್ಬಂದಿಯನ್ನು ಸಂಸ್ಥೆಯು ನೇಮಕ ಮಾಡಿದೆ. ಹಲವು ತಿಂಗಳುಗಳ ಕಾಲ ಈ ಸಮೀಕ್ಷೆಯೂ ನಡೆದಿದೆ. ಈ ಸಂಸ್ಥೆಯನ್ನು ಹಿಂದಿನ ಸರ್ಕಾರವೇ ನೇಮಕ ಮಾಡಿದ್ದರೂ, ಅಕ್ರಮ ನಡೆದಿರುವುದು ಹಾಲಿ ಸರ್ಕಾರದ ಆಡಳಿತಾವಧಿಯಲ್ಲಿ. ಸಹಜವಾಗಿಯೇ ಮುಂಬರುವ ಚುನಾವಣೆಗಳಲ್ಲಿ ಈ ಚಿಲುಮೆ ಬಿಜೆಪಿ ಸರ್ಕಾರದ ಪಾಲಿಗೆ ಮುಳುವಾಗುವ ಸಾಧ್ಯತೆಗಳಿವೆ. ಈಗಾಗಲೇ ಪೊಲೀಸ್ ಮತ್ತು ಶಿಕ್ಷಕ ನೇಮಕಾತಿಯಲ್ಲಿನ ಭ್ರಷ್ಟಾಚಾರವು ಬ್ರಹ್ಮಾಂಡದಂತೆ ತೆರೆದುಕೊಳ್ಳುತ್ತಿದ್ದು, ಸರ್ಕಾರದ ಎಲ್ಲ ಇಲಾಖೆಗಳಿಗೂ ವ್ಯಾಪಿಸುತ್ತಿದೆ.

ಚುನಾವಣೆಗಳು ಸಮೀಪಿಸುತ್ತಿರುವುದರಿಂದ ಇಂತಹ ಹಗರಣಗಳು ಯಾವುದೇ ಸರ್ಕಾರವನ್ನಾದರೂ ಮುಜುಗರಕ್ಕೀಡುಮಾಡುತ್ತದೆ. ಮತದಾರರ ಮುಂದೆ ಖುಲ್ಲಂಖುಲ್ಲಾ ಸಾಬೀತಾಗುತ್ತಿರುವ ಅಕ್ರಮ ಮತ್ತು ಭ್ರಷ್ಟಾಚಾರಗಳನ್ನು ಯಾವುದೇ ಕಾರಣಗಳನ್ನು ನೀಡಿದರೂ ಸಂಪೂರ್ಣ ಮರೆಮಾಚಲಾಗುವುದಿಲ್ಲ. ರಾಜ್ಯದಲ್ಲಿ ಹೆಚ್ಚುತ್ತಿರುವ ಕೋಮು ವೈಷಮ್ಯ, ತೀವ್ರವಾಗುತ್ತಿರುವ ಮತಧ್ವೇಷದ ಪ್ರಕರಣಗಳು, ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಕುರ್ಕ್ಕ ಸ್ಫೋಟ ಮತ್ತು ಅದರ ಸುತ್ತ ಬಯಲಾಗುತ್ತಿರುವ ಭಯೋತ್ಪಾದಕ ಚಟುವಟಿಕೆಗಳ ಜಾಲ ಇವೆಲ್ಲವೂ ಆಡಳಿತಾರೂಢ ಪಕ್ಷಕ್ಕೆ ಚುನಾವಣೆಗಳ ದೃಷ್ಟಿಯಿಂದ ಹಿನ್ನಡೆ ಉಂಟುಮಾಡುತ್ತವೆ. ವಿದ್ಯುನ್ಮಾನ ಯುಗದಲ್ಲಿ, ತಂತ್ರಜ್ಞಾನಯುಗದ ಬಾಹುಗಳು ಮೂಲೆ ಮೂಲೆಯನ್ನೂ ತಲುಪುತ್ತಿರುವ ನವ ಭಾರತದಲ್ಲಿ ಭ್ರಷ್ಟಾಚಾರದ ಬೇರುಗಳನ್ನು ಮರೆಮಾಚುವುದೂ ಕಷ್ಟವೇ ಆಗುತ್ತದೆ. ಚಿಲುಮೆ ಸಂಸ್ಥೆಯ ಅಕ್ರಮಗಳು ಪ್ರಜಾತಂತ್ರ ವ್ಯವಸ್ಥೆಯ ಮೂಲಕ್ಕೇ ಕೊಡಲಿಪೆಟ್ಟು ನೀಡುವಂತಹ ಒಂದು ಕೃತ್ಯವಾಗಿರುವುದರಿಂದ ಸಹಜವಾಗಿಯೇ ರಾಜ್ಯ ಸರ್ಕಾರಕ್ಕೆ ಜನಸಾಮಾನ್ಯರ ಮುಂದೆ ನಿಲ್ಲುವುದು ಕಷ್ಟಕರವಾಗಲಿದೆ.

ಈ ಹಿನ್ನೆಲೆಯಲ್ಲೇ ಹಠಾತ್ತನೆ ಬೆಳಗಾವಿ ವಿವಾದ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಮುಂದಿನ ವಾರದಲ್ಲೇ ಈ ವಿವಾದವನ್ನು ಸುಪ್ರೀಂಕೋರ್ಟ್ ವಿಚಾರಣೆಗೊಳಪಡಿಸುತ್ತಿರುವುದರಿಂದ, ಎರಡೂ ರಾಜ್ಯಗಳಲ್ಲಿ, ಕೇಂದ್ರದಲ್ಲೂ ಬಿಜೆಪಿ ಅಧಿಕಾರದಲ್ಲಿರುವಾಗ, ಈ ವಿವಾದವು ಉಲ್ಬಣಿಸದಂತೆ ಎಚ್ಚರ ವಹಿಸಬಹುದಿತ್ತು. ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಮಾತುಕತೆಯ ಮೂಲಕವೇ ಶಾಂತಿಯುತ ವಾತಾವರಣವನ್ನು ಕಾಪಾಡಿಕೊಳ್ಳಬಹುದಿತ್ತು. ಅತ್ತ ಮಹಾರಾಷ್ಟ್ರದಲ್ಲೂ ಸಹ ರಾಜ್ಯಪಾಲ ಕೊಶ್ಯಾರಿ ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವುದು ಫಡ್ನವಿಸ್ ಸರ್ಕಾರಕ್ಕೆ ತೀವ್ರ ಮುಜುಗರ ಉಂಟುಮಾಡಿದೆ. ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳುವಂತೆ ಮರಾಠಿ ಸಂಘಟನೆಗಳು, ವಿರೋಧ ಪಕ್ಷದ ನಾಯಕರು ಒತ್ತಾಯಿಸುತ್ತಿದ್ದು, ದೆಹಲಿಯಿಂದಲೂ ಕೊಶ್ಯಾರಿ ಅವರಿಗೆ ಬುಲಾವ್ ಬಂದಿದೆ. ಬಿಜೆಪಿಯ ಉನ್ನತ ನಾಯಕರೂ ಸಹ ಕೊಶ್ಯಾರಿ ಅವರ ಹೇಳಿಕೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅತ್ತ ಮಹಾರಾಷ್ಟ್ರ ಸರ್ಕಾರವೂ ಈ ಮುಜುಗರದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದು, ಬೆಳಗಾವಿ ವಿವಾದ ದೇವೇಂದ್ರ ಫಡ್ನವಿಸ್ ಸರ್ಕಾರಕ್ಕೆ ವರದಾನದಂತೆ ಒದಗಿಬಂದಿದೆ.

ಎರಡೂ ರಾಜ್ಯಗಳ ಸರ್ಕಾರಗಳಿಗೆ ಬೆಳಗಾವಿ ವಿವಾದ ಗಡಿ ಪ್ರಶ್ನೆಗಿಂತಲೂ ಹೆಚ್ಚಾಗಿ ಭಾವನಾತ್ಮಕ ವಿಚಾರವಾಗಿದ್ದು, ಗಡಿ ಪ್ರದೇಶಗಳಲ್ಲಿ ಪ್ರತಿ ಬಾರಿಯೂ ಉದ್ವಿಗ್ನ ವಾತಾವರಣ ಸೃಷ್ಟಿಯಾಗುತ್ತದೆ. ಬೆಳಗಾವಿಯಲ್ಲಿ ಸುವರ್ಣ ಸೌಧ ನಿರ್ಮಿಸುವ ಮೂಲಕ, ಅಲ್ಲಿ ವಿಧಾನಸಭೆಯ ಅಧಿವೇಶನವನ್ನೂ ನಡೆಸುತ್ತಿರುವ ಕರ್ನಾಟಕ ಸರ್ಕಾರಕ್ಕೆ ಬೆಳಗಾವಿ ಮತ್ತೊಂದು ಆಡಳಿತ ರಾಜಧಾನಿಯಂತೆಯೇ ಕಾಣುವುದು ಸಹಜ. ಮಹಾಜನ್ ವರದಿಯ ಹಿನ್ನೆಲೆಯಲ್ಲಿ ಮತ್ತು ಚಾರಿತ್ರಿಕ ದೃಷ್ಟಿಯಿಂದಲೂ ಬೆಳಗಾವಿ ಕರ್ನಾಟಕದ ಒಂದು ಭಾಗವಾಗಿಯೇ ಮುಂದುವರೆಯಬೇಕಿದೆ. ಆದರೆ ಈ ವಿವಾದವನ್ನು ತಮ್ಮ ರಾಜಕೀಯ ಉದ್ದೇಶಗಳಿಗಾಗಿ ಬಳಸಿಕೊಳ್ಳುವ ಪರಂಪರೆಯೂ ಬೆಳೆದುಬಂದಿದೆ. ಪ್ರಸ್ತುತ ಸಂದರ್ಭದಲ್ಲೂ ರಾಜ್ಯ ಸರ್ಕಾರ ಎದುರಿಸುತ್ತಿರುವ ಹಲವು ಹಗರಣಗಳ ಹಿನ್ನೆಲೆಯಲ್ಲಿ, ಬೆಳಗಾವಿ ವಿವಾದವನ್ನು ರಾಜ್ಯದ ಜನತೆ ಎದುರಿಸುತ್ತಿರುವ ಜಟಿಲ ಸಮಸ್ಯೆಗಳು ಮತ್ತು ಸರ್ಕಾರ ಎದುರಿಸುತ್ತಿರುವ ಭ್ರಷ್ಟಾಚಾರದ ಆರೋಪಗಳಿಂದ ರಕ್ಷಿಸಿಕೊಳ್ಳಲು ಪರದೆಯಂತೆ ಬಳಸುವ ಸಾಧ್ಯತೆಗಳಿವೆ. ಉಭಯ ರಾಜ್ಯಗಳ ಸರ್ಕಾರಗಳು ಗಡಿ ಪ್ರದೇಶದಲ್ಲಿ ಶಾಂತಿ ಸೌಹಾರ್ದತೆಯನ್ನು ಕಾಪಾಡುವುದರೊಂದಿಗೇ, ಈ ವಿವಾದವನ್ನು ಮಾತುಕತೆಗಳ ಮೂಲಕವೇ ಬಗೆಹರಿಸಿಕೊಂಡು, ಸುಪ್ರೀಂಕೋರ್ಟ್ ವಿಚಾರಣೆಯ ಹಿನ್ನೆಲೆಯಲ್ಲಿ ಶಾಂತ ಚಿತ್ತತೆಯಿಂದ ವರ್ತಿಸಬೇಕಿದೆ.

ಯಾವುದೇ ಭಾವನಾತ್ಮಕ ವಿಚಾರಗಳಲ್ಲಿ ಅಧಿಕಾರಾರೂಢ ರಾಜಕೀಯ ಪಕ್ಷಗಳು ಮತ್ತು ಸರ್ಕಾರಗಳು ತಮ್ಮ ರಾಜಕೀಯ ಲಾಭನಷ್ಟದ ಲೆಕ್ಕಾಚಾರದಲ್ಲೇ ಇರುವುದು ಸಹಜ. ಆದರೆ ಈ ಗಲಭೆಗಳಲ್ಲಿ, ಪ್ರಕ್ಷುಬ್ಧ ವಾತಾವರಣದಲ್ಲಿ ಜನಸಾಮಾನ್ಯರು ಸಂಕಷ್ಟಕ್ಕೀಡಾಗುತ್ತಾರೆ. ಎರಡೂ ರಾಜ್ಯಗಳ ಗಡಿ ಪ್ರದೇಶಗಳಲ್ಲಿರುವ ಸಾಮಾನ್ಯ ಜನತೆಗೆ ಗಡಿ ರೇಖೆಗಳಿಗಿಂತಲೂ, ನವ ಉದಾರವಾದಿ ಆರ್ಥಿಕ ನೀತಿಗಳು ಸೃಷ್ಟಿಸುತ್ತಿರುವ ತಮ್ಮ ದುರ್ಭರ ಜೀವನ ಮತ್ತು ಜೀವನೋಪಾಯದ ಜಟಿಲ ಸಮಸ್ಯೆಗಳು ಮುಖ್ಯವಾಗಿರುತ್ತವೆ. ಯಾವ ಪ್ರದೇಶ ಯಾವುದೇ ರಾಜ್ಯದ ಭಾಗವಾಗಿದ್ದರೂ, ಸರ್ಕಾರಗಳು ಅನುಸರಿಸುವ ಆರ್ಥಿಕ ನೀತಿಗಳು ಅಲ್ಲಿನ ಶ್ರಮಜೀವಿಗಳ ಬದುಕಿನಲ್ಲಿ ಯಾವುದೇ ನಿರ್ಣಾಯಕ ಪರಿವರ್ತನೆಯನ್ನಂತೂ ಉಂಟುಮಾಡುವುದಿಲ್ಲ. ಇದು ಬಂಡವಾಳಶಾಹಿಯ ಲಕ್ಷಣವೂ ಹೌದು ಇತಿಹಾಸ ನಿರೂಪಿತ ಸತ್ಯವೂ ಹೌದು. ಆದಾಗ್ಯೂ ಸರ್ಕಾರಗಳ ಮಟ್ಟಿಗೆ ಇಂತಹ ಭಾವನಾತ್ಮಕ ವಿವಾದಗಳು ಸಮಸ್ಯೆಗಳನ್ನು ನೇಪಥ್ಯಕ್ಕೆ ಸರಿಸುವ ಕಬ್ಬಿಣದ ಪರದೆಗಳಂತೆಯೇ ಪರಿಣಮಿಸುತ್ತಿರುತ್ತವೆ. ಬೆಳಗಾವಿ ವಿವಾದವೂ ಅಪವಾದವೇನಲ್ಲ. ಜಾಗೃತರಾಗಬೇಕಿರುವುದು ಮತದಾರರಲ್ಲವೇ ?

andolana

Recent Posts

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

6 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

8 hours ago

ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ಖಾನ್‌ ತಂದೆಗೆ ಜೀವ ಬೆದರಿಕೆ: ಮಹಿಳೆ ಸೇರಿ ಇಬ್ಬರ ಬಂಧನ

ಮುಂಬೈ:‌ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್‌ ಖಾನ್‌ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…

8 hours ago

ಶಾಸಕ ಮುನಿರತ್ನಗೆ ಜಾಮೀನು: ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧನ ಸಾಧ್ಯತೆ

ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…

9 hours ago

ನುಡಿ ಹಬ್ಬಕ್ಕೆ ಆಹ್ವಾನಿಸಲು ಸಿದ್ಧವಾಗಿದೆ ಕನ್ನಡ ರಥ

ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…

9 hours ago

ಬಸ್‌ನಲ್ಲಿ ಪ್ರಯಾಣ: ಮಹಿಳೆಯರಿಂದ ಶಕ್ತಿಯೋಜನೆಯ ಅಭಿಪ್ರಾಯ ಪಡೆದ ಪುಷ್ಪ ಅಮರನಾಥ್‌

ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…

10 hours ago