ಎಡಿಟೋರಿಯಲ್

ಪುಟ್ಟ ಕಂದಮ್ಮಗಳ ಒಡನಾಟದ ಚಂದ

ಬದಲಾದ ಜೀವನ ಶೈಲಿಯಿಂದಾಗಿ ಹೆಚ್ಚುತ್ತಿರುವ ವಿಭಕ್ತ ಕುಟುಂಬಗಳವರು ಗಡಿಯಾರದ ಮುಳ್ಳಿನಂತೆ ಪ್ರತಿಯೊಂದಕ್ಕೂ ಓಡು… ಓಡು…ಓಡು… ಎನ್ನುವ ಒತ್ತಡದಲ್ಲಿ ಸಮಯದ ಗೊಂಬೆಯಂತೆ ವರ್ತಿಸುತ್ತಿದ್ದಾರೆ. ಇಂದಿನ ನಗರ ಜೀವನದಲ್ಲಿ ಬದುಕಿನ ಬಂಡಿ ಎಳೆಯಲು ಗಂಡ-ಹೆಂಡತಿ ಇಬ್ಬರೂ ಹೊರಗೆ ದುಡಿಯಲು ಹೋಗುವುದು ಅನಿವಾರ್ಯ ಎಂಬಂತಾ ಗಿರುವುದರಿಂದ ತಿಂಡಿ-ಊಟ-ನಿದ್ರೆ ಹೀಗೆ ನಿತ್ಯ ಜೀವನದ ಪ್ರತಿಯೊಂದನ್ನೂ ಗಡಿಯಾರದ ಮುಳ್ಳು ನೋಡಿಯೇ ನಿರ್ಧರಿಸುವ ಧಾವಂತದಲ್ಲಿ ಸಿಲುಕಿದ್ದು, ಬೆಳಿಗ್ಗೆ ೬ಕ್ಕೆ ಎದ್ದರೆ ಬೆಡ್ ಕಾಫಿ, ನಿತ್ಯಕರ್ಮ ಮುಗಿಸಿ ಸ್ನಾನ, ತಿಂಡಿ ತಿಂದು ಆಫೀಸ್‌ಗೋ ಮತ್ತೆಲ್ಲಿಗೋ ಕೆಲಸದ ಸ್ಥಳಕ್ಕೆ ಓಡಿದರೆ, ಗೃಹಿಣಿಯೂ ತನ್ನ ದಿನಚರಿಯನ್ನು ಮುಗಿಸಿಕೊಂಡು ಗಂಡ-ಮಕ್ಕಳನ್ನು ಸಂಭಾಳಿಸಿ ಶಾಲೆ, ಆಫೀಸ್‌ಗೆ ಕಳುಹಿಸಿ ತಾನೂ ದುಡಿಯಲು ಹೊರಟರೆ, ಸಂಜೆ ಮನೆಗೆ ಬರುವ ವೇಳೆಗೆ ಆಯಾಸದಲ್ಲಿ ಅಡುಗೆ ಮಾಡಲೂ ಮನಸ್ಸಾಗದೆ ಹೊರಗಿನ ಊಟ ತರಿಸಿಕೊಂಡು ತಿಂದು ಮಲಗುವ ಮುಂಚೆ ನಾಳಿನ ದಿನಚರಿಗೆ ಸಮಯ ಹೊಂದಿಸಿಕೊಳ್ಳುವ ಲೆಕ್ಕಾಚಾರದಲ್ಲೇ ಈಗಿನವರ ಬದುಕು ಕಳೆದುಹೋಗುತ್ತಿದೆ. ಹೀಗಾಗಿಯೇ ಇಂದಿನ ಪೀಳಿಗೆಯವರಿಗೆ ದಿನದ ೨೪ ಗಂಟೆಯೂ ಸಾಕಾಗುತ್ತಿಲ್ಲ. ಹೀಗಾಗಿ ಮನೆಯಲ್ಲಿನ ಸಣ್ಣ ಮಕ್ಕಳಿಗೆ ಅಪ್ಪ-ಅಮ್ಮ ಇದ್ದರೂ ಇಲ್ಲದಂತಹ ಅನಾಥ ಪ್ರಜ್ಞೆ ಕಾಡಲು ಶುರುವಾಗುತ್ತಿದೆ. ಮಕ್ಕಳಿಗೊ ಶಾಲೆಯಲ್ಲಿನ ಸಣ್ಣಪುಟ್ಟ ಸಂಗತಿಗಳನ್ನು ಹಂಚಿಕೊಳ್ಳಲು ಅಪ್ಪ- ಅಮ್ಮ ಸಮಯ ಕೊಡುತ್ತಿಲ್ಲ. ದೊಡ್ಡ ದೊಡ್ಡ ನಗರ ಗಳಲ್ಲಂತೂ ಮಕ್ಕಳನ್ನು ನೋಡಿಕೊಳ್ಳಲೆಂದೇ ನೇಮಿಸಿ ಕೊಳ್ಳುವ ಕೆಲಸಗಾರರೇ ಮಕ್ಕಳ ಆಪ್ತರಾಗಿ ಬಿಡುತ್ತಾರೆ. ಮಕ್ಕಳು ಕೂಡ ಶಾಲೆ, ಟ್ಯೂಷನ್, ಮೊಬೈಲ್ ಗೇಮಿಂಗ್‌ನಲ್ಲಿಯೇ ಸಮಯ ಕಳೆದುಬಿಡುತ್ತಾರೆ. ಆದರೆ, ಕೇವಲ ಹತ್ತು-ಇಪ್ಪತ್ತು ವರ್ಷಗಳ ಹಿಂದೆ ಪರಿಸ್ಥಿತಿ ಈ ರೀತಿ ಇರಲಿಲ್ಲ. ಪುಟ್ಟ ಸಂಸಾರವಾದರೂ ಮನೆಯಲ್ಲಿ ಇರುತ್ತಿದ್ದ ಅಜ್ಜ-ಅಜ್ಜಿ ಮೊಮ್ಮಕ್ಕಳ ಮುತುವರ್ಜಿ ಮಾಡುತ್ತಿದ್ದರು.

ನಗರ ಜೀವನ ಹೆಚ್ಚಿದಂತೆಲ್ಲ ಯುವ ಜನರು ನಗರಗಳಿಗೆ ವಲಸೆ ಬರುತ್ತಾ, ಹಳ್ಳಿಗಳು ವೃದ್ಧಾಶ್ರಮವನ್ನಾಗಿಸುತ್ತಿದ್ದಾರೆ. ಮಕ್ಕಳು ಹಿರಿಯರೊಂದಿಗೆ ಬೆರೆತಷ್ಟು ಅದರಿಂದಾಗುವ ಪ್ರಯೋಜನಗಳು ಹೆಚ್ಚು. ಹೀಗಾಗಿ ಹೆತ್ತವರು ತಮ್ಮ ಮುದ್ದಿನ ಮಕ್ಕಳನ್ನು ಅಜ್ಜ-ಅಜ್ಜಿಯೊಂದಿಗೆ ಬೆರೆಯುವಂತೆ ನೋಡಿಕೊಳ್ಳಬೇಕು.

ಮಕ್ಕಳು ಎಳವೆಯಲ್ಲೇ ಹಿರಿಯರೊಂದಿಗೆ ಬೆರೆಯುವುದರಿಂದ ಉತ್ತಮ ಸಂಸ್ಕಾರವನ್ನು ಕಲಿಯುತ್ತಾರೆ. ಹಿರಿಯರ ಬಗ್ಗೆ ಗೌರವ ಭಾವನೆ ಮಕ್ಕಳಲ್ಲಿ ಬೆಳೆಯುತ್ತದೆ. ಮಕ್ಕಳು ಅಜ್ಜ-ಅಜ್ಜಿಯೊಂದಿಗೆ ಸಮಯ ಕಳೆಯುವುದರಿಂದ ಕೌಟುಂಬಿಕ ಸಂಬಂಧ ಬಲಗೊಳ್ಳುವುದಷ್ಟೇ ಅಲ್ಲದೇ ಹಿರಿಯರೊಂದಿಗೆ ಹೇಗೆ ಮಾತನಾಡಬೇಕು? ಹಿರಿಯರನ್ನು ಕಂಡಾಗ ಹೇಗೆ ನಡೆದುಕೊಳ್ಳಬೇಕು? ಹಿರಿಯರಿಗೆ ಯಾವ ರೀತಿ ಗೌರವ ಕೊಡಬೇಕು? ಹಿರಿಯರನ್ನು ಏಕೆ ಗೌರವಿಸಬೇಕು ಎಂಬ ಜೀವನ ಪಾಠವನ್ನು ಕಲಿಯುತ್ತಾರೆ. ಅಜ್ಜ-ಅಜ್ಜಿ ಜೊತೆಗಿನ ತುಂಟಾಟಗಳು, ಮಾಡು ಮಗಾ ನಿನ್ನಿಂದಾಗುತ್ತೆ ಎನ್ನುವ ಸಕಾರಾತ್ಮಕ ಮಾತುಗಳು ಮಕ್ಕಳಲ್ಲಿ ಆತ್ಮ ವಿಶ್ವಾಸವನ್ನು ಹೆಚ್ಚಿಸುವುದಲ್ಲದೇ, ಮಕ್ಕಳ ಮನೋಸ್ಥೈರ್ಯವನ್ನೂ ಹೆಚ್ಚಿಸುತ್ತದೆ. ಇದರಿಂದ ಆ ಮಕ್ಕಳು ಓದಿನಲ್ಲಷ್ಟೇ ಅಲ್ಲ, ಆಟೋಟಗಳಲ್ಲಿ ಸಾಮಾಜಿಕ ವಲಯದಲ್ಲಿ ಉತ್ತಮ ರೆನಿಸಿಕೊಳ್ಳುತ್ತಾರೆ. ಅಜ್ಜ-ಅಜ್ಜಿಯ ಪ್ರೋತ್ಸಾಹದ ನುಡಿಗಳು ಮುಂದೆ ಜೀವನವನ್ನು ಧೈರ್ಯದಿಂದ ಎದುರಿಸಿ ಗಟ್ಟಿಯಾಗಿ ನಿಲ್ಲುವುದನ್ನು ಕಲಿಸುತ್ತವೆ. ಮಕ್ಕಳಲ್ಲಿ ಮೌಲ್ಯಗಳು ಬೆಳೆದಾಗ ಏಕ ವಚನ ಪ್ರಯೋಗಕ್ಕೆ ಬದಲಾಗಿ ಎಲ್ಲರೊಂದಿಗೆ ಬಹುವಚನದ ಮಾತುಕತೆ ಪ್ರಾರಂಭವಾಗುತ್ತದೆ.

ಪ್ರತಿಯೊಂದು ಹಂತದಲ್ಲೂ ಅಜ್ಜ-ಅಜ್ಜಿಯ ಬೆಂಬಲ ದೊರೆಯುವುದರಿಂದ ಅಜ್ಜ-ಅಜ್ಜಿಯೊಂದಿಗೆ ದಿನ ಕಳೆಯುವ ಮಕ್ಕಳು ಭಾವನಾತ್ಮಕವಾಗಿಯೂ ಬಲಶಾಲಿಗಳಾಗಿರುತ್ತಾರೆ. ಇಂತಹ ಮಕ್ಕಳಲ್ಲಿ ಅಪ್ಪಿತಪ್ಪಿಯೂ ನಕಾರಾತ್ಮಕ ಭಾವನೆಗಳು ಸುಳಿಯದೆ ಸದಾ ಕಾಲ ಉತ್ಸಾಹದಿಂದ ಇರುತ್ತಾರೆ. ಸಮಸ್ಯೆಗಳನ್ನು ಎದುರಿಸುವುದನ್ನು ಕಲಿಯುತ್ತಾರೆ. ಅಜ್ಜ-ಅಜ್ಜಿ ಹೇಳುವ ನೀತಿ ಕತೆಗಳು, ಪೌರಾಣಿಕ ಕತೆಗಳಿಂದ ಮತ್ತು ಅವರು ಕಲಿಸುವ ಜೀವನ ಪಾಠಗಳಿಂದ ಮಕ್ಕಳಲ್ಲಿ ಮೌಲ್ಯಗಳು ಬೆಳೆಯುತ್ತವೆ. ಜೀವನ ಮೌಲ್ಯಗಳನ್ನು ಕಲಿಸಿಕೊಡುವಲ್ಲಿ ಅಜ್ಜ-ಅಜ್ಜಿಯ ಪಾತ್ರ ಮಹತ್ತರವಾದದ್ದು.

ಒತ್ತಡ ನಿವಾರಣೆ:  ಇಂದಿನ ಒತ್ತಡದ ಬದುಕಿನಲ್ಲಿ ಗಂಡ-ಹೆಂಡತಿ ಇಬ್ಬರೂ ದುಡಿಯಲು ಹೊರಗೆ ಹೋಗುವುದರಿಂದ ಮಕ್ಕಳಿಗೆ ಕಾಡುವ ಒಂಟಿತನ ಮನೆಯಲ್ಲಿ ಅಜ್ಜ-ಅಜ್ಜಿ ಇದ್ದಾಗ ಕಾಡುವುದಿಲ್ಲ. ಇದರಿಂದ ಮಕ್ಕಳು ಅನುಭವಿಸುವ ಒತ್ತಡ ಕೂಡ ಕಡಿಮೆಯಾಗುತ್ತದೆ. ಮಕ್ಕಳು ಅಜ್ಜಿ-ಅಜ್ಜನ ಜೊತೆಗೆ ಕಾಲ ಕಳೆಯುವುದರಿಂದ ಒತ್ತಡ ನಿವಾರಣೆ ಸಾಧ್ಯ, ಮಕ್ಕಳಿಗೆ ಕುಟುಂಬ ಜೀವನ ಅರ್ಥವಾಗಲಿದೆ. ಅವರ ಮೂಲಕ ಹಿರಿಯರು ಆಚರಿಸಿಕೊಂಡು ಬಂದ ಪದ್ಧತಿ, ಆಚರಣೆಗಳನ್ನು ತಿಳಿದುಕೊಳ್ಳುತ್ತಾರೆ. ಬಹುಮುಖ್ಯವಾಗಿ ಅಜ್ಜ-ಅಜ್ಜಿಯ ಜೊತೆಗೆ ಒಡನಾಡಿದ ಮಕ್ಕಳು ಹಾದಿ ತಪ್ಪುವುದಿಲ್ಲ. ಬದಲಿಗೆ ಬದುಕಿನ ಹಾದಿಯಲ್ಲಿ ಎಚ್ಚರ ತಪ್ಪಿದಾಗೆಲ್ಲ ಅಜ್ಜ-ಅಜ್ಜಿಯ ಕಿವಿಮಾತುಗಳು ನೆನಪಾಗಿ ಸರಿದಾರಿಗೆ ಹೊರಳಲು ಪ್ರೇರಣೆಯಾಗುತ್ತದೆ. ಅದಕ್ಕಾಗಿಯೇ ಮಕ್ಕಳು ಅಜ್ಜ-ಅಜ್ಜಿಯೊಂದಿಗೆ ಬೆಳೆಯಬೇಕು.

ಆಂದೋಲನ ಡೆಸ್ಕ್

Recent Posts

ಮಹಾರಾಷ್ಟ್ರದಲ್ಲಿ ಖಾಸಗಿ ವಿಮಾನ ಪತನ: ಡಿಸಿಎಂ ಅಜಿತ್‌ ಪವಾರ್‌ ಸೇರಿ 5 ಮಂದಿ ದುರ್ಮರಣ

ಬಾರಾಮತಿ: ಮಹಾರಾಷ್ಟ್ರದ ಬಾರಾಮತಿಯಲ್ಲಿ ನಡೆದ ವಿಮಾನ ಅಪಘಾತದಲ್ಲಿ ಡಿಸಿಎಂ ಅಜಿತ್ ಪವಾರ್ ಸಾವನ್ನಪ್ಪಿದ್ದಾರೆ. ಎನ್‌ಸಿಪಿ ಮುಖ್ಯಸ್ಥ ಮತ್ತು ಮಹಾರಾಷ್ಟ್ರದ ಉಪಮುಖ್ಯಮಂತ್ರಿ…

21 mins ago

ಓದುಗರ ಪತ್ರ: ಬೆಲೆಯಲ್ಲಿ ನಾವು ತಗ್ಗೋದೇ ಇಲ್ಲ

ಬೆಲೆಯಲ್ಲಿ ನಾವು ತಗ್ಗೋದೇ ಇಲ್ಲ ಅಂತ ಚಿನ್ನ ಬೆಳ್ಳಿ! ಬೆಲೆ ಎಷ್ಟಾದರೂ ನಾವು ಬಗ್ಗೋದೇ ಇಲ್ಲ ಅಂತ ಕೆಲ ಗ್ರಾಹಕರು…

4 hours ago

ಓದುಗರ ಪತ್ರ: ಡಿಕೆಶಿಯವರ ನಿಲುವು ಸ್ವಾಗತಾರ್ಹ

ವಿದೇಶಿ ನೆಲದಲ್ಲಿ ದೇಶವನ್ನು ಟೀಕಿಸುವುದಿಲ್ಲ ಎಂಬ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರ ನಿಲುವು ಸ್ವಾಗತಾರ್ಹವಾಗಿದೆ. ಗಣರಾಜ್ಯೋತ್ಸವದ ಸಂದರ್ಭದಲ್ಲೇ ಅವರು…

4 hours ago

ಓದುಗರ ಪತ್ರ: ಬಾಂಗ್ಲಾದಲ್ಲಿ ಹಿಂದೂಗಳ ಸರಣಿ ಹತ್ಯೆ ಖಂಡನೀಯ

ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಬಾಂಗ್ಲಾ ದೇಶಕ್ಕೆ ೧೯೭೨ ರಲ್ಲಿ ಪಾಕಿಸ್ತಾನದಿಂದ ಬೇರ್ಪಡಿಸಿ…

4 hours ago

ಓದುಗರ ಪತ್ರ: ನಂಜನಗೂಡಿನಲ್ಲಿ ಆಟೋಗಳಿಗೆ ಮೀಟರ್ ದರ ಜಾರಿಯಾಗಲಿ

ದಕ್ಷಿಣ ಕಾಶಿ ಎಂದೇ ಹೆಸರುವಾಸಿಯಾಗಿರುವ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತಾದಿಗಳು ಆಗಮಿಸುತ್ತಾರೆ. ಆದರೆ ಕೆಲವು ಆಟೋ ಚಾಲಕರು…

4 hours ago

ಪಂಜುಗಂಗೊಳ್ಳಿ ಅವರ ವಾರದ ಅಂಕಣ: ‘ನಿಯೋನೇಟಲ್ ಕೇರ್’ ಸೇವೆಯ ಮಾತೆ ಡಾ.ಅರ್ಮಿಡಾ ಫೆರ್ನಾಂಡೀಸ್

ಏಷ್ಯಾದ ಪ್ರಪ್ರಥಮ ಎದೆಹಾಲಿನ ಬ್ಯಾಂಕನ್ನು ಆರಂಭಿಸಿದ ಕೀರ್ತಿ ಕರ್ನಾಟಕದಲ್ಲಿ ಹುಟ್ಟಿದ, ಗೋವಾ ಮೂಲದ, ಈಗ ಮುಂಬೈಯಲ್ಲಿ ತನ್ನ ಸಾಮಾಜಿಕ ಕಾರ್ಯಗಳನ್ನು…

4 hours ago