ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘ ಮೊನ್ನೆ ಕನ್ನಡ ಚಿತ್ರರಂಗದ ಇಂದಿನ ಸ್ಥಿತಿಗತಿಗಳ ಕುರಿತ ಸಂವಾದವೊಂದನ್ನು ಏರ್ಪಡಿಸಿತ್ತು. ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಕೊರತೆ, ಮಲ್ಟಿಪ್ಲೆಕ್ಸ್‌ಗಳಲ್ಲಿನ ದುಬಾರಿ ಪ್ರವೇಶ ದರ, ಕಡಿಮೆಯಾಗುತ್ತಿರುವ ಸ್ಟಾರ್ ನಟರ ಚಿತ್ರಗಳು, ಹೆಚ್ಚಾಗುತ್ತಿರುವ ಬಜೆಟ್, ಚಿತ್ರಗಳಲ್ಲಿ ಗುಣಮಟ್ಟದ ಕೊರತೆ ಮುಂತಾಗಿ ಕನ್ನಡ ಚಿತ್ರರಂಗ ಎದುರಿಸುತ್ತಿರುವ ಹಲವು ವಿಷಯಗಳ ಬಗ್ಗೆ ಚಿತ್ರರಂಗದ ಸಂಘಟನೆಗಳ ಪ್ರಮುಖರ ಜೊತೆ ಮಾಧ್ಯಮದ ಮಂದಿ ಸಂವಾದ ನಡೆಸಿದರು.
ಅದರ ಮುನ್ನಾ ದಿನ ನಿರ್ಮಾಪಕ, ವಿತರಕ, ಪ್ರದರ್ಶಕ ಎನ್.ಕುಮಾರ್ ಅವರು, ನಟ ಸುದೀಪ್ ಅವರು ತಮ್ಮ ಚಿತ್ರದ ಬದಲು, ಬೇರೊಬ್ಬರ ಚಿತ್ರ ನಿರ್ಮಾಣ ಮಾಡುತ್ತಿರುವುದರ ಕುರಿತಂತೆ ಪತ್ರಿಕಾಗೋಷ್ಠಿ ಕರೆದು ಆರೋಪಿಸಿದ್ದರು. ಪತ್ರಿಕಾಗೋಷ್ಠಿಯಲ್ಲಿ ವಾಣಿಜ್ಯ ಮಂಡಳಿಯ ಅಧ್ಯಕ್ಷರು, ನಿರ್ಮಾಪಕರ ಸಂಘದ ಅಧ್ಯಕ್ಷರು, ನಿರ್ದೇಶಕರ ಸಂಘದ ಅಧ್ಯಕ್ಷರು ಸೇರಿದಂತೆ ಪ್ರಮುಖರು ಕುಮಾರ್ ಅವರ ಬೆಂಬಲಕ್ಕೆ ಇದ್ದರು. ‘ಮುಕುಂದ ಮುರಾರಿ’ ಚಿತ್ರದ ದಿನಗಳಲ್ಲಿ ಹೊಸ ಚಿತ್ರಕ್ಕಾಗಿ ಮುಂಗಡ ಪಡೆದಿದ್ದಾರೆ ಸುದೀಪ್ ಎನ್ನುವುದು ಕುಮಾರ್ ಹೇಳಿಕೆ.
ಸುದೀಪ್ ಅಭಿನಯದ 46ನೇ ಚಿತ್ರವನ್ನು ತಮಿಳು ನಿರ್ಮಾಪಕರೊಬ್ಬರು ನಿರ್ಮಿಸುವುದಾಗಿ ಪ್ರಕಟವಾದ ಬೆನ್ನಲ್ಲಿ ಈ ಬೆಳವಣಿಗೆ. ಅನೂಪ್ ಭಂಡಾರಿ ನಿರ್ದೇಶನದ ‘ವಿಕ್ರಾಂತ್ ರೋಣ’ ಚಿತ್ರವನ್ನು ನಿರ್ಮಿಸುವ ಆಹ್ವಾನ ಕುಮಾರ್ ಅವರಿಗಿತ್ತಂತೆ. ಚಿತ್ರದ ನಿರ್ಮಾಣ ವೆಚ್ಚ ಇತ್ಯಾದಿಗಳ ಕಾರಣ ತಾವು ಅದನ್ನು ಒಪ್ಪಿಲ್ಲ ಎನ್ನುವ ಕುಮಾರ್ ಅವರಿಗೆ ಮುಂದಿನ ಚಿತ್ರ ಮಾಡಿಕೊಡುವುದಾಗಿ ಸುದೀಪ್ ಹೇಳಿದ್ದರಂತೆ. ಮುಂದಿನ ಚಿತ್ರ ಬೇರೆಯವರು ನಿರ್ಮಿಸುತ್ತಿದ್ದಾರೆ ಎಂದು ಗೊತ್ತಾಗುತ್ತಿದ್ದಂತೆ ಪತ್ರಿಕಾಗೋಷ್ಠಿ ಕರೆದ ಕುಮಾರ್, ಎರಡು ದಿನಗಳಲ್ಲಿ ತಮ್ಮ ಬೇಡಿಕೆ ಈ ಡೇರದಿದ್ದರೆ, ಸುದೀಪ್ ಅವರ ಮನೆಯ ಮುಂದೆ ಧರಣಿ ಹೂಡುವುದಾಗಿಯೂ ಹೇಳಿದರು. ಸದ್ಯಕ್ಕೆ ಅದನ್ನು ಮುಂದೂಡಲಾಗಿದೆಯಂತೆ.
ಕೆ.ಸಿ.ಎನ್. ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದ ಕುಮಾರ್ ಅವರು ನಂತರ ವಿತರಕರಾಗಿ, ನಿರ್ಮಾಪಕರಾಗಿ, ಪ್ರದರ್ಶಕರಾಗಿ ಚಿತ್ರರಂಗದಲ್ಲಿ ಸಾಕಷ್ಟು ಹೆಸರಾದವರು. ಅವರ ಪ್ರಕಾರ ಸುಮಾರು ಇನ್ನೂರು ಚಿತ್ರಮಂದಿರಗಳ ಗುತ್ತಿಗೆ ಅವರಿಗಿತ್ತು.
ವಾರಕ್ಕೆ ನಿಗದಿತ ಬಾಡಿಗೆ ಕೊಡುವ ಕರಾರಿನೊಂದಿಗೆ ಚಿತ್ರಮಂದಿರಗಳ ಮಾಲೀಕರಿಂದ ಗುತ್ತಿಗೆಗೆ ಚಿತ್ರಮಂದಿರಗಳನ್ನು ಪಡೆದು, ಅವುಗಳಿಗೆ ಚಿತ್ರಗಳನ್ನು ಪೂರೈಸುವ ಕೆಲಸ ಮಾಡುವ ಕೆಲವರು ಗಾಂಧಿನಗರದಲ್ಲಿದ್ದಾರೆ. ಅವರವರ ಶಕ್ತಿಗನುಗುಣವಾಗಿ ಅವರ ನಿಯಂತ್ರಣದಲ್ಲಿರುವ ಚಿತ್ರಮಂದಿರಗಳ ಸಂಖ್ಯೆ ಇರುತ್ತದೆ. ಕನ್ನಡ ಚಿತ್ರಗಳ ಬಿಡುಗಡೆ, ಅವುಗಳ ಲೆಕ್ಕಾಚಾರಗಳೇ ಚಿತ್ರರಂಗಕ್ಕೆ ಆಧಾರ.
ಜಿಎಸ್‌ಟಿ ತೆರಿಗೆ ಪದ್ಧತಿ ಬರುವ ಮೊದಲು ಕನ್ನಡ ಚಿತ್ರಗಳಿಗೆ ಸಂಪೂರ್ಣ ಮನರಂಜನಾ ತೆರಿಗೆ ವಿನಾಯಿತಿ ಇತ್ತು. ಆ ದಿನಗಳಲ್ಲಿ ಸರ್ಕಾರಕ್ಕೆ ಸಾಕಷ್ಟು ತೆರಿಗೆ ವಂಚನೆ ಆಗುತ್ತಿತ್ತು ಎನ್ನುವುದನ್ನು ವಿಧಾನಮಂಡಲದ ಇಲಾಖಾ ವಿಷಯ ಸಮಿತಿ ಹೇಳಿತ್ತು. ಪರಭಾಷಾ ಚಿತ್ರಗಳ ಪ್ರದರ್ಶನ ಮಾಡಿ, ಕನ್ನಡ ಚಿತ್ರಗಳ ಪ್ರದರ್ಶನ ಮಾಡಿರುವುದಾಗಿ ಸಾಕಷ್ಟು ಚಿತ್ರಮಂದಿರಗಳು ತೆರಿಗೆ ಇಲಾಖೆಗೆ ದಾಖಲೆ ನೀಡುತ್ತಿದ್ದದ್ದು ಬಹಿರಂಗ ಗುಟ್ಟಾಗಿತ್ತು. ಇದಕ್ಕೆ ಸ್ಥಳೀಯ ತೆರಿಗೆ ಇಲಾಖೆಯ ಅಧಿಕಾರಿಗಳ ನೆರವೂ ಇರುತ್ತಿತ್ತು ಎಂದು ಹಿರಿಯ ತೆರಿಗೆ ಅಧಿಕಾರಿಗಳು ಹೇಳುತ್ತಿದ್ದರು. ಇದೆಲ್ಲಾ ಜಿಎಸ್‌ಟಿ ಮೊದಲಿನ ದಿನಗಳ ಮಾತು.
ಹಾಗಂತ ಜಿಎಸ್‌ಟಿ, ಬುಕ್ ಮೈ ಶೋಗಳ ನಂತರ ಎಲ್ಲವೂ ಪಾರದರ್ಶಕ, ಪ್ರಾಮಾಣಿಕ ಎನ್ನಲು ಬರುವುದಿಲ್ಲ. ಸರ್ಕಾರ ಚಾಪೆಯಡಿಗೆ ನುಗ್ಗಿದರೆ, ಇವರು ರಂಗೋಲಿ ಕೆಳಗೆ ನುಗ್ಗುತ್ತಾರೆ, ‘ವ್ಯಾಪಾರಂ ದ್ರೋಹ ಚಿಂತನ’. ಎನ್ನುವ ಮಾತು, ಬೇರೆ ಎಲ್ಲ ಕಡೆಗಿಂತಲೂ ವ್ಯವಹಾರದ ಬಹುತೇಕ ಸಂದರ್ಭಗಳಲ್ಲಿ ಚಿತ್ರೋದ್ಯಮಕ್ಕೆ ಅನ್ವಯಿಸುತ್ತದೆ ಎನ್ನುತ್ತಾರೆ ಇಂತಹ ಜಾಲದಲ್ಲಿ ನಷ್ಟ ಅನುಭವಿಸಿದ ತಮ್ಮ ಹೆಸರು ಹೇಳಲು ಬಯಸದ ನಿರ್ಮಾಪಕರೊಬ್ಬರು. ರಾಜಕುಮಾರ್ ಅಭಿನಯದ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಗೆಲ್ಲುತ್ತಿಲ್ಲ ಎಂದ ಮಾತುಗಳನ್ನು ಕೇಳಿದ ಅವರು, ನಮ್ಮಿಂದಾಗಿ ಚಿತ್ರನಿರ್ಮಾಪಕರಿಗೆ, ವಿತರಕರಿಗೆ ನಷ್ಟವಾಗುವುದಾರೆ ನಾನು ನಟಿಸುವುದಿಲ್ಲ ಎಂದದ್ದು, ನಂತರ ಪಾರ್ವತಮ್ಮ ರಾಜಕುಮಾರ್ ಅವರು ಸ್ವತಃ ನಿರ್ಮಾಪಕರೂ, ಹಂಚಿಕೆದಾರರೂ ಆದದ್ದು ಎಲ್ಲರಿಗೂ ತಿಳಿದ ವಿಷಯ. ರಾಜ್ ಸಂಸ್ಥೆ ನಿರ್ಮಿಸಿದ ಎಂಬತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಹೆಚ್ಚಿನವು ಶತದಿನ, ಇಪ್ಪತ್ತೈದು ವಾರ ಹೀಗೆ ಪ್ರದರ್ಶನ ಕಂಡದ್ದು ಇತಿಹಾಸ.
ಚಿತ್ರಮಂದಿರಗಳಿಗೆ ಪ್ರೇಕ್ಷಕರು ಬರುತ್ತಿಲ್ಲ ಎನ್ನುವ ಮಾತು ಭಾಗಶಃ ಸತ್ಯವಾದರೂ, ರಾಜ್ಯಾದ್ಯಂತ ಇರುವ ಎಲ್ಲ ಚಿತ್ರಮಂದಿರಗಳ ಮಧ್ಯವರ್ತಿಗಳು ಬಂದವರ ಸಂಖ್ಯೆಯನ್ನು ಯಥಾವತ್ ಹೇಳುವುದಿಲ್ಲ ಎನ್ನುವ ಮಾತೂ ಕೇಳಿಬರುತ್ತದೆ. ವಿಶೇಷವಾಗಿ ನಗರಗಳ ಹೊರವಲಯಗಳಲ್ಲಿನ ಚಿತ್ರಮಂದಿರಗಳು.
ಕನ್ನಡ ಇರಲಿ, ಪರಭಾಷೆಯ ಚಿತ್ರಗಳಿರಲಿ, ನಿರ್ಮಾಪಕರ ಅಥವಾ ವಿತರಕರ ಪಾಲಿಗೆ ಸಲ್ಲಬೇಕಾದ ಮೊತ್ತವನ್ನು ಆಯಾ ವಾರಾಂತ್ಯ ಪಾವತಿ ಮಾಡದೆ ಇರುವುದು, ಹೆಚ್ಚು ಮಂದಿ ಬಂದರೂ ಕಡಿಮೆ ಲೆಕ್ಕ ತೋರಿಸುವುದೇ ಮೊದಲಾಗಿ ನಡೆಯುತ್ತಿದೆ ಎನ್ನುತ್ತಿವೆ ಮೂಲಗಳು.
ಗಲ್ಲಾ ಪೆಟ್ಟಿಗೆಯಲ್ಲಿ ಯಶಸ್ವಿಯಾದ ಚಿತ್ರವೊಂದು ಗಳಿಕೆಯೇ ಆಗಿಲ್ಲ ಎಂದ ಘಟನೆಯೂ ನಡೆದ ಪ್ರಸಂಗ ಇದೆ.
ಚಿತ್ರವೊಂದನ್ನು ಆರಂಭಿಸಿದ ನಿರ್ಮಾಪಕರಿಗೆ ಅದನ್ನು ಮುಗಿಸಿ, ತೆರೆಗೆ ತರಲಾಗಲಿಲ್ಲ. ನಂತರ ಬೇರೊಬ್ಬರು, ಕೊನೆಗೆ ಅಮೆರಿಕದಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರೊಬ್ಬರು ಅದನ್ನು ನಿರ್ಮಿಸಿ ಬಿಡುಗಡೆ ಮಾಡಿದರು. ಅದ್ಧೂರಿ ಗಳಿಕೆಯಾಯಿತು. ತಮ್ಮ ಪಾಲಿನ ಹಣವನ್ನು ಪಡೆದುಕೊಳ್ಳಲು ಅವರು ವಿತರಕರ ಕಚೇರಿಗೆ ಹೋದರೆ, ಚಿತ್ರದ ಗಳಿಕೆ ಅಷ್ಟೇನೂ ಆಗಿಲ್ಲ, ಪ್ರಚಾರಕ್ಕೆ ಎಲ್ಲ ವೆಚ್ಚವಾಯಿತು ಎಂದು ಸಾಕಷ್ಟು ವಾದ-ವಿವಾದಗಳ ನಂತರ ಕೊನೆಗೆ ಕೆಲವು ಲಕ್ಷಗಳನ್ನು ನೀಡಿ ಸಾಗಹಾಕಿದರಂತೆ. ಅಮೆರಿಕಕ್ಕೆ ಮರಳುತ್ತಲೇ ಅವರು, ಚೆನ್ನೆ ರಾಯಭಾರ ಕಚೇರಿಗೆ ತಮಗೆ ವ್ಯವಹಾರದಲ್ಲಿ ಆದ ಈ ಬೆಳವಣಿಗೆಯ ದೂರು ನೀಡಿ ತೆರಳಿದರು. ರಾಯಭಾರಿ ಕಚೇರಿ, ಇದನ್ನು ತೆರಿಗೆ ಇಲಾಖೆಗೆ ವರ್ಗಾಯಿಸಿತು. ಇಲಾಖೆ ಆ ವಿತರಕರ ಮನೆಯ ಮೇಲೆ ದಾಳಿ ನಡೆಸಿದ್ದಾಗಿ ಮೂಲಗಳು ಹೇಳುತ್ತಿವೆ.
ಚಲನಚಿತ್ರ ವಾಣಿಜ್ಯ ಮಂಡಳಿ ಆಗಲಿ, ನಿರ್ಮಾಪಕರ ಸಂಘವಾಗಲಿ, ಯಾವುದಾದರೂ ದೂರನ್ನು ಸ್ವೀಕರಿಸುವುದು ತಮ್ಮ ಸದಸ್ಯರಿಂದ ಮಾತ್ರ. ಇತ್ತೀಚೆಗೆ ಅಂತಹದೊಂದು ಬೆಳವಣಿಗೆ ‘ಲವ್ ಬರ್ಡ್ಸ್’ ಚಿತ್ರದ ನಿರ್ದೇಶಕ ಶೇಖರ್ ಅದರ ನಿರ್ಮಾಪಕ ಚಂದ್ರು ಅವರು ತಮ್ಮ ಸಂಭಾವನೆ ಪೂರ್ತಿಯಾಗಿ ಕೊಟ್ಟಿಲ್ಲ ಎಂದು ದೂರು ನೀಡಲು ವಾಣಿಜ್ಯ ಮಂಡಳಿಗೆ ತೆರಳಿದರೆ, ಅವರು ಸದಸ್ಯರಲ್ಲ ಎನ್ನುವ ಕಾರಣಕ್ಕೆ ಅದನ್ನು ಸ್ವೀಕರಿಸಲಿಲ್ಲ. ಅವರು ಪೊಲೀಸರಿಗೆ ದೂರಿತ್ತರು. ನಿರ್ಮಾಪಕರೋ ತಾವೇನೂ ಬಾಕಿ ಉಳಿಸಿಲ್ಲ ಎಂದು ಹೇಳಿದರಲ್ಲದೆ, ಚಿತ್ರದಲ್ಲಿ ತಾವು ನಷ್ಟ ಅನುಭವಿಸಿದ್ದಾಗಿಯೂ, ಪ್ರಚಾರದ ಹಣವೂ ಬಂದಿಲ್ಲ ಎಂದೂ ಹೇಳಿದರು.
ಶೇಖರ್ ಅವರು ಚಿತ್ರದಗಳಿಕೆ, ಒಟಿಟಿ, ಟಿವಿ ಮತ್ತು ಆಡಿಯೋ ಮೂಲಕ ನಿರ್ಮಾಪಕರಿಗೆ ಬಂದ ಮೊತ್ತವನ್ನು ತಿಳಿದುಕೊಂಡರು. ತಮ್ಮ ಸಹಿ ಇಲ್ಲದೆ ಈ ವ್ಯವಹಾರ ಹೇಗಾಯಿತು ಎಂದು ತಿಳಿಯಲು ಹೊರಟಾಗ, ಅವರಿಗೆ ಸಹಿ ನಕಲಾಗಿದೆ ಎನ್ನುವ ವಿವರ ಸಿಕ್ಕಿತಂತೆ. ಅದರ ವಿರುದ್ಧ ಅವರು ಪೊಲೀಸರಿಗೆ ಈಗ ದೂರು ನೀಡಿದ್ದಾರೆ.
ಇಂತಹ ವಿಷಯಗಳು ನ್ಯಾಯಾಲಯದ ಮೆಟ್ಟಲೇರಿದರೆ ಅಲ್ಲಿ, ವಾಣಿಜ್ಯ ಮಂಡಳಿಯ ಸಂಧಾನ ಸಮಿತಿಯ ಮುಂದೆ ಹೋಗಲು ಹೇಳಲಾಗುತ್ತದೆ. ಅಲ್ಲಿನ ತೀರ್ಮಾನ ಸಂಬಂಧಪಟ್ಟವರಿಗೆ ನ್ಯಾಯ ಸಂದಿದೆ ಅನ್ನಿಸದಿದ್ದರೆ ಮುಂದೆ ನ್ಯಾಯಾಲಯಕ್ಕೆ ಹೋಗುವ ಅವಕಾಶ ಇದ್ದೇ ಇದೆ. ಆದರೆ ವಾಣಿಜ್ಯ ಮಂಡಳಿಯಲ್ಲಿ ದೂರಿನ ಗಾಂಭಿರ್ಯದ ಮೇಲೆ ಅವುಗಳ ನಿರ್ಣಯ ಆಗುತ್ತಿಲ್ಲ ಎನ್ನುವ ಮಾತೂ ಕೇಳಿಬರುತ್ತಿದೆ.
ಅದು ಅಲ್ಲಿ ಆಡಳಿತದಲ್ಲಿರುವ ವರ್ಗದ ಮರ್ಜಿಯ ಮೇಲೆ ನಡೆಯುತ್ತದೆ ಎನ್ನುವ ಆರೋಪವೂ ಇದೆ. ತಮಗೆ ಬೇಕಾದವರಿಗೆ ಬೇಕಾದಂತೆ ಇಲ್ಲಿನ ತೀರ್ಪು ಎನ್ನುವ ಮಾತೂ ಇದೆ. ವಿತರಕರೊಬ್ಬರು ತಮ್ಮ ಚಿತ್ರದ ಗಳಿಕೆಯ ಪಾಲು ಪಡೆಯಲು ಹೋದಾಗ ಪ್ರದರ್ಶಕ ಮಧ್ಯವರ್ತಿಗಳ ‘ರಾಮಕೃಷ್ಣ’ ಲೆಕ್ಕಾಚಾರ, ಅದಕ್ಕೆ ತೆರಿಗೆ ಇಲಾಖೆಯ ಸ್ಥಳೀಯ ಅಧಿಕಾರಿಗಳು ಜೊತೆಯಾಗಿರುವುದು ಎಲ್ಲವನ್ನೂ ತಿಳಿದುಕೊಂಡು ನ್ಯಾಯಾಲಯದ ಮೆಟ್ಟಲೇರಲು ಸಿದ್ಧರಾದರೆ, ಇದರಿಂದ ಎಲ್ಲ ಪ್ರದರ್ಶಕರಿಗೂ ಆಗಬಹುದಾದ ತೊಂದರೆಯನ್ನು ಹೇಳಿ ಅವರನ್ನು ತಡೆದದ್ದೂ ಆಗಿದೆ. ಹಾಗಂತ ವಾಣಿಜ್ಯ ಮಂಡಳಿಯಲ್ಲಿ ಇಂತಹ ಪ್ರಸಂಗಗಳು ತೀರ್ಮಾನವೂ ಆಗುವುದಿಲ್ಲ.
ಕುಮಾರ್ ಅವರ ಪತ್ರಿಕಾಗೋಷ್ಠಿಯ ನಂತರ, ವಾಣಿಜ್ಯ ಮಂಡಳಿಯ ಸಂಧಾನ ಸಮಿತಿಯ ನಿಲುವು, ನಿರ್ಧಾರಗಳು, ನಿರ್ಮಾಪಕರಿಗಾಗುವ ತೊಂದರೆ, ಸದಸ್ಯರಲ್ಲದವರು ಎದುರಿಸುವ ಸಮಸ್ಯೆ ಇತ್ಯಾದಿ ವಿಷಯಗಳನ್ನು ತಿಳಿಯಲು ಹೊರಟಾಗ ಈ ವಿವರಗಳು ಸಿಕ್ಕವು. ಹ್ಞಾಂ, ಕುಮಾರ್ ಅವರ ದೂರಿಗೆ ಸುದೀಪ್ ಅವರೇನೂ ಪ್ರತಿಕ್ರಿಯೆ ನೀಡಿಲ್ಲ.
ಕೇರಳ: ಸುಮಾರು ಎಂಟು ವರ್ಷಗಳ ಕಾಲ ನಡೆದ ಕಾನೂನು ಹೋರಾಟದ ನಂತರ, 2017ರಲ್ಲಿ ನಟಿಯ ಮೇಲಿನ ಹಲ್ಲೆ ಪ್ರಕರಣದಲ್ಲಿ ಮಲಯಾಳಂ…
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಜೈಲಿನ ಕಠಿಣ ನಿಯಮಗಳಿಗೆ ತತ್ತರಿಸಿ ಹೋಗಿದ್ದಾರೆ ಎನ್ನಲಾಗಿದೆ.…
ಬೆಳಗಾವಿ: ಬೆಳಗಾವಿ ಅಧಿವೇಶನ ವಿರೋಧಿಸಿ ಎಂಇಎಸ್ ಪುಂಡರು ಮಹಾಮೇಳಾವ್ ನಡೆಸಲು ಸಿದ್ಧತೆ ನಡೆಸಿದ್ದು, ಹಲವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇಂದಿನಿಂದ…
ಬೆಂಗಳೂರು: ಇಂದಿನಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಿದೆ. ಅಧಿವೇಶನದ ಮೊದಲ ದಿನವೇ ಡಿಸಿಎಂ ಡಿ.ಕೆ.ಶಿವಕುಮಾರ್ ಗೈರಾಗಿದ್ದಾರೆ. ಇಂದಿನಿಂದ ಡಿಸೆಂಬರ್.19ರವರೆಗೆ ಅಧಿವೇಶನ…
ಬೆಂಗಳೂರು: ನಾಯಕತ್ವ ಬದಲಾವಣೆ ಗೊಂದಲ, ಸರ್ಕಾರದಲ್ಲಿ ಶೇಕಡಾ.63 ರ್ಷಟು ಕಮಿಷನ್ ಕುರಿತು ಉಪಲೋಕಾಯುಕ್ತರ ಹೇಳಿಕೆ, ವಿವಿಧ ಇಲಾಖೆಗಳಲ್ಲಿ ನಡೆದಿರುವ ಭ್ರಷ್ಟಾಚಾರ…
ರಾಜ್ಯದಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಗರಿಗೆದರಿದ ಬಳಿಕ ಅಲ್ಲಲ್ಲಿ ಕೆರೆ-ಕಟ್ಟೆ, ಸರ್ಕಾರಿ ಜಾಗಗಳ ಒತ್ತುವರಿ ಪ್ರಕರಣ ಮೇಲಿಂದ ಮೇಲೆ ಭಾರೀ…