ಎಡಿಟೋರಿಯಲ್

ದಾರುಣ ದುಸ್ಥಿತಿಗೆ ಆಡಳಿತ ವ್ಯವಸ್ಥೆಯೇ ಕಾರಣ!

-ನಾ ದಿವಾಕರ

ಬೆಂಗಳೂರು ಎಂದು ನಾವು ಇಂದು ಗುರುತಿಸುವ ಭೂಪ್ರದೇಶ ಸುತ್ತಲಿನ ಹಲವಾರು ಹಳ್ಳಿಗಳನ್ನು ನುಂಗಿ ಬೆಳೆದಿರುವ ಒಂದು ಆಧುನಿಕ ನಗರ. ಸಾವಿರ ಕೆರೆಗಳ ಪ್ರದೇಶ ಎಂದೇ ಚಾರಿತ್ರಿಕವಾಗಿ ಪ್ರಸಿದ್ಧಿ ಪಡೆದಿದ್ದ ಈ ಪ್ರದೇಶದಲ್ಲಿ ೧೯೬೦ರ ವೇಳೆಗೆ ಕೇವಲ ೨೮೦ ಕೆರೆಗಳು ಉಳಿದಿದ್ದವು. ಈಗ ೮೦ ಕೆರೆಗಳಿವೆ. ಆದರೆ ಈ ಬೃಹತ್ ಬೆಂಗಳೂರು ಆಪೋಷನ ತೆಗೆದುಕೊಂಡಿರುವ ಸುತ್ತಲಿನ ಗ್ರಾಮ ಮತ್ತು ಅರಣ್ಯ ಪ್ರದೇಶಗಳನ್ನು ಒಳಗೊಂಡಂತೆ ಆಧುನಿಕ ಬೆಂಗಳೂರು ೧೮೯ ಕೆರೆಗಳನ್ನು ಹೊಂದಿದೆ. ಇದರ ಪೈಕಿ ೬೯ ಕೆರೆಗಳು ಈ ಬಾರಿಯ ಅತಿವೃಷ್ಟಿಯಿಂದ ತುಂಬಿ ಹರಿಯುತ್ತಿವೆ. ಕೆರೆಗಳು ತುಂಬುವುದು ಸಹಜ, ತುಂಬಿ ಹರಿಯುವುದೂ ಸಹಜ ಆದರೆ ಈ ಹರಿಯುವ ಹೆಚ್ಚುವರಿ ನೀರು ರಸ್ತೆಗಳಿಗೆ, ಮನೆಗಳಿಗೆ ನುಗ್ಗುವುದು ಸಹಜವಲ್ಲ.

ಇದು ನಾವು ಮಾಡಿಕೊಂಡಿರುವ ಅವಾಂತರ. ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿರುವಂತೆ ಅವರ ಅಧಿಕಾರಾವಧಿಯಲ್ಲೇ ೧೧ ಸಾವಿರಕ್ಕೂ ಹೆಚ್ಚು ಎಕರೆ ಜಮೀನು ಬೆಂಗಳೂರಿನ ಸುತ್ತಮುತ್ತ ಒತ್ತುವರಿಯಾಗಿತ್ತು. ಇದರಲ್ಲಿ ಕೆರೆಕಟ್ಟೆಗಳೂ ಸೇರಿವೆ. ಇದನ್ನು ತೆರವುಗೊಳಿಸುವ ಪ್ರಕ್ರಿಯೆಯೂ ಜಾರಿಯಾಗಿತ್ತು. ಹಾಲಿ ಮುಖ್ಯಮಂತ್ರಿಯವರು ಇಂದಿನ ಅನಾಹುತಕ್ಕೆ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಆದ ಒತ್ತುವರಿ ಕಾರಣ ಎಂದು ಹೇಳುತ್ತಾರೆ. ಈ ೧೦ ವರ್ಷಗಳ ಅವಧಿಯಲ್ಲಿ ೧೧ ಸಾವಿರ ಎಕರೆ ಒತ್ತುವರಿ ಪ್ರದೇಶವನ್ನು ತೆರವುಗೊಳಿಸಲಾಗಿದೆಯೇ ಅಥವಾ ಒತ್ತುವರಿಯಾದ ಭೂ ಪ್ರದೇಶ ಹೆಚ್ಚಾಗಿದೆಯೇ ಎಂಬ ವಾಸ್ತವವನ್ನು ಜನತೆಗೆ ತಿಳಿಸಬೇಕಾದ್ದು ಇಬ್ಬರೂ ನಾಯಕರ ನೈತಿಕ ಜವಾಬ್ದಾರಿ ಅಲ್ಲವೇ ?

‘ರಾಜಕಾಲುವೆ’ ಎಂದು ಗೌರವಯುತ ಹೆಸರು ಪಡೆದಿರುವ ಹೆಚ್ಚುವರಿ ನೀರು, ತ್ಯಾಜ್ಯ ಮತ್ತು ವರ್ಜಿತ ಪದಾರ್ಥಗಳು ಹರಿಯುವ ಈ ಕಾಲುವೆಗಳ ಮೇಲೆ ಎಷ್ಟು ಮನೆಗಳು, ವಿಲ್ಲಾಗಳು, ಅಪಾರ್ಟ್‌ಮೆಂಟ್‌ಗಳು, ವಿದ್ಯಾಸಂಸ್ಥೆಗಳು ನಿರ್ಮಾಣವಾಗಿವೆ ಎಂಬ ಮಾಹಿತಿಯನ್ನೂ ಸರ್ಕಾರ ನೀಡಬೇಕಿದೆ. ರಾಜಕಾಲುವೆಗಳ ಒತ್ತುವರಿಯಿಂದಲೇ ಮಳೆನೀರು ಹರಿಯಲು ಜಾಗವಿಲ್ಲದೆ ಮನೆಗಳೊಳಗೆ ನುಗ್ಗುತ್ತಿದೆ. ಕೆರೆ ಪ್ರದೇಶಗಳನ್ನು ನುಣ್ಣಗೆ ಬೋಳಿಸಿ ಕಾಂಕ್ರೀಟ್ ಕಾಡುಗಳನ್ನು ನಿರ್ಮಿಸುವ ಮುನ್ನ ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಸರ್ಕಾರಗಳು, ಇಂಜಿನಿಯರುಗಳು, ಸ್ವಲ್ಪಮಟ್ಟಿಗಾದರೂ ವಿವೇಕ ಮತ್ತು ವಿವೇಚನೆಯನ್ನು ಉಪಯೋಗಿಸಿದ್ದಲ್ಲಿ, ಇಂದು ಬೆಂಗಳೂರಿನ ಬಡಾವಣೆಗಳು ಹೊಳೆಗಳಾಗುತ್ತಿರಲಿಲ್ಲ. ಯಾವುದೇ ಕೆರೆಯ ಸಮೀಪ ರಸ್ತೆ, ಸೇತುವೆ, ಬಡಾವಣೆ ನಿರ್ಮಿಸಬೇಕೆಂದರೂ, ಒಂದು ವೇಳೆ ಕೆರೆ ತುಂಬಿ ಕೋಡಿ ಹರಿದರೆ ನೀರು ಎತ್ತ ಹರಿಯಬೇಕು ಎಂಬ ದೂರಾಲೋಚನೆ ಇರಲೇಬೇಕಲ್ಲವೇ? ಈ ದೂರಾಲೋಚನೆಯೇ ನಮ್ಮ ಮೂಲ ಸೌಕರ್ಯಗಳ ಯೋಜನೆಗಳನ್ನು ರೂಪಿಸುವವರಿಗೂ ಇರಬೇಕಲ್ಲವೇ? ಇದು ಇಲ್ಲವಾದಾಗ ಜನರು ರಸ್ತೆಗಳಲ್ಲೂ ತೆಪ್ಪದಲ್ಲಿ ಸಂಚಾರ ಮಾಡುವ ದುರ್ಗತಿ ಎದುರಾಗುತ್ತದೆ.

ಹೊಲ, ಗದ್ದೆ, ತೋಟ ಮತ್ತು ಕೆರೆ ಪ್ರದೇಶಗಳಲ್ಲಿ ಸ್ವಾಭಾವಿಕವಾಗಿ ಅಂತರ್ಜಲ ಮಟ್ಟ ಹೆಚ್ಚಾಗಿರುತ್ತದೆ.

ಸಾಮಾನ್ಯ ಭೂ ಪ್ರದೇಶಕ್ಕಿಂತಲೂ ಕೆಳಗಿನ ಹೊಲಗದ್ದೆಗಳನ್ನು ನಿವೇಶನಗಳಾಗಿ ಪರಿವರ್ತಿಸುವ ಮುನ್ನ ನಗರಾಭಿವೃದ್ಧಿ ಪ್ರಾಧಿಕಾರಗಳು ಇದನ್ನೂ ಯೋಚಿಸಬೇಕು. ಬೋರ್‌ವೆಲ್ ತೋಡಿಸಿದಾಗ ಬೇಗನೆ ನೀರು ದೊರೆಯುವಂತಾದರೆ ಅಲ್ಲಿ ಅಂತರ್ಜಲಮಟ್ಟ ಹೆಚ್ಚಿದೆ ಎಂದೇ ಅರ್ಥ. ಅದು ತಗ್ಗು ಪ್ರದೇಶವಾದರೆ ಸಹಜವಾಗಿಯೇ ಭಾರಿ ಮಳೆ ಬಂದಾಗ ಇಡೀ ಪ್ರದೇಶವೇ ಹೊಳೆಯಂತಾಗುತ್ತದೆ. ಕೆರೆ ದಂಡೆಯ ಮತ್ತೊಂದು ಬದಿಯಲ್ಲಿ ಮತ್ತು ತಗ್ಗು ಪ್ರದೇಶದ ಹೊಲಗದ್ದೆಗಳಲ್ಲಿ ಬಡಾವಣೆಗಳನ್ನು ನಿರ್ಮಿಸುವ ಮುನ್ನ, ಸಂಭಾವ್ಯ ಅತಿವೃಷ್ಟಿಯನ್ನು ಎದುರಿಸಬೇಕಾದ ಸೂಕ್ತ ರಕ್ಷಣಾ ಕವಚಗಳನ್ನೂ ನಿರ್ಮಿಸುವುದು ನಗರಾಡಳಿತದ ನೈತಿಕ ಜವಾಬ್ದಾರಿ. ಆದರೆ ತನ್ನ ಸುತ್ತಲಿನ ಎಲ್ಲ ಗ್ರಾಮಗಳನ್ನೂ ನುಂಗಿಹಾಕುತ್ತಲೇ ಬೆಳೆಯುತ್ತಿರುವ ಬೆಂಗಳೂರು ನಿಶ್ಚಿಂತೆಯಿಂದ ವಿಸ್ತರಿಸುತ್ತಲೇ ಇದೆ. ತಮ್ಮ ಗ್ರಾಮೀಣ ಬದುಕಿನ ನೆಲೆಯನ್ನು ಕಳೆದುಕೊಂಡ ಸಾಮಾನ್ಯ ಜನತೆ ತಮ್ಮದೇ ನೆಲ ನಗರೀಕರಣಕ್ಕೊಳಗಾಗಿ, ನಗರ ಎನಿಸಿಕೊಂಡಾಗ, ಅಲ್ಲಿಯೇ ವಲಸೆ ಕಾರ್ಮಿಕರಾಗಿ, ದಿನಗೂಲಿ ನೌಕರರಾಗಿ ದುಡಿಯುವಂತಹ ಒಂದು ಕ್ರೂರ ಸಮಾಜಕ್ಕೆ ಬೆಂಗಳೂರು ಇಂದು ಸಾಕ್ಷಿಯಾಗಿದೆ.

ಕೆರೆ, ಅರಣ್ಯ ಮತ್ತು ಸಾರ್ವಜನಿಕ ಭೂ ಒತ್ತುವರಿಯಾಗುತ್ತಿರುವುದು ಅಧಿಕಾರ ರಾಜಕಾರಣದ ಕೃಪಾಕಟಾಕ್ಷ ಇರುವ ರಿಯಲ್ ಎಸ್ಟೇಟ್ ಉದ್ಯಮಿಗಳಿಂದ. ಬೆಳೆಯುತ್ತಿರುವ ಬೃಹತ್ ಬೆಂಗಳೂರಿನ ಆರ್ಥಿಕ ಫಲಾನುಭವಿಗಳು ಆಧುನಿಕತೆಯ-ಐಟಿ ವಲಯದ ಫಲಾನುಭವಿಗಳು. ಆದರೆ ಈ ರೀತಿಯ ಅತಿವೃಷ್ಟಿ ಮತ್ತು ಮಳೆಹಾನಿಯಿಂದ ಇನ್ನು ಹಲವು ವರ್ಷಗಳ ಕಾಲ ಸಂಕಷ್ಟ ಎದುರಿಸುವುದು, ಈ ಸುಂದರ ನಗರಿಯನ್ನು ನಿರ್ಮಿಸಲು ಬೆವರು ಸುರಿಸುವ ದುಡಿಯುವ ವರ್ಗ. ಹೊಳೆಯಂತಾಗಿರುವ ಬೆಂಗಳೂರಿನ ಐಟಿ ಹಬ್ನಿಂದ ಜೀವನ ಸವೆಸುವ ಮೇಲ್ವರ್ಗದ ಸಿಬ್ಬಂದಿ ಮನೆಯಲ್ಲೇ ಕುಳಿತು ಕೆಲಸ ಮಾಡಿ ಸಂಬಳ ಗಳಿಸುತ್ತಾರೆ. ಆದರೆ ಇಲ್ಲಿಗೆ ತಲುಪದೆ ಹೋದರೆ ತಮ್ಮ ದಿನಗೂಲಿ/ಒಪ್ಪೊತ್ತಿನ ಊಟವನ್ನೂ ಕಳೆದುಕೊಳ್ಳುವ ಕಾರ್ಮಿಕರ ಪಾಡೇನು? ಸರ್ಕಾರ ಮತ್ತು ಸಮಾಜ ಯೋಚಿಸಬೇಕಿರುವುದು ಇವರ ಬಗ್ಗೆ ಅಲ್ಲವೇ? ಡೆಂಗಿ ಮುಂತಾದ ರೋಗಗಳಿಗೆ ತುತ್ತಾಗುವವರೂ ಇವರೇ. ಇವರ ಆರೋಗ್ಯ ರಕ್ಷಣೆಗೆ ಸರ್ಕಾರ ಏನು ಕ್ರಮ ಕೈಗೊಳ್ಳುತ್ತಿದೆ?

ಭೂ ಸ್ವಾಧೀನ ಇಲ್ಲದೆ, ಒತ್ತುವರಿ ಇಲ್ಲದೆ, ಅಕ್ರಮ ನಿರ್ಮಾಣ ಇಲ್ಲದೆ ಯಾವುದೇ ನಗರಗಳೂ ಬೆಳೆಯುವುದಿಲ್ಲ.

ಇದು ಬಂಡವಾಳಶಾಹಿ ವ್ಯವಸ್ಥೆಯ ಒಂದು ಲಕ್ಷಣ. ಸ್ವಾಧೀನಗೊಂಡ ಭೂಮಿಯಲ್ಲಿ ವಿಲ್ಲಾಗಳನ್ನು ನಿರ್ಮಿಸಿ ಸಂಭ್ರಮಿಸುವ ಮೇಲ್ವರ್ಗದ ಹಿತವಲಯಕ್ಕೆ ನೆಲೆ ಕಳೆದುಕೊಂಡವರ ನೋವು ಕಾಣುವುದೂ ಇಲ್ಲ ಅರ್ಥವಾಗುವುದೂ ಇಲ್ಲ. ಏಕೆಂದರೆ ಆಧುನಿಕ ಅಭಿವೃದ್ಧಿ ಸಂಕಥನದಲ್ಲಿ ನೆಲೆ ಕಳೆದುಕೊಳ್ಳುವವರ ತ್ಯಾಗ, ಸಂಭಾವ್ಯ ಫಲಾನುಭವಿಗಳ ಉದ್ಧಾರಕ್ಕೆ ಅನಿವಾರ್ಯವಾಗಿರುತ್ತದೆ. ಒಂದು ಕೆರೆ ಒತ್ತುವರಿಯಾದರೆ ಅದು ನೂರಾರು ಕುಟುಂಬಗಳ ನಿರ್ಗತಿಕತೆಗೆ ಕಾರಣವಾಗುತ್ತದೆ ಎಂಬ ಸರಳ ಸೂಕ್ಷ್ಮವನ್ನೂ ಗ್ರಹಿಸಲಾರದಷ್ಟು ಮಟ್ಟಿಗೆ ಆಧುನಿಕತೆ ನಮ್ಮ ಪ್ರಜ್ಞೆಯನ್ನು ಆವರಿಸಿಬಿಟ್ಟಿದೆ. ಎಕರೆಗಟ್ಟಲೆ ಪ್ರದೇಶದಲ್ಲಿ ನಿರ್ಮಿಸಲಾಗುವ ಬೃಹತ್ ಅಪಾರ್ಟ್‌ಮೆಂಟ್‌ಗಳಲ್ಲಿ ಈಜುಕೊಳವನ್ನು ನಿರೀಕ್ಷಿಸುವ ಸುಶಿಕ್ಷಿತ ಸಮಾಜ, ಅಪ್ಪಿತಪ್ಪಿಯೂ ಉದ್ಯಾನವನ್ನು ಅಪೇಕ್ಷಿಸುವುದಿಲ್ಲ. ಮಳೆನೀರನ್ನು ಹೀರಿಕೊಳ್ಳುವ ನಿಸರ್ಗದತ್ತ ಮೂಲಗಳನ್ನೂ ನುಂಗಿ ಬೆಳೆಯುವ ಕಾಂಕ್ರೀಟ್ ನೆಲಹಾಸುಗಳು, ಕಟ್ಟಡಗಳು ಸಹಜವಾಗಿಯೇ ಅತಿವೃಷ್ಟಿಯಾದಾಗ ಈಜುಕೊಳವಾಗುತ್ತವೆ.

ಅಧಿಕಾರ ರಾಜಕಾರಣಕ್ಕೆ ರಿಯಲ್ ಎಸ್ಟೇಟ್ ಮತ್ತು ಗಣಿ ಉದ್ಯಮ ಮೆಟ್ಟಿಲಾಗಿರುವುದರಿಂದಲೇ ಇಂದು ನಗರಾಭಿವೃದ್ಧಿ ಎಂಬ ಪರಿಕಲ್ಪನೆಯೂ ಒತ್ತುವರಿ ಮತ್ತು ಅಕ್ರಮಗಳ ಮೂಲಕವೇ ಸಾಕಾರಗೊಳ್ಳುತ್ತದೆ. ಗ್ರಾನೈಟ್ ಉದ್ಯಮ, ಕಲ್ಲು ಗಣಿಗಾರಿಕೆ, ಮರಳು ಗಣಿಗಾರಿಕೆ, ರಿಯಲ್ ಎಸ್ಟೇಟ್ ಉದ್ಯಮ ಮತ್ತು ನಗರಾಭಿವೃದ್ಧಿ ಇವೆಲ್ಲದರ ಅನೈತಿಕ ಸಂಬಂಧವನ್ನು ಈ ವರ್ಷದ ಅತಿವೃಷ್ಟಿ ಬಯಲುಮಾಡಿದೆ. ಅಭಿವೃದ್ಧಿಯ ಪಥದಲ್ಲಿ ಹರಿದಾಡುವ ಭ್ರಷ್ಟ ಹಣ ಮತ್ತು ಅಕ್ರಮ ಸಂಪತ್ತು ಅಧಿಕಾರಶಾಹಿಯ ನರನಾಡಿಗಳಲ್ಲೂ ಹರಡಿರುವುದನ್ನು ಇತ್ತೀಚಿನ ಕೆಲವು ಹಗರಣಗಳು ಸ್ಪಷ್ಟವಾಗಿ ತೆರೆದಿಟ್ಟಿವೆ. ಸ್ವಾಭಾವಿಕವಾಗಿ ಮಳೆನೀರನ್ನು ಹೀರಿಕೊಳ್ಳುವ ಭೂ ಪ್ರದೇಶವನ್ನು ಕಾಂಕ್ರೀಟ್ ಹಾಸುಗಳ ಮೂಲಕ ಒಣಗಿಸಲಾಗಿದ್ದು, ಮತ್ತೊಂದೆಡೆ ಮಳೆನೀರಿನ ಸ್ವಾಭಾವಿಕ ಸಂಗ್ರಹಾಗಾರಗಳಾದ ಕೆರೆಗಳನ್ನೂ ಕಾಂಕ್ರೀಟ್‌ಮಯ ಮಾಡುವ ಅಭಿವೃದ್ಧಿಯ ಅವೈಜ್ಞಾನಿಕ ವಿಧಾನವೇ ಇಂದಿನ ದುರಂತಗಳಿಗೆ ಕಾರಣವಾಗಿದೆ.

ನಗರಾಭಿವೃದ್ಧಿ ಯೋಜನೆಯನ್ನು ರೂಪಿಸುವವರು ಮಾರುಕಟ್ಟೆ ಶಕ್ತಿಗಳಿಂದ ಮುಕ್ತವಾಗಿ, ನಿಸರ್ಗ ಸಹಜ ವ್ಯತ್ಯಯಗಳನ್ನು ಎದುರಿಸಲು ಶಕ್ಯವಾದ ಒಂದು ವೈಜ್ಞಾನಿಕ ತಳಹದಿಯ ಅಭಿವೃದ್ಧಿ ಮಾದರಿಯನ್ನು ರೂಪಿಸುವುದು ಇಂದಿನ ತುರ್ತು ಅವಶ್ಯಕತೆಯಾಗಿದೆ.

೯೦ ವರ್ಷಗಳಲ್ಲೇ ಅತಿ ಹೆಚ್ಚು ಮಳೆಯಾಗಿರುವುದು ನಿಸರ್ಗದತ್ತ ವಿದ್ಯಮಾನ. ಈ ಮಳೆಯನ್ನು ಎದುರಿಲಾಗದೆ ತಿಣುಕಾಡುತ್ತಿರುವುದು ನಮ್ಮ ಆಡಳಿತ ವ್ಯವಸ್ಥೆಯ ದೌರ್ಬಲ್ಯ ಮತ್ತು ನ್ಯೂನತೆ. ಇದು ಅನಿರೀಕ್ಷಿತ ಎಂದು ಹೇಳುವುದು ಈ ವ್ಯವಸ್ಥೆಯಲ್ಲಿನ ದೂರದೃಷ್ಟಿಯ ಕೊರತೆ. ನೈಸರ್ಗಿಕ ವಿಕೋಪಗಳಿಂದ ರಕ್ಷಿಸಿಕೊಳ್ಳುವ ವಿಧಾನಗಳನ್ನು ವಿಜ್ಞಾನ ಕಲ್ಪಿಸುತ್ತದೆ. ಆದರೆ ಅಭಿವೃದ್ಧಿಯ ಹಾದಿಯಲ್ಲಿ ವೈಜ್ಞಾನಿಕ ಚಿಂತನೆ ಇಲ್ಲದೆ ಹೋದಾಗ ಮತ್ತಷ್ಟು ‘ಸುಂದರ ನಗರಿಗಳು’ ಸೃಷ್ಟಿಯಾಗುತ್ತವೆ.

andolana

Recent Posts

ಶೀಘ್ರದಲ್ಲೇ ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ: ರಹೀಂ ಖಾನ್‌

ಬೆಳಗಾವಿ: ಆದಷ್ಟು ಬೇಗ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲಾಗುತ್ತದೆ ಎಂದು ಸಚಿವ ರಹೀಂ ಖಾನ್‌ ತಿಳಿಸಿದರು. ವಿಧಾನಪರಿಷತ್‌ ಕಲಾಪದಲ್ಲಿ…

3 mins ago

ಎಚ್‌ಡಿಕೆ ಹುಟ್ಟುಹಬ್ಬ: ಮಂಡ್ಯದಲ್ಲಿ ಕಾರ್ಯಕರ್ತರಿಂದ ಅದ್ಧೂರಿ ಆಚರಣೆ

ಮಂಡ್ಯ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಹುಟ್ಟುಹಬ್ಬವನ್ನು ಮಂಡ್ಯ ಜಿಲ್ಲೆಯ ಜೆಡಿಎಸ್‌ ಕಾರ್ಯಕರ್ತರು ಅದ್ಧೂರಿಯಾಗಿ ಆಚರಣೆ ಮಾಡಿದರು. ಮದ್ದೂರಿನಲ್ಲಿ ಮಾಜಿ…

11 mins ago

ಕೋಳಿ ಮೊಟ್ಟೆ ಸೇವಿಸಿದರೆ ಕ್ಯಾನ್ಸರ್‌ ಬರುವ ವದಂತಿ: ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಿಷ್ಟು.!

ಬೆಳಗಾವಿ: ಕೋಳಿ ಮೊಟ್ಟೆ ಸೇವಿಸಿದರೆ ಕ್ಯಾನ್ಸರ್‌ ಬರುವ ವದಂತಿ ಎಲ್ಲೆಡೆ ಹಬ್ಬಿರುವ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಪ್ರತಿಕ್ರಿಯೆ…

28 mins ago

ಮಳವಳ್ಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮನ

ಮಳವಳ್ಳಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಮಳವಳ್ಳಿಯಲ್ಲಿ ನಡೆಯಲಿರುವ ಸುತ್ತೂರಿನ ಆದಿ ಜಗದ್ಗುರು ಶ್ರೀ ಶಿವರಾತ್ರಿ ಶಿವ ಯೋಗಿಗಳರವರ 1066ನೇ ಜಯಂತಿ…

1 hour ago

ಗ್ರೇಟರ್‌ ಬೆಂಗಳೂರು ಆಡಳಿತ 2ನೇ ತಿದ್ದುಪಡಿ ವಿಧೇಯಕಕ್ಕೆ ಅನುಮೋದನೆ

ಬೆಳಗಾವಿ: ವಿಧಾನಸಭೆಯಲ್ಲಿ ಇಂದು ಗ್ರೇಟರ್‌ ಬೆಂಗಳೂರು ಆಡಳಿತ 2ನೇ ತಿದ್ದುಪಡಿ ವಿಧೇಯಕ ಮಂಡನೆ ಆಗಿದೆ. ಡಿಸಿಎಂ ಹಾಗೂ ಬೆಂಗಳೂರು ನಗರಾಭಿವೃದ್ಧಿ…

1 hour ago

ಹಾಸನ| ಆಟವಾಡುತ್ತಾ ನೀರಿನ ಸಂಪ್‌ಗೆ ಬಿದ್ದು 4 ವರ್ಷದ ಬಾಲಕ ಸಾವು

ಹಾಸನ: ಸೈಕಲ್‌ನಲ್ಲಿ ಆಟವಾಡುತ್ತಿದ್ದ ವೇಳೆ ಆಯತಪ್ಪಿ ನೀರಿನ ಸಂಪ್‌ಗೆ ಬಿದ್ದು 4 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಹಾಸನದ ಅಣಚಿಹಳ್ಳಿ…

2 hours ago