ಎಡಿಟೋರಿಯಲ್

ತರೀಕೆರೆ ಏರಿಮೇಲೆ : ಪುಟ್ಟ ನಕ್ಷತ್ರ ಆಮೆಯ ನೆನಪು

– ರಹಮತ್ ತರೀಕೆರೆ 

ವಿಶ್ವವಿದ್ಯಾಲಯಕ್ಕೆ ನಾನು ಸೇರಿದಾಗ, ನಮ್ಮದೇ ಆದ ಕ್ಯಾಂಪಸ್ ಇರಲಿಲ್ಲ. ಹಂಪಿಯ ಮಂಟಪಗಳಲ್ಲಿ ಇದ್ದೆವು. ಕ್ಯಾಂಪಸ್ಸಿಗಾಗಿ 650 ಎಕರೆ ಜಾಗ ಮಂಜೂರಾಗಿತ್ತು. ಕುಲಪತಿಗಳಾದ ಚಂದ್ರಶೇಖರ ಕಂಬಾರರು ಒಂದು ದಿನ ಏಳೆಂಟು ಜನರಷ್ಟೆ ಇದ್ದ ನಮ್ಮನ್ನು, ಜಾಗ ತೋರಿಸಲು ಕರೆದೊಯ್ದರು. ಕಾಮಾಲಾಪುರದ ಬೇಟೆ ನಾಯಿಗಳಿಂದ ಹೇಗೊ ಬದುಕುಳಿದಿರುವ ಮೊಲಗಳು, ನಮ್ಮನ್ನು ಕಂಡು ಜಿಗಿದು ಓಡಿದವು. ಬೇಟೆನಾಯಿಯನ್ನು ಮೊಲ ಓಡಿಸಿಕೊಂಡು ಬಂದ ಜಾಗಗಳನ್ನು ರಾಜ್ಯ ಕಟ್ಟಲು ಆರಿಸುವ ದಂತಕತೆಗಳು ನೆನಪಾದವು. ಅದೊಂದು ಒಂದೂವರೆ ಕಿಮೀ ಅಗಲ ಎರಡು ಕಿಮೀ ಉದ್ದದ ಬೆಂಗಾಡು. ಪಾಪಾಸುಕಳ್ಳಿಯೂ ಮುಳ್ಳುಕಂಟಿಗಳೂ ಮೊಳಕಾಲುದ್ದ ಬೆಳೆದ ಸೂಚಿಮುಳ್ಳಿನ ಹುಲ್ಲೂ ಬೆಳೆದಿದ್ದವು. ನಡುನಡುವೆ ಕಲ್ಲುದುಂಡಿಯ ಬೆಟ್ಟಗಳು, ಕೊರಕಲು ಕಣಿವೆಗಳು ಹಾಗೂ ಸ್ಥಳೀಯರು ಬಗೈರ್‍ಹುಕುಂ ಸಾಗುವಳಿಗೈದ ಗರಸುಮಣ್ಣಿನ ಜಮೀನು ಪಟ್ಟೆಗಳು. ಚುರುಗುಟ್ಟುವ ಬಿಸಿಲಲ್ಲಿ ಕೆರೆ ದಂಡೆಯಿಂದ ನಡೆಯುತ್ತ ದಕ್ಷಿಣ ತುದಿಯಲ್ಲಿರುವ ಗುಡ್ಡಕ್ಕೆ ಹೋಗಿ ತಲುಪಿದೆವು. ಹುಲ್ಲಮುಳ್ಳು ಬಟ್ಟೆಗೆಲ್ಲ ಚುಚ್ಚಿಕೊಂಡು ಶರಶಯ್ಯೆಯ ಭೀಷ್ಮರಾದೆವು.

ವಿಶ್ವವಿದ್ಯಾಲಯವು ಈ ಬಯಲಿನ ಭೂಸ್ವರೂಪವನ್ನು ಹೆಚ್ಚು ಕದಲಿಸದೆ, ಆಲಯ ಕಟ್ಟಲು ನಿರ್ಧರಿಸಿತು. ಬಂಡೆಗಳನ್ನು ಒಡೆಯದೆ, ದಿಬ್ಬಗಳನ್ನು ಅಗೆಯದೆ, ಹಳೇ ಗಿಡಮರಗಳ ಮೋಟುಗಳನ್ನು ತೆಗೆಯದೆ, ಕೊರಕಲನ್ನು ಮುಚ್ಚದೆ, ಅವನ್ನು ಬಳಸಿಕೊಂಡೇ ಅಂಕುಡೊಂಕಾಗಿ ಹರಿವ ರಸ್ತೆಗಳನ್ನು ಕಲ್ಪಿಸಿತು. ಸ್ಥಳೀಯ ಪರಿಸರಕ್ಕೆ ಹೊಂದುವ ಸಸಿಗಳನ್ನು ಹಚ್ಚಲಾಯಿತು. ಹೊರಗಿನಿಂದ ಹೋದವರು ಏನೇ ಮಾಡಿದರೂ, ಪ್ರತಿ ಸೀಮೆಯ ಪರಿಸರಕ್ಕೂ ತನಗೆ ಏನನ್ನು ಉಳಿಸಿಕೊಳ್ಳಬೇಕು ಉಳಿಸಿಕೊಳ್ಳಬಾರದು ಎಂಬ ತರ್ಕವಿರುತ್ತದೆ. ನಾವು ಹಚ್ಚಿದ ಮೇಫ್ಲವರ್ ಬೀಟೆ ತೇಗದ ಸಸಿಗಳು ಊರ್ಜಿತವಾಗÀಲಿಲ್ಲ. ತೆಂಗು ಸೊರಗಿತು. `ಮಾರ್ಗ’ದ ಎಂ.ಎಂ. ಕಲಬುರ್ಗಿಯವರು ನೆಡಿಸಿದ ಗುಲಾಬಿ ತೋಟ ಒಣಗಿತು. ಆದರೆ ಆಲ ಅರಳಿ ಬೇವು ಬದುಕಿದವು. ಹಕ್ಕಿಗಳು ಹಾಕಿದ ಹಿಕ್ಕೆಯ ಬೀಜಗಳಿಂದಾದ ಸಸಿಗಳದ್ದು ದೊಡ್ಡಪಾಲು. ಮೂರೇ ದಶಕಗಳಲ್ಲಿ ಕುರುಚಲ ಕಾಡು, ತಾನಾಗಿ ಬೆಳೆದು ಆಲಯ ಮತ್ತು ಬಯಲುಗಳೆರಡನ್ನೂ ಹಸಿರುಬಾಹುಗಳಲ್ಲಿ ಬಳಸಿತು. ಮಾವು ಗಂಧ ಬೇವು ಆಲ ಹುಣಸೆ ತಾರೆ ಬಾರೆ ತವಸಿ ಹಾಲೆ ಸೀತಾಫಲ ಕಲ್ಲಾಲ ತಾಳೆ ಹೊಂಗೆ ತುಗ್ಲಿ ತರೆ ಬಾಗೆ ಮಿಟ್ಲಿ ಬೀಟೆ ನೇರಳೆ ಮೇಲೆ ಬಂದವು. ಕಳ್ಳಿ ಸೊಕ್ಕಿತು. ಕವಳೆ ಕಾರೆ ಕಬಳಿ ಪರಗಿ ಬಾರೆ ಪೊದೆಗಳು ಹಣ್ಣು ಬಿಡತೊಡಗಿದವು. ಅಜ್ಞಾತ ಮುಳ್ಳುಬಳ್ಳಿಯೊಂದು ಬದಿಯ ಮರದ ಮೇಲೇರಿ, ದೀಪಾಲಂಕಾರ ಮಾಡಿದಂತೆ ರಕ್ತಗೆಂಪಿನ ಹಣ್ಣನ್ನು ಬಿಟ್ಟಿತು. ಗುಲಗಂಜಿಯ ಬಳ್ಳಿಗಳಂತೂ ಎಲ್ಲಿಬೇಕಲ್ಲಿ. ಗಿಣಿಹಸಿರು ಬಣ್ಣದ ಸಣ್ಣೆಲೆಗಳ ಗಿಡ್ಡನೆಯ ಮುಳ್ಳುಗಳಿರುವ ತರೇಗಿಡಗಳು ಸೊಕ್ಕಿದವು. ಕಲ್ಲುಗಳ ಸಂದಿಯಲ್ಲೇ ಬೇರುತಳೆದು ಬೆಳೆವ ಕಲ್ಲಾಲ, ಹಾಲೆ, ತುಗ್ಲಿಗಳು ‘ಬಂಡೆಗಳ ಮೇಲೆ ಚಿಗುರೊಡೆಯಬೇಕಿದೆ’ ಸಂಕಲ್ಪವನ್ನು ರುಜುವಾತು ಮಾಡಿದವು. ಹಾಲೆಯಂತೂ ಹಂಗಾಮಿನಲ್ಲಿ ಹೂವಿನ ಚಾದರ ಹೊದ್ದು ನಿಂತಿತು. ಕಾಯಿ ಒಣಗಿದ ಕಾಲದಲ್ಲಿ ತುಗ್ಗಲಿ ಗಾಳಿಗೆ ಗಗ್ಗರ ನುಡಿಸತೊಡಗಿತು. ಮಳೆಗಾಲದಲ್ಲಿ ಇಲ್ಲಿ ಯಥೇಚ್ಚವಾಗಿ ಕಾಡು ಸಬಸೀಗೆ ಬೆಳೆಯುತ್ತಿತ್ತು. ತೋಟದ ಕೆಲಸಗಾರರು ಕಿತ್ತು ಒಯ್ಯುತ್ತಿದ್ದರು. ನಮಗೂ ಕೊಡುತ್ತಿದ್ದರು.
ನಮ್ಮ `ವಿದ್ಯಾರಣ್ಯ’ ಹೆಸರಿನ ಕ್ಯಾಂಪಸ್ಸಿನ ಮಧ್ಯಭಾಗದಲ್ಲಿರುವ ಹಾಸುಬಂಡೆಯ ಮೇಲೆ ನಮ್ಮ ವಿಭಾಗ `ಅಲ್ಲಮ’ ಕಟ್ಟಡವಿತ್ತು. ಅಲ್ಲಿಂದ ಉತ್ತರಕ್ಕೆ ದಿಟ್ಟಿ ಹಾಯಿಸಿದರೆ, ತುಂಗಭದ್ರೆಯ ಆಜುಬಾಜಿನಲ್ಲಿರುವ ಮತಂಗ, ಅಂಜನಾದ್ರಿ ಕಲ್ಲುಬೆಟ್ಟಗಳ ಸರಣಿಯೂ, ಅವುಗಳ ಶಿಖರಗಳಲ್ಲಿ ತಲೆಗೆ ಕಟ್ಟಿದ ಬಾಸಿಂಗಗಳಂತೆ ಗುಡಿಗಳೂ ಕಾಣುತ್ತವೆ. ದಕ್ಷಿಣಕ್ಕೆ ಲೋಹದದಿರಿನ ಸೊಂಡೂರು ಬೆಟ್ಟಗಳ ನಿಡಿದಾದ ಸಾಲು. ಮೂಡಣಕ್ಕೆ ಪಿರಮಿಡ್ಡಿನಂತಿರುವ ಮೊಲ ಕರಡಿ ಚಿರತೆ ಕಾಡುಹಂದಿ ವಾಸಿಸುವ ಬೆಟ್ಟ. ಹಿಂಭಾಗದಲ್ಲಿದ್ದ ಹಾಸುಬಂಡೆಯಲ್ಲೊಂದು ನೀರದೊಣೆಯಿತ್ತು. ಅದರ ಸುತ್ತಲಿದ್ದ ಸಸ್ಯಾವಳಿ ಋತುಮಾನಕ್ಕೆ ತಕ್ಕಂತೆ ಬಾಡುವ ಒಣಗುವ ಚಿಗುರು ಸೊಕ್ಕುವ ಹೂಹಣ್ಣು ಬಿಡುವ ರೂಪಾಂತರ ಅವಸ್ಥೆಗಳಿಗೆ ಸಾಕ್ಷಿಯಾಗುತ್ತ ಕಾಲು ಶತಮಾನ ಪೂರೈಸಿದೆ. ಬಂಡೆಯ ಕೆಳಗೆಲ್ಲೊ ಬೇರಿಳಿಸಿದ್ದ ಕಾಡುಮಲ್ಲಿಗೆ ಬೇಸಗೆಯಲ್ಲಿ ಎಲೆಯನೆಲ್ಲ ಸುಡಿಸಿಕೊಂಡು ಸತ್ತೇ ಹೋಯಿತು ಎನ್ನುವಂತೆ ಇರುತ್ತಿತ್ತು. ಒಂದೇ ಮಳೆಗೆ ನಳನಳಿಸಿ ಹಸಿರಾಗಿ ಹೂವುಮೊಗ್ಗು ಬಿಡುತ್ತಿತ್ತು. ಬಯಲುಸೀಮೆಯ ಕುರುಚಲು ಕಾಡು ಬದುಕಿರುವುದೇ ಕಾಯುವ ಸಹನೆಯ ಗುಟ್ಟಿನಲ್ಲಿ. ಬಂಡೆಯ ಬಿರುಕುಗಳಲ್ಲಿ ಹಳದಿಮೈ ಕೆಂಪು ತಲೆ, ಕಪ್ಪುಬೆನ್ನಿನ ಓತಿಗಳು ಅದೆಷ್ಟು ಶತಮಾನಗಳಿಂದಲೊ ಇದ್ದಾವೊ? ಅವುಗಳ ಪೂರ್ವಜರು ಬೇಟೆಗೆ ಬರುತ್ತಿದ್ದ ವಿಜಯನಗರದ ದೊರೆಗಳನ್ನು ನೋಡಿರಬಹುದು. ಹಾದುಹೋದ ಸೈನಿಕರ ಪದಾಘಾತ ಆಲಿಸಿರಬಹುದು. ಅವು ನಮ್ಮನ್ನು ಕಂಡೊಡನೆ ಬುಳಕ್ಕನೆ ಬಂಡೆಸಂದಿನಲ್ಲಿ ಅಡಗುತ್ತಿದ್ದವು.
ಕ್ಯಾಂಪಸ್ಸಿನ ಕಾಡುಹಣ್ಣು ತಿನ್ನಲು ಎಲ್ಲೆಲ್ಲಿಂದಲೊ ಪಕ್ಷಿಗಳು ಬರುತ್ತಿದ್ದವು. ಒಮ್ಮೆ ಬುಲಬುಲ್ ಬೆಳ್ಳಗಿನ ಜೋಳದಕಾಳಿನ ಗಾತ್ರದ ಹಣ್ಣುಗಳನ್ನು ಮೆಳೆಯ ಮೇಲೆ ಕೂತು ಮುಕ್ಕುವುದನ್ನು ಕಂಡೆ. ನಮ್ಮ ಕಣ್ಣಲ್ಲಿ ಅನುಪಯುಕ್ತವಾದ ಗಿಡಗಂಟೆಗಳು ಹಕ್ಕಿಗಳ ಪಾಲಿಗೆ ಸೂರು ಮತ್ತು ಅನ್ನದ ತಟ್ಟೆಗಳು. ಕಲ್ಕೋಳಿಗಳು ನಮ್ಮನ್ನು ಕಂಡರೆ ನಿಮ್ಮ ಸಹವಾಸ ಬೇಡ ಎಂಬಂತೆ ನಿಧಾನಕ್ಕೆ ಪೊದೆಯಲ್ಲಿ ಮರೆಯಾಗುತ್ತಿದ್ದವು. ಒಮ್ಮೆ ಕ್ಯಾಂಪಸ್ಸಿನಲ್ಲಿ ಹರಿವ ತೊರೆಯ ಬದಿ ಕೇಸರಿ ಮತ್ತು ಬಿಳಿ ಬಣ್ಣ ಪ್ಯಾರಡೈಜ್ ಫ್ಲೈಕ್ಯಾಚರುಗಳನ್ನು ಕಂಡೆ. ಪಶ್ಚಿಮಘಟ್ಟದ ಈ ಪಕ್ಷಿಗಳನ್ನು ಹಿಂದಿನಿಂದಲೂ ಇಲ್ಲಿವೆಯೊ ಅಥವಾ ಕಾಡುಬೆಳೆದ ಬಳಿಕ ವಲಸೆ ಬಂದವೊ ತಿಳಿಯದು. ಸೊಂಡೂರು ಕಾಡಿನಲ್ಲಿ ತೊರೆ ಹರಿವ ಪ್ರದೇಶಗಳಲ್ಲೆಲ್ಲ ಇವಿರುವುದು ಗಮನಕ್ಕೆ ಬಂದಿತು. ಬಹುಶಃ ಮೈನಿಂಗ್ ಕೋಲಾಹಲವು ದಟ್ಟವಾಗಿ ಬೆಳೆದು ಆಶ್ರಯದಾಣದಂತೆ ತೋರುವ ವಿದ್ಯಾರಣ್ಯಕ್ಕೆ ಅವನ್ನು ಓಡಿಸಿರಬಹುದು. ಮಧುರವಾಗಿ ಸಿಳ್ಳುಹಾಕುವ ಒಂದು ಪುಟ್ಟಹಕ್ಕಿ ಹಾಡನ್ನಂತೂ ಸಾವಿರ ಸಲ ಕೇಳಿರುವೆ. ಅದು ಕಣ್ಣಿಗೆ ಕಾಣಿಸಿದ್ದು ಕಡಿಮೆ. ಇವಕ್ಕೆಲ್ಲ ಹೋಲಿಸಿದರೆ ಭಂಡುಬಿದ್ದ ನವಿಗಳು ಕ್ಯಾರೆಯೆನ್ನದೆ ಓಡಾಡುತ್ತಿದ್ದವು. ಒಮ್ಮೆ ನಾನು ತರಗತಿಯಲ್ಲಿರುವಾಗ, ಕಿಟಕಿಯವರೆಗೆ ಕತ್ತೆತ್ತಿ ಇಣುಕಿ, ಉದಾಸೀನದಲ್ಲಿ ಹೊರಟುಹೋಯಿತು. ಮೊಲ, ಕಲ್ಲಕೋಳಿ, ಗೌಜುಗಗಳು ಸಂಜೆಯ ನಿಶ್ಯಬ್ದದಲ್ಲಿ ರಸ್ತೆಗಿಳಿಯುತ್ತಿದ್ದವು. ನನ್ನ ಖೋಲಿಯ ತೆಂಕುದಿಕ್ಕಿನ ಕಿಟಕಿ ತೆರೆದರೆ ಆಗಸ ಕಾಣದಷ್ಟು ಮರಗಿಡಗಳಿದ್ದವು. ಅವುಗಳಲ್ಲೊಂದು ಛತ್ರಿಮರ ಕೆಳಗೆ ಬಂಡೆಸಿಕ್ಕಿದ್ದರಿಂದಲೊ ಏನೊ, ಒಣಗಿತು. ಒಂದು ದಿನ ಎರಡು ಕಂಚುಗಾರ ಹಕ್ಕಿಗಳು ಬಂದು ಕುಟ್ಟತೊಡಗಿದವು. ಅದು ಕುಲುಮೆಯ ಅಡಿಗಲ್ಲ ಸದ್ದನ್ನು ನೆನಪಿಸುವಂತಿತ್ತು. ಅವು ಅಲ್ಲಿದ್ದು ಎರಡು ಮೂರು ಬೀಡು ಮರಿಗಳನ್ನು ಮಾಡಿದವು. ಮರವು ಗೆದ್ದಲು ಹಿಡಿದು ಕುಸಿಯಿತು. ಕಂಚುಗಾರಗಳು ಬೇರೊಂದು ಒಣಮರ ಹುಡುಕಿ ಹೋದವು. ನಿಸರ್ಗದ ಲೀಲಾಜೀವನದಲ್ಲಿ ಮರ ಒಣಗುವುದೂ ಮುಖ್ಯ. `ಇಲ್ಲಿ ಯಾರೂ ಅಮುಖ್ಯರಲ್ಲ’.
ನಾನು ಕ್ಯಾಂಪಸ್ಸಿನ ಕಾಡಿನಲ್ಲಿ ಹುಚ್ಚನಂತೆ ತಿರುಗುತ್ತಿದ್ದೆ. ಕೆಲವೊಮ್ಮೆ ವಿದ್ಯಾರ್ಥಿಗಳೂ ಜತೆಗೂಡುತ್ತಿದ್ದರು. ಅಲ್ಲಿನ ಗಿರಿಸೀಮೆ ಭಾಗದ ಕಾಡು ಬಹಳ ಸುಂದರವಾಗಿತ್ತು . ಅಲ್ಲೊಂದು ಸಣ್ಣಝರಿ ಹರಿಯುತ್ತದೆ. ಸುತ್ತ ಕೋಟೆ ಕಟ್ಟಿದಂತಿರುವ ದಟ್ಟ್ಟಹಳುವಿನಿಂದ ಧುತ್ತನೆ ಚಿರತೆ ಕರಡಿ ಹಾರಿ ಹೊರಬಹುದೇ ಎಂಬ ಅಳುಕಿನಲ್ಲೇ ಅದರ ಚೆಲುವನ್ನು ಆಸ್ವಾದಿಸಬೇಕಿತ್ತು. ವಿದ್ಯಾರಣ್ಯದಲ್ಲಿ ಅನಾಮಿಕ ಮರವೊಂದು ಮಂಡಕ್ಕಿ ಅಂಟಿಸಿದಂತೆ ಸಣ್ಣನೆಯ ಹೂಬಿಡುತ್ತದೆ-ಮೈತುಂಬ ಮೊಗ್ಗಿನ ಚಾದರ ಹೊದಿಸಿದಂತೆ. ಅ ಹೂವು ಎಷ್ಟು ಸಣ್ಣದೆಂದರೆ, ದುಂಬಿ ಕೂರಲೂ ತಾವಿಲ್ಲ. ಅವು ಹಾರುತ್ತಲೇ ಸೂಜಿಮೂತಿಯನಿಟ್ಟು ಮಧುವನ್ನು ಹೀರುತ್ತಿದ್ದವು. ಮರದಡಿ ನಿಂತರೆ ನೂರು ಕಿನ್ನರಿ ನುಡಿಸುವ ಸಂಗೀತಗೋಷ್ಠಿಯೊಳಗೆ ಇದ್ದಂತಾಗುತ್ತಿತ್ತು. ಒಣಗಿದ ಬಿದಿರು ಮೆಳೆಗಳಲ್ಲಿ ಜೀರುಂಡೆಗಳು ರಂಧ್ರ ಕೊರೆದು ಮನೆಯ ಮಾಡುತ್ತಿದ್ದವು. ಮನೆಗೆ ಬಂದುಹೋಗುವ ಧಾವಂತದಲ್ಲಿ ಮೆಳೆಯನ್ನೇ ಕೊಳಲಮೇಳ ಮಾಡುತ್ತಿದ್ದವು.
ಆದರೆ ಕಾಡಿನ ಈ ನಾದ ಚೆಲುವಿನಲ್ಲಿ ನೋವೂ ಇತ್ತು. ನಾನು ಕ್ಯಾಂಪಸ್ಸಿಗೆ ಜನಸಂದಣಿ ಇರುವ ಹಂಪಿ ರಸ್ತೆಯನ್ನು ಬಿಟ್ಟು ಬಳ್ಳಾರಿ ರಸ್ತೆಯ ಮೂಲಕವೇ ಬರುತ್ತಿದ್ದೆ. ಇದು ತುಸು ದೂರವಾದರೂ, ನಾಲ್ಕು ಕಿಮೀ ಬಿಳಿಕಲ್ಲು ಅರಣ್ಯದೊಳಗೆ ಹಾಯುವ ಆನಂದ ಸಿಗುತ್ತಿತ್ತು. ಒಮ್ಮೆ ಕಾರಿನಲ್ಲಿ ಬರುವಾಗ ದೂರದಲ್ಲಿ ಕಪ್ಪುರಸ್ತೆಯ ಮೇಲೆ ಯಾರೋ ನಿಧಾನವಾಗಿ ಸಾವರಿಸಿಕೊಂಡು ತೆವಳುತ್ತಿರುವುದು ಕಂಡಿತು. ನಿಲ್ಲಿಸಿ ನೋಡಿದೆ. ಮುದ್ದಾದ ನಕ್ಷತ್ರ ಆಮೆ. ಕಪ್ಪುಬೋಕಿಯ ಮೇಲೆ ಸುಣ್ಣದ ಗೆರೆಯೆಳೆದ ಮೇಲುಮೈ- ಮೊಹರಂ ಕಲಾವಿದ. ತೆಳಗೆ ಬಿಳಿರಬ್ಬರಿನಂತಹ ತೆವಳುದೇಹ. ಹಂಪಿ ಪ್ರವಾಸಿಗಳ ಗಾಡಿಗಳು ಸರಭರ ಹಾಯುವ ರಸ್ತೆಯಲ್ಲಿ ಸವಾರಿ ಹೊರಟಿದೆ-ಮಹಾ ನಿಧಾನದಲ್ಲಿ. ಎತ್ತಿ ಪಕ್ಕದ ಪೊದೆಗೆ ಬಿಟ್ಟೆ. ಬಿಸಿಲ ಈ ಕುರುಚಲು ಕಾಡಲ್ಲಿ ಯಾವೆಲ್ಲ ಜೀವರಾಶಿಗಳಿವೆಯೊ? ಪುಟ್ಟಕೂರ್ಮ ಹೇಗೆ ಸಂಭಾಳಿಸುತ್ತದೆಯೋ ತನ್ನ ಸಂತತಿಯನ್ನು ನಿಷ್ಕರುಣ ವಾಹನಗಳು ಹಾಯುವ ರಸ್ತೆಯಲ್ಲಿ. ಮೊದಲ ದಿನಗಳಲ್ಲಿ ನಮಗಿಂತ ಮೊದಲೇ ಹೋಗಿರುತ್ತಿದ್ದ ಹಾವುಗಳು ಕೋಣೆಗಳಲ್ಲಿ ಸ್ವಾಗತಿಸುತ್ತಿದ್ದವು. ಹಾವುಗಳು ಕ್ರಮೇಣ ಕಡಿಮೆಯಾದವು. ಅತಿಕ್ರಮ ಪ್ರವೇಶಿಗಳ ಪ್ರತಿನಿಧಿಯಂತಿದ್ದ ನನಗೆ, ನಾಗರಿಕ ಸೌಲಭ್ಯದ ರಸ್ತೆ ಕಟ್ಟಡಕಗಳ ಹಿಂಸಾತ್ಮಕ ಮುಖ ಅನುಭವಕ್ಕೆ ಬರತೊಡಗಿತು. ಬಿಳಿಕಲ್ಲುಬೆಟ್ಟದ ಕಾಡಿನಲ್ಲಿ ಟೈರುಗಳಿಗೆ ಸಿಕ್ಕ ಓತಿ ಅಳಿಲು ಹಾವು ಕಪ್ಪೆಗಳ ಕಳೇವರಗಳು ಕಾಣುತ್ತಿದ್ದವು. ರಸ್ತೆಗೆ ಹಪ್ಪಳವಾಗಿ ಅಂಟಿಕೊಂಡಿದ್ದ ಒಂದು ರಸೆಲ್‍ವೈಪರಿನ ಸುಂದರ ಚರ್ಮದ ಕನ್ನಡಿಗಳು, ರಸ್ತೆಗೆ ಬಿಡಿಸಿದ ರಕ್ತದ ರಂಗೋಲಿಯಾಗಿದ್ದವು. ನಾನು ಕಾಡಿನ ಹಾದಿಯಲ್ಲಿ ವೇಗ ಕಡಿಮೆ ಮಾಡಿದೆ. ಈಗ ಹೋದರೂ ಮೈತುಂಬ ಎಚ್ಚರದಲ್ಲಿ ಗಾಡಿ ನಡೆಸುತ್ತೇನೆ. ಹಿಂದೆ ನಾನು ಪೊದೆಗೆ ಬಿಟ್ಟಿದ್ದ ನಕ್ಷತ್ರ ಚಿಪ್ಪಿನ ಆಮೆಯ ಮಕ್ಕಳು ಮರಿಮಕ್ಕಳು ಎಲ್ಲಿಯಾದರೂ ಭೇಟಿಯಾಗಬಹುದೇ ಎಂದು ಅತ್ತಿತ್ತ ದಿಟ್ಟಿ ಹಾಯಿಸುತ್ತೇನೆ.
ಮಲೆನಾಡಿನ ಕಾಡೇ ಕಾಡು ಎಂಬ ವ್ಯಸನದಲ್ಲಿದ್ದ ನನಗೆ, ಬಯಲುಸೀಮೆಯ ಕುರುಚಲು ಕಾಡುಗಳ ಚೆಲುವು ಮನಗಂಡಿತು. ಉತ್ತರ ಕರ್ನಾಟಕದ ಸಾಂಸ್ಕøತಿಕ ಲೋಕವೂ ನನಗೆ ಹಂಪಿಗೆ ಹೋದ ಬಳಿಕವೇ ದರ್ಶನ ಕೊಟ್ಟಿತು.

andolanait

Recent Posts

ಮುಡಾ ಪ್ರಕರಣ: ಮುಡಾ ಕಚೇರಿಗಿಂತ ಸಚಿವ ಭೈರತಿ ಸುರೇಶ್‌ ಮನೆಯಲ್ಲೇ ಅಧಿಕ ಫೈಲ್‌: ಶ್ರೀವತ್ಸ

ಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಫೈಲ್‌ಗಳು ಮುಡಾ ಕಚೇರಿಯಲ್ಲಿರುವುದಕ್ಕಿಂತ ಸಚಿವ ಭೈರತಿ ಸುರೇಶ್‌ ಮನೆಯಲ್ಲೇ ಅಧಿಕವಾಗಿವೆ ಎಂದು ಶಾಸಕ ಟಿ.ಎಸ್‌.ಶ್ರೀವತ್ಸ…

1 hour ago

ಮುಡಾ ಕಚೇರಿ ಮೇಲೆ ಇಡಿ ದಾಳಿ: ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ

ಮಂಡ್ಯ: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರಿ ಭೂಮಿಯನ್ನು ಲಪಾಟಾಯಿಸಿದ್ದಾರೆ, ಅದಕ್ಕೆ ಆ ನಿವೇಶನಗಳನ್ನು ವಾಪಾಸ್ಸು ಮಾಡಿದ್ದಾರೆ ಎಂದು ಕೇಂದ್ರ…

2 hours ago

ಮುಡಾ ಕಚೇರಿಯ ಮೇಲೆ ಇಡಿ ದಾಳಿ ದುರುದ್ದೇಶಪೂರ್ವಕ: ಮಾಜಿ ಸಂಸದ ಡಿ.ಕೆ.ಸುರೇಶ್‌

ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಇಂದು (ಅಕ್ಟೋಬರ್‌.18) ಮೂರು ಕಡೆಗಳಲ್ಲಿ ದಾಳಿ ನಡೆಸಿದ್ದು, ಈ ದಾಳಿಯು ಸಂಪೂರ್ಣವಾಗಿ…

3 hours ago

ಮುಡಾ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು: ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ಮುಡಾ ಕೇಸ್‌ ಮುಚ್ಚಿ ಹಾಕುವಲ್ಲಿ ಸರ್ಕಾರಕ್ಕೆ ಲೋಕಾಯುಕ್ತ ಸಹಾಯ ಮಾಡುತ್ತದೆ ಎಂಬ ಶಂಕೆ ಇದೆ. ಹೀಗಾಗಿ ಮುಡಾ ಪ್ರಕರಣವನ್ನು…

3 hours ago

ಭವಾನಿ ರೇವಣ್ಣಗೆ ಬಿಗ್‌ ರಿಲೀಫ್:‌ ಹೈಕೋರ್ಟ್‌ ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌

ಹೊಸದಿಲ್ಲಿ: ಆತ್ಯಾಚಾರ ಸಂತ್ರಸ್ತೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ರೇವಣ್ಣಗೆ ಹೈಕೋರ್ಟ್‌ನಿಂದ ಜಾಮೀನು ಮಂಜೂರು ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಎಸ್‌ಐಟಿ…

3 hours ago

ಮುಡಾ ಪ್ರಕರಣ: ಮುಡಾ ಕಚೇರಿಯ ಮೇಲೆ ಇ.ಡಿ ದಾಳಿ

ಮೈಸೂರು: ಮುಡಾದಲ್ಲಿ ಹಗರಣ ನಡೆದಿದೆ ಎಂದು ಆರ್‌ಐಟಿ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಇ.ಡಿ.ಗೆ ದೂರು ನೀಡಿದ್ದರು. ಈ ದೂರಿನ ಆಧಾರದ…

4 hours ago