ತರೀಕೆರೆಯ ಮಾರ್ನವಮಿಯ ನೆನಪುಗಳು
ಹಬ್ಬಗಳು ನಮಗೆ ಯಾವ ಧರ್ಮಕ್ಕೆ ಸೇರಿದವು ಎಂಬ ಜಿಜ್ಞಾಸೆಯ ಸಂಗತಿಯಾಗಿರಲಿಲ್ಲ, ಸಂಭ್ರಮಿಸುವುದಕ್ಕೊಂದು ಸಾರ್ವಜನಿಕ ಅವಕಾಶವಾಗಿದ್ದವು!
ನಮ್ಮ ತರೀಕೆರೆ ಸೀಮೆಯ ಜನಕ್ಕೆ ದಸರಾಕ್ಕಿಂತ ಮಾರ್ನವಮಿ ಹೆಚ್ಚು ಬಳಕೆಯ ಶಬ್ದ. ‘ಮಾರ್ಲವಮಿ ಹೊತ್ತಿಗೆ ದುಡ್ಡು ಕೊಡ್ತೀನಿ ಕಣಯ್ಯ’ ‘ಮಾರ್ಲವಮಿ ಬಂದರೆ ಅವನಿಗೆ ಐದು ತುಂಬಿ ಆರಕ್ಕೆ ಬಿತ್ತು’, ‘ಅವರು ಸತ್ತು ಮಾರ್ಲವಮಿ ಬಂದರೆ ಹತ್ತು ವರ್ಷ’ ಎಂದೆಲ್ಲ ಮಾತಾಡುತ್ತಿದ್ದರು. ಮಹಾನವಮಿ, ಅವರಿಗೆ ಧಾರ್ಮಿಕ ಆಚರಣೆ ಮಾತ್ರವಲ್ಲ, ಸಾಲಕೊಡುವ, ಪಡೆವ ಹಾಗೂ ವಯಸ್ಸು ನಿರ್ಧರಿಸುವ ವಾಯಿದೆ ಕೂಡ. ಮಾರ್ನವಮಿ ಹೊತ್ತಿಗೆ ಮಳೆಗಾಲ ಮುಗಿದು ಕಟುವಲ್ಲದ ಬಿಸಿಲು ಆಗಸದಲ್ಲಿ. ಹೊಲಗಳಲ್ಲಿ ಪೈರು ಬೆಳೆದು ಇನ್ನೇನು ಗರ್ಭಕಟ್ಟಿರುತ್ತದೆ. ಬೆಳೆ ಕೈಗೆ ಬಂದಿರುವುದಿಲ್ಲ. ಆದರೆ ಬರುವ ಭರವಸೆ ಕೊಟ್ಟಿರುತ್ತದೆ. ಸಿಕ್ಕ ಬಿಡುವಿನಲ್ಲಿ ರೈತಾಪಿಗಳು ಸಂಭ್ರಮಾಚರಣೆಗೆ ಸನ್ನದ್ಧರಾಗುವ ಕಾಲ.
ನಮ್ಮೂರ ಕಸುಬುದಾರರಿಗೆ ಕೆಲಸಕ್ಕೆ ರಜೆ ಮಾಡಿ ವರ್ಷವಿಡೀ ತಮ್ಮೊಂದಿಗೆ ದುಡಿದ ಉಪಕರಣಗಳನ್ನು ಪೂಜಿಸುವ ಕಾಲವಿದು. ರೈತರು ನೊಗ ನೇಗಿಲು ಕುಂಟೆಗಳನ್ನು ತೊಳೆದು ಅಂಗಳದಲ್ಲಿ ಜೋಡಿಸಿ ವಿಭೂತಿ ಪೂಸಿ ಹೂವನ್ನಿಟ್ಟು ಪೂಜಿಸುವರು. ನಮ್ಮ ಬೀದಿಯ ಗಾರೆರುದ್ರಣ್ಣನು ಕರಣೆ ಮಟಗೋಲು ರಸಮಟ್ಟ ಚಕ್ಕೆಗಳನ್ನು ಪೂಜಿಸುತ್ತಿದ್ದನು. ಪಕ್ಕದ ಮನೆಯ ಆಚಾರ್ರು ನಿಂಗಪ್ಪ, ಉಳಿ ಕೊಡತಿ ಬಾಚಿಗಳನ್ನು ಜೋಡಿಸಿ ಅರ್ಚಿಸುತ್ತಿದ್ದರು. ನಮ್ಮ ಕುಲುಮೆಯಲ್ಲಿ ಸುತ್ತಿಗೆ ಇಕ್ಕಳ ಚಮ್ಮಟಿಗೆ ರಾವುಗೋಲನ್ನು ತೊಳೆದು ಕೆಲಸಗಾರ ಶಾಂತಣ್ಣನು ಪೂಜಿಸುತ್ತಿದ್ದನು. ಬೆಂಕಿ ಬೂದಿ ಹೊಗೆ ಪೆಟ್ಟುಗಳಲ್ಲಿ ನಿರತವಾಗಿದ್ದ ಹತ್ಯಾರಗಳು ವಿಶ್ರಾಂತ ಸ್ಥಿತಿಯಲ್ಲಿ ಮಲಗಿರುತ್ತಿದ್ದವು. ದಸರೆಯ ಆಯುಧಪೂಜೆಯು ರಾಜರ ಪಾಲಿಗೆ ಶಸ್ತ್ರಗಳ ಪ್ರದರ್ಶನವಾದರೆ, ಇವರಿಗೆ ಸಲಕರಣೆಗಳ ವಿಶ್ರಾಂತಿ. ಸೈಕಲ್ಲು ಹೊಂದಿರುವವರು ಅದನ್ನು ತೊಳೆದು ವಿಭೂತಿ ಬಳಿದು ಹೂವಿನಿಂದ ಅಲಂಕರಿಸುತ್ತಿದ್ದರು. ಕಾಯಕದವರನ್ನು ಸಂಘಟಿಸಿದ ಶರಣರು, ಮೊರದೈವ ಹಣಿಗೆದೈವ ಎಂದು ಜನಪದ ದೈವಗಳನ್ನು ನಿರಾಕರಿಸುವಾಗ, ಅವು ದುಡಿಮೆಯ ಸಂಗಾತಿಗಳಾದ ಸಲಕರಣೆಯನ್ನು ಗೌರವಿಸುವ ಹಬ್ಬ ಎಂಬುದನ್ನು ಅರಿಯದೆ ಹೋದರೇ ಎಂಬ ಶಂಕೆ ನನಗೆ.
ನಾವಿದ್ದುದು ಪುರಿಭಟ್ಟಿ ಬೀದಿಯಲ್ಲಿ. ನಮ್ಮ ಬೀದಿಯ ಹುಡುಗರಿಗೂ ಭಟ್ಟಿಗೂ ಜನ್ಮಾಂತರದ ಸಂಬಂಧ. ನಾವು ಚಳಿಗಾಲ ಮಳೆಗಾಲದಲ್ಲಿ ಬೆಳಿಗ್ಗೆ ಎದ್ದೊಡನೆ ಚಳಿಕಾಯಿಸಲು ಭಟ್ಟಿಗೆ ಹೋಗುತ್ತಿದ್ದೆವು. ಭಟ್ಟಿಯವರು ಬಂದವರಿಗೆ ಸಣ್ಣಪುಟ್ಟ ಕೆಲಸ ಹೇಳುತ್ತಿದ್ದರು. ಭತ್ತದ ಉಬ್ಬುಲನ್ನು ಲಯಬದ್ಧವಾಗಿ ಎಸೆಯುತ್ತ ಒಲೆಯ ಮುಂದೆ ಕೂತು, ಶಾಖ ಆನಂದಿಸುವ ಕೆಲಸವನ್ನು ನಾವು ಶಿರಸಾವಹಿಸಿ ಮಾಡುತ್ತಿದ್ದೆವು. ಬೇಯಿಸಿ ಒಣಹಾಕಿದ ಅಕ್ಕಿಗೆ ದನಕರು ಬಾಯಿ ಹಾಕದಂತೆ ಕಾಯುತ್ತಿದ್ದೆವು. ಆದರೆ ಗುಬ್ಬಿಗಳನ್ನು ಓಡಿಸುತ್ತಿರಲಿಲ್ಲ. ಭಟ್ಟಿಕೆಲಸ ನಮಗೆ ದೇಶಕಟ್ಟುವ ಕಾಯಕಕ್ಕೆ ಸಮನಾಗಿತ್ತು. ಭಟ್ಟಿಗೆ ಶೇಂಗಾ ಕಡಲೆ ಬಟಾಣಿ ಹುರಿಸಲು ವ್ಯಾಪಾರಿಗಳು ಬಂದಾಗ ನಮ್ಮ ಸೇವೆಯ ಪ್ರಮಾಣ ತೀವ್ರಗೊಳ್ಳುತ್ತಿತ್ತು. ಶ್ರಮದಾನಕ್ಕೆ ಪ್ರತಿಫಲವಾಗಿ ಹುರಿದಕಾಳು, ಗರಿಗರಿ ಮಂಡಕ್ಕಿ ಸಿಗುತ್ತಿದ್ದವು.
ಕುಲುಮೆಯವರಂತೆಯೇ ವರ್ಷವಿಡೀ ಮೈಕೈ ಸುಟ್ಟುಕೊಂಡು ಮಸಿಬಟ್ಟೆಯಲ್ಲಿ ಉರಿದಕೊಳ್ಳಿಗಳಂತೆ ಇರುತ್ತಿದ್ದ ಭಟ್ಟಿ ಕೆಲಸಗಾರರಿಗೆ, ಮಾರ್ನವಮಿ ಬಂದರೆ ವಾರಕಾಲ ರಜೆ. ಈ ದಿನಗಳಲ್ಲಿ ಅವರು ಚಿಕ್ಕೆರೆಗೆ ಹೋಗಿ ಮಿಂದು ಶುಭ್ರವಸನಧಾರಿಗಳಾಗಿ ಮಾಲಕರಿಂದ ಸಿಗಲಿರುವ ‘ಖುಷಿ’ಯ ಹಣ ಮತ್ತು ಬಟ್ಟೆಯನ್ನು ಪಡೆಯಲು ಸಜ್ಜಾಗುತ್ತಿದ್ದರು. ಬಾಂಡಲಿಯನ್ನು ಸ್ವಚ್ಛಗೊಳಿಸಿ, ಅದರಲ್ಲಿ ಆಡುವ ಕರಣೆ, ಮರಳು ಸೋಸುವ ಜರಡಿ, ಮಣ್ಣುಕುಟ್ಟುವ ಕೊಂತ, ಮೊರಗಳನ್ನು ಪೂಜೆಗೆ ಜೋಡಿಸುತ್ತಿದ್ದರು. ಬತ್ತವನ್ನು ಮಿಲ್ಲಿಗೆ ಒಯ್ಯುವ ಕೈಬಂಡಿಗೆ, ಬಾಳೆಕಂಬ ಕಟ್ಟಿ ಚೆಂಡುಹೂವಿನ ಮಾಲೆಗಳನ್ನು ಇಳಿಬಿಡುತ್ತಿದ್ದರು. ಎಲ್ಲವೂ ಸಿದ್ಧವಾಗಿ ಎಲ್ಲರೂ ಪೂಜೆ ಭಟ್ಟರನ್ನು ಎದುರುನೋಡುತ್ತಿದ್ದರು. ಕಾದುದಣಿದ ಭಟ್ಟಿಯ ಒಡತಿ ಲಕ್ಷ್ಮಿಬಾಯಿಯವರು ‘ತಡಮಾಡಿದಿರಿ ಭಟ್ಟರೇ’ ಎಂದು ನಯವಾಗಿ ಆಕ್ಷೇಪಿಸುವರು. ‘ಸಿನಿಮಾ ಟಾಕೀಸಿನವರ ಮನೆಗೆ ಹೋಗಿದ್ದೆನಮ್ಮ. ಅವರ ಮನೆಯ ಪೂಜೆಭಟ್ಟರು ನಾವು’ ಎಂದು ಭಟ್ಟರು ಸಮಜಾಯಿಷಿ ಹೇಳುತ್ತ, ಗಡಿಬಿಡಿಯಲ್ಲಿ ಮಂತ್ರ ಆರಂಭಿಸುವರು. ಅವರಿಗೆ ಇಲ್ಲಿನದನ್ನು ಬೇಗಮುಗಿಸಿ ಮತ್ತೊಂದೆಡೆ ಹೋಗಬೇಕು. ಲಕ್ಷ್ಮೀಬಾಯಿಯವರಿಗೆ ಸಮಾಧಾನವಿಲ್ಲ. ‘ಮಂತ್ರಗಳು ಕಮ್ಮಿಯಾದವು. ಇನ್ನಷ್ಟು ಹೇಳಿ’ ಎನ್ನುವರು. ‘ಮುಖ್ಯವಾದ ಮಂತ್ರಗಳನ್ನೆಲ್ಲ ಹೇಳಿದ್ದೀನಮ್ಮ’ ಎಂದು ಭಟ್ಟರು ಮತ್ತೆರಡು ಮಂತ್ರಗಳನ್ನು ಹೇಳುವರು. ಪೂಜೆ ಮುಗಿದ ಬಳಿಕ ನಮಗೆ ಪುರಿ ವಿತರಣೆ. ಅದೂ ಮೊರಗಟ್ಟಲೆ. ಜತೆಗೆ ಮೋಸಂಬಿ ಸೇಬು ಬಾಳೆಹಣ್ಣು.
ಇದನ್ನು ಮುಗಿಸಿ ನಮ್ಮ ಠೋಳಿ ಬಜಾರಿನತ್ತ ಸವಾರಿ ಹೊರಡುತ್ತಿತ್ತು. ಪೇಟೆಯಲ್ಲಿ ಗ್ಯಾರೇಜಿನವರು ಬಸ್ಸಿನವರು ಲಾರಿಯವರು ಅಂಗಡಿಯವರು ಮಾಡಿದ ಅಲಂಕಾರಗಳ ವೀಕ್ಷಣೆ ಮಾಡುತ್ತಿತ್ತು. ಅವರು ಬಂದ ಎಲ್ಲರಿಗೂ ಪ್ರಸಾದ ರೂಪದಲ್ಲಿ ಮಂಡಕ್ಕಿ ಹಣ್ಣು ಸಿಹಿ ಹಂಚುತ್ತಿದ್ದರು. ಅಂಗಡಿ ಸಾಲನ್ನು ಮುಗಿಸಿದ ಬಳಿಕ ನಮ್ಮ ಪಟಾಲಂ, ಪ್ರಸಾದ ಹಂಚಿಕೆಯಲ್ಲಿ ಉದಾರವಾಗಿದ್ದ ಮಾಲತೇಶ ಬಸ್ಸಿನ ಮಾಲಕರ ಮನೆಯತ್ತ ತೆರಳುತ್ತಿತ್ತು. ಪುರಿಪ್ರಸಾದ ಇಸಿದುಕೊಳ್ಳುವಾಗ ನೂಕುನುಗ್ಗಲು ಹೆಚ್ಚಾದರೆ, ಬಸ್ಸಿನ ಮಾಲಕರ ಮಗ, ಬಾಳೆಯ ದಂಟನ್ನು ಚಾಟಿಮಾಡಿಕೊಂಡು ಬೀಸುತ್ತ ಜನರನ್ನು ಶಿಸ್ತಾಗಿ ನಿಲ್ಲಿಸುತ್ತಿದ್ದನು. ಪೂಜೆ ಮಾಡಿದವರು ತೆಂಗಿನಕಾಯನ್ನು ರೋಡಿಗೆ ಅಪ್ಪಳಿಸಿ ಒಡೆದರೆ, ಓಡಿ ಚಿಪ್ಪುಗಳು ಛಿದ್ರವಾಗಿ ನೆಲದ ಮೇಲೆ ಬೀಳುವ ಮುನ್ನವೇ ಕ್ಯಾಚು ಹಿಡಿಯುತ್ತಿದ್ದೆವು. ಹಣ್ಣು ಕಾಯಿಚೂರು ಪುರಿಗಳಿಂದ ಹೊಟ್ಟೆ ಭರ್ತಿ ಆಗುತ್ತಿತ್ತು. ಆ ದಿನ ನಮ್ಮೂರ ಮೇಲೆ ಹಾದುಹೋಗುವ ವಿನಾಯಕ, ಜಯಪದ್ಮ, ಶಂಕರ್, ಆಂಜನೇಯ, ಮಾಲತೇಶ, ಉದಯ, ಸಿದ್ಧರಾಮೇಶ್ವರ ಬಸ್ಸುಗಳನ್ನು ನೋಡುವುದಕ್ಕೆ ಎರಡು ಕಣ್ಣು ಸಾಲದು. ಆಯುಧ ಪೂಜೆ ಮಾಡಿರದ ಎಚ್‌ಐಎಚ್ ಬಸ್ಸು ಅವುಗಳ ಮುಂದೆ ನೀರಸವಾಗಿ ಕಾಣುತ್ತಿತ್ತು. ಮೈತುಂಬ ವಿಭೂತಿ ಗಂಧದ ಪಟ್ಟೆಧರಿಸಿದ ಬಸ್ಸುಗಳು, ಮುಂಗಾಜಿನ ತುಂಬ ಹೂವನ್ನು ಇಳಿಬಿಟ್ಟು ಮುಸ್ಲಿಮರ ಮದುಮಗನಂತೆ ಆಗಿರುತ್ತಿದ್ದವು. ಅವುಗಳಿಗೆ ಕಟ್ಟಿದ ಬಲೂನುಗಳನ್ನು ನಾವು ಬಿಚ್ಚಿಕೊಳ್ಳುತ್ತಿದ್ದೆವು. ನಮ್ಮೂರ ಲಾರಿಯವರು ಮಕ್ಕಳನ್ನು ತುಂಬಿಕೊಂಡು ಊರಿನೊಳಗೆ ತಿರುಗಾಟ ಮಾಡಿಸುತ್ತಿದ್ದರು. ‘ಕನ್ನಂಬಾಡಿ ಕಟ್ಟೆ, ಮಾರವಾಡಿ ಹೊಟ್ಟೆ’ ಎಂದು ಕೇಕೆ ಹಾಕುತ್ತ ಲಾರಿಗಳಲ್ಲಿ ಫೇರಿ ತಿರುಗುತ್ತಿದ್ದೆವು. ಎಲ್ಲವೂ ಮುಗಿದು ದಣಿದು ಮನೆ ಸೇರುವಾಗ ಸಂಜೆ. ಊರೊಳಗಿದ್ದ ಸೇಂದಿ ಪೆಂಟೆಯ ಮುಂದೆ, ಕಂತ್ರಾಟುದಾರರು ಕುಡುಕರಿಗೆ ಉಚಿತವಾಗಿ ಗಡಿಗೆಯಲ್ಲಿ ಹೆಂಡ ಹಂಚುತ್ತಿದ್ದರು. ಹೊಟ್ಟೆತುಂಬ ಕುಡಿದವರು ಪೀಪಾಯಿಗಳಂತೆ ಅಲ್ಲೇ ಸಾಲುಮರದಡಿ ಎರಡು ದಿನ ಮಲಗಿರುತ್ತಿದ್ದರು.
ತರೀಕೆರೆ ದಸರೆಯ ವಿಶೇಷವೆಂದರೆ, ತಾಲ್ಲೂಕು ಮೈದಾನದಲ್ಲಿ ಕೆಮ್ಮಣ್ಣಿನ ಅಖಾಡದ ಮೇಲೆ ನಡೆಯುತ್ತಿದ್ದ ಜಂಗಿಕುಸ್ತಿಗಳು. ಕುಸ್ತಿಗೆ ತರೀಕೆರೆ ಸೀಮೆಯ ಸುತ್ತ ಊರುಗಳ ಗರಡಿಗಳಿಂದ ಪೈಲ್ವಾನರೂ ಉಸ್ತಾದರೂ ಬರುತ್ತಿದ್ದರು. ನಮ್ಮ ದೂರದ ನೆಂಟರು ಉಬ್ರಾಣಿಯಿಂದ ಬಂದವರು ನಮ್ಮಲ್ಲೇ ವಸ್ತಿ ಮಾಡುತ್ತಿದ್ದರು. ನಾವು ಉಬ್ರಾಣಿಯ ಬಂಧುಗಳ ಜತೆ ಕುಸ್ತಿ ನೋಡಲು ಹೋಗುತ್ತಿದ್ದೆವು. ಏನು ಕೇಕೆ, ಎಂತಹ ಕೋಲಾಹಲ. ಕೆಸರಿನಲ್ಲಿ ಬಿದ್ದ ಕೋಣಗಳ ಹಾಗೆ ಕೆಮ್ಮಣ್ಣಿನಿಂದ ಕೆಂಪಾಗಿದ್ದ ಧಾಂಡಿಗರು ಸೆಣಸುತ್ತಿದ್ದರು. ಗೆದ್ದವರಿಗೆ ಆಹೇರಿ ಸಮರ್ಪಣೆ. ನಮ್ಮ ಉಬ್ರಾಣಿಯ ಬಂಧುಗಳು ತಾವು ಗೆದ್ದ ಬೆಳ್ಳಿಯ ಬಳೆ ಅಥವಾ ಗದೆಗಳನ್ನು ಅಮ್ಮನಿಗೆ ತೋರಿಸಿ, ಕಾಲುಮುಟ್ಟಿ ಹಾರೈಕೆ ಪಡೆಯುತ್ತಿದ್ದರು. ಅವರಲ್ಲಿ ಒಬ್ಬ ಪೈಲ್ವಾನನು ಸುಂದರಿಯಾಗಿದ್ದ ನಮ್ಮ ಚಿಕ್ಕಕ್ಕನನ್ನು ಮದುವೆಯಾಗಲು ಅಂಗಲಾಚುತ್ತಿದ್ದನು. ಅಮ್ಮ ಕುಸ್ತಿಯವರಿಗೆ ಅಕ್ಕನನ್ನು ಕೊಡಲು ಒಪ್ಪಲಿಲ್ಲ.
ಕೊನೆಗೆ ಅಂಬುಹೊಡೆವ ಕಾರ್ಯಕ್ರಮ. ಊರಹೊರಗಿನ ಮೈದಾನದಲ್ಲಿ ಹಣ್ಣಾದ ಬಾಳೆಗೊನೆಯನ್ನು ಗಿಡಸಮೇತ ನೆಲದಲ್ಲಿ ಹೂಳಲಾಗುತ್ತಿತ್ತು. ಅದಕ್ಕೆ ಗುರಿಕಾರರು- ಬಹುಶಃ ನಮ್ಮೂರ ಪಾಳೇಗಾರ ವಂಶಸ್ಥರಲ್ಲಿ ಒಬ್ಬರು- ಕೋವಿಯಲ್ಲಿ ಗುರಿಯಿಟ್ಟು ಈಡು ಹೊಡೆಯುತ್ತಿದ್ದರು. ಜನ ಕೋವಿಯ ಈಡಿನಿಂದ ಛಿದ್ರವಾದ ಬಾಳೆಗೊನೆಯಿಂದ ಹಣ್ಣನ್ನು ಪ್ರಸಾದವಾಗಿ ಕಿತ್ತಾಡಿ ಕಿತ್ತುಕೊಳ್ಳುತ್ತಿದ್ದರು. ಮೈಸೂರು ಮಹಾರಾಜರಿಗೆ ಜಯಕಾರ ಹಾಕಲಾಗುತ್ತಿತ್ತು. ಸಂಜೆ ಪುರಭವನದ ಕಾರ್ಯಕ್ರಮದಲ್ಲಿ ನಮ್ಮೂರಿನ ಪ್ರಸಿದ್ಧ ವಕೀಲರೂ, ಜನಪದ ಹಾಡುಗಾರರೂ ಆದ, ಕೆ.ಆರ್.ಲಿಂಗಪ್ಪನವರು ಮಾರ್ನವಮಿಯ ಮಹತ್ವ ಕುರಿತು ಭಾಷಣ ಮಾಡುತ್ತಿದ್ದರು. ಮಾರ್ನವಮಿ ಪದಗಳನ್ನು ಇಂಪಾಗಿ ಹಾಡುತ್ತಿದ್ದರು.
ಹಬ್ಬಗಳು ನಮಗೆ ಯಾವ ಧರ್ಮಕ್ಕೆ ಸೇರಿದವು ಎಂಬ ಜಿಜ್ಞಾಸೆಯ ಸಂಗತಿಯಾಗಿರಲಿಲ್ಲ. ಸಂಭ್ರಮಿಸುವುದಕ್ಕೆ ಒಂದು ಸಾರ್ವಜನಿಕ ಅವಕಾಶವಾಗಿದ್ದವು. ಮುಂದೆ ಮೈಸೂರಿಗೆ ಕಲಿಯಲು ಹೋದಾಗ, ಜಂಬೂಸವಾರಿ ನೋಡಿದೆ. ಅಲ್ಲಿನ ಸಂಗೀತ ಕಾರ್ಯಕ್ರಮಗಳನ್ನು ಕೇಳಿದೆ. ಕುಸ್ತಿಗಳನ್ನು ನೋಡಿದೆ. ಹೊತ್ತಿಗೆ ಮೈಸೂರಿಗೆ ಬಂದಿದ್ದ ಅಪ್ಪ ‘ಅಬಬಬಾ, ಏನು ಜನಾನಪ್ಪ. ಹೆಂಡತಿ ಮಕ್ಕಳು ಕರಕೊಂಬಂದರೆ ಕಳಕೊಂಡು ಹೋಗೋದೇ ಸೈ’ ಎಂದನು. ನಿಜ, ಸಮುದ್ರದಂತಹ ಮೈಸೂರ ದಸರೆಯ ಮುಂದೆ ನಮ್ಮೂರಿನದು ಕೆರೆ. ಆದರೆ ಸಮುದ್ರದಲ್ಲಿ ಸಾಧ್ಯವಾಗದ ಈಜಾಟ ಸಲುಗೆ ಆಪ್ತತೆ ಕೆರೆಯಲ್ಲಿ ಸಾಧ್ಯವಾಗುತ್ತದೆ.
ಬೆಂಗಳೂರು: ಕೆಪಿಎಸ್‌ಸಿ ವತಿಯಿಂದ ಇದೇ ಡಿಸೆಂಬರ್ 29ಕ್ಕೆ ಕೆಎಎಸ್ ಮರು ಪರೀಕ್ಷೆ ನಡೆಯುತ್ತಿದ್ದು, ಮತ್ತೆ ಈ ಪರೀಕ್ಷೆಯಲ್ಲಿ ಮತ್ತೆ ಬೇಜವಾಬ್ದಾರಿತನ…
ಮೈಸೂರು: ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಇಂದು(ಡಿ.23) ಮೈಸೂರಿನ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರ…
ಹುಬ್ಬಳ್ಳಿ : ಸಿಲಿಂಡರ್ ಸ್ಫೋಟಗೊಂಡ ಪರಿಣಾಮ 9 ಮಂದಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ತಡರಾತ್ರಿ ಹುಬ್ಬಳ್ಳಿಯಲ್ಲಿ…
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಬಿಜೆಪಿ ವಿಧಾನ ಪರಿಷತ್ ಶಾಸಕ ಸಿ.ಟಿ.ರವಿ ಅವರು ಆಕ್ಷೇಪಾರ್ಹ ನೀಡಿರುವ ಹೇಳಿಕೆಯ ಕೇಸ್…
ಶಿವರಾಜಕುಮಾರ್ ಶಸ್ತ್ರಚಿಕಿತ್ಸೆಗೆಂದು ಇತ್ತೀಚೆಗೆ ಅಮೇರಿಕಾಗೆ ಪ್ರಯಾಣ ಬೆಳಸಿದ್ದಾರೆ. ಜನವರಿ 26ರಂದು ಅವರು ಚಿಕಿತ್ಸೆ ಮುಗಿಸಿ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ. ಬೆಂಗಳೂರಿಗೆ ವಾಪಸ್ಸಾಗಿ…
ವಿಜಯ್ ರಾಘವೇಂದ್ರ ಅಭಿನಯದ ಮೂರು ಚಿತ್ರಗಳು ಈ ವರ್ಷ ಬಿಡುಗಡೆಯಾಗಿವೆ. ವಿಶೇಷವೆಂದರೆ, ‘ಕೇಸ್ ಆಫ್ ಕೊಂಡಾನ’, ‘ಜಾಗ್ 101’ ಮತ್ತು…