ಎಡಿಟೋರಿಯಲ್

ತರೀಕೆರೆ ಏರಿಮೇಲೆ: ಬೀದಿಮಕ್ಕಳು ಬೆಳೆದೊ

ನಾವು ಹಳ್ಳಿಯಿಂದ ತರೀಕೆರೆ ಪಟ್ಟಣಕ್ಕೆ ವಲಸೆ ಬಂದಾಗ, ಹಲವಾರು ವೃತ್ತಿಗಳಲ್ಲಿ ತೊಡಗಿದ್ದ ಜನರಿರುವ ಬೀದಿಗಳಲ್ಲಿ ಮನೆ ಹಿಡಿಯಬೇಕಾಯಿತು. ಮೊದಲನೆಯದು ಕ್ರೈಸ್ತ ಸ್ಮಶಾನದಲ್ಲಿದ್ದ ಪಾಳು ಚಾಪೆಲ್. ನಾಲ್ಕೂ ಕಡೆ ಇಳಿಜಾರು ಚಾವಣಿಯಿದ್ದ ಅದನ್ನು ಪ್ರಾರ್ಥನೆಗೆ ಬೇಕಾಗಿ ವಿಶಾಲ ಹಜಾರವಿಟ್ಟು ಕಟ್ಟಲಾಗಿತ್ತು. ಅದರ ಮುಂದೆ ವಿಶಾಲ ಬಯಲು. ಅದರಲ್ಲಿ ದೊಡ್ಡ ಬಸುರಿ ಮರಗಳು. ಅವುಗಳಡಿ ನಮ್ಮ ಕುಲುಮೆ. ಹಿಂಬದಿಗೆ ಚರ್‌ರ್‌ರ್ ಎಂದು ಹಗಲೂರಾತ್ರಿ ಸದ್ದು ಮಾಡುವ ಮರ ಕುಯ್ಯುವ  ಸಾಮಿಲ್. ಮನೆ ಬೆಂಗಳೂರು ಹೊನ್ನಾವರ ಹೆದ್ದಾರಿಗೆ ಕೆಮ್ಮಣ್ಣುಗುಂಡಿ ರಸ್ತೆ ಕೂಡುವ ತಿರುವಿನಲ್ಲಿತ್ತು. ತಿರುವಿನಾಚೆ ರೈಲ್ವೆಹಳಿ. ಹೀಗಾಗಿ ಎಳವೆುಯ ಲ್ಲೇ ನಮಗೆ ಬಸ್ಸು ರೈಲುಗಳನ್ನು ಎಣಿಸುವ, ಹಾರನ್ ಕೇಳಿ ಇಂಥದ್ದೇ ಬಸ್ಸು ಮತ್ತು ಇಷ್ಟೇ ಗಂಟೆ ಎಂದು ಹೇಳುವ ಕಲೆ ಸಿದ್ಧಿಸಿತು.

ಇದಾದ ಬಳಿಕ ಮತ್ತೊಂದು ಹೆಂಚಿನ ಮನೆಗೆ ಹೋದೆವು. ಅದರ ಹಿತ್ತಲಿಗೆ ಹತ್ತಿಕೊಂಡು ಅನಾಮಿಕ ಸಾಧುವಿನ ಸವಾಧಿಯಿತ್ತು. ಅದರ ಮುಂದೆ ಸದಾ ಹೊಗೆಯಾಡುವ ಧುನಿ ಮತ್ತು ನೆಟ್ಟ ತಿರಸೂಲ. ಅಲ್ಲಿದ್ದ ಬೀಡುಬಿಡುತ್ತಿದ್ದ ಸಂಚಾರಿ ಸಾಧುಗಳು ಚಿಲುಮೆ ಎಳೆಯುತ್ತಿದ್ದರು. ಭಜನೆ ಮಾಡುತ್ತಿದ್ದರು. ನಮ್ಮ ನೆರೆ ಮನೆುಂದೊಂದು ವಿಶೇಷವಾಗಿತ್ತು. ಅದರ ಮಾಲೀಕನು ಹಗಲೆಲ್ಲ ಮಲಗಿರುತ್ತಿದ್ದನು. ನಡುರಾತ್ರಿ ದಿನಾಚರಣೆ ಮುಗಿಸಿ ಬೆಳಗಿನ ಜಾವ ಮನೆ ಸೇರುತ್ತಿದ್ದನು. ಆಗಾಗ್ಗೆ ಪೊಲೀಸರು ರೈಡು ಮಾಡಿ ಆತನನ್ನು ದಸ್ತಗಿರಿ ಮಾಡುತ್ತಿದ್ದರು. ಆಗ ಆತನ ಮುಖದಲ್ಲಿ ಕಿಂಚಿತ್ತೂ ಕಳವಳ ತೋರದೆ ನೆಂಟರ ಮನೆಗೆ ಹೋದಂತೆ ಅವರ ಜತೆ ಹೋಗುತ್ತಿದ್ದನು. ಅವನ ಹೆಂಡತಿಯಾ ದರೂ ನನ್ನ ಗಂಡ ಒಳ್ಳೆಯವನು, ಬಿಟ್ಟುಬಿಡಿ ಎಂದು ಗೋಗರಿಯುತ್ತಿರಕಿಲ್ಲ. ‘ಜಾಸ್ತಿ ಹೊಡೀಬೇಡಿ ಎಂದಷ್ಟೆ ಹೇಳುತ್ತಿದ್ದಳು. ಆಕೆಗೆ ಗಂಡ ಶೀಘ್ರದಲ್ಲಿ ಮರಳುವ ಭರವಸೆಯಿರುತ್ತಿತ್ತು.
ಯಾರಾದರೂ ‘ಎಲ್ಲಕ್ಕ ನಿನ್ನ ಗಂಡ ಕಾಣಲ್ಲ’ ಎಂದರೆ, ‘ಅವರ ಮನೆ ಹಾಳಾಗ, ಮನ್ಯಾಗಿದ್ದೋನ ಕರಕಂಡ್ ಹೋಗಿ ಒಳಗ್ಹಾಕಿದ್ದಾರೆ ನೋಡ್ರಿ’ ಎಂದು ಪೊಲೀಸರನ್ನು ಶಪಿಸುತ್ತಿದ್ದಳು. ಗಂಡ ಬಿಡುಗಡೆಯಾದಾಗ ಮಾಲೆಹಾಕಿ ಆರತಿಬೆಳಗಿ ಬರವಾಡಿಕೊಳ್ಳುತ್ತಿದ್ದಳು. ಆತನಾದರೂ ವಿಶ್ವ ಕ್ರಿಕೆಟ್ ಕಪ್ ಗೆದ್ದು ಬಂದ ಕ್ಯಾಪ್ಟನ್ನಿನಂತೆ ಠೀವಿಯಿಂದ ಪ್ರವೇಶಿಸುತ್ತಿದ್ದನು.
ಕದಿಯ ಲು ಅರ್ಹವಾದ ಸಾಮಗ್ರಿಗಳು ನಮ್ಮಲ್ಲಿ ಇರಲಿಲ್ಲವಾಗಿ ನಮಗೆ ನೆರೆಮನೆಯಿಂದ ಯಾವುದೇ ಭಯವಿರಲಿಲ್ಲ. ಬದಲಿಗೆ ಫಾಯೂದೆೆಯ ಇತ್ತು. ಆತ ತೆಂಗಿನತೋಟಗಳಿಗೆ ಹೋಗಿ ಬಂದರೆ, ಆಕೆ ದೊಡ್ಡದೊಡ್ಡ ಕಾಯ್ದು ಬಟ್ಟಲುಗಳನ್ನು ಬೆಲ್ಲದ ಸಮೇತ ನಮಗೆ ತಿನ್ನಲು ಕೊಡುತ್ತಿದ್ದಳು. ಕೆಲವೊಮ್ಮೆ ಚಿಪ್ಪು ಚಿಪ್ಪು ಬಾಳೆಹಣ್ಣು ಬರುತ್ತಿತ್ತು. ಉಚಿತ ಪಡಿತರ ವಿತರಣೆಯಾಗುತ್ತಿದ್ದ ಆ ಮನೆಯನ್ನು ಬಿಡುವುದಕ್ಕೆ ನಮಗ್ಯಾರಿಗೂ ಇಷ್ಟವಿರಲಿಲ್ಲ. ಆದರೆ ನಾವು ನೆರೆಮನೆ ಮಹಾಶಯನ ವಿದ್ಯೆಯನ್ನು ಕಲಿಯುವ ಸಾಧ್ಯತೆಯನ್ನು ಮುಂಗಂಡ ಅಪ್ಪ ಮನೆಯನ್ನು ಶೀಘ್ರವಾಗಿ ಬದಲಾಯಿಸಿದನು. ನಮ್ಮ ಮೂರನೇ ಮನೆ ಪಾಳುಬಿದ್ದ ಸಾಮಿಲ್ಲಿನ ಕಾಂಪೌಂಡಿನಲ್ಲಿ ಸಿಕ್ಕಿತು. ಕಾವಲುಗಾರನಿಗೆಂದು ಕಟ್ಟಲಾದ ಕ್ವಾಟ್ರಸ್ಸದು. ಅದರ ಬದಿಗೇ ರೈಲುಹಳಿ. ಹಳಿಯಾಚೆ ಸುಡುಗಾಡು. ಮುಂದೆ ಕಾಂಪೌಂಡನ್ನು ಸೇಂದಿ ಪೆಂಟೆಯವರು ಖರೀದಿಸಿದರು. ಈಚಲುವನಗಳಲ್ಲಿ ಸಂಗ್ರಹವಾದ ಸೇಂದಿಯನ್ನು ದೊಡ್ಡ ಪಿಪಾಯಿಗಳಲ್ಲಿ ತುಂಬಿತಂದು ಈಜುಕೊಳದಂತಹ ಬೃಹದಾಕಾರದ ತೊಟ್ಟಿಯಲ್ಲಿ ಸುರಿಯಲಾಗುತ್ತಿತ್ತು. ಬಳಿಕ ಸೀಸೆಗಳಲ್ಲಿ ತುಂಬಿ ಕೇಸುಗಳಲ್ಲಿಟ್ಟು ಗಡಂಗುಗಳಿಗೆ ಕಳಿಸಲಾಗುತ್ತಿತ್ತು. ಕೆಲಸಗಾರರೆಲ್ಲ ಬಳ್ಳಾರಿ ಕಡೆಯವರು. ತೆಲುಗು ಮಾತು. ಸೇಂದಿಯ ನರುಗಂಪಿಗೆ ನಾವು ಹೊಂದಿಕೊಂಡೆವು. ಆದರೆ ಅಮ್ಮ ವೀಟೊ ಚಲಾಯಿಸಿ ಮನೆ ಬಿಡಿಸಿದಳು.
ಇದಾದ ಬಳಿಕ ನಮ್ಮ ಕುಟುಂಬ ರೈಲ್ವೆ ಸ್ಟೇಷನ್ನಿಗೆ ಸಮೀಪದಲ್ಲಿದ್ದ ಗಾರೆಯವರ ಬೀದಿಗೆ ಪ್ರಸ್ಥಾನಗೈದಿತು. ಅಲ್ಲಿಗೆ ಸಮೀಪದಲ್ಲಿ ಐದು ಪೈಸೆಗೊಂದರಂತೆ ಇಡ್ಲಿ-ಚಟ್ನಿ ಕೊಡುತ್ತಿದ್ದ ಪುರಕಾರಮ್ಮನ ತಟ್ಟಿ ಹೋಟೆಲಿತ್ತು. ಮಾoಸದಂಗಡಿ, ಹೆಂಡ ಮಾರುವ ಗಡಂಗುಗಳಿದ್ದವು. ಸಿನಿವಾ ಟಾಕೀಸ್ ಹಿಂಬದಿಯಲ್ಲಿದ್ದರಿಂದ, ಸೆಕೆಂಡ್‌ಶೋನ ಸಂಭಾಷಣೆ-ಹಾಡು ಮನೆಯಲ್ಲಿದ್ದೇ ಕೇಳಬಹುದಿತ್ತು. ಢಿಶುಂ ಢಿಶುಂ ಶಬ್ದ ಬರುವಾಗ ಕೇಡಿಗಳು ಕಟ್ಟಿಹಾಕಿದ ನಾಯಕಿಯನ್ನು ಬಿಡಿಸಿಕೊಳ್ಳಲು ಹೀರೊ ಮಾಡುವ ಹೊಡೆದಾಟದ ದೃಶ್ಯವಿದೆಂದೂ, ಚಿತ್ರ ಕೊನೆಯ ಹಂತಕ್ಕೆ ಬಂದಿದೆ ಎಂದೂ ಊಹಿಸುತ್ತಿದ್ದೆವು. ಆಗ ಗಾಳಿಯಾಡಲೆಂದು ಗೇಟ್‌ಕೀಪರ್ ತೆಗೆಯುತ್ತಿದ್ದ ಬಾಗಿಲುಗಳಿಂದ ನುಗ್ಗಿ ನಾವು ಕೊನೆಯ ದೃಶ್ಯಗಳನ್ನು ಕಣ್ತುಂಬಿಕೊಳ್ಳುತ್ತಿದ್ದೆವು.
ಮುಂದೆ ಪುರಿಭಟ್ಟಿಯ ಬೀದಿಯಲ್ಲಿದ್ದ ಮನೆಗೆ ವರ್ಗಾವಣೆಯಾಯಿತು. ಅದು ಕೆರೆಯ ಕೋಡಿನೀರು ಹರಿವ ಹಳ್ಳದ ದಂಡೆಯ ಮೇಲೆ ಖಬರಸ್ಥಾನಕ್ಕೆ ಲಗತ್ತಾಗಿತ್ತು. ಅದೊಂದು ಏಳು ಮನೆಗಳ ಸಾಲು. ಭತ್ತವನ್ನೂ ಮಂಡಕ್ಕಿಯನ್ನೂ ಸಂಗ್ರಹಿಸುವುದಕ್ಕೆ ಕಟ್ಟಲಾದ ಮಳಿಗೆಗಳನ್ನೇ ಬಾಡಿಗೆ ಮನೆಗಳನ್ನಾಗಿ ಬದಲಿಸಲಾಗಿತ್ತು. ಬೀದಿಯಲ್ಲಿ ಕುಚ್ಚಿದ ಭತ್ತ ಮತ್ತು ಅಕ್ಕಿ ಒಣಗಿಸಲು ಕಣವಿತ್ತು. ಹುರಿವ ಮರಳನ್ನು ಕುಟ್ಟಿ ಹುಡಿ ಮಾಡುವ ಬೃಹದಾಕಾರ ಒರಳುಕಲ್ಲಿತ್ತು. ಹಳ್ಳಿಯಿಂದ ತಂದ ದನಕರು ಕಟ್ಟಲು, ಬಣವೆ, ಸೌದೆ ಒಟ್ಟಲು, ಬೆರಣಿತಟ್ಟಲು, ತರಕಾರಿ ಬೆಳೆಯಲು, ಕೋಳಿಸಾಕಲು ಪ್ರಶಸ್ತವಾದ ಬಯಲಿತ್ತು. ಕೆರೆಯ ಕೆಳಗಿದ್ದ ಕಾರಣ, ಬಾವಿಗಳಲ್ಲಿ ಸದಾ ನೀರು ತುಳುಕುತ್ತಿತ್ತು. ಅದೊಂದು ತೆರೆದಬಾವಿಯಾಗಿದ್ದು, ಅದಕ್ಕೆ ಗಡಗಡೆಗೆ ಬದಲಾಗಿ ಅಡ್ಡಲಾಗಿ ಮರದ ದಿಮ್ಮಿಗಳನ್ನು ಹಾಸಲಾಗಿತ್ತು. ನಾವು ಆ ದಿಮ್ಮಿಗಳ ಮೇಲೆ ಬಾಗಿ ನಿಂತು ನೀರೆತ್ತ್ತುತ್ತಿದ್ದೆವು. ಕೆಲವೊಮ್ಮೆ ಕತ್ತಲಲ್ಲಿ ಓಡಿಬಂದ ಹಂದಿಗಳು ಬಾವಿಯೊಳಗೆ ಬೀಳುತ್ತಿದ್ದವು. ಬದುಕಿನಿಂದ ಬೇಸತ್ತವರು ಆತ್ಮಹತ್ಯೆಗಾಗಿಯೂ ಅದನ್ನು ಬಳಸುತ್ತಿದ್ದರು. ಶವವನ್ನು ಹೊರತೆಗೆದು ನೀರನ್ನೆಲ್ಲ ಹೊರಚೆಲ್ಲಿ, ಹೊಸಜಲ ತುಂಬುವ ತನಕ ಕೆರೆಗೆ ಹೋಗಿ ನೀರು ತರಬೇಕಿತ್ತು. ಕೆರೆ ಕೋಡಿಬಿದ್ದಾಗ ನೀರು ಬಾಗಿಲ ತನಕ ಬರುತ್ತಿತ್ತು. ದಿಕ್ಕುತಪ್ಪಿ ಬೀದಿಗೆ ಬಂದ ಮೀನನ್ನು ನಾವು ಹರಬಾಡಿ ಹಿಡಿಯುತ್ತಿದ್ದೆವು.

andolanait

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

2 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

3 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

4 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

4 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

5 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

6 hours ago