ಹಳ್ಳ ಕೆರೆ–ಹೊಳೆಗಳಿರುವ ಊರಿನವರಿಗೆ ಈಜು ಮತ್ತು ಮೀನು ಬೇಟೆಯ ಕಲೆ ಸಹಜವಾಗಿ ಸಿದ್ಧಿಸುತ್ತದೆ. ಅದು ದುಡಿಮೆಯ ದೈನಿಕವನ್ನು ಮೀರುವ ಉಪಾಯವೂ ಇರಬಹುದು. ಆದರೂ ನಮ್ಮೂರ ಪಡ್ಡೆಗಳು ಕೆರೆಗೆ ಗಾಳ ಹಾಕಿ ದಿನವಿಡೀ ನೀರನ್ನು ದುರುಗುಡುತ್ತ ಕೂರುವುದು ಸೋಮಾರಿತನ ಎಂದು ನನ್ನ ಅಭಿಮತ. ತಮ್ಮ ಇನಾಯತನ ಮಟ್ಟಿಗದು ಸಂಸಾರದ ಹೊಣೆಯಿಂದ ತಪ್ಪಿಸಿಕೊಳ್ಳುವ ವ್ಯಸನವಾಯಿತು. ಅವನ ಕುಟುಂಬ ಮೂರಾಬಟ್ಟೆಯಾಯಿತು. ಬದುಕಿಡೀ ಶಿಕಾರಿಯಲ್ಲಿ ಕಳೆದ ತಮ್ಮ ಬೇಗನೆ ಮೃತ್ಯುವಿನ ಶಿಕಾರಿಗೊಳಗಾದನು. ಕೊಂದವರುಳಿದರೇ ಕೂಡಲಸಂಗಮದೇವಾ? ಅವನ ಶವಕ್ಕೆ ಸ್ನಾನ ಮಾಡಿಸಿ ಕಫನನ್ನು ಉಡಿಸುತ್ತಿರುವಾಗ, ಮಾಡಿನ ಕೆಳಗೆ ನಮಗೆ ಅಪರಿಚಿತರಾದ ಕೆಲವರು ಗುಂಪಾಗಿ ಬಾಡಿದ ಮುಖದಲ್ಲಿ ಕೂತಿದ್ದರು. ಕುತೂಹಲದಿಂದ ‘ಯಾರಪ್ಪ ನೀವು?’ಎಂದು ಕೇಳಿದೆ. ‘ನಾವು ವಿನಾಯಕಣ್ಣನ ಜತೆಗಾರ್ರು. ಮೀನುಶಿಕಾರಿಗೆ ಹೋಗತಿದ್ದಿವಿ’ಎಂದು ಕಣ್ಣಲ್ಲಿ ನೀರು ತೆಗೆದರು. ಶಿಕಾರಿಯ ಗೆಳೆತನ ಇಷ್ಟು ಗಾಢವಾಗಿರುತ್ತದೆಯೆ?
ಬಾಲ್ಯದಲ್ಲಿ ನಾನೂ ಶಿಕಾರಿ ಗೆಳೆಯರ ಜತೆ ಶಾಲೆ ತಪ್ಪಿಸಿ ಕೆರೆಹಳ್ಳಗಳನ್ನು ಅಲೆದವನೇ. ನಾವಿದ್ದ ಮನೆಯು ಕೆರೆಕೋಡಿಯ ದಂಡೆಯಲ್ಲಿದ್ದರಿಂದ, ಆರು ತಿಂಗಳು ಮೀನು ಹಿಡಿಯುವುದೇ ಕಾಯಕ. ಕೋಡಿ ಬಿದ್ದಾಗ ಮನೆಯಂಗಳದವರೆಗೆ ಹರಡುತ್ತಿದ್ದ ನೀರಲ್ಲಿ ಬಾಲದಲ್ಲಿ ಕಪ್ಪುಚಿಕ್ಕೆಯಿದ್ದ ಕುರುಬರತಾಳಿ ಹೊಸಿಲಿಗೆ ಬರುತ್ತಿದ್ದವು. ಮರಳ ಮೀನಿಗಂತೂ ಹಳ್ಳ,ಅಂಗಳ ವ್ಯತ್ಯಾಸ ತಿಳಿಯುತ್ತಿರಲಿಲ್ಲ. ಗಾಜಿನ ತುಂಡುಗಳಂತಿದ್ದ ಅವುಗಳ ದೇಹದೊಳಗಿನ ಮುಳ್ಳಿನ ಅಸ್ಥಿಪಂಜರ ಪಾರದರ್ಶಕವಾಗಿ ಕಾಣುತ್ತಿತ್ತು. ಅವನ್ನು ಗೋಚಿ, ಚವಳಿಕಾಯಂತೆ ಸೋಸಿ ಸಾರು ಮಾಡುತ್ತಿದ್ದರು. ಹೆಂಗಸರೂ, ಮಕ್ಕಳೂ ಇದ್ದ ಕೆಲಸಬಿಟ್ಟು, ಪುಟ್ಟಿ, ಹರಕುಸೀರೆ ಹಿಡಿದು ಹಳ್ಳಕ್ಕೆ ಇಳಿಯುತ್ತಿದ್ದರು. ಬಿತ್ತೋಹೊಲ ಬಿಟ್ಟು ಹತ್ತೋ ಮೀನಿಗೆ ಹೋದಂತೆ. ನಾವು ಬಗ್ಗಡನೀರು ರಭಸವಾಗಿ ಹರಿಯದೆ ಚಕ್ರಾಕಾರವಾಗಿ ಸುಳಿವ ಹಳ್ಳದ ಮೂಲೆಗಳಲ್ಲಿ ವಿಶ್ರಮಿಸುತ್ತಿರುವ ಮೀನಿಗೆ ಗಾಳ ಹಾಕುತ್ತಿದ್ದೆವು. ನೆಲ ಅಗೆದು ಎರೆಹುಳ ತೆಗೆವ, ಅದನ್ನು ಗಾಳದೊಳಗೆ ಪೋಣಿಸುವ, ಗಾಳಹಾಕುವ ಘನಕಾರ್ಯ ವೀಕ್ಷಿಸಲು ಪೇಟೆಯಿಂದ ಸಹಪಾಠಿಗಳು ಬರುತ್ತಿದ್ದರು.
ಅಪ್ಪ ಕುಲುಮೆ ಕೆಲಸದ ಏಕತಾನದಿಂದ ತಪ್ಪಿಸಿಕೊಳ್ಳಲು ಶಿಕಾರಿಗೆ ಎದ್ದುಬಿಡುತ್ತಿದ್ದನು. ನಾವು ಬಂಡಿ ಹೂಡಿಕೊಂಡು ಬಟ್ಟೆ ಒಗೆಯಲು ಬುತ್ತಿ ಕಟ್ಟಿಕೊಂಡು ಕಟ್ಟೆಹೊಳೆಗೆ ಯುದ್ಧಕ್ಕೆ ಸೈನ್ಯದ ಪಥಸಂಚಲನದಂತೆ ಹೋಗುತ್ತಿದ್ದೆವು. ಹಳೇ ಸೀರೆಯ ತುಂಡುಗಳನ್ನೇ ಬಲೆಯಾಗಿಸಿ ಹಳ್ಳದಲ್ಲಿ ಮೀನು ಹಿಡಿಯುತ್ತಿದ್ದೆವು. ಅಕ್ಕ ಹಳ್ಳದ ದಂಡೆಯ ಮೇಲೆ ಒಲೆಹೂಡಿ ಶೇಂಗಾ ಹುರಿದು, ಟೀ ಕಾಸುತ್ತಿದ್ದಳು. ಅಪ್ಪ ಕಸಕಡ್ಡಿ ತುಂಬಿದ ಮಡುವಿನಲ್ಲಿ ಗಾಳ ಬಿಟ್ಟುಕೊಂಡು ಕೂರುತ್ತ್ತದ್ದನು. ಗಾಳದಿಂದ ಎತ್ತಿಹಾಕುವ ಮೀನನ್ನು ಹೆಕ್ಕಲು ಅಡಕೆ ಹಾಳೆಯ ಕೊಟ್ಟೆ ಹಿಡಿದು ಬಾಲಂಗೋಚಿಯಾದ ನಾನು. ಒಮ್ಮೆ ನಾನೂ ಅಪ್ಪನೂ ನಿರ್ಜನವಾಗಿದ್ದ ಅಡಿಕೆ ತೋಟದೊಳಕ್ಕೆ ಹೋದೆವು. ಅಲ್ಲೊಂದು ತೆರೆದ ಬಾವಿ. ಕಂಟಿ ಬೆಳೆದು ನೀರಿನ ಮೇಲೆ ಬಾಗಿದ್ದವು. ಜಲವು ಬಾವಿಯ ಕಟಬಾಯಿಂದ ಹೊರಗೆ ಹರಿಯುತ್ತಿತ್ತು. ತೋಟದ ನೆರಳಿಗೆ ನೀರು ಕಪ್ಪಗೆ ಆಳವಾಗಿ ಕಾಣುತ್ತಿತ್ತು. ಅಪ್ಪ ಕಂಟಿಗಳ ಸಂದಿಯಲ್ಲಿ ಗಾಳ ಬಿಟ್ಟನು. ಚಕ್ಕನೆ ಕೊರವ ಕಚ್ಚಿತು. ಎರೆಹುಳ ತಿನ್ನದೆ ಎಷ್ಟು ದಿನದಿಂದ ಹಸಿದಿದ್ದವೊ ಎಂಬಂತೆ ಒಂದಾದ ಮೇಲೊಂದು ಗಾಳಕ್ಕೆ ಬಿದ್ದವು. ಅಂದು ರಾತ್ರಿ ಮೀನುಹುಳಿ ಮುದ್ದೆ ಉಣ್ಣುವಾಗ ಭರ್ಜರಿ ಶಿಕಾರಿಯದೇ ಚರ್ಚೆ.
ಕೆರೆಗಳನ್ನು ಹರಾಜಿನಲ್ಲಿ ಹಿಡಿದವರು, ಮೀನು ಹಿಡಿದು ಮುಗಿಸಿದ ಮೇಲೆ, ಊರವರಿಗೆ ಸೂರೆ ಹೊಡೆಯಲು ಅವಕಾಶ ಕಲ್ಪಿಸುತ್ತಿದ್ದರು. ಮುದುಕರಿಂದ ಹಿಡಿದು ಚಿಳ್ಳೆಪಿಳ್ಳೆ ತನಕ ಊರಿಗೂರೇ ಕೆರೆಯ ಮೇಲೆ ಬೀಳುತ್ತಿತ್ತು. ನೀರನ್ನು ಬಗ್ಗಡವೆಬ್ಬಿಸಿ, ಉಸಿರುಗಟ್ಟಿ ಅಂಗಾತ ತೇಲುವ ಮೀನುಗಳನ್ನು ತುಡುಕುತ್ತಿದ್ದರು. ಕೆಲವರು ದೆಣ್ಣೆಯಿಂದ ದೊಡ್ಡಮೀನಿಗೆ ಬಡಿದು ಎತ್ತಿತೋರಿಸಿ ಕೇಕೆ ಹಾಕುತ್ತಿದ್ದರು. ದಪ್ಪಮೀನನ್ನು ಅಡುಗೆ ಮಾಡಿ, ಸಣ್ಣಮೀನನ್ನು ಉಪ್ಪು ಹಚ್ಚಿ ಒಣಗಿಸುತ್ತಿದ್ದರು. ಹಳ್ಳಿಯ ಕೆರೆ ಬತ್ತುವುದನ್ನು ಅಪ್ಪ ಹದ್ದುಗಣ್ಣಲ್ಲಿ ಕಾಯುತ್ತಿದ್ದನು. ಒಮ್ಮೆ ಕೆರೆಹೊಸಳ್ಳಿಯ ಕೆರೆ ಬತ್ತಿ, ನಡುಭಾಗದ ಗುಂಡಿಯಲ್ಲಿ ತುಸುವೇ ನೀರುನಿಂತಿತ್ತು. ಅಪ್ಪ ಅದರಲ್ಲಿ ಮೀನಿರುವುದನ್ನು ಪತ್ತೆಮಾಡಿ ಕಾರ್ಯಾಚರಣೆ ಆಯೋಜಿಸಿದನು. ಮನೆಗೊಂದು ಆಳಿನಂತೆ ಕಲೆತು ನಡುರಾತ್ರಿ ಹೋಗಿ ಕೆರೆಯ ಗುಂಡಿಯಲ್ಲಿದ್ದ ನೀರನ್ನು ಉಗ್ಗತೊಡಗಿದೆವು. ಚಳಿಗಾಲದ ಬೆಳದಿಂಗಳಿತ್ತು. ಗುಂಡಿಯಲ್ಲಿ ನೀರು ಕಡಿಮೆಯಾಗುತ್ತ ಮೀನು ಚಳಪಳಿಸತೊಡಗಿದವು. ತೋಟ ಕಾಯಲು ಬಂದಿದ್ದ ಯಾರೊ ಒಬ್ಬನಿಗೆ ಇದರ ಸುಳಿವು ಸಿಕ್ಕಿತು. ಆತ ಊರಿಗೆ ವರ್ತಮಾನ ಕೊಡಲು, ಊರೇ ದಂಡೆತ್ತಿ ಬಂದಿತು. ಬತ್ತಿದ ಕೆರೆಯ ಸೂರೆಹಕ್ಕು ಅದರ ಮಜರೆಗೆ ಸೇರಿದ ಊರಿನವರದು. ಪರಸ್ಥಳದವರಾಗಿ ನಮ್ಮೂರ ಕೆರೆಗೆ ಹೆಂಗೆ ಬಂದಿರಿ ಎಂಬುದು ಅವರ ಪ್ರಶ್ನೆ. ದಂಡರೂಪದಲ್ಲಿ ಮೀನಲ್ಲಿ ಅರ್ಧಪಾಲು ಕೊಡಬೇಕಾಯಿತು. ಕೊಟ್ಟು, ಕೆಸರಿನ ಮೈಕೈಯಲ್ಲಿ ಮನೆ ಸೇರುವಾಗ ಪಡುವಣದಲ್ಲಿ ಬೆಳ್ಳಿ ಕಾಣಿಸಿತು.
ಮೀನು ಶಿಕಾರಿಯಲ್ಲಿ ನೀರಹಾವುಗಳದ್ದು ಒಂದು ಕಿರಿಕಿರಿ. ಕೆರೆಹಳ್ಳದಲ್ಲಿ ಏಡಿಗಾಗಿ ಬಿಲದಲ್ಲಿ ಕೈತೂರಿಸಿದರೆ ಅವು ಸಿಗುತ್ತಿದ್ದವು. ರಾತ್ರಿ ಕಟ್ಟಿದ ಕೂಳಿಯನ್ನು ಬೆಳಿಗ್ಗೆ ಎತ್ತಿದರೆ, ಬಿದ್ದ ಮೀನುಗಳನ್ನೆಲ್ಲ ತಿಂದು ಹಾಯಾಗಿ ಮಲಗಿರುತ್ತಿದ್ದವು. ಅವನ್ನು ಹೊರಗೆಳೆದು ಚಚ್ಚಿ ಹಾಕುತ್ತಿದ್ದೆವು. ಈ ತರಬೇತಿ ಬೇರೆಬೇರೆ ಬಗೆಯ ಸರ್ಪಗಳ ಸಂಹಾರಕ್ಕೆ ಬಳಕೆಯಾಯಿತು. ನಮ್ಮ ಗಲ್ಲಿಯಲ್ಲಿ ಬಿದಿರಿನ ತಟ್ಟಿಗೋಡೆ ಕಟ್ಟಿಕೊಂಡಿದ್ದ ಮೇದಾರರು ಕೋಳಿ ಸಾಕಿದ್ದರು. ಕೋಳಿವಾಸನೆಗೆ ಹಾವು ಬಂದಾಗಲೆಲ್ಲ ನನಗೆ ಕರೆ ಬರುತ್ತಿತ್ತು. ಹಾವು ಹೊಡೆಯುವುದರಲ್ಲಿ ನಾನು ಖ್ಯಾತನಾದೆ.
ಒಮ್ಮೆ ಅಮ್ಮನ ಜತೆ ಹೊಲಕ್ಕೆ ಹೋಗುತ್ತಿದ್ದೆ. ಬದುವಿನ ಮೇಲೆ ಬೆಳಗಿನ ಇಬ್ಬನಿಯಲ್ಲಿ ನೆಂದ ಹುಲ್ಲಿನ ಮೇಲೆ ನಾಗರ ಪವಡಿಸಿತ್ತು. ಅರಗಲಾರದ್ದನ್ನು ತಿಂದು ಸುಸ್ತಾಗಿತ್ತೊ, ಪೊರೆಬಂದು ಕಣ್ಣು ಮಂಜಾಗಿತ್ತೊ? ಅಮ್ಮ ಮುಂದಿನ ಹೆಜ್ಜೆ ಅದರ ಮೇಲಿಡುವವಳು ಕಿಟಾರನೇ ಕಿರುಚಿ ‘ಮುನ್ನಾ ಸಾಂಪ್‌ರೇ’ ಎಂದಳು. ಹಸಿಕೋಲನ್ನು ಮುರಿದುಕೊಂಡು ತಲೆಗೊಂದು ಪೆಟ್ಟುಕೊಟ್ಟೆ. ನುಲಿನುಲಿದು ತಣ್ಣಗಾಯಿತು. ಮತ್ತೊಂದು ಮಧ್ಯಾಹ್ನ ತೋಟದ ಮನೆಯಲ್ಲಿ ಮಲಗಿದ್ದೆ. ಚಿಕ್ಕಮ್ಮ ತಂಬಿಗೆ ತೆಗೆದುಕೊಂಡು ಬೇಲಿಸಾಲಿಗೆ ಹೋಗಿದ್ದವರು ಓಡಿಬಂದು ‘ನಮ್ಮ ಕೋಳಿ ಹಾವು ಹಾವು..’ಎಂದು ಒದರಿದರು. ಎದ್ದವನೇ ಭರ್ಜಿ ಹಿಡಿದು ಓಡಿದೆ. ಬಳ್ಳಿಬೆಳೆದು ಪೊದೆಪೊದೆಯಾಗಿದ್ದ ಬೇಲಿಯ ಮೇಲೆ ಮಲಗಿದ್ದ ನಾಗರಾವು ಪಕ್ಷಿಯನ್ನು ನುಂಗುತ್ತಿತ್ತು. ಪಕ್ಷಿಯ ಕಾಲಷ್ಟೆ ಹೊರಗುಳಿದಿದ್ದವು. ಬೇಲಿಯ ಕೆಳಗಿಂದ ನುಸುಳಿ ಹೊಟ್ಟೆಗೆ ಚುಚ್ಚಿದೆ. ಅದು ಬೇಟೆಯನ್ನು ಉಗುಳಿ, ಸರ್ರನೆ ಕೆಳಗಿಳಿದು ಬೆಳೆದಿದ್ದ ಹುಲ್ಲಿನಲ್ಲಿ ತಪ್ಪಿಸಿಕೊಳ್ಳಲು ಹರಿಯತೊಡಗಿತು. ಹಿಂದಿನಿಂದ ಹೋಗಿ ಹೊಟ್ಟೆಗೆ ಹೊಡೆದೆ. ಬೇಲಿಯಲ್ಲಿ ಅಂಕುಡೊಂಕಾಗಿ ಸಣ್ಣದಾಗಿ ಕಂಡ ಹಾವು ಸತ್ತಮೇಲೆ ಎರಡುಮಾರು ನೀಳವಾಗಿ ಮಲಗಿತು. ಅದು ತಿಂದಿದ್ದು ನಮ್ಮ ಕೋಳಿಯನ್ನಲ್ಲ, ಗೌಜಲಹಕ್ಕಿಯನ್ನು ಎಂದು ತಿಳಿಯಿತು. ವಿಷದಿಂದ ನೀಲಿಯಾಗಿ ಎಂಜಲಿಂದ ಒದ್ದೆಮುದ್ದೆಯಾಗಿ ಗೌಜವು ಬಿದ್ದಿತ್ತು.
ಹುಲ್ಲು ಕೊಯ್ಯುವಾಗ ಕಿತ್ತುಹಾಕಿದ ಹುರುಳಿ, ಶೇಂಗಾ ಸೊಪ್ಪನ್ನು ಎತ್ತುವಾಗ, ಕೆಳಗೆ ಬೆಚ್ಚಗೆ ಮಲಗಿದ್ದ ಹಾವು ಕಚ್ಚುತ್ತಿದ್ದವು. ಹೊಲ, ತೋಟ, ಕಾಡುಗಳಲ್ಲಿ ಸುತ್ತುವ ಎಲ್ಲರಿಗೂ ನಮ್ಮ ಕಡೆ ಹಾವು ಹೊಡೆವ ಅಭ್ಯಾಸವಿರುತ್ತದೆ. ಇದರಲ್ಲಿ ಆತ್ಮರಕ್ಷಣೆಯ ಜತೆಗೆ, ಮೃಗಯಾವಿನೋದ ಲೋಕೋಪಕಾರ ಸಾಹಸಪ್ರದರ್ಶನ ಹಿಂಸಾಮನೋಭಾವಗಳೂ ಬೆರೆತಿರುತ್ತವೆ. ಕುರುಚಲು ಕಾಡಿನಲ್ಲಿ ಕಟ್ಟಿದ ಹಂಪಿಯ ವಿಶ್ವವಿದ್ಯಾಲಯದ ಮೊದಲ ದಿನಗಳಲ್ಲಿ ಮೂಲನಿವಾಸಿ ಹಾವುಗಳಿಗೂ ನಮಗೂ ಸಂಘರ್ಷ ಆಗುತ್ತಿತ್ತು. ಆದರೆ ಬೇಗನೆ ಜ್ಞಾನೋದಯವಾಯಿತು. ಈಗ ಬೀದಿಯ ಯಾರದೇ ಹಿತ್ತಲಲ್ಲಿ ಹಾವು ಕಾಣಿಸಿದರೂ, ಹೊಡೆಯದೆ ಹಿಡಿಸಿ ದೂರ ಬಿಟ್ಟುಬರುತ್ತೇನೆ. ಆದರೂ ರಕ್ಷಿಸಿದ ಹಾವುಗಳಿಗೆ ಹೋಲಿಸಿದರೆ ಚಚ್ಚಿಸಾಯಿಸಿದ ಹಾವುಗಳ ಸಂಖ್ಯೆ ದೊಡ್ಡದು. ಹಳೇ ಶಿಕಾರಿದಾರರು ಬೇಟೆಯಾಡಿದ ಪ್ರಾಣಿಗಳ ಮೇಲೆ ಕಾಲುಮೆಟ್ಟಿ ಕೆವಿಯನ್ನು ನೆಲಕ್ಕೂರಿ ತೆಗೆಸಿಕೊಂಡಿರುವ ಪಟಗಳನ್ನು ನೋಡುವಾಗ ನಾನೂ ಅವರಂತೆ ಅಪರಾಧಿ ಎಂದು ಪರಿತಪಿಸುತ್ತೇನೆ.
ಮಂಡ್ಯ: ಚಲಿಸುತ್ತಿದ್ದ ಕಾರಿಗೆ ಮೊಟ್ಟೆ ಹೊಡೆದು ಚಾಲಕನ ಕಣ್ಣಿಗೆ ಕಾರದ ಪುಡಿ ಎರಚಿ ನಗದು ದರೋಡೆ ಮಾಡಿರುವ ಘಟನೆ ಮಂಡ್ಯ…
ಹೈದರಾಬಾದ್: ಸಂಧ್ಯಾ ಥಿಯೇಟರ್‌ನಲ್ಲಿ ಕಾಲ್ತುಳಿತ ಸಂಭವಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ನಟ ಅಲ್ಲು ಅರ್ಜುನ್‌ಗೆ ನೋಟಿಸ್ ನೀಡಲಾಗಿದೆ. ನಾಳೆ ಬೆಳಿಗ್ಗೆ 11…
ಬೆಂಗಳೂರು: ನಟ ಯಶ್ ಹಾಗೂ ಪತ್ನಿ ರಾಧಿಕಾ ಪಂಡಿತ್ ಅವರಿಂದು ಇತ್ತೀಚೆಗೆ ನಿಧನರಾಗಿದ್ದ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ನಿವಾಸಕ್ಕೆ…
ಮುಂಬೈ: ಬಾಲಿವುಡ್‌ನ ಖ್ಯಾತ ನಿರ್ದೇಶಕ ಶ್ಯಾಮ್ ಬೆನಗಲ್ ಅವರಿಂದು ವಿಧಿವಶರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು. ಕಳೆದ ಕೆಲ ತಿಂಗಳುಗಳಿಂದ…
ಜೈಪುರ: ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಅವರು ಉದ್ಯಮಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರಾಜಸ್ಥಾನದ ಉದಯಪುರದಲ್ಲಿ ಅದ್ಧೂರಿಯಾಗಿ ನಡೆದ…
ಮೈಸೂರು: ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಪಡೆಯಲು ಕನ್ನಡಿಗರು ನಿರಾಸಕ್ತಿ ತೋರುತ್ತಿದ್ದಾರೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಬೇಸರ ವ್ಯಕ್ತಪಡಿಸಿದ್ದಾರೆ. ಈ…