ಎಡಿಟೋರಿಯಲ್

ತರೀಕೆರೆ ಏರಿಮೇಲೆ : ಹಳೆಯ ವಸ್ತುಗಳ ವಿಸರ್ಜನೆಯ ಸಂಕಟ

ಮನೆಯಲ್ಲಿ ಅಪ್ಪನಿಗೆ ಅವನವೇ ಆದ ಕೆಲವು ಪ್ರಿಯವಸ್ತುಗಳಿದ್ದವು. ಅವುಗಳಲ್ಲಿ ಅವನ ಕುರ್ಚಿ, ಕೋಟು, ಕೋವಿ, ಟ್ರಂಕುಗಳು ಸೇರಿವೆ. ಅವನು ಜಳಕ ಮಾಡಿ ಸ್ಯಾಂಡೊ ಬನಿಯನ್ ಹಾಕಿ, ತೇಗದಮರದ ಕುರ್ಚಿಯನ್ನು ಹಾಲಿನಲ್ಲಿ ಹಾಕಿಕೊಂಡು ಕುಲುಮೆಯತ್ತ ನೋಡಿಕೊಂಡು ಕೂರುತ್ತಿದ್ದನು. ಅಪ್ಪ ಮನೆಯಲ್ಲಿದ್ದಾಗ ಯಾರೂ ಅದರ ಮೇಲೆ ಕೂರುತ್ತಿರಲಿಲ್ಲ. ಶಿಕಾರಿ ಸಂಗಾತಿಯಾಗಿದ್ದ ಕೋವಿ ಅವನ ಪ್ರಾಣವಾಗಿತ್ತು. ವಿರಾಮದಲ್ಲಿರುವಾಗ ಅದನ್ನು ಬಿಚ್ಚಿ ಜಂಗುಹಿಡಿದ ಅವಯವಗಳನ್ನು ಸೀಮೆಯೆಣ್ಣೆಯಲ್ಲಿ ಅದ್ದಿ ತೊಳೆದು ಸ್ವಚ್ಛಗೊಳಿಸಿ, ಒರೆಸಿ ಮರಳಿ ಜೋಡಿಸುವುದು ಅವನಿಗೆ ಪರಮಾನಂದ. ಹಳೆಗಾಲದ ಕೇಪಿನ ಕೋವಿಯ ಉತ್ತರಾಽಕಾರ ಪಡೆಯಲು ಗಂಡುಮಕ್ಕಳು ನಿರಾಕರಿಸಿದ್ದು, ಅವನಿಗೆ ನಿರಾಸೆ ತಂದಿತ್ತು.

ಅಪ್ಪನು ಆಗಾಗ್ಗೆ ತನ್ನ ಪುಟ್ಟ ಟ್ರಂಕನ್ನು ಬಿಚ್ಚಿ, ಅದರೊಳಗಿದ್ದ ಪುಟ್ಟಡೈರಿ ಕಾಗದ ಪತ್ರಗಳನ್ನು ಪರಿಶೀಲಿಸುತ್ತಿದ್ದನು. ಸ್ಕೂಲ್ ಮೆಟ್ಟಿಲನ್ನು ಹತ್ತದಿದ್ದರೂ, ಅವನಿಗೆ ಕನ್ನಡವನ್ನು ಕಾಗುಣಿತವನ್ನು ಲೆಕ್ಕಿಸದೆ ಬರೆವ ಅಭ್ಯಾಸವಿತ್ತು. ‘ದಸಣ ೨೦ರೂ ಬಂದಿಲ’ ‘ದೂಡಮ್ಮ ೨೫ರೂ, ಅಮನ ಹಬಕೆ ಚುಕತಾ’ ಎಂಬಿತ್ಯಾದಿ ಕೈಸಾಲದ ವಿವರಗಳು ಶಾಸನ ಲಿಪಿಯಲ್ಲಿದ್ದವು. ಡೈರಿಗಳಲ್ಲಿ ಮಕ್ಕಳು ಹುಟ್ಟಿದ ಮತ್ತು ಶಾಲೆ ಸೇರಿದ ದಿನ, ಅಕ್ಕನ ಮದುವೆ ಖರ್ಚಿನ ವಿವರಗಳಿದ್ದವು. ಕೆಲವು ಪ್ರಾಮಿಸರಿ ನೋಟುಗಳು, ಗ್ರಾಮ ಪಂಚಾಯಿತಿ ಎಲೆಕ್ಷನಿಗೆ ನಿಂತಾಗ ಹೊರಡಿಸಿದ ಪ್ರಚಾರದ ಕರಪತ್ರ, ಹೊರಗಿನಿಂದ ಬಂದ ಪತ್ರಗಳು, ಕಂದಾಯ ಕಟ್ಟಿದ ರಶೀದಿ, ರೇಡಿಯೊ ಲೈಸೆನ್ಸು, ಸೈಕಲ್ ಕೊಂಡ ಬಿಲ್ಲು, ಲೈಟಿಲ್ಲದೆ ಸೈಕಲ್ ಚಲಾಯಿಸಿದ್ದಕ್ಕೆ ತೆತ್ತ ದಂಡದ ರಶೀದಿಗಳಿದ್ದವು. ಇಂಗ್ಲೀಷ್,ಉರ್ದುಗಳಲ್ಲಿ ೧ ಪೈಸೆ ಮುದ್ರೆಯಿರುವ, ೧೯೪೩ನೇ ಇಸವಿಯೂ, ಇಂಗ್ಲೆಂಡ್ ರಾಣಿಯ ಕಿರೀಟವೂ, ಹಿಂಬದಿ ಸುಂದರವಾದ ಹೂಬಳ್ಳಿಯೂ ಇದ್ದ, ತಾಮ್ರದ ತೂತು ನಾಣ್ಯಗಳ ಚೀಲವಿತ್ತು. ಅಪ್ಪ ಕಾಗದಗಳನ್ನು ಹೊರತೆಗೆದು, ಅಲ್ಲಿರುವ ಜಿರಳೆ ಮರಿಗಳನ್ನು ಸಾಯಿಸಿ, ಅವುಗಳ ಮಡಚಿದ ಕಿವಿಗಳನ್ನು ಹುಶಾರಾಗಿ ಸರಿಮಾಡಿ, ನಮ್ಮಿಂದ ಓದಿಸುತ್ತಿದ್ದನು. ಕೈಸಾಲ ಪಡೆದ ವ್ಯಕ್ತಿ ತೀರಿಹೋಗಿದ್ದರೆ, ‘ಮರಗಯಾ ಚಿನಾಲ್ಕ. ಅಚ್ಛಾ ಅದ್ಮಿ’ ಎಂದು ಸ್ಮರಿಸುತ್ತಿದ್ದನು. ಕಡೆಗೆ ಅವನ್ನು ಮತ್ತೆ ನೀಟಾಗಿ ಕಟ್ಟಿ ಟ್ರಂಕಿನಲ್ಲಿಡುತ್ತಿದ್ದನು. ಕೆಲವು ಕಾಗದ ಪತ್ರಗಳು ರದ್ದಿಯಾಗಿ ಮುಗ್ಗು ವಾಸನೆ ಬೀರುತ್ತಿದ್ದವು. ಸಾಲ ವಸೂಲಿಯಾದ ಬಳಿಕ ಅಥವಾ ಇಸಮು ಪೌತಿಯಾದ ಬಳಿಕ ಅವನ್ನು ಹರಿದುಹಾಕಬೇಕು, ಜತನವಾಗಿಟ್ಟು ಫಾಯದೆಯೇನು ಎಂದು ನಮ್ಮ ವಾದ. ‘ಸುಮ್ಮನಿರ್ರೊ, ನಿಮಗೆ ಗೊತ್ತಾಗಲ್ಲ’ ಎಂದು ಬಾಯ್ಮುಚ್ಚಿಸುತ್ತಿದ್ದನು. ನಾವು ಅವನಿಗೆ ಗೊತ್ತಿಲ್ಲದೆ ಕೆಲವು ವಾಯಿದೆ ಮುಗಿದ ಕಾಗದಗಳನ್ನು ನೀರೊಲೆಗೆ ಇಡುತ್ತಿದ್ದೆವು. ಅಪ್ಪನದೊಂದು ಕೋಟಿತ್ತು. ಅದು ಯಾವಾಗ ಹೊಲಿಸಿದ್ದೊ ತಿಳಿಯದು, ಅದನ್ನವನು ಮದುವೆ ಕಾರ್ಯಕ್ಕೆ, ಫೋಟೊ ಸ್ಟುಡಿಯೊಗೆ, ತಹಸಿಲ್ದಾರ್ ಕಚೆರಿಗೆ ಹಾಗೂ ಗನ್ ಲೈಸೆನ್ಸನ್ನು ನವೀಕರಿಸಲು ಪೊಲೀಸ್ ಸ್ಟೇಷನ್ನಿಗೆ ಹೋಗುವಾಗ ಧರಿಸುತ್ತಿದ್ದನು. ಉಳಿದ ದಿನಗಳಲ್ಲಿ ಅದು ಗೋಡೆಯ ಗೂಟಕ್ಕೆ ನೇಲುತ್ತಿರುತ್ತಿತ್ತು. ಅದಕ್ಕೆ ಒಳಹೊರಗೆ ಸೇರಿ ಒಟ್ಟು ಆರು ಜೇಬುಗಳಿದ್ದವು. ಅವುಗಳಲ್ಲಿ ನಾವು ಅಂಗಿಯಿಂದ ಕಳಚಿ ಅನಾಥವಾದ ಗುಂಡಿಗಳನ್ನು, ಚಾಲ್ತಿ ಕಳೆದುಕೊಂಡ ಕಾಸುಗಳನ್ನು, ಸೂಜಿಚುಚ್ಚಿದ ದಾರದುಂಡೆಯನ್ನು, ಲೆಕ್ಕದ ಚೀಟಿಗಳನ್ನು ಇಡುವ ಕಪಾಟನ್ನಾಗಿ ಮಾಡಿಕೊಂಡಿದ್ದೆವು. ಅದು ಧೂಳು ಹಿಡಿದು ತನ್ನ ವೈಭವವನ್ನೆಲ್ಲ ಕಳೆದುಕೊಂಡಿತು. ಅದನ್ನು ಗಿಡಬುಡಕಿ ಕಲಾವಿದರು ಕೇಳಲು ಸಂತೋಷದಿಂದ ಕೊಟ್ಟೆವು.

ಒಂದು ಕಾಲಕ್ಕೆ ಅಪ್ಪ ಹೊದೆಯುತ್ತಿದ್ದ ಕೌದಿಗೂ ಇದೇ ಅವಸ್ಥೆ ಬಂದಿತು. ಹೊಲಿಗೆ ಕೆಲಸದಲ್ಲಿ ಪರಿಣತೆಯಾಗಿದ್ದ ಅಮ್ಮ ಸವುಡು ಸಿಕ್ಕಾಗಲೆಲ್ಲ ಹಳೆಬಟ್ಟೆ ಸೇರಿಸಿ ಹೊಲಿಯುತ್ತ, ಅದು ಎರಡು ದಶಕಗಳಲ್ಲಿ ಮನೆಯ ಸದಸ್ಯರು ಉಟ್ಟ ಬಟ್ಟೆಯ ಅವಶೇಷಗಳನ್ನು ಧಾರಣಮಾಡಿತ್ತು. ಅದು ಹರಿದಾಗ ಯಾವುದಾದರೂ ಬಟ್ಟೆ ಕಾಣಿಸಿದರೆ, ಇದು ಫಲಾನೆ ಈ ಸೀರೆಯದು ಇಂಥ ಹೊತ್ತಲ್ಲಿ ಕೊಂಡ ಈ ಅಂಗಿಯದು ಎಂದು ಅಮ್ಮ ಪುರಾತತ್ವ ತಜ್ಞೆಯಾಗಿ ವಿವರಿಸುತ್ತಿದ್ದಳು. ಬೇಸಗೆಯಲ್ಲಿ ಯಾರಿಗೂ ಬೇಡದ ಮಗುವಾಗುತ್ತಿದ್ದ ಕೌದಿಯ ಮೇಲೆ ಚಳಿಗಾಲದಲ್ಲಿ ಹಕ್ಕುಸಾಽಸಲು ನಮ್ಮಲ್ಲಿ ಮಾರಾಮಾರಿ ಸಂಭವಿಸುತ್ತಿತ್ತು. ಚುಚ್ಚುವ ಮತ್ತು ರೋಮ ಉದುರಿಸುವ ಕಂಬಳಿಯ ಕಿರಿಕಿರಿಗೆ ಹೋಲಿಸಿದರೆ ಅದು ಮೈಯನ್ನು ಹಿತವಾಗಿ ಅಪ್ಪಿಕೊಳ್ಳುತ್ತಿತ್ತು.

ಕಾಯಿಲೆ ಬಿದ್ದಾಗ ಹಾಸಿಗೆಯೂ ಆಗಿ ರೂಪಾಂತರ ಪಡೆಯುತ್ತಿತ್ತು. ವರ್ಷಕ್ಕೊಮ್ಮೆ ಅದನ್ನು ಕೆರೆಗೊಯ್ದು ಚೌಳುಹಾಕಿ ಕಾಲಲ್ಲಿ ಪಚಪಚ ತುಳಿದು ಒಗೆಯುತ್ತಿದ್ದೆವು. ನೀರಿಗೆ ಬಿದ್ದಬಳಿಕ ಮಣಭಾರ ಪಡೆಯುತ್ತಿದ್ದ ಅದನ್ನು ಎತ್ತಿ ಸೆಣೆಯುವುದಾಗಲಿ ಹಿಂಡುವುದಾಗಲಿ ಅಸಾಧ್ಯವಾಗುತ್ತಿತ್ತು. ಈ ಕೌದಿಯ ಸಾಥಿಗಳೆಂದರೆ ಹಳೇಬಟ್ಟೆ ಅಥವಾ ರಾಗಿಯ ಸುಂಕು ತುಂಬಿದ ದಿಂಬುಗಳು. ಇವು ಮಲಗಿದವರ ತಲೆಯೆಣ್ಣೆ ಕುಡಿಕುಡಿದು ಕಪ್ಪಗಾಗಿದ್ದರೂ, ಹಂಸತೂಲಿಕಾತಲ್ಪದ ಹಾಗೆ ಬೆಚ್ಚಗೆ ಮೆತ್ತಗೆ ಇರುತ್ತಿದ್ದವು. ರಗ್ಗು, ಹತ್ತಿದಿಂಬುಗಳ ಪ್ರವೇಶ ಬಳಿಕ ಈ ಕೌದಿ-ದಿಂಬು ಗಡಿಪಾರಾದವು.

ಈಗ ಅಪ್ಪನ ಗುರುತಾಗಿ ಮನೆಯಲ್ಲಿರುವ ವಸ್ತುವೆಂದರೆ ಟೇಬಲ್. ಅದನ್ನು ನನಗೆ ಕೊಡಿಸಿದ್ದು ನಾಟಕೀಯವಾದ ಒಂದು ಸನ್ನಿವೇಶದಲ್ಲಿ. ನಾನು ಅಧ್ಯಾಪಕನಾದ ಹೊಸತರಲ್ಲಿ, ಶಿವಮೊಗ್ಗೆಯಲ್ಲಿ ರೂಂ ಮಾಡಿಕೊಂಡಿದ್ದೆ. ಅದರೊಳಗೆ ನನ್ನ ಸಹೋದ್ಯೋಗಿಯೊಬ್ಬನೂ ಇದ್ದನು. ಒಮ್ಮೆ ನಮ್ಮಿಬ್ಬರ ನಡುವೆ ರೂಮಿನ ಕಸ ಹೊಡೆಯುವ ವಿಷಯಕ್ಕೆ ಭೀಕರ ಜಗಳವಾಯಿತು. ಆತ ಕಟುವಾಗಿ ‘ಇವತ್ತಿನಿಂದ ಕುರ್ಚಿ ಟೇಬಲ್ ಬಳಸಬೇಡ ಎಂದನು. ಸರಿಯೆಂದು ನಾನು ನೆಲದ ಮೇಲೆ ಕೂತು ತೊಡೆಯ ಮೇಲೆ ಕಾರ್ಡ್‌ಬೋರ್ಡನ್ನು ಇಟ್ಟುಕೊಂಡು ಬರೆಯುತ್ತಿದ್ದೆ. ಒಮ್ಮೆ ನನ್ನ ಯೋಗಕ್ಷೇಮ ವಿಚಾರಿಸಲು ಅಪ್ಪ ರೂಮಿಗೆ ಬಂದನು. ಪದಕ ವಿಜೇತನಾಗಿ ಲಚ್ಚರಾಗಿರುವ ತನ್ನ ಮಗ ನೆಲದ ಮೇಲೆ ಕೂತಿರುವುದು ಅವನಿಗೆ ಮರ್ಯಾದೆಗೇಡು ಎನಿಸಿತು. ನಿಂತ ಹೆಜ್ಜೆಯಲ್ಲಿ ಊರಿಗೆ ಹೋದವನೇ, ತನ್ನ ಮಿತ್ರನಾದ ಬಸಪ್ಪನ ಹೋಟೆಲಿನಿಂದ ಒಂದು ಟೇಬಲನ್ನು ಎತ್ತಿಕೊಂಡು ಬಂದನು. ಅದರ ಹಲಗೆಗಳು ನಮ್ಮೂರ ಜನ ಇಡ್ಲಿ-ದೋಸೆ ತಿನ್ನುವಾಗ ಚೆಲ್ಲಾಡಿದ ಸಾಂಬಾರು ಚಟ್ನಿಗಳನ್ನು ಸವಿದು, ಕಾಫಿ ಟೀಗಳನ್ನು ಕುಡಿದು, ಲಡ್ಡಾಗಿದ್ದವು. ನಾನು ಅವುಗಳ ಮೇಲೆ ಒಂದು ಶೀಟನ್ನು ಹಾಕಿಸಿ ಬರೆಯಲು ಅರ್ಹಗೊಳಿಸಿಕೊಂಡೆ. ಬಾನು ಮನೆಗೆ ಬಂದ ಮೇಲೆ ಆಕೆಯ ಸ್ವರ್ಗವಾಸಿ ತಂದೆಯವರು ಕೂರುತ್ತಿದ್ದ ಅವರು ಸರ್ಕಾರಿ ನೌಕರರಾಗಿದ್ದರಿಂದ ವರ್ಗಾವಣೆಯಾದಾಗಲೆಲ್ಲ ಊರಿಂದ ಊರಿಗೆ ಸಾಗಿ ಶಿಥಿಲವಾಗಿದ್ದ ಕುರ್ಚಿಯನ್ನು ನೆನಪಿಗೆಂದು ತಂದಳು. ಅದು ಆಸೀನನಾಗುವ ವ್ಯಕ್ತಿಯನ್ನು ಯಾವುದೇ ಕ್ಷಣದಲ್ಲೂ ನೆಲಕ್ಕೆ ಕೆಡವಲು ಸಿದ್ಧವಾಗಿರುವ ಕಿರುಗುಟ್ಟುವ ಕೀಲುಕುದುರೆಯಾಗಿತ್ತು. ಅದರ ಕೈಕಾಲಿಗೆ ಕಬ್ಬಿಣದ ಪಟ್ಟಿ ಕೊಟ್ಟು ಮಜಬೂತಗೊಳಿಸಿದೆವು. ನನ್ನ ಬಹುತೇಕ ಬರೆಹ ಈ ಮೇಜು-ಕುರ್ಚಿಗಳ ಮೇಲೆಯೇ ಸೃಷ್ಟಿಯಾಯಿತು. ತಮ್ಮ ಜೀವನದಲ್ಲಿ ಎಂದೂ ಭೇಟಿಯಾಗದ ನಮ್ಮಿಬ್ಬರ ಅಪ್ಪಂದಿರು ಈ ಪ್ರಕಾರವಾಗಿ ಕುರ್ಚಿ-ಮೇಜುಗಳ ರೂಪದಲ್ಲಿ ಒಗ್ಗೂಡಿದರು. ಹಿರಿಯರ ನೆನಪಿನ ಗುರುತುಗಳನ್ನು ಭೌತಿಕವಾದ ವಸ್ತುಗಳ ಮೂಲಕ ಎಷ್ಟು ಕಾಲ ಇಟ್ಟುಕೊಳ್ಳಬಹುದು? ಕಾಲದ ಕರೆ ಬಂದಾಗ ವಿಸರ್ಜನೆ ಅನಿವಾರ್ಯ. ನಾವು ಪಟ್ಟಣಕ್ಕೆ ವಲಸೆ ಬಂದ ಬಳಿಕ, ಹಳ್ಳಿಯಲ್ಲಿದ್ದ ಜಮೀನನ್ನು ಉಳಿಸಿಕೊಳ್ಳಬೇಕು ಎಂದು ಅಪ್ಪ ಕನವರಿಸುತ್ತಿದ್ದನು. ಅದು ಅವನು ದರಖಾಸ್ತಿನಲ್ಲಿ ಮಾಡಿದ ಸ್ವಯಾರ್ಜಿತ ಆಸ್ತಿ. ಆದರೆ ಪಟ್ಟಣದ ಬದುಕು ಮಣ್ಣಿನ ನಂಟನ್ನು ಸಡಿಲಗೊಳಿಸಿತು. ಬಾಡಿಗೆ ಮನೆಗಳ ವಾಸ ಸಾಕಾಗಿ, ಸ್ವಂತ ಮನೆ ಮಾಡುವ ಅವಕಾಶ ಬಂದಾಗ, ಜಮೀನನ್ನು ಮಾರಬೇಕೆಂದು ನಾವೆಲ್ಲ ಒತ್ತಡ ಹಾಕಿದೆವು. ಅಪ್ಪನಿಗೆ ವಜ್ರದ ಹರಳನ್ನು ಕೊಟ್ಟು ಗಾಜಿನ ಬಟ್ಟಲನ್ನು ಕೊಳ್ಳುವ ಸಂಕಟ. ಆದರೆ ಮನೆ ಅಗತ್ಯವಾಗಿತ್ತು. ಜಮೀನು ಕೈಬಿಟ್ಟಿತು. ಸ್ವಂತಮನೆಯ ಸುಖವನ್ನು ಎಲ್ಲರೂ ಅನುಭವಿಸಿದರು. ನಾವೆಲ್ಲ ಬೆಳೆದು ಪಟ್ಟಣ ಬಿಟ್ಟು ನೌಕರಿಗಾಗಿ ಬೇರೆಬೇರೆ ಊರುಗಳಿಗೆ ಚದುರಿಹೋದೆವು. ಮನೆಗೆ ವಾರಸುದಾರರಾದ ತಮ್ಮನ ಮಕ್ಕಳು ಅದನ್ನು ಮಾರಲು ತುದಿಗಾಲಲ್ಲಿ ನಿಂತಿದ್ದಾರೆ. ಅಪ್ಪ ಕಾಗದಪತ್ರ ಕೋಟು ಜಮೀನುಗಳನ್ನು ವಿಸರ್ಜಿಸುವಾಗ ಅನುಭವಿಸಿದ ಸಂಕಟವೇನೆಂದು ಅರಿವಾಗುತ್ತಿದೆ. ಹಿಂದಿನಿಂದ ಬಂದ ವಸ್ತು ನಂತರದ ತಲೆಮಾರಿಗೆ ಭಾವನಾತ್ಮಕ ಕಾರಣದಿಂದ ಅಮೂಲ್ಯವೆನಿಸಬಹುದು. ಆದರೆ ಈ ಭಾವನಾತ್ಮಕ ನಂಟನ್ನು ನಂತರದ ತಲೆಮಾರಿನಿಂದ ನಿರೀಕ್ಷಿಸುವಂತಿಲ್ಲ. ಹಿರೀಕರ ವಸ್ತುಗಳು ಅದಕ್ಕೆ ವಿಲೇವಾರಿ ಮಾಡಬೇಕಾದ ಸೊತ್ತುಗಳಾಗುತ್ತವೆ. ಮನೆಯಲ್ಲಿರುವ ಪುಸ್ತಕಗಳನ್ನು ನೋಡುವಾಗ ಅವುಗಳ ಮೇಲೆ ಕರುಣೆ ಉಕ್ಕಿಬರುತ್ತದೆ. ಬಾಳಲ್ಲಿ ಅಪ್ರಸ್ತುತಗೊಳ್ಳುವ ಅಥವಾ ಹೊಸರೂಪದಲ್ಲಿ ಮರುಹುಟ್ಟು ಪಡೆವ ಅವಸ್ಥೆ ಯಾರಿಗೂ ತಪ್ಪಿಸಲಾಗದು.

andolanait

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

54 seconds ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

29 mins ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

2 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

2 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

3 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

4 hours ago