ಎಡಿಟೋರಿಯಲ್

ತರೀಕೆರೆ ಏರಿಮೇಲೆ: ಬದಲಾದ ಊರು, ಬದಲಾಗದ ಪ್ರೀತಿ

ತೆಂಕುದಿಕ್ಕಿಗೆ ಶೋಲಾಕಾಡಿನ ಪರ್ವತಸೀಮೆ, ಜಿರ್ರೆಂದು ಸುರಿವ ಮಳೆ, ಗಡಗಡಿಸುವ ಥಂಡಿ, ಕಂಗೆಡಿಸುವ ಮಂಜು, ಹೆಗ್ಗಾಡು ಎಸ್ಟೇಟುಗಳಲ್ಲಿ ಕಿತ್ತಳೆ, ಕಾಫಿ, ಏಲಕ್ಕಿ, ಕರಿಮೆಣಸಿನ ಬೆಳೆ; ಆನೆ, ಕಾಡುಕೋಣ, ಕಡವೆ, ಹುಲಿ; ಬಡಗ ದಿಸೆಯಲ್ಲಿ ಚನ್ನಗಿರಿ ಕಡೆಯಿಂದ ಬಂದಿರುವ ತೆಳ್ಳನೆಯ ಕಾಡಿನ ಸಣ್ಣಬೆಟ್ಟಗಳ ಸಾಲು; ಸಾಧಾರಣ ಮಳೆ, ಮಸಾರಿ ಮತ್ತು ಎರೆ ಜಮೀನು; ಅದರೊಳಗೆ ಅಡಕೆ, ಬಾಳೆ, ವೀಳ್ಯದೆಲೆ, ತೆಂಗು, ಮಾವು, ರಾಗಿ, ಜೋಳ, ಹತ್ತಿ, ನವಣೆ, ಕೊತ್ತಂಬರಿ, ಹುಚ್ಚೆಳ್ಳು, ಕುಸುವೆ, ಸಾವೆ, ನವಣೆ, ಹುರುಳಿ, ಅಲಸಂದೆ. ಇವೆರಡರ ನಡುವಣ ಬಯಲಲ್ಲಿ ನನ್ನ ಹುಟ್ಟಿದೂರು ಸಮತಳವೂ ಬೆಳೆದೂರು ತರೀಕೆರೆಯೂ ನೆಲೆಸಿವೆ. ತರೀಕೆರೆ ಮಲೆನಾಡ ಮನೆಗೆ ಕದ-ಕಿಟಕಿ.

ಚಾರಿತ್ರಿಕವಾಗಿ ತರೀಕೆರೆ ಸೀಮೆಯು ಕದಂಬರು, ಗಂಗರು, ಹೊಯ್ಸಳರು, ವಿಜಯನಗರದವರು, ಕೆಳದಿ ಅರಸರು, ಪಾಳೇಗಾರರು, ಹೈದರ್, ಟಿಪ್ಪು, ಮೈಸೂರೊಡೆಯರ ಆಳ್ವಿಕೆಗೆ ಒಳಪಟ್ಟಿತ್ತು. ಒಂದು ಪ್ರದೇಶದ ಚರಿತ್ರೆಯನ್ನು ಆಳಿದವರ ಮೂಲಕ ಮಾತ್ರವಲ್ಲ, ಆಳುವವರು ದುಷ್ಟರಾಗಿದ್ದಾಗ ಅವರ ವಿರುದ್ಧ ದಂಗೆಯೆದ್ದವರ, ಲೋಕದೊಳಿತಿಗಾಗಿ ಹುತಾತ್ಮರಾದವರ ಮೂಲಕವೂ ನೋಡಬೇಕು. ರಾಜರು ಹಾಕಿಸಿದ ಶಾಸನಗಳಿಗಿಂತ ಊರವರೇ ನೆಟ್ಟ ವೀರಗಲ್ಲುಗಳು ಬೇರೆ ಚರಿತ್ರೆಯನ್ನು ಕಾಣಿಸುತ್ತವೆ. ಪ್ರೌಢ ಗ್ರಂಥಗಳಿಗಿಂತ ಜನಪದ ಸಾಹಿತ್ಯವು ಪರ್ಯಾಯ ಚರಿತ್ರೆಯನ್ನು ಕಟ್ಟಿಕೊಡುತ್ತದೆ. ಈ ಹಿನ್ನೆಲೆಯಿಂದ ನೋಡಿದರೆ, ತರೀಕೆರೆ ಸೀಮೆಯ ತುಂಬ ಕಳ್ಳರ, ಆನೆ ಮತ್ತು ಹುಲಿಗಳ ವಿರುದ್ಧ ಹೋರಾಡಿ ಪ್ರಾಣಬಿಟ್ಟವರ ವೀರಗಲ್ಲುಗಳಿವೆ. ಬ್ರಿಟಿಷರ ವಿರುದ್ಧ ಹೋರಾಡಿದವರ ಸ್ಮೃತಿಗಳಿವೆ. ಟಿಪ್ಪು ನಂತರ ಬ್ರಿಟಿಷರ ವಿರುದ್ಧ ದಂಗೆಯೆದ್ದವರಲ್ಲಿ ಸಂಗೊಳ್ಳಿ ರಾಯಣ್ಣ, ಹಲಗಲಿಯ ಬೇಡರು, ಸುರಪುರದ ವೆಂಕಟಪ್ಪ ನಾಯಕ, ಮೈಲಾರದ ಮಹದೇವಪ್ಪ, ಮುಂಡರಗಿ ಭೀಮರಾಯರನ್ನು ಬಿಟ್ಟರೆ, ದೊಡ್ಡ ಹೆಸರು ನಮ್ಮೂರ ಪಾಳೇಗಾರರಾದ ಸರ್ಜಾ ರಂಗಪ್ಪನಾಯಕ ಹಾಗೂ ಹನುಮಪ್ಪ ನಾಯಕರದು. ಸರ್ಕಾರದ ಇರಸಾಲನ್ನು ದೋಚಿ ಬಡವರಿಗೆ ಹಂಚುತ್ತ ಬ್ರಿಟಿಷರನ್ನೂ ಅವರ ಅಽನದಲ್ಲಿದ್ದ ಮೈಸೂರೊಡೆಯರನ್ನೂ ಇವರು ಕಂಗೆಡಿಸಿದ್ದವರು. ಬ್ರಿಟಿಷರು ಇವರನ್ನು ದಸ್ತಗಿರಿ ಮಾಡಿ, ಬೆಂಗಳೂರಿನ ಅರಮನೆಯ ಮುಂದೆ ಗಲ್ಲಿಗೇರಿಸಿದರು. ಹುತಾತ್ಮರಾದ ಇವರ ಮೇಲೆ ಜನಪದ ಕವಿಗಳು ಲಾವಣಿ ಕಟ್ಟಿದರು. ನಾನು ಇಂತಹ ಹೋರಾಟಗಾರರ ಊರಿಗೆ ಸೇರಿದವನು.

ಸಮತಳ- ಶಾಸನಗಳಲ್ಲಿ ‘ಸವತಳ’- ಜನರ ಬಾಯಲ್ಲೀಗ ‘ಸೌತ್ಲ ’ ವಾಗಿದೆ. ಈ ಹೆಸರಿಗೆ ಕಾರಣವೇನೆಂಬುದು ತಿಳಿಯದು. ಆದರೆ ಅಚ್ಚಗನ್ನಡದ ಸವತಳವು ಯಾವಾಗಲೊ ಸಂಸ್ಕೃತದ ‘ಸಮತಳ’ವಾಗಿ ಬದಲಾಗಿದೆ. ಹೊಯ್ಸಳರ ಒಂದನೇ ನರಸಿಂಹ ಬಲ್ಲಾಳನ ಶಾಸನದ ಪ್ರಕಾರ, (೧೧೫೮) ಸವತಳವು ಒಂದು ಅಗ್ರಹಾರ. ಚೌಡವ್ವೆ-ಚಂದಿರಮಯ್ಯ ದಂಪತಿಗಳು ಗುಡಿ ಕಟ್ಟಿಸಿ, ಮುದ್ದೇಶ್ವರ ಲಿಂಗವನ್ನು ಪ್ರತಿಷ್ಠೆ ಮಾಡಿ, ಊರಿಗೆ ಸರಸ್ವತಿಪುರವೆಂದು ಹೆಸರಿಟ್ಟು, ಶೈವಬ್ರಾಹ್ಮಣರಿಗೆ ಭೂದಾನ ನೀಡಿದರೆಂದು ಇದು ಹೇಳುತ್ತದೆ. ಈಗಲೂ ನಮ್ಮೂರಲ್ಲಿ ಗುಡಿಯೊಂದರ ಪಾಳು ಅವಶೇಷಗಳಿವೆ. ಇವಕ್ಕೆ ನಮ್ಮೂರವರು ‘ಚೋಳರು ಒಂದೇ ರಾತ್ರಿಯಲ್ಲಿ ಗುಡಿಯನ್ನು ಕಟ್ಟಿಮುಗಿಸಲು ಯತ್ನಿಸಿದರೆಂದೂ, ಬೆಳಕು ಹರಿದಿದ್ದರಿಂದ ಕೆಲಸವನ್ನು ಅಷ್ಟಕ್ಕೇ ನಿಲ್ಲಿಸಿ ಮಾಯವಾದರೆಂದೂ, ಇದರಿಂದ ಕಂಬಗಳಷ್ಟೇ ಉಳಿದಿವೆ’ ಎಂಬ ಕಥೆ ಹೇಳುತ್ತಾರೆ. ಗುಡಿಯ ಅವಶೇಷವಾಗಿ ಸುಬ್ರಹ್ಮಣ್ಯನು ನವಿಲಿನ ಮೇಲೆ ಕೂತಿರುವ ಒಂದು ಮುರುಕುಶಿಲ್ಪವೊಂದು ಉಳಿದಿದೆ. ಇತ್ತ ಸವತಳಲ್ಲಿ ಗುಡಿ ನಿರ್ಮಾಣವಾದ ಕಾಲದಲ್ಲೇ, ಅತ್ತ ಕಲ್ಯಾಣದಲ್ಲಿ ಉಳ್ಳವರು ಶಿವಾಲಯ ಮಾಡುವರು ಎನ್ನುತ್ತ ಶರಣರು ಕಾಯದಲ್ಲೇ ಗುಡಿಯನ್ನು ತೋರಿಸುವ ಚಳವಳಿ ಮಾಡುತ್ತಿದ್ದರು. ಸವತಳದ ಈ ಗುಡಿ ಬಹುಶಃ ಶರಣರು ಟೀಕಿಸುತ್ತಿದ್ದ ಕಾಳಾಮುಖ ಶೈವರ ಗುಡಿಯೇ. ಹೀಗಾಗಿಯೇ ಇರಬೇಕು, ನಮ್ಮೂರಲ್ಲಿ ಲಿಂಗಾಯತರೇ ಬಹುಸಂಖ್ಯಾತರಾಗಿದ್ದರೂ, ವಚನ ಸಂಸ್ಕೃತಿಯಿಲ್ಲ. ಬಸವನ ಹಬ್ಬಕ್ಕೆ ನಮ್ಮೂರ ಜನ ಎತ್ತಿನಪೂಜೆ ಮಾಡುವರು. ಈಗಿರುವ ನಂದಿಗುಡಿಯಲ್ಲೂ ಶಿವಲಿಂಗವಿಲ್ಲ. ಕುಳಿತ ವೃಷಭವಿದೆ. ಜನ ಸಿರಿಗೆರೆ ಅಥವಾ ಪಂಚಪೀಠಗಳಿಗೆ ನಡೆದುಕೊಳ್ಳುವವರು. ಬಾಳೆಹಳ್ಳಿ ಸ್ವಾಮಿಗಳ ಅಡ್ಡಪಲ್ಲಕ್ಕಿಗಾಗಿ ಬಳಸುತ್ತಿದ್ದ ಬಾಗಿದ ದೊಡ್ಡಬೊಂಬುವೊಂದನ್ನು ನಂದಿಗುಡಿಯ ಮಾಡಿಗೆ ಕಟ್ಟಿರುತ್ತಿದ್ದರು. ಸಿರಿಗೆರೆ ಮಠದ ಆನೆಯೊಂದು ಪ್ರತಿವರ್ಷ ಊರೊಳಗೆ ಬರುತ್ತಿತ್ತು. ಆದರೆ ನಮ್ಮ ಸೀಮೆಗೂ ಕಲ್ಯಾಣಕ್ಕೂ ಬೇರೊಂದು ಬಗೆಯಲ್ಲಿ ಸಂಬಂಧ ಏರ್ಪಟ್ಟಿತು. ತರೀಕೆರೆಯಲ್ಲಿ ಬಸವಣ್ಣನ ತಂಗಿ, ಚನ್ನಬಸವಣ್ಣನ ತಾಯಿ ಅಕ್ಕನಾಗಮ್ಮನವರ ಸಮಾಧಿಯಿಂದ. ಚನ್ನಬಸವಣ್ಣನ ಪ್ರಿಯ ಶಿಷ್ಯನಾಗಿದ್ದ, ಹಗ್ಗಹೊಸೆಯುವ ಕಾಯಕ ಮಾಡುತ್ತಿದ್ದ ನುಲಿಯ ಚಂದಯ್ಯನ ಗದ್ದಿಗೆ ತರೀಕೆರೆ ಪಕ್ಕದ ನಂದಿಗ್ರಾಮದಲ್ಲಿದೆ. ‘ಚನ್ನಬಸವಣ್ಣಪ್ರಿಯ ಚಂದೇಶ್ವರ ಲಿಂಗವೇ, ಕಣ್ಣಿಯ ಮಾಡಬಲ್ಲಡೆ ಬಾ ಎನ್ನ ತಂದೆ’ ಎಂದು ಶಿವನನ್ನೇ ಹಗ್ಗಹೊಸೆಯುವ ಕಾಯಕಕ್ಕೆ ಕರೆದ ಧಿಮಂತನಿವನು.

ಸಮತಳದಲ್ಲಿ ಲಿಂಗಾಯತರಿದ್ದರೂ, ವೈಷ್ಣವರಿಲ್ಲದೆ ಹೋದರೂ, ತಿಮ್ಮಪ್ಪನ ಗುಡಿಯಿದೆ. ಇಲ್ಲಿದ್ದ ವೈಷ್ಣವರು ಹೊಯ್ಸಳರ ಬಿಟ್ಟಿದೇವನ ಕಾಲಕ್ಕೋ, ವಿಜಯನಗರದ ತುಳುವರಸರ ಕಾಲಕ್ಕೋ, ಮತಪರಿವರ್ತನೆ ಮಾಡಿಕೊಂಡಿರಬೇಕು. ಈ ಭಾಗದಲ್ಲಿ ತೀರ ವಿರಳವಾಗಿರುವ ವಷ್ಟುಮರ, ದಟ್ಟವಾಗಿರುವ ಲಿಂಗಾಯತ ಮತ್ತು ಮುಸ್ಲಿಮರ ಪೂರ್ವಜರು ಮೂಲದಲ್ಲಿ ಯಾವ್ಯಾವ ಮತಕ್ಕೆ ಸೇರಿದವರೊ? ವರ್ತಮಾನದಲ್ಲಿ ಮಾತ್ರ ಚಾರಿತ್ರಿಕ ಸ್ಮೃತಿಗಳು ಇಲ್ಲದವರಂತೆ ಸ್ನೇಹ, ಪ್ರೀತಿ ಕಲಹ ಮಾಡುತ್ತ ಬದುಕಿದ್ದಾರೆ. ನಮ್ಮೂರ ಮುಖ್ಯ ಆಚರಣೆಗಳೆಂದರೆ, ಗೌರಮ್ಮನ ವಿಸರ್ಜನೆ, ತಿಮ್ಮಪ್ಪನ ತೇರು, ವೀರಗಾಸೆ ಕುಣಿತ ಹಾಗೂ ಮೊಹರಂ. ವೀರಭದ್ರ ಪಾತ್ರಧಾರಿಯು ರೋಷಾವೇಷದಲ್ಲಿ ಕುಣಿಯುತ್ತ ಅಂಬಿಗರ ಚೌಡಯ್ಯನ ವಚನಗಳ ಒಂದೊಂದೇ ನುಡಿಯನ್ನು ಉಗ್ಗಡಿಸುವಾಗ, ಕಡಕಡಲ್ ಎಂದು ಬಾರಿಸಲಾಗುತ್ತಿದ್ದ ಕರಡೆಯ ನಾದ ನನ್ನ ಕಿವಿಯಲ್ಲಿದೆ.

ಲಿಂಗಾಯತರೂ, ಮುಸ್ಲಿಮರೂ, ತಮಿಳು ದಲಿತರೂ ಇದ್ದ ನಮ್ಮೂರು ಮೂರು ಬೀದಿಗಳ ಊರು. ಜಿರಾಯಿತಿ ಮುಖ್ಯ ಕಸುಬು. ಕುಗ್ರಾಮವಾದರೂ ಪುಣೆ, ಸಾಂಗಲಿ, ಮೀರಜ್, ಪಾಲಘಾಟ್, ಕಾಟ್ಪಾಡಿ, ಬಗ್ದಾದ್ ಮುಂತಾದ ಹೆಸರು ಇಲ್ಲಿ ಕೇಳುತ್ತಿದ್ದವು. ಮಾವಿನತೋಟಗಳ ಚೇಣಿ ಹಿಡಿದ ಸಾಬರು ಹಣ್ಣನ್ನು ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದರು. ಅಡಕೆ ಮಾರಾಟಗಾರರು ಪಾಲ್ಘಾಟಿನಿಂದ ಹೊಗೆಸೊಪ್ಪು ತರುತ್ತಿದ್ದರು. ಇಲ್ಲಿನ ಮೊಹರಂ ಹಾಡುಗಳಲ್ಲಿ ಬಗ್ದಾದು, ದಮಾಸ್ಕಸ್, ಮಕ್ಕಾ ಮದೀನಾ ಪಟ್ಟಣಗಳ ಉಲ್ಲೇಖವಿರುತ್ತಿತ್ತು. ಊರು ಹೀಗೆ ಸ್ಥಳೀಯವೂ, ಜಾಗತಿಕವೂ ಆದ ನೆನಪುಗಳಿಂದ ತನ್ನ ಪರಂಪರೆ ಮತ್ತು ದೈನಿಕತೆಗಳನ್ನು ರೂಪಿಸಿಕೊಂಡಿತ್ತು. ಅಂತರ್ ಧರ್ಮೀಯ ಪ್ರೇಮಗಳು ಆಗಾಗ್ಗೆ ನಡೆದು ತಲ್ಲಣ ಹುಟ್ಟಿಸುತ್ತಿದ್ದವು. ಒಮ್ಮೆ ಒಬ್ಬ ಗೆಣಸಿನ ವ್ಯಾಪಾರಕ್ಕೆ ಬಂದ ತರುಣನಿಗೆ ಅವನು ಹಿಂದೆ ಯಾವುದೋ ಹುಡುಗಿಯನ್ನು ಪ್ರೇಮಿಸಿದ್ದನೆಂದು ಗುಡಿಯ ಕಂಬಕ್ಕೆ ಕಟ್ಟಿಹಾಕಿದ್ದಾಗ ನಮ್ಮ ಗಲ್ಲಿಯ ಜನರೆಲ್ಲ ಓಡಿಹೋಗಿ ನೋಡಿದ್ದು ನೆನಪಿದೆ. ಇಲ್ಲಿದ್ದ ದಲಿತರಾದ ಆದಿಮೂಲಂ ಮತ್ತು ಚಿನ್ನತಂಬಿಯರು ನಮ್ಮೂರಿಗೆ ತಮಿಳು ಸೀಮೆಯಿಂದ ಯಾವಾಗ? ಯಾಕಾಗಿ? ಬಂದರೊ ತಿಳಿಯದು, ಊರಹೊರಗೆ ಅವರ ಗುಡ್ಲಿತ್ತು. ಅವರು ಸತ್ತದನ ಒಯ್ಯುವುದು, ತಮ್ಮಟೆ ಬಾರಿಸುವುದು, ಸಾರು ಹಾಕುವುದು ಮಾಡುತ್ತಿದ್ದರು. ಲಿಂಗಾಯತರೂ, ಮುಸ್ಲಿಮರೂ ಒಟ್ಟಿಗೆ ನೀರು ಸೇದುತ್ತಿದ್ದ ಬಾವಿ, ಅವರ ಪಾಲಿಗೆ ನಿಷಿದ್ಧವಾಗಿತ್ತು. ಅವರು ಗಡಿಗೆ ಇಟ್ಟುಕೊಂಡು ಕಾಯುತ್ತಿದ್ದರೆ, ಜನ ಮಹದುಪಕಾರ ಮಾಡುತ್ತಿದ್ದೇವೆ ಎಂಬ ಭಾವದಲ್ಲಿ ನೀರು ಸೇದಿ ಹಾಕುತ್ತಿದ್ದರು. ನೀರ ಹರಿದಾಟ, ಗಾಳಿ ಬೀಸಾಟಗಳಷ್ಟೆ ಅಸ್ಪೃಶ್ಯತೆಯೂ ಸಹಜವೆಂದು ಊರು ಒಪ್ಪಿಕೊಂಡಿದ್ದನ್ನು ನೆನೆದರೆ ಮೈನಡುಗುತ್ತದೆ. ಹುಡುಗರು ಸ್ನಾನಮಾಡದೆ ಕೊಳಕಾಗಿದ್ದರೆ ‘ರೇ ಚಿಂತಾಂಬಿ’ ಎಂದು ತಾಯ್ತಂದೆಯರು ಬೈಯುತ್ತಿದ್ದರು. ಆದಿಮೂಲಂ ಮುಪ್ಪಿನ ಕಾಲಕ್ಕೆ ಮುಸ್ಲಿಮನಾದನು. ಅವನಿಗೆ ಅಬ್ದುಲ್ಲಾ ಎಂದು ಕರೆಯಲಾಯಿತು.

ಎಲ್ಲ ಪಟ್ಟಣದ ಬಗಲಿನ ಹಳ್ಳಿಗಳಿಗೆ ಆಗುವಂತೆ, ತರೀಕೆರೆಗೆ ಮೂರು ಮೈಲಿ ದೂರದಲ್ಲಿದ್ದ ನಮ್ಮೂರ ಚಹರೆ ಬದಲಾಗತೊಡಗಿತು. ಜಮೀನಿದ್ದವರು ಹಳ್ಳಿಯಲ್ಲೇ ಉಳಿದರು. ಸಣ್ಣಪುಟ್ಟ ಹಿಡುವಳಿಯವರು ಜಮೀನು ವಿಕ್ರಯಿಸಿ, ಬೇಸಾಯಕ್ಕೆ ವಿದಾಯ ಹೇಳಿ ಸಣ್ಣಪುಟ್ಟ ವ್ಯಾಪಾರಕ್ಕೆ, ಮಕ್ಕಳ ವಿದ್ಯಾಭ್ಯಾಸಕ್ಕೆಂದು ಪಟ್ಟಣಕ್ಕೆ ಗುಳೆ ಬಂದರು. ಹೊಲಗದ್ದೆಗಳು, ಅಡಕೆ, ಮಾವಿಗೆ ಸಿಕ್ಕ ಮಾನದಿಂದ ತೋಟ-ತೋಪುಗಳಾಗಿ ಬದಲಾದವು. ಈಗ ನಮ್ಮೂರು ಹಚ್ಚಹಸಿರು. ಲಿಂಗಾಯತರು ಮುಸ್ಲಿಮರ ಬೀದಿಯಲ್ಲಿ ಮನೆ ಕಟ್ಟಿಕೊಂಡರು. ನಮ್ಮ ಚಿಕ್ಕಪ್ಪನ ಮಗನೊಬ್ಬ ಅಂತರ್‌ಧರ್ಮೀಯ ವಿವಾಹವಾದ ಬಳಿಕ, ಎರಡೂ ಸಮುದಾಯಗಳ ಸಂಬಂಧ ಬಿಗುಗೊಂಡಿತು. ಕಲ್ಯಾಣದಲ್ಲಿ ಮಧುವರಸ-ಹರಳಯ್ಯನವರಿಗೆ ಮಾಡಿದಂತೆ ಎಳೆಹೂಟೆಯ ಶಿಕ್ಷೆಯೇನೂ ಆಗಲಿಲ್ಲ. ಹೊಸಮಸೀದಿ ಬಂದು ಬೇವಿನಮರಕ್ಕೆ ಹಸಿರು ಝಂಡಾ ಏರಿಸುವ ಸೂಫಿಸಂತರ ಹಬ್ಬವೂ, ಕರ್ಬಲಾ ಕದನದ ನೆನಪಿನ ಮೊಹರಂ ಸಂಭ್ರಮವೂ ಕಣ್ಮರೆಯಾಯಿತು. ಈಗ ಹಿಂದಿನಂತೆ ಯಾರೂ ತರೀಕೆರೆಗೆ ನಡೆದು ಹೋಗುವುದಿಲ್ಲ. ಊರೊಳಗೆ ಬಸ್ಸು ನುಗ್ಗಿದೆ. ರಸ್ತೆ ಹಾದುಹೋಗಿದೆ. ಗುಡಿಸಲು ಹೆಂಚಿನ ಮನೆಗಳಾಗಿ, ಕಪ್ಪುಹೆಂಚಿನ ಮನೆಗಳು ತಾರಸಿಯಾಗಿವೆ. ಜನರಿಗಿದ್ದ ಆಡೆಗರ್, ಬಾವಿಮನೆ, ಹೆಬ್ಬಾಕಲು, ಬಾಹೆರಗಲ್ಲಿ, ಚುನ್ನೇಕಘರ್ ಇತ್ಯಾದಿ ಅಡ್ಡಹೆಸರುಗಳೆಲ್ಲ ಕಾಣೆಯಾಗಿವೆ. ನಾನು ಓದಿದ ಏಕೋಪಾಧ್ಯಾಯ ಶಾಲೆ ಕುಸಿದಿದೆ. ಐದಾರು ಕೋಣೆಗಳಿರುವ ವಿಶಾಲ ಕಾಂಪೌಂಡಿರುವ ಸುಂದರವಾದ ಮಾಧ್ಯಮಿಕ ಶಾಲೆ ಎದ್ದು ನಿಂತಿದೆ. ಅದು ಊರ ದನಗಳು ಮೇಯಲು ಕಾವಲಿಗೆ ಹೋಗುವ ಮುನ್ನ ನಿಲ್ಲುತ್ತಿದ್ದ ಗುಂಪು ತೋಪಿನ ಜಾಗ. ನಮ್ಮೂರಿಗೆ ಮೊದಲ ಸಲ ಮೋಟರ್‌ಬೈಕ್ ತಂದ ಪಟೇಲ್ ಮಲ್ಲೇಶಪ್ಪನವರ ದೊಡ್ಡಮನೆ ಬಿದ್ದು, ಆ ಜಾಗವನ್ನು ಯಾರೊ ಪುಣ್ಯಾತ್ಮರು ಕೊಂಡುಕೊಂಡು ಕೊಟ್ಟಿಗೆ ಮನೆಯಾಗಿದೆ. ಅಡಕೆ ತೋಟದ ಮಾಲೀಕರು ಬಂಗಲೆಗಳನ್ನು ಕಟ್ಟಿಸಿದ್ದಾರೆ. ಬೋರುಕೊರೆದು ಎರಡೂ ಕೇರಿಗಳಲ್ಲಿದ್ದ ಸಿಹಿನೀರಿನ ಸೇದೊ ಬಾವಿಗಳು ಬತ್ತಿಹೋಗಿವೆ. ಹೀಗಾಗಿ ಯಾರೂ ಮತ್ತೊಬ್ಬರಿಗೆ ನೀರು ಹೊಯ್ಯುವ ಪ್ರಶ್ನೆಯೇ ಇಲ್ಲ. ಹಿಂದೆ ರಾಜಕೀಯ ಪಕ್ಷಗಳು ಊರನ್ನು ವಿಭಜಿಸುತ್ತಿರಲಿಲ್ಲ. ಈಗ ವಿಭಜನೆ ಢಾಳಾಗಿದೆ. ಹೊಳೆಯಂತೆ ಚಲಿಸುವ ಬದುಕು ಚರಿತ್ರೆಯ ಭಾರವನ್ನು ಹೊತ್ತು ಸಾಗಿಸುವುದಿಲ್ಲ, ತೇಲುವ ಎಲೆಯನ್ನು ದಡಕ್ಕೊಗೆಯುವಂತೆ ಚರಿತ್ರೆಯ ಭಾರವನ್ನು ಕೆಳಗಿಳಿಸಿ ಮುನ್ನಡೆಯುತ್ತದೆ. ಎಲ್ಲ ಊರುಗಳಂತೆ ನನ್ನ ಹಳ್ಳಿಯೂ ಬದಲಾಗಿದೆ. ಆದರೂ ನಾನು ಹೋದರೆ, ‘ನಮ್ಮ ದಸ್ತಣ್ಣನ ಮಗನಲ್ಲವೇ? ಬಾರಪ್ಪ ಒಳಗೆ ಎಂದು ಕರೆದು ಕೂರಿಸುತ್ತಾರೆ. ‘ಚಾ-ಕಾಫಿ ಮಾಡಬ್ಯಾಡ ಕಣಕ್ಕ. ನಾನೇನು ಕುಡಿಯಲ್ಲ ಎಂದರೆ, ‘ಚಾ ಕುಡೀದಿದ್ದರೆ ಏನಾತು, ಸಪ್ಪನ್ನ ಹಾಲನ್ನು ಕಾಸಿ ಕೊಡ್ತೀನಿ ತಗೋ. ಏನ್ ದಿನಾ ಬರ‍್ತೀಯಾ ನಮ್ಮನಿಗೆ? ಹಾಲು ಅಮೃತ. ಬ್ಯಾಡ ಅನ್ನಬಾರದು ಎನ್ನುತ್ತಾರೆ. ಹಾಲು ಕುಡಿದು ಅದರ ಋಣವನ್ನು ಹೊತ್ತು ತುಂಗಭದ್ರೆಯ ದಡದ ಹಂಪಿಗೆ ಮರಳುತ್ತೇನೆ.

andolanait

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

4 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

4 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

6 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

6 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

7 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

8 hours ago