ಎಡಿಟೋರಿಯಲ್

ತರೀಕೆರೆ ಏರಿಮೇಲೆ : ಮಾನಸ ಗಂಗೋತ್ರಿಯ ಎರಡು ವರ್ಷಗಳು

– ರಹಮತ್ ತರೀಕೆರೆ

ನಾನು ಮೈಸೂರಿಗೆ ಎಂಎ ಓದಲು ಹೋದಾಗ, ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಹಾಮಾ ನಾಯಕ, ಶಂಕರ ಮೊಕಾಶಿ ಪುಣೇಕರ, ಪ್ರಭುಶಂಕರ, ವೆಂಕಟಾಚಲ ಶಾಸ್ತ್ರಿ, ಜಿ. ಎಚ್.ನಾಯಕ, ಸಿಪಿಕೆ, ಎಚ್.ಎಂ. ಚನ್ನಯ್ಯ, ರಾಗೌ, ಸುಧಾಕರ ಮೊದಲಾದವರೆಲ್ಲ ವಿರಾಜಮಾನರಾಗಿದ್ದರು. ಇವರಿಗೆ ಹೋಲಿಸಿದರೆ ವಯಸ್ಸಿನಲ್ಲಿ ಚಿಕ್ಕವರಾದ ದೇವಯ್ಯ ಹರವೆ, ವಿಜಯಾ ದಬ್ಬೆ, ಎನ್.ಎಸ್.ತಾರಾನಾಥ ಮುಂತಾದವರು ಅಷ್ಟೊಂದು ಖ್ಯಾತರಾಗಿರಲಿಲ್ಲ. ಹಾಮಾನಾ ಸಂಸ್ಥೆಯ ಮುಖ್ಯಸ್ಥರು. ಶಿಸ್ತು ಪ್ರತಿಷ್ಠೆ ವರ್ಚಸ್ಸು ವಾಗ್ಮಿತೆಗಳಿಗೆ ಹೆಸರಾದವರು. ಕುಲಪತಿ ಆಗಬೇಕಾದವರು ಶಾಪಗ್ರಸ್ತನಾಗಿ ಮತ್ರ್ಯದಲ್ಲಿರುವ ಗಂಧರ್ವನಂತೆ ಇನ್ನೂ ವಿಭಾಗದಲ್ಲಿದ್ದಾರೆ ಎಂದು ಮಂದಿ ಮಾತಾಡಿಕೊಳ್ಳುತ್ತಿದ್ದರು. ಅವರ ಮುಂದೆ ಉಳಿದ ಪ್ರಾಧ್ಯಾಪಕರು ನೆಂದಬೆಕ್ಕುಗಳಂತೆ ಸಭೆಗಳಲ್ಲಿ ಕೂರುತ್ತಿದ್ದರು. ಅವರ ಬಗ್ಗೆ ನಿಷ್ಠುರವಾಗಿ ವಿಮರ್ಶೆ ಮಾಡುತ್ತಿದ್ದವರು ಜಿ.ಎಚ್.ನಾಯಕರು. ಜವರೇಗೌಡರು ಕುಲಪತಿಯಾಗಿದ್ದಾಗ, ಹಾಮಾನಾ ಅವರನ್ನು ಉಪಾಯವಾಗಿ ಕೊಲ್ಕತ್ತೆಗೆ ಕಳಿಸಿ ಭಾಷಾವಿಜ್ಞಾನದಲ್ಲಿ ಪದವಿ ಮಾಡಿಸಿದರು; ಅವರಿಗಿಂತ ಸೀನಿಯರಾಗಿದ್ದವರನ್ನು ಬೈಪಾಸ್ ಮಾಡಿ ಪ್ರಾಧ್ಯಾಪಕ ಮತ್ತು ಡೈರೆಕ್ಟರ್ ಹುದ್ದೆಗೆ ಬರುವಂತೆ ಮಾಡಿದರು ಎಂಬ ಬಗ್ಗೆ ಜಿ.ಎಚ್. ನಾಯಕರು ಸದಾ ಹೇಳುತ್ತಿದ್ದರು.
ಹಾಮಾನಾ ಅವರು ನಮಗೆ ಪಾಠ ಮಾಡಲಿಲ್ಲ. ಭಾಷಾವಿಜ್ಞಾನವನ್ನು ಐಚ್ಛಿಕವಾಗಿ ತೆಗೆದುಕೊಂಡವರಿಗೆ ಮಾತ್ರ ಕ್ಲಾಸು ತೆಗೆದುಕೊಳ್ಳುತ್ತಿದ್ದರು. ಅಂತಹ ದೊಡ್ಡವರ ಪಾಠದಿಂದ ನಾವು ವಂಚಿತರಾದೆವೆಂದೂ ನಮಗೆ ಅವರು ವಾರಕ್ಕೊಂದಾದರೂ ಗಂಟೆ ಪಾಠ ಮಾಡಬೇಕೆಂದು ಹೋಗಿ ನಾವು ಮನವಿ ಸಲ್ಲಿಸಿದ್ದೆವು. ಅವರ ವಿದ್ವತ್ತಿನ ಪ್ರಯೋಜನ ಪಡೆಯುವುದಕ್ಕಿಂತ ಪ್ರತಿಷ್ಠಿತರ ಶಿಷ್ಯರಾಗಬೇಕು ಎಂಬುದೇ ನಮ್ಮಿಚ್ಛೆಯಾಗಿತ್ತು. ಹಾಮಾನಾ ತಮ್ಮ ಜನಪ್ರಿಯತೆಗೆ ತಾವೇ ಮಣಿಯುತ್ತ ನಮ್ಮ ಮನವಿಪತ್ರ ಸ್ವೀಕರಿಸಿದರು. ನಿರ್ದೇಶಕರ ಕಾರ್ಯಭಾರದಿಂದ ಯಾಕೆ ಎಲ್ಲ ತರಗತಿಗಳಿಗೂ ಬರಲು ಅಸಾಧ್ಯ ಎಂಬುದನ್ನು ತಿಳಿಹೇಳಿದರು. ಹಾಮಾನಾ ಅವರ ಸಲಿಗೆಯಿಲ್ಲದ ಕಠಿಣ ಶಿಸ್ತಿನ ಬಗ್ಗೆ ಹಲವಾರು ದಂತಕತೆಗಳು ಹಬ್ಬಿದ್ದವು. ತಮ್ಮೊಬ್ಬ ಪಿಎಚ್.ಡಿ., ವಿದ್ಯಾರ್ಥಿ ಚರ್ಚೆಗೆ ಹೇಳಿದ ಸಮಯಕ್ಕೆ ಬಾರದಿದ್ದುದಕ್ಕೆ- ದೂರದ ಊರಿಂದ ಬರುವಾಗ ತಡವಾಗಿ ಚಲಿಸಿದ ಬಸ್ಸಿನ ಕಾರಣವನ್ನು ಪರಿಪರಿಯಾಗಿ ವಿವರಿಸಿದರೂ- ಮರಳಿ ಊರಿಗೆ ಕಳಿಸಿದರಂತೆ ಇತ್ಯಾದಿ. ಸೈನ್ಯಾಧಿಕಾರಿಯಂತಿದ್ದ ಅವರ ಶಿಸ್ತಿನಿಂದ ವಿಭಾಗದಲ್ಲಿ ಆಡಳಿತದಲ್ಲಿ ಬಿಗಿ ಅಚ್ಚುಕಟ್ಟುತನ ನೆಲೆಸಿದ್ದವು. ಆದರೆ ಶಿಸ್ತು ವ್ಯಸನದಂತೆಯೂ ತೋರುತ್ತಿತ್ತು. ನಮ್ಮ ಬ್ಯಾಚನ್ನು ಬೀಳ್ಕೊಡುವ ದಿನ, ನಾವೆಲ್ಲ ನಿರ್ಗಮನದ ಭಾವುಕ ಗಳಿಗೆಯಲ್ಲಿದ್ದಾಗ, ಯಾರೊ ಒಬ್ಬ ವಿದ್ಯಾರ್ಥಿ ಪಾದವನ್ನು ಗೋಡೆಗೆ ಆನುಗೊಟ್ಟು ನಿಂತಿದ್ದರಿಂದ ಗೋಡೆಗೆ ಧೂಳಿನ ಪಾದಮುದ್ರೆ ಬಿದ್ದಿದೆಯೆಂದೂ, ಸಭಾಂಗಣಕ್ಕೆ ಹಾಕಿದ ಪರದೆಗಳಲ್ಲಿ ಯಾರೊ ತಮ್ಮ ಇಂಕುಗೈಯನ್ನು ಒರೆಸಿದ್ದಾರೆಂದೂ, ವಿಭಾಗದ ಮುಂದಿನ ಹುಲ್ಲುಹಾಸಿನಲ್ಲಿ ಎಷ್ಟು ಬೈದರೂ ಅಡ್ಡನಡೆದು ಹಾದಿ ಬೀಳಿಸಲಾಗಿದೆಯೆಂದೂ ಅರ್ಧತಾಸು ವ್ಯಗ್ರರಾಗಿ ಮಾತಾಡಿದರು. ಈ ಸರಣಿ ಆರೋಪಗಳನ್ನು ಎರಡೂ ವರ್ಷ ಕೇಳಿದ್ದೆವು. ಇವತ್ತೂ ಅದರ ಅಗತ್ಯವಿತ್ತೇ? ನಮ್ಮ ನಾಳೆಯ ಬಾಳಿನಲ್ಲಿ ಒಳಿತಾಗಲೆಂದು ಹರಸುತ್ತಾರೆಂದು ಚಾತಕಗಳಂತೆ ಕಾಯುತ್ತಿದ್ದ ನಮಗೆ ನಿರಾಶೆಯಾಯಿತು.
ಹಾಮಾನಾ ಅವರಿಗೆ ಹೋಲಿಸಿದರೆ, ಪುಣೇಕರ, ಪ್ರಭುಶಂಕರ, ಜಿ.ಎಚ್.ನಾಯಕ, ರೌಗೌ, ನೊರೊನ್ಹಾ ಮುಂತಾದವರೆಲ್ಲ, ಬೇಕಾದಾಗ ಹೋಗಿ ನೀರು ಕುಡಿಯಬಹುದಾದ ಸರೋವರಗಳು. ಕುಳ್ಳಗೆ ಕಪ್ಪಗಿನ ದೇಹಾಕೃತಿಯುಳ್ಳ, ಪ್ರೀತಿ ವಿನೋದಭಾವಗಳು ಲಾಸ್ಯವಾಡುವ ಮುಖದಲ್ಲಿ ಫಳಫಳಿಸುವ ಅಂತಃಕರಣದ ಎರಡು ದೊಡ್ಡ ಕಣ್ಣುಗಳಿದ್ದ ಪ್ರಭುಶಂಕರರ ಪ್ರೀತಿಯನ್ನು ನಾವು ಮನಸಾರೆ ಅನುಭವಿಸಿದೆವು. ವಿಶ್ವವಿದ್ಯಾಲಯದ ಜಾತಿ ರಾಜಕಾರಣದಲ್ಲಿ, ಅವರಿಗೆ ನ್ಯಾಯವಾಗಿ ಸಿಗಬೇಕಾದ ಸ್ಥಾನಮಾನಗಳು ಸಿಗದಿದ್ದರೂ ತಲೆಕೆಡಿಸಿಕೊಂಡವರಲ್ಲ ಎಂದು ಹೇಳಲಾಗುತ್ತಿತ್ತು. ಆಗಾಗ್ಗೆ ನಾಲಗೆಯಿಂದ ಮೇಲ್ದುಟಿಯನ್ನು ಸವರಿಕೊಂಡು, ನಗುಮುಖದಲ್ಲಿ ಪಾಠ ಮಾಡುತ್ತಿದ್ದರು. ಅವರು ನಮಗೆ ಪಾಶ್ಚಾತ್ಯ ಸಾಹಿತ್ಯ ವಿಮರ್ಶೆ ಪತ್ರಿಕೆಯಲ್ಲಿ ವಡ್ರ್ಸವರ್ತನ `ಪ್ರಿಫೇಸ್ ಟು ಲಿರಿಕಲ್ ಬ್ಯಾಲಡ್ಸ್’ ಹಾಗೂ ಶೆಲ್ಲಿಯ `ಡಿಫೆನ್ಸ್ ಆಫ್ ಪೊಯಿಟ್ರಿ’ ಕಲಿಸಿದರು. ಫರ್ಲಾಂಗುಗಟ್ಟಲೆ ಉದ್ದನೆಯ ಆಂಗ್ಲವಾಕ್ಯಗಳನ್ನು ಲೀಲಾಜಾಲವಾಗಿ ಓದಿ ಅರ್ಥವನ್ನು ಹೇಳುತ್ತಿದ್ದ ಗುರುಗಳ ಪಾಂಡಿತ್ಯವು, ಅಚ್ಚಗನ್ನಡಿಗರಾದ ನಮಗೆ ದಂಗುಬಡಿಸುತ್ತಿತ್ತು. ಅವರದು ನಮ್ಮೊಳಗೆ ವಿಚಾರಗಳ ಕಿಚ್ಚನ್ನೆಬ್ಬಿಸಿ ಧಗಧಗಿಸುವಂತೆ ಮಾಡಬಲ್ಲ ಪಾಠವಲ್ಲ. ಜೀವನವನ್ನು ಪ್ರೀತಿಸುವ, ವ್ಯಕ್ತಿಗಳ ವರ್ತನೆ ಮಾತುಗಳಲ್ಲಿರುವ ವೈರುಧ್ಯಗಳನ್ನು ಚುರುಕಾಗಿ ಗಮನಿಸುವ, ವಿದ್ವತ್ತು ಹಾಸ್ಯಪ್ರಜ್ಞೆಯುಳ್ಳ ಗುರುವೊಬ್ಬ, ತನ್ನ ಆಶ್ರಮದ ಮರದಡಿ ತಣ್ಣಗೆ ಕೂತು, ಶಿಷ್ಯರಿಗೆ ಮನೆಯಿಂದ ತಂದ ಬುತ್ತಿಯನ್ನು ಉಂಡೆಕಟ್ಟಿ ನಿಧಾನವಾಗಿ ಮಿದ್ದು ಬಾಯಿಗಿಡುವಂತಹದ್ದಾಗಿತ್ತು. ಪ್ರಸಾರಾಂಗದ ಕೆಲಸಗಳಿಂದ ದಣಿದಿರುತ್ತಿದ್ದ ಅವರು, ಕೆಲವೊಮ್ಮೆ ತರಗತಿ ಆರಂಭಿಸುವ ಮುನ್ನ ಅವರು ಒಂದು ಆಕಳಿಕೆಯನ್ನು ನಮ್ಮತ್ತ ಕಳಿಸುತ್ತಿದ್ದುಂಟು. ಅದು ತರಗತಿಯಲ್ಲಿ ಸಾಂಕ್ರಾಮಿಕವಾಗುತ್ತಿತ್ತು. ಗುರುವಿನ ತಾಯ್ತನ ಎಂದರೇನು ಎಂಬುದನ್ನು ನಾವು ಅನುಭವಿಸಿದ್ದು ಅವರಲ್ಲೇ.
ಸಾಹಿತ್ಯ ವಿಮರ್ಶೆಯ ವಿದ್ಯಾರ್ಥಿಗಳಾಗಿದ್ದ ನಮಗೆ ಜಿ.ಎಚ್.ನಾಯಕ ಮತ್ತು ಎಚ್.ಎಂ. ಚನ್ನಯ್ಯನವರು ಹೀರೋಗಳಾಗಿದ್ದರು. ಜಿ.ಎಚ್. ನಾಯಕರು ವೈಚಾರಿಕತೆ ಮಾನವೀಯತೆ ಮತ್ತು ಬೌದ್ಧಿಕತೆಗಳ ಸಂಗಮವಾಗಿದ್ದರು. ಅವರಿಗೆ ತಮ್ಮ ಹಗೆಯನ್ನು ತರಗತಿಯೊಳಗೆ ತಂದು ವಧಿಸುವ ಗುಣವಿತ್ತು. ಹಾಮಾನಾ, ಎಲ್. ಬಸವರಾಜು, ಜವರೇಗೌಡರು ಅವರ ಟೀಕೆಯ ವಸ್ತುಗಳಾಗಿದ್ದರು. ನಾವು ಮೆಚ್ಚುವ ಮೆಚ್ಚದಿರುವ ಲೇಖಕರಲ್ಲೂ ಗುಣದೋಷಗಳನ್ನು ಸಮಾನವಾಗಿ ಕಾಣುವ ಗುಣವನ್ನು ಅವರು ಕಲಿಸಿದರು. ಅವರದು ಅತಿಯಾದ ತರ್ಕಬದ್ಧತೆ. ಸಾಕ್ಷ್ಯಾಧಾರಗಳ ವಕೀಲಿತನ. ಇವರಿಗೆ ಹೋಲಿಸಿದರೆ ಪಶ್ಚಿಮದ ಲೇಖಕರನ್ನೂ ಕಲಾಸಿದ್ಧಾಂತ ಮತ್ತು ತತ್ವಶಾಸ್ತ್ರಗಳನ್ನು ಚೆನ್ನಯ್ಯನವರು ಹೆಚ್ಚು ಓದಿಕೊಂಡಿದ್ದರು. ಅವನ್ನು ತಮ್ಮ ಬರೆಹದಲ್ಲಿ ಅನುಸಂಧಾನ ಮಾಡುತ್ತಿದ್ದರು. ಚಿಂತನೆಯನ್ನು ಫಿಲಾಸಫಿಕಲ್ ನೆಲೆಗೆ ಒಯ್ದು ಮುಟ್ಟಿಸುತ್ತಿದ್ದರು. ನಾಟಕ ಕವಿತೆ ವಿಮರ್ಶೆ ಮೂರೂ ಪ್ರಕಾರಗಳಲ್ಲಿ ಕೆಲಸ ಮಾಡಿದ್ದರಿಂದ, ಅವರ ವಿಮರ್ಶೆಯಲ್ಲಿ ಕಲಾಕೃತಿಗಳನ್ನು ನೋಡುವ ಸೂಕ್ಷ್ಮತೆ ಹೆಚ್ಚು ಜೀವಂತವಾಗಿರುತ್ತಿತ್ತು. ಯಾವುದೇ ಅಧಿಕಾರ ಸ್ಥಾನಮಾನಗಳಿಗೆ ಹಾತೊರೆಯದ, ಅಧ್ಯಾಪಕರಿಗೆ ಅಗತ್ಯವಾಗಿದ್ದ ಪಿಎಚ್.ಡಿ., ಕೂಡ ಮಾಡದ ಅವರಲ್ಲಿ ಸೃಜನಶೀಲ ಸೋಮಾರಿತನವಿತ್ತು. ಪಿ.ಎಚ್‍ಡಿ. ಅಧ್ಯಯನಕ್ಕೆ ಜಿ.ಎಚ್.ನಾಯಕ ಇಲ್ಲವೇ ಚನ್ನಯ್ಯ ಅವರೇ ಮಾರ್ಗದರ್ಶಕರು ಆಗಬೇಕೆಂದು ನನ್ನ ಹಂಬಲ. ಆದರೆ ಪಿಎಚ್.ಡಿ., ಇಲ್ಲದ್ದರಿಂದ ವಿಶ್ವವಿದ್ಯಾಲಯ ಇಬ್ಬರನ್ನೂ ಮಾರ್ಗದರ್ಶಕರಾಗಿ ಮಾನ್ಯ ಮಾಡಿರಲಿಲ್ಲ. ಚನ್ನಯ್ಯನವರು `ದೀರ್ಘ ಕಾಲ ಸೇವೆ ಸಲ್ಲಿಸಿದವರಿಗೆ ರೀಡರುಗಳಿಗೂ ಮಾರ್ಗದರ್ಶನ ಮಾಡುವ ಅವಕಾಶ ಕಲ್ಪಿಸುವ ನಿಯಮ ಬರುತ್ತಿದೆ. ಕಾಯುತ್ತೀರಾ?’ ಎಂದು ಕೇಳಿದರು. ಆಗಲೆಂದು ವರ್ಷಕಾಲ ಕಾದು ಸೇರಿಕೊಂಡೆ. ಒಂದೊಂದೇ ಅಧ್ಯಾಯವನ್ನು ಬರೆದುಕೊಂಡು ಶಿವಮೊಗ್ಗೆಯಿಂದ ಹೋಗುತ್ತಿದ್ದೆ. ಅದನ್ನು ಓದಿ, ಕಾವ್ಯವನ್ನು ಆಶಯಪ್ರಧಾನವಾಗಿ ವಿಮರ್ಶೆ ಮಾಡುವಾಗ ಸಂಭವಿಸುವ ದೋಷಗಳನ್ನು ಸೂಕ್ಷ್ಮವಾಗಿ ತಿಳಿಸಿಕೊಡುತ್ತಿದ್ದರು. ಉಮಾ ತಾಯಿ ಊಟ ಕೊಡಿಸುತ್ತಿದ್ದರು. ಚೆನ್ನಯ್ಯನವರು ಬೇಗನೇ ತೀರಿಕೊಂಡರು. ನಾನು ವಿದ್ಯಾರ್ಥಿ ದೆಸೆಯಿಂದ ಹೊರಬಂದ ಬಳಿಕ, ಅತಿಹೆಚ್ಚು ಮನೆಯೂಟವನ್ನು ಪ್ರೀತಿಯನ್ನು ಪಡೆದಿದ್ದು ಜಿ.ಎಚ್.ನಾಯಕ-ಮೀರಕ್ಕ ಅವರ ಮನೆಯಲ್ಲಿ.
ಸುಧಾಕರ್ ಅವರ ವಿದ್ವತ್ತು ಗ್ರಾಮೀಣವಾದುದನ್ನೆಲ್ಲ ವೈಭವೀಕರಿಸುವ ರಮ್ಯೀಕರಿಸುವ ಗುಣವನ್ನು ಹೊಂದಿತ್ತು. ಕೆಲವು ಗಂಟೆಗಳ ಬಳಿಕ ಅವರು ಹೇಳಿದ್ದನ್ನೆ ಹೇಳುತ್ತಿದ್ದಾರೆ. ಓದು ಯಾವುದೊ ಹಂತಕ್ಕೆ ನಿಂತುಹೋಗಿತ್ತು ಅನಿಸುತ್ತಿತ್ತು. ಅವರು ಸಾಹಿತ್ಯದಲ್ಲಿ ಆಸಕ್ತಿ ಹುಟ್ಟಿಸುವ ಪದವಿ ಕಾಲೇಜಿಗೆ ಒಳ್ಳೆಯ ಮೇಷ್ಟರಾಗಿದ್ದರು. ಒಪ್ಪುವ ನಿರಾಕರಿಸುವ ಎರಡು ಅತಿಗಳಲ್ಲಿದ್ದ ಅವರ ವಿಶ್ಲೇಷಣೆಯಲ್ಲಿ, ವಿಮರ್ಶೆಗೆ ಬೇಕಾದ ಪ್ರೀತಿನಿಷ್ಠುರತೆಯ ಸಮತೋಲನ ಕಡಿಮೆಯಿತ್ತು. ವೆಂಕಟಾಚಲ ಶಾಸ್ತ್ರಿ, ಎನ್.ಎಸ್.ತಾರಾನಾಥ ಅವರು ಪ್ರಾಚೀನ ಸಾಹಿತ್ಯದಲ್ಲಿ ಒಳ್ಳೆಯ ವಿದ್ವಾಂಸರಾಗಿದ್ದರು. ಆದರೆ ಸಮಾಜದ ಬಗ್ಗೆ ಅವರ ದೃಷ್ಟಿಕೋನ ಸಾಂಪ್ರದಾಯಿಕವಾಗಿತ್ತು. ನಾವು ನಮ್ಮ ವೈಚಾರಿಕ ಪ್ರಜ್ಞೆಯನ್ನು ಗಳಿಸಿಕೊಂಡಿದ್ದು ಜಿ.ಎಚ್. ನಾಯಕ ಹಾಗೂ ಚನ್ನಯ್ಯ ಅವರ ತರಗತಿಗಳಲ್ಲಿ. ತರಗತಿಗಳಲ್ಲಿ ಅಷ್ಟು ಉಪಯುಕ್ತವೆನಿಸದ, ನಂತರದ ದಿನಗಳಲ್ಲಿ ತಮ್ಮ ಚಿಂತನೆಯ ಮೂಲಕ ಸಾಂಸ್ಕøತಿಕ ಮಹತ್ವದವರು ಎನಿಸಿದ್ದು ವಿಜಯಾ ದಬ್ಬೆ ಮತ್ತು ಪುಣೇಕರ್. ಪುಣೇಕರ್ ದೊಡ್ಡ ಚಿಂತಕರಾಗಿದ್ದರು. ಆದರೆ ಗಗನಕುಸುಮ. ನೆಲದ ಮೇಲೆ ಚಲಿಸುವ ವಾಹನ ತಟ್ಟನೆ ಆಗಸಕ್ಕೆ ನೆಗೆದು ವಿಹರಿಸುವಂತೆ ಅವರ ಚಿಂತನೆ ಎಲ್ಲೊಲ್ಲೊ ಹೋಗುತ್ತಿತ್ತು. ಕನೆಕ್ಟ್ ಆಗುತ್ತಿರಲಿಲ್ಲ. ಕ್ರಮಬದ್ಧವಾಗಿ ತಾರ್ಕಿಕ ಬೆಳವಣಿಗೆಯಲ್ಲಿ ವಿಷಯ ನಿರೂಪಣೆ ಮಾಡದ ಅವರ ಲಹರಿತನ, ಪರೀಕ್ಷಾದೃಷ್ಟಿಯಿಂದ ಉಪಯುಕ್ತವಾಗಿರಲಿಲ್ಲ. ದಬ್ಬೆಯವರ ಕಾಳಜಿ ಸ್ತ್ರೀವಾದಿ ನಿಲುವು ಹೊಸದೃಷ್ಟಿಕೋನವನ್ನು ತೆರೆಯುತ್ತಿತ್ತು. ಆದರೆ ತೀವ್ರತೆಯಿಲ್ಲದ ಮೆಲುದನಿಯ ಅವರ ಉಪನ್ಯಾಸ, ನಮ್ಮನ್ನು ಹಿಡಿದಿಟ್ಟುಕೊಳ್ಳುವುದರಲ್ಲಿ ಸೋಲುತ್ತಿತ್ತು. `ಮೇಡಂ ಕೇಳಿಸ್ತಿಲ್ಲ’ ಎಂದು ಕೊನೆಯ ಬೆಂಚಿನಲ್ಲಿದ್ದವರು ಗೊಣಗುತ್ತಿದ್ದರು. `ಈಗ ಕೇಳಿಸ್ತಿದೆಯಾ? ಕೇಳಿಸ್ತಿದೆಯಾ ಅನ್ನೋದಾದರೂ ಕೇಳಿಸ್ತಾ?’ ಎಂದು ಮೇಡಂ ತಮಗೆ ತಾವೇ ತಮಾಶೆ ಮಾಡಿಕೊಳ್ಳುತ್ತಿದ್ದರು. `ಕನ್ನಡ ಸಾಹಿತ್ಯದ ತಾತ್ವಿಕ ಪ್ರೇರಣೆಗಳು’ ಎಂಬ ಥಿಯರಿಟಿಕಲ್ಲಾದ ತುಸು ಶುಷ್ಕವಾದ ಪತ್ರಿಕೆಯನ್ನು ಅವರು ತೆಗೆದುಕೊಳ್ಳುತ್ತಿದ್ದರು. ಅವರು ನಾಗಚಂದ್ರನ ಮೇಲೆ ಸಂಶೋಧನೆ ಮಾಡುವಾಗ, ಜೈನಧರ್ಮವನ್ನು ಆಳವಾಗಿ ಅಧ್ಯಯನ ಮಾಡಿದ್ದವರು. ಹೀಗಾಗಿ ಜೈನ ದರ್ಶನದ ಬಗ್ಗೆ ವಿಸ್ತಾರವಾಗಿ ಹೇಳುತ್ತಿದ್ದರು. ಮುಂದಿನ ವರ್ಷವೂ ಇದೇ ಪತ್ರಿಕೆಯಿದ್ದರೆ ನಾವೂ ವಿರಕ್ತಿಯ ದೀಕ್ಷೆ ತೆಗೆದುಕೊಳ್ಳಬೇಕಾಗುವುದು ಎಂದು ನಾವು ಆಡಿಕೊಳ್ಳುತ್ತಿದ್ದೆವು.
ಎಡ್ವರ್ಡ್ ನರೋನ್ಹಾ ಪಾದ್ರಿ ಕೆಲಸವನ್ನು ಬಿಟ್ಟು ಬಂದವರಂತೆ. ಕೆಂಪಗೆ ಆರಡಿ ಎತ್ತರವಿದ್ದ ಅವರು ನಾಚಿಕೆಂಪಾಗುವ ಗುಣ ಹೊಂದಿದ್ದರು. ಕರಾವಳಿಯ ಶಿಷ್ಟಕನ್ನಡದಲ್ಲಿ ಮೆಲುದನಿಯಲ್ಲಿ ಮಾತಾಡುತ್ತಿದ್ದರು. ಅವರು ನಮಗೆ ಮೊಂಟೆಯ್ನನ ಮತ್ತು ಮೂರ್ತಿರಾಯರ ಲಲಿತಪ್ರಬಂಧಗಳನ್ನು ಹೇಗೆ ಓದಬೇಕೆಂದು ಕಲಿಸಿದರು. ಅವರಲ್ಲಿ ಕ್ರಿಸ್ತನ ಸಹನೆ ಮತ್ತು ಕರುಣೆ ಅಪಾರವಾಗಿತ್ತು. ತಮ್ಮ ಕೀರ್ತಿ ಪ್ರಭಾವಳಿಯಿಂದ ಮೆರೆಯುತ್ತಿದ್ದ ಕೆಲವು ಪ್ರಾಧ್ಯಾಪಕರ ಮುಂದೆ ಮರೆಗೆ ಸಂದಂತೆ ಕಾಣಿಸುತಿದ್ದರು. ಆದರೆ ವಿದ್ಯಾರ್ಥಿಗಳ ವೈಯಕ್ತಿಕ ಕಷ್ಟಸುಖಗಳನ್ನು ಕಿವಿಗೊಟ್ಟು ಆಲಿಸುತ್ತಿದ್ದರು. ನನ್ನ ಬಡಕಲು ದೇಹನೋಡಿ ಹಣ್ಣು-ಹಾಲು ಸೇವಿಸಬೇಕೆಂದು ಸೂಚಿಸಿದರು. ಅವರೊಮ್ಮೆ ನಾನು ಬರೆದ ಲೇಖನವನ್ನು ಓದಲು ತೆಗೆದುಕೊಂಡವರು, ಹಾಳೆಗಳಿಗೆ ಹಾಕಿದ್ದ ತುಕ್ಕುಹಿಡಿದ ಗುಂಡುಪಿನ್ನನ್ನು ಹುಶಾರಾಗಿ ತೆಗೆದು ಕಸದ ಬುಟ್ಟಿಗೆ ಹಾಕಿ, ಹಾಳೆಗಳಿಗೆ ತೂತುಮಾಡಿ ಟ್ಯಾಗನ್ನು ಕಟ್ಟಿದರು. `ಗುಂಡುಸೂಜಿ ಬಳಸಬೇಡಿ. ತುಕ್ಕುಹಿಡಿದ ಸೂಜಿ ಕೈಗೆ ಚುಚ್ಚಿದರೆ ಕಷ್ಟ’ ಎಂದರು. ಒಮ್ಮೆ ಕಾಯಿಲೆಬಿದ್ದು ವಾರಕಾಲ ತರಗತಿಗೆ ಹೋಗದೆ ಹಾಸ್ಟೆಲಿನಲ್ಲೇ ಮಲಗಿಕೊಂಡಿದ್ದೆ. ನಾನೇಕೆ ಬರಲಿಲ್ಲವೆಂದು ವಿಚಾರಿಸಿ, `ಗುಣವಾಗಿ ಬನ್ನಿ. ತರಗತಿ ತಪ್ಪಿದ ಬಗ್ಗೆ ಚಿಂತೆ ಮಾಡಬೇಡಿ, ನನ್ನ ಕೋಣೆಯಲ್ಲಿ ಪ್ರತ್ಯೇಕ ಪಾಠ ಹೇಳುತ್ತೇನೆ’ ಎಂದು ಚೀಟಿ ಕಳಿಸಿದ್ದರು. ಪರಸ್ಥಳದ ತಬ್ಬಲಿತನದಲ್ಲಿ ಯಾರಾದರೂ ತೋರುವ ರವೆಯಷ್ಟು ಅಕ್ಕರೆಯ ಹಿಮಾಲಯದ ತಂಪನ್ನು ನೀಡುತ್ತಿತ್ತು.
ನನಗೆ ಕಲಿಸಿದ ಮಾನಸಗಂಗೋತ್ರಿಯ ಗುರುಗಳ ವಿದ್ವತ್ತು ಮತ್ತು ಸ್ವಭಾವಗಳು ಹೀಗೆ ವೈವಿಧ್ಯವಾಗಿದ್ದು, ಉಪಯುಕ್ತವಾಗಿದ್ದವು .ಆದರೂ ಇವರ ಸಮಕಾಲೀನರಾಗಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿದ್ದು ವಿದ್ಯಾರ್ಥಿಗಳಲ್ಲಿ ಕ್ರಾಂತಿಯ ಕಿಚ್ಚು ಹಚ್ಚುತ್ತಿದ್ದ ಡಿ.ಆರ್. ನಾಗರಾಜ, ಕಿರಂ, ಸಿದ್ಧಲಿಂಗಯ್ಯ, ನಾಗವಾರ ಮೊದಲಾದ ಚಳುವಳಿಗಾರರಿಂದ ಪಾಠ ಹೇಳಿಸಿಕೊಳ್ಳುತ್ತಿದ್ದ ಬೆಂಗಳೂರು ವಿವಿಯ ವಿದ್ಯಾರ್ಥಿಗಳ ಬಗ್ಗೆ ನಮಗೆ ಅಸೂಯೆಯಿತ್ತು. ಅಲ್ಲಿ ಮುಖ್ಯಸ್ಥøರಾಗಿದ್ದ ಜಿ.ಎಸ್.ಶಿವರುದ್ರಪ್ಪನವರ ಸೆಮಿನಾರುಗಳ ಫಲಶೃತಿಯಾಗಿದ್ದ ಪುಸ್ತಕಗಳಿಂದಲೂ, ಅವರು ಸಂಪಾದಿಸಿದ ವಿಚಾರಸಾಹಿತ್ಯ ಎಂಬ ಪುಸ್ತಕ ಸರಣಿಯಿಂದಲೂ ನಾವು ನಮ್ಮ ಬೌದ್ಧಿಕ ಹೊಟ್ಟೆಯುರಿಯನ್ನು ತಣಿಸಿಕೊಂಡೆವು.

andolanait

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

4 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

5 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

6 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

6 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

7 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

8 hours ago