ಶಾಹಿದಾ ಚಿಕ್ಕಮ್ಮ ಇನ್ನೂ ಇದ್ದಾಳೆ. ಈಕೆ ಪ್ರಾಯದಲ್ಲಿ ಕಿರಗೂರಿನ ಗಯ್ಯಾಳಿ. ಗಂಡಸರ ಜಗತ್ತಿನ ದನ ಮೇಯಿಸುವ, ಮರಹತ್ತುವ ಮಣ್ಣು ಹೊರುವ, ಕಟ್ಟಿಗೆಗಾಗಿ ಕಾಡಿಗೆ ಹೋಗುವ ಕೆಲಸಗಳನ್ನು ಲೀಲೆಯಂತೆ ಮಾಡುತ್ತಿದ್ದವಳು. ದನ ಕಾಯಲು ಹೋದಾಗ ನಮ್ಮನ್ನೂ ಕರೆದುಕೊಂಡು ಹೋಗುತ್ತಿದ್ದಳು. ನಾವು ಮೇಯುವ ಸಾಧು ಎತ್ತುಗಳ ಮೇಲೆ ಸವಾರಿ ಮಾಡುತ್ತಿದ್ದೆವು. ಚಿಕ್ಕಮ್ಮ ಮಾವು, ಪೇರಲೆ, ಹುಣಿಸೇ ಮರಗಳನ್ನು ಕೋತಿಯಂತೆ ಏರಿ ಹಣ್ಣು ಕಿತ್ತುಕೊಡುತ್ತಿದ್ದಳು. ಈಕೆಯದು ಗಾಂಧರ್ವ ವಿವಾಹ. ಆ ಪ್ರಕರಣ ನಡೆದಾಗ ನಾನು ನಾಲ್ಕನೇ ಇಯತ್ತೆ. ಒಂದು ದಿನ, ಗಲ್ಲಿಯ ಜನರೆಲ್ಲ ಕೆಲಸದ ಮೇಲೆ ತೆರಳಿ, ಮಕ್ಕಳು ಮುದುಕರಷ್ಟೇ ಉಳಿದಿರುವ ನಿರ್ಜನ ಮಧ್ಯಾಹ್ನದಲ್ಲಿ, ಮನೆಯ ಮುಂದಿನ ಬೇವಿನ ಮರದಡಿ ಬಾಚಿಯಿಂದ ನೇಗಿಲನ್ನು ಕೆತ್ತುತ್ತಿದ್ದ ಬಡಗಿ ತಾಜರಣ್ಣನಿಗೆ ಚಿಕ್ಕಮ್ಮ ಮನೆಯೊಳಗೆ ಕರೆದು ಕುಡಿಯಲು ನೀರು ಕೊಟ್ಟಳು. ತಾಜರಣ್ಣ ಒಳಹೋಗುವುದನ್ನೇ ಪತ್ತೇದಾರಿ ಮಾಡುತ್ತಿದ್ದ ಯಾರೊ ಪ್ಯಾರಕ ದುಶ್ಮನ್ ಚಿಲಕವನ್ನು ಹೊರಗಿಂದ ಹಾಕಿಬಿಟ್ಟನು.
ಗುಲ್ಲೆದ್ದಿತು. ತಾಜರಣ್ಣನನ್ನು ಮನೆಯಿಂದ ಹೊರಗೆಳೆದು ಬೇವಿನಮರಕ್ಕೆ ಕಟ್ಟಿದರು. ತಡರಾತ್ರಿ ಪಂಚಾಯಿತಿ ಸೇರಿತು. ಮುಸ್ಲಿಮರ ಕೌಟುಂಬಿಕ ಸಮಸ್ಯೆಗಳಿಗೆ ಪಂಚಾಯಿತಿ ಸೇರಿದಾಗ ಎಲ್ಲ ಜಾತಿಯ ಮುಖಂಡರೂ ಇರುತ್ತಿದ್ದರು. ನ್ಯಾಯಸಭೆಯ ಅಧ್ಯಕ್ಷತೆ ಅಪ್ಪನ ಸೋದರಮಾವ ಪಟೇಲ್ ಮಸ್ತಾನಜ್ಜ ಅವರದು. ಚಿಕ್ಕಮ್ಮ ಒಂದೆಡೆ ನಿಂತು ಅಳುತ್ತಿದ್ದಳು. ‘ಆಕೆಯದು ತಪ್ಪಿಲ್ಲ. ನಾನೇ ನೀರು ಕೇಳಿ ಹೋಗಿದ್ದೆ’ ಎಂಬ ತಾಜರಣ್ಣನ ವಾದವನ್ನು ಸಭೆ ಒಪ್ಪಲಿಲ್ಲ. ಕೊನೆಗೆ ಶಂಕರಣ್ಣನವರು ನಮ್ಮ ಮಾವನಿಗೆ ‘ಏನಪ್ಪಾ ರಶೀದ್, ಕೆಟ್ಟರೂ ಸತ್ತರೂ ಅವಳು ನಿನ್ನ ತಂಗೀನೇ. ಕೊನೇ ಮಾತು ನೀನೇ ಹೇಳಿಬಿಡುೞ ಎಂದರು. ‘ನಾಯಿ ಮುಟ್ಟಿದ ಸ್ವಾರೆ ನಾಯಿ ಕೊಳ್ಳಿಗೆ ಕಟ್ಟೋದು’ ಎಂದು ಮಾವ ಕಹಿಯಾಗಿ ನುಡಿದನು. ಸಭೆ ಬರಖಾಸ್ತಾಯಿತು. ಪ್ರೇಮ ಪ್ರಕರಣದಲ್ಲಿ ಸಿಕ್ಕಿಬಿದ್ದವರಿಗೆ ಶಾದಿಭಾಗ್ಯವಿಲ್ಲ. ರಾತ್ರಿ ನಿಖಾ ಮಾತ್ರ. ಮಾರನೆಯ ಸಂಜೆ ಕೆಲವೇ ಹಿರಿಯರ ಸಮ್ಮುಖದಲ್ಲಿ ಸರಳ ನಿಖಾ ನೆರವೇರಿತು. ನನ್ನ ಜನನೀ-ಜನಕರದೂ, ತಮ್ಮಂದಿರದ್ದೂ ಪ್ರೇಮ ವಿವಾಹವಾಗಿದ್ದು, ಆ ಸುದೀರ್ಘ ಪರಂಪರೆಯಲ್ಲಿ ಶಾಹಿದಾ ಚಿಕ್ಕಮ್ಮನೂ ಸೇರಿಕೊಂಡಳು.ಗಂಡನ ಮನೆಯಲ್ಲಿ ‘ಓಡಿಬಂದವಳು’ ಎಂಬ ಬಿರುದನ್ನು ಹೊತ್ತು, ದೊರಕಿದ ತಾತ್ಸಾರವನ್ನೇ ಹಾಸಿಹೊದ್ದು ಶಾಹಿದಾ ಬದುಕಿದಳು. ಗಂಡ ಕುಡುಕನಾದಾಗ ಶಾನೇ ಪಾಡುಪಟ್ಟಳು. ಹಳ್ಳಿಯಲ್ಲಿದ್ದ ಆಕೆಯ ಮನೆಗೆ ಹೋದರೆ ನಮಗೆ ಬೆಲ್ಲ ಹಾಕಿದ ಮೇಕೆ ಹಾಲನ್ನು ಕಾಸಿ ಕೊಡುತ್ತಿದ್ದಳು. ಕೋಳಿ ಕೊಯ್ಯಿಸಿ ಮುದ್ದೆ ಮಾಡುತ್ತಿದ್ದಳು. ತನ್ನ ಹೋತಕ್ಕೆ ಗಂಡ ಕುಡಿದು ಬಂದಾಗ ಗುದ್ದಲು ಕಲಿಸಿದ್ದಳು. ‘ಅಲ್ಲವ್ವ, ಸತ್ತಗಿತ್ತರೆ ಏನ್ ಮಾಡ್ತೀಯಾ?’ ಎಂದರೆ, ‘ಸತ್ತರೆ ಸಾಯಲಿ ಬಿಡಪ್ಪ ಅತ್ಲಾಗಿ. ನನಗೇನು ಸುಖವಾಗಿ ಇಟ್ಟಿದಾನಾ?’ ಎಂದು ನಗೆಯಾಡುತ್ತಿದ್ದಳು. ಹೃದಯ ದೊಡ್ಡದು. ಮನಸ್ಸು ನಿಷ್ಕಲ್ಮಷ. ಈಗಲೂ ಕಂಡೊಡನೆ ತಾಂಬೂಲದಿಂದ ಕೆಂಪಗಾಗಿರುವ ಹಲ್ಲನ್ನು ತೋರುತ್ತ ಪಿಚ್ಚನೆ ನಗುತ್ತಾಳೆ. ಬಾಳ ಉರಿಯಲ್ಲಿ ನಗೆಹೂವು ಎಂದೂ ಬಾಡಲಿಲ್ಲ. ಅಮ್ಮನ ಕಡೆಯ ಕೊನೇ ಕೊಂಡಿ ಎಂದು ನಮಗೆಲ್ಲ ಮಮಕಾರ. ವಯಸ್ಸು ಎಂಬತ್ತರ ಆಸುಪಾಸು. ತಲೆಗೂದಲು ನರೆತಿಲ್ಲ. ಬಾನು, ‘ಚಿಕ್ಕಮ್ಮಾ, ನಿನ್ನ ಕೂದಲು ನನಗೆ ಕೊಡ್ತೀಯಾ?’ ಎಂದು ಕೇಳಿದರೆ, ‘ತಗೊ ಮಾರಾಯ್ತಿ. ನಿನಗೆ ಬ್ಯಾಡ ಅಂತೀನೇ’ ಎನ್ನುತ್ತಾಳೆ. ಸಾಧ್ಯವಿದ್ದರೆ ಅದನ್ನೂ ಕಿತ್ತು ಕೊಡು ತ್ತಿದ್ದಳೊ ಏನೊ? ಶಾಹಿದಾ ಎಂದರೆ ಹುತಾತ್ಮೆ ಎಂದರ್ಥ. ಇಂಥ ಜನರನ್ನು ಬಾಳು ಹುತಾತ್ಮರಾಗಿಸುತ್ತದೆಯೊ, ಜನರೇ ಬಾಳಿಗೆ ಹುತಾತ್ಮ ಪಟ್ಟ ತೊಡಿಸುವರೊ ನಿರ್ಧರಿಸುವುದು ಕಷ್ಟ.
ಹೊಸ ವರ್ಷದ ಹೊಸ್ತಿಲಲ್ಲಿರುವ ನಾವು 2025ರ ವರ್ಷಪೂರ್ತಿ ಸುಂದರ ಹಾಗೂ ಕಹಿ ಘಟನೆಗಳನ್ನು ಮೆಲುಕು ಹಾಕಿದ್ದು. ಅದೇ ಮಾದರಿಯಲ್ಲಿ ಪ್ರಸಕ್ತ…
* ರೈತರ ಕೈಗೆ ಸಿಗದ ಫಸಲು * ಸ್ಥಳಾಂತರಕ್ಕೆ ಅನುಮತಿ ನೀಡಲು ಅರಣ್ಯ ಇಲಾಖೆಯಿಂದ ಮನವಿ * ವಾನರ ಸೇನೆ…
ಸಾರಿಗೆ ವ್ಯವಸ್ಥೆ ಕಲ್ಪಿಸಲು ಆಗ್ರಹಿಸಿ ಸಿಎಂಗೆ ಪತ್ರ ಬರೆದಿದ್ದ ಗ್ರಾಮದ ವಿದ್ಯಾರ್ಥಿಗಳು ಹನೂರು: ತಾಲ್ಲೂಕಿನ ಪಚ್ಚೆದೊಡ್ಡಿ ಗ್ರಾಮದ ನಿವಾಸಿಗಳಿಗೆ ಸಮರ್ಪಕ…
ಎಂ.ನಾರಾಯಣ್ ತಿ.ನರಸೀಪುರ ತಾಲ್ಲೂಕಿನ ಮೂಗೂರಿನಲ್ಲಿ ಜ.೩ರಂದು ಆಕರ್ಷಕ ಬಂಡಿ ಉತ್ಸವ; ೫ರಂದು ರಥೋತ್ಸವ ತಿ.ನರಸೀಪುರ: ಪುರಾಣ ಪ್ರಸಿದ್ಧ ತಾಲ್ಲೂಕಿನ ಮೂಗೂರಿನ…
ಶಾಸಕರ ಸೂಚನೆಯ ಮೇರೆಗೆ ಕ್ಯಾಂಟೀನ್ ಆರಂಭ; ಬಡವರು, ಕಾರ್ಮಿಕರು, ವಿದ್ಯಾರ್ಥಿಗಳಿಗೆ ಸಂತಸ ಎಚ್.ಡಿ.ಕೋಟೆ: ಕಡಿಮೆ ದರದಲ್ಲಿ ರುಚಿಕರವಾದ ತಿಂಡಿ, ಊಟ…
ವರಹಳ್ಳಿ ಆನಂದ ಸಂಶೋಧನಾ ವಿದ್ಯಾರ್ಥಿ, ಮೈಸೂರು ವಿಶ್ವವಿದ್ಯಾನಿಲಯ ೧ರಿಂದ ೭ನೇ ತರಗತಿವರೆಗೆ ಪ್ರವೇಶಾವಕಾಶ ಇರುವ ಸ.ಹಿ.ಪ್ರಾ. ಶಾಲೆ ಮೈಸೂರು: ನೂರಾರು…