ಎಡಿಟೋರಿಯಲ್

ವ್ಯಾಪಾರಿ ಭಾವನವರ ಅನೇಕಾಂತವಾದ

ನಮ್ಮ ಬಂಧುಗಳಲ್ಲಿ ಜನಪ್ರಿಯತೆಯನ್ನೂ ಅಪಖ್ಯಾತಿಯನ್ನೂ ಸಮಸಮವಾಗಿ ಗಳಿಸಿದವರೆಂದರೆ, ನಮ್ಮ ದೊಡ್ಡಭಾವ. ಅವರದು ಅಡಿಕೆ ಹೊಗೆಸೊಪ್ಪು ವ್ಯಾಪಾರದ ಮನೆತನ. ಅವರ ಅಣ್ಣಂದಿರೆಲ್ಲ ಸಿರಿವಂತ ಮನೆಗಳಲ್ಲಿ ಲಗ್ನವಾದವರು. ಈ ಅಣ್ಣಂದಿರು ಕಿರಿಯರಾದ ಭಾವನವರಿಗೆ ಅವಕಾಶ ಸಿಕ್ಕಾಗಲೆಲ್ಲ ‘ಹೋಗಿಹೋಗಿ ಬಡವರ ಮನೆಯಲ್ಲಿ ಮದುವೆಯಾದೆಯಲ್ಲೊ. ಗುಡಿಸಲು ಮನೆಯವರು. ಪಾಪ ಏನು ತಿನಿಸ್ಯಾರು? ಏನು ಉಡಿಸ್ಯಾರು? ಸಾಕೆನಿಸಿದರೆ ಬಿಟ್ಟುಬಿಡೊ. ಕಾಸಿಗೊಂದು ಕೊಸರಿಗೊಂದು ಹೆಣ್ಣು ಸಿಕ್ತಾವೆ’ ಎಂದು ಛೇಡಿಸುವರು. ಆಗ ಭಾವನವರು ‘ನೀವೇ ಅಲ್ವಣ್ಣ ಸೇರಿಕೊಂಡು ಮದುವೆ ಮಾಡಿದವರು’ ಎಂದು ಉತ್ತರಿಸುವರು. ನಾವು ಅಕ್ಕನನ್ನು ನೋಡಹೋದರೆ, ಇಂತಹ ಮಾತು ಕೇಳಿ, ಅವಳ ಕಣ್ಣೀರು ನಿಟ್ಟುಸಿರು ನೋಡಿ ವಾಪಾಸು ಬರುತ್ತಿದ್ದೆವು. ಅಮ್ಮ ‘ಎಂಥಾ ಭೋದಾಳನಿಗೆ ಮಗಳನ್ನು ಕೊಟ್ಟುಬಿಟ್ಟೆ’ ಎಂದು ಕೊರಗುತ್ತಿದ್ದಳು.

ಭಾವನವರ ಸೋದರರು ಯಾರೂ ಶಾಲೆ ಮೆಟ್ಟಲು ಹತ್ತಿದವರಲ್ಲ. ಆದರೆ ಸಂತೆಗಳಲ್ಲಿ ನಾನಾ ನಮೂನೆಯ ಗಿರಾಕಿಗಳ, ಹಪ್ತಾ ವಸೂಲಿಯ ಪೋಲಿಸರ, ತೂಕಅಳತೆ ಅಧಿಕಾರಿಗಳ ಜತೆ ಏಗಾಡಿ, ಚಾತುರ್ಯ ಪಡೆದ ವರ್ಣರಂಜಿತ ವ್ಯಕ್ತಿಗಳು. ಉತ್ಪ್ರೇಕ್ಷೆ ನಾಟಕೀಯತೆ ಉಪಮೆ ರೂಪಕಗಳಿಂದ ಕೂಡಿದ ಬಣ್ಣದ ಮಾತುಗಳಿಂದ ಗಿರಾಕಿಗಳನ್ನು ಸೆಳೆವ ಮತ್ತು ಅಧಿಕಾರಿಗಳನ್ನು ರಮಿಸುವ ಸಕಲಕಲಾ ವಲ್ಲಭರು. ಅಂಗಡಿಗೆ ಬಂದ ಮುದುಕಿ ಅಡಕೆಯ ಹೋಳನ್ನು ಕಡಿದು ಚೆನ್ನಾಗಿಲ್ಲವೆಂದರೆ, ‘ತಗಂಡೋಗಿ ತಿನ್ನಮ್ಮಾ ತೀರ್ಥಳ್ಳಿ ಅಡಕೆ ಅದು. ಕೊಬ್ಬರಿ ಕೊಬ್ಬರಿ ಇದ್ದಂಗಿದೆ. ಇದನ್ನು ತಿಂದರೆ ನಿನ್ನ ಗಂಡ ಹುಡುಗನ ತರಹ ಕಾಣ್ತಾನೆ’ ಎನ್ನುತ್ತಿದ್ದರು. ಯಾವನಾದರೂ ಹೊಗೆಸೊಪ್ಪನ್ನು ಮೂಸಿ ಚೆನ್ನಾಗಿಲ್ಲವೆಂದು ಮುಂದಕ್ಕೆ ಹೋದರೆ, ‘ಯೊ, ಕರದು ಹೆಣ್ಣು ಕೊಟ್ಟರೆ ಅಳೆಮಯ್ಯನಿಗೆ ಮಲರೋಗವಂತೆ. ಒಳ್ಳೇ ಮಾಲು ತೋರಿಸಿದರೆ ಮುಖ ತಿರಸ್ಕೊಂಡು ಹೋಗ್ತೀಯಾ? ತುಂಡು ತಿಂದು ನೋಡು. ನಶೆಯಿಂದ ಮೂರು ದಿನ ಮ್ಯಾಲಕ್ಕೇಳಲ್ಲ’ ಎನ್ನುತ್ತಿದ್ದರು. ಎಲ್ಲದಕ್ಕೂ ಕುಶಾಲು. ಸುಳ್ಳುಹೇಳಿ ಕೊರಡನ್ನು ಕೊನರಿಸಬಲ್ಲವರು. ಅಪ್ಪ ಕುಲುಮೆಯಲ್ಲಿ ಗಿರಾಕಿಗಳಿಂದ ಅಡ್ವಾನ್ಸು ತೆಗೆದುಕೊಂಡು, ‘ಈಗ ಕೊಡ್ತೀನಿ, ನಾಳೆ ಕೊಟ್ಟೇಬಿಟ್ಟೆ’ ಎಂದು ರೈತರನ್ನು ತಿರುಗಿಸುತ್ತಿದ್ದುಂಟು. ಆದರೆ ಇವರು ಚಾಲಾಕಿಯಲ್ಲಿ ನಮಗಿಂತ ಗಾವುದ ಮುಂದಿದ್ದರು. ಏನನ್ನೇ ಆಗಲಿ, ಕೊಳ್ಳುವ ಮಾರುವ ನೋಟದಲ್ಲಿ ನೋಡುತ್ತಿದ್ದರು. ಒಮ್ಮೆ ನಾನು ಹಿತ್ತಲಲ್ಲಿ ಬೆಳೆಸಿದ ಹೂವನ್ನು ನೋಡಿ, ‘ಇವನ್ನು ಸುಮ್ಮನೆ ಯಾಕೆ ಬೆಳೆಸಿದಿರಿ? ಮೂಲಂಗಿ ಹಾಕಿದ್ದರೆ ಸಂತೆಯಲ್ಲಿ ಮಾರಬಹುದಿತ್ತೊ?’ ಎಂದು ಕೇಳಿದರು. ನಾವು ಹಾಲನ್ನು ನಮ್ಮ ಬೀದಿಯ ಎಳೆಯ ಮಕ್ಕಳ ಮನೆಯವರಿಗೆ ಕೇಳಿದಾಗ ಉಚಿತವಾಗಿ ಕೊಡುತ್ತಿದ್ದುದು ಅವರಿಗೆ ಸೋಜಿಗ. ಅಕ್ಕನಿಗೆ ಈ ವ್ಯಾಪಾರಿಗಳ ಗಡಿಬಿಡಿ, ಅತಿಬುದ್ಧಿವಂತಿಕೆ, ತಟವಟ ಹಿಡಿಸುತ್ತಿರಲಿಲ್ಲ. ನಿರ್ವಾಹವಿಲ್ಲದೆ ಇದ್ದಳು.

ದೈಹಿಕವಾಗಿ ಬಲಿಷ್ಠರಾಗಿದ್ದ ಭಾವನವರನ್ನು ಅವರ ಸೋದರರು, ವ್ಯಾಪಾರ ನಗದು ಪಟ್ಟಣಗಳ ರುಚಿಗಾಣದಂತೆ ಉಪಾಯವಾಗಿ ಬೇಸಾಯಕ್ಕೆ ಹಾಕಿದ್ದರು. ಹಳ್ಳಿವಾಸ, ಹೊಲದುಡಿತ, ಎತ್ತುಪೋಷಣೆಯ ತಿರುಗಣಿಗೆ ಸಿಕ್ಕು ಭಾವನವರು ಜೀತದಾಳಾಗಿ, ವ್ಯವಹಾರ ಜ್ಞಾನಶೂನ್ಯರಾಗಿ ಬೆಳೆದಿದ್ದರು. ಗಂಡನನ್ನು ಕಾಲಾಪಾನಿ ಶಿಕ್ಷೆಯಿಂದ ಬಿಡುಗಡೆ ಮಾಡಲು ಅಕ್ಕ ಹಗಲೂರಾತ್ರಿ ಒಂದು ಮಾಡಿದಳು. ಕೊನೆಗೊಂದು ದಿನ ಆಕೆಯ ಬಹುಗಾಲದ ಕನಸು ನನಸಾಯಿತು. ಭಾವನವರ ಕೂಡುಕುಟುಂಬ ಮನೆ ಹಿಸ್ಸೆಯಾಯಿತು. ಭಾವನವರು ಸಮೀಪದ ಪಟ್ಟಣಕ್ಕೆ ವಲಸೆ ಬಂದರು. ಪಾಲಿಗೆ ಬಂದ ಜಮೀನನ್ನು ಮಾರಿ, ಅದರ ಬಂಡವಾಳದಿಂದ ವ್ಯಾಪಾರ ಶುರುಮಾಡಿದರು. ವಾರದಲ್ಲಿ ನಾಲ್ಕು ಸಂತೆ ತಿರುಗಿ ಲಾಭಗಳಿಸಿದರು. ಇದಾದ ಬಳಿಕ ಸ್ವತಂತ್ರಗೊಂಡ ಅಕ್ಕನ ಮನೆಗೆ ಹೋಗಿಬರಲು ನಮಗೆ ಉಚಿತ ರಹದಾರಿ ಸಿಕ್ಕಿತು. ಕೂಡುಕುಟುಂಬದಲ್ಲಿದ್ದಾಗ ಅವಳಿಗಾಗಿ ಏನಾದರೂ ತಿಂಡಿತಿನಿಸು ಹೂವುಹಣ್ಣು ಕೊಂಡೊಯ್ದರೆ, ಅವಳಿಗೆ ಅದರ ಸಿಪ್ಪೆಯೂ ಸಿಗದಂತೆ ಹರಿದುಹಂಚಿ ಹೋಗುತ್ತಿತ್ತು. ನಾನು ಈಗಲಾದರೂ ಅಕ್ಕನ ಮನೆಗೆ ಹೋದರೆ, ಊರಾಚೆ ಇರುವ ದಟ್ಟವಾದ ಅಡಕೆ ತೋಟ, ಮಲ್ಲೇಶ್ವರದ ಹಳೆಗುಡಿ, ದರ್ಗಾ, ಕೆರೆಯ ನೀರಿನ ಕಾಲುವೆಗಳ ನಡುವೆ ಓಡಾಡಿಕೊಂಡಿರುವೆ.

ಅಕ್ಕನ ಮನೆಯಲ್ಲಿ ದಿನವೂ ಪುಷ್ಕಳ ಭೋಜನ, ತಿರುಗಾಟ, ಚೌಕಾಬಾರ, ಸಿನಿಮಾ ಎಲ್ಲವೂ ಚೆನ್ನ. ಅದರೆ ಬೆಳಗಿನ ನಿದ್ದೆಗೆ ಸಂಚಕಾರ. ಕಾರಣ, ಭಾವನವರು ಬೆಳಗಿನ ಜಾವವೇ ಎದ್ದು, ಗಂಟುಮೂಟೆ ಕಟ್ಟಿ ಸಂತೆಗೆ ತೆರಳುವ ತನಕ ಮನೆಯನ್ನು ರಣರಂಗ ಮಾಡುವರು. ‘‘ಏ ಆ ತಕ್ಕಡಿ ಎಲ್ಲಿಟ್ಟಿದ್ದೀರೊ, ಅರ್ಧಕೇಜಿ ಬಟ್ಟೇ ಸಿಗುತ್ತಿಲ್ಲವಲ್ಲ, ಮೂಟೆ ಕಟ್ಟೋಕೆ ಹುರಿಯಿಟ್ಟಿದ್ದೆ ಇಲ್ಲಿ, ಯಾರು ಕಣ್ಮರೆ ಮಾಡಿದರೊ ಏನೊ? ಅದಕ್ಕೇನಾದರೂ ಕಾಲು ಬಂದವಾ? ಮನೆಯ ಹೆಂಗಸು ಹುಶಾರಿಲ್ಲದಿದ್ದರೆ ಹೊರಗೆ ಹೋಗುವ ಗಂಡಸಾದರೂ ಏನು ಮಾಡಬೇಕು? ವಯಸ್ಸಾದರೂ ದುಡೀತೇನೆ. ಪ್ರಾಯದ ಮಕ್ಕಳು ಸಿನಿಮಾ ನೋಡಿ ಬಂದು ಎಂಟುಗಂಟೆ ತನಕ ಮಲಗ್ತಾರೆ. ಹಿಂಗಾದರೆ ಮನೆ ಉದ್ಧಾರವಾಗುತ್ತಾ? ಮಕ್ಕಳನ್ನು ತಾಯಿ ತಲೆಮೇಲೆ ಕೂರಿಸಿಕೊಂಡರೆ ಇನ್ನೇನಾಗುತ್ತೆ? ಆ ಇವನು ಐನೂರು ಕೊಡಬೇಕಾಗಿತ್ತು, ವಸೂಲಿ ಮಾಡ್ಕೊಂಡು ಬರಲಿಲ್ಲ. ಅದಕ್ಕೂ ನಾನೇ ಹೋಗಬೇಕಾ?’-ಹೀಗೆ ಅರ್ಧಗಂಟೆ ಸಹಸ್ರನಾಮ ಕಾರ್ಯಕ್ರಮ. ಅವರ ಯಾಂತ್ರಿಕ ವಟವಟಕ್ಕೆ ಯಾರೂ ಕಿಮ್ಮತ್ತು ಕೊಡುತ್ತಿರಲಿಲ್ಲ. ಆದರೆ ದುಡಿಮೆಯ ದಣಿವು, ಪ್ರಯಣದ ಬೇಸರ, ಅವರಲ್ಲಿ ಸಿಡಿಸಿಡಿ ಗೊಣಗಾಟವಾಗಿ ಪ್ರಕಟವಾಗುತ್ತಿದ್ದವು. ಕಡೆಗೆ ಮುಖ ತೊಳೆದುಕೊಂಡು, ಸಂತೆಯ ಬಟ್ಟೆ ಧರಿಸಿ, ಅರ್ಧ ಲೀಟರಿನ ಲೋಟದಲ್ಲಿ ಜಾಸ್ತಿ ಹಾಲುಹಾಕಿದ ಟೀಯನ್ನು ಕುಡಿದು, ತಲೆಗೆ ಎಣ್ಣೆಹಾಕಿ ಬಾಚಿಕೊಂಡು, ಲಾರಿಗೆ ಮೂಟೆ ಏರಿಸಿ ಸಂತೆಗೆ ತೆರಳುತ್ತಿದ್ದರು. ದೊಡ್ಡದೊಂದು ಬಿರುಗಾಳಿ ಬೀಸಿ ಹೋದ ಬಳಿಕ ಶಾಂತಸ್ಥಿತಿ ಏರ್ಪಡುತ್ತಿತ್ತು.

ಭಾವನವರು ಸಂಜೆಹೊತ್ತಿಗೆ ಗಂಟುಮೂಟೆ ಖಾಲಿ ಮಾಡಿಕೊಂಡು, ತರಕಾರಿ ಸೊಪ್ಪಿನ ಬ್ಯಾಗನ್ನು ಹೊತ್ತು ದಯಮಾಡಿಸುತ್ತ್ತಿದ್ದರು. ಬಂದ ಕೂಡಲೇ ವ್ಯಾಪಾರದ ದುಡ್ಡನ್ನು ಐದಾರುಸಲ ಮನಸ್ಸಿಗೆ ತೃಪ್ತಿ ಆಗುವಷ್ಟು ಸಲ ಎಣಿಸಿ, ಅವನ್ನು ಮೌಲ್ಯಕ್ಕೆ ಅನುಸಾರವಾಗಿ ವಿಭಜಿಸಿ ರರ್ಬ್ಬ ಬ್ಯಾಂಡ್ ಹಾಕಿ, ಬೀರುವಿನಲ್ಲಿಡಲು ಅಕ್ಕನ ಕೈಗೆ ಕೊಡುವರು-ಬ್ರಿಟಿಶರು ಭಾರತವನ್ನು ನಮಗೆ ಹಸ್ತಾಂತರಿಸಿದ ಹಾಗೆ. ‘ಜೋಪಾನ, ದುಡ್ಡು ಇಟ್ಟಮೇಲೆ ಬೀರುವಿಗೆ ಬೀಗಹಾಕು. ಬೀಗದಕೈ ಎಲ್ಲೆಲ್ಲೊ ಇಟ್ಟು ಕಳದೀಯಾ ಮತ್ತೆ. ಕೆಟ್ಟಕಾಲ ಇದು. ಯಾರನ್ನೂ ನಂಬಂಗಿಲ್ಲ’ ಎಂದು ಎಚ್ಚರವನ್ನೂ ಹೇಳುವರು. ಜಳಕಮಾಡಿ, ಸಂತೆಯ ಮಾಲಿನ್ಯದಿಂದ ಮುಕ್ತರಾಗಿ ಒಗೆದ ಬಟ್ಟೆ ಧರಿಸಿ, ತಂದ ತಿಂಡಿಯ ಪೊಟ್ಟಣಗಳನ್ನು ಒಂದೊಂದಾಗಿ ಬಿಚ್ಚುವರು. ಮಂಡಕ್ಕಿ ಕಾರ, ವಡೆ, ಹಲಸಿನಹಣ್ಣು, ಮಾವಿನಹಣ್ಣು, ಜಿಲೇಬಿ. ಒಮ್ಮೊಮ್ಮೆ ಅರ್ಧಕೇಜಿ ಕೈಮಾ ಕೂಡ ಇರುತ್ತಿತ್ತು. ಎಲ್ಲರೂ ದುಂಡಗೆ ಕೂತು ಟೀಕುಡಿಯುತ್ತ ಸಂತೆ ತಿನಿಸನ್ನು ತಿನ್ನುತ್ತಿದ್ದೆವು. ಬಳಿಕ ಸಂತೆಯಲ್ಲಿ ಘಟಿಸಿದ ತಮಾಶೆಯ ದುರಂತದ ಘಟನೆಗಳ ನಿರೂಪಣ ಕಾರ್ಯಕ್ರಮ. ಅದರಲ್ಲಿ ಗಿರಾಕಿಗಳನ್ನು ಫೂಲ್ ಮಾಡಿದ್ದನ್ನು ಹೇಳುವಾಗ ಮೊಗ ಹೂವಿನಂತೆ ಅರಳುವುದು. ಗಿರಾಕಿಗಳು ಮೋಸಮಾಡಿದ್ದನ್ನೊ ಪಿಕ್ಪಾಕೆಟ್ ಆಗಿದ್ದನ್ನೊ ಹೇಳುವಾಗ ಬಾಡುವುದು.

ಬೇಸಿಗೆ ರಜಕ್ಕೆ ಹೋದಾಗ, ಭಾವನವರು ನಮ್ಮನ್ನೂ ಸಂತೆಗಳಿಗೆ ಕರೆದೊಯ್ಯುತ್ತಿದ್ದುದು ಉಂಟು. ನಮ್ಮನ್ನು ಕಡಿಮೆ ಬೆಲೆಯ ಕಡ್ಡಿಪುಡಿ ರಾಶಿಯ ಮುಂದೆ ಕೂರಿಸಿ, ಪಾವು ಚಟಾಕುಗಳಲ್ಲಿ ಉದುರುದುರಾಗಿ ಹೇಗೆ ತುಂಬಬೇಕೆಂದು ತೋರಿಸುತ್ತಿದ್ದರು. ಹಳೇಪೇಪರನ್ನು ಕತ್ತರಿಸಿ ಪೊಟ್ಟಣವನ್ನು ಕಟ್ಟಿ ನೂಲುಸುತ್ತುವ ಪ್ರಾತ್ಯಕ್ಷಿಕೆ ಕೂಡ ನಡೆಯುತ್ತಿತ್ತು. ಸಾಮಾನ್ಯವಾಗಿ ಹೊಗೆಸೊಪ್ಪು ಕೊಳ್ಳಲಾಗದ ಬಡವರು ಹೊಗೆಕಡ್ಡಿಯ ಪುಡಿಯನ್ನು ಕೊಳ್ಳುತ್ತಿದ್ದರು. ಮುದುಕಿಯರು ಕೊಳ್ಳುವ ಮುಂಚೆ ಮುಷ್ಠಿಯಲ್ಲಿ ಬಾಚಿಕೊಂಡು ಮಂಡಕ್ಕಿಯಂತೆ ಮುಕ್ಕುತ್ತಿದ್ದರು. ಅವರ ಬಾಯಿಹಲ್ಲು ತಾಂಬೂಲಮೆದ್ದು ಕೆಂಚಗಾಗಿರುತ್ತಿತ್ತು.

ಭಾವನವರು ಜೀವನವಿಡೀ ವ್ಯಾಪಾರದ ಚಕ್ರಕ್ಕೆ ಸಿಲುಕಿ ಹೊರಗೆಲ್ಲೂ ತಿರುಗಾಡಲಿಲ್ಲ. ಹೀಗಾಗಿ ಅವರು ವಯಸ್ಸಾಗಿ ಸಂತೆವ್ಯಾಪಾರ ಮಕ್ಕಳಿಗೆ ವಹಿಸಿ ನಿವೃತ್ತರಾದ ಬಳಿಕ, ನಾವು ಅವರನ್ನೂ ಅಕ್ಕನನ್ನೂ ಹೈದರಾಬಾದ್ ಅಜ್ಮೀರ್ ಆಗ್ರಾ ದೆಹಲಿ ಮುಂತಾದ ಕಡೆ ಪ್ರವಾಸ ಕರೆದುಕೊಂಡು ಹೋಗುತ್ತಿದ್ದೆವು. ಅವರೊಬ್ಬ ವಿಶಿಷ್ಟ ಯಾತ್ರಿಕ. ಯಾವುದೇ ಅಪರೂಪದ ವಸ್ತು ತೋರಿಸಿದರೂ, ‘ಏ ನಮ್ಮೂರಲ್ಲೂ ಇಂತಹುದೇ ಐತೆ ಬಿಡ್ರಿ. ಇದರಲ್ಲೇನು ವಿಶೇಷ’ ಎನ್ನುವರು. ಹೈದರಾಬಾದಿನಲ್ಲಿ ಸಾಲಾರಜಂಗ್ ಮ್ಯೂಸಿಯಂ ಅರ್ಧ ನೋಡಿದವರೇ ಹೊರಗೆ ಬಂದರು. ‘ಯಾಕೆ ಭಾವ ಇಷ್ಟವಾಗಲಿಲ್ಲವಾ?’ ಎಂದೆ. ‘ಅಲ್ರೀ, ಅಷ್ಟೊಂದು ಸಾಮಾನನ್ನು ಆ ನಿಜಾಮ ಯಾಕೆ ಜೋಡಿಸಿಕೊಂಡನಂತೆ? ಜೀವನವೆಲ್ಲ ತಂದು ಜೋಡಸೋದರಲ್ಲೇ ಕಳೆದಿರಬೇಕು. ಅಂತಹ ಚೀನಿತಟ್ಟೆ ಶೋಕೇಸಲ್ಲಿದೆ. ತಿಂದಂಗಲ್ಲ ಉಂಡಂಗಲ್ಲ. ವೇಸ್ಟ್’ ಎಂದರು. ತಾಜಮಹಲಿನ ಚರಿತ್ರೆಯಲ್ಲೇ ಅವರಂತೆ ಅದನ್ನು ಅಪಮಾನಿಸಿದವರು ಯಾರೂ ಇರಲಿಕ್ಕಿಲ್ಲ. ಅವರು ತಾಜಮಹಲಿನ ಹುಲ್ಲುಹಾಸಿನ ಮೇಲೆ ಕಾಲುಚಾಚಿ, ‘ನೀವು ನೋಡಿಕೊಂಡು ಬನ್ನಿ. ಇಲ್ಲಿಗೇ ಕಾಣ್ತಿದೆಯಲ್ಲ’ ಎಂದು ಕೂತುಬಿಟ್ಟರು. ನಾವು ವಾಪಾಸು ಬರುವಷ್ಟರಲ್ಲಿ ಒಂದು ಜಪಾನಿ ದಂಪತಿಗಳ ಸ್ನೇಹ ಮಾಡಿದ್ದರು. ಜಪಾನಿ ಮಡದಿ ಪಕ್ಕ ನಿಂತು ಆಕೆಯ ಗಂಡನಿಂದಫೋಟೊ ತೆಗೆಸಿಕೊಳ್ಳುತ್ತಿದ್ದರು. ಅವರಿಗೆ ವಿದೇಶಿಯರನ್ನು ಕಂಡರೆ ಪುಳಕ. ಮಕ್ಕಳು ಬೇಕರಿ ತಿಂಡಿಯನ್ನು ನೋಡುವಂತೆ ಬಿಳಿಯರನ್ನು ದಿಟ್ಟಿಸಿ ನೋಡುವರು. ಹಂಪಿಗೆ ಬಂದಾಗಲೂ ಹೀಗೆ. ‘ಅರರೆ ನೋಡ್ರಿ, ಒಳ್ಳೇ ಅಕ್ಕಿಹಿಟ್ಟಿನ ಗೊಂಬೆ ಇದ್ದಂಗಿದಾರೆ. ಏನ್ ಬಣ್ಣ ಕೊಟ್ಟಿದಾನೆ ದೇವು. ಈ ಅಂಗ್ರೇಜರಿಗೆ ಭಾರಿ ತಲೆ. ಅಷ್ಟಿಲ್ಲದೆ ನಮ್ಮ ದೇಶ ಆಳಿದರಾ? ಅವರ ಕಡೆ ಮಳೆಬೆಳೆ ಹೇಗಿದೆಯೊ? ಅಡಕೆ ಹೊಗೆಸೊಪ್ಪು ಬೆಳೀತಾರ ಕೇಳಿ’ ಎಂದು ನನಗೆ ಪೀಡಿಸುವರು. ನಾನು ಅವರ ಪಾಲಿಗೆ ದುಭಾಷಿ. ಅವರು ಯಾವುದೇ ಪ್ರೇಕ್ಷಣೀಯ ಸ್ಥಳಗಳಿಗೆ ಹೋದರೆ, ಅಲ್ಲಿನ ಮಾರುಕಟ್ಟೆಯನ್ನು ನೋಡುವರು. ವಸ್ತುಗಳ ಬೆಲೆ ತಿಳಿದುಕೊಳ್ಳುವರು. ನಮ್ಮಿಂದ ಹೇಗೊ ತಪ್ಪಿಸಿಕೊಂಡು ಬಿರಿಯಾನಿ ಚಿಕನ್ಫ್ರೈೆ ಹೋಟೆಲುಗಳನ್ನು ಪತ್ತೆ ಮಾಡುವರು. ಸಂಜೆ ಅಲ್ಲಿ ಅವರಿಗೆ ಭೋಜನವಾಗಬೇಕು.

ಅವರನ್ನು ಪ್ರವಾಸಕ್ಕೆ ಕರೆದೊಯ್ಯಲು ಮನೆಯವರಿಗೆ ಬೇಸರ. ನನಗೆ ಮಾತ್ರ ‘ಜಗತ್ತೇ ಮುಗಿಬಿದ್ದು ಬಾಯಿಮೇಲೆ ಬೆರಳಿಟ್ಟು ನೋಡುವ ಸ್ಥಳಗಳನ್ನು ನೋಡುವ ಬೇರೊಂದು ದೃಷ್ಟಿಕೋನವೂ ಇದೆಯಲ್ಲವಾ’ ಎಂಬ ವಿಸ್ಮಯ. ದರ್ಶನಶಾಸ್ತ್ರದಲ್ಲಿ ಬರುವ ಅನೇಕಾಂತವಾದದ ಜ್ಞಾನೋದಯ.

(ಚಿತ್ರಕೃಪೆ- ಗೀತಿ ಆಲ)

andolana

Recent Posts

ಕೆಎಎಸ್‌ ಪರೀಕ್ಷೆ ಮರು ಪರೀಕ್ಷೆ| ಕೆಪಿಎಸ್‌ಸಿ ಮತ್ತೆ ಬೇಜವಾಬ್ದಾರಿತನ ತೋರಿದರೆ ಪರೀಕ್ಷಾರ್ಥಿ ಪರವಾಗಿ ಬಿಜೆಪಿ ಹೋರಾಟ: ವಿಜಯೇಂದ್ರ

ಬೆಂಗಳೂರು: ಕೆಪಿಎಸ್‌ಸಿ ವತಿಯಿಂದ ಇದೇ ಡಿಸೆಂಬರ್‌ 29ಕ್ಕೆ ಕೆಎಎಸ್‌ ಮರು ಪರೀಕ್ಷೆ ನಡೆಯುತ್ತಿದ್ದು, ಮತ್ತೆ ಈ ಪರೀಕ್ಷೆಯಲ್ಲಿ ಮತ್ತೆ ಬೇಜವಾಬ್ದಾರಿತನ…

2 mins ago

ಮೈಸೂರು: ಅಂಬೇಡ್ಕರ್‌, ಬಾಬು ಜಗಜೀವನರಾಂ ಪ್ರತಿಮೆ ಅನಾವರಣ

ಮೈಸೂರು: ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಇಂದು(ಡಿ.23) ಮೈಸೂರಿನ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರ…

29 mins ago

ಸಿಲಿಂಡರ್‌ ಸ್ಫೋಟ : 9 ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಗಂಭೀರ

ಹುಬ್ಬಳ್ಳಿ : ಸಿಲಿಂಡರ್‌ ಸ್ಫೋಟಗೊಂಡ ಪರಿಣಾಮ 9 ಮಂದಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ತಡರಾತ್ರಿ ಹುಬ್ಬಳ್ಳಿಯಲ್ಲಿ…

39 mins ago

ಸಿ.ಟಿ.ರವಿ, ಲಕ್ಷ್ಮೀ ಹೆಬ್ಬಾಳ್ಕರ್‌ ಕೇಸ್‌ ಮುಗಿದ ಅಧ್ಯಾಯ: ಬಸವರಾಜ ಹೊರಟ್ಟಿ

ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಬಗ್ಗೆ ಬಿಜೆಪಿ ವಿಧಾನ ಪರಿಷತ್‌ ಶಾಸಕ ಸಿ.ಟಿ.ರವಿ ಅವರು ಆಕ್ಷೇಪಾರ್ಹ ನೀಡಿರುವ ಹೇಳಿಕೆಯ ಕೇಸ್‌…

56 mins ago

ಶಿವರಾಜಕುಮಾರ್ ಚಿತ್ರಕ್ಕೆ ತಮಿಳು ನಿರ್ದೇಶಕ; ಮುಂದಿನ ವರ್ಷ ‘#MB’ ಪ್ರಾರಂಭ

ಶಿವರಾಜಕುಮಾರ್‍ ಶಸ್ತ್ರಚಿಕಿತ್ಸೆಗೆಂದು ಇತ್ತೀಚೆಗೆ ಅಮೇರಿಕಾಗೆ ಪ್ರಯಾಣ ಬೆಳಸಿದ್ದಾರೆ. ಜನವರಿ 26ರಂದು ಅವರು ಚಿಕಿತ್ಸೆ ಮುಗಿಸಿ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ. ಬೆಂಗಳೂರಿಗೆ ವಾಪಸ್ಸಾಗಿ…

59 mins ago

ಮತ್ತೊಂದು ಥ್ರಿಲ್ಲರ್ ಚಿತ್ರದಲ್ಲಿ ವಿಜಯ್‍ ರಾಘವೇಂದ್ರ; ‘FIR 6 to 6’ ಟ್ರೇಲರ್‍ ಬಿಡುಗಡೆ

ವಿಜಯ್‍ ರಾಘವೇಂದ್ರ ಅಭಿನಯದ ಮೂರು ಚಿತ್ರಗಳು ಈ ವರ್ಷ ಬಿಡುಗಡೆಯಾಗಿವೆ. ವಿಶೇಷವೆಂದರೆ, ‘ಕೇಸ್ ಆಫ್‍ ಕೊಂಡಾನ’, ‘ಜಾಗ್‍ 101’ ಮತ್ತು…

1 hour ago