ಅಮ್ಮನ ತಂಗಿಯರು ಮೂವರು. ಇವರಲ್ಲಿ ಒಬ್ಬರು ಬೇಗನೆ ತೀರಿದರು. ಉಳಿದವರಿಬ್ಬರು: ಫಾತಿಮಾ-ಶಾಹಿದಾ. ಇವರು ವಯಸ್ಸಿನಲ್ಲಿ ನಮ್ಮ ದೊಡ್ಡಕ್ಕನಿಗೆ ಆಸುಪಾಸಿನವರಾಗಿದ್ದರಿಂದ, ನಾವು ಅಕ್ಕ ಎಂದೇ ಕರೆಯುವುದು. ಫಾತಿಮಾ ಯೌವನದಲ್ಲಿ ತುಸು ಸುಂದರಿಯಾಗಿದ್ದವಳು. ತಲೆಯನ್ನು ನೀಟಾಗಿ ಬಾಚಿ ಹಿತ್ತಲಲ್ಲಿ ಬಿಟ್ಟ ಗುಲಾಬಿ ಮುಡಿದು ಚಿತ್ರತಾರೆಯಂತೆ ಸೀರೆಯುಟ್ಟು ಕೂಲಿಗೆ ಹೋಗುತ್ತಿದ್ದಳು. ಆಕೆಯನ್ನು ವರಿಸಲು ಊರಲ್ಲಿ ಹಲವು ತರುಣರು ಸಿದ್ಧರಿದ್ದರು. ಆ ಪಟ್ಟಿಯಲ್ಲಿ ಆಕೆಯ ಅಕ್ಕನ ಗಂಡನೂ ಸೇರಿದ್ದನು. ಸದರಿ ಭಾವ ಮಹಾಶಯನು, ಆಕೆಯನ್ನು ನೋಡಲು ಯಾವುದೇ ಗಂಡು ಬಂದು ಹೋದರೆ, ಆಕೆಯನ್ನು ನಾನು ಪ್ರೀತಿಸುತ್ತಿದ್ದೆನೆಂದೂ ನೀವು ಬರುವ ಆವಶ್ಯಕತೆಯಿಲ್ಲವೆಂದೂ ಮೂಗರ್ಜಿ ಬರೆದು ಮದುವೆ ತಪ್ಪಿಸುತ್ತಿದ್ದನು. ಕಡೆಗೆ ಅವರ ತಡೆಯಾಜ್ಞೆಗಳನ್ನೆಲ್ಲ ನಿವಾರಿಸಿ ನಮ್ಮ ಸೋದರಮಾವನು ತಂಗಿಯ ಮದುವೆಯನ್ನು ಮಾಡಿ ಮುಗಿಸಿದನು. ಆಕೆಯನ್ನು ಕೈಹಿಡಿದ ಪುರುಷನು ಗಾತ್ರದಲ್ಲಿ ಅವಳಿಗಿಂತ ಗಿಡ್ಡಕ್ಕಿದ್ದನು. ಹೀಗಾಗಿ ಫಾತಿಮಾ ಚಿಕ್ಕಮ್ಮಳ ಮಕ್ಕಳೆಲ್ಲ ಪಾವು ಚಟಾಕುಗಳಾದವು. ಅವರಲ್ಲೊಬ್ಬ ಈಗ ಮರದ ಕುಶಲಕಲೆಯಲ್ಲಿ ಹೆಸರಾಗಿದ್ದಾನೆ.
ನಾವು ‘ಏಕೆ ಚಿಕ್ಕಮ್ಮ ನಿನಗಿಂತ ಕುಳ್ಳಗಿರುವವರಿಗೆ ಮದುವೆಯಾದೆ? ಎಂದು ಛೇಡಿಸುತ್ತಿದ್ದೆವು. ಆಕೆ ‘ನಮ್ಮಾತು ಯಾರು ಕೇಳ್ತಾರಪ್ಪ? ದೊಡ್ಡವರೆಲ್ಲ ಸೇರಿ ಕಟ್ಟಿದರು. ಈಯಪ್ಪ ನನ್ನ ಹಣೇಲಿ ಬರೆದಿತ್ತು’ ಎಂದು ನಗುವಳು. ಒಮ್ಮೆ ಆಕೆಯ ಗಂಡನಿಗೆ ತಮ್ಮ ಷಡ್ಡಕ ಮಹಾಶಯನು ವಿವಾಹಪೂರ್ವದಲ್ಲಿ ಬರೆದ ಪ್ರೇಮಪತ್ರಗಳ ಕಟ್ಟು ಕೈಗೆಸಿಕ್ಕಿತು. ಆತ ಯಾವ ಶಿಸ್ತುಕ್ರಮವನ್ನೂ ಕೈಗೊಳ್ಳದೆ ಇದೆಲ್ಲ ಇದ್ದದ್ದೇ ಎಂದೂ, ಇಷ್ಟು ಪೈಪೋಟಿಯಿದ್ದ ಸುಂದರಿ ತನ್ನವಳಾದಳೆಂದೂ ಮುಂದೆ ಸಾಗಿದರು.
ಬದುಕು ಊಹಾತೀತ ಕಠೋರ ವಾಸ್ತವದ ಖಡ್ಗ ನುಂಗುತ್ತದೆ. ಬಂಡೆ ಅಡ್ಡ ಬಂದರೆ ದಬ್ಬಿಯೊ ಬದಿಯಲ್ಲಿ ದಾರಿಮಾಡಿಕೊಂಡೊ ಹೊಳೆ ಮುನ್ನಡೆಯುತ್ತದೆ. ತೊಡಕನ್ನು ತೊಡವನ್ನಾಗಿ ಧರಿಸುತ್ತದೆ.
ಫಾತಿಮಾ ಚಿಕ್ಕಮ್ಮನ ಮನೆಯೊಂದು ಪ್ರಯೋಗಶಾಲೆ. ಆಕೆ ಈಚಲುಗರಿಯಿಂದ ಸುಂದರವಾದ ಚಾಪೆ ಹೆಣೆಯುತ್ತಿದ್ದಳು.
ಬರ್ನಾದ ಬಲ್ಬುಗಳಿಂದ ಸೀಮೆಯೆಣ್ಣೆ ಬುಡ್ಡಿ ತಯಾರಿಸುತ್ತಿದ್ದಳು. ಸೃಜನಪ್ರತಿಭೆಯಿದ್ದ ಅವಳು ಶಾಲೆ ಕಲಿತಿದ್ದರೆ ಏನೇನಾಗುತ್ತಿದ್ದಳೊ?
ಅವಳ ಗಂಡ ದಿನವೂ ಕೂಲಿ ಹುಡುಕುತ್ತ ಬಗೆಬಗೆಯ ಕಸುಬುಗಳನ್ನು ಅರಿತಿದ್ದರು.
ಮಾವಿನಕಾಯಿ ಇಳಿಸುವುದು, ಕೋಳಿಸಾಕಣೆ, ಗಾರೆಕೆಲಸ, ಮನೆಗಳಿಗೆ ಪೈಂಟಿಂಗ್, ಅಡಕೆ-ತೆಂಗು ಕಟಾವು, ತೋಟ ಕಾವಲು, ಹಮಾಲಿ-ದುಡಿಮೆಯ ಶತಾವತಾರ. ಬದುಕಿನ ಅಭದ್ರತೆಯೂ ಕುಶಲತೆಯ ಬಹುತ್ವವನ್ನು ರೂಪಿಸುತ್ತದೆ. ಚಿಕ್ಕಪ್ಪನವರು ದೈಹಿಕ ಕೆಲಸ ಮಾಡಲಾಗದ ವಯಸ್ಸು ಮುಟ್ಟಿದಾಗ, ಹಳ್ಳಿಯೊಂದರಲ್ಲಿ ಮಸೀದಿಯನ್ನು ಸ್ವಚ್ಛವಾಗಿಟ್ಟುಕೊಂಡು ಕಾಲಕಾಲಕ್ಕೆ ಅಜಾನ್ ಕೂಗುವ ಮೌಜುನ್ ಆಗಿ ನೇಮಕಗೊಂಡರು. ಮುಂದೆ ಖಬರಸ್ಥಾನದ ಕಾವಲುಗಾರ ಕೆಲಸಕ್ಕೆ ಬಡ್ತಿ ಸಿಕ್ಕಿತು. ನಮ್ಮೂರ ಖಬರಸ್ಥಾನ ಬಹು ವಿಶಾಲ.
ಚಿಕ್ಕಪ್ಪ ಅಲ್ಲಿದ್ದ ಖಾಲಿ ಜಾಗೆಯಲ್ಲಿ ಬಗೆಬಗೆಯ ತರಕಾರಿ ಬೆಳೆದರು. ಶತಮಾನಗಳಿಂದ ಉಳದ ನೆಲ. ಟಮಟೆ, ಪಪಾಯಿ, ಮುಳುಗಾಯಿ, ಸ್ವಾರೆಕಾಯಿ, ಎಲ್ಲವೂ ಊಹಾತೀತ ಗಾತ್ರದಲ್ಲಿ ಬಿಟ್ಟವು. ‘ಇದೇನು ಚಿಕ್ಕಪ್ಪ ಇವು ಹಿಂಗೆ ಬೆಳೆದಿವೆ’ ಎಂದರೆ, ‘ಬಚ್ಚೆ, ಏನು ಕಡಿಮೆ ಶವ ಹೂತಿದಾರಾ ಇಲ್ಲಿ? ಅವುಗಳ ಪವರ್ ಇದು’ ಎನ್ನುತ್ತಿದ್ದರು. ಚಿಕ್ಕಪ್ಪನಿಗೆ ಜೀವನದಲ್ಲಿ ರೂಮಿಟೋಪಿ ಧರಿಸುವ ಆಸೆಯಿತ್ತು. ‘ಬಚ್ಚೆ, ದೇಶವೆಲ್ಲ ತಿರುಗ್ತೀಯ. ನನಗೊಂದು ರೂಮಿ ತಂದುಕೊಡಪ್ಪ’ ಎಂದರು.
ದೆಹಲಿಗೆ ಹೋದಾಗ, ಚಾಂದನಿ ಚೌಕದಲ್ಲಿ ಹುಡುಕಾಡಿ ಕುದುರೆಬಾಲದಂತೆ ಕಪ್ಪನೆಯ ಕುಚ್ಚು ಇಳಿಬಿದ್ದ ರಕ್ತಗೆಂಪಿನ ಟರ್ಕಿಟೋಪಿ ತಂದುಕೊಟ್ಟೆ. ಅದನ್ನುಟ್ಟು ಸಂಭ್ರಮದಿಂದ ಓಡಾಡಿದರು. ಅವರು ತಿರುಗಾಡುವಾಗ ಕುಚ್ಚು ಅತ್ತಿಂದಿತ್ತ ಚಿಮ್ಮುತ್ತಿತ್ತು. ಬಡತನದ ದಿಸೆಯಿಂದ ಚಿಕ್ಕಪ್ಪನಿಗೆ ಸಮಾಜದಲ್ಲಿ ಸಣ್ಣಪುಟ್ಟ ಅವಮಾನಗಳಾಗುತ್ತಿದ್ದವು, ಸಹಿಸುತ್ತಿದ್ದರು. ಯಾರದಾದರೂ ಬಂಧುಗಳ ಮನೆಯಲ್ಲಿ ಹಬ್ಬ ಮದುವೆ ಕಾರ್ಯಗಳಿದ್ದರೆ, ತಾವಾಗೇ ನುಗ್ಗಿ ಒಲೆಹಚ್ಚುವುದು, ಅಡುಗೆ ಮಾಡುವುದು, ಚಪ್ಪರ ಹಾಕುವುದು ಮಾಡುತ್ತಿದ್ದರು. ಕೊಟ್ಟಿದ್ದನ್ನು ಸಂಭಾವನೆಯಾಗಿ ಸ್ವೀಕರಿಸುತ್ತಿದ್ದರು. ಸದಾ ಏನಾದರೊಂದು ತಮಾಷೆ ಮಾಡುತ್ತಿದ್ದರು.
ಬಡತನದ ಬವಣೆ ನೀಗಲೆಂದೇ ಹಾಸ್ಯಪ್ರಜ್ಞೆ ಹುಟ್ಟುತ್ತದೆಯೊ? ಮಹತ್ವಾಕಾಂಕ್ಷೆಯಿಲ್ಲದೆ ಬಾಳು ಹೇಗೆ ಬಂತೊ ಹಾಗೆ ಸ್ವೀಕರಿಸಿ ಬದುಕುವರು. ಚಿಕ್ಕಪ್ಪ ಉಸಿರಿರುವ ತನಕ ದುಡಿದು, ತಾವು ಕಾಯುತ್ತಿದ್ದ ಖಬರಸ್ಥಾನದಲ್ಲೇ ದಫನಾದರು.
ನಮ್ಮ ಕಡೆಯ ಕೂಲಿಕಾರರು ಚಿಕ್ಕಮಗಳೂರು ದಿಕ್ಕಿನಲ್ಲಿದ್ದ ಕಾಫಿ ಎಸ್ಟೇಟುಗಳಿಗೆ ಹೋಗಿ ವರ್ಷಗಟ್ಟಲೆ ಇರುತ್ತಿದ್ದರು. ಒಮ್ಮೆ ಚಿಕ್ಕಮ್ಮನ ಕುಟುಂಬ ಕಾಫಿತೋಟದಲ್ಲಿರುವಾಗ ಹೋಗಿದ್ದೆ. ಸುತ್ತಮುತ್ತ
ಕಾಡು. ಕಾಡುಪ್ರಾಣಿಗಳು. ಜಿರ್ ಎಂದು ಹಿಡಿದ ಮಳೆ. ಹೊರಗೆ ಹೋದರೆ ಇಂಬಳ.
ನಿಸರ್ಗದ ಚೆಲುವು ನಾಕದಿಂದ ನೆಲಕ್ಕೆ ಕಳಚಿ ಬಿದ್ದಿದ್ದ ಆ ಪರಿಸರದಲ್ಲಿ ಹೊಗೆಹಿಡಿದು ಗೋಡೆ ಮಾಡೆಲ್ಲ ಕಪ್ಪುಹಿಡಿದಿದ್ದ ಬೆಂಕಿಪೊಟ್ಟಣದಂತಹ ಲೈನ್‌ಮನೆಗಳಲ್ಲಿ ಸಂಸಾರ ನಡೆಸುತ್ತಿದ್ದಳು. ಮಲೇರಿಯಾದಿಂದ ಮೈಹಳದಿಯಾಗಿತ್ತು. ಮಕ್ಕಳು ಗೊಣ್ಣೆಸುರುಕವಾಗಿದ್ದವು. ಚಿಕ್ಕಪ್ಪ ಕಾಫಿಗಿಡದ ರೆಕ್ಕೆ ಸವರಿ ಮರಗಸಿ ಮಾಡುತ್ತಿದ್ದರು. ಚಿಕ್ಕಮ್ಮ ಕೋಳಿ ಸಾಕಿದ್ದಳು. ಅವಳ ಕೋಳಿಗಳು ಕಾಡುಕೋಳಿಗಳ ಜತೆ ಸ್ನೇಹಬೆಳೆಸಿ, ಸಾಕಿದ ಹೆಣ್ಣಾನೆ ಕಾಡಿನ ಗಂಡುಸಲಗವನ್ನು ಖೆಡ್ಡಾಕ್ಕೆ ತರುವಂತೆ, ಮನೆಗೆ ಕರೆತರುತ್ತಿದ್ದವು.
ಚಿಕ್ಕಮ್ಮ ಗೂಡಿನ ಬಾಗಿಲು ತಟ್ಟನೆ ಮುಚ್ಚಿಕೊಳ್ಳುವಂತೆ ಹುರಿ ಎಳೆದು, ಕಾಡುಕೋಳಿ ಹಿಡಿಯುತ್ತಿದ್ದಳು. ಅಂತರ್ಜಾತಿ ಪ್ರೇಮಕ್ಕೆ ಗುರಿಯಾದ ಕಾಡುಹೇಟೆ ಪಲ್ಯವಾಗಿ ರೂಪಾಂತರ ಪಡೆಯುತ್ತಿತ್ತು.
ಒಂದು ದಿನ ತಮ್ಮ ಕಲೀಮ ಕರೆ ಮಾಡಿ ‘ಅಣ್ಣಾ ಫಾತಿಮಾ ಚಿಕ್ಕಮ್ಮ ಮೆತ್ತಗಾಗಿದಾಳೆ. ಗುರುತು ಹಿಡಿದು ತುಟಿ ಅರಳಿಸುತ್ತಾಳೆ. ಮಾತಾಡಲು ಶಕ್ತಿಯಿಲ್ಲ’ ಎಂದ. ಎರಡು ದಿನಗಳ ಬಳಿಕ ಆಕೆ ಸತ್ತ ವಾರ್ತೆ ಬಂತು. ಬಿಪಿ ಶುಗರ್ ಮಾತ್ರೆ ತಂದುಕೊಡುತ್ತಿದ್ದ ಮಗ, ‘ದುಡಿದದ್ದೆಲ್ಲ ನಿನ್ನ ಔಷಧಿಗೆ ಹಾಕಬೇಕು’ ಎಂದನಂತೆ. ಮಾತ್ರೆ ನುಂಗದೆ ತಲೆದಿಂಬಿನಡಿ ಬಚ್ಚಿಟ್ಟು, ಕಾಯಿಲೆ ಉಲ್ಬಣಗೊಳಿಸಿಕೊಂಡು ಪ್ರಾಣಬಿಟ್ಟಳು. ಇಚ್ಛಾಮರಣಿ. ಅಸಹಾಯಕತೆಯಲ್ಲಿ ಹುಟ್ಟುವ ಸ್ವಾಭಿಮಾನ ಮೃತ್ಯುವನ್ನೂ ಹೆದರಿಸುತ್ತದೆಯೇ?
(ಮುಂದುವರಿಯುವುದು…)
ಭಾರತೀನಗರ : ಇಲ್ಲಿಗೆ ಸಮೀಪದ ಕೆ.ಶೆಟ್ಟಹಳ್ಳಿ ಗ್ರಾಮದಲ್ಲಿ ಪೊಲೀಸರ ಭದ್ರತೆಯೊಂದಿಗೆ ಗ್ರಾಮದ ಪರಿಶಿಷ್ಟ ಜಾನಾಂಗದ ಮಹಿಳೆಯರು, ಪುರುಷರು ದೇವಾಲಯಗಳಿಗೆ ಪ್ರವೇಶಿಸಿದರು.…
ಮೈಸೂರು : ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿರುವ ಸಂಬಂಧ ಯಶಸ್ವಿ ಕಾರ್ಯಾಚರಣೆ ನಡೆಸಿದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಚಾವಿಸನಿನಿ)…
ಬೆಂಗಳೂರು : ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯ ನಡೆಸುವ ಕುರಿತಂತೆ ಪರಿಶೀಲಿಸಲು ಸಮಿತಿ ರಚಿಸಲಾಗಿದೆ ಎಂದು ಗೃಹ ಸಚಿವರಾದ…
ಚಾಮರಾಜನಗರ : ಜಿಲ್ಲೆಯ ನಂಜೇದೇವನಪುರ ಗ್ರಾಮದ ಕಲ್ಲು ಕ್ವಾರಿಯೊಂದರಲ್ಲಿ 5 ಹುಲಿಗಳ ಇರುವಿಕೆ ಡ್ರೋಣ್‌ನಲ್ಲಿ ಸೆರೆಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿ…
ಮೈಸೂರು : ಬೆಳಗಾವಿಯಲ್ಲಿ ನಡೆದ ಚಳಿಗಾಲದ ವಿಧಾನಮಂಡಲ ಅಧಿವೇಶನದಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಸೋಮವಾರ ನಗರದಲ್ಲಿ…
ಬೆಂಗಳೂರು : ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ರಾಜ್ಯದ ಎಲ್ಲ ಜಿಲ್ಲಾಸ್ಪತ್ರೆಗಳನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಾಗಿ ಮೇಲ್ದರ್ಜೆಗೇರಿಸಲು…