ಅಳಿದರೂ ಜನರ ಸ್ಮೃತಿಯಲ್ಲಿ ಉಳಿವವರು ಯಾರು? ಮಾಮೂಲಿ ಬದುಕನ್ನು ನಡೆಸದವರು, ಯಾರೂ ತುಳಿಯದ ಹಾದಿಯಲ್ಲಿ ನಡೆದವರು, ವರ್ಣರಂಜಿತ ಬಾಳ್ವೆ ಮಾಡಿ ಸೋಲನ್ನು ಕಂಡವರು, ನಮ್ಮ ಬಾಳುವೆಯನ್ನೂ ತಮ್ಮ ಸೃಜನಶೀಲತೆ ರಸಿಕತೆಯಿಂದ ಚೆಲುವಾಗಿಸಿದವರು. ಇವರು ವಿಶ್ವವಿಖ್ಯಾತರೇ ಆಗಬೇಕಿಲ್ಲ. ನಮ್ಮ ಪರಿಸರದಲ್ಲೇ ಬೇಲಿ ಹೂಗಳಂತೆ ಇರುತ್ತಾರೆ. ಅವರಲ್ಲಿ ನಾನು ಬಾಲ್ಯದಲ್ಲಿ ಕಂಡ ಸನ್ನಿಪೀರಾ, ಪೋಲಿ ಅಜೀಜ್, ಜೇನುಪುಟ್ಟ ಮುಂತಾದವರು ಸೇರುತ್ತಾರೆ.
ಕುಳ್ಳಗೆ ತೆಳ್ಳಗೆ ಇದ್ದ ಸನ್ನಿಪೀರಾ, ಮುಖಕ್ಷೌರ ಮಾಡದವನು. ಊರೊಳಗಿದ್ದೂ ಊರಿನವನಾಗದವನು. ನಿರಂಕುಶಮತಿಯಾಗಿ ಯಾರಿಗೂ ಸೊಪ್ಪುಹಾಕದೆ ತನ್ನಿಚ್ಛೆಯ ಬದುಕನ್ನು ನಡೆಸಿದ ‘ಸಂಸ್ಕಾರ’ದ ನಾರಾಣಪ್ಪ. ಮುಖಕ್ಕೆ ಹೊಡೆದಂತೆ ಏನಾದರೂ ಹೇಳಿಬಿಡುತ್ತಾನೆಂದು ಅವನ ಬಾಯಿಗೆ ಬೀಳಲು ಮಂದಿ ಅಳುಕುತ್ತಿದ್ದರು. ಅವನ ವಿಕ್ಷಿಪ್ತತೆಗೆ ಸನ್ನಿ ಎಂದು ಬಿರುದನ್ನು ಕೊಟ್ಟಿದ್ದರು. ಮನೆಯಲ್ಲಿ ಯಾರಾದರೂ ವಿಚಿತ್ರವಾಗಿ ಆಡಿದರೆ, ‘ಸನ್ನಿಪೀರನಂಗೆ ಆಡ್ತೀಯಲ್ಲೊ’ ‘ನಿನಗೇನು ಸನ್ನಿಪೀರಾ ಮೈಮೇಲೆ ಬಂದಿದಾನಾ?’ ಎನ್ನುತ್ತಿದ್ದರು. ಊರಿನ್ನೂ ಮಲಗಿರುವಾಗಲೇ ಎದ್ದು ಮೂರು ಮೈಲಿ ದೂರದ ತರೀಕೆರೆಗೆ ಹೋಗುವುದು, ದಿನವಿಡೀ ಸಾಮಿಲ್ಲಿನಲ್ಲಿ ಮರಕೊಯ್ಯುವುದು, ಕತ್ತಾಲದಾರಿಯಲ್ಲಿ ನಡೆದು ಊರು ಮಲಗಿದ ಬಳಿಕ ಮನೆಗೆ ಬರುವುದು ಅವನ ದಿನಚರಿ. ಅಡಕೆ ಬಾಳೆ ತೆಂಗಿನ ತೋಟಗಳಿಂದಲೂ ಆಳೆತ್ತರದ ಮೆದೆಹುಲ್ಲಿನಿಂದಲೂ ದಡದ ಪೊದೆಗಳಿಂದಲೂ ಹಾಡಹಗಲೇ ಕತ್ತಲು ಆವರಿಸಿರುವ ಚಿಕ್ಕಹಳ್ಳವನ್ನು ಆತ ಒಬ್ಬನೇ ದಾಟುತ್ತಿದ್ದುದು ನಮಗೆಲ್ಲ ಸೋಜಿಗ. ಹಳ್ಳದ ಪಕ್ಕವಿದ್ದ ಮಸಣವು, ಹಳೆಯ ಚಟ್ಟಗಳಿಂದಲೂ, ಗಾಳಿಮೆಟ್ಟಿದವರನ್ನು ಕೂರಿಸಿ ಗಾಳಿಬಿಡಿಸಿದ ಬಳಿಕ ಎಸೆದ ಹಳೆಬಟ್ಟೆ ನಿಂಬೆಹಣ್ಣು ಕುಂಕುಮದನ್ನ, ಒಡೆದ ಮಡಕೆ, ಸೂಚಿಚುಚ್ಚಿದ ಮಣ್ಣಬೊಂಬೆಗಳಿಂದಲೂ ಶೋಭಿತವಾಗಿತ್ತು. ವಷ್ಟುಮರ ಹೆಣ್ಣುಮಗಳೊಬ್ಬಳು ಅಕಾಲಿಕವಾಗಿ ಸತ್ತು ದೆವ್ವವಾಗಿ ತಿರುಗುತ್ತ, ಹೋಗುಬರುವವರಿಗೆಲ್ಲ ಕರೆಯುತ್ತಾಳೆಂದು ಪ್ರತೀತಿಯಿತ್ತು. ನನ್ನ ಸೋದರಮಾವನ ಪ್ರಕಾರ, ಆತ ಹಳ್ಳವಿಳಿದು ದಿಬ್ಬ ಹತ್ತುವಾಗೆಲ್ಲ ಸಣ್ಣಗಾತ್ರ ದೆವ್ವವೊಂದು ಎದುರು ಬಂದು ಹಲ್ಲು ಕಿರಿಯುತ್ತಿತ್ತಂತೆ; ಎಯ್ ಥೂ ಎಂದು ಮಾವನವರು ಉಗಿದು ಚಪ್ಪಲಿ ಕೈಗೆ ತೆಗೆದುಕೊಂಡೊಡನೆ, ಪೊದೆಯೊಳಗೆ ಅಡಗುತ್ತಿತ್ತಂತೆ. ನಾವು ತರೀಕೆರೆಗೆ ಹೋಗುಬರುವ ಅವಸರ ಬಿದ್ದಾಗ, ದೂರದಲ್ಲೇ ಕಾದುಕುಳಿತು, ಯಾರಾದರೂ ಹಾದಿಹೋಕರು ಬಂದಾಗ ಅವರ ಜತೆ ಹಳ್ಳ ದಾಟುತ್ತಿದ್ದೆವು.
ಒಬ್ಬರೇ ಹೋಗುವಾಗ ಜೀವ ಕೈಯಲ್ಲಿ ಹಿಡಿದು, ಅರಬ್ಬೀ ಮಂತ್ರಗಳನ್ನು ಪಠಿಸುತ್ತಿತ್ತ, ಲಾಂಗ್ಜಂಪ್ ಮಾಡುತ್ತ ಹಳ್ಳವಿಳಿದು ಹತ್ತುತ್ತಿದ್ದೆವು. ಹಳ್ಳದೊಳಗೆ ಬೇಸಗೆಯಲ್ಲಿ ಅರ್ಧಅಡಿ ನೀರು ಸದಾ ಹರಿಯುತ್ತಿತ್ತು. ಒಮ್ಮೆ ನನಗೆ ಹಳ್ಳದಾಟಲು ಯಾರೂ ಜತೆಗೆ ಸಿಗಲಿಲ್ಲ. ಆಗಿದ್ದಾಗಲಿ ಎಂದು ಹಳ್ಳವನ್ನಿಳಿದೆ. ಬಿಳಿಬಟ್ಟೆ ಧರಿಸಿದ ಯಾರೊ ಕುಳ್ಳಗಿನ ವ್ಯಕ್ತಿ ಕೀಕೀ ಎಂದು ವಿಕಾರವಾಗಿ ಕೂಗುತ್ತ ಪೊದೆಯೊಳಗೆ ಹೊಕ್ಕಂತಾಯಿತು. ಮೀನಿಗಾಗಿ ದಡದಲ್ಲಿ ತಪಗೈಯುತ್ತಿದ್ದ ಬಕಪಕ್ಷಿಯು ರೆಕ್ಕೆಗಳನ್ನು ಅಗಲವಾಗಿ ಬೀಸುತ್ತ ಅನಿರೀಕ್ಷಿತವಾಗಿ ನುಗ್ಗಿದ ನನ್ನ ರಭಸಕ್ಕೆ ಬೆದರಿ ಓಡಿರಬೇಕು. ರಕ್ತ ಹೆಪ್ಪುಗಟ್ಟಿತು. ವಾರ ಜ್ವರಬಂದು ಸನ್ನಿಹಿಡಿದಂತೆ ಆಡುತ್ತಿದ್ದೆನಂತೆ.
ಇಂತಹ ಕುಖ್ಯಾತ ಚಿಕ್ಕಹಳ್ಳವನ್ನು ಸೋದರಮಾವನೂ ಸನ್ನಿಪೀರನೂ ಏಕಾಂಗಿಯಾಗಿ ದಾಟುವುದು ಕಂಡು, ಜಗತ್ತಿನ ಶಕ್ತಿಶಾಲಿಗಳು ಇವರು ಅನಿಸುತ್ತಿತ್ತು. ಸನ್ನಿಪೀರ ಹಳೆಯ ಸೈಕಲ್ಟೈರನ್ನು ದೊಂದಿಯನ್ನಾಗಿ ಮಾಡಿಕೊಂಡು ಕತ್ತಲೆಯಲ್ಲಿ ಬರುತ್ತಿದ್ದನು. ಮನೆಯಲ್ಲಿ ಹಣ್ಣಾದ ತಾಯಿ. ಏಕಮಾತ್ರ ಪುತ್ರಿ ಮುನೀರಾ. ಹೆಂಡತಿ ಇವನ ಕಿರಿಕಿರಿ ತಾಳಲಾಗದೆ ಬಿಟ್ಟುಹೋಗಿದ್ದಳು. ಈತ ಮರುಮದುವೆಯಾಗದೆ-ಸನ್ನಿಗೆ ಹೆಣ್ಣು ಕೊಡುವವರು ಯಾರು?- ಪುತ್ರಿಯನ್ನು ಜತನದಿಂದ ಪೋಷಿಸಿದ್ದನು. ಮಣಿಸರದ ಅಂಗಡಿಯಿಂದ ಸಮಸ್ತ ಗಿಲೀಟಿನ ಆಭರಣ ತಂದು ಆಕೆಗೆ ಕೊಡುತ್ತಿದ್ದನು. ರಂಜಾನ್ ಬಂದರೆ ಊರ ಹುಡುಗಿಯರು ಹೊಟ್ಟೆಕಿಚ್ಚು ಪಡುವಂತೆ ಮುನೀರಾ ಸರ್ವಾಲಂಕಾರ ಭೂಷಿತೆಯಾಗಿ ಅಡ್ಡಾಡುತ್ತಿದ್ದಳು. ರಾತ್ರಿ ಹತ್ತರ ಸುಮಾರಿಗೆ ಊರು ಪ್ರವೇಶಿಸುತ್ತಿದ್ದ ಪೀರಾ, ‘ಬೇಟಾ…’ ಎಂದು ಆವಾಜ್ ಹಾಕುತಿದ್ದನು. ಆಕೆ ಅಪ್ಪನ ಕರೆಗೆ ಕಾಯುತ್ತಿದ್ದವಳಂತೆ ‘ಅಬ್ಬಾ ಆಯಾ, ಅಬ್ಬಾ ಆಯಾ’ ಎಂದು ಸಂಭ್ರಮಿಸುತ್ತ ಬಾಗಿಲು ತೆಗೆದು ಹೊರಬರುತ್ತಿದ್ದಳು. ಅವನ ಕೈಲಿದ್ದ ತಿಂಡಿಪೊಟ್ಟಣ ಸ್ವೀಕರಿಸುತ್ತಿದ್ದಳು. ಸನ್ನಿಪೀರನ ಸ್ವರ ಕೇಳಿ ಮಲಗಿದ್ದ ಜನ ‘ಸನ್ನಿ ಅಬ್ ಆಯಾ ಕಿಕಿ’ ಎಂದು ಗೊಣಗಿಕೊಂಡು ನಿದ್ದೆ ಮುಂದುವರೆಸುತ್ತಿದ್ದರು. ಸಾಮಿಲ್ಲಿನ ಹೊಟ್ಟಿನಿಂದ ಧೂಳಿಮಯವಾದ ಮೈಯನ್ನು ತೊಳೆದುಕೊಂಡು ಪೀರಣ್ಣ, ಅಪರಾತ್ರಿ ಭೋಜನ ಮಾಡುವನು.
ಹೀಗೆ ವರ್ಷವಿಡೀ ಹಗಲಹೊತ್ತು ಜನರ ಕಣ್ಣಿಗೆ ಕಾಣದಂತೆ ನಿಶಾಚರನಾಗಿ ಬದುಕಿದ ಪೀರಣ್ಣನ ಮುಖಚಂದಿರವು, ಹಬ್ಬಗಳಲ್ಲಿ ಸಾರ್ವಜನಿಕ ದರ್ಶನಕ್ಕೆ ಸಿಗುತ್ತಿತ್ತು. ಆಗವನು ಅದ್ಭುತ ನಟನಾಗಿ ಮಾರ್ಪಡುತ್ತಿದ್ದನು. ಮೊಹರಂನಲ್ಲಿ ಅವನದು ಪಾಳೇಗಾರ ಸೋಗು. ರಟ್ಟೆ ಸೊಂಟಗಳಿಗೆ ಕಟ್ಟಿದ ಕಪ್ಪು ಸರವಿಗಳನ್ನು ಐದಾರು ಜನ ಹಿಡಿದು ಹಿಂದಿನಿಂದ ಎಳೆಯುತ್ತಿರಲು, ತಪ್ಪಿಸಿಕೊಳ್ಳುವಂತೆ ಕೊಸರಾಡುತ್ತ, ಹುಲಿಯಂತೆ ಹೆಜ್ಜೆಹಾಕುತ್ತ, ಚಟ್ಟನೆ ಕುತ್ತಿಗೆ ತಿರುಗಿಸಿ ಕಣ್ಣು ಕೆಕ್ಕರಿಸಿ ನೆರೆದ ಜನರತ್ತ ನೋಡುತ್ತ, ತಮ್ಮಟೆ ಲಯಕ್ಕೆ ಕುಣಿಯುತ್ತಿದ್ದನು. ಇಂತಹ ಭೀಷಣ ವ್ಯಕ್ತಿಗೆ ಚಿಕ್ಕಹಳ್ಳದ ದೆವ್ವಗಳು ಹೆದರಿದ್ದರೆ ಆಶ್ಚರ್ಯವಿಲ್ಲ ಎಂದು ನಮಗೆ ಅನಿಸುತ್ತಿತ್ತು.
ಸನ್ನಿಪೀರನನ್ನು ಬಿಟ್ಟರೆ ಎರಡನೇ ವರ್ಣರಂಜಿತ ವ್ಯಕ್ತಿ ಪೋಲಿ ಅಜೀಜ್. ಈತ ಆರಡಿ ಎತ್ತರದ ದೃಢಕಾಯದ ನಗುಮುಖದ ವ್ಯಕ್ತಿ. ಇಡೀ ಊರಿನ ಸೋಮಾರಿತನವನ್ನೆಲ್ಲ ತಾನೇ ಧಾರಣ ಮಾಡಿದ್ದ ಆಲಸಿ. ಎಳವೆಯಲ್ಲಿ ತಂದೆ ಸತ್ತು ತಾಯಿ ಮುದ್ದಿನಿಂದ ಸಾಕಿದ್ದೇ ಅವನು ಹಾಗಾಗಲು ಕಾರಣವೆಂದು ಮಂದಿ ಆಡಿಕೊಳ್ಳುತ್ತಿದ್ದರು. ತಮ್ಮ ಮಕ್ಕಳಿಗೆ ಶಿಕ್ಷಿಸುವಾಗ ‘ಸಡಿಲ ಬಿಟ್ಟರೆ ನೀನು ಅಜೀಜ್ ಆಗುತ್ತೀಯಾ’ ಎಂದು ಬೈಯುತ್ತಿದ್ದರು. ಅಜೀಜಣ್ಣ ಮುಂಜಾನೆ ನಾಷ್ಟಾಕ್ಕೆ ಎಂಟು ರಾಗಿರೊಟ್ಟಿ ಮತ್ತು ಹುರುಳಿಚಟ್ನಿ, ಊಟಕ್ಕೆ ಎರಡು ರಾಗಿಮುದ್ದೆಯ ಮೇಲೆ ಅರ್ಧಸೇರಕ್ಕಿ ಅನ್ನವನ್ನು ಸ್ವಾಹಾ ಮಾಡುತ್ತಿದ್ದನು. ಮನೆಯನ್ನು ಅವನ ಮುದಿತಾಯಿ ಮತ್ತು ಹೆಂಡತಿ, ಕಳೆಗೆ ಕುಯಿಲಿಗೆ ಹೋಗಿ ಸಂಭಾಳಿಸುತ್ತಿದ್ದರು. ಬೇಸಗೆಯಲ್ಲಿ ಇವರು ಕಾಫಿತೋಟಗಳಿಗೆ ಗುಳೆ ಹೋದರೆ, ಅಜೀಜನೂ ಅನಿವಾರ್ಯವಾಗಿ ಹಿಂಬಾಲಿಸುತ್ತಿದ್ದನು. ಹೆಣ್ಣುಮಕ್ಕಳ ದುಡಿಮೆಯಿಲ್ಲದೆ ಹೋಗಿದ್ದರೆ, ನಮ್ಮೂರ ಅನೇಕ ಸಂಸಾರಗಳು ಬೀದಿಗೆ ಬಿದ್ದಿರುತ್ತಿದ್ದವು.
ಅಜೀಜಣ್ಣನು ಮನಸ್ಸು ಬಂದಾಗ, ಕಾಡಿಗೆ ಹೋಗಿ ದೊಡ್ಡದೊಂದು ಸಾಗುವಾನಿ ಮರದ ತುಂಡನ್ನು ತಂದು, ಬಂಡಿ ಮಾಡುವವರಿಗೆ ಮಾರಿ, ರೊಕ್ಕ ತೀರುವ ತನಕ ಸಿನಿಮಾ ಟಾಕೀಸಿಗೂ ಹೋಟೆಲುಗಳಿಗೂ ಸಮರ್ಪಿಸುತ್ತಿದ್ದನು. ಅವನಿಂದ ಕೆಲಸ ತೆಗೆಸುವವರು ಕೇರಳ ಲಕ್ಕಿ ರೆಸ್ಟೊರೆಂಟಿನ ಜಗುಲಿಯ ಮೇಲೊ ವಿನಾಯಕ ಟಾಕೀಸಿನ ಆವರಣದಲ್ಲೊ ಭೇಟಿಯಾಗುತ್ತಿದ್ದರು. ಆದರೆ ಅಜೀಜಣ್ಣ ನಮ್ಮ ಕಾಲದ ಶ್ರೇಷ್ಠ ಗಾಯಕನಾಗಿದ್ದನು. ಬಹಾರೋ ಫೂಲು ಬರಸಾವೊ, ಮುಂತಾದ ಸಿನಿಮಾ ಹಾಡುಗಳನ್ನು ಮಧುರವಾಗಿ ಹಾಡುತ್ತಿದ್ದನು. ಕೆಲವು ಹಾಡುಗಳನ್ನು ಸಿಳ್ಳೆಯಲ್ಲೇ ನುಡಿಸುತ್ತಿದ್ದನು. ಹಬ್ಬದ ದಿನ ಊರನಡುವಿನ ಮರಹತ್ತಿ ಮಹಿಳೆಯರಿಗೆ ಉಯ್ಯಾಲೆ ಹಾಕಿಕೊಡುವುದು, ಹೆಂಗಸರ ಜತೆಕೂತು ಚೌಕಾಬಾರ ಆಡುವುದು ಮಾಡುತ್ತಿದ್ದನು. ಅವನ ಪ್ರತಿಭೆ ಕಾಡು ಕುಸುಮದ ಪರಿಮಳದಂತಿದ್ದು, ಅವನ ಪೋಲಿತನದಿಂದ ಜನರ ಲಕ್ಷ್ಷ್ಯಕ್ಕೆ ಬರದೆಹೋಯಿತು. ಕೊನೆಯ ದಿನಗಳಲ್ಲಿ ಅವನು ಬಾಚಿಯಲ್ಲಿ ಮರಕೆತ್ತುವಾಗ ಕಾಲಿಗೆ ಗಾಯವಾಗಿ ಕುಂಟಿಕೊಂಡು ನಡೆಯುತ್ತಿದ್ದನು. ಬಹುಶಃ ಸಕ್ಕರೆ ಕಾಯಿಲೆಯಿಂದ ನಡುವಯಸ್ಸಿಗೇ ಸತ್ತನು.
ಅಜೀಜ್ ಎಂದರೆ ಅರಬ್ಬಿಯಲ್ಲಿ ಬಲಶಾಲಿ ಎಂದರ್ಥ. ಆದರೆ ನಾನು ಕಂಡ ಅಜೀಜಣ್ಣಗಳೆಲ್ಲ ಪುಕ್ಕಲು ಕಲಾವಿದರು. ನಮ್ಮ ಭಾವನವರ ಅಣ್ಣ ಅಜೀಜ್ಖಾನರು ಮಡದಿಗೆ ಹೆದರುವುದಕ್ಕೆ ಹೆಸರಾಗಿದ್ದರು. ಆಕೆಯನ್ನು ಸಂಪ್ರೀತಗೊಳಿಸಲು ಏನಾದರೂ ಸಾಹಸ ಮಾಡಲು ಹೋಗಿ ಫಜೀತಿಗೆ ಸಿಕ್ಕಿಬೀಳುತ್ತಿದ್ದರು. ಒಮ್ಮೆ ಶ್ರೀಯತರು ಸಂತೆಯಿಲ್ಲದ ದಿನ ಮನೆಯಲ್ಲಿರುವಾಗ್ಗೆ, ಮಡದಿಗೆ ಕಾರ ಕಡೆದು ಇಟ್ಟುಕೊಳ್ಳಲು ಹೇಳಿ ಗಾಳ ಎತ್ತಿಕೊಂಡು ಕೆರೆಗೆ ಹೋದರು. ದುರದೃಷ್ಟಕ್ಕೆ ಆದಿನ ಯಾವ ಮೀನೂ ಗಾಳವನ್ನು ಕಚ್ಚಲಿಲ್ಲ. ಊಟದ ಹೊತ್ತಾಯಿತು. ಬರಿಗೈಹೋಗಲು ಮನಸ್ಸಾಗಲಿಲ್ಲ. ಅದೇ ಹೊತ್ತಿಗೆ ಬೆಸ್ತರು ಮೀನನ್ನು ದಂಡೆಗೆ ತಂದರು. ಅಜೀಜಣ್ಣ ನಾಲ್ಕು ಕೆಜಿಯ ದೊಡ್ಡ ಮೀನೊಂದನ್ನು ಖರೀದಿಸಿ, ಸಂಜೆಹೊತ್ತಿಗೆ ಹಣ ಕಳಿಸಿಕೊಡುತ್ತೇನೆಂದು ಹೇಳಿ ಮನೆಗೆ ಬಂದರು. ಅದನ್ನು ಹೆಂಡತಿಯೆದುರು ಧೊಪ್ಪೆಂದು ಎತ್ತಿಹಾಕಿ, ಮೀನನ್ನು ಎಳೆದು ದಡಕ್ಕೆ ಹಾಕುವುದಕ್ಕೆ ರಟ್ಟೆಯೆಲ್ಲ ನೋವಾಯಿತು ಎಂದು ಕೊಚ್ಚಿಕೊಂಡರು. ಆಕೆ ಲಗುಬಗೆಯಿಂದ ಅದನ್ನುಜ್ಜಿ ಹುಳಿಮಾಡಿ ಮುದ್ದೆ ಮಾಡಿ, ಗಂಡನಿಗೆ ಬಡಿಸಬೇಕು. ಅಷ್ಟರಲ್ಲಿ, ‘ಅಕ್ಕಾ, ಅಜೀಜಣ್ಣ ಮನ್ಯಾಗೈತಾ?’ ಎಂಬ ಕೂಗು ಬಾಗಿಲಲ್ಲಿ ಕೇಳಿತು. ಹೊರಗೆ ಬಂದು ನೋಡಲು ಮೀನುಗಾರ. ‘ಏನಪ್ಪ? ಏನು ಬೇಕಿತ್ತು’ ‘ಏನಿಲ್ಲಮ್ಮ, ಅಣ್ಣ ಮೀನಿನ ದುಡ್ಡು ಕೊಡಬೇಕಿತ್ತು?’ ಆಕೆಗೆ ಭಯಂಕರ ಅಪಮಾನವಾಯಿತು. ಭೂರಿ ನನಗಂಡ ಬುಗುಡಿ ತಂದರೆ, ಇಟ್ಕೊಳ್ಳೋಕೆ ತೂತಿಲ್ಲ ಎಂದು ಆಕೆಗೆ ಗೊತ್ತಿತ್ತು. ಆದರೆ ಗಂಡನೇ ಬೇಟೆಯಾಡಿದ್ದೆಂದು ಹೆಮ್ಮೆಯಿಂದ ಗಲ್ಲಿಯವರಿಗೆಲ್ಲ ಮತ್ಸ್ಯ ಪ್ರದರ್ಶನಗೈದು ಪತಿ ಪ್ರತಾಪವನ್ನು ಸಾರಿಬಂದಿದ್ದಳು. ಮೀನುಗಾರನ ಮಾತು ನೆರೆಹೊರೆಯವರ ಕಿವಿಗೆ ಬಿದ್ದು ಮರ್ಯಾದೆ ಹೋಗಿತ್ತು. ಆಕೆ ಮೀನುಗಾರನಿಗೆ ರೊಕ್ಕ ಕೊಟ್ಟು ಒಳಬಂದಳು. ಗಂಡ ಪೆಚ್ಚುನಗೆ ಬೀರುತ್ತ ತಟ್ಟೆಯ ಮುಂದೆ ಕೂತಿದ್ದನು. ಸಾರನ್ನು ಎತ್ತಿ ಬೀದಿಗೆ ಚೆಲ್ಲಬೇಕು, ಗಂಡನಿಂದ ತಟ್ಟೆ ಕಿತ್ತುಕೊಳ್ಳಲೇ ಎಂಬ ಆಲೋಚನೆ ಬಂತು. ಆದರೆ ಮಸಾಲೆ ಅರೆದು ಕಷ್ಟಪಟ್ಟು ಮಾಡಿದ ಸಾರು. ಕಮ್ಮನೆ ಕಂಪುಬೀರುತ್ತಿತ್ತು. ಅಮಾಯಕ ಗಂಡನ ಸೋಟೆಯನ್ನು ಒಮ್ಮೆ ತಿವಿದು ಉಣಬಡಿಸಿದಳು ಮತ್ತು ತಾನೂ ತಿಂದಳು.
ಹೀಗೆ ಮದುವೆಯಾಗಿ ಪಡಿಪಾಟಲು ಅನುಭವಿಸುವ ರಿಸ್ಕನ್ನೇ ತೆಗೆದುಕೊಳ್ಳದವನು ನಮ್ಮೂರ ಜೇನುಪುಟ್ಟ. ಅವನದು ಮಾಸಿದ ಬಟ್ಟೆತೊಟ್ಟ ಕುಡಿದು ಲಡ್ಡಾದ ದೇಹ. ಜೇನ್ನೊಣ ಕಚ್ಚಿಕಚ್ಚಿ ಗೋಣಿತಟ್ಟಿನಂತಾದ ತೊಗಲು. ತೊಗಲನ್ನು ಸೀಳಿ ಸಿಕ್ಕಿಸಿದಂತಿರುವ ಬೆಳ್ಳನೆಯ ಕಣ್ಣುಗಳನ್ನು ಪಟಪಟ ಮಿಟುಕಿಸುತ್ತಿದ್ದನು. ಬಹುಶಃ ಅವನಿಗೆ ನೊಣಗಳ ಮುಳ್ಳು ಚುಚ್ಚುತ್ತಿರಲಿಲ್ಲ, ಚುಚ್ಚಿದರೂ ಅವುಗಳ ರಾಸಾಯನಿಕ ಕೆಲಸ ಮಾಡುತ್ತಿರಲಿಲ್ಲ. ಕಪ್ಪನೆಯ ಒಂದು ಲಡಾಸು ಸೈಕಲ್ಲು, ಜೇನಿಳಿಸಲು ಹಗ್ಗ, ಕತ್ತಿ, ಬೆಂಕಿಪೊಟ್ಟಣ ಮತ್ತು ಟಿನ್‌ಡಬ್ಬ ಇಷ್ಟೇ ಬಂಡವಾಳ. ಪುಟ್ಟ, ದೊಡ್ಡದೊಡ್ಡ ಅರಳಿಮರದ ತುದಿಗಳನ್ನು ಕೋತಿಯಂತೆ ಏರುತ್ತಿದ್ದನು. ಹೆಜ್ಜೇನನ್ನು ಇಳಿಸಿ, ತುಪ್ಪವನ್ನು ಸಂತೆಯಲ್ಲಿ ಮಾರುತ್ತಿದ್ದನು. ಜೇನು ಕೀಳಲು ಹೋಗದ ದಿನ, ಸರ್ಕಸ್ಸಿನ ಜೋಕರುಗಳಂತೆ ಬಣ್ಣದ ಬಟ್ಟೆಯನ್ನು ಧರಿಸಿ, ತಲೆಯ ಮೇಲೆ ಖಾಲಿಬಾಟಲಿ ಇಟ್ಟುಕೊಂಡು, ಮಡ್‌ಗಾರ್ಡ್‌ಇಲ್ಲದ ಸೈಕಲ್ಲಿನ ಹ್ಯಾಂಡಲನ್ನು ಕೈಬಿಟ್ಟು ಊರಲ್ಲಿ ಒಂದು ಸುತ್ತು ಬರುತ್ತಿದ್ದನು. ನಾವೆಲ್ಲ ಹೋ ಎಂದು ಸೈಕಲ್ಲಿನ ಹಿಂದೆ ಓಡುತ್ತಿದ್ದೆವು. ಅವನಿಗೆ ಸಂಸಾರವಿರಲಿಲ್ಲ. ಊರೇ ಸಂಸಾರವಾಗಿತ್ತು.
ಇಂತಹ ಬೇಲಿಹೂಗಳಂತಹ ರಸಿಕರು ಕಾಲನ ಕರೆಗೆ ಓಗೊಟ್ಟು ಹೋದರು. ಆದರೆ ಹೂಗಳ ಕಂಪು ಇನ್ನೂ ಗಾಳಿಯಲ್ಲಿದೆ.
ರನ್ಯಾ ರಾವ್ ಚಿನ್ನ ಕಳ್ಳಸಾಗಾಣಿಕೆಗೆ ಖಾಕಿ ಖಾದಿ ಕಾವಿ ಕೃಪೆಯಂತೆ! ದಂಗುಬಡಿಸುವ ಸುದ್ದಿಯಿದು ಬೆಚ್ಚಿ ಬೆದರಿಬಿದ್ದಿದೆ ಜನ ಜಗ! ಕಲೆಯಲಿ…
ಫಲಾನುಭವಿಗಳಿಗೆ ಗ್ಯಾರಂಟಿಗಳನ್ನು ವಿತರಿಸುವಾಗ ಸರ್ಕಾರದಿಂದ ಆಗಬಹುದು ಅಲ್ಲಲ್ಲಿ ತುಸು ವ್ಯತ್ಯಾಸ... ಆದರೆ, ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ…
ಕಳೆದ ವಾರ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ೧೪ ಕೆ.ಜಿ. ಚಿನ್ನವನ್ನು ಕಳ್ಳಸಾಗಣೆ ಮಾಡುತ್ತಿದ್ದಾರೆ ಎಂಬ ಆರೋಪದ ಮೇಲೆ ನಟಿ ರನ್ಯಾ…
ಹಿಂದುಳಿದ ತಾಲ್ಲೂಕು ಎಂಬ ಹಣೆಪಟ್ಟಿಯನ್ನು ಹೊಂದಿರುವ ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ ಸರಿಯಾದ ವೈದ್ಯಕೀಯ ಸೌಲಭ್ಯಗಳಿಲ್ಲದೆ ಜನರು ಚಿಕಿತ್ಸೆಗಾಗಿ ಮೈಸೂರಿಗೆ ತೆರಳಬೇಕಾದ ಅನಿವಾರ್ಯತೆ…
ಡಿ.ವಿ.ರಾಜಶೇಖರ ಪಾಕಿಸ್ತಾನದ ಜಾಫರ್ ಎಕ್ಸ್‌ಪ್ರೆಸ್ ರೈಲು ಅಪಹರಣ ಮಾಡಿದ್ದ ಬಲೂಚಿ ಪ್ರತ್ಯೇಕತಾವಾದಿಗಳನ್ನು (ಬಲೂಚಿಸ್ತಾನ್ ಲಿಬರೇಷನ್ ಆರ್ಮಿ-ಬಿಎಲ್‌ಎ) ಕೊಲ್ಲುವಲ್ಲಿ ಪಾಕಿಸ್ತಾನ ಸೇನೆ…
ಹೇಮಂತ್‌ಕುಮಾರ್ ಒಂದೂವರೆ ತಿಂಗಳಾದರೂ ಬಿಡುಗಡೆಯಾಗದ ನರೇಗಾ ಕೂಲಿ ಹಣ ಮಂಡ್ಯ: ಸರ್ಕಾರಿ ನೌಕರಿಯಲ್ಲಿರುವವರಿಗೆ ಎಲ್ಲ ಸೌಲಭ್ಯಗಳೊಂದಿಗೆ ತಿಂಗಳಾದ ಕೂಡಲೇ ಪಗಾರ…