ಬೆಳಬೆಳಗ್ಗೆ ನಾನು ಹಿತ್ತಲಲ್ಲಿ ಹಾಕಿಕೊಂಡಿದ್ದ ಗುಡಿಸಲ ಮಂಚಿಕೆಯಲ್ಲಿ ಓದಿಕೊಂಡು ಕೂತಿದ್ದೆ. ಪ್ರಥಮ ಪಿಯುಸಿ ಪರೀಕ್ಷೆ ಶುರುವಾಗಲಿದ್ದವು. ಚಿಕ್ಕಕ್ಕ ಗಾಬರಿಯಿಂದ ಓಡಿ ಬಂದವಳೇ ‘ಅಮ್ಮನಿಗೆ ಬಾಯಿ ತೆಗೆಯಲು ಆಗುತ್ತಿಲ್ಲ. ದವಡೆ ಬಿಗಿಯುತ್ತಿವೆ ಅಂತಿದಾಳೆ. ಓಡು, ಅಪ್ಪನ್ನ ಕರಕೊಂಡು ಬಾ’ ಎಂದು ಕೂಗಿಕೊಂಡಳು. ನಾನು ಕುಲುಮೆಗೆ ಹೋಗಿ ಅಪ್ಪನ್ನ ಕರೆತಂದೆ. ಅಷ್ಟರಲ್ಲಿ ಅಕ್ಕ ತೆಗೆಯಲಾಗದಂತೆ ಲಾಕ್ ಆಗಿದ್ದ ಹಲ್ಲುಗಳ ಒಳಗಿಂದ ಅಮ್ಮನಿಗೆ ಹನಿಹನಿಯಾಗಿ ಚಹ ಕುಡಿಸುತ್ತಿದ್ದಳು. ಅಪ್ಪ ಚಮಚೆಯನ್ನು ಹಲ್ಲುಗಳ ಮಧ್ಯೆ ಸೇರಿಸಿ ಕೀಲಿಗೊಂಡ ದವಡೆಯನ್ನು ಬಿಡಿಸಲು ಯತ್ನಿಸಿದನು. ಅಲೆಯಡಿಕೆ ಜಗಿದ್ದು ಕಪ್ಪಾಗಿದ್ದ ಒಂದು ಹಲ್ಲು ಫಟ್ಟಂತ ಮುರಿದು ರಕ್ತಬಂತು. ‘ಅಮ್ಮ ಏನಾಯಿತಮ್ಮ ನಿನಗೆ?’ ಎಂದು ನಾವು ಅಳತೊಡಗಿದೆವು. ಕಂಡು ಕೇಳರಿಯದ ಕಾಯಿಲೆ. ಅಮ್ಮ ತನಗೇನೂ ಆಗಿಲ್ಲ, ಸರಿಹೋಗುತ್ತೆ ಎಂಬಂತೆ ನಮ್ಮನ್ನು ಸನ್ನೆಯಿಂದಲೇ ಸಾಂತ್ವನ ಮಾಡಿದಳು. ಮನೆಯ ಡಾಕ್ಟರ್ ಹೆಗಡೆಯವರ ಕಡೆ ಕರೆದುಕೊಂಡು ಹೋದೆವು. ಶಿವಮೊಗ್ಗದ ದೊಡ್ಡಾಸ್ಪತ್ರೆಗೆ ಹೋಗಬೇಕು ಎಂದಾಯಿತು.
ಅಷ್ಟರಲ್ಲಿ ಕುಟುಂಬದ ಬಿಕ್ಕಟ್ಟು ಬಂದಾಗಲೆಲ್ಲ ನಿಭಾಯಿಸುವ ಛಾತಿಯುಳ್ಳ ದೊಡ್ಡಕ್ಕನೂ ಬಂದಿದ್ದಳು. ಅಪ್ಪ ಹಣ ಹೊಂಚಲು ಊರೊಳಗೆ ಹೋದನು. ಹಾಸಿಗೆ ಹೊದಿಕೆ ಬಟ್ಟೆಬರೆ ಸುತ್ತಿಕೊಂಡು, ನಾನು ಅಮ್ಮ ಅಪ್ಪ ದೊಡ್ಡಕ್ಕ ತರೀಕೆರೆಯ ಬಸ್‌ಸ್ಟಾಂಡಿಗೆ ಬರುವಾಗ ರಾತ್ರಿಯಾಯಿತು. ಬೆಂಗಳೂರು-ಶಿವಮೊಗ್ಗ ಬಸ್ಸಲ್ಲಿ ಕೂರಿಸಿಕೊಂಡು ಮೆಗ್ಗಾನ್ ಆಸ್ಪತ್ರೆಗೆ ಧಾವಿಸಿದೆವು. ರಾತ್ರಿ ಪಾಳಿಯಲ್ಲಿದ್ದ ಡಾಕ್ಟರು ಅಡ್ಮಿಟ್ ಮಾಡಿಕೊಂಡು ರೋಗಿಯನ್ನು ಟೆಟನಸ್ ವಾರ್ಡಿಗೆ ಶಿಫ್ಟ್ ಮಾಡಿದರು. ಬೆಳಗಿನಿಂದ ಏನೂ ತಿಂದಿಲ್ಲದ ಅಮ್ಮನಿಗೆ ಭೀಕರ ಹಸಿವು. ಹಲ್ಲುಗಳ ಸಂದಿಯಲ್ಲಿ ಬಿಡುತ್ತಿದ್ದ ಎಳೆನೀರು ಬಿಟ್ಟರೆ ಬೇರೆ ಆಹಾರವಿಲ್ಲ. ಕಿರಿಯ ಡಾಕ್ಟರುಗಳ ಮತ್ತು ನರ್ಸುಗಳ ಜತೆ ದೊಡ್ಡ ಡಾಕ್ಟರು ರೌಂಡಿಗೆಂದು ಬಂದರು. ಅವರಲ್ಲೇ ನಮಗರಿಯದ ಭಾಷೆಯಲ್ಲಿ ಚರ್ಚೆಯಾಯಿತು. ಅಕ್ಕ ಅವರ ಹಿಂದಿಂದೆ ಹೋಗುತ್ತ ‘ಅಮ್ಮನನ್ನು ಏನಾದರೂ ಮಾಡಿ ಉಳಿಸಿಕೊಡಿ ಡಾಕ್ಟರೆ, ಮಕ್ಕಳ ತಾಯಿ’ ಎಂದು ಬೇಡಿಕೊಂಡಳು. ಕಿರಿಕಿರಿಗೊಂಡ ಡಾಕ್ಟರು ‘ಇಲ್ಲಿಗೆ ಬರುವ ಎಲ್ಲರ ಪ್ರಾಣ ಉಳಿಸೋಕೇ ಕಣಮ್ಮ ನಾವಿರುವುದು’ ಎಂದು ಸಣ್ಣಗೆ ಗದರಿದರು.
ಅಪ್ಪ ಮೆಡಿಕಲ್ ಶಾಪಿಗೂ ಹೋಟೆಲಿಗೂ ಹರಿದಾಡುತ್ತಿದ್ದನು. ಅಮ್ಮ ಮಾತ್ರ ‘ಅವನಿಗೆ ಓದಿಕೊಳ್ಳೋಕೆ ಹೇಳಮ್ಮ’ ಎಂದು ಗಂಟಲಿನಿಂದ ಹೊರಡುವ ಕ್ಷೀಣ ಸ್ವರದಲ್ಲೇ ಅಕ್ಕನಿಗೆ ಹೇಳಿದಳು. ನಾನು ನೊಣ ಗಲೀಜು ತುಂಬಿದ ವಾರ್ಡುಗಳ ಮೆಟ್ಟಿಲಮೇಲೆ ಮಿಣುಕುವ ಬಲ್ಪಿನ ಕೆಳಗೆ ಕೂತು ಓದಿಕೊಳ್ಳುತ್ತಿದ್ದೆ. ಬೆಳಕು ಹರಿಯಿತು. ಶಿವಮೊಗ್ಗೆ ಪರಸ್ಥಳ. ಯಾರೂ ಪರಿಚಯವಿಲ್ಲ. ಅಪ್ಪ ಮತ್ತಷ್ಟು ದುಡ್ಡು ಹೊಂದಿಸಿಕೊಂಡು ಬರಲು ನನ್ನನ್ನು ಕರೆದುಕೊಂಡು ಊರಿಗೆ ವಾಪಾಸಾದನು. ಆದಿನ ನನ್ನ ಪರೀಕ್ಷೆಯ ಮೊದಲ ಪತ್ರಿಕೆ-ಕನ್ನಡ.
ಪರೀಕ್ಷೆ ಮುಗಿಸಿಕೊಂಡು ಮಧ್ಯಾಹ್ನ ಮನೆಗೆ ಬಂದೆ. ಮನೆ ಮುಂದೆ ಬಿಳೀ ಅಂಬಾಸೆಡರ್ ಕಾರು ನಿಂತಿತ್ತು. ಜನ ಮುತುರಿಕೊಂಡಿದ್ದರು. ಓಡಿ ಬಂದೆ. ನಮ್ಮ ಬೀದಿಯ ಹಿರೀಕಳಾದ ಕುಪ್ಪಮ್ಮ ನನ್ನೆರಡೂ ಕೈಗಳನ್ನು ಹಿಡಿದು ‘‘ಅ್ಂಯೊ ರಾಮತ್ತು, ನಿಮ್ಮಮ್ಮ ಹೋಗಿಬಿಟ್ಟಳಲ್ಲೊ’’ ಎಂದು ಕೂಗಿಕೊಂಡಳು. ಎದೆ ಧಸಕ್ಕೆಂದಿತು. ಅವಳಿಂದ ಬಿಡಿಸಿಕೊಂಡು ಜನಸಂದಣಿಯನ್ನು ಸೀಳಿಕೊಂಡು ಮನೆಯೊಳಗೆ ಧಾವಿಸಿದೆ. ಅಮ್ಮನನ್ನು ಮೆಕ್ಕಾದ ಕಾಬಾ ಇರುವ ದಿಕ್ಕಾಗಿರುವ ಪಶ್ಚಿಮಕ್ಕೆ ಕಾಲು ಮಾಡಿ ಮಲಗಿಸಲಾಗಿತ್ತು. ಅಪ್ಪನೆದುರು ಸದಾ ಗಿಡ್ಡವಾಗಿ ಕಾಣುತ್ತಿದ್ದ ಅಮ್ಮ ಇವತ್ತು ಅಪ್ಪನಿಗಿಂತ ನೀಳವಾಗಿ ಬೆಳೆದಂತೆ ಕಂಡಳು. ಅವಳಿಗೆ ೪೫ ವರ್ಷವಿದ್ದೀತು. ಅಮ್ಮನ ತಲೆಬಳಿ ಕೂತು ಬಂದರಿಕೆ ಗಿಡದ ಕೊಂಬೆಯಿಂದ ಗಾಳಿಹಾಕುತ್ತಿದ್ದ ಒಬ್ಬ ಮುದುಕಿ, ಮುಖಮುಚ್ಚಿದ ಬಟ್ಟೆಯನ್ನು ತುಸು ಸರಿಸಿ ‘ನೋಡಪ್ಪಾ ನೋಡು. ಕೈಗೆ ಬಂದ ಮಕ್ಕಳ ಬದುಕನ್ನು ನೋಡಲಾರದೆ ಹೋಗಿಬಿಟ್ಟಳು. ದೇವರು ಒಳ್ಳೆಯವರನ್ನೇ ಕರೆಸ್ಕೋತಾನೆ’ ಎಂದಳು. ಅಮ್ಮನ ಮುಖ ನೋಡಿದೆ. ಚಾಕುವಿನಿಂದ ಎದೆಸೀಳಿದಂತಾಯಿತು. ಆಕೆಯ ಮೇಲೆ ಧೊಪ್ಪನೆ ಬಿದ್ದು ಅಮ್ಮಾ ಅಮ್ಮಾ ಎಂದು ರೋದಿಸಿದೆ. ಅಷ್ಟರಲ್ಲಿ ಯಾರೊ ತಟ್ಟನೆ ರಟ್ಟೆಹಿಡಿದು ಹಂಗೆಲ್ಲ ಶವಕ್ಕೆ ಘಾಸಿಮಾಡಬಾರದು ಏಳಪ್ಪ ಎಂದು ಎಬ್ಬಿಸಿದರು. ಮಂಜಾದ ಕಣ್ಣಲ್ಲಿ ಮತ್ತೊಮ್ಮೆ ಗಮನಿಸಿದೆ; ಕಪ್ಪನೆಯ ನಿಸ್ತೇಜ ಮುಖದಲ್ಲಿ ಮುಚ್ಚಿದ ಕಣ್ಣು. ಕಣ್ಣರೆಪ್ಪೆಯಲ್ಲಿದ್ದ ಕಪ್ಪುಚುಕ್ಕಿ (ಅದು ನನ್ನಲ್ಲೂ ಇದೆ) ಎದ್ದು ಕಾಣುತ್ತಿತ್ತು; ಅವಳ ಮುಖದ ಲಕ್ಷಣವಾಗಿದ್ದ ನಕ್ಷತ್ರನತ್ತು ಮೂಗಿನಲ್ಲಿ ಮಿನುಗುತ್ತಿತ್ತು. ಮನೆತುಂಬ ತುಂಬಿದ ತಲೆಗೆ ಸೆರಗುಹೊತ್ತು ಕೂತ ಹೆಂಗಸರು, ಮುಸುಮುಸು ಅಳುತ್ತ ನನ್ನತ್ತಲೆ ದಿಟ್ಟಿಸುತ್ತಿದ್ದರು. ಹೊರಗೆ ಬಂದೆ. ಕಿರಿಯ ತಮ್ಮ ಕಲೀಮ, ಅಮ್ಮನ ಮರಣದ ಅರಿವಿಲ್ಲದೆ ಅಂಗಳದಲ್ಲಿ ಆಡುತ್ತಿದ್ದನು. ಅಪ್ಪನಿಗೆ ತೆಕ್ಕೆಬಿದ್ದು ಏನಪ್ಪಾ ಹಿಂಗಾಯಿತು ಎಂದೆ. ಅವನು ಮಾತಾಡಲಾಗದೆ ಆಗಸದತ್ತ ಕೈಮಾಡಿದನು.
ನಾನೂ ಅಪ್ಪನೂ ಊರಿಗೆ ಬಂದ ಕೆಲವೇ ಹೊತ್ತಲ್ಲಿ ಆಸ್ಪತ್ರೆಯಲ್ಲಿ ಅಮ್ಮನ ಜೀವ ಹೋಗಿದೆ. ಅಕ್ಕ ಅವರಿವರ ಕೈಕಾಲು ಹಿಡಿದು, ಅಂಬಾಸಿಡರ್ ಕಾರನ್ನು ಬಾಡಿಗೆ ಮಾಡಿಕೊಂಡು ಶವ ಹೇರಿಕೊಂಡು ಮನೆಗೆ ತಂದಿದ್ದಾಳೆ. ನಮ್ಮ ಕುಟುಂಬ ಕಂಡ ಮೊದಲನೇ ಆಘಾತವಿದು. ಅವ್ವ ಕೊನೆಯ ದಿನದವರೆಗೂ ದುಡಿದಳು. ಅಣ್ಣ ಆಗಷ್ಟೇ ಪ್ರಾಯಕ್ಕೆ ಬಂದಿದ್ದನು. ನಾನು ಕಾಲೇಜು ಸೇರಿದ್ದೆ. ಕುಟುಂಬವು ಕಷ್ಟಗಳಿಂದ ಮೇಲೆದ್ದು ಚೇತರಿಸಿಕೊಳ್ಳುವ ತಿರುವಿನ ಗಳಿಗೆಯಲ್ಲಿ ಫಟ್ಟಂತ ಹೋಗಿಬಿಟ್ಟಳು. ಅವಳ ಕಣ್ಮರೆ ಭೀಕರ ನಿರ್ವಾತ ಸೃಷ್ಟಿಸಿತು. ಕೆಲವು ಜೀವಗಳು ಮನೆಗೆ ನಡುಗಂಬವಾಗಿಯೋ, ಬುನಾದಿ ಕಲ್ಲಾಗಿಯೋ ಇದ್ದವು ಎನ್ನುವುದು ಅವು ಕುಸಿದಾಗಲೆ ತಿಳಿಯುವುದು. ಧರೆಹತ್ತಿ ಉರಿದರೆ ಎಲ್ಲಿ ಹೋಗಲಿ ಎಂಬ ಅವಸ್ಥೆ. ಅಪ್ಪನ ಬೆನ್ನೆಲುಬು ಮುರಿದಂತಾಯಿತು. ಮಣ್ಣಿಗೆ ಬಂದಿದ್ದ ಯಾರೊ ಹೇಳಿದರು: ‘ಇರುವೆ ಗೂಡಿಗೆ ಬೆಂಕಿಕೊಟ್ಟಂತಾಯಿತು’. ಬೆಳೆದಮಕ್ಕಳ ಮುಂದೆ ಬಸುರಿಯಾಗಿ ಹಡೆಯಲು ಒಲ್ಲದೆ, ಬಸುರನ್ನು ತೆಗೆಸಿಕೊಳ್ಳಲು ಹೋಗಿ ನಂಜಾಗಿ ಸತ್ತಳು ಎಂದು ಅವರು ಆಡಿಕೊಳ್ಳುತ್ತಿದ್ದರು. ಎಮರ್ಜನ್ಸಿಯಲ್ಲಿ ಬಲವಂತವಾಗಿ ಜನರನ್ನು ಹಿಡಿದು ಸಂತಾನಹರಣ ಚಿಕಿತ್ಸೆ ಮಾಡುತ್ತಿದ್ದಾಗ, ಹೆದರಿ ದೂರದ ಬಂಧುಗಳ ಮನೆಗೆ ಹೋಗಿ ಅಮ್ಮ ತಪ್ಪಿಸಿಕೊಂಡಿದ್ದಳು. ಆಪರೇಶನ್ ಮಾಡಿಸಿಕೊಂಡಿದ್ದರೆ ಬಹುಶಃ ಬದುಕುಳಿದಿರುತ್ತಿದ್ದಳು.
ರೋದನ ಚೀತ್ಕಾರಗಳ ನಡುವೆ ಯಾರೊ ಹಿರಿಯರು ಅಮ್ಮನ ಚಿಕ್ಕಪ್ಪನಿಗೆ ಸುದ್ದಿ ಮುಟ್ಟಿಸಲು ಸಿಕ್ಕ ಬಸ್ಸಿಗೆ ಹತ್ತಿಸಿಬಿಟ್ಟರು. ಅದುವೊ ನಾನೆಂದೂ ನೋಡದ ಊರು. ಹಲವು ಬಸ್ಸು ಬದಲಿಸಿ ಲಾರಿಹಿಡಿದು ಹೋದೆ. ನಡುರಾತ್ರಿಯಾಗಿತ್ತು. ಬೆಳಗು ಜಾವಕ್ಕೆದ್ದು ಬಂಧುಗಳನ್ನು ಹೊರಡಿಸಿಕೊಂಡು ಹೊರಟೆ. ಬಸ್ಸು, ಸಮಸ್ತ ನಿಲ್ದಾಣಗಳಲ್ಲಿ ನಿಲ್ಲುತ್ತ ಏರಿಳಿಸುತ್ತ ವಿರಾಮಗತಿಯಲ್ಲಿ ಚಲಿಸಿತು. ಹೆತ್ತವಳಿಗೆ ಬಿದಾಯಿ ಕೊಡುವ ಹೊತ್ತಲ್ಲಿ, ಬಸ್ಸಿನಲ್ಲಿ ಶೋಕಮೂರ್ಛಿತನಾಗಿ, ಮೈಲಿಕಲ್ಲು ಎಣಿಸುತ್ತ ‘ನನಗೆ ರೆಕ್ಕೆ ಇರಬಾರದಿತ್ತೇ’ ಎಂದು ತಳಮಳಿಸುತ್ತ ಕಿಟಕಿಬದಿ ಕೂತಿದ್ದೆ. ಮನೆ ಮುಟ್ಟುವಷ್ಟರಲ್ಲಿ ಮಣ್ಣು ಮುಗಿದಿತ್ತು. ಕೆಲವರು ರಹಮತ್ ಬರುವ ತನಕ ತಡೆೋಂಣ ಎಂದರಂತೆ. ಆದರೆ ಶವ ಸಣ್ಣಗೆ ವಾಸನೆ ಬೀರಲು ಆರಂಭಿಸಿತೆಂದು ಅವಸರ ಮಾಡಿ ಮುಗಿಸಿದ್ದರು. ಶವವನ್ನು ಬಿಳಿಯ ಕಫನಿನಲ್ಲಿ ಸುತ್ತಿ ಕಲ್ಲುಮಣ್ಣಿನ ಖಬರಿನಲ್ಲಿ ಇಟ್ಟು ಮೇಲೆ ಮಣ್ಣುಸುರಿಯುತ್ತಾರೆ. ನಾನು ಪ್ರೀತಿಸುವ ಜೀವದ ಮೇಲೆ ಮಣ್ಣೆಳೆದು ಕಫನನ್ನು ಮಲಿನಗೊಳಿಸುವ ಆಚರಣೆಗೆ ಸಾಕ್ಷಿಯಾಗದೆ ಹೋಗಿದ್ದು ಒಳಿತೇ ಆಯಿತು.
ನಮ್ಮ ಕುಟುಂಬದ ಎಲ್ಲರ ಬಾಳಲ್ಲೂ ನಿರ್ಣಾಯಕ ಪಾತ್ರವಹಿಸಿದ್ದ ಅಮ್ಮನ ಒಂದು ಫೋಟೊ ಇಲ್ಲ. ಆಕೆಗೆ ಫೋಟೊ ತೆಗೆಸಿಕೊಳ್ಳುವ ಅವಕಾಶ ಬರಲಿಲ್ಲವೊ, ಧಾರ್ಮಿಕ ಸಂಕೋಚದಿಂದ ತೆಗೆಸಿಕೊಳ್ಳಲಿಲ್ಲವೊ ತಿಳಿಯದು. ಆದರೆ ಆಕೆಯನ್ನು ನೆನೆದೊಡನೆ ಮೂಗುತಿ ಮೂಗಿನ ಬುಗುಡಿಕಿವಿಯ ನಸುಗಪ್ಪು ಮೊಗವೊಂದು ನನ್ನ ಚಿತ್ತಪಟಲದ ಮುಂದೆ ಪ್ರತ್ಯಕ್ಷವಾಗುತ್ತದೆ. ಆಕೆಯಿಲ್ಲವಾದ ಎಷ್ಟೊ ವರ್ಷಗಳ ತನಕ ಆಕೆ ಬದುಕಿರುವ ಕನಸುಗಳು ಬೀಳುತ್ತಿದ್ದವು. ಬಹುಶಃ ಅವಳ ಸಾವನ್ನು ಒಳಮನಸ್ಸು ಒಪ್ಪಿಕೊಂಡಿರಲಿಲ್ಲ. ಆದರೆ ಮರೆವು ಬದುಕು ತನ್ನ ಚಲನೆಗೆ ತಾನೇ ಕೊಟ್ಟುಕೊಂಡ ಮದ್ದು. ಈಚೆಗೆ ಆಕೆ ಕನಸಿನಲ್ಲಿ ಬರುತ್ತಿಲ್ಲ. ಈಚೆಗೆ ಊರಿಗೆ ಹೋದಾಗ ಆಕೆ ಸಮಾಧಿಯನ್ನು ನೋಡಲು ಹೋದೆ. ಸುತ್ತಮುತ್ತ ಹೊಸಸಮಾಧಿಗಳು ಬಂದು ಹುಡುಕುವುದೇ ಕಷ್ಟವಾಯಿತು. ಕಡೆಗೂ ಸಿಕ್ಕಿತು. ಅವಳ ತಲೆದೆಸೆಗೆ ನೆಟ್ಟಿದ್ದ ‘ಜುಲೇಕಾ ಬಿ ೧೯೭೭’ ಎಂಬ ಕೆತ್ತನೆಯ ವೀರಗಲ್ಲು ತಳಸಡಲಿ ಓರೆಯಾಗಿತ್ತು. ಅದರ ಸಂದಿಯಲ್ಲಿ ಹಕ್ಕಿ ಉದುರಿಸಿ ಹೋಗಿದ್ದ ಬೀಜಬಿದ್ದು ಹುಟ್ಟಿದ್ದ ಗಂಧದ ಸಸಿ ನಳನಳಿಸಿ ಬೆಳೆದಿತ್ತು.
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…