ಎಡಿಟೋರಿಯಲ್

ತಮಿಳು ಚಿತ್ರ, ರಜನಿಕಾಂತ್ ಅಭಿನಯದ ‘ಜೈಲರ್’ಚಿತ್ರವೂ ಕನ್ನಡ ಚಿತ್ರರಂಗವೂ

ನಿನ್ನೆ ರಜನಿಕಾಂತ್ ಅಭಿನಯದ ಚಿತ್ರ ವಿಶ್ವದಾದ್ಯಂತ ತೆರೆಕಂಡಿದೆ. ಬಹುಶಃ ಗಳಿಕೆಯಲ್ಲಿ ಹೊಸ ದಾಖಲೆಯನ್ನು ಬರೆದಿದೆ, ಬರೆಯಲಿದೆ. ಕಿರುತೆರೆ ಕ್ಷೇತ್ರದಲ್ಲಿ ತನ್ನದೇ ಆದ ಸ್ಥಾನ ಪಡೆದುಕೊಂಡಿರುವ ಸನ್ ಜಾಲದ ಪ್ರಸಾರದ ವ್ಯಾಪ್ತಿ ಕೂಡ ಸಂಸ್ಥೆಯ ನಿರ್ಮಾಣದ ಈ ಚಿತ್ರದ ಗೆಲುವಿಗೆ ಹೆಚ್ಚಿನ ಒತ್ತಾಸೆಯೂ ಆಗಿದೆ ಎನ್ನಿ. ಮೊನ್ನೆ ಮಂಗಳವಾರದ ವೇಳೆ ಬಂದ ವರದಿಯ ಪ್ರಕಾರ, ಅಮೆರಿಕದಲ್ಲಿ ಮೊದಲ ಪ್ರದರ್ಶನಕ್ಕೆ ಅತ್ಯಧಿಕ ಗಳಿಕೆ ಮಾಡಲಿರುವ ಚಿತ್ರ ಇದಾಗಲಿದೆ, ಈ ಪ್ರದರ್ಶನದ ಗಳಿಕೆ ಹತ್ತು ಲಕ್ಷ ಡಾಲರ್ ಆಗಬಹುದು.

ಬಿಡುಗಡೆಗೆ ಎರಡು ದಿನಗಳ ಮೊದಲು ಮುಂಗಡವಾಗಿ ಒಂದೂವರೆ ಲಕ್ಷ ಟಿಕೆಟುಗಳ ಮಾರಾಟ ಪಿವಿಆರ್, ಐನಾಕ್ಸ್ ಮತ್ತು ಸಿನಿಪೊಲೀಸ್ ಜಾಲಗಳ ಮೂಲಕ ಆಗಿದೆ ಎನ್ನುವ ವರದಿ ಇದೆ. ತಮಿಳುನಾಡಿನಲ್ಲಿ ಮೊದಲ ದಿನದ ಟಿಕೆಟುಗಳ ಮಾರಾಟ ಮೊನ್ನೆಗೆ 13 ಕೋಟಿ ಆಗಿತ್ತು. ತಮಿಳುನಾಡಿನ ಮಲ್ಟಿಪ್ಲೆಕ್ಸ್‌ಗಳಲ್ಲಿ ಪ್ರವೇಶದ ದರ ಗರಿಷ್ಟ 198.68 ಮತ್ತು ಕನಿಷ್ಠ 60.12 ರೂ.ಗಳು ಎಂಬುದನ್ನು ಗಮನಿಸಬೇಕು. ಮೊದಲ ದಿನದ ಗಳಿಕೆ 20ರಿಂದ 23 ಕೋಟಿ ರೂ. ತಮಿಳುನಾಡಿನಲ್ಲಿ ಮತ್ತು ದೇಶಾದ್ಯಂತ 40 ಕೋಟಿ ರೂ. ಗಳಿಕೆಯ ನಿರೀಕ್ಷೆ ನಿರ್ಮಾಣ ಸಂಸ್ಥೆಯದು. ಕರ್ನಾಟಕದಲ್ಲಿನ ಪ್ರವೇಶದರವನ್ನು ಗಣಿಸಿದರೆ ಮೊದಲ ದಿನದ ಗಳಿಕೆಯೇ ನೂರು ಕೋಟಿ ರೂ. ದಾಟಬಹುದೇನೋ!

‘ಜೈಲರ್’ ಚಿತ್ರದ ಹಿನ್ನೆಲೆಯಲ್ಲಿ ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಇರುವ ಪ್ರವೇಶದರಗಳನ್ನೊಮ್ಮೆ ಗಮನಿಸಬೇಕು. ಒಂದು ಮಾಹಿತಿಯ ಪ್ರಕಾರ, ಮುಂಬೈಯಲ್ಲಿ 170 ರೂ., ದೆಹಲಿಯಲ್ಲಿ 200 ರೂ., ಅಹಮದಾಬಾದ್‌ನಲ್ಲಿ 160 ರೂ., ಕೊಚ್ಚಿಯಲ್ಲಿ 180 ರೂ., ಹೈದರಾಬಾದಿನಲ್ಲಿ 295 ರೂ.ಗಳ ಪ್ರವೇಶ ದರ ಇದೆ. ಅಲ್ಲಿ ಆಂಧ್ರ ಪ್ರದೇಶದಲ್ಲಿ ಬಹುಕೋಟಿ ರೂ. ವೆಚ್ಚದ ಚಿತ್ರಗಳ ಬಿಡುಗಡೆಯ ವೇಳೆ ಪ್ರವೇಶದರ ಹೆಚ್ಚಿಸಬೇಕಾದರೆ, ನಿರ್ಮಾಪಕರು ಸರ್ಕಾರದಿಂದ ಅನುಮತಿ ಪಡೆಯಬೇಕು. ಅದು ಕೂಡ ಮನಸೋ ಇಚ್ಛೆ ಏರಿಸಲು ಅನುಮತಿ ನೀಡುವುದಿಲ್ಲ ಸರ್ಕಾರ.

ಕರ್ನಾಟಕದಲ್ಲಿ ಪ್ರವೇಶದರಕ್ಕೆ ಇತಿಮಿತಿ ಇಲ್ಲ. ಮಲ್ಟಿಪ್ಲೆಕ್ಸ್‌ಗಳಲ್ಲಿನ ದುಬಾರಿ ಪ್ರವೇಶ ದರ ಪ್ರೇಕ್ಷಕನನ್ನು ಚಿತ್ರಮಂದಿರದತ್ತ ಬರದಂತೆ ಮಾಡುತ್ತಿದೆ ಎನ್ನುವ ಆಕ್ಷೇಪದಲ್ಲಿ ಹುರುಳಿಲ್ಲದೆ ಇಲ್ಲ. ಪ್ರವೇಶದರ ನಿಯಂತ್ರಣದ ಕುರಿತಂತೆ ಸರ್ಕಾರ ಮಧ್ಯಪ್ರವೇಶಿಸಲೇಬೇಕು ಎನ್ನುವ ಒತ್ತಾಯ ಇತ್ತು ಮತ್ತು ಇದೆ. ಹಿಂದೊಮ್ಮೆ ಸರ್ಕಾರ ಗರಿಷ್ಟ ಪ್ರವೇಶ ಶುಲ್ಕ 200 ರೂ. ಮೀರಿರಬಾರದು ಎಂದು ಆದೇಶ ಹೊರಡಿಸಿತ್ತು. ಯಾವುದೇ ಆದೇಶ ಬಂದರೂ, ಅದಕ್ಕೆ ತಡೆಯಾಜ್ಞೆ ತರುವುದು ನಮ್ಮಲ್ಲಿ ಹೊಸದೇನೂ ಅಲ್ಲ. ಇಲ್ಲೂ ಹಾಗೆಯೇ ಆಯಿತು. ಪ್ರವೇಶದರವನ್ನು ಮನಸೋ ಇಚ್ಛೆ ಏರಿಸುತ್ತಾರೆ ನಿರ್ಮಾಪಕರು. ಅದರಲ್ಲೂ ಮಲ್ಟಿಪ್ಲೆಕ್ಸ್‌ಗಳು.

ಹ್ಞಾಂ. ‘ಜೈಲರ್’ ಚಿತ್ರ ಬೆಂಗಳೂರಲ್ಲಿ ಮಾತ್ರ ನಿನ್ನೆ ಇದ್ದ ಪ್ರದರ್ಶನಗಳ ಸಂಖ್ಯೆ ಗೊತ್ತೇ? ಒಂದು ಸಾವಿರದವರೆಗೆ. ಅದರಲ್ಲಿ ಕನ್ನಡ, ತೆಲುಗು ಡಬ್ ಆವೃತ್ತಿಗಳೂ ಸೇರಿ. ಬೆಂಗಳೂರು ಚಿತ್ರಮಂದಿರಗಳ ಪ್ರವೇಶದರ ಹಲವೆಡೆ ಸಾವಿರ ರೂ. ಗಡಿ ದಾಟಿದೆ. 1400 ರೂ. ವರೆಗೆ. ಇನ್ನೊಂದೆಡೆ 2000 ಮತ್ತು 2200 ರೂ.! ಮಾತ್ರವಲ್ಲ, ಅಪರೂಪಕ್ಕೆ ಚೆನ್ನಾಗಿ ಹೋಗುತ್ತಿರುವ, ಪ್ರೇಕ್ಷಕರನ್ನು ಆಕರ್ಷಿಸಿರುವ ಕನ್ನಡ ಚಿತ್ರಗಳಿಗೆ ಇದರಿಂದ ತೊಂದರೆಯೂ ಆಗಿದೆ ಎನ್ನುವ ದೂರೂ ಇದೆ. ಮೈಸೂರಿನಲ್ಲಿ ದಿನಕ್ಕೆ ಈ ಚಿತ್ರದ 65 ಪ್ರದರ್ಶನಗಳಿವೆ. ಅದರಲ್ಲಿ 51 ತಮಿಳು, 14 ಕನ್ನಡ ಡಬ್ಬಿಂಗ್ ಅವತರಣಿಕೆ.

ಮೈಸೂರಿನಲ್ಲಿ ಪ್ರವೇಶದರ ಬೆಂಗಳೂರಿನಷ್ಟು; ಶಶಾಂಕ್ ನಿರ್ದೇಶನದ ಕೌಸಲ್ಯಾ ಸುಪ್ರಜಾ ರಾಮ’, ಪಿಆರ್‌ಕೆಯ ಆಚಾರ್ – ‘ಕೊ’, ಹೊಸಬರ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರಗಳು ನಿಧಾನವಾಗಿ ಜನಪ್ರಿಯವಾಗಿ ಪ್ರದರ್ಶನ ಕಾಣುತ್ತಿದ್ದವು.

ಅವುಗಳಲ್ಲಿ ಕೆಲವು ಚಿತ್ರಮಂದಿರಗಳನ್ನಾದರೂ ‘ಜೈಲರ್’ ಕಸಿದುಕೊಂಡಿರಬೇಕು. ಕರ್ನಾಟಕದಲ್ಲಿ ಈ ಚಿತ್ರವನ್ನು ಜಯಣ್ಣ ಅವರ ಹಂಚಿಕಾ ಸಂಸ್ಥೆಯ ಮೂಲಕ ತಮಿಳುನಾಡಿನ ಸಂಸ್ಥೆಯೊಂದು ಬಿಡುಗಡೆ ಮಾಡಿದೆ.

ಪರಭಾಷೆಯ ಯಾವುದೇ ಚಿತ್ರವಾದರೂ ಇಲ್ಲಿನ ಹಂಚಿಕೆದಾರರೇ ಬಿಡುಗಡೆ ಮಾಡುವುದು ವಾಡಿಕೆ. ಹಿಂದಿನ ದಿನಗಳಲ್ಲೂ ತಮಿಳು, ತೆಲುಗು ಚಿತ್ರಗಳನ್ನು ದುಬಾರಿ ಮೊತ್ತ ನೀಡಿ ತಂದು ಬಿಡುಗಡೆ ಮಾಡುತ್ತಿದ್ದ ಉದಾಹರಣೆಗಳಿವೆ. ಈಗ ಡಿಜಿಟಲ್ ದಿನಗಳಲ್ಲಿ ಮಲ್ಟಿಪ್ಲೆಕ್ಸ್‌ಗಳು ಹೆಚ್ಚಾಗುತ್ತಿದ್ದಂತೆ, ಯುಎಫ್‌ಒ, ಕ್ಯೂಬ್‌ಗಳ ಮೂಲಕ ನೇರವಾಗಿ ಚಿತ್ರಮಂದಿರಗಳಿಗೆ ಸಂಪರ್ಕದ ಹಿನ್ನೆಲೆಯಲ್ಲಿ ಹಂಚಿಕಾ ವ್ಯವಸ್ಥೆಯಲ್ಲೂ ಸಾಕಷ್ಟು ಬದಲಾವಣೆ ಆಗಿದೆ. ಬಹುತೇಕ ಕಾರ್ಪೊರೇಟ್ ವ್ಯವಸ್ಥೆ ಆಗಿದೆ. ಆದರೆ ಕನ್ನಡ ಚಿತ್ರರಂಗದಲ್ಲಿ ಎಲ್ಲ ಕಡೆ ಈ ಪಾರದರ್ಶಕ ವ್ಯವಹಾರ ಇಲ್ಲ ಎನ್ನುವ ಮಾತೂ ಕೇಳಿಬರುತ್ತಿದೆ.

‘ಜೈಲರ್’ ಚಿತ್ರದಲ್ಲಿ ರಜನಿಕಾಂತ್ ಅವರೊಂದಿಗೆ ಕನ್ನಡದ ಶಿವರಾಜ್‌ಕುಮಾರ್, ಮಲಯಾಳದ ಮೋಹನ್‌ಲಾಲ್ ನಟಿಸಿದ್ದಾರೆ. ಹಿಂದಿಯ ಜಾಕಿಶ್ರಾಫ್ ಇದ್ದಾರೆ. ಹಾಗಂತ ಇದು ಹಿಂದಿ, ಮಲಯಾಳ ಭಾಷೆಗಳಿಗೆ ಡಬ್ ಆದಂತಿಲ್ಲ.

ಮಲಯಾಳದಲ್ಲಿ ‘ಜೈಲರ್’ ಹೆಸರಿನ ಚಿತ್ರವೂ ಬಂದಿದ್ದು, ರಜನಿಕಾಂತ್ ಅಭಿನಯದ ‘ಜೈಲರ್’ ತಮಿಳು ಚಿತ್ರವಾಗಿಯೇ ಬಿಡುಗಡೆ ಆಗುತ್ತಿದೆ. ಡಬ್ಬಿಂಗ್ ವಿಷಯಕ್ಕೆ ಬರುವುದಾದರೆ, ‘ಜೈಲರ್’ ಕನ್ನಡ ಮತ್ತು ತೆಲುಗು ಭಾಷೆಗಳಿಗೆ ಡಬ್ ಆಗಿದೆ, ಶಿವರಾಜ್‌ಕುಮಾರ್ ಇದೇ ಮೊದಲ ಬಾರಿಗೆ ಪರಭಾಷೆಯ ಚಿತ್ರವೊಂದರಲ್ಲಿ ನಟಿಸಿದ್ದು, ಅವರೇ ಅದಕ್ಕೆ ಡಬ್ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಸಾವಿರದವರೆಗೆ ಈ ಚಿತ್ರದ ಪ್ರದರ್ಶನ ದಿನವಹಿ ಇದೆ. ಆದರೆ ಅದರಲ್ಲಿ ಸುಮಾರು 900ರ ವರೆಗೆ ತಮಿಳು ಮೂಲ ಚಿತ್ರದ ಪ್ರದರ್ಶನವಾದರೆ, ಕನ್ನಡದ ಡಬ್ಬಿಂಗ್ ಅವತರಣಿಕೆಯ ಪ್ರದರ್ಶನದ ಸಂಖ್ಯೆ ಇಪ್ಪತ್ತನ್ನೂ ದಾಟಿಲ್ಲ. ಕನ್ನಡದಲ್ಲಿ ಡಬ್ ಆಗಬೇಕು, ಕರ್ನಾಟಕದಲ್ಲಿ ಕನ್ನಡ ಚಿತ್ರಗಳಷ್ಟೇ ಪ್ರದರ್ಶನ ಆಗಬೇಕು ಎನ್ನುವ ಮಂದಿ ಈಗೆಲ್ಲಿ ಎಂದು ಕನ್ನಡಪ್ರೇಮಿ ಪ್ರೇಕ್ಷಕರು ಕೇಳತೊಡಗಿದ್ದಾರೆ. ತೆಲುಗಿನ ಆದಿಪುರುಷ್’ ಚಿತ್ರ ತೆರೆಕಂಡಾಗಲೂ ಹೀಗೇ ಆಗಿತ್ತು.

ಹಿಂದೆ ಡಬ್ಬಿಂಗ್ ವಿರೋಧದ ದಿನಗಳಲ್ಲಿ ಧಾರಾವಾಹಿಯೊಂದನ್ನು ಡಬ್ ಮಾಡಿ, ಅದರ ವಿರುದ್ಧ ಪ್ರತಿಭಟನೆ ಎದುರಿಸಬೇಕಾಗಿ ಬಂದ ಉದಯ ಟಿವಿ, ಆ ಸರಣಿಯ ಪ್ರಸಾರ ನಿಲ್ಲಿಸಿತು, ಈಗ ತನ್ನದೇ ನಿರ್ಮಾಣದ ಚಿತ್ರದ ಕನ್ನಡ ಡಬ್ಬಿಂಗ್ ಅವತರಣಿಕೆಯನ್ನು ಹೆಚ್ಚು ಸಂಖ್ಯೆಯಲ್ಲಿ ಪ್ರದರ್ಶನ ಮಾಡಲು ಅದಕ್ಕೆ ಸಾಧ್ಯವಾಗದೆ ಇರುವುದಕ್ಕೆ ಅದರ ವ್ಯಾವಹಾರಿಕ ಕಾರಣಗಳಷ್ಟೇ ಹೊರತು ಇನ್ನೇನೂ ಅಲ್ಲ. ರಜನಿಕಾಂತ್ ಅವರು ಕೂಡ ಈ ಚಿತ್ರಕ್ಕೆ ಡಬ್ ಮಾಡಿಲ್ಲ ಎನ್ನುವುದನ್ನು ಗಮನಿಸಬೇಕು.

ಇನ್ನು ರಜನಿಕಾಂತ್ ಅಭಿನಯದ ‘ಜೈಲರ್’ ಚಿತ್ರದ ಬಿಡುಗಡೆಯ ವೇಳೆ ಅಲ್ಲಿನ ಸಂಸ್ಥೆಗಳ ನಿಲುವು, ನಿರ್ಧಾರಗಳನ್ನು ಗಮನಿಸಬೇಕು. ಅಲ್ಲಿನ ಪ್ರದರ್ಶಕರ ಸಂಘ, ತಮಿಳುನಾಡಿನ ಎಲ್ಲ ಚಿತ್ರಮಂದಿರಗಳಲ್ಲೂ ‘ಜೈಲರ್’ ಚಿತ್ರ ಪ್ರದರ್ಶನ ಮಾಡಲು ಕರೆ ನೀಡಿದ್ದಾಗಿ ವರದಿಯಾಗಿತ್ತು.

ಇದು ಎಷ್ಟರ ಮಟ್ಟಿಗೆ ಸಾಧ್ಯವಾಗುತ್ತದೆ ಎನ್ನುವುದು ಬೇರೆ ಮಾತು. ಆದರೆ ಅಂತಹದೊಂದು ನಿಲುವು ರಜನಿಕಾಂತ್ ಅವರ ಜನಪ್ರಿಯತೆ, ಜನಪ್ರೀತಿಯನ್ನು ಹೇಳುತ್ತದೆ.

ಇನ್ನು ಅಲ್ಲಿನ ಕೆಲವು ಸಂಸ್ಥೆಗಳು ನಿನ್ನೆ ಈ ಚಿತ್ರದ ವೀಕ್ಷಣೆಗಾಗಿ ರಜೆಯನ್ನು ಘೋಷಿಸಿವೆ. ರಜೆ ನೀಡಲು ಅವು ಹೇಳಿದ ಕಾರಣ ಒಂದೇ. ಎಲ್ಲಾ ಕಚೇರಿಗಳಲ್ಲಿ ಕೆಲಸ ಮಾಡುವವರು ರಜೆ ಕೇಳುತ್ತಾರೆ. ಈ ಸಂಖ್ಯೆ ಸಾಕಷ್ಟು ಹೆಚ್ಚಾಗಿರು ವುದರಿಂದ ಎಚ್‌ಆರ್ ವಿಭಾಗಕ್ಕೆ ಸಾಕಷ್ಟು ಕೆಲಸದ ಒತ್ತಡ ಉಂಟಾಗುತ್ತದೆ. ಹಾಗಾಗಿ ಸಂಸ್ಥೆ ರಜೆ ಘೋಷಿಸುತ್ತದೆ ಎಂದು ಪ್ರಕಟಿಸಿವೆ.

ಮಾತ್ರವಲ್ಲದೆ, ಸಂಸ್ಥೆಗಳೇ ಟಿಕೆಟನ್ನು ಖರೀದಿಸಿ, ತಮ್ಮ ಉದ್ಯೋಗಿಗಳಿಗೆ ನೀಡಿವೆ. ಚಿತ್ರಗಳು ಪೈರಸಿ ಆಗದಿರಲಿ ಎನ್ನುವ ಕಾರಣಕ್ಕೆ ಈ ನಿರ್ಧಾರ ಎಂದು ಸಂಸ್ಥೆಗಳು ಹೇಳಿಕೊಂಡಿವೆ. ತಮಿಳುನಾಡು ಮಾತ್ರವಲ್ಲ, ಆ ಸಂಸ್ಥೆಗಳ ಶಾಖೆಗಳಿರುವ ಇತರ ಊರುಗಳಲ್ಲೂ ಈ ರಜೆಯನ್ನು ವಿಸ್ತರಿಸಲಾಗಿದೆ. ಟಿಕೆಟುಗಳನ್ನೂ.

‘ಜೈಲರ್’ ಚಿತ್ರದ ಬಿಡುಗಡೆ ಭಾರತೀಯ ಚಿತ್ರರಂಗದಲ್ಲಿ ಮತ್ತೊಂದು ಹೊಸ ದಾಖಲೆಗೆ ದಾರಿಯಾಗಬಹುದು. ಕಳೆದ ವರ್ಷ ‘ಕೆಜಿಎಫ್ ಚಾಪ್ಟರ್ 2’ ಮತ್ತು ‘ಕಾಂತಾರ’ ಚಿತ್ರಗಳು ತನ್ನವೇ ಆದ ದಾಖಲೆಗಳನ್ನು ಬರೆದ ಹಾಗೆ ರಜನಿಕಾಂತ್ ಅವರ ಈ ಚಿತ್ರವೂ ತಮಿಳು ಚಿತ್ರರಂಗದಲ್ಲಿ ಹೊಸ ಇತಿಹಾಸ ಬರೆದರೆ ಆಶ್ಚರ್ಯವಿಲ್ಲ. ಹಾಗೊಂದು ವೇಳೆ ಆದರೆ ಅದು ನಮ್ಮವರೊಬ್ಬರು ತಮಿಳು ಚಿತ್ರರಂಗದಲ್ಲಿ ಮಾಡಿದ ಸಾಧನೆ ಆಗುತ್ತದೆ, ಅಲ್ಲವೇ

lokesh

Recent Posts

ಉಪಟಳ ನೀಡುತ್ತಿದ್ದ ಚಿರತೆ ಸೆರೆ : ನಿಟ್ಟುಸಿರು ಬಿಟ್ಟ ಜನತೆ

ಕೆ.ಆರ್.ಪೇಟೆ : ತಾಲ್ಲೂಕಿನ ಬೂಕನಕೆರೆ ಹೋಬಳಿಯ ಮುದುಗೆರೆ ಗ್ರಾಮದ ಬಳಿ ರೈತರ ಸಾಕು ಪ್ರಾಣಿಗಳನ್ನು ತಿಂದು ಹಾಕುತ್ತಾ ರೈತರಿಗೆ ನಿತ್ಯ…

5 hours ago

ಮೃಗಾಲಯದ ಬೇಟೆ ಚೀತಾ ‘ಬ್ರೂಕ್’ ಇನ್ನಿಲ್ಲ

ಮೈಸೂರು : ವಿಶ್ವವಿಖ್ಯಾತ ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಚುರುಕಿನ ಚಟುವಟಿಕೆಯಿಂದ ಸದಾ ಸಂದರ್ಶಕರ ಗಮನ ಸೆಳೆಯುತ್ತಿದ್ದ ಸುಮಾರು ಸುಮಾರು…

6 hours ago

ಸಿಲಿಂಡರ್‌ ಸ್ಫೋಟ ಪ್ರಕರಣ : ತನಿಖೆ ತೀವ್ರ ; ಮೈಸೂರಲ್ಲಿ ಖಾಕಿ ಕಟ್ಟೆಚ್ಚರ

ಮೈಸೂರು : ಗುರುವಾರ ಸಂಜೆ ಮೈಸೂರಿನ ಅಂಬಾವಿಲಾಸ ಅರಮನೆ ಮುಂಭಾಗ ಸಂಭವಿಸಿದ ಹಿಲೀಯಂ ಸಿಲಿಂಡರ್ ಸ್ಪೋಟ ಪ್ರಕರಣ ಸಂಬಂಧ ನಗರದ…

6 hours ago

ಎಚ್.ಡಿ.ಕೋಟೆ | ತಾಲ್ಲೂಕಿನ ಶೈಕ್ಷಣಿಕ ಪ್ರಗತಿಗೆ ಮಾದರಿ ಕಾರ್ಯಕ್ರಮ

ಎಚ್.ಡಿ.ಕೋಟೆ : ತಾಲ್ಲೂಕಿನಲ್ಲಿ ಶೈಕ್ಷಣಿಕ ಪ್ರಗತಿಗೆ ಅಗತ್ಯವಾದ ಮಾದರಿ ಕಾರ್ಯಕ್ರಮಗಳನ್ನು ಹಗಲಿರುಳು ಎನ್ನದೆ ಶಿಕ್ಷಣ ಇಲಾಖೆಯವರು ನಡೆಸುತ್ತಿದ್ದಾರೆ ಎಂದು ಶಾಸಕ…

6 hours ago

ಹೊಗೇನಕಲ್‌ ಜಲಪಾತಕ್ಕೆ ಪ್ರವಾಸಿಗರ ದಂಡು

ಹನೂರು : ಕರ್ನಾಟಕದ ನಯಾಗಾರ ಎಂದೇ ಪ್ರಖ್ಯಾತಿ ಪಡೆದಿರುವ ಹೊಗೇನಕಲ್ ಜಲಪಾತ ನೋಡಲು ತಮಿಳುನಾಡಿನ ಭಾಗದಿಂದ ಪ್ರವಾಸಿಗರ ದಂಡೇ ಹರಿದುಬರುತ್ತಿದ್ದು,…

6 hours ago

ಪುಷ್ಪ-2 ಕಾಲ್ತುಳಿತ ಪ್ರಕರಣ ; ವರ್ಷದ ಬಳಿಕ ಚಾರ್ಜ್‌ಶೀಟ್‌ ಸಲ್ಲಿಕೆ

ಹೈದರಾಬಾದ್‌ : ಪುಷ್ಪ-2 ಸಿನಿಮಾ ವಿಶೇಷ ಪ್ರದರ್ಶನದ ವೇಳೆ ಉಂಟಾದ ಕಾಲ್ತುಳಿತ ಪ್ರಕರಣದಲ್ಲಿ ವರ್ಷದ ಬಳಿಕ ಇದೀಗ ಪೊಲೀಸರು ಕೋರ್ಟ್ಗೆ…

7 hours ago