ಎಡಿಟೋರಿಯಲ್

ಮನುಕುಲ ವಿಕಾಸಕ್ಕೆ ಹೊಸ ಬೆಳಕು ಚೆಲ್ಲಿದ ಸ್ವಾಂಟೆ ಪಾಬೋ

ಹೋಮೋ ಸೇಪಿಯೆನ್‌ಗಳ ಹತ್ತಿರದ ಸಂಬಂಧಿಯಾಗಿರುವ ನಿಯಾಂಡರ್ತಾಲ್‌ಗಳ ಜೀನೋಮ್‌ಅನ್ನು ಅನುಕ್ರಮಗೊಳಿಸಿದ್ದಕ್ಕೆ ನೊಬೆಲ್ ಪುರಸ್ಕಾರ

ಕಾರ್ತಿಕ್ ಕೃಷ್ಣ

ಮಾನವಕುಲಕ್ಕೆ ತನ್ನ ಪೂರ್ವಜರ ಬಗ್ಗೆ ಎಷ್ಟು ಕುತೂಹಲವಿದೆಯೋ, ಅಷ್ಟೇ ಪ್ರಶ್ನೆಗಳಿವೆ. ನಾವು ವಿಕಾಸಗೊಂಡಿದ್ದು ಹೇಗೆ? ನಮ್ಮ ಮೂಲಪುರುಷರ ಜೊತೆ ನಮಗಿದ್ದ ಸಂಬಂಧ ಎಂತಹದ್ದು? ಇತರ ಹೋಮಿನಿನ್‌ಗಳಿಗೂ ಹಾಗೂ ನಮಗೂ ಇರುವ ವ್ಯತ್ಯಾಸವೇನು? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಆಗಾಗ ನಡೆಯುತ್ತಿರುತ್ತದೆ. ಇಲ್ಲಿ ನಾವು ಎಂದರೆ ಈಗಿರುವ ಮನುಕುಲ – ಹೋಮೋ ಸೇಪಿಯನ್ಸ್. ಈ ಕ್ಷೇತ್ರದಲ್ಲಿ ಅಗಾಧವಾದ ಸಂಶೋಧನೆಗೈದು, ಮನುಕುಲದ ವಿಕಾಸದ ಬಗ್ಗೆ ಹೊಸ ವಿಚಾರಗಳನ್ನು ಕಲೆಹಾಕಿದ ಸ್ವೀಡಿಷ್ ವಿಜ್ಞಾನಿ ಸ್ವಾಂಟೆ ಪಾಬೊ ಈ ಬಾರಿಯ ಶರೀರಶಾಸ್ತ್ರ ಅಥವಾ ಔಷಧಕ್ಕಾಗಿ ನೀಡುವ ನೊಬೆಲ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ತಮಗೆ ನೊಬೆಲ್ ಪ್ರಶಸ್ತಿ ದೊರೆತ ಸಂಗತಿಯನ್ನು ತನ್ನ ಸಹೋದ್ಯೋಗಿಗಳಿಂದ ತಿಳಿದ ಸ್ವಾಂಟೆ, ಇದೊಂದು ಕುಚೇಷ್ಟೆ ಇರಬಹುದೇನೋ ಎಂದು ನಕ್ಕಿದ್ದರಂತೆ!

ತನ್ನ ಅಪ್ರತಿಮ ಸಂಶೋಧನೆಯ ಮೂಲಕ ಪಾಬೋ, ಯಾವುದನ್ನು ಅಸಾಧ್ಯ ಎಂದು ಬಣ್ಣಿಸಲಾಗುತ್ತಿತ್ತೋ ಅದನ್ನು ಸಾಧಿಸಿ ತೋರಿಸಿದ್ದಾರೆ. ಹೋಮೋ ಸೇಪಿಯೆನ್‌ಗಳ ಹತ್ತಿರದ ಸಂಬಂಧಿಯಾಗಿರುವ ನಿಯಾಂಡರ್ತಾಲ್‌ಗಳ ಜೀನೋಮ್‌ಅನ್ನು ಅನುಕ್ರಮಗೊಳಿಸಿದ್ದೇ ಆ ಅಸಾಧ್ಯ ಕಾರ್ಯ. ಜೀನೋಮ್‌ನಲ್ಲಿ ಡಿಎನ್‌ಎ ನ್ಯೂಕ್ಲಿಯೊಟೈಡ್‌ಗಳು ಅಥವಾ ಬೇಸ್‌ಗಳ ಕ್ರಮವನ್ನು ಕಂಡುಹಿಡಿಯುವುದಕ್ಕೆ ‘ಜೀನೋಮ್ ಅನುಕ್ರಮಣಿಕೆ’ (Genome Sequencing) ಎನ್ನುತ್ತಾರೆ.

ಅಂದಹಾಗೆ ಜಿನೊಮ್ ಎಂದರೆ ಜೀವಿಯೊಂದರ ಸಂಪೂರ್ಣ ಆನುವಂಶಿಕ ಮಾಹಿತಿ. ಅದಲ್ಲದೆ ‘ಡೆನಿಸೋವಾ’ ಎಂಬ ಅಪರಿಚಿತ ಹೋಮಿನಿನ್‌ನ ಆವಿಷ್ಕಾರ ಮಾಡಿದ್ದು ಕೂಡ ಇವರೇ. ಮುಖ್ಯವಾಗಿ, ಈಗಿನ ಹೋಮೋ ಸೇಪಿಯನ್ಸ್‌ಗೆ ಡೆನಿಸೋವಗಳಿಂದಲೂ ವಂಶವಾಹಿಗಳ ವರ್ಗಾವಣೆಯಾಗಿದೆ ಎಂದು ಅವರು ಪ್ರತಿಪಾದಿಸಿದ್ದರು.

ಪಾಬೊ ಅವರ ಅನ್ವೇಷಣೆಯ ಕುರಿತು ತಿಳಿಯುವುದರ ಮುಂಚೆ ನಾವು ಆಧುನಿಕ ಮನುಷ್ಯನ ಅಥವಾ ಹೋಮೋ ಸೇಪಿಯನ್‌ಗಳ ವಿಕಸನದ ಕುರಿತು ಒಂದಷ್ಟು ತಿಳಿದುಕೊಳ್ಳುವುದು ಉತ್ತಮ. ಅದನ್ನು ತಿಳಿದುಕೊಳ್ಳುವುದರಲ್ಲಿ ಪ್ರಾಗ್ಜೀವಶಾಸ್ತ್ರ ಮತ್ತು ಪುರಾತತ್ವಶಾಸ್ತ್ರವು ಅನೇಕ ಮಹತ್ವದ ತಿರುವುಗಳನ್ನು ನೀಡಿದೆ. ಅಧ್ಯಯನಗಳ ಪ್ರಕಾರ ಹೋಮೋ ಸೇಪಿಯನ್‌ಗಳು ಈ ಭೂಮಿಯಲ್ಲಿ ಮೊದಲು ಕಾಣಿಸಿಕೊಂಡದ್ದು ಸುಮಾರು 3 ಲಕ್ಷ ವರ್ಷಗಳ ಹಿಂದೆ, ಹಾಗೆಯೇ ನಮ್ಮ ಹತ್ತಿರದ ಸಂಬಂಧಿಯಾದ ನಿಯಾಂಡರ್ತಲ್‌ಗಳ ಸಂತತಿ 4 ಲಕ್ಷ ವರ್ಷಗಳ ಹಿಂದೆ ಮೊದಲ ಬಾರಿ ಕಾಣಿಸಿಕೊಂಡು ಈಚೆಗೆ ಸುಮಾರು ಮೂವತ್ತು ಸಾವಿರ ವರುಷಗಳ ಹಿಂದೆ ನಶಿಸಿತ್ತು. ಎಪ್ಪತ್ತು ಸಾವಿರ ವರುಷಗಳ ಹಿಂದೆ ಹೋಮೋ ಸೇಪಿಯನ್‌ಗಳ ಗುಂಪು ಆಫ್ರಿಕಾದಿಂದ ಮಧ್ಯ ಪ್ರಾಚ್ಯಕ್ಕೆ ವಲಸೆ ಬಂದು ಪ್ರಪಂಚದ ಇನ್ನಿತರ ಭಾಗಗಳಲ್ಲಿ ನೆಲೆಸಿತು ಎಂಬುದು ತಿಳಿದಿರುವ ಸಂಗತಿ. ಹೀಗಾಗಿ ಹೋಮೋ ಸೇಪಿಯನ್ ಹಾಗೂ ನಿಯಾಂಡರ್ತಲ್‌ಗಳು ಸಾವಿರಾರು ವರುಷಗಳ ಕಾಲ ಸಹಬಾಳ್ವೆ ನಡೆಸಿರುವ ಸಾಧ್ಯತೆಯಿದೆ. ಆದರೆ ಅವುಗಳ ಜೊತೆ ಹೋಮೋ ಸೇಪಿಯನ್‌ಗಳ ಸಂಬಂಧ ಹೇಗಿತ್ತು ಎಂಬುದನ್ನು ತಿಳಿಯಲು ಜಿನೊಮ್ ಅನುಕ್ರಮಣಿಕೆಯ ಅಗತ್ಯವಿತ್ತು. ಇದೇ ಕಾರ್ಯವನ್ನು ಯಶಸ್ವಿಯಾಗಿ ಮಾಡಿ ಪಾಬೊ ನೊಬೆಲ್ ಗೆ ಭಾಜನರಾಗಿದ್ದು.

ಆದರೆ ಆ ಕಾರ್ಯ ಅಷ್ಟೊಂದು ಸುಲಭವಾಗಿರಲಿಲ್ಲ. ಪಳೆಯುಳಿಕೆಗಳಿಂದ ಸಿಕ್ಕಿದ ಡಿಎನ್‌ಎಗಳು ಹಲವಾರು ಕಾರಣಗಳಿಂದ ಮಾರ್ಪಾಡುಗೊಂಡು ಅಪೂರ್ಣ ಮಾಹಿತಿಗಳನ್ನಷ್ಟೇ ಒದಗಿಸಲು ಶಕ್ತವಾಗಿತ್ತು. ಜೊತೆಗೆ ಸೂಕ್ಷ್ಮಕ್ರಿಮಿಗಳ ಡಿಎನ್‌ಎ ಕೂಡ ಅವುಗಳೊಂದಿಗೆ ಬೆರೆತು ಅಶುದ್ಧಗೊಂಡು ಅನ್ವೇಷಣೆಗೆ ಉಪಯುಕ್ತ ಮಾಹಿತಿಯನ್ನು ನೀಡದ ಸ್ಥಿತಿಯಲ್ಲಿರುತ್ತಿದ್ದವು. 1990 ರಲ್ಲಿ ಜರ್ಮನಿಯ ಮ್ಯೂನಿಚ್ ವಿಶ್ವವಿದ್ಯಾನಿಯದಲ್ಲಿ ಪ್ರಾಧ್ಯಾಪಕರಾಗಿ ಸೇರಿದ ಪಾಬೋ, ನಿಯಾಂಡರ್ತಲ್‌ಗಳ ಮೈಟೊಕಾಂಡ್ರಿಯ ಡಿಎನ್‌ಎಗಳ ಮೇಲೆ ಅಧ್ಯಯನ ನಡೆಸಲು ಶುರುಮಾಡಿದರು. ಅದರಲ್ಲಿ ಯಶಸ್ವಿಯಾದರು ಕೂಡ! 40000 ವರುಷ ಹಳೆಯ ಎಲುಬಿನಲ್ಲಿ ಕಂಡು ಬಂದ ಇಂತಹ ಡಿಎನ್‌ಎಗಳ ಒಂದು ಭಾಗದಿಂದ ಅನುಕ್ರಮವನ್ನು ಸಂಗ್ರಹಿಸಿ, ಮೊದಲ ಬಾರಿಗೆ ಮಾನವರ ಹತ್ತಿರದ ಸಂಬಂಧಿಗಳ ಡಿಎನ್‌ಎ ಅನುಕ್ರಮದ ಮಾಹಿತಿ ನಮ್ಮ ಕೈಗೆ ಸಿಗುವಂತೆ ಮಾಡಿದರು. ಹೀಗೆ ಸಿಕ್ಕ ಮಾಹಿತಿ ಬೊಗಸೆಯಷ್ಟೇ ಇದ್ದರೂ, ಅದನ್ನೇ ಸವಾಲಾಗಿ ಸ್ವೀಕರಿಸಿದ ಪಾಬೋ, ಮ್ಯಾಕ್ಸ್ ಪ್ಲಾಂಕ್ ಸಂಶೋಧನಾ ಸಂಸ್ಥೆಯಲ್ಲಿ ಮತ್ತಷ್ಟು ಆಧುನಿಕ ತಂತ್ರಜ್ಞಾನಗಳನ್ನು ಬಳಸಿ 2010 ರ ಸುಮಾರಿಗೆ ನಿಯಾಂಡರ್ತಲ್‌ಗಳ ಪರಿಪೂರ್ಣ ಜಿನೊಮ್ ಅನುಕ್ರಮವನ್ನು ಪ್ರಕಟಿಸಿ, ಯಾವುದು ಅಸಾಧ್ಯ ವೆಂದೇ ಬಣ್ಣಿಸಲಾಗುತ್ತಿತ್ತೋ ಅದನ್ನು ಸಾಧಿಸಿ ತೋರಿಸಿದರು.

2008 ರಲ್ಲಿ ಸೈಬೀರಿಯಾದ ಗುಹೆಯಲ್ಲಿ ಕಿರು ಬೆರಳಿನ ಪಳೆಯುಳಿಕೆಯೊಂದು ದೊರೆತಾಗ ಅದರ ಡಿಎನ್‌ಎ ಅನುಕ್ರಮವನ್ನು ಅಧ್ಯಯನ ಮಾಡಿದ ಪಾಬೋ ಮತ್ತವರ ತಂಡದವರು ಅದ್ಭುತವಾದ ಅನ್ವೇಷಣೆ ಮಾಡಿದ್ದರು. ಅಂತಹ ಅನುಕ್ರಮ ಹಿಂದೆಂದೂ ಕಂಡುಬಂದಿರಲಿಲ್ಲ. ಅದನ್ನು ಇಲ್ಲಿಯ ತನಕ ಅಗೋಚರವಾಗಿದ್ದ ಹೋಮಿನಿನ್ ಎಂದು ನಿರೂಪಿಸಿದ ಪಾಬೋ, ಅದಕ್ಕೆ ಡೆನಿಸೋವಾ ಎಂಬ ಹೆಸರಿಸಿದರು. ಬೇರೆ ಬೇರೆ ಭಾಗದ ಜನರ ಡಿಎನ್‌ಎಗಳನ್ನೂ ಅಭ್ಯಸಿಸಿದ ಮೇಲೆ ವಂಶವಾಹಿಗಳು ನಿಯಾಂಡರ್ತಲ್‌ಗಳಿಂದ ಹೋಮೋ ಸೇಪಿಯೆನ್‌ಗೆ ಹೇಗೆ ವರ್ಗಾವಣೆಗೊಂಡಿತ್ತೋ ಅದೇ ರೀತಿ ಡೆನಿಸೊವಾಗಳಿಂದಲೂ ವರ್ಗಾವಣೆಗೊಂಡಿದೆ ಎಂದು ತಿಳಿದುಬಂತು. ಆಗ್ನೇಯ ಏಷ್ಯಾದ ಜನರ ವಂಶವಾಹಿಗಳಲ್ಲಿ ಶೇಕಡಾ 6 ರಷ್ಟು ಡೆನಿಸೊವಾ ವಂಶವಾಹಿಗಳಿರುವುದನ್ನು ಅಧ್ಯಯನಗಳು ಸಾಬೀತುಪಡಿಸಿವೆ. ಪಾಬೋ ಮತ್ತವರ ತಂಡದ ಅಮೋಘ ಅನ್ವೇಷಗಳಿಂದ paleogenomics ಎಂಬ ವಿಜ್ಞಾನದ ಹೊಸ ಅಂಗವೇ ತೆರೆದುಕೊಂಡಿತು. ಪಾಬೋ ಅವರ ಅಧ್ಯಯನಗಳನ್ನು ಬಳಸಿಕೊಂಡು ಇನ್ನೂ ಅನೇಕ ಸಂಶೋಧನೆಗಳು ನಡೆಯುತ್ತಿವೆ.

ಕೆಲವೊಂದು ಭಾಗದಲ್ಲಿರುವ ಆಧುನಿಕ ಮಾನವರ ಶಾರೀರಿಕ ಶಕ್ತಿಗಳ ಹಿಂದಿರುವ ಕಾರಣಗಳು ಬಯಲಾಗಿದ್ದು ಪಾಬೋ ಅವರ ಸಂಶೋಧನೆಗಳಿಂದಲೇ. ಉದಾಹರಣೆಗೆ ಟಿಬೆಟಿನ ಜನರು ಎತ್ತರದ ಪ್ರದೇಶದಲ್ಲಿ ಜೀವಿಸಲು ಶಕ್ತರಾಗಿರುತ್ತಾರೆ. ಅದಕ್ಕೆ ಕಾರಣ ಅವರಲ್ಲಿರುವ EPAS1 ಎಂಬ ಡೆನಿಸೋವಾ ವಂಶವಾಹಿ. ಹಾಗೆಯೇ ವಿವಿಧ ರೀತಿಯ ಸೋಂಕುಗಳಿಗೆ ನಮ್ಮ ದೇಹ ಒಡ್ಡುವ ಪ್ರತಿರಕ್ಷಣಾ ಪ್ರತಿಕ್ರಿಯೆಯ ಮೇಲೆ ನಿಯಾಂಡರ್ತಲ್ ಜೀನ್‌ಗಳು ಪರಿಣಾಮ ಬೀರುತ್ತವೆ.

ನಿಮಗೆ ತಿಳಿದಿರಲಿ, ಆಧುನಿಕ ಮಾನವರಂತೆ ನಿಯಾಂಡರ್ತಲ್‌ಗಳು ಗುಂಪುಗಳಲ್ಲಿ ವಾಸಿಸುತ್ತಿದ್ದರು ಮತ್ತು ದೊಡ್ಡ ಮಿದುಳುಗಳನ್ನು ಹೊಂದಿದ್ದರು. ಅವರು ಉಪಕರಣಗಳನ್ನು ಸಹ ಬಳಸಿಕೊಂಡರು. ಆದರೆ ಸಾವಿರಾರು ವರುಷಗಳ ಸಮಯದಲ್ಲಿ ಇವುಗಳು ಅಭಿವೃದ್ಧಿ ಹೊಂದಿದ್ದು ಬಹಳ ಕಡಿಮೆಯೇ! ಇಂತಹ ಜಟಿಲ ಸಂಬಂಧಗಳ ನಡುವೆ, ಹೋಮೋ ಸೇಪಿಯನ್ಸ್ ಮತ್ತು ನಮ್ಮ ನಶಿಸಿಹೋದ ಸಂಬಂಧಿಗಳ ನಡುವಿನ ಆನುವಂಶಿಕ ವ್ಯತ್ಯಾಸಗಳು ಬೆಳಕಿಗೆ ಬಂದದ್ದು ಪಾಬೊ ಅವರ ಅನ್ವೇಷಣೆಗಳಿಂದ. ಇನ್ನೂ ಸಾಕಷ್ಟು ಅಧ್ಯಯನಗಳು ನಡೆಯುತ್ತಿವೆ. ಆಧುನಿಕ ತಂತ್ರಜ್ಞಾನದ ಸೌಲಭ್ಯವೂ ಇದೆ. ಈ ಎಲ್ಲಾ ಅಧ್ಯಯನಗಳ ಅಂತಿಮ ಗುರಿಯೊಂದೇ – ಈಗಿರುವ ಮಾನವನ ಯಾವ ಲಕ್ಷಣ ಆತನನ್ನು ಅನನ್ಯ ಎಂದು ನಿರೂಪಿಸುತ್ತದೆ ಎಂದು!

andolana

Recent Posts

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

1 hour ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

2 hours ago

ಮುಡಾ: ಇಡಿ ದಾಳಿಗೆ ರಾಜಕೀಯ ಕಾರಣವಲ್ಲ; ಅಶೋಕ್

ಜಾರಿ ನಿರ್ದೇಶನಾಲಯದ ದಾಳಿಗೆ ರಾಜಕೀಯ ಕಾರಣವಲ್ಲ, 3-4 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದು ಹೇಳಿದ್ದೇ ಕಾಂಗ್ರೆಸ್‌ನವರು: ಪ್ರತಿಪಕ್ಷ…

2 hours ago

BJP ಟಿಕೆಟ್‌ ವಂಚನೆ: ಆರೋಪ ತಳ್ಳಿ ಹಾಕಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ನವದೆಹಲಿ: ನನಗೆ ಸಹೋದರಿಯೇ ಇಲ್ಲ ಮತ್ತು ಗೋಪಾಲ್ ಜೋಶಿ ಮೇಲಿನ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸಚಿವ…

2 hours ago

ಮಂಡ್ಯ ಟೂ ಇಂಡಿಯಾ: ಬೃಹತ್‌ ಉದ್ಯೋಗ ಮೇಳಕ್ಕೆ ಮೊದಲ ದಿನ ಅಭೂತಪೂರ್ವ ಸ್ಪಂದನೆ

ಮಂಡ್ಯ ಟೂ ಇಂಡಿಯಾ; ಸಕ್ಕರೆ ನಾಡಿನಲ್ಲಿ 2 ದಿನಗಳ ಬೃಹತ್ ಉದ್ಯೋಗ ಮೇಳ 150ಕ್ಕೂ ಹೆಚ್ಚು ಕಂಪನಿಗಳ ಭಾಗಿ, ಸಾವಿರಾರು…

3 hours ago

ಮುಡಾ ಮೇಲೆ ಇಡಿ ದಾಳಿ: ಸಿಬಿಐ ತನಿಖೆ ನಡೆಸುವರೆಗೂ ಹೋರಾಟ ಮುಂದುವರಿಕೆ: ಸ್ನೇಹಮಯಿ ಕೃಷ್ಣ

ಮೈಸೂರು: ಮುಡಾ ಮೇಲಿನ ಇಡಿ ಕಾರ್ಯಾಚರಣೆ ಕೇವಲ ಸಿಎಂ ಸಿದ್ದರಾಮಯ್ಯ ಅವರ ಕುಟುಂಬದವರ ಪ್ರಕರಣವಲ್ಲ. ಸಂಪೂರ್ಣ ಮುಡಾ ಅಕ್ರಮದ ಬಗ್ಗೆ…

3 hours ago