ಎಡಿಟೋರಿಯಲ್

ನಾಡಹಬ್ಬ ದಸರೆ ನಾಡಿನ ಹಬ್ಬವಾಗುವುದೆಂದು?

ಲೋಕೇಶ್ ಕಾಯರ್ಗ

ದಸರೆ ನಮ್ಮ ನಾಡಹಬ್ಬ ಎಂದು ಹೇಳುವುದು ವಾಡಿಕೆ. ಸರಕಾರವೂ ತನ್ನ ಹೇಳಿಕೆಗಳಲ್ಲಿ, ಜಾಹೀರಾತುಗಳಲ್ಲಿ ನಾಡಹಬ್ಬ ದಸರೆ ಎಂದೇ ಉಲ್ಲೇಖಿಸುತ್ತದೆ. ನಿಜಾರ್ಥದಲ್ಲಿ ನಾಡಹಬ್ಬ ಎಂದರೆ ಅದು ಇಡೀ ನಾಡಿನ ಹಬ್ಬವಾಗಬೇಕು. ವಿಶಾಲ ಕರ್ನಾಟಕದ ಉದ್ದಗಲಕ್ಕೂ ಹಬ್ಬದ ಸಂಭ್ರಮ ಕಾಣಿಸಬೇಕು. ಹಬ್ಬದ ನೆಪದಲ್ಲಿ ನಡೆಯುವ ನಾನಾ ಕಾರ‌್ಯಕ್ರಮಗಳಲ್ಲಿ ನಾಡ ಬಾಂಧವರೆಲ್ಲರೂ ಪಾಲ್ಗೊಳ್ಳಬೇಕು.
ಆದರೆ ಸದ್ಯ ಮೈಸೂರನ್ನು ಕೇಂದ್ರವಾಗಿಟ್ಟುಕೊಂಡು ಸರಕಾರದ ಅನುದಾನದಲ್ಲಿ ನಡೆಯುವ ದಸರೆಯ ಕಾರ‌್ಯಕ್ರಮಗಳೇ ನಮ್ಮ ಪಾಲಿಗೆ ನಾಡಹಬ್ಬ. ನಾಡಿನ ಮುಖ್ಯಮಂತ್ರಿ, ರಾಜ್ಯಪಾಲರು ಸೇರಿ ಸರಕಾರದ ವರಿಷ್ಠರೆಲ್ಲರೂ ಈ ಕಾರ‌್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ನಾಡಹಬ್ಬ ಎಂಬ ಪದಕ್ಕೆ ಅಧಿಕೃತ ಮುದ್ರೆ ನೀಡಿದ್ದಾರೆ.
ರಾಜ್ಯದ ನಾನಾ ಭಾಗಗಳಲ್ಲಿ ಇತ್ತೀಚೆಗೆ ದಸರಾ ಸಂಭ್ರಮ ಆಚರಿಸಲಾ ಗುತ್ತಿದೆ. ಮಡಿಕೇರಿ, ಮಂಗಳೂರು ಮುಂತಾದ ಕಡೆಗಳಲ್ಲೂ ದಸರೆಯನ್ನು ವೈಭವಯುತವಾಗಿ ಆಚರಿಸಲಾಗುತ್ತಿದೆ. ಆದರೆ ಇವೆಲ್ಲವೂ ನವರಾತ್ರಿ ಹಬ್ಬದ ಆಚರಣೆಯಾಗಿ ಉಳಿದಿದೆಯೇ ಹೊರತು ನಾಡಹಬ್ಬ ಆಗಿಲ್ಲ .
412 ವರ್ಷಗಳ ಇತಿಹಾಸವುಳ್ಳ ಮೈಸೂರು ದಸರೆಯನ್ನೇ ನಾವು ನಾಡಹಬ್ಬವೆಂದು ಪರಿಗಣಿಸಿದ್ದೇವೆ. ಆದರೆ ಈ ಪದಕ್ಕೆ ಅನ್ವರ್ಥವಾಗಿ ಇದು ನಾಡಿನ ಹಬ್ಬವಾಗಿ ಉಳಿದಿದೆಯೇ ಎಂಬ ಪ್ರಶ್ನೆಗೆ ನಾವಿಂದು ಉತ್ತರ ಕಂಡುಕೊಳ್ಳಬೇಕಾಗಿದೆ. ದಸರಾ ಕಾರ‌್ಯಕ್ರಮದ ಹೆಸರಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆಯುವ ಕಾರ‌್ಯಕ್ರಮಗಳು, ಪೂರ್ವಸಿದ್ಧತಾ ಸಭೆ, ಅನುದಾನದ ಹಂಚಿಕೆ ಇದೆಲ್ಲವನ್ನೂ ಗಮನಿಸಿದರೆ ನಾಡಹಬ್ಬದ ವ್ಯಾಪ್ತಿ ಕಿರಿದಾಗಿ ವಿಶ್ವವಿಖ್ಯಾತ ದಸರೆ ಮೈಸೂರು ಹಬ್ಬದ ಮಟ್ಟಕ್ಕೆ ಇಳಿದಿದೆ ಎನ್ನುವುದು ನಾಡಿನ ಪ್ರಜ್ಞಾವಂತರ ಆತಂಕ ಮತ್ತು ಆರೋಪ.
ರಾಜಾಶ್ರಯದಲ್ಲಿ ಆಚರಿಸುತ್ತಿದ್ದ ದಸರೆಯನ್ನು ಮೈಸೂರು ದಸರೆ ಅಥವಾ ಮಹಾರಾಜರ ದರ್ಬಾರ್ ಎಂದು ಕಾಣಲಾಗುತ್ತಿತ್ತು. ಪ್ರಜೆಗಳ ದರ್ಬಾರು ಆರಂಭವಾದ ಬಳಿಕ ನಾವು ಚಾಮುಂಡೇಶ್ವರಿಯನ್ನು ಅಂಬಾರಿಯಲ್ಲಿ ಕೂರಿಸಿ ಮೈಸೂರು ಹಬ್ಬಕ್ಕೆ ನಾಡಹಬ್ಬದ ಪಟ್ಟ ಕಟ್ಟಿದೆವು. ದಸರಾ ಸಂಭ್ರಮವನ್ನು ಇಡೀ ನಾಡಿಗೆ ವಿಸ್ತರಿಸುವ ಕೆಲಸವೂ ನಡೆಯಿತು. ನೀವೇ ನೆನಪಿಸಿಕೊಳ್ಳಿ. ದಶಕಗಳ ಹಿಂದೆ ತಾಲ್ಲೂಕು ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ ನಡೆಯುತ್ತಿದ್ದ ದಸರಾ ಕ್ರೀಡಾಕೂಟ ಎಂದರೆ ಹಬ್ಬದ ಸಂಭ್ರಮವೇ ಮೇಳೈಸುತ್ತಿತ್ತು. ಇದರಲ್ಲಿ ಗೆಲ್ಲುವುದಕ್ಕಾಗಿಯೇ ಕ್ರೀಡಾಪಟುಗಳು ತಿಂಗಳುಗಟ್ಟಲೆ ಬೆವರು ಸುರಿಸುತ್ತಿದ್ದರು. ಮೈಸೂರಿನಲ್ಲಿ ನಡೆಯುತ್ತಿದ್ದ ಕ್ರೀಡಾಕೂಟದ ಅಂತಿಮ ಹಣಾಹಣಿ ರೋಚಕವಾಗಿರುತ್ತಿತ್ತು. ಕ್ರೀಡಾಕೂಟ ಮುಗಿದ ಬಳಿಕ ಮೈಸೂರನ್ನು ಸುತ್ತು ಹಾಕಿ ತಮ್ಮ ಜಿಲ್ಲೆಗಳಿಗೆ ಮರಳುತ್ತಿದ್ದ ಕ್ರೀಡಾಪಟುಗಳಿಗೆ ಇದೊಂದು ಅವಿಸ್ಮರಣೀಯ ಕ್ಷಣವಾಗಿ ನೆನಪಲ್ಲಿ ಉಳಿಯುತ್ತಿತ್ತು. ದಸರಾದ ಕುಸ್ತಿ ಸ್ಪರ್ಧೆಯಲ್ಲಿ ಸೆಣಸಲು ಇಡೀ ದೇಶದ ಕುಸ್ತಿ ಸ್ಪರ್ಧಿಗಳು ಹಾತೊರೆಯುತ್ತಿದ್ದರು. ಕಲೆ, ನೃತ್ಯ, ಸಾಹಿತ್ಯ ಮತ್ತಿತರ ಕ್ಷೇತ್ರದ ಉದಯೋನ್ಮುಖ ಪ್ರತಿಭೆಗಳು ಮೈಸೂರು ದಸರಾದ ಬೆಳಕಿನಲ್ಲಿ ಪ್ರಜ್ವಲಿಸಲು ಹಂಬಲಿಸುತ್ತಿದ್ದರು.
ಇದು ದಶಕಗಳ ಹಿಂದಿನ ದಸರೆಯ ಕಥೆ. ಇಂದು ದಸರೆಯ ಕ್ರೀಡಾಕೂಟಕ್ಕೆ ಯಾವ ಸಿದ್ಧತೆಯೂ ಬೇಕಿಲ್ಲ. ಮೊನ್ನೆ ಮಡಿಕೇರಿಯಲ್ಲಿ ನಡೆದ ದಸರಾ ಕ್ರೀಡಾಕೂಟದಲ್ಲಿ ಫುಟ್ಭಾಲ್ ಮೈದಾನ ಇನ್ನೂ ಸಿದ್ದಗೊಂಡಿರಲಿಲ್ಲ. ಆಟಗಾರರೇ ಮುಂದೆ ನಿಂತು ಮೈದಾನವನ್ನು ಸಿದ್ದಪಡಿಸಬೇಕಾಯಿತು. 2019ರ ದಸರಾದಲ್ಲಿ ವಿಜೇತ ಕ್ರೀಡಾಪಟುಗಳು ಐದಾರು ಸಾವಿರ ರೂ.ಗಳ ಚೆಕ್‌ಗಾಗಿ ತಿಂಗಳುಗಟ್ಟಲೆ ಕಾದಿದ್ದರು. ಇನ್ನು ಈಗ ದಸರೆಯ ವೇಳೆ ವೇದಿಕೆ ಏರಲು ವಿಶೇಷ ಪ್ರತಿಭೆ ಬೇಕಿಲ್ಲ. ಒಂದಷ್ಟು ಪ್ರಭಾವ ಬಳಸಿದರೆ ಸಾಕು. ಯುವ ದಸರಾದಲ್ಲಿ ಸಿನಿ ತಾರೆಯರ ಅಬ್ಬರ. ಹೊರಗಿನ ಕಲಾವಿದರಿಗೆ ಲಕ್ಷಾಂತರ ರೂ. ಸಂಭಾವನೆಯಾದರೆ ಸ್ಥಳೀಯ ಕಲಾವಿದರಿಗೆ ಜುಜುಬಿ ಮೊತ್ತ. ಈಗ ದಸರೆ ಆರಂಭವಾಗಲು ಒಂದೆರಡು ತಿಂಗಳಿರುವಾಗ ಮುಖ್ಯಮಂತ್ರಿ ನೇತೃತ್ವದಲ್ಲಿ ದಸರಾ ಸಿದ್ಧತೆ ಸಭೆ ನಡೆಯುತ್ತದೆ. ಅನುದಾನ ಮತ್ತು ದಸರಾ ಉದ್ಘಾಟಕರ ಹೆಸರನ್ನು ಅಂತಿಮಗೊಳಿಸಿದರೆ ಚರ್ಚೆ ಮುಗಿದಂತೆ. ಎಸ್.ಎಂ ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ದಸರೆಗೆ ಎರಡು ಕೋಟಿ ರೂ. ಅನುದಾನ ಕೊಟ್ಟಾಗ ಎಲ್ಲರೂ ಹುಬ್ಬೇರಿಸಿದ್ದರು. ಮುಂದೆ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದಾಗ ದಸರಾ ಸಂದರ್ಭದಲ್ಲಿ ಮೈಸೂರಿಗೆ 100 ಕೋಟಿ ರೂ.ಗಳ ಅನುದಾನ ಘೋಷಣೆಯಾಗಿತ್ತು. ಆದರೆ ಎಷ್ಟೇ ಕೋಟಿಗಳು ಬಂದರೂ ಕೊನೆಯಲ್ಲಿ ಕೊರತೆಯ ಕೊರಗು ತಪ್ಪುವುದಿಲ್ಲ.
ದಸರೆ ವೇದಿಕೆ ರಚನೆ, ಆನೆಗಳ ನಿರ್ವಹಣೆ, ಜಂಬೂ ಸವಾರಿ ಮೆರವಣಿಗೆ, ಗಣ್ಯರ ಆತಿಥ್ಯ, ಅರಮನೆಯ ಗೌರವ ಸಂಭಾವನೆ, ಅತಿಥಿ ಕಲಾವಿದರ ಸಂಭಾವನೆ, ದೀಪಾಲಂಕಾರ ಇತ್ಯಾದಿ ಬಾಬ್ತುಗಳಲ್ಲೇ ಕೋಟಿ ಲೆಕ್ಕಾಚಾರ ಮುಗಿದು ಹೋಗುತ್ತದೆ. ಪ್ರತೀ ವರ್ಷ ದಸರೆಯ ವೇಳೆಗೆ ಮೈಸೂರು ನಗರದ ರಸ್ತೆಗಳಿಗೆ ಒಂದಷ್ಟು ತೇಪೆ ಕಾರ‌್ಯ ನಡೆಯುತ್ತದೆ. ಆದರೆ ಇದೆಲ್ಲವೂ ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೀಮಿತ. ದಸರೆಯ ೧೦ ದಿನಗಳಲ್ಲಿ ಇಡೀ ಮೈಸೂರು ನಗರ ಬೆಳಗಿದರೆ ಸುತ್ತಲಿನ ವರ್ತುಲ ರಸ್ತೆ ಕತ್ತಲಲ್ಲಿ ಮುಳುಗಿರುತ್ತದೆ.
ಎಲ್ಲಕ್ಕಿಂತ ಮುಖ್ಯವಾಗಿ ಮೈಸೂರು ದಸರೆ ಎಂದರೆ ಇಲ್ಲಿನ ಸ್ಥಳೀಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸೇರಿ ನಡೆಸುವ ದರ್ಬಾರ್ ಅನ್ನುವಷ್ಟರ ಮಟ್ಟಿಗೆ ದಸರೆಯ ವ್ಯಾಪ್ತಿ ಕಿರಿದಾಗಿದೆ. ಜಂಬೂ ಸವಾರಿಯ ದಿನಕ್ಕೆ ಪಾಸ್ ವಿತರಣೆ ಮಾಡುವುದೇ ಅಧಿಕಾರಿಗಳ ಪ್ರಮುಖ ಕೆಲಸವಾಗಿದೆ. ರಾಜಪ್ರಭುತ್ವದ ಅವಧಿಯಲ್ಲಿ ದಸರೆ ನಗರಕ್ಕೆ ಸೀಮಿತವಾಗಿರಲಿಲ್ಲ. ಪ್ರಾಂತ್ಯದ ಮುಖಂಡರೆಲ್ಲರಿಗೂ ಆಹ್ವಾನ ಹೋಗುತ್ತಿತ್ತು. ನಾನಾ ಕ್ಷೇತ್ರದ ಗಣ್ಯರನ್ನು, ಕಲಾವಿದರನ್ನು ಕರೆದು ಸನ್ಮಾನಿಸುವ ಪರಿಪಾಠವಿತ್ತು. ಈಗ ಶಾಸಕರು, ಸ್ಥಳೀಯ ಕಾರ್ಪೊರೇಟರ್‌ಗಳನ್ನು ಹೊರತುಪಡಿಸಿ ಜಿಲ್ಲೆ ಮತ್ತು ತಾಲ್ಲೂಕು ಮಟ್ಟದ ಜನ ಪ್ರತಿನಿಧಿಗಳಿಗೂ ಆಹ್ವಾನವಿಲ್ಲ.
ರಾಜಪ್ರಭುತ್ವದ ಕಾಲದಿಂದಲೂ ಮೈಸೂರು ದಸರೆ ಜಾತಿ, ಧರ್ಮ,ಮತ,ಭಾಷೆ, ಪ್ರಾದೇಶಿಕತೆಯ ಗಡಿ ಮೀರಿದ ಹಬ್ಬವಾಗಿತ್ತು. ಮೈಸೂರು ದಸರೆ ಹೆಸರಿನಲ್ಲಿಯೇ ಅದು ನಾಡಹಬ್ಬವಾಗಿ ಆಚರಣೆಯಾಗುತ್ತಿತ್ತು.
ಅರಸರ ಆಡಂಬರದ ಸಂಕೇತ ಇಲ್ಲವೇ ಧಾರ್ಮಿಕ ವಿಧಿ ವಿಧಾನವಾಗದೆ ಕ್ರೀಡೆ, ಕಲೆ, ಸಾಹಿತ್ಯ, ಸಂಸ್ಕೃತಿಗೆ ಉತ್ತೇಜನ ನೀಡುವ ಸಾಂಸ್ಕೃತಿಕ ಹಬ್ಬವಾಗಿಯೂ ಆಚರಣೆಯಾಗುತ್ತಿತ್ತು. ಆದರೆ ನಾಡಹಬ್ಬವೆಂದು ಕರೆದ ನಾವೇ ಈಗ ದಸರೆಯ ವ್ಯಾಪ್ತಿಯನ್ನು ಇಡೀ ನಾಡಿಗೆ ವಿಸ್ತರಿಸುವ ಬದಲು ಮೈಸೂರು ನಗರಕ್ಕೆ ಸೀಮಿತಗೊಳಿಸುತ್ತಿದ್ದೇವೆ. ನಾಡಹಬ್ಬದ ವೇದಿಕೆ ಬಳಸಿಕೊಂಡು ರಾಜ್ಯದ ಸಾಂಸ್ಕೃತಿಕ ಲೋಕವನ್ನು ಮತ್ತು ಕ್ರೀಡಾಲೋಕವನ್ನು ಕಟ್ಟುವ ಅದ್ಭುತ ಅವಕಾಶವನ್ನು ಕಳೆದುಕೊಳ್ಳುತ್ತಿದ್ದೇವೆ.
ಈ ನಿಟ್ಟಿನಲ್ಲಿ ಕೇರಳ ನಮಗೆ ಮಾದರಿಯಾಗಬಹುದು. ಕೇರಳದಲ್ಲಿ ಪ್ರತೀವರ್ಷ ವಿದ್ಯಾರ್ಥಿಗಳಿಗಾಗಿ ಕಲೋತ್ಸವ ಕಾರ‌್ಯಕ್ರಮ ನಡೆಯುತ್ತದೆ. ಗ್ರಾಮ ಮಟ್ಟದಿಂದ ಆರಂಭವಾಗುವ ಸ್ಪರ್ಧೆ ರಾಜ್ಯಮಟ್ಟಕ್ಕೆ ಬಂದು ಮುಖ್ಯಮಂತ್ರಿ ಕೈಯಲ್ಲಿ ಪ್ರಶಸ್ತಿ ಸ್ವೀಕರಿಸುವ ವೇಳೆಗೆ ನೂರಾರು ಪ್ರತಿಭೆಗಳು ಬೆಳಕಿಗೆ ಬರುತ್ತವೆ. ಈ ಪ್ರತಿಭೆಗಳಲ್ಲಿ ಎಷ್ಟೋ ಮಂದಿ ಈಗ ಪ್ರಸಿದ್ಧ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ.
ನಾಡಹಬ್ಬದ ವೇದಿಕೆಯನ್ನು ಬಳಸಿಕೊಂಡು ನಾವು ವರ್ಷ ಪೂರ್ತಿ, ನಾಡಿನಾದ್ಯಂತ ಸಾಂಸ್ಕೃತಿಕ, ಸಾಹಿತ್ಯಿಕ ಸ್ಪರ್ಧೆಗಳನ್ನು ಏರ್ಪಡಿಸಲು ಸಾಧ್ಯವಿದೆ. ರಾಜ್ಯಮಟ್ಟದಲ್ಲಿ ಗೆದ್ದವರಿಗೆ ದಸರೆಯಲ್ಲಿ ಕಾರ‌್ಯಕ್ರಮ ನೀಡಲು ಅವಕಾಶ ನೀಡಬಹುದು. ಇದೇ ರೀತಿ ನಮ್ಮ ಕ್ರೀಡಾಪಟುಗಳನ್ನು ಉತ್ತೇಜಿಸಲು ಅವಕಾಶವಿದೆ. ಟಿವಿ ರಿಯಾಲಿಟಿ ಶೋಗಳಲ್ಲಿ ನೈಜತೆ ಕಳೆದುಕೊಳ್ಳುವ ಪ್ರತಿಭೆಗಳಿಗೆ ನಿಜವಾದ ವೇದಿಕೆಗಳಲ್ಲಿ ಬೆಳೆದು ಬೆಳಗಲು ಅವಕಾಶ ಮಾಡಿಕೊಡಬಹುದು.
ಖಾಸಗಿ ಪ್ರಾಯೋಜಕರನ್ನು ಬಳಸಿಕೊಂಡು ಸರಕಾರದ ದುಡ್ಡಿಲ್ಲದೆಯೇ ಇದೆಲ್ಲವನ್ನೂ ಸಂಘಟಿಸಬಹುದು. ದಸರೆ ಸಮಿತಿಗಳು ರಾಜಕೀಯ ನಾಯಕರ ಗಂಜಿ ಕೇಂದ್ರವಾಗದೆ, ಕಾಯಂ ಆಚರಣೆಗೆ ಪರಿಣತರ ಸಮಿತಿ ರಚನೆಯಾಗಬೇಕು. ದಸರೆ ಮುಗಿದ ಕೂಡಲೇ ಗ್ರಾಮ ಮಟ್ಟದಿಂದ ಆರಂಭವಾಗುವ ಸ್ಪರ್ಧೆ ಮುಂದಿನ ದಸರೆಯ ವೇಳೆಗೆ ಸಮಾಪ್ತಿಯಾಗುವ ರೀತಿಯಲ್ಲಿ ವರ್ಷ ಪೂರ್ತಿ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ‌್ಯಕ್ರಮಗಳನ್ನು ಸಂಘಟಿಸಬೇಕು. ಇದಕ್ಕೆ ಬೇಕಿರುವುದು ಇಚ್ಛಾಶಕ್ತಿ, ನಿಸ್ವಾರ್ಥಭಾವ, ಒಂದಷ್ಟು ದೂರದೃಷ್ಟಿ. ದಸರೆ ನಿಜವಾದ ನಾಡಹಬ್ಬವಾಗಲಿ ಎನ್ನುವುದು ಕನ್ನಡಿಗರೆಲ್ಲರ ಆಶಯ.

andolanait

Recent Posts

ಮೈಸೂರು: ಅಂಬೇಡ್ಕರ್‌, ಬಾಬು ಜಗಜೀವನರಾಂ ಪ್ರತಿಮೆ ಅನಾವರಣ

ಮೈಸೂರು: ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಇಂದು(ಡಿ.23) ಮೈಸೂರಿನ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರ…

12 mins ago

ಸಿಲಿಂಡರ್‌ ಸ್ಫೋಟ : 9 ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಗಂಭೀರ

ಹುಬ್ಬಳ್ಳಿ : ಸಿಲಿಂಡರ್‌ ಸ್ಫೋಟಗೊಂಡ ಪರಿಣಾಮ 9 ಮಂದಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ತಡರಾತ್ರಿ ಹುಬ್ಬಳ್ಳಿಯಲ್ಲಿ…

21 mins ago

ಸಿ.ಟಿ.ರವಿ, ಲಕ್ಷ್ಮೀ ಹೆಬ್ಬಾಳ್ಕರ್‌ ಕೇಸ್‌ ಮುಗಿದ ಅಧ್ಯಾಯ: ಬಸವರಾಜ ಹೊರಟ್ಟಿ

ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಬಗ್ಗೆ ಬಿಜೆಪಿ ವಿಧಾನ ಪರಿಷತ್‌ ಶಾಸಕ ಸಿ.ಟಿ.ರವಿ ಅವರು ಆಕ್ಷೇಪಾರ್ಹ ನೀಡಿರುವ ಹೇಳಿಕೆಯ ಕೇಸ್‌…

38 mins ago

ಶಿವರಾಜಕುಮಾರ್ ಚಿತ್ರಕ್ಕೆ ತಮಿಳು ನಿರ್ದೇಶಕ; ಮುಂದಿನ ವರ್ಷ ‘#MB’ ಪ್ರಾರಂಭ

ಶಿವರಾಜಕುಮಾರ್‍ ಶಸ್ತ್ರಚಿಕಿತ್ಸೆಗೆಂದು ಇತ್ತೀಚೆಗೆ ಅಮೇರಿಕಾಗೆ ಪ್ರಯಾಣ ಬೆಳಸಿದ್ದಾರೆ. ಜನವರಿ 26ರಂದು ಅವರು ಚಿಕಿತ್ಸೆ ಮುಗಿಸಿ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ. ಬೆಂಗಳೂರಿಗೆ ವಾಪಸ್ಸಾಗಿ…

41 mins ago

ಮತ್ತೊಂದು ಥ್ರಿಲ್ಲರ್ ಚಿತ್ರದಲ್ಲಿ ವಿಜಯ್‍ ರಾಘವೇಂದ್ರ; ‘FIR 6 to 6’ ಟ್ರೇಲರ್‍ ಬಿಡುಗಡೆ

ವಿಜಯ್‍ ರಾಘವೇಂದ್ರ ಅಭಿನಯದ ಮೂರು ಚಿತ್ರಗಳು ಈ ವರ್ಷ ಬಿಡುಗಡೆಯಾಗಿವೆ. ವಿಶೇಷವೆಂದರೆ, ‘ಕೇಸ್ ಆಫ್‍ ಕೊಂಡಾನ’, ‘ಜಾಗ್‍ 101’ ಮತ್ತು…

45 mins ago

ಕುಶಾಲನಗರದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣ

• ಕೆ.ಬಿ.ಶಂಶುದ್ದೀನ್ ಕುಶಾಲನಗರ ತಾಲ್ಲೂಕು ವ್ಯಾಪ್ತಿಯಲ್ಲಿ ಪಟ್ಟಣ ಅಭಿವೃದ್ಧಿಯಾದಂತೆ ಕಳ್ಳತನವೂ ಹೆಚ್ಚಳ; ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲು ಒತ್ತಾಯ…

1 hour ago