ಎಡಿಟೋರಿಯಲ್

ಉಭಯ ರಾಜ್ಯದ ಬಿಜೆಪಿಗರು ಹಿಂದಿ ಹೇರಿಕೆ ವಿರೋಧಿಸಲಿಲ್ಲವೇಕೆ?

ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿಪ್ರದೇಶಗಳಲ್ಲಿ ಭಾಷಾ ದುರಭಿಮಾನ ತೀವ್ರವಾಗುತ್ತಿದೆ. ಇದೇನೂ ದಿಢೀರ್ ಆಗಿ ಹುಟ್ಟಿಕೊಂಡ ಪ್ರಕ್ರಿಯೆ ಅಲ್ಲ. ಹಾಗೆಯೇ ಪ್ರಧಾನವಾಗಿ ಭಾಷೆಗೆ ಸಂಬಂಽಸಿದ ವಿಷಯವೂ ಅಲ್ಲ. ಬೆಳಗಾವಿ-ನಿಪ್ಪಾಣಿಯ ಜನರಿಗೆ ಮರಾಠಿಯ ಬಗ್ಗೆಯಾಗಲಿ ಅಥವಾ ಕೊಲ್ಹಾಪುರ ಮತ್ತು ಸಾಂಗ್ಲಿಯಲ್ಲಿನ ಜನರಿಗೆ ಕನ್ನಡ ಭಾಷೆಯ ಬಗ್ಗೆಯಾಗಲಿ ಸಹನೆ ಮೀರಿಹೋಗಿದೆ ಅಂತಲೂ ಅಲ್ಲ. ಈ ಎರಡೂ ಭಾಷೆಗಳನ್ನು ಮಾತನಾಡುವ ಜನ ತುಂಬಾ ದೊಡ್ಡ ಸಂಖ್ಯೆಯಲ್ಲೇ ಇದ್ದಾರೆ. ದ್ವಿಭಾಷೆಯ ಬಳಕೆ ಆ ಪ್ರದೇಶಗಳ ಸಂಪ್ರದಾಯವಾಗಿಬಿಟ್ಟಿದೆ. ವಿವಾದಿತ ಗಡಿ ಪ್ರದೇಶದ ಒಂದು ಕಡೆಯಲ್ಲಿರುವ ಜಾತಿ ಹಾಗೂ ಸಮುದಾಯದ ಜನರಿಗೆ ಇನ್ನೊಂದು ಭಾಗದಲ್ಲಿ ಸಂಬಂಽಕರಿದ್ದಾರೆ.

ಕನ್ನಡ ಹಾಗೂ ಮರಾಠಿ ಎರಡೂ ಭಾಷೆಗಳ ಚರಿತ್ರೆಯುದ್ದಕ್ಕೂ ಇದೇ ಪರಿಸ್ಥಿತಿಯನ್ನು ಕಾಣಬಹುದು. ಕನ್ನಡದ ಕೆಲವು ಪ್ರಮುಖ ಬರಹಗಾರರು ಮರಾಠಿಯನ್ನು ಸ್ವಾಭಾವಿಕವಾಗಿ ಬಳಸುವಂತಹವರು. ಮಹಾನ್ ಕವಿ ದ.ರಾ.ಬೇಂದ್ರೆ, ನಾಟಕಕಾರ ಗಿರೀಶ್ ಕಾರ್ನಾಡ್, ಕಾದಂಬರಿಕಾರ ಶಾಂತಿನಾಥ ದೇಸಾಯಿ, ಜಯಂತ್ ಕಾಯ್ಕಿಣಿ ಮತ್ತು ಸಂಗೀತಗಾರ ಭೀಮಸೇನ ಜೋಷಿ ಇವರೆಲ್ಲಾ ಅಂತಹ ಕೆಲವು ಜನ. ಗಡಿಯ ಇನ್ನೊಂದು ಮಗ್ಗುಲಿನ ಮರಾಠಿಯ ಅತ್ಯಂತ ಪ್ರಸಿದ್ಧ ಕಾದಂಬರಿಕಾರ ಜಿ.ಎ.ಕುಲಕರ್ಣಿ ಇಡೀ ಬದುಕನ್ನು ಕರ್ನಾಟಕದಲ್ಲೇ ಕಳೆದರು. ತಮ್ಮ ಸರ್ರಿಯಲ್ ವರ್ಣನೆಗೆ ಬೇಕಾದ ಸರಕನ್ನೆಲ್ಲ್ಲಾ ಕರ್ನಾಟಕದ ಅನುಭವದಿಂದಲೇ ಪಡೆದರು.

ಹಾಗೆಯೇ ಕನ್ನಡದ ರಂಗಭೂಮಿ ೨೦ನೇ ಶತಮಾನದ ಮರಾಠಿ ರಂಗಭೂಮಿಯ ಹುಟ್ಟನ್ನು ಪ್ರಭಾವಿಸಿದೆ. ಕರ್ನಾಟಕದ ಹಿರಿಯ ಕಲಾವಿದರು ಬಳಸುವ ಹಾರ್ಮೋನಿಯಂ ಹಾಗೂ ಸಿತಾರ್ ಕಳೆದ ೧೨೦ ವರ್ಷಗಳಿಂದಲೂ ತಯಾರಾಗುತ್ತಿರುವುದು ಮಹಾರಾಷ್ಟ್ರದ ಮಿರಜ್‌ನಲ್ಲೇ. ತುಕಾರಾಂ ಅವರ ಭಜನೆಗಳು ಕನ್ನಡ ಮಾತನಾಡುವವರ ಹೃದಯವನ್ನು, ಬಸವೇಶ್ವರನ ವಚನಗಳು ಮರಾಠಿ ಭಾಷಿಕರ ಮನಸ್ಸನ್ನು ಅಷ್ಟೇ ಸಲೀಸಾಗಿ ತಲುಪಿದ್ದವು. ಸಾವಿರಾರು ಮರಾಠಿ ಪದಗಳ ಮೂಲ ಕನ್ನಡದಲ್ಲಿದೆ. ಅಷ್ಟೇ ಪದಗಳು ಮರಾಠಿಯಿಂದ ಕನ್ನಡಕ್ಕೆ ಬಂದಿವೆ. ಅಲ್ಲಿಯ ಅತ್ಯಂತ ಜನಪ್ರಿಯ ದೇವತೆ ಅಂದರೆ ಪಂಡರಾಪುರದ ವಿಠೋಬ. ಕನ್ನಡದ ಒಂದು ಜನಪ್ರಿಯ ಗಾದೆ ಆತನ ಮೂಲ ಕರ್ನಾಟಕ ಅಂತ ಹೇಳುತ್ತದೆ. ಕರ್ನಾಟಕದ ‘ಕ್ವಾಷಿದ’ಕ್ಕೆ (ಕಸೂತಿ ಮಾಡಿದ ಸೀರೆ) ಮಹಾರಾಷ್ಟ್ರದ ಸುಂದರಿಯರ ವಾರ್ಡರೋಬಿನಲ್ಲಿ ಹೆಮ್ಮೆಯ ಸ್ಥಾನ ಇದೆ. ಕರ್ನಾಟಕದ ಮಹಿಳೆಯರಿಗೆ ತಮ್ಮ ಮದುವೆ ಉಡುಗೆಯಾಗಿ ಮಹಾರಾಷ್ಟ್ರದ ಪೈಥಾನಿಯನ್ನು ಧರಿಸುವ ಆಸೆ ಬಹುಕಾಲದಿಂದ ಇದೆ.

ಇಷ್ಟೆಲ್ಲಾ ಸ್ನೇಹ ಹಾಗೂ ಸಾಂಸ್ಕ ತಿಕ ಒಡನಾಟ ಎರಡು ಭಾಷೆ, ಸಂಸ್ಕ ತಿ ಹಾಗೂ ರಾಜ್ಯಗಳ ನಡುವೆ ಇರುವಾಗ ಈಗ ಇಷ್ಟೊಂದು ಸಿಟ್ಟು ಯಾಕೆ ಹುಟ್ಟಿಕೊಂಡಿತು?

ಭಾಷೆ ಕಾರಣವಲ್ಲ ಅಂತಾದರೆ, ತೀರಾ ಹದಗೆಟ್ಟಿರುವ ಈ ಪ್ರಾಂತ್ಯಗಳ ಗಡಿ ಸಮಸ್ಯೆಯು ದಿಢೀರ್ ನೆನಪಾಗಿ ಜನ ಕೆರಳಿರಬಹುದೇ? ಕಳೆದ ಆರು ದಶಕಗಳಲ್ಲಿ ಗಡಿಯ ವ್ಯಾಖ್ಯೆ ಪದೇ ಪದೇ ಬದಲಾಗುತ್ತಾ ಬಂದಿದೆ. ಅದನ್ನು ಗಮನಿಸಿದರೆ ಈ ಸಿಟ್ಟಿಗೆ ಗಡಿ ಸಮಸ್ಯೆ ಕಾರಣವಲ್ಲ ಅಂತ ಅನಿಸುತ್ತದೆ. ಶಾತವಾಹನ, ವಾಕತಕ, ರಾಷ್ಟ್ರಕೂಟ, ಚಾಲುಕ್ಯ ಹಾಗೂ ಯಾದವ ದೊರೆಗಳ ಕಾಲದಿಂದ ಪೂರ್ವ ಹಾಗೂ ದಕ್ಷಿಣದ ಗಡಿಗಳು ಹಲವು ಬಾರಿ ಬದಲಾಗಿವೆ. ಮರಾಠರು, ಪೇಶ್ವೆಗಳು ಹಾಗೂ ವಸಾಹತುಶಾಹಿಗಳ ಆಳ್ವಿಕೆಯಲ್ಲೂ ಗಡಿಗಳು ಬದಲಾಗಿವೆ.

ಸ್ವತಂತ್ರ ಭಾರತದಲ್ಲಿ ರಾಜ್ಯಗಳನ್ನು ರೂಪಿಸುವ ಸಂದರ್ಭದಲ್ಲಿ ದಕ್ಷಿಣ ಕರ್ನಾಟಕಕ್ಕೆ ಹೋಲಿಸಿದರೆ ಉತ್ತರ ಕರ್ನಾಟಕದ ಹೆಚ್ಚಿನ ಭೂಭಾಗ ಬಾಂಬೆ ಪ್ರೆಸಿಡೆನ್ಸಿಗೆ ಸೇರ‍್ಪಡೆಯಾಯಿತು. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಒಂದು ಭಾಷೆಯನ್ನು ಮಾತನಾಡುವ ಜನರ ಸಂಖ್ಯೆಯನ್ನು ಆಧರಿಸಿ ರಾಜ್ಯಗಳನ್ನು ರಚಿಸಲಾಯಿತು. ಮಹಾರಾಷ್ಟ್ರದ ಉತ್ತರ ಹಾಗೂ ಈಶಾನ್ಯ ಭಾಗದಲ್ಲಿ ವಾಸಿಸುತ್ತಿರುವ ಆದಿವಾಸಿ ಸಮುದಾಯದವರು ಮಾತನಾಡುವ ಭಾಷೆ ಮರಾಠಿ, ಗುಜರಾತಿ, ಹಿಂದಿ ಅಥವಾ ತೆಲುಗಿಗಿಂತ ತೀರಾ ಭಿನ್ನವಾಗಿಲ್ಲ. ಹಾಗಾಗಿ ಆ ಭಾಗಗಳಲ್ಲಿ ಭಾಷಾವಾರು ವೈಷಮ್ಯದ ತೀವ್ರತೆ ಅಷ್ಟೊಂದಿಲ್ಲ. ಅವರ ಭಾಷೆ ಈ ವೈಷಮ್ಯವನ್ನು ಕುಗ್ಗಿಸುವ ಒಂದು ತಡೆಭಾಷೆಯಾಗಿ ಕೆಲಸ ಮಾಡಿತು. ಕನ್ನಡ ಹಾಗೂ ಮರಾಠಿಯ ನಡುವೆ ಅಂತಹ ಒಂದು ತಡೆಭಾಷೆ ಯಾವುದೂ ಇಲ್ಲ. ಹಾಗಾಗಿ ಗಡಿಯ ಎರಡೂ ಬದಿಗಳಲ್ಲಿ ಜನ ಕನ್ನಡ ಹಾಗೂ ಮರಾಠಿಯನ್ನು ಬಳಸುತ್ತಿದ್ದರೂ ಭಿನ್ನತೆ ಹಾಗೂ ವೈಮನಸ್ಯ ವಾಸ್ತವದಲ್ಲಿ ಇರುವುದಕ್ಕಿಂತಲೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಇದೇನೂ ಹೊಸ ಅನ್ವೇಷಣೆಯಲ್ಲ.

ವಿವಾದಕ್ಕೆ ಅವಕಾಶ ಮಾಡಿಕೊಡದೆ ಗಡಿಯನ್ನು ನಿರ್ಧರಿಸುವುದು ಬಹುತೇಕ ಅಸಾಧ್ಯವಾದ ಕೆಲಸ. ಹಾಗಿದ್ದಾಗ್ಯೂ ಹಲವು ಪ್ರಯತ್ನಗಳಂತೂ ನಡೆದಿವೆ. ಹಲವು ಸಮಿತಿಗಳು ವಿವಾದವನ್ನು ಪರಿಹರಿಸುವುದಕ್ಕೆ ಶಕ್ತಿಮೀರಿ ಪ್ರಯತ್ನಿಸಿವೆ. ಕೋರ್ಟಿನಲ್ಲಿ ಮೊಕದ್ದಮೆಗಳನ್ನು ಹೂಡಲಾಗಿದೆ, ಹೋರಾಟ ಮಾಡಲಾಗಿದೆ. ಎರಡೂ ರಾಜ್ಯಗಳು ತಮ್ಮದೇ ಆದ ಆಯೋಗಗಳನ್ನು ರಚಿಸಿವೆ. ತಮ್ಮ ಬೇಡಿಕೆಗಳನ್ನು ತರ್ಕ ಹಾಗೂ ವಾದದ ಮೂಲಕ ಸಾಧ್ಯವಾದಷ್ಟು ಬಲವಾಗಿ ಸಮರ್ಥಿಸಿಕೊಳ್ಳಲು ಪ್ರಯತ್ನಿಸಿವೆ. ದ್ವಿಪಕ್ಷೀಯ ಒಪ್ಪಂದಕ್ಕೆ ಬರುವ ದೃಷ್ಟಿಯಿಂದ ಜನಸಂಖ್ಯೆಯ ಗಣತಿಯನ್ನೂ ಮಾಡಲಾಗಿದೆ. ಆಡಳಿತ ರಚನೆಯನ್ನು ಕುರಿತಂತೆ ಪ್ರಯೋಗಗಳು ನಡೆದಿವೆ. ತಾಲ್ಲೂಕುಗಳ ಉಪಪ್ರಾಂತ್ಯಗಳ ಮರುವಿಂಗಡಣೆ ಹಾಗೂ ಕರ್ನಾಟಕ ವಿಧಾನಸಭೆಯಲ್ಲಿ ಅವುಗಳ ಪ್ರಾತಿನಿಧ್ಯವನ್ನು ಕುರಿತಂತೆಯೂ ಪ್ರಯತ್ನಗಳು ನಡೆದಿವೆ. ಆ ಪ್ರದೇಶಗಳ ಜನ ಇದಕ್ಕೆ ಒಗ್ಗಿಕೊಂಡು, ಇದನ್ನು ಒಪ್ಪಿಕೊಂಡು ಬದುಕುತ್ತಿದ್ದಾರೆ. ಈ ಹೊತ್ತಿಗೆ ತೀವ್ರವಾದಿಗಳು ಹೆಚ್ಚುಕಡಿಮೆ ಇಲ್ಲವಾಗಿಬಿಟ್ಟಿದ್ದರು ಎನ್ನಬಹುದು. ವಿವಾದ ಭಾಷೆಯ ಹೆಸರಿನಲ್ಲಿ ನಡೆಯು ತ್ತಿದೆ. ಆದರೆ ಅದು ಮೂಲತಃ ಭಾಷಾವಾರು ಅಲ್ಲ. ಅದು ಗಡಿಯ ಹೆಸರಿನಲ್ಲಿ ನಡೆಯುತ್ತಿದೆ. ಆದರೆ ಅದರ ಮೂಲತಃ ಗಡಿಗೆ ಸಂಬಂಽಸಿದ್ದಲ್ಲ. ರಾಜಕಾರಣಿ ಗಳು ಬಯಸಿದಾಗಷ್ಟೇ ಗಲಭೆಗಳು ನಡೆಯುತ್ತವೆ ಅನ್ನುವುದು ಜನರಿಗೂ ಗೊತ್ತು.

ಕರ್ನಾಟಕದಲ್ಲಿ ಚುನಾವಣೆ ಸದ್ಯದಲ್ಲೇ ನಡೆಯಲಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರದ ಬಗ್ಗೆ ಸಾಕಷ್ಟು ಸುದ್ದಿ ಚಾಲ್ತಿಯಲ್ಲಿದೆ. ಕಳೆದ ಮುಂಗಾರಿನಲ್ಲಿ ರಸ್ತೆಗಳು ಹಾಳಾಗಿವೆ. ಕೈಗಾರಿಕೆಗಳು ದಕ್ಷಿಣದ ರಾಜ್ಯಗಳಿಗೆ ಸ್ಥಳಾಂತರಗೊಳ್ಳುತ್ತಿವೆ. ಈ ವಾಸ್ತವ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಅಲ್ಪಸಂಖ್ಯಾತರ ವಿರುದ್ಧ ಬಹುಸಂಖ್ಯಾತರನ್ನು ಸಂಘಟಿಸುವ ಪ್ರಯತ್ನಗಳು ನಡೆದವು. ಆರ್ಥಿಕ ಅಡ್ಡಿಗಳನ್ನು ಒಡ್ಡಲಾಯಿತು. ಹಿಜಾಬ್ ಹಾಗೂ ಲವ್ ಜಿಹಾದ್ ಸಮಸ್ಯೆಗಳನ್ನು ಸೃಷ್ಟಿಸಲಾಯಿತು. ಸ್ಥಳೀಯ ಸಮಿತಿಗಳಿಗೆ ನಡೆದ ಚುನಾವಣೆಗಳು ಆಳುವ ಪಕ್ಷಕ್ಕೆ ಅಂತಹ ಸಂತೋಷದಾಯಕವಾಗೇನೂ ಇರಲಿಲ್ಲ. ಮಹಾರಾಷ್ಟ್ರದಲ್ಲೂ ಆಳ್ವಿಕೆಯಲ್ಲಿರುವ ಮೈತ್ರಿ ಕೂಟದ ಭವಿಷ್ಯ ಅನಿರ್ದಿಷ್ಟವಾಗಿಯೇ ಇದೆ. ಗಡಿಯ ಎರಡೂ ಕಡೆಯಲ್ಲಿ ಬಿಜೆಪಿ ಸರ್ಕಾರಕ್ಕೆ ಚಿಂತೆಗೆ ಸಾಕಷ್ಟು ಕಾರಣಗಳಿವೆ. ಈ ಸಂದರ್ಭದಲ್ಲಿ ಭಾಷಾಭಿಮಾನವನ್ನು ಕೆರಳಿಸುವುದು ರಾಜಕೀಯ ಅಸ್ತ್ರವಾಗಬಲ್ಲದು.

ಕೇಂದ್ರ ಗೃಹಮಂತ್ರಿಗಳು ಹಿಂದಿಯನ್ನು ಇಡೀ ಭಾರತದ ಮೇಲೆ ಹೇರಲು ಹೊಸ ಕ್ರಮ ತೆಗೆದುಕೊಂಡಾಗ ಕರ್ನಾಟಕದಲ್ಲಿ ಕನ್ನಡವನ್ನು ಬೆಂಬಲಿಸುತ್ತಿರುವ ಬಿಜೆಪಿಯವರಾಗಲಿ, ಮಹಾರಾಷ್ಟ್ರದಲ್ಲಿ ಮರಾಠಿಯನ್ನು ಬೆಂಬಲಿಸುತ್ತಿರುವ ಬಿಜೆಪಿಯವರಿಗಾಗಲಿ ಹಿಂದಿ ಹೇರಿಕೆಯನ್ನು ವಿರೋಽಸಬೇಕು ಅನ್ನಿಸಲಿಲ್ಲ.

ನಿಜ ಅಂದರೆ ಅವರಿಗೆ ಗಡಿಪ್ರದೇಶದಲ್ಲಿ ಭಾಷೆಯಾಗಲಿ, ಜನರಾಗಲಿ ಮುಖ್ಯ ರಲ್ಲ. ಅದು ನಿಜವಾಗಿ ಮುಖ್ಯವಾಗಬೇಕಿತ್ತು. ಅವರಿಗೆ ಜನರ ಹತಾಶೆಯನ್ನು ಬೇರೆ ಕಡೆಗೆ ತಿರುಗಿಸಬೇಕು. ಅದು ಅವರ ಮುಖ್ಯ ಕಾಳಜಿ. ಆ ಪ್ರದೇಶದ ಸಮುದಾಯದ ಸಾಮರಸ್ಯಕ್ಕೆ ಏನು ಹಾನಿಯಾದರೂ ಅವರಿಗೆ ಚಿಂತೆಯಿಲ್ಲ.

ಕೃಪೆ: ದಿ ಇಂಡಿಯನ್ ಎಕ್ಸ್‌ಪ್ರೆಸ್, ಮೂಲ ಲೇಖಕರು: ಜಿ.ಎನ್.ಆಶಾದೇವಿ ಅನುವಾದ: ಟಿ.ಎಸ್.ವೇಣುಗೋಪಾಲ್

andolanait

Recent Posts

ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಕುಡಿಯುವ ನೀರಿಗೆ ಅಭಾವ

ನಂಜನಗೂಡು: ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಕಪಿಲಾ ನದಿ ಪಕ್ಕದಲ್ಲೇ ಇದ್ದರೂ ಜನತೆಗೆ ಕುಡಿಯುವ ನೀರಿನ ಅಭಾವ ಎದುರಾಗಿದೆ. ಹಳ್ಳಿಗಳಿಗೆ ನದಿ…

52 mins ago

ರಾಜ್ಯದಲ್ಲಿ ಇನ್ನೂ ಒಂದು ವಾರಗಳ ಕಾಲ ಭಾರೀ ಮಳೆ

ಬೆಂಗಳೂರು: ರಾಜ್ಯದಲ್ಲಿ ಇನ್ನೂ ಒಂದು ವಾರಗಳ ಕಾಲ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪೂರ್ವವ ಮಧ್ಯ…

1 hour ago

ಓದುಗರ ಪತ್ರ: ಸರಗಳ್ಳತನಕ್ಕೆ ಕಡಿವಾಣ ಹಾಕಿ

ಇತ್ತೀಚೆಗೆ ಮೈಸೂರಿನಲ್ಲಿ ಸರಗಳ್ಳತನ ಪ್ರಕರಣಗಳು ವರದಿಯಾಗುತ್ತಿದ್ದು, ಮಹಿಳೆಯರು ಒಂಟಿಯಾಗಿ ರಸ್ತೆಯಲ್ಲಿ ಓಡಾಡಲು ಹೆದರುವಂತಾಗಿದೆ. ಎರಡು ದಿನಗಳ ಹಿಂದಷ್ಟೇ ನಮ್ಮ ಸಂಬಂಧಿಕರೊಬ್ಬರು…

1 hour ago

ಓದುಗರ ಪತ್ರ: ಬಿಗ್‌ಬಾಸ್ ಕಾರ್ಯಕ್ರಮ ನಿಲ್ಲಲಿ

ಕನ್ನಡದ ಖಾಸಗಿ ಚಾನೆಲ್‌ವೊಂದರಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್ ಸೀಸನ್-11 ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದು, ಸ್ಪರ್ಧಿಗಳು ನಿತ್ಯ ಜಗಳವಾಡುತ್ತಿರುವುದರಿಂದ ಕಾರ್ಯಕ್ರಮ ವೀಕ್ಷಿಸುವವರಿಗೆ ಕಿರಿಕಿರಿಯಾಗುತ್ತಿದೆ. ವಿವಿಧ…

1 hour ago

ಓದುಗರ ಪತ್ರ: ಪೊಲೀಸರಿಗೆ ಧನ್ಯವಾದಗಳು

ನಾಡಹಬ್ಬ ದಸರಾ ಮಹೋತ್ಸವದಲ್ಲಿ ಈ ಬಾರಿ ಜನ ಸಾಗರವೇ ಹರಿದು ಬಂದಿತ್ತು. ದಸರಾ ಅಂಗವಾಗಿ ಆಯೋಜಿಸಿದ್ದ ಯುವ ಸಂಭ್ರಮ, ಯುವ…

1 hour ago

ಓದುಗರ ಪತ್ರ: ಮುಷ್ಕರ ಮುಂದುವರಿದಿದೆ

ಸರ್ಕಾರವೇ ನಮ್ಮ ದೇವರಾಗಿದೆ ಮೇಲಾಧಿಕಾರಿಗಳ ಮೇಲೆ ಗೌರವವಿದೆ ಜನರ ಸಮಸ್ಯೆಗಳ ಅರಿವಿದೆ ಅವರಿಗಾದ ಅಡಚಣೆಗೆ ವಿಷಾದವಿದೆ ನಮಗೂ ಬದುಕಿದೆ. ನಮ್ಮದೂ…

1 hour ago