ಎಡಿಟೋರಿಯಲ್

ಶ್ರೀಕಂಠದತ್ತರ ವಿರುದ್ಧ ಗೂಂಡಾಗಿರಿ ಆಪಾದನೆ ದೂರು ಬಂದಿತ್ತು!

ಹಿಂದಿನ ಸಂಚಿಕೆಯಿಂದ…

ಡಿವೈಎಸ್ಪಿಯವರು ಕಂಪ್ಲೇಂಟನ್ನು ಕೂಲಂಕಷವಾಗಿ ಓದಿದರು. “ಏನ್ರೀ ಇದೂ? ಅಫೆನ್ಸ್ ಆಗಿರೋದನ್ನು ನೀಟಾಗಿ ಎಲ್ಲಾ ಲೀಗಲ್ ಪಾಯಿಂಟ್ಸನ್ನೂ ಸೇರಿಸಿ ಬರೆದಿದ್ದಾನಲ್ರೀ? ೧೯೭೪ ರಿಂದಲೂ ಸಾಲ ಕೊಟ್ಟಿರೋದು, ಐದು ವರ್ಷಗಳಲ್ಲಿ ಥಿಯೇಟರಿನಿಂದ ಆದಾಯ ಬಂದಿರೋದು ಇವೆಲ್ಲವನ್ನೂ ಇನ್ ಕಂ ರಿಟರ್ನ್ಸ್‌ನಲ್ಲಿ ಡಿಕ್ಲೇರ್ ಮಾಡಿಕೊಂಡಿರೋದು ಎಲ್ಲಾ ಇದೆ. ಈಗಲೂ ಥಿಯೇಟರನ್ನು ನಡೆಸುತ್ತಿರುವವನು ರಾಜಮಂತ್ರ ಪ್ರವೀಣನೇ. ಅಂದರೆ ಅದು ಅವನ ವಶದಲ್ಲೇ ಇದೆ. ಆದಾಯವನ್ನು ಅವನೇ ಪಡೆದು ಇನ್ ಕಂ ಟ್ಯಾಕ್ಸ್ ಕೂಡ ಕಟ್ಟಿದ್ದಾನೆ ಖದೀಮ. ಪ್ರಿನ್ಸ್ ತಮ್ಮ ಅರಮನೆಯ ರಾಯಲ್ ಪೇಪರಿನಲ್ಲಿ ತಾವೇ ಸ್ಪಷ್ಟವಾಗಿ ಬರೆದುಕೊಟ್ಟಿದ್ದಾರೆ. ಕೇಸು ತಗೊಳ್ಳದೆ ವಿಧಿ  ಇಲ್ಲ. ತಗೊಂಡು ರಿಜಿಸ್ಟರ್ ಮಾಡಿ” ಎಂದರು.

“ಆದರೆ ಸಾರ್, ಥಿಯೇಟರ್ ಮ್ಯಾನೇಜರ್ ಲಕ್ಷ್ಮಣ್ ಅವರನ್ನು ವಿಚಾರಿಸಿದೆ. ಥಿಯೇಟರ್ ನಡೆಸ್ತಿರೋದು, ಸಂಬಳ ಸಾರಿಗೆ ಕೊಡ್ತಿರೋದು ಫಿರ್ಯಾದಿಯೇ ಅಂತೆ. ಆದರೆ ಪ್ರಿನ್ಸ್ ಟಾಕೀಸಿನ ಬಳಿ ಏಳೆಂಟು ತಿಂಗಳುಗಳಿಂದ ಯಾವತ್ತೂ ಬಂದಿಲ್ಲವಂತೆ. ಪ್ಯಾಲೇಸಿನ ಇನ್ನೊಬ್ಬ ಮ್ಯಾನೇಜರ್ ಬಂದು ಲಾಕ್ ಮಾಡಿಸಿ, ಷೋ ಬಂದ್ ಮಾಡಿಸಿದ್ದಾರೆ ಅಂದ್ರು… ಪ್ರಿನ್ಸ್ ತಾನು ಬಂದೇ ಇಲ್ಲ ಅಂದ್ರೆ, ಅವರೇ ಖುದ್ದು ನಿಂತು ಬೆದರಿಕೆ ಹಾಕಿರೋದು, ಗೂಂಡಾಗಿರಿ ಮಾಡಿರೋದು ಇವೆಲ್ಲಾ ಸುಳ್ಳಾಗುತ್ತೆ. ರಿಜಿಸ್ಟರ್ ಮಾಡಬಹುದಾ ಸಾರ್?”

“ಈ ಹಂತದಲ್ಲಿ ಅವೆಲ್ಲಾ ಬೇಡ್ರೀ. ಫಿರ್ಯಾದಿಯ ವಶದಲ್ಲಿ ಥಿಯೇಟರ್ ಇದ್ದಾಗ ಗೂಂಡಾಗಳೊಂದಿಗೆ ಪ್ರಿನ್ಸ್ ಅತಿಕ್ರಮ ಪ್ರವೇಶ ಮಾಡಿ ಬಲವಂತದಿಂದ ಬೀಗ ಜಡಿದಿದ್ದಾರೆ. ಷೋ ನಿಲ್ಲಿಸಿದ್ದಾರೆ. ಡಾಕ್ಯುಮೆಂಟ್ಸ್‌ಗಳೆಲ್ಲಾ ರಾಜಮಂತ್ರ ಪ್ರವೀಣನ ಪರವಾಗಿಯೇ ಇವೆ. ಕೇಸನ್ನಂತೂ ರಿಜಿಸ್ಟರ್ ಮಾಡಿಬಿಡಿ. ಆ ಫೈನಲ್ ರಿಪೋರ್ಟ್ ಹೇಗೂ ನಮ್ಮ ಕೈಯಲ್ಲೇ ಇರುತ್ತೆ. ಯಾವುದೋ ಒಂದು ರೀತಿ ಕ್ಲೋಸ್ ಮಾಡಿದರೆ ಆಗುತ್ತೆ”

“ಪ್ರಿನ್ಸ್ ಅಲ್ಲಿಗೆ ಬಂದೇ ಇರ್ಲಿಲ್ಲ ಅಂತ ಮ್ಯಾನೇಜರ್ ಹೇಳ್ತಾರಲ್ಲ? ಕೇಸು ರಿಜಿಸ್ಟರ್ ಮಾಡಬಹುದೇ?”

“ಅವರೇನಾದ್ರೂ . ಕೇಸನ್ನಂತೂ ತಗೊಳ್ಳಲೇಬೇಕು.  .”

“ಹೊಸ ಕಾನೂನುಗಳು ಬರಲಾಗಿ ಪ್ಯಾಲೇಸ್ ಪ್ರಾಪರ್ಟಿಯನ್ನು ಎಲ್ರೂ ಹುರಿದು ಮುಕ್ಕುವವರೇ. ಮಾತೆತ್ತಿದರೆ ಫಾಲ್ಸ್ ಡಾಕ್ಯುಮೆಂಟ್ಸ್ ಮಾಡಿಕೊಳ್ಳೋದು. ಮಹಾರಾಜ್ರು ಬರೆದುಕೊಟ್ಟಿದ್ದಾರೆ ಅನ್ನೋದು. ಪಾಪ, ಆ ಪ್ರಿನ್ಸ್ ಹೆಸರಿಗೆ ಕೋಟ್ಯಂತರ ಆಸ್ತಿ ಏನೋ ಇದೆ. ಆದರೆ ಯಾವುದೂ ಕೈಗೆ ಹತ್ತುತ್ತಿಲ್ಲ. ಅವರ ಮನೆತನದವರೇ ಶತಮಾನಗಳಿಂದ ಶವ ಸಂಸ್ಕಾರ ಮಾಡುತ್ತಿರುವ ಮಧುವನ ಜಾಗವನ್ನೂ ದಾನ ಬರೆದು ಕೊಟ್ಟಿದ್ದಾರೆ ಎಂದು ದಾಖಲಾತಿ ಸೃಷ್ಟಿಸಿ ಕೇಸು ಹಾಕಿದರೆ ಈ ಹುಡುಗ (ಆಗ ೨೯ ವರ್ಷ) ಯಾವ ಕಡೆಯಿಂದ ಫೈಟ್ ಮಾಡಬೇಕು? ಸಾವಿರಾರು ಕೋಟಿ ರೂ.ಗಳ ಆಸ್ತಿ ಇದೆ. ಆದರೆ ಪ್ರತಿಯೊಂದನ್ನೂ ಕೋರ್ಟಿನಲ್ಲಿ ಹೋರಾಟ ಮಾಡಿ ಗೆಲ್ಲಬೇಕು. ರಾಜರು ಅಂದ್ರೆ ಹಾಗೇ. ಒಟ್ಟಿನಲ್ಲಿ ಯಾವುದಕ್ಕಾದ್ರೂ ಯುದ್ಧ ಮಾಡ್ತಾನೇ ಇರಬೇಕೇನೋ? ದುರದೃಷ್ಟ ಅಂದ್ರೆ ಇದೇ” ಎಂದವರೇ ಇನ್ಸ್‌ಪೆಕ್ಟರ್ ಕುಲಕರ್ಣಿಯವರಿಗೆ,

“ನಾಳೆ ಪ್ರಿನ್ಸನ್ನು ವಿಚಾರಣೆ ಮಾಡಲು ನೀವೇ ಹೋಗಿ. ಇವನೊಬ್ಬನೇ ಬೇಡ, ಹುಡುಗು ಬುದ್ಧಿ. ಏನಾದ್ರೂ ದುಡುಕಿ ಮಾತಾಡಿಯಾನು” ಎಂದರು ಡಿವೈಎಸ್ಪಿ.

ಠಾಣೆಗೆ ಬಂದು ಕೇಸ್ ರಿಜಿಸ್ಟರ್ ಮಾಡಿ ಊಐ ಕಾಪಿ ಕೊಟ್ಟೆ.

“ನೀವು ಕೇಸು ರಿಜಿಸ್ಟರ್ ಮಾಡದೇ ಇದ್ದಿದ್ರೆ ನಾವು ಕೋರ್ಟಿನಿಂದಲೇ ನೇರ ಕೇಸು ರಿಜಿಸ್ಟರ್ ಮಾಡಿಸಬೇಕಿತ್ತು. ಕೇಸನ್ನೇ ತಗೊಂಡಿಲ್ಲ ಎಂದು ನಿಮ್ಮ ಮೇಲೂ ವೃಥಾ ಅಲಿಗೇಷನ್ ಮಾಡಬೇಕಿತ್ತು. ಅದು ತಪ್ಪಿತು ಬಿಡಿ” ಎಂಬ ಗುಳಿಗೆ ಕೊಟ್ಟರು ವಕೀಲರು!

ಮಾರನೇ ದಿನ ಇನ್ಸ್ ಪೆಕ್ಟರ್ ಕುಲಕರ್ಣಿಯವರೊಂದಿಗೆ ಅರಮನೆಗೆ ಹೋದೆ. ಎದುರಿಗೆ ಆರೇಳು ಬಾರಿ ನಾಯಿಗಳು ಭೀಕರವಾಗಿ ಬೊಗಳುತ್ತಾ ಸ್ವಾಗತಿಸಿದವು.

“ಇವು ಬೊಗೊಳೋದೇ ಪೊಲೀಸರನ್ನು ಕಂಡಾಗ ಮಾತ್ರ. ಕಳ್ಳರು ಬಂದ್ರೆ ತೆಪ್ಪಗಿರುತ್ತವೆ” ಎಂದು ಇನ್ಸ್‌ಪೆಕ್ಟರ್ ಜೋಕು ಹೊಡೆದು ಅವರೇ ಜೋರಾಗಿ ನಕ್ಕರು. ಆ ಸಪ್ಪಳಕ್ಕೆ ನಾಯಿಗಳೇ ತೆಪ್ಪಗಾದವು! ಅವು ವಾಡಿಕೆಯಂತೆ ಬೊಗಳೋದೆ ಅಷ್ಟು ಎಂದು ನಂತರ ತಿಳಿಯಿತು. ಶ್ರೀಕಂಠರು ಶ್ವಾನ ಪ್ರಿಯರು ಎಂದು ಕೇಳಿದ್ದೆವು. ಅದರತ್ತಾ ನೋಡಿ ಒಳ ಹೊಕ್ಕೆವು.

ನೂರಾರು ಗ್ರಂಥಗಳನ್ನು ಜೋಡಿಸಿದ್ದ ವಿಶಾಲವಾದ ಸುಸಜ್ಜಿತ ಹಾಲ್ ಅದು. ಅರ್ಧ ಗಂಟೆಯಾದ ಮೇಲೆ ಬಂದರು. ಕೇಸಿನ ವಿಚಾರ ತಿಳಿಸಿದೆವು. ವಿಹ್ವಲಗೊಂಡದ್ದು ಅವರ ದನಿಯಲ್ಲೇ ಎದ್ದು ಕಾಣುತ್ತಿತ್ತು. “ಏನು ಅರೆಸ್ಟ್ ಮಾಡ್ತೀರಾ?’ ಸವಾಲಿನ ಛಾಯೆ ಇರಲಿಲ್ಲ. ಗಾಬರಿ ಅಡಗಿತ್ತು.

“ಕೇಸು ರಿಜಿಸ್ಟರ್ ಆಗಿದೆ. ಪ್ರೊಸೀಜರ್ ಏನಿದೆಯೋ ಅದನ್ನು ಮಾಡಲೇಬೇಕಲ್ಲವೇ?” ಎಂದರು ಕುಲಕರ್ಣಿ.

“ದಯವಿಟ್ಟು ನಾನು ಹೇಳೋದನ್ನು ಕೇಳಿಸಿಕೊಳ್ಳಿ. ಯಾವುದೇ ಸಂದರ್ಭದಲ್ಲೂ ನಾನು ಕಳೆದ ಎಂಟು ತಿಂಗಳಿಂದ ಆ ಥಿಯೇಟರಿಗೆ ಕಾಲಿಟ್ಟಿಲ್ಲ. ಆ ಮನುಷ್ಯ ಒಂದಿಷ್ಟು ಸಾಲ ಕೊಡೊದು ತಗೊಳ್ಳೋದು ಮಾಡ್ತಿದ್ದದ್ದು ನಿಜ. ಆದರೆ ೧೩ ಲಕ್ಷವಲ್ಲ. ಮುಕ್ಕಾಲು ತೀರಿಸಿದ್ದೇನೆ. ಅದಕ್ಕೆ ದಾಖಲಾತಿ ಇದೆ. ಥಿಯೇಟರಿನ ಉಸ್ತುವಾರಿ ನೋಡಿಕೊಂಡು ಬಂದ ಲಾಭವನ್ನು ಸಾಲಕ್ಕೆ ಮುರಿದುಕೊಳ್ಳಿ ಅಂತ ಕೊಟ್ಟಿದ್ದೇನೆ. ಬಾಯ್ಮಾತಿನ ನಂಬಿಕೆ ಮೇಲೆ. ಅವರ ಸಾಲ ಪೂರ್ತಿ ಮುಗಿದೇ ಎರಡು ವರ್ಷವಾಗಿವೆ. ಅದಕ್ಕೆಲ್ಲ ದಾಖಲಾತಿ ಲೆಕ್ಕ ಇದೆ. ಈಗ ಥಿಯೇಟರ್ ಬಿಟ್ಟುಕೊಡಿ ಎಂದರೆ ಇಲ್ಲದ ತಕರಾರು ಮಾಡಿಕೊಂಡು ಕೊಡೋದಿಲ್ಲ ಎನ್ನುತ್ತಿದ್ದಾನೆ. ಥಿಯೇಟರಿನ ಮಾಲೀಕತ್ವ ಈಗಲೂ ಸಂಪೂರ್ಣ ನನ್ನದೇ. ಆತನಿಗೆ ಮಾರಿಲ್ಲ”.

ಅವರೇ ಬರೆದು ಕೊಟ್ಟಿದ್ದ ರಾಯಲ್ ಪತ್ರವನ್ನು ತೋರಿಸಿದ್ದಾಯಿತು. ಬಹಳ ಹೊತ್ತು ನೆಟ್ಟ ಕಣ್ಣುಗಳಿಂದ ಅದನ್ನೇ ದಿಟ್ಟಿಸಿ ನೋಡುತ್ತಿದ್ದರು. ಇಡೀ ಪತ್ರವೇ ಬೋಗಸ್. ರಾಯಲ್ ಪೇಪರನ್ನು ಅರಮನೆಯಿಂದ ಕದ್ದು ಫೋರ್ಜರಿ ಮಾಡಿದ್ದಾನೆ ಎಂದು ಹೇಳುತ್ತಾರೆಂಬ ನಿರೀಕ್ಷೆಯಿಂದ ನಾವು ಕಾಯುತ್ತಿದ್ದೆವು.

ನಿಧಾನವಾಗಿ ಶ್ರೀಕಂಠದತ್ತರೆಂದರು. ದನಿಯಲ್ಲಿ ಮೊದಲಿದ್ದ ನಡುಗು ಹೋಗಿತ್ತು.

“ಈ ಪತ್ರ ಅರಮನೆಯದೇ. ಸಹಿ ಕೂಡ ನನ್ನದೇ. ಅನುಮಾನವಿಲ್ಲ. ಆದರೆ ಇದರಲ್ಲಿರುವ ಒಕ್ಕಣೆ ಮಾತ್ರ ಪೂರ್ತಿ ಸುಳ್ಳು. ಇದನ್ನು ಅರಮನೆಯ ಟೈಪ್ ರೈಟರಿನಲ್ಲಿ ಟೈಪ್ ಮಾಡಿಲ್ಲ. ಅದರ ಫಾಂಟ್‌ಗಳೇ ವಿಶಿಷ್ಟವಾದದ್ದು.

ನಮ್ಮ ತಂದೆಯವರು ತೀರಿಕೊಂಡ ಆಸುಪಾಸಿನಲ್ಲಿ ನಾನು ಇದೇ ರೀತಿಯಲ್ಲಿ ಸಹಿ ಹಾಕುತ್ತಿದ್ದೆ. ನನ್ನ ಯಾವುದೇ ಸಹಿಯ ಜೊತೆಗೆ ದಿನಾಂಕ ಸಹ ಇದ್ದೇ ಇರುತ್ತದೆ. ಆದರೆ ಇದರಲ್ಲಿ ದಿನಾಂಕವೇ ಇಲ್ಲ. ಒಂದು ಥಿಯೇಟರ್ ಮಾಲೀಕತ್ವವನ್ನೇ ಬರೆದು ಕೊಡುವವರು ಸಹಿಯ ಜೊತೆಗೆ ದಿನಾಂಕವನ್ನು ಹಾಕಲೇಬೇಕಲ್ಲವೇ? ಅದು ಕಾನೂನಿನ ಒಂದು ಮೂಲಭೂತ ಅಗತ್ಯವಲ್ಲವೇ?”

ಹೌದೆಂಬಂತೆ ತಲೆಯಾಡಿಸಿದ ಇನ್ಸ್‌ಪೆಕ್ಟರ್, “ಹಾಗಿದ್ರೆ ನೀವು ಥಿಯೇಟರನ್ನು ಅವರಿಗೆ ವಹಿಸಿಕೊಟ್ಟಿರುವುದು ಸುಳ್ಳೇ?”

“ಕೇವಲ ಉಸ್ತುವಾರಿಗಾಗಿ ವಹಿಸಿಕೊಟ್ಟಿರುವುದು ನಿಜ. ಆದರೆ ಮಾರಾಟ ಮಾಡಿಲ್ಲ. ಆತ ತಾತ್ಕಾಲಿಕ ಕೇರ್ ಟೇಕರ್ರೇ ಹೊರತು ಮಾಲೀಕನಲ್ಲ. ನಿಜವಾದ ಮಾಲೀಕ ಆಗಲೂ, ಈಗಲೂ, ನಾಳೆಯೂ ನಾನೇ!

“ಇನ್ನೊಂದು ವಿಷಯ:  ರೀತ್ಯಾ, ನೂರು ರೂಪಾಯಿಗೆ ಮೇಲ್ಪಟ್ಟ ಯಾವುದೇ ಒಂದು ಸ್ಥಿರಾಸ್ತಿಯನ್ನು ಮಾರಾಟ ಮಾಡಬೇಕೆಂದರೆ, ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಆ ಡಾಕ್ಯುಮೆಂಟ್ ರಿಜಿಸ್ಟರ್ ಆಗಿರಲೇಬೇಕು. ಸಾಕ್ಷಿಗಳು ಸಹಿ ಹಾಕಿರಬೇಕು. ಅದೇನೂ ಇಲ್ಲದ ಈ ಕಾಗದಕ್ಕೆ ಕವಡೆ ಕಿಮ್ಮತ್ತೂ ಇಲ್ಲ! ಕನಿಷ್ಠ ಮಾರಾಟದ ಅಗ್ರಿಮೆಂಟ್ ಕೂಡ ಇದಲ್ಲ ಅಲ್ಲವೇ?”

ಅವರ ತರ್ಕಬದ್ಧ ಮಾತಿಗೆ ತಲೆದೂಗದೆ ನಿರ್ವಾಹವಿರಲಿಲ್ಲ. ಸ್ಥಿರಾಸ್ತಿಯನ್ನು ಮಾರಾಟ ಮಾಡಬೇಕೆಂದರೆ ಆ ಪತ್ರ ರಿಜಿಸ್ಟರ್ ಆಗಿರಲೇಬೇಕೆಂಬ ಸತ್ಯ ನನಗೂ ಅಂದೇ ತಿಳಿದದ್ದು!

ಪೂರ್ಣ ಹೇಳಿಕೆ ಪಡೆದು, ಅವರ ಕೋರಿಕೆಯಂತೆ ಶಾಮ್‌ಸುಂದರ್ ಟಾಕೀಸಿಗೆ ಪೊಲೀಸ್ ರಕ್ಷಣೆ ನೀಡಿದೆವು.

ಕೇಸು ಶ್ರೀಕಂಠದತ್ತರಂತೆ ತೀರ್ಮಾನವಾಯಿತು. ಆಸ್ತಿ ಅವರಿಗೇ ಉಳಿಯಿತು. ಈಗದು ಅವರ ಹೆಸರಿನಲ್ಲೇ  ಆಗಿದೆ.

ತಮ್ಮದೇ ನ್ಯಾಯಯುತ ಆಸ್ತಿಗಳನ್ನು ಕಾನೂನಿನ ಮೂಲಕವೇ ಹೋರಾಟ ಮಾಡಿ ದಕ್ಕಿಸಿಕೊಂಡದ್ದು ಶ್ರೀಕಂಠದತ್ತರ ಸಾಧನೆ. ಅದಕ್ಕಾಗಿ ಕೋರ್ಟ್‌ನಿಂದ ಕೋರ್ಟಿಗೆ ಅಲೆಯುತ್ತಾ ಜೀವಮಾನ ಪರ್ಯಂತ ಹೋರಾಡಿದರೆಂಬುದು ವ್ಯಥೆಯ ಸಂಗತಿ. ಈ ವಾರದಲ್ಲೇ ಅವರು ತೀರಿಕೊಂಡದ್ದು. ಬದುಕಿದ್ದಿದ್ದರೆ ೭೦ ವರ್ಷವಾಗಿರುತ್ತಿತ್ತು.

(ಮುಗಿಯಿತು)

andolanait

Recent Posts

ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಕುಡಿಯುವ ನೀರಿಗೆ ಅಭಾವ

ನಂಜನಗೂಡು: ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಕಪಿಲಾ ನದಿ ಪಕ್ಕದಲ್ಲೇ ಇದ್ದರೂ ಜನತೆಗೆ ಕುಡಿಯುವ ನೀರಿನ ಅಭಾವ ಎದುರಾಗಿದೆ. ಹಳ್ಳಿಗಳಿಗೆ ನದಿ…

3 hours ago

ರಾಜ್ಯದಲ್ಲಿ ಇನ್ನೂ ಒಂದು ವಾರಗಳ ಕಾಲ ಭಾರೀ ಮಳೆ

ಬೆಂಗಳೂರು: ರಾಜ್ಯದಲ್ಲಿ ಇನ್ನೂ ಒಂದು ವಾರಗಳ ಕಾಲ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪೂರ್ವವ ಮಧ್ಯ…

4 hours ago

ಓದುಗರ ಪತ್ರ: ಸರಗಳ್ಳತನಕ್ಕೆ ಕಡಿವಾಣ ಹಾಕಿ

ಇತ್ತೀಚೆಗೆ ಮೈಸೂರಿನಲ್ಲಿ ಸರಗಳ್ಳತನ ಪ್ರಕರಣಗಳು ವರದಿಯಾಗುತ್ತಿದ್ದು, ಮಹಿಳೆಯರು ಒಂಟಿಯಾಗಿ ರಸ್ತೆಯಲ್ಲಿ ಓಡಾಡಲು ಹೆದರುವಂತಾಗಿದೆ. ಎರಡು ದಿನಗಳ ಹಿಂದಷ್ಟೇ ನಮ್ಮ ಸಂಬಂಧಿಕರೊಬ್ಬರು…

4 hours ago

ಓದುಗರ ಪತ್ರ: ಬಿಗ್‌ಬಾಸ್ ಕಾರ್ಯಕ್ರಮ ನಿಲ್ಲಲಿ

ಕನ್ನಡದ ಖಾಸಗಿ ಚಾನೆಲ್‌ವೊಂದರಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್ ಸೀಸನ್-11 ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದು, ಸ್ಪರ್ಧಿಗಳು ನಿತ್ಯ ಜಗಳವಾಡುತ್ತಿರುವುದರಿಂದ ಕಾರ್ಯಕ್ರಮ ವೀಕ್ಷಿಸುವವರಿಗೆ ಕಿರಿಕಿರಿಯಾಗುತ್ತಿದೆ. ವಿವಿಧ…

4 hours ago

ಓದುಗರ ಪತ್ರ: ಪೊಲೀಸರಿಗೆ ಧನ್ಯವಾದಗಳು

ನಾಡಹಬ್ಬ ದಸರಾ ಮಹೋತ್ಸವದಲ್ಲಿ ಈ ಬಾರಿ ಜನ ಸಾಗರವೇ ಹರಿದು ಬಂದಿತ್ತು. ದಸರಾ ಅಂಗವಾಗಿ ಆಯೋಜಿಸಿದ್ದ ಯುವ ಸಂಭ್ರಮ, ಯುವ…

4 hours ago

ಓದುಗರ ಪತ್ರ: ಮುಷ್ಕರ ಮುಂದುವರಿದಿದೆ

ಸರ್ಕಾರವೇ ನಮ್ಮ ದೇವರಾಗಿದೆ ಮೇಲಾಧಿಕಾರಿಗಳ ಮೇಲೆ ಗೌರವವಿದೆ ಜನರ ಸಮಸ್ಯೆಗಳ ಅರಿವಿದೆ ಅವರಿಗಾದ ಅಡಚಣೆಗೆ ವಿಷಾದವಿದೆ ನಮಗೂ ಬದುಕಿದೆ. ನಮ್ಮದೂ…

4 hours ago