ಅಧಿಕಾರ ರಾಜಕಾರಣದ ಶಕ್ತಿ ಕೇಂದ್ರಗಳಿಗೆ ‘ಜನ’ ಎಂಬುದರ ನಿಜಾರ್ಥವನ್ನು ಮನದಟ್ಟುಮಾಡಬೇಕಿದೆ!
ನಾ ದಿವಾಕರ
ಸಾಮಾಜಿಕವಾಗಿ ವಿಘಟಿತವಾಗುತ್ತಿರುವ, ಸಾಂಸ್ಕೃತಿಕವಾಗಿ ಪ್ರಕ್ಷುಬ್ಧವಾಗುತ್ತಿರುವ ಮತ್ತು ಆರ್ಥಿಕ ವಿಗತಿಯತ್ತ ಸಾಗುತ್ತಿರುವ ಜನಸಮೂಹಗಳ ನಡುವೆ ಅಧಿಕಾರ ರಾಜಕಾರಣದ ಶಕ್ತಿ ಕೇಂದ್ರಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿವೆ. ಮತ್ತೊಂದೆಡೆ, ಭಾರತದ ಅಧಿಕಾರ ರಾಜಕಾರಣ ತನ್ನೆಲ್ಲಾ ಪಾರಂಪರಿಕ ಸೌಂದರ್ಯ ಮತ್ತು ತಾತ್ವಿಕ ಮೌಲ್ಯಗಳನ್ನು ಕಳೆದುಕೊಂಡು, ನಡುಬೀದಿಯಲ್ಲಿ ನಿಂತಿರುವ ಈ ಹೊತ್ತಿನಲ್ಲಿ, ಹೊಸ ರಾಜಕೀಯ ಪರಿಭಾಷೆಗಾಗಿ, ಸಾಂಸ್ಕೃತಿಕ ಭೂಮಿಕೆಗಳಿಗಾಗಿ ಮತ್ತು ಸಾಮಾಜಿಕ ಸೃಜನಶೀಲತೆಗಾಗಿ ಶೋಧಿಸುತ್ತಿರುವ ‘ಜನಗಳು’ ತಮ್ಮ ಅಸ್ತಿತ್ವ ಮತ್ತು ಅಸ್ಮಿತೆಗಳಿಗಾಗಿ ದಿನನಿತ್ಯ ಹೋರಾಡುತ್ತಿದ್ದಾರೆ. ಈ ತಾತ್ವಿಕ ದ್ವಂದ್ವದ ನಡುವೆಯೇ ಭಾರತ ತನ್ನ ೭೫ ವಸಂತಗಳನ್ನು ಪೂರೈಸಿ ಅಮೃತ ಕಾಲದತ್ತ ದಾಪುಗಾಲು ಹಾಕಿದೆ. ನಿಸ್ಸಂದೇಹವಾಗಿ ಒಪ್ಪಲೇಬೇಕಾದ ಅಂಶವೆಂದರೆ ‘ಭಾರತ’ ಎನ್ನುವ ಭೌಗೋಳಿಕ ಕಲ್ಪನೆ ಮತ್ತು ‘ಭಾರತೀಯ’ ಎನ್ನುವ ಮಾನವೀಯ ವಾಸ್ತವವನ್ನು ಪರಸ್ಪರ ಮುಖಾಮುಖಿಯಾಗಿಸುವ ಸಂದರ್ಭ ಎದುರಾಗಿದೆ. ‘ದೇಶ’ ಎಂದರೇನು ಎಂಬ ತಾತ್ವಿಕ ಪ್ರಶ್ನೆಗೆ ರಾಜಕೀಯ ನೆಲೆಯಲ್ಲಿ, ಅಧಿಕಾರದ ಶಕ್ತಿ ಕೇಂದ್ರಗಳಲ್ಲಿ ಉತ್ತರ ಶೋಧಿಸುತ್ತಿರುವ ರಾಜಕೀಯ ಪಕ್ಷಗಳ ನಡುವೆಯೇ ಈ ದೇಶದ ಬಹುಸಂಖ್ಯಾತ ಜನತೆ ತಾವು ಬದುಕಿದ ಮತ್ತು ಬದುಕಬೇಕಾದ ‘ದೇಶ’ವನ್ನು ಕಾಪಾಡಲು ಮುಂದಾಗುತ್ತಿದೆ.
ಭೌತಿಕವಾಗಿ ಪರಿಭಾವಿಸಲಾಗುವ ಭೌಗೋಳಿಕ ‘ದೇಶ’ ಮತ್ತು ಆಧ್ಯಾತ್ಮಿಕ ನೆಲೆಯಲ್ಲಿ ಬೌದ್ಧಿಕವಾಗಿ ಕಲ್ಪಿಸಲಾಗುವ ‘ಜನ’ ಇವರೆಡರ ನಡುವಿನ ತೆಳುಪರದೆಯನ್ನು ಸರಿಸಿ, ಈ ಎರಡೂ ನೆಲೆಗಳನ್ನು ಜೋಡಿಸುವ ಸೂಕ್ಷ್ಮ ತಂತುಗಳನ್ನು ಕಾಪಾಡುವ ಹೊಣೆ ಇಂದು ಸಮಸ್ತ ಭಾರತೀಯರ ಮೇಲಿದೆ. ಭಾರತದ ಪ್ರಜಾತಂತ್ರ ವ್ಯವಸ್ಥೆಗೆ ಆಧಾರಶಿಲೆಯಾಗಿರುವ ಸಂವಿಧಾನ ಮತ್ತು ಸಾಂವಿಧಾನಿಕ ಆಶಯಗಳು ಈ ಎರಡೂ ನೆಲೆಗಳಲ್ಲಿ ಶಿಥಿಲವಾಗುತ್ತಿರುವ ಸಂದರ್ಭದಲ್ಲಿ ಸಾಮಾನ್ಯ ಜನರು ಸ್ಪಂದನೆಯ ಬಾಹುಗಳನ್ನು ಎದುರು ನೋಡುತ್ತಿದ್ದಾರೆ. ಶತಮಾನಗಳ ಕಾಲ ಹಲವು ಪೀಳಿಗೆಗಳ ಮೂಲಕ ಮತ್ತು ಸಮಕಾಲೀನ ಭಾರತದ ೭೫ ವಸಂತಗಳ ಮೂಲಕ ಕಟ್ಟಿ ಬೆಳೆಸಿರುವ ಒಂದು ದೇಶವನ್ನು ಈ ಸಂವಿಧಾನದ ಆಶಯದಂತೆ ಸಂರಕ್ಷಿಸುವ ಗುರುತರ ಜವಾಬ್ದಾರಿಯನ್ನು ಹೊತ್ತ ಒಂದು ಜನಸಮೂಹ, ಸೋದರತೆ, ಸಮಾನತೆ, ಸಮನ್ವಯತೆ, ಸೌಹಾರ್ದತೆ, ಮಾನವೀಯತೆ, ಸಂವೇದನೆ ಮತ್ತು ಮಾನವೀಯ ಮೌಲ್ಯಗಳಿಗಾಗಿ ಪರಿತಪಿಸುವಂತಹ ಪರಿಸ್ಥಿತಿಯನ್ನು ಅಧಿಕಾರದ ಶಕ್ತಿ ಕೇಂದ್ರಗಳು ನಿರ್ಮಿಸಿಬಿಟ್ಟಿವೆ. ಇಂದು ಈ ಅಧಿಕಾರ ಕೇಂದ್ರಗಳೇ ತಮ್ಮದೇ ಆದ ಅಸ್ತಿತ್ವಕ್ಕಾಗಿ ಭಾರತವನ್ನು ಜೋಡಿಸಲು ಮತ್ತು ಭಾರತಕ್ಕೆ ಸ್ಪಂದಿಸಲು ಪೈಪೋಟಿ ನಡೆಸುತ್ತಿವೆ.
ಯಾರನ್ನು ಜೋಡಿಸಬೇಕು? ಯಾರಿಗೆ ಸ್ಪಂದಿಸಬೇಕು? ತನ್ನ ೭೫ನೆಯ ವಸಂತದಲ್ಲಿ ಸ್ವತಂತ್ರ ಭಾರತದ ಬಹುಸಂಖ್ಯಾತ ಜನರು ಪರಸ್ಪರ ವಿಶ್ವಾಸದೊಂದಿಗೆ, ಪ್ರೀತ್ಯಾದರಗಳೊಂದಿಗೆ ಬದುಕುತ್ತಿದ್ದರೂ, ಮಾನವೀಯ ಸ್ಪಂದನೆಗಾಗಿ ಹಾತೊರೆಯುವ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ವ್ಯಕ್ತಿಗತ ನೆಲೆಯಲ್ಲಿ ಮಾನವ ಸಂಬಂಧಗಳನ್ನು ಗಟ್ಟಿಗೊಳಿಸುತ್ತಿರುವ ಒಂದು ಸಮಾಜವನ್ನು ಜಾತಿ ಮತಗಳ ನೆಲೆಯಲ್ಲಿ ವಿಘಟನೆಗೊಳಪಡಿಸುತ್ತಿರುವ ಅಧಿಕಾರದ ಶಕ್ತಿ ಕೆಂದ್ರಗಳು ಈ ಮಾನವೀಯ ಸ್ಪಂದನೆಗೆ ಅಗತ್ಯವಾದ ಎಲ್ಲ ಬೌದ್ಧಿಕ-ಸಾಂಸ್ಕೃತಿಕ ನೆಲೆಗಳನ್ನೂ ನಾಶಪಡಿಸುತ್ತಲೇ ಬಂದಿವೆ. ಭಾರತವನ್ನು ಜೋಡಿಸುವ ಮತ್ತು ಜನತೆಗೆ ಸ್ಪಂದಿಸುವ ರಾಜಕೀಯ ಕೈಗಳು ಈ ಭಗ್ನ ನೆಲೆಗಳನ್ನು ಮತ್ತಷ್ಟು ಶಿಥಿಲಗೊಳಿಸುವ ಪ್ರಯತ್ನದಲ್ಲಿವೆ. ಹಾಗಾಗಿಯೇ ಸಾಂಸ್ಕೃತಿಕ ಶಕ್ತಿ ಕೇಂದ್ರದಿಂದ ದೌರ್ಜನ್ಯಕ್ಕೊಳಗಾದ ಅಮಾಯಕ ಹೆಣ್ಣುಮಕ್ಕಳು ಇಂದು ತಮ್ಮ ನೋವಿಗೆ ಸ್ಪಂದಿಸುವವರು ಯಾರೂ ಇಲ್ಲವೇ ಎಂದು ಪರಿತಪಿಸುವಂತಾಗಿದೆ. ಇದು ಕೇವಲ ಮುರುಘಾ ಮಠಕ್ಕೆ ಸೀಮಿತವಾದ ವಿದ್ಯಮಾನವಲ್ಲ. ಕಾಶ್ಮೀರದ ಕಥುವಾದಿಂದ ಚಿತ್ರದುರ್ಗದವರೆಗೂ ವಿಸ್ತರಿಸುವ ಒಂದು ಕರಾಳ ನೆರಳು ಎನ್ನುವುದನ್ನು ಗಮನಿಸಬೇಕಿದೆ.
ಡಿಜಿಟಲ್ ಯುಗದಲ್ಲಿ ಭಾರತ ಸಮೃದ್ಧಿಯಾಗುತ್ತಿದೆ ಎನ್ನುವುದನ್ನು ಕಾಣಲು ನಾವಿಂದು ಕಳೆದ ಐದು ವರ್ಷಗಲ್ಲಿ ಕೋಟ್ಯಧಿಪತಿಗಳಾಗಿರುವ ಹಲವು ಉದ್ಯಮಿಗಳತ್ತ ನೋಡಬೇಕಾಗುತ್ತದೆ. ಈ ಸಮೃದ್ಧಿಯ ಮತ್ತೊಂದು ಕರಾಳ ರೂಪವನ್ನು ಮಳೆನೀರಿನಲ್ಲಿ ಕೊಚ್ಚಿ ಹೋಗುವ ಜೋಪಡಿಗಳಲ್ಲಿ ಕಾಣಬೇಕಿದೆ. ಆರ್ಥಿಕ ಅಭಿವೃದ್ಧಿಯನ್ನು ಏಕಮುಖಿಯಾಗಿ ನೋಡುವ ಒಂದು ಆಡಳಿತ ದೃಷ್ಟಿಕೋನವನ್ನು ಈ ದೇಶದ ಹಿತವಲಯದ ಮಧ್ಯಮವರ್ಗಗಳೂ ಅಳವಡಿಸಿಕೊಂಡಿರುವುದರಿಂದ, ತಾವು ನಿರ್ಮಿಸಿಕೊಂಡ ಗೋಡೆಗಳಿಂದಾಚೆಗಿನ ಅಥವಾ ಎಳೆದುಕೊಂಡ ಲಕ್ಷ್ಮಣರೇಖೆಯ ಕೆಳಗಿನ ಜನಸಮುದಾಯಗಳತ್ತ ನೋಡುವ ವ್ಯವಧಾನವನ್ನು ನವಭಾರತದ ಒಂದು ವರ್ಗ ಕಳೆದುಕೊಂಡಿದೆ. ಈ ಪ್ರವೃತ್ತಿಯ ಒಂದು ಮಾದರಿಯನ್ನು ಬೆಂಗಳೂರಿನ ಮಳೆಯ ಅವಾಂತರದ ನಡುವೆಯೂ ಕಾಣಬಹುದಿತ್ತು. ಶ್ರೀಮಂತಿಕೆ ಮತ್ತು ಐಷಾರಾಮಿ ಬದುಕನ್ನು ಪ್ರಕ್ಷುಬ್ಧಗೊಳಿಸುವ ವರುಣಾಘಾತ ಕೆಳಸ್ತರದ ಸಮಾಜದಲ್ಲಿ ನೂರಾರು ಜೀವಗಳ ಜೀವನೋಪಾಯದ ಮಾರ್ಗಗಳನ್ನೇ ಕಸಿದುಕೊಳ್ಳುತ್ತದೆ. ಆದರೂ ನಮ್ಮ ಆಡಳಿತ ವ್ಯವಸ್ಥೆ, ಮಾಧ್ಯಮಗಳು ಮತ್ತು ಔದ್ಯಮಿಕ ಜಗತ್ತು ಬಂಡವಾಳ ಸೃಷ್ಟಿಸುವವರಿಗೆ ಸ್ಪಂದಿಸುವ ಮಟ್ಟಿಗೆ ದೇಶ ಕಟ್ಟುವ ಶ್ರಮಜೀವಿಗಳ ನೋವಿಗೆ ಸ್ಪಂದಿಸುತ್ತಿಲ್ಲ. ಕೊಚ್ಚಿಹೋದ ಜೋಪಡಿ-ಜಾನುವಾರುಗಳಿಗಿಂತಲೂ ಹೆಚ್ಚು ಬಿಂಬಿತವಾಗುವುದು ಹೊಳೆಯಂತಾದ ಸಿರಿವಂತರ ವಿಲ್ಲಾಗಳು ಮತ್ತು ವಸತಿ ಸಮುಚ್ಚಯಗಳು.
ತನ್ನ ಕಳೆದುಕೊಂಡ ನೆಲೆಯನ್ನು ಮರುಶೋಧಿಸಲು ೩೫೦೦ ಕಿಲೋಮೀಟರ್ ಉದ್ದದ ಭಾರತ್ ಜೋಡೋ ಯಾತ್ರೆಯನ್ನು ಕೈಗೊಂಡಿರುವ ಕಾಂಗ್ರೆಸ್ ೨೦೨೪ರ ಚುನಾವಣೆಯ ವೇಳೆಗೆ ಪುಟಿದೇಳುವ ಹುರುಪಿನಲ್ಲಿ ಮುನ್ನಡೆದಿದೆ. ಕಳೆದ ಎಂಟು ವರ್ಷಗಳಲ್ಲಿ ಮೊದಲ ಬಾರಿ ಕಾಂಗ್ರೆಸ್ ಪಕ್ಷ ತಳಮಟ್ಟದ ಜನರನ್ನು ಸಂಪರ್ಕಿಸಬೇಕಾದ ಅನಿವಾರ್ಯತೆಯನ್ನು ಮನಗಂಡಿರುವುದು ಸ್ವಾಗತಾ–ರ್ಹವೇ. ಹಾಗೆಯೇ ಕೋಮುವಾದ, ಮತಾಂಧತೆ, ದ್ವೇಷ ರಾಜಕಾರಣ ಮತ್ತು ಸಾಂಸ್ಕೃತಿಕ ವಿಕೃತಿಗಳಿಂದ ಜರ್ಝರಿತವಾಗಿರುವ ಭಾರತದ ಸಾಮಾಜಿಕ ನೆಲೆಗಳನ್ನು ಮರುಜೋಡಿಸುವ ಪ್ರಯತ್ನವೂ ಸ್ತುತ್ಯಾರ್ಹವೇ. ಈ ಜೋಡಣೆಯ ಯಾತ್ರೆಯಲ್ಲಿ ಕಾಂಗ್ರೆಸ್ ಪಕ್ಷ ತನ್ನ ಕಾರ್ಯಕರ್ತರನ್ನು ಬಡಿದೆಬ್ಬಿಸುವುದರೊಂದಿಗೇ, ಮತದಾರ ಪ್ರಭುಗಳನ್ನು ಪುನರ್ ಸಂಪರ್ಕಿಸುವ ರಾಜಕೀಯ ಮಹತ್ವಾಕಾಂ–ಕ್ಷೆಯನ್ನೂ ಹೊಂದಿದೆ. ಇದರ ಸಾಫಲ್ಯ ವೈಫಲ್ಯಗಳನ್ನು ಬದಿಗಿಟ್ಟು ನೋಡುವು–ದಾದರೆ, ಕಾಂಗ್ರೆಸ್ ಪಕ್ಷದ ನಾಯಕರಿಗೆ ತಾವು ಏನನ್ನು ಜೋಡಿಸಲು ಯತ್ನಿಸುತ್ತಿದ್ದೇವೆ ಎಂಬ ಪರಿವೆ ಅವಶ್ಯವಾಗಿ ಇರಬೇಕಾಗಿದೆ. ಹಿಂದಿ ಹೇರಿಕೆಯ ಭಾಷಿಕ ಅಧಿಪತ್ಯ, ಹಿಂದುತ್ವವಾದಿ ರಾಜಕಾರಣದ ಮತಧಾರ್ಮಿಕ ಆಧಿಪತ್ಯ ಮತ್ತು ತತ್ಸಂಬಂಧಿ ಸಾಂಸ್ಕೃತಿಕ ಆಧಿಪತ್ಯವು ಭಾರತೀಯ ಸಮಾಜದಲ್ಲಿ ನಿರ್ಮಿಸು–ತ್ತಿರುವ ಬೇಲಿಗಳನ್ನು ಭೇದಿಸಿ, ಜನಸಾಮಾನ್ಯರನ್ನು ಸಂವಿಧಾನದ ಸೋದರತೆಯ ಆಶಯದಂತೆ ಜೋಡಿಸುವುದು ಕಾಂಗ್ರೆಸ್ ನಾಯಕರ ಆದ್ಯತೆಯಾಗಬೇಕಿದೆ.
(ಮುಂದುವರಿಯುವುದು)
ಕಾಡಾನೆಗಳ ಹಾವಳಿಯಿಂದಾಗಿ ಕಾಡಂಚಿನ ಜನರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಆನೆಗಳನ್ನು ಕೊಲ್ಲಲು ಅನುಮತಿ ನೀಡಬೇಕು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ…
ರಾಜ್ಯಸಭೆಯ ಕಲಾಪದ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡುವ ಭರದಲ್ಲಿ ಕೆಲವರು ಅಂಬೇಡ್ಕರ್ ಎನ್ನುವುದನ್ನು ಈಗ ಫ್ಯಾಷನ್…
ದಾ.ರಾ. ಮಹೇಶ್ ವೀರನಹೊಸಹಳ್ಳಿ: ತಾಲ್ಲೂಕಿನ ಬನ್ನಿಕುಪ್ಪೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ಅವರೆಕಾಯಿ ಮಾರಾಟದಿಂದಾಗಿ ಟ್ರಾಫಿಕ್ ಜಾಮ್ ಆಗುತ್ತಿದ್ದು, ವಾಹನಗಳ ಸಂಚಾರಕ್ಕೆ…
ಮಂಡ್ಯ: ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20,21 ಮತ್ತು 22ರಂದು ಮೂರು ದಿನಗಳ ಕಾಲ ಜರುಗಲಿರುವ ಕನ್ನಡ ನುಡಿ ಜಾತ್ರೆ…
ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…
ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…