ಎಡಿಟೋರಿಯಲ್

ಸಂತರ ಸಹವಾಸ ; ವಿಭಿನ್ನ ಅನುಭವ

ನಾನು, ಸೂಫಿ ನಾಥ ಶಾಕ್ತ ಆರೂಢ ಅವಧೂತ ನವಯಾನ ಮೊದಲಾದ ದಾರ್ಶನಿಕ ಪಂಥಗಳ ಮೇಲೆ ಸಂಶೋಧನೆ ಕೈಗೊಂಡೆ. ಇದಕ್ಕಾಗಿ ಕೇದಾರ, ಬದರಿ, ಯಮುನೋತ್ರಿ, ಹರಿದ್ವಾರ, ಹೃಷಿಕೇಶ, ಕದ್ರಿ, ಕೊಲ್ಕತ್ತೆ, ಕಾಮಾಖ್ಯ, ಕಲಬುರ್ಗಿ, ಅಜ್ಮೀರ್, ದೆಹಲಿ, ಶಿರಡಿ, ಕೊಲ್ಹಾಪುರ, ನಾಗಪುರ, ತ್ರ್ಯಂಬಕೇಶ್ವರ, ತಾರಾಪೀಠಗಳಿಗೆ ಹೋದೆ. ನೇಪಾಳ ಭೂತಾನ ಟರ್ಕಿಗಳಲ್ಲಿ ಅಡ್ಡಾಡಿದೆ; ಜೋಗಿ ಫಕೀರ ಸಾಧು ಭಿಕ್ಕುಗಳನ್ನು ಭೇಟಿಯಾದೆ. ಈ ತಿರುಗಾಟ-ಭೇಟಿಗಳು ನನ್ನ ಆಲೋಚನ ಕ್ರಮ ಮತ್ತು ವ್ಯಕ್ತಿತ್ವವನ್ನು ಆಳವಾಗಿ ಪ್ರಭಾವಿಸಿದವು.

ಭಾರತದ ಆನುಭಾವಿಕ ಪಂಥಗಳ ವಿಶೇಷತೆಯೆಂದರೆ, ಅವು ಸಾಹಿತ್ಯ, ಸಂಗೀತ, ದರ್ಶನ ಆಚರಣೆಯ ಧಾರೆಗಳು ಕೂಡಿದ ಹೊಳೆಗಳಾಗಿರುವುದು. ಅವುಗಳ ತತ್ವ ಮತ್ತು ಆಚರಣೆಯಲ್ಲೇ ತಿರುಗಾಟ-ಧ್ಯಾನ, ಬಯಲು-ಆಲಯ, ಮಾತು-ಮೌನಗಳಿರುವುದು. ಇವು ಮೇಲ್ನೋಟಕ್ಕೆ ವಿರುದ್ಧ ಜಗತ್ತುಗಳು. ಆದರೆ ಈ ಜಗತ್ತುಗಳ ಮಧ್ಯೆ ಸ್ನೇಹ-ಸಂಘರ್ಷಗಳ ಸಜೀವ ಲಗತ್ತಿದೆ. ಬುದ್ಧ ದಿನವಿಡೀ ನಡೆಯುತ್ತಿದ್ದ. ಸಂಜೆ-ಮುಂಜಾನೆ ಧ್ಯಾನಿಸುತ್ತಿದ್ದ. ಬಳಿಕ ಜನರೊಡನೆ ಸಂವಾದಿಸುತ್ತಿದ್ದ. ಗೋರಖನಾಥನ ಮೂರ್ತಿಗಳು ಸಾಮಾನ್ಯವಾಗಿ ಪದ್ಮಾಸನ ಹಾಕಿದ ಧ್ಯಾನಸ್ಥ ಭಂಗಿಯಲ್ಲಿವೆ. ಆದರೆ ಕದ್ರಿಬೆಟ್ಟದ ವಿಗ್ರಹವು ನಡಿಗೆಯ ಅವಸ್ಥೆಯಲ್ಲಿದೆ. ಧ್ಯಾನ-ನಡಿಗೆಗಳು ಹಕ್ಕಿಯ ಎರಡು ರೆಕ್ಕೆಗಳಂತೆ. ಇವನ್ನು ಪರಮಹಂಸರು ‘ಕುಟೀಚಕ’, ‘ಬಹೂದಕ’ ಎಂದು ಕರೆದರು. ಕುಟೀಚಕರೆಂದರೆ ಒಂದೆಡೆ ಕೂತು ಧ್ಯಾನ ಮಗ್ನವಾಗುವವರು; ಬಹೂದಕರು ಅನುಭವ ಜ್ಞಾನ ಹುಡುಕಿ ಸದಾ ಅಲೆಯುವವರು. ತಿರುಗಾಟ-ಧ್ಯಾನಗಳು ಅರ್ಥಪೂರ್ಣವಾಗಿ ಕೂಡುವ ಗಳಿಗೆಯಲ್ಲೆ ಆಧ್ಯಾತ್ಮಿಕ ಸಾಧನೆ, ಲೌಕಿಕ ಜ್ಞಾನಸೃಷ್ಟಿ, ಅರ್ಥಪೂರ್ಣ ಬದುಕು, ಅನುಭವದ ಕಲಾತ್ಮಕ ರೂಪಾಂತರಗಳು ಸಂಭವಿಸುತ್ತವೆ.

ನಾಥರಲ್ಲಿ ತಿರುಗುವ ಯೋಗಿಗಳನ್ನು ರಮತೇ ಸಾಧು ಎನ್ನುವರು. ಕದ್ರಿಬೆಟ್ಟದ ನಾಥರು 12 ವರ್ಷಗಳಿಗೊಮ್ಮೆ ತ್ರ್ಯಂಬಕೇಶ್ವರದಿಂದ 1200 ಕಿ.ಮೀ. ದೂರ ನಡೆದು ಬರುವರು. ಅವರ ಜತೆ ತ್ರ್ಯಂಬಕೇಶ್ವರದಿಂದ ನಾಸಿಕದವರೆಗೆ ನಡೆವ ಅವಕಾಶ ನನಗೆ ಒದಗಿತ್ತು. ಒಮ್ಮೆ ನಾನೂ ಕಲೀಮನೂ ಬಾಬಾಬುಡನಗಿರಿಗೆ ಹೋಗುವಾಗ್ಗೆ, ಹಾದಿಯಲ್ಲಿ ಫಕೀರ ಕಂಡನು. ಕಾಡು ಪ್ರದೇಶ. ಬಸ್ಸೂ ಇದ್ದಿಲ್ಲ. ಹತ್ತಿಸಿಕೊಳ್ಳಬೇಕೆಂದು ಕಾರು ನಿಲ್ಲಿಸಿದೆವು. ಆತ ಕಾಶ್ಮೀರದಿಂದ ನೂರಾರು ದರ್ಗಾ ಭೇಟಿಮಾಡುತ್ತ ಬಂದಿದ್ದ. ಮುಂದೆ ತಮಿಳುನಾಡಿನ ನಾಗೂರಿಗೆ ಹೋಗಲಿದ್ದ. ಹೆಗಲಲ್ಲಿ ಜೋಳಿಗೆ-ಕಂಬಳಿ. ಕೈಯಲ್ಲಿ ಉಣ್ಣಲು ಕಪಾಲಚಿಪ್ಪು-ಇಷ್ಟೇ ಆಸ್ತಿ. ಆತ ನಮ್ಮ ವಾಹನವೇರಲು ನಿರಾಕರಿಸಿದ. ನಡೆದೇ ಗಿರಿಯನ್ನೇರಿದ. ಔರಂಗಾಬಾದ್ ಹಾದಿಯಲ್ಲಿ ಭೇಟಿಯಾದ ಸಾಧುವಿಗೊ, ಕಾಲೂ ಇರಲಿಲ್ಲ. ನಾಗಾಲಿಯ ಸೈಕಲ್ಲಿನಲ್ಲಿ ದೇಶ ಸುತ್ತುತ್ತಿದ್ದನು. ಹಿಮಾಲಯದ ಚಾರಣದಲ್ಲಿ ನೂರಾರು ಸಾಧುಗಳನ್ನು ಕಂಡಿರುವೆ. ಮಳೆ, ಹಿಮಪಾತ, ಬಿಸಿಲು, ಚಳಿಗಳಲ್ಲಿ ಚಲಿಸುತ್ತಲೇ ಇರುತ್ತಾರೆ.

ಎಲ್ಲ ಬಗೆಯ ತಿರುಗಾಟಗಳೂ ನನ್ನನ್ನು ಸೆಳೆಯುತ್ತವೆ. ಸಂತರ ಆತ್ಮಚರಿತ್ರೆಗಳಲ್ಲಿ ತಿರುಗಾಟದ ವಿವರಗಳು ಸಾಮಾನ್ಯ. ನಾನು ವೈಯಕ್ತಿಕವಾಗಿ ಒಡನಾಡಿದ ಹಂಪಿಯ ಸದಾಶಿವಯೋಗಿಗಳ ‘ಸತ್ಯದ ಹುಡುಕಾಟ’, ಶ್ರೀಎಂ ಅವರ ‘ಹಿಮಾಲಯದ ಗುರುವಿನ ಗರಡಿಯಲ್ಲಿ’ ಕೃತಿಗಳಲ್ಲೂ ತಿರುಗಾಟಗಳಿವೆ. ಶ್ರೀಎಂ ಚಿಕ್ಕಂದಿನಲ್ಲೇ ಮನೆಮಾರು ತೊರೆದು ಏಕಾಂಗಿಯಾಗಿ ದೇಶಾಟನೆ ಮಾಡಿದವರು. ಪೂರ್ವಾಶ್ರಮದ ಹೆಸರು ಮಮ್ತಾಜ್ ಅಲಿಖಾನ್. ಅವರೊಂದು ಬಾರಿ ಕನ್ಯಾಕುಮಾರಿಯಿಂದ ಶ್ರೀನಗರದವರೆಗೆ ಪಾದಯಾತ್ರೆ ಮಾಡಿದರು. ಅದಕ್ಕೆ ‘ವಾಕ್ ಆಫ್ ಹೋಪ್’ ಎಂದು ಕರೆದಿದ್ದರು. ‘ಭಾರತದಲ್ಲಿ ಧಾರ್ಮಿಕ ದ್ವೇಷವು ಹೆಚ್ಚುತ್ತಿದೆ. ಈ ಹೊತ್ತಲ್ಲಿ ಧರ್ಮಗಳು ಪರಸ್ಪರ ದ್ವೇಷಕಾರುವುದನ್ನು ಬಿಟ್ಟು ಸಂವಾದಿಸುವ ಅಗತ್ಯವಿದೆ. ಕೋಮುಗಲಭೆ ಭುಗಿಲೆದ್ದಾಗಲೆಲ್ಲ ಮನುಷ್ಯ ಸಂಬಂಧಗಳು ಹರಿದುಹೋಗುತ್ತವೆ. ಅಭಿವೃದ್ಧಿ ಹಿಂಬೀಳುತ್ತದೆ. ನಡಿಗೆ ಮೂಲಕ ಜನರ ಮನಸ್ಸುಗಳನ್ನು ಬೆಸೆಯಬಹುದು’ ಎನ್ನುವುದು ಅವರ ಯಾತ್ರೆಯ ಆಶಯ ವಾಗಿತ್ತು. ಈ ಪಾದಯಾತ್ರೆಯಲ್ಲಿ ಬಾನೂ ನಾನೂ, ತುಂಗಭದ್ರಾ ದಡದ ಹರಿಹರದಿಂದ ಮಲಪ್ರಭಾ ಕಿನಾರೆಯ ಹಾವೇರಿ ತನಕ ನಡೆದವು. ಶ್ರೀಎಂ ಸೂಫಿ ನಾಥ ಅವಧೂತ ಕಬೀರ್ ಸಿದ್ಧ ಪರಂಪರೆಗಳ ಬಗೆಗಿನ ತಿಳಿವುಳ್ಳವರು. ಅವರ ವ್ಯಕ್ತಿತ್ವ, ಕುಟೀಚಕ-ಬಹೂದಕಗಳ ಕೂಡಿಕೆಯ ಪರಿಣಾಮವಾಗಿತ್ತು.

ಶ್ರೀಎಂ ನಮ್ಮೊಟ್ಟಿಗೆ ಮಾತುಕತೆಯಾಡುತ್ತ ‘ನಿನಗೆ ಅರಬ್ಬಿ ಬರುತ್ತಾ?’ ಎಂದು ಕೇಳಿದರು. ಇಲ್ಲವೆಂದೆ. ‘ಬಂದಿದ್ದರೆ ಚೆನ್ನಾಗಿತ್ತು. ಕುರಾನನ್ನು ಸಂಕುಚಿತವಾಗಿ ಮೂಲಭೂತವಾದಕ್ಕೆ ಬೇಕಾಗಿ ವ್ಯಾಖ್ಯಾನಿಸುತ್ತಿದ್ದಾರೆ. ಮಾನವೀಯವಾಗಿ ವ್ಯಾಖ್ಯಾನಿಸುವ ಅಗತ್ಯವಿದೆ. ಧಾರ್ಮಿಕ ಪಠ್ಯಗಳನ್ನು ಮಾನವೀಯವಾಗಿ ವ್ಯಾಖ್ಯಾನಿಸುವುದು ಕೂಡ ಕೇಡನ್ನು ಮುಖಾಮುಖಿ ಮಾಡುವ ಒಂದು ಹಾದಿ. ಭಾರತದ ಧರ್ಮ ಮತ್ತು ದರ್ಶನಗಳು ಪರಸ್ಪರ ಸಂವಾದ ಮಾಡುವ ವಾತಾವರಣ ಹೆಚ್ಚಿಸಬೇಕಿದೆ’ ಎಂದರು. ಶ್ರೀಎಂ ವಾಗ್ಮಿಯಾದರೂ ಅವರಿಗೆ ಮಾತಿನ ಮಿತಿ ತಿಳಿದಿದೆ. ‘ಸತ್ಸಂಗಗಳಿಂದ ದಣಿವಾಗಿದೆ. ಮಾತು ಮೌನ ಮತ್ತು ಧ್ಯಾನದಲ್ಲಿ ಪಡೆಯುವುದನ್ನು ತಡೆಯುತ್ತದೆ. ಸಾಧುಗಳ ಜತೆ ಹಿಮಾಲಯದಲ್ಲಿ ತಿರುಗಾಡುವಾಗಿನ ಕಷ್ಟವೆಂದರೆ, ಅವರು ಸದಾ ಮಾತಾಡುತ್ತಾರೆ. ಹಿಮನದಿಗಳ ಹರಿವನ್ನು ಅಲ್ಲಿನ ಹಕ್ಕಿಗಳ ನಾದವನ್ನು ಹಸಿರಿನ ಸೊಬಗನ್ನು ನೆಲದಲ್ಲಿ ಅರಳುವ ಚಿಗುರು ಹೂವು ನೋಡುವುದಕ್ಕೆ ಪುರುಸೊತ್ತೇ ಇರಲ್ಲ. ತಿರುಗಾಟ ಕೇವಲ ದೇಹದಣಿಸುವ ಚಟುವಟಿಕೆ ಆಗಬಾರದು. ಅದು ನಮ್ಮ ಅನುಭವ, ಭಾವನೆ, ಕಲ್ಪನೆಗಳನ್ನು ಅರಳಿಸಬೇಕು’ ಎಂದರು.

ಶ್ರೀಎಂ ಏಕಮುಖವಾಗಿ ಪ್ರವಚಿಸುವುದಿಲ್ಲ. ಉಪನ್ಯಾಸದ ಬಳಿಕ ಪ್ರಶ್ನೆಗಳನ್ನು ಆಹ್ವಾನಿಸುತ್ತಿದ್ದರು. ‘ನಾನೊಬ್ಬ ಗೃಹಸ್ಥ. ದೈನಿಕ ಬದುಕಿನ ಕೆಲಸಗಳ ಜತೆ ತುಸು ಸಾಧನೆ ಮಾಡಿದ್ದೇನೆ. ನಿಮಗೂ ಇದು ಸಾಧ್ಯ’ ಎನ್ನುತ್ತಿದ್ದರು. ಅವರಿಗೆ ನನ್ನ ವೈಚಾರಿಕ ನೆಲೆಯ ಪ್ರಶ್ನೆಗಳು ಬಾಲಿಶ ಅನಿಸಿರಬೇಕು. ಅವರೆಂದರು: ‘ನೋಡಿ, ನಮ್ಮ ಬುದ್ಧಿಯ ಜಾಗೃತ ಪ್ರಜ್ಞೆ ಮೂರು ಆಯಾಮಗಳಲ್ಲಿ ಮಾತ್ರ ಲೋಕ ಗ್ರಹಿಸಬಲ್ಲದು. ಪಂಚೇಂದ್ರಿಯಗಳ ಮೂಲಕ ಸಿಗುವ ಅನುಭವವೇ ಅದಕ್ಕೆ ಆಧಾರ. ಮಾನವ ಮೆದುಳಿಗಿರುವ ಅಪಾರ ಶಕ್ತಿಯಿನ್ನೂ ಆಕ್ಟಿವೇಟಾಗಿಲ್ಲ. ಅದೊಮ್ಮೆ ಸಾಧ್ಯವಾದರೆ ಲೋಕ ಭಿನ್ನವಾಗಿ ಕಾಣಬಹುದು. ಅನುಭವವೂ ಬೇರೆಯಾಗಬಹುದು. ನಮ್ಮ ಸೀಮಿತ ಬೌದ್ಧಿಕತೆಗೆ ದಕ್ಕಿದ್ದನ್ನು ಮಾತ್ರ ಸತ್ಯವೆಂದು ಭಾವಿಸಬೇಕಿಲ್ಲ’. ಅವರ ವಾದಸರಣಿ ಮತ್ತು ಆಚರಣೆಯಲ್ಲಿರುವ ಎಷ್ಟೋ ಸಂಗತಿಗಳು ನನಗೆ ಒಪ್ಪಿಗೆಯಾಗಿಲ್ಲ. ಅವರ ಆನುಭಾವಿಕ ದಾರ್ಶನಿಕತೆಗೂ ಬಲಪಂಥೀಯ ರಾಜಕೀಯ ಮುಂದಾಳುಗಳೊಂದಿಗಿನ ಒಡನಾಟಕ್ಕೂ ಯಾವ ಪರಿಯ ನಂಟೆಂದೇ ಅರ್ಥವಾಗುವುದಿಲ್ಲ. ಆದರೆ ಅವರ ಸರಳತೆ, ಪ್ರಾಮಾಣಿಕತೆ, ಪ್ರಯೋಗಶೀಲತೆಗಳು ಆಕರ್ಷಕವಾಗಿವೆ. ಇಂತಹುದೇ ಚುಂಬಕ ಶಕ್ತಿ ಮಹಾಬೋಽ ಸೊಸೈಟಿಯ ಆನಂದ ಭಂತೇಜಿಯವರಲ್ಲೂ ವಿಪಶನ್ ಧ್ಯಾನದ ಕೋರ್ಸಿನಲ್ಲಿ ಸಿಕ್ಕ ಅವರ ಸಹವಾಸದಲ್ಲಿ ನಾನಿದನ್ನು ಅನುಭವಿಸಿದ್ದೇನೆ.

ಹಂಪಿಯ ಸದಾಶಿವ ಯೋಗಿಗಳು, ಒಬ್ಬ ವೈಚಾರಿಕ ಪ್ರಜ್ಞೆಯ ಸಂತ. ಅವರು ಹಿಮಾಲಯ, ಕಾಶ್ಮೀರ, ಉಜ್ಜಯಿನಿ, ಮುಂಬೈ ಒಳಗೊಂಡಂತೆ ಹಿಂದೂಸ್ತಾನವನ್ನೇ ಅಡ್ಡಾಡಿದವರು. ತಿರುಗಾಟ ಮುಗಿಸಿ ಹಂಪಿಯಲ್ಲಿ ನೆಲೆನಿಂತವರು. ಜ್ಞಾನ ಧ್ಯಾನ ಸಾಧನೆಯಿದ್ದರೂ ಶಿಶುಮುಗ್ಧತೆ ಉಳಿಸಿಕೊಂಡವರು. ಸಾಮಾನ್ಯ ಜನರ ಜತೆ ಆಧ್ಯಾತ್ಮಿಕ ಚರ್ಚೆ ನಡೆಸುತ್ತಿದ್ದವರು. ಅವರು ತಮ್ಮ ಸತ್ಸಂಗ ಕಾರ್ಯಕ್ರಮಕ್ಕೆ ‘ಜಿಜ್ಞಾಸುಗಳ ಸಂಶಯ ನಿವಾರಣೆ’ ಎನ್ನುತ್ತಿದ್ದರು. ಆಶ್ರಮದಲ್ಲಿ ಹಣ್ಣಿನ ಗಿಡ ಬೆಳೆಸಿದ್ದರು. ಪ್ರತಿವರ್ಷವೂ ನಮಗೆ ಹಣ್ಣಿನಬುಟ್ಟಿ ಬರುತ್ತಿತ್ತು. ಕೋವಿಡ್ ವರ್ಷಗಳಲ್ಲಿ ಅವರು ಮೌನವ್ರತ ಧರಿಸಿದರು. ಆಹಾರ, ನೀರು ಕಡಿಮೆಗೊಳಿಸುತ್ತ ದೇಹಬಿಟ್ಟರು.

ಸಾಮಾನ್ಯವಾಗಿ ಸಂತರು ಪೂರ್ವಾಶ್ರಮದ ಬಗ್ಗೆ ಬಿಚ್ಚಿಕೊಳ್ಳುವುದಿಲ್ಲ. ಗತದ ಎಲ್ಲ ಭಾರ ಇಳಿಸಿರುವಂತೆ ಬದುಕುತ್ತಿರುತ್ತಾರೆ. ಆದರೆ ಸದಾಶಿವಯೋಗಿ ಹಾಗೂ ಶ್ರೀಎಂ ತಾವು ಮನೆ ಏಕೆ ಬಿಡಬೇಕಾಯಿತು, ಎಲ್ಲೆಲ್ಲಿ ತಿರುಗಾಡಬೇಕಾಯಿತು ಎಂಬ ಬಗ್ಗೆ ಮುಕ್ತವಾಗಿ ಹೇಳಿಕೊಂಡಿದ್ದಾರೆ. ಕೆಲವು ಯೋಗಿಗಳಿಗೆ ವೈಯಕ್ತಿಕ ಬದುಕಿನ ಯಾವುದೊ ಘಟನೆ ಸನ್ಯಾಸಕ್ಕೆ ಪ್ರೇರಿಸಿರುತ್ತದೆ. ಕರ್ನಾಟಕದಲ್ಲಿ ಸಾಧುಗಳು ಸೇರುವ ಜಾತ್ರೆಗಳೆಂದರೆ- ಚಿಂಚಲಿ, ತಿಂತಿಣಿ, ಅಂಬಾಮಠ, ಕೊಡೇಕಲ್ಲು, ನಾಯಕನಹಟ್ಟಿ, ಹುಬ್ಬಳ್ಳಿ. ಅಂಬಾಮಠದ ಜಾತ್ರೆಯಲ್ಲಿ ಕಾಲಿಲ್ಲದ ಒಬ್ಬ ಸಾಧು ತತ್ವಪದಗಳನ್ನು ಹಾಡುತ್ತಿದ್ದ. ಚಹ ಕುಡಿಸಿ ವಿಶ್ವಾಸ ಗಳಿಸಿದ ಬಳಿಕ ಸಾಧುವಾಗಲು ಕಾರಣ ಶೋಧಿಸಿದೆ. ಖಾಸಗಿ ಬಸ್ಸಿನ ಕಂಡಕ್ಟರ್ ಆಗಿದ್ದಾಗ ಅಪಘಾತದಲ್ಲಿ ಕಾಲು-ಬಹುಶಃ ಪುರುಷಶಕ್ತಿ ಕೂಡ-ಹೋಗಿತ್ತು. ಹೆಂಡತಿ ಹೊರ ಹಾಕಿದ ಬಳಿಕ ಆಶ್ರಯಕೊಟ್ಟಿದ್ದು ಸಾಧುಗಳ ಗುಂಪು. ಕಾವಿಯುಟ್ಟು ದಮ್ಮಡಿ ಹಿಡಿದು ಹಾಡುತ್ತ ತಿರುಗುತ್ತಿದ್ದ-ಕಾಲಿನ ಐಬು ತಿರುಗಾಟಕ್ಕೆ ಅಡ್ಡಿಯಾಗಿಲ್ಲ ಎಂಬಂತೆ.

ದರ್ಗಾ ಮತ್ತು ಆಶ್ರಮಗಳಲ್ಲಿ ಭಿಕ್ಷುಕರಂತೆ ತೋರುವ ಕೆಲವರು ತಿರುಗಾಟವನ್ನೇ ಮಾಡಿರುವುದಿಲ್ಲ. ಇದ್ದಲ್ಲೇ ಗುಪ್ತಸಾಧನೆ ಮಾಡಿರುತ್ತಾರೆ. ಸಾರ್ವಜನಿಕ ಚರ್ಚೆಗಳಲ್ಲಿ ನಿರಾಸಕ್ತಿಯುಳ್ಳ ಅವರು, ತಮ್ಮ ಮನೋಭಾವಕ್ಕೆ ಹತ್ತಿರವಾದವರು ಸಿಕ್ಕರೆ, ಪೊರೆಕಳೆದು ನಿರಾಳವಾಗಿ ಬಿಚ್ಚಿಕೊಳ್ಳುವರು. ದೆಹಲಿಯ ನಿಜಾಮುದ್ದೀನ್ ದರ್ಗಾದಲ್ಲಿದ್ದ ಒಬ್ಬ ವೃದ್ಧ, ಪಟ ತೆಗೆಯಲು ಯತ್ನಿಸಿದಾಗ ಮುಖ ತಿರುಗಿಸಿದನು. ಕ್ಯಾಮೆರಾ ಮುಚ್ಚಿಟ್ಟು ಸುಮ್ಮನೆ ಕೂತೆ. ಭಾರತದ ಸೂಫಿಕವಿಗಳ ಬಗ್ಗೆ ಆತ ಮಾತಾಡಿದನು. ಅದೊಂದು ಅಪೂರ್ವವಾದ ಅನುಭೂತಿಯ ಸತ್ಸಂಗ. ಆತ ದೆಹಲಿ ಬಿಟ್ಟು ಎಲ್ಲೂ ಹೋಗದಿದ್ದರೂ, ತನ್ನ ಮಾನಸಕ್ಕೆ ಜಗತ್ತಿನ ಎಲ್ಲ ಸೂಫಿ ದಾರ್ಶನಿಕರನ್ನೂ ಆವಾಹನೆ ಮಾಡಿಕೊಂಡಿದ್ದನು. ಕನ್ನಂಬಾಡಿಯ ಹಿನ್ನೀರಿನಲ್ಲಿ ಅಕಸ್ಮಾತ್ ಭೇಟಿಯಾದ ಸಂತನ ನೆನಪಾಗುತ್ತಿದೆ. ಕಟ್ಟೆಯ ನೀರು ಬೇಸಗೆಯಲ್ಲಿ ಇಳಿದ ಮೇಲೆ ಮುಳುಗಡೆಯಾಗಿದ್ದ ಎಡತೊರೆ ಪಟ್ಟಣದ ಅವಶೇಷಗಳು ಮೇಲೇಳು ತ್ತವೆ. ಅವುಗಳಲ್ಲಿ ಪ್ರಾಚೀನ ಗುಡಿ ಚರ್ಚು ಮಸೀದಿಗಳಿವೆ. ಅವನ್ನು ನೋಡಲು ಗೆಳೆಯರೊಟ್ಟಿಗೆ ಹೋದಾಗ ಮಸೀದಿ ಹೊಕ್ಕೆ. ಅಲ್ಲೊಬ್ಬ ಧ್ಯಾನಸ್ಥನಾಗಿ ಕೂತಿದ್ದನು. ನಿರ್ಜನ ಪ್ರದೇಶದಲ್ಲಿ ಅನಿರೀಕ್ಷಿತವಾಗಿ ವ್ಯಕ್ತಿಯನ್ನು ಕಂಡು ಗಾಬರಿಯಾಯಿತು. ಆತ ಕೈಸನ್ನೆಯಿಂದ ಹತ್ತಿರ ಕರೆದ. ಹೋದೆ. ಕೂರು ಎಂದ. ಕೂತೆ. ‘ಒಬ್ಬರೇ ಇದ್ದೀರಿ. ಆಶ್ಚರ್ಯ’ ಎಂದೆ. ಆತ ನನ್ನೆದೆಯ ಮೇಲೆ ಕೈಯಿಟ್ಟು ‘ಇಲ್ಲಿ ತುಂಬಿರುವ ಪ್ರೀತಿ ಹುಡುಕುತ್ತಿರುವೆ’ ಎಂದನು. ಕ್ಷಣ ಮೈಜುಂಗುಟ್ಟಿತು. ಗಾಬರಿಯೂ ಆಯಿತು. ನನ್ನ ಆತಂಕಿತ ಮುಖ ಕಂಡು ಆತ ಕರುಣೆಯ ದನಿಯಲ್ಲಿ ‘ಹೋಗು. ನಿಮ್ಮವರು ನಿನಗೆ ಹುಡುಕುತ್ತಿರಬಹುದು’ ಎಂದನು.

ಬಹುತೇಕ ಸಂತರು ಮನೆಬಿಟ್ಟರು. ಆದರೆ ಇವರಿಗಿಂತ ದೊಡ್ಡವರೆಂದರೆ, ಸನ್ಯಾಸ ಸ್ವೀಕರಿಸದೆ ಮನೆಬಿಟ್ಟು ಹೋಗದೆ ಕುಟುಂಬ ಸಂಭಾಳಿಸಿದವರು. ಬಿಜಾಪುರದ ಒಂದು ಹಳ್ಳಿಗೆ ಆರೂಢನೊಬ್ಬನ ಪುಣ್ಯತಿಥಿಗೆ ಹೋಗಿದ್ದೆ. ಆತನ ಹೆಂಡತಿ, ನೂರು ವರ್ಷದ ವೃದ್ಧೆ ಇನ್ನೂ ಬದುಕಿದ್ದಾರೆಂದು ತಿಳಿಯಿತು. ಹೋಗಿ ಕಂಡೆ. ಗಂಡ ತನ್ನನ್ನೂ ಮಕ್ಕಳನ್ನೂ ಬಿಟ್ಟು ಸನ್ಯಾಸ ಸ್ವೀಕರಿಸಿದಾಗ ಪಟ್ಟ ದುಃಖ-ಕಷ್ಟಗಳನ್ನು ಆಕೆ ಮರೆತಿರಲಿಲ್ಲ. ಮಕ್ಕಳು ಅಪ್ಪ ಎಲ್ಲಿದ್ದಾನೆಂದು ಕೇಳಿದರೆ ‘ವ್ಯಾಪಾರಕ್ಕೆ ಹುಬ್ಬಳ್ಳಿಗೆ ಹೋಗ್ಯಾನ, ಬರ್ತಾನ’ ಎಂದು ಸಂತೈಸುತ್ತಿದ್ದರಂತೆ. ಆಕೆ ದಿಕ್ಕುಗೆಡಲಿಲ್ಲ. ಹೊಲಮನೆ ಬೀಳುಗೆಡವಲಿಲ್ಲ. ಮಕ್ಕಳನ್ನು ಬೆಳೆಸಿದರು. ಬೇಡವಾದ ಸಂಸಾರ ಬಿಟ್ಟು ಅಕ್ಕ ಯೋಗಿನಿಯಾದರೆ, ಈಕೆ ಸಂಸಾರವನ್ನು ನಿಭಾಯಿಸಿ ಆಧ್ಯಾತ್ಮಿಕ ಅನುಭವ ಪಡೆದ ಯೋಗಿನಿ ಅನಿಸಿತು. ‘ಒಡಲಾಳ’ದ ಸಾಕವ್ವನನ್ನೊ ಲಂಕೇಶರ ‘ಅವ್ವ’ನನ್ನೊ ನೆನಪಿಸುವ ನೂರಾರು ಅಜ್ಞಾತರಿದ್ದಾರೆ. ಇವರೆದುರು ಮನೆಬಿಟ್ಟು ತಿರುಗುವ ‘ಬಹೂದಕ’ರು ಪಲಾಯನವಾದಿಗಳು ಅನಿಸುತ್ತಾರೆ. ಮರಳಿ ಮನೆಗೆ ಬಾರದ ಅವರ ತಿರುಗಾಟ ನಿಷ್ಛಲವೆನಿಸುತ್ತದೆ.

lokesh

Share
Published by
lokesh

Recent Posts

ಓದುಗರ ಪತ್ರ: ಶಾಸಕರ ಅಸಂಬದ್ಧ ಹೇಳಿಕೆ

ಕಾಡಾನೆಗಳ ಹಾವಳಿಯಿಂದಾಗಿ ಕಾಡಂಚಿನ ಜನರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಆನೆಗಳನ್ನು ಕೊಲ್ಲಲು ಅನುಮತಿ ನೀಡಬೇಕು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ…

7 mins ago

ಓದುಗರ ಪತ್ರ: ಅಮಿತ್‌ ಶಾ ಹೇಳಿಕೆ ಖಂಡನೀಯ

ರಾಜ್ಯಸಭೆಯ ಕಲಾಪದ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡುವ ಭರದಲ್ಲಿ ಕೆಲವರು ಅಂಬೇಡ್ಕರ್ ಎನ್ನುವುದನ್ನು ಈಗ ಫ್ಯಾಷನ್…

12 mins ago

ವಾಹನ ಸಂಚಾರಕ್ಕೆ ಸಂಚಕಾರ ತರುತ್ತಿರುವ ಅವರೆಕಾಯಿ ವ್ಯಾಪಾರ

ದಾ.ರಾ. ಮಹೇಶ್‌ ವೀರನಹೊಸಹಳ್ಳಿ: ತಾಲ್ಲೂಕಿನ ಬನ್ನಿಕುಪ್ಪೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ಅವರೆಕಾಯಿ ಮಾರಾಟದಿಂದಾಗಿ ಟ್ರಾಫಿಕ್ ಜಾಮ್ ಆಗುತ್ತಿದ್ದು, ವಾಹನಗಳ ಸಂಚಾರಕ್ಕೆ…

1 hour ago

ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

  ಮಂಡ್ಯ: ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20,21 ಮತ್ತು 22ರಂದು ಮೂರು ದಿನಗಳ ಕಾಲ ಜರುಗಲಿರುವ ಕನ್ನಡ ನುಡಿ ಜಾತ್ರೆ…

2 hours ago

59 ಸಾವಿರ ಶಿಕ್ಷಕರ ಹುದ್ದೆ ಖಾಲಿ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ

ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…

11 hours ago

ಮೈಸೂರಿಗೆ ತೆರಳಲು ಅನುಮತಿ ಕೋರಿ ಕೋರ್ಟ್‌ ಮೋರಿ ಹೋದ ದರ್ಶನ್‌

ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್‌ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…

11 hours ago