ಎಡಿಟೋರಿಯಲ್

ಮಂಜಿನ ನಗರಿ ದಸರಾ ಉತ್ಸವಕ್ಕೆ ವೈಭವಯುತ ತೆರೆ; ಲೋಪದೋಷಗಳನ್ನು ಸರಿಪಡಿಸುವ ಕೆಲಸವಾಗಲಿ

ಮಂಜಿನ ನಗರಿ ಮಡಿಕೇರಿಯಲ್ಲಿ ಕಳೆದ ೯ ದಿನಗಳಿಂದ ನಡೆದ ದಸರಾ ಉತ್ಸವಕ್ಕೆ ವೈಭವಯುತ ತೆರೆ ಬಿದ್ದಿದೆ. ಬುಧವಾರ ರಾತ್ರಿ ದಶಮಂಟಪಗಳ ಆಕರ್ಷಕ ಶೋಭಾಯಾತ್ರೆಯ ಬಳಿಕ ಗುರುವಾರ ಮುಂಜಾನೆ ಬನ್ನಿಮಂಟಪದಲ್ಲಿ ಬನ್ನಿ ಕಡಿಯುವುದರೊಂದಿಗೆ ದಸರಾ ಜನೋತ್ಸವ ಸಂಪನ್ನಗೊಂಡಿದೆ. ಮೂರು ವರ್ಷಗಳ ಬಳಿಕ ನಡೆದ ಅದ್ಧೂರಿ ದಶಮಂಟಪಗಳ ಶೋಭಾಯಾತ್ರೆ ನೋಡುಗರ ಕಣ್ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಆದರೆ, ಸಾಕಷ್ಟು ಮಂದಿ ದಸರಾ ಉತ್ಸವದಲ್ಲಿ ಕಿರಿಕಿರಿ ಅನುಭವಿಸಿದ್ದಾರೆ.

ಮಡಿಕೇರಿ ದಸರಾ ದಶಮಂಟಪಗಳಲ್ಲಿ ಅಳವಡಿಸಲಾಗಿದ್ದ ಚಲನವಲನವನ್ನೊಳಗೊಂಡ ಕಲಾಕೃತಿಗಳ ಪೌರಾಣಿಕ ಕಥಾಹಂದರಗಳು ದೇವಲೋಕವೇ ಧರೆಗಿಳಿದಂತೆ ಭಾಸವಾಗುತ್ತಿದ್ದರೆ, ಕೆಲವರು ದಸರಾದಲ್ಲಿ ನರಕಯಾತನೆ ಅನುಭವಿಸಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಜನರು ಮಂಟಪಗಳ ಎದುರು ಜಮಾಯಿಸಿ ಕಣ್ತುಂಬಿಕೊಳ್ಳುವ ಸಂದರ್ಭದಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ನೂಕುನುಗ್ಗಲು ಉಂಟಾಗಿ, ಮಹಿಳೆಯರು, ಮಕ್ಕಳು ಸಮಸ್ಯೆ ಎದುರಿಸುವಂತಾಯಿತು.

ಈ ಬಾರಿ ದಸರಾದಲ್ಲಿ ಅತಿ ಹೆಚ್ಚು ಕಿರಿಕಿರಿ ಉಂಟು ಮಾಡಿದ್ದು ಪೀಪಿ. ಯುವಕರ ಗುಂಪು ಕರ್ಕಶ ಶಬ್ದ ಬರುವ ಪೀಪಿಯನ್ನು ಜನರ ಕಿವಿಯ ಬಳಿಯೇ ಜೋರಾಗಿ ಊದುತ್ತಿದ್ದರು. ಸಾಕಷ್ಟು ಬಾರಿ ಎಚ್ಚರಿಕೆ ನೀಡುತ್ತಿದ್ದರೂ ಯುವಕರ ಗುಂಪು ಕ್ಯಾರೇ ಎನ್ನುತ್ತಿರಲಿಲ್ಲ. ಮತ್ತಷ್ಟು ಜೋರಾಗಿ ಶಬ್ದ ಮಾಡುತ್ತಾ ನೆರೆದಿದ್ದವರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದರು. ಪೊಲೀಸರು ಕೂಡ ಈ ಬಗ್ಗೆ ಕ್ರಮ ಕೈಗೊಳ್ಳುವ ಪರಿಸ್ಥಿತಿಯಲ್ಲಿರಲಿಲ್ಲ.

ಈ ಬಾರಿ ಮಹಿಳೆಯರು ಹಾಗೂ ಮಕ್ಕಳು ಹೆಚ್ಚಿನ ಸಮಸ್ಯೆ ಗಳನ್ನು ಎದುರಿಸಿದರು. ಶೌಚಾಲಯ ವ್ಯವಸ್ಥೆಯಿಲ್ಲದೆ ಪರದಾಡಬೇಕಾಯಿತು. ಲಕ್ಷಾಂತರ ಮಂದಿ ಪಾಲ್ಗೊಳ್ಳುವ ದಸರಾ ಉತ್ಸವದಲ್ಲಿ ತಾತ್ಕಾಲಿಕ ಶೌಚಾಲಯ ವ್ಯವಸ್ಥೆ ಮಾಡುವುದಾಗಿ ಹೇಳಿದ್ದರೂ ಶೌಚಾಲಯ ವ್ಯವಸ್ಥೆಯಿಲ್ಲದೆ ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಯಿತು. ಬಸ್ ನಿಲ್ದಾಣದತ್ತ ಜನರ ಗುಂಪು ನಡುವೆ ತೆರಳಲು ಪರದಾಡಬೇಕಾಯಿತು.

ಪ್ರತಿಬಾರಿ ದಸರಾ ಉತ್ಸವದ ಸಂದರ್ಭದಲ್ಲಿ ಮದ್ಯ ಮಾರಾಟ ನಿಷೇಧ ಮಾಡಲಾಗುತ್ತದೆ. ಆದರೂ ಈ ಬಾರಿ ದಸರಾದಲ್ಲಿ ಮದ್ಯದ ಅಮಲು ಹೆಚ್ಚಾಗಿ ಕಂಡು ಬಂತು. ನಗರದಿಂದ ಕೊಂಚ ಹೊರಭಾಗಗಳಲ್ಲಿಯೇ ಮದ್ಯದ ಬಾಟಲಿಗಳು, ಗ್ಲಾಸ್‌ಗಳು ಕಂಡುಬಂದವು. ನಾಮ್ ಕೇ ವಾಸ್ತೆಗೆ ಮದ್ಯ ಮಾರಾಟ ನಿಷೇಧ ಮಾಡಿದಂತೆ ಕಂಡುಬಂತು. ಈ ನಡುವೆ ಮುಚ್ಚಲ್ಪಟ್ಟಿದ್ದ ಕೆಲ ಅಂಗಡಿ ಮುಂಗಟ್ಟುಗಳ ಮುಂದೆ ಕಿಡಿಗೇಡಿಗಳು ಮದ್ಯಸೇವಿಸಿ ತ್ಯಾಜ್ಯಗಳನ್ನು ಅಲ್ಲಿಯೇ ಹಾಕಿ ತೆರಳಿದ್ದಾರೆ.

ಯುವಕರ ಗುಂಪುಗಳ ನಡುವೆ ಒಂದಷ್ಟು ಘರ್ಷಣೆ ಕೂಡ ನಡೆದಿವೆ. ಕ್ಷುಲ್ಲಕ ಕಾರಣಕ್ಕೆ ಸಣ್ಣಮಟ್ಟದ ಬಡಿದಾಟದಂತಹ ಘಟನೆಗಳು ನಡೆದಿವೆ. ಕೆಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರತಿ ಬಾರಿ ಉತ್ಸವದಂತೆ ಈ ಬಾರಿಯೂ ದಸರಾದ ಮರುದಿನ ಮಡಿಕೇರಿ ನಗರ ಕಸದ ಕೊಂಪೆಯಾಗಿ ಮಾರ್ಪಟ್ಟಿದೆ. ಎಲ್ಲೆಂದರಲ್ಲಿ ಕಸದ ತ್ಯಾಜ್ಯ ಕಂಡುಬರುತ್ತಿದೆ. ಪೌರ ಕಾರ್ಮಿಕರು ಸ್ವಚ್ಛತಾ ಕಾರ್ಯಕ್ಕೆ ಪ್ರಯತ್ನಿಸುತ್ತಿದ್ದರೂ ಪೂರ್ಣ ಸ್ವಚ್ಛಗೊಳಿಸಲು ಒಂದು ವಾರವಾದರೂ ಬೇಕು. ಅಷ್ಟರ ಮಟ್ಟಿಗೆ ನಗರ ಕಸದಿಂದ ತುಂಬಿ ಹೋಗಿದೆ.

ಮಡಿಕೇರಿ ದಸರಾ ಆಚರಣೆ ಇಂದು ನೆನ್ನೆಯದಲ್ಲ. ಇದಕ್ಕೆ ಗತಕಾಲದ ಇತಿಹಾಸವಿದೆ. ತನ್ನದೇ ಆದ ವಿಶಿಷ್ಟ ಸಂಪ್ರದಾಯ, ಪರಂಪರೆಯನ್ನು ಸಾರುತ್ತಾ ಬಂದಿರುವ ಮಡಿಕೇರಿ ದಸರಾ, ೨ನೇ ಮಹಾಯುದ್ಧದ ಸಂದರ್ಭದಲ್ಲೂ ನಿಂತಿರಲಿಲ್ಲ. ಭಾವೈಕ್ಯತೆಯನ್ನು ಸಾರುವ ಉತ್ಸವವಾಗಿ ದಸರಾ ಗಮನ ಸೆಳೆಯುತ್ತಿದೆ. ಇಂತಹ ಜನೋತ್ಸವದ ಕೆಲವೊಂದು ಲೋಪದೋಷಗಳನ್ನು ಮುಂದಿನ ಬಾರಿಗಾದರೂ ಸರಿಪಡಿಸುವ ಕೆಲಸ ಆಗಬೇಕಾಗಿದೆ.

ಧಾರ್ಮಿಕ ಉತ್ಸವದಲ್ಲಿ ಮಹಿಳೆಯರಿಗೆ ಸೂಕ್ತ ರಕ್ಷಣೆ ಒದಗಿಸುವ ಕೆಲಸ ಆಗಬೇಕಾಗಿದೆ. ಆಸನ ವ್ಯವಸ್ಥೆ ಮಾಡುವ ಸಂದರ್ಭದಲ್ಲಿ ಮಹಿಳೆಯರಿಗೆ ಆದ್ಯತೆ ನೀಡಬೇಕಾಗಿದೆ. ಜೊತೆಗೆ ತಾತ್ಕಾಲಿಕ ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕಾಗಿದೆ. ಇಂತಹ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದೊಂದು ದಿನ ಐತಿಹಾಸಿಕ ಹಿನ್ನೆಲೆಯುಳ್ಳ ದಸರಾ ಕೇವಲ ಪುರುಷರಿಗಾಗಿ ಮಾತ್ರ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ.

ದಸರಾ ಸಂದರ್ಭದಲ್ಲಿ ಕರ್ಕಶ ಶಬ್ದ ಬರುವ ಪೀಪಿ ಮತ್ತಿತರ ವಸ್ತುಗಳ ಮಾರಾಟವನ್ನು ಕಡ್ಡಾಯವಾಗಿ ನಿಷೇಧಿಸಬೇಕು. ದಸರಾ ಸಂಬಂಧ ಪೂರ್ವಬಾವಿ ಸಭೆಯಲ್ಲಿ ಈ ಬಗ್ಗೆ ಕಟ್ಟುನಿಟ್ಟಿನ ನಿರ್ಣಯ ಕೈಗೊಳ್ಳಬೇಕು. ಮದ್ಯ ಮಾರಾಟ ನಿಷೇಧವನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು. ಮಡಿಕೇರಿ ನಗರ ಸೇರಿದಂತೆ ಜಿಲ್ಲೆಯಲ್ಲಿಯೂ ಮುಂಜಾಗ್ರತಾ ಕ್ರಮವಾಗಿ ಮದ್ಯ ನಿಷೇಧಿಸುವಂತಾಗಬೇಕು.

ಲಕ್ಷಾಂತರ ಮಂದಿ ಪಾಲ್ಗೊಳ್ಳುವಂತಹ ದಸರಾದಂತಹ ಉತ್ಸವದಲ್ಲಿ ಇಂತಹ ಸಮಸ್ಯೆಗಳು ಉಂಟಾಗುವುದು ಸಹಜವಾದರೂ, ಸರ್ಕಾರ ಮತ್ತು ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರೆ ತಡೆಯಬಹುದಿತ್ತು. ಮುಂದಾದರೂ ಇಂತಹ ಲೋಪಗಳಾದಂತೆ ಎಚ್ಚರಿಕೆ ವಹಿಸಬೇಕು.

andolana

Recent Posts

ವಾಹನ ಸಂಚಾರಕ್ಕೆ ಸಂಚಕಾರ ತರುತ್ತಿರುವ ಅವರೆಕಾಯಿ ವ್ಯಾಪಾರ

ದಾ.ರಾ. ಮಹೇಶ್‌ ವೀರನಹೊಸಹಳ್ಳಿ: ತಾಲ್ಲೂಕಿನ ಬನ್ನಿಕುಪ್ಪೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ಅವರೆಕಾಯಿ ಮಾರಾಟದಿಂದಾಗಿ ಟ್ರಾಫಿಕ್ ಜಾಮ್ ಆಗುತ್ತಿದ್ದು, ವಾಹನಗಳ ಸಂಚಾರಕ್ಕೆ…

43 mins ago

ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

  ಮಂಡ್ಯ: ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20,21 ಮತ್ತು 22ರಂದು ಮೂರು ದಿನಗಳ ಕಾಲ ಜರುಗಲಿರುವ ಕನ್ನಡ ನುಡಿ ಜಾತ್ರೆ…

2 hours ago

59 ಸಾವಿರ ಶಿಕ್ಷಕರ ಹುದ್ದೆ ಖಾಲಿ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ

ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…

10 hours ago

ಮೈಸೂರಿಗೆ ತೆರಳಲು ಅನುಮತಿ ಕೋರಿ ಕೋರ್ಟ್‌ ಮೋರಿ ಹೋದ ದರ್ಶನ್‌

ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್‌ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…

11 hours ago

ನಾನು ಅಶ್ಲೀಲ ಪದ ಬಳಸಿಲ್ಲ : ಪೊಲೀಸರ ಬಳಿ ಸಿ.ಟಿ ರವಿ ಹೇಳಿಕೆ

ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪದ ಮೇಲೆ ಬಂಧಿತಾರಾಗಿರುವ ಬಿಜೆಪಿ ಎಂಎಲ್‌ಸಿ ಸಿ.ಟಿ…

11 hours ago

ವೈದ್ಯ ಮೇಲೆ ಹಲ್ಲೆ: ದೂರು ದಾಖಲು

ಮೈಸೂರು: ನಗರದ ಅಲ್‌ ಅನ್ಸಾರ್‌ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ  ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…

11 hours ago