ರಹಮದ್ ತರೀಕೆರೆ
ನನಗೆ ಈ ಊರಿನ ಹಸಿರು ಗಾಳಿ ಧೂಳೂ ಮನುಷ್ಯರ ಜತೆ ನಂಟಿದೆ. ಅದಕ್ಕೆ ಗಾಯವಾದಾಗೆಲ್ಲ ನನಗೆ ನೋವಾಗುತ್ತದೆ!
ತರೀಕೆರೆಯು ಚಿಕ್ಕಮಗಳೂರು ಜಿಲ್ಲೆಗೆ ಸೇರಿದರೂ, ಆಸ್ಪತ್ರೆ ಖರೀದಾರಿ ಶಿಕ್ಷಣ-ನಮ್ಮ ಎದ್ದುಬಿದ್ದು ವ್ಯವಹಾರವೆಲ್ಲ ಪಕ್ಕದ ಶಿವಮೊಗ್ಗೆಯಲ್ಲೆ. ಸೋವಿಯಾದ ರೈಲಿನಲ್ಲಿ ಜನ ಹೋಗಿಬರುವರು. ನನ್ನ ಪದವಿ ದಿನಗಳಲ್ಲಿ, ಪ್ರತಿದಿನ ೨೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿವಮೊಗ್ಗೆಯ ವಿವಿಧ ಕಾಲೇಜುಗಳಿಗೆ, ನೂರರಷ್ಟು ನೌಕರರು ಕಚೇರಿಗಳಿಗೆ ಹೋಗುತ್ತಿದ್ದರು. ಕನ್ನಡ ಸಾಹಿತ್ಯ ಆರಿಸಿಕೊಂಡು ಪದವಿ ಓದಲು ಬಂದ ನನಗೆ, ಶಿವಮೊಗ್ಗೆಯ ಸಾಹಿತ್ಯ ಸಂಗೀತ ರಂಗಭೂಮಿಯ ಚಟುವಟಿಕೆಗಳು ಆಪ್ತವಾದವು. ಸಂಜೆ ಕಾರ್ಯಕ್ರಮಗಳಿದ್ದರೆ, ಸಹಪಾಠಿಗಳ ಮನೆಯಲ್ಲಿ ಉಳಿದುಕೊಂಡು ಭಾಗವಹಿಸುತ್ತಿದ್ದೆ. ಈಗಲೂ ನನ್ನ ಭಾವಕೋಶದ ಭಾಗವಾಗಿರುವ ಊರುಗಳೆಂದರೆ, ಮೈಸೂರು ಮತ್ತು ಶಿವಮೊಗ್ಗ ಮುಂದೆ ಅಧ್ಯಾಪಕನಾಗಿ ಶಿವಮೊಗ್ಗೆಯಲ್ಲೇ ನೆಲೆಸುವ ಸನ್ನಿವೇಶ ಬಂದಿತು. ಬಂಡಾಯ ಸಂಘಟನೆಯ ಮತ್ತು ದಲಿತ ಸಂಘರ್ಷ ಸಮಿತಿಯ ಕಮ್ಮಟ ಮತ್ತು ಚಳವಳಿಗಳಲ್ಲಿ ಭಾಗವಹಿಸುತ್ತಿದ್ದೆ. ನಡುರಾತ್ರಿಯಂದು ಪೋಸ್ಟರುಗಳನ್ನು ಗೋಡೆಗಳ ಮೇಲೆ ಅಂಟಿಸುವುದನ್ನು ನನಗೆ ನನ್ನ ಶಿಷ್ಯನೂ ಚಳವಳಿಗಾರನೂ ಆದ ಈಸೂರ ಲೋಕೇಶ್ ಕಲಿಸಿದನು. ಬಿ. ಕೃಷ್ಣಪ್ಪ, ಮೈಸೂರಿನಿಂದ ಬರುತ್ತಿದ್ದ ಕೆ. ರಾಮದಾಸ್ ಅವರು ನಮಗೆ ನಾಯಕರಾಗಿದ್ದರು. ಆಗ ಶಿವಮೊಗ್ಗೆಯಲ್ಲಿ ಕಾಗೋಡು ಸತ್ಯಾಗ್ರಹ, ಸ್ವಾತಂತ್ರ್ಯ ಹೋರಾಟ, ಸಮಾಜವಾದಿ ಕಾರ್ಯಕ್ರಮ, ರೈತ ಮತ್ತು ಕನ್ನಡ ಚಳವಳಿಗಳಲ್ಲಿ ಭಾಗವಹಿಸಿದ್ದ ಅನೇಕ ಹಿರಿಯರು ಬದುಕಿದ್ದರು. ಸಬರಮತಿ ಆಶ್ರಮದಲ್ಲಿದ್ದು ಬಂದಿದ್ದ ನಾಗಪ್ಪಶೆಟ್ಟರು, ಖಾದಿಯುಟ್ಟು ಹಳೇ ಸೈಕಲ್ಲೊಂದರಲ್ಲಿ ತಾವು ಅಧ್ಯಕ್ಷರಾಗಿರುವ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗೆ ಬರುತ್ತಿದ್ದರು. ಇದಕ್ಕೆ ಪೂರಕವಾಗಿ ನಗರದಲ್ಲಿ ಸ್ವಾತಂತ್ರ್ಯ ಚಳವಳಿಯನ್ನು ನೆನಪಿಸುವ ಸ್ಮಾರಕಗಳಿದ್ದವು. ಊರ ನಡುವಿದ್ದ ಗಾಂಧಿ ಪಾರ್ಕು; ಪಾರ್ಕಿನ ಬಗಲಿಗೆ ಕಸ್ತೂರಬಾ ಮತ್ತು ಕಮಲಾನೆಹರೂ ಕಾಲೇಜುಗಳು. ಇವಕ್ಕೆ ಲಗತ್ತಾಗಿ ನೆಹರೂ ರಸ್ತೆ. ಗಾಂಧಿ-ನೆಹರೂ ದ್ವೇಷವು ಇಲ್ಲದಿದ್ದ ಕಾಲದಲ್ಲಿ ಇವೆಲ್ಲ ಸ್ಥಾಪನೆಯಾದವು. ಶಿವಮೊಗ್ಗೆಯ ಸೀಮೆಯಿಂದ ಕುವೆಂಪು, ಲಂಕೇಶ್, ಇಂದಿರಾ, ಅನಂತಮೂರ್ತಿ, ಪರಮೇಶ್ವರಭಟ್ಟ, ತಿಪ್ಪೇರುದ್ರಸ್ವಾಮಿ, ಚನ್ನಯ್ಯ, ಹಾಮಾ ನಾಯಕ, ನಾ.ಡಿಸೋಜಾ ಮುಂತಾದ ಲೇಖಕರು ಬಂದರು. ರಾಜಕಾರಣಿಗಳೂ ಚಳುವಳಿಗಾರರೂ ಆಗಿದ್ದ ಕಡಿದಾಳು ಮಂಜಪ್ಪ, ಶಾಂತವೇರಿ ಗೋಪಾಲಗೌಡ, ಕಾಗೋಡು ತಿಮ್ಮಪ್ಪ, ಬಂಗಾರಪ್ಪ, ಕೋಣಂದೂರು ಲಿಂಗಪ್ಪ, ಕಡಿದಾಳು ಶಾಮಣ್ಣ, ಗಣಪತಿಯಪ್ಪ ಇವರು ಸಾಹಿತ್ಯ ಸಂಗೀತ ರಂಗಭೂಮಿಯ ಸಂಬಂಧವಿದ್ದವರು. ಸಮಾಜವಾದಿ ಚಳವಳಿಯಲ್ಲಿ ರೂಪುಗೊಂಡ ಹಲವಾರು ಹಿರಿಯ ಪತ್ರಕರ್ತರಿದ್ದರು. ಪ್ರಗತಿ ಮುದ್ರಣಾಲಯದ ನಾರಾಯಣರಾವ್ ತುಂಬ ಓದಿಕೊಂಡಿದ್ದರು. ಅವರಲ್ಲಿ ಕಾರಂತರೂ ಅನಂತಮೂರ್ತಿಯವರೂ ಉಳಿಯುತ್ತಿದ್ದರು. ಮುದ್ರಣಲೋಕದಲ್ಲಿ ಏನೇ ಹೊಸಕ್ರಾಂತಿಯಾದರೂ ಮೊದಲಿಗೆ ಅವರ ಪ್ರೆಸ್ಸಿನಲ್ಲಿ ಮೈದೋರುತ್ತಿತ್ತು. ಅವರ ಪ್ರೆಸ್ಸು, ಸಾಹಿತ್ಯಾಸಕ್ತರು ಸಂಜೆ ಸೇರುವ ಜಾಗವಾಗಿತ್ತು.
ಸಂಜೆಹೊತ್ತು ಗಾಂಧಿಪಾರ್ಕ್ ಎದುರುಗಡೆಯಿದ್ದ ‘ಕವಿಶೈಲ’ ಪುಸ್ತಕದ ಅಂಗಡಿ ಮುಂದೆ, ಶಿವಮೊಗ್ಗೆಯ ಸಾಹಿತ್ಯಾಸಕ್ತರು ಲೇಖಕರು ಸೇರುತ್ತಿದ್ದರು. ಕಾಫಿಕುಡಿದು ಗಂಟೆಗಟ್ಟಲೆ ಹರಟುತ್ತಿದ್ದರು. ಶಿವಮೊಗ್ಗೆಯಲ್ಲಿ ಪಂಚಾಕ್ಷರಿ, ಬಿದರಹಳ್ಳಿ ನರಸಿಂಹಮೂರ್ತಿ, ಪಾಂಡುರಂಗ ಉಡುಪ, ನಾಗಭೂಷಣಸ್ವಾಮಿ, ರಾಜೇಂದ್ರಚೆನ್ನಿ, ಸತ್ಯನಾರಾಯಣ ಅಣತಿ, ಎಂ.ಬಿ. ನಟರಾಜ್, ಹಾಲೇಶ್, ನೊ.ಸಂ. ತಿಮ್ಮೇಗೌಡ ಮೊದಲಾದ ಜನಪ್ರಿಯ ಸಾಹಿತ್ಯದ ಅಧ್ಯಾಪಕರಿದ್ದರು. ಇಲ್ಲಿನ ಕರ್ನಾಟಕ ಸಂಘದಲ್ಲಿ, ನಾನು ಕಾರಂತ, ಲಂಕೇಶ್, ತೇಜಸ್ವಿ, ಕೆ.ವಿ.ಸುಬ್ಬಣ್ಣ ಮೊದಲಾದವರ ಭಾಷಣಗಳನ್ನು, ಮಹಾಭಾರತದ ಬಗ್ಗೆ ಬನ್ನಂಜೆಯವರ ಪ್ರವಚನಗಳನ್ನು ಕೇಳಿದೆ. ಹರಿಪ್ರಸಾದ್ ಚೌರಾಸಿಯಾರ ಕೊಳಲು, ವಿ.ಜಿ.ಜೋಗರ ವೈಲಿನ್, ಪರ್ವೀನ್ ಸುಲ್ತಾನ ಮತ್ತು ಬಸವರಾಜ ರಾಜಗುರುಗಳ ಸಂಗೀತ ಆಲಿಸಿದೆ. ಶಿವಮೊಗ್ಗೆಯ ಉದ್ಯಮಿಯಾಗಿದ್ದ ಇಬ್ರಾಹಿಂ ಸಾಹೇಬರು ದೊಡ್ಡದೊಡ್ಡ ಕಲಾವಿದರನ್ನು ಕರೆಸುತ್ತಿದ್ದರು. ಹರಗೋಪಾಲ ಭಟ್ಟರು ನಡೆಸುತ್ತಿದ್ದ ಸಂಗೀತ ಸಭೆಗೂ ದೊಡ್ಡ ಕಲಾವಿದರು ಬರುತ್ತಿದ್ದರು. ಪ್ರೊ. ನಂಜುಂಡಯ್ಯನವರು ನಡೆಸುತ್ತಿದ್ದ ಫಿಲ್ಮ್ ಸೊಸೈಟಿಯಲ್ಲಿ ಜಗತ್ತಿನ ಶ್ರೇಷ್ಠ ಸಿನಿಮಾಗಳನ್ನು ನೋಡುವ ಅವಕಾಶವಿತ್ತು.
ಜಯತೀರ್ಥ ಜೋಶಿಯವರು ಶಿವಮೊಗ್ಗೆಯಲ್ಲೇ ಇದ್ದು ನಾಟಕಗಳನ್ನು ನಿರ್ದೇಶನ ಮಾಡುತ್ತಿದ್ದರು. ನನ್ನ ಮೇಷ್ಟರಾದ ಹಾಲೇಶ್ ಒಳ್ಳೆಯ ನಟರಾಗಿದ್ದರು ಮತ್ತು ತುಘಲಕ್ ಪಾತ್ರಕ್ಕೆ ಹೆಸರಾಗಿದ್ದರು. ತುಂಗಾ ಹೊಳೆ, ಸುತ್ತಲಿನ ಕಾಡುಬೆಟ್ಟ, ಹಸಿರುಗದ್ದೆ, ನಾನು ಓದಿಕೊಂಡಿದ್ದ ಕುವೆಂಪು ಸಾಹಿತ್ಯಕ್ಕೆ ಸಾಕ್ಷ್ಯಗಳಂತಿದ್ದವು. ಕರಾವಳಿಯಿಂದ ಬರುತ್ತಿದ್ದ ಯಕ್ಷಗಾನಗಳಿಗೆ ನಾನೂ ಲಂಕೇಶ್ ಪತ್ರಿಕೆಯ ಬಿ.ಚಂದ್ರೇಗೌಡರೂ ತಪ್ಪದೆ ಹೋಗುತ್ತಿದ್ದೆವು. ‘ಸೃಷ್ಟಿ’ ಎಂಬ ಸಾಹಿತ್ಯ ಸಂಘಟನೆಯು, ಚಿಂತಕರನ್ನು ಆಹ್ವಾನಿಸಿ ವಿಶೇಷ ಉಪನ್ಯಾಸಗಳನ್ನು ಏರ್ಪಡಿಸುತ್ತಿತ್ತು. ಪೋಲಂಕಿ ರಾಮಮೂರ್ತಿ, ಕೆ.ಜಿ. ನಾಗರಾಜಪ್ಪನವರ ಉದ್ಭೋಧಕ ಉಪನ್ಯಾಸಗಳನ್ನು ನಾನು ಅಲ್ಲಿ ಕೇಳಿದೆ. ಮಧ್ಯಮವರ್ಗವು ಬಯಸುವ ಎಲ್ಲ ಬಗೆಯ ಸೌಲಭ್ಯ ಮತ್ತು ಚಟುವಟಿಕೆಗಳಿಂದ ಶಿವಮೊಗ್ಗವು ಒಂದು ಸಾಂಸ್ಕೃತಿಕ ಕೇಂದ್ರವಾಗಿತ್ತು. ಅದರ ಮುಂದೆ ಚಿಕ್ಕಮಗಳೂರು ಸಾಂಸ್ಕೃತಿಕವಾಗಿ ಬರಡಾದಂತೆ ತೋರುತ್ತಿತ್ತು. ನೆಲೆಸಿದರೆ ಶಿವಮೊಗ್ಗೆಯಲ್ಲೆ ಅನಿಸುತ್ತಿತ್ತು.
ಆದರೆ ಶಿವಮೊಗ್ಗದ ಈ ಸಾಂಸ್ಕೃತಿಕ ಚಟುವಟಕೆ ಮತ್ತು ಸಮಾಜವಾದಿ ಚಳವಳಿಗಳ ಉದ್ಯಾನದ ಕೆಳಗೆ, ಭೂಗತ ಲೋಕ ಮತ್ತು ಕೋಮುಗಲಭೆಗಳೆಂಬ ಲಾವಾರಸವೂ ಹರಿದಾಡುತ್ತಿತ್ತು. ಇದು ಆಗಾಗ್ಗೆ ತನ್ನ ಕೈಚಳಕ ತೋರಿಸುತ್ತಿತ್ತು. ಮನುಷ್ಯರ ರಕ್ತ ಬೀದಿಯ ಮೇಲೆ ಚೆಲ್ಲುತ್ತಿತ್ತು. ಆಟೊ ಅಂಗಡಿ ಗ್ಯಾರೇಜು ಸುಟ್ಟ, ಕರ್ಫ್ಯೂ ವಿಧಿಸಿದ ಕರಕಲು ವಾಸನೆಯ ಸುದ್ದಿಯಿಂದ ಪತ್ರಿಕೆ ತುಂಬಿಹೋಗುತ್ತಿತ್ತು. ಧಾರ್ಮಿಕ ಮೆರವಣಿಗೆಗಳು ಇದ್ದ ದಿನ ಜನ ಬಾಯಲ್ಲಿ ಅಕ್ಕಿಕಾಳು ಹಾಕಿಕೊಳ್ಳುತ್ತಿದ್ದರು. ನಿತ್ಯಬದುಕಿಗೆ ಸೆಣಸುವ ಸಾಮಾನ್ಯ ಜನ, ತೆರೆಮರೆಯಲ್ಲಿದ್ದು ಪ್ರಚೋದಿಸುವ ಫಿತೂರಿಗಾರರು, ಬಿದ್ದ ಹೆಣದ ಫಾಯದೆ ಎತ್ತುವವರು, ಸಾಹಿತ್ಯ ಸಂಗೀತ ನಾಟಕಗಳು, ಪಾರ್ಕು ಮತ್ತು ಸ್ಲಮ್ಮುಗಳು- ಎಲ್ಲವನ್ನು ಹೊಟ್ಟೆಯಲ್ಲಿಟ್ಟುಕೊಂಡ ಶಿವಮೊಗ್ಗ, ಆನುವಂಶಿಕ ಕಾಯಿಲೆಯುಳ್ಳ ಸುಂದರ ವ್ಯಕ್ತಿಯಂತಿತ್ತು. ಭಾರತದ ಸಂಕೀರ್ಣ ಪ್ರತಿಬಿಂಬವಾಗಿತ್ತು.
ಯಾವಾಗಲಾದರೂ ಭೂಕುಸಿತ ಆಗಬಹುದು ಎಂದುಕೊಂಡೇ ಬೆಟ್ಟದ ಬದಿಯ ಊರಿನವರು ಬದುಕುವಂತೆ, ಈ ಕಟುವಾಸ್ತವವನ್ನು ಒಪ್ಪಿಕೊಂಡೇ ಶಿವಮೊಗ್ಗೆಯ ಜನ ಬದುಕು ತೆಗೆಯುತ್ತಿದ್ದರು. ನಾನು ಬಾನು ಇಲ್ಲಿದ್ದಾಗ ಪ್ರತಿದಿನ ಸಂಜೆ ತಿರುಗಾಡಿಕೊಂಡು ಬಜಾರಿಗೆ ಹೋಗುತ್ತಿದ್ದೆವು. ಖರೀದಿ ಮಾಡುವುದಕ್ಕೆ ಏನಿಲ್ಲದಿದ್ದರೂ ನೆಹರೂ ರಸ್ತೆಯಲ್ಲೊಮ್ಮೆ ಠಳಾಯಿಸುವುದು ಶೋಕಿಯಾಗಿತ್ತು. ಕಾಫಿಪುಡಿ ಸಿಹಿ ಅಂಗಡಿಗಳ ಮುಂದೆ ಬಂದಾಗ ಪರಿಮಳವನ್ನು ಮೂಗು ಹೀರುತ್ತಿದ್ದವು. ಹಗಲು ತರಗತಿಯಲ್ಲಿದ್ದ ವಿದ್ಯಾರ್ಥಿಗಳಲ್ಲಿ ಕೆಲವರು ಸಂಜೆ ಅಂಗಡಿ ಗಲ್ಲದ ಮೇಲೆ ಕೂತು, ನಮಸ್ಕರಿಸುತ್ತಿದ್ದರು. ಬರುತ್ತಾ ಮಲ್ಲಿಕಾರ್ಜುನ ಟಾಕೀಸಿನೆದುರು ಹಳ್ಳಿಗರು ಮಾರುತ್ತಿದ್ದ ತರಕಾರಿ ಸೊಪ್ಪು ಕೊಳ್ಳುತ್ತಿದ್ದೆವು. ಮಹಾವೀರ ಸರ್ಕಲ್ಲಿನಲ್ಲಿ ಹೊನ್ನಾಳಿ ಕಡೆಯಿಂದ ಬರುತ್ತಿದ್ದ ಕರಬೂಜಾ ಕಲ್ಲಂಗಡಿ ಹಣ್ಣುಗಳನ್ನು ಖರೀಸುತ್ತಿದ್ದೆವು. ಕಿಸ್ಮತ್ ಹೋಟೆಲಿಗೆ ಹೋಗಿ ಬಿರಿಯಾನಿ ತಿನ್ನುತ್ತಿದ್ದೆವು. ನಾನು ಸಂಬಳವಾದ ದಿನ ಶಿವಪ್ಪ ನಾಯಕನ ಸರ್ಕಲ್ಲಿನಲ್ಲಿರುವ ವೈಶ್ಯ ಬ್ಯಾಂಕಿನಲ್ಲಿ ಹಣ ಡ್ರಾಮಾಡಿ, ಅದರ ಕೆಳಗಿರುವ ವೆಂಕಟೇಶ್ವರ ಸ್ವೀಟ್ ಸ್ಟಾಲಿನಲ್ಲಿ ತುಪ್ಪಹಾಕಿ ಮಾಡಿದ ಬಾಯಲ್ಲಿಟ್ಟರೆ ಕರಗುವ ಮೈಸೂರುಪಾಕನ್ನು ಕಾಲುಕೆಜಿಯಷ್ಟು ಕಟ್ಟಿಸಿಕೊಂಡು, ಎರಡು ಮೊಳ ಮೈಸೂರುಮಲ್ಲಿಗೆ ಹಿಡಿದು ಮನೆಗೆ ಬರುತ್ತಿದ್ದೆ. ನಮ್ಮ ಸಂಸಾರದ ಸಣ್ಣ ನಾವೆ ಹೊಳೆಯ ಅಂಚಿನ ರಭಸವಿಲ್ಲದ ನೀರಲ್ಲಿ ಸಾಗುತ್ತಿತ್ತು.
ಆದರೆ ಹಂಪಿಯ ವಿಶ್ವವಿದ್ಯಾಲಯದಲ್ಲಿ ಹೊಸ ಕೆಲಸ ಸಿಕ್ಕ ಬಳಿಕ, ನಾವು ಶಿವಮೊಗ್ಗೆ ಬಿಡಬೇಕಾಯಿತು. ಶಿವಮೊಗ್ಗದಂತಹ ಊರನ್ನು ತೊರೆದು, ಬಿಸಿಲಿಗೆ ಖ್ಯಾತವಾದ ಬಳ್ಳಾರಿ ಜಿಲ್ಲೆಗೆ ಹೋಗುವುದು ಬಾನುಗೆ ಚೂರೂ ಇಷ್ಟವಿರಲಿಲ್ಲ. ಏನೋ ಮಾಡಿ ಒಪ್ಪಿಸಿದೆ. ೧೯೯೨ನೇ ಇಸವಿ. ಡಿಸೆಂಬರ್ ೫ರಂದು ಮನೆಯ ವಸ್ತುಗಳನೆಲ್ಲ ಪ್ಯಾಕುಮಾಡಿ ಲಾರಿಗೆ ಹೇರಿದೆವು. ಡಿಸೆಂಬರ್ ೬, ಬಾಬ್ರಿ ಮಸೀದಿಯನ್ನು ಕೆಡಹಲಾಯಿತು. ಎಲ್ಲೆಡೆ ಬಿಗುವು. ಏನೇನೊ ಊಹಾಪೋಹು. ನ್ಯಾಶನಲ್ ಜೈಹಿಂದ್ ಜೈಭಾರತ್ ಹೆಸರುಳ್ಳ ಲಾರಿಗಳು ರಸ್ತೆಗೆ ಇಳಿಯಲು ಅಂಜಿ ನಿಂತುಬಿಟ್ಟವು. ಪುಸ್ತಕ ಪಾತ್ರೆ ಹಾಸಿಗೆ ಹೊದಿಕೆಗಳೆಲ್ಲ ಪ್ಯಾಕಾಗಿ ಲಾರಿಯಲ್ಲಿವೆ. ಹೋಟೆಲುಗಳ ಬಂದಾಗಿವೆ. ಆಗ ನಮ್ಮ ಬೀದಿಯವರು ನಮ್ಮನ್ನಿಟ್ಟುಕೊಂಡು ಉಣಿಸಿದರು. ಎರಡು ದಿನಗಳ ಬಳಿಕ ಬಿಗುವು ಸಡಿಲಾಗಿ ಹೊಸಪೇಟೆ ಮುಟ್ಟಿದೆವು. ಬಿಸಿಲಿನ ಸೀಮೆ, ಯಾವುದೇ ಗಲಭೆಯಿಲ್ಲದೆ ತಣ್ಣಗಿತ್ತು. ಯಾಕೊ ಶಿವಮೊಗ್ಗ ಬಿಟ್ಟಿದ್ದೇ ಸರಿಯೆನಿಸಿತು.
ಹೀಗೆ ಆತಂಕದಿಂದ ಬಿಟ್ಟು ಬಂದರೂ ಶಿವಮೊಗ್ಗೆಯ ಜತೆ ನಮ್ಮ ಭಾವನಾತ್ಮಕ ನಂಟು ಕಡಿದುಹೋಗಲಿಲ್ಲ. ನಮ್ಮ ಕುಟುಂಬದ ನೋವು-ನಲಿವಿನ ಹಲವಾರು ಎಳೆಗಳು ಅದಕ್ಕೆ ಸುತ್ತಿಕೊಂಡಿವೆ. ಇಲ್ಲಿನ ಆಸ್ಪತ್ರೆಯಲ್ಲಿ ಅಮ್ಮ ಪ್ರಾಣಬಿಟ್ಟಳು. ನಾನಿಲ್ಲಿ ಪದವಿ ಪಡೆದೆ. ನೌಕರಿ ಹಿಡಿದೆ. ಮದುವೆಯಾಗಿ ಸಂಸಾರ ಹೂಡಿದೆ. ಮಕ್ಕಳಾದವು. ಸೈಕಲ್ಲಿನ ಮಾಲಕನಾದೆ. ಕಾಲೇಜಿನವರು ಒಂದು ಸೈಟನ್ನೂ ಕೊಟ್ಟಿದ್ದರು. ಈಗಲೂ ತಮ್ಮನ ಮನೆಯಿದೆ. ನೂರಾರು ವಿದ್ಯಾರ್ಥಿಗಳಿದ್ದಾರೆ. ಎದುರು ಸಿಕ್ಕಾಗ ಪ್ರೀತಿ ಹರಿಸುತ್ತಾರೆ. ಗೆಳೆಯರಿದ್ದಾರೆ. ಅವರ ಮನೆಗೆ ಹೋಗುತ್ತೇನೆ. ಹೊಳೆಬದಿಯೇ ಇರುವ ತಮ್ಮನ ಮನೆಯಿಂದ ಹೊರಟು ದಡದಲ್ಲಿ ತಿರುಗಾಡುವೆ. ಹರಿವ ನದಿಗೆ ಜನ ತಮ್ಮ ಮನೆಯ ಕಸವನ್ನು ನಿರ್ದಯವಾಗಿ ಎಸೆಯುವುದನ್ನು ನೋಡುತ್ತೇನೆ. ಶ್ರೀಗಂಧದ ಫ್ಯಾಕ್ಟರಿಯ ಎದುರಿನ ಸುರಗಿಹೂವಿನ ಮರವು ಹೂಸುರಿಸುವುದನ್ನು ವೀಕ್ಷಿಸುತ್ತೇನೆ. ನಾವಿದ್ದ ಬೀದಿಯಲ್ಲಿ ಕೈಯಾರೆ ನೆಟ್ಟು ಬೆಳೆಸಿದ್ದ ಹೊಂಗೆ ಮರಗಳನ್ನು ಎಷ್ಟು ಬೆಳೆದಿವೆ ಎಂದು ಪರಿಶೀಲಿಸುತ್ತೇನೆ. ನನಗೆ ಈ ಊರಿನ ಹಸಿರು ಗಾಳಿ ಧೂಳೂ ಮನುಷ್ಯರ ಜತೆ ನಂಟಿದೆ. ಹೀಗಾಗಿಯೇ ಅದಕ್ಕೆ ಗಾಯವಾದಾಗೆಲ್ಲ ನನಗೆ ನೋವಾಗುತ್ತದೆ. ಅದು ಹತ್ತಿ ಉರಿದಾಗೆಲ್ಲ ನನ್ನೆದೆ ಬೇಯುತ್ತದೆ. ಶಹರವೊಂದು, ವಿಶಾಲರಸ್ತೆ, ಪಾರ್ಕು, ಬಂಗಲೆ, ಶಾಪಿಂಗ್ ಮಾಲುಗಳಿಂದ ತನ್ನ ಪ್ರಗತಿಯನ್ನೊ ಚೆಲುವನ್ನೊ ಪಡೆಯಬಹುದು. ಆದರೆ ಅಲ್ಲಿ ವಾಸಿಸುವವರ ನಡುವಣ ಮಾನವ ಸಂಬಂಧ ಗಳು ಅದರ ನಿಜವಾದ ಆತ್ಮ. ಅವು ಹಾಳಾದರೆ ನಗರದ ಚೆಲುವು ಶವದ ಸಿಂಗಾರ. ಜನ, ದ್ವೇಷದ ರಾಜಕಾರಣವನ್ನು ನಿರಾಕರಿಸುವ ತನಕವೂ ಇದು ತಪ್ಪಿದಲ್ಲ.
ಕಾಡಾನೆಗಳ ಹಾವಳಿಯಿಂದಾಗಿ ಕಾಡಂಚಿನ ಜನರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಆನೆಗಳನ್ನು ಕೊಲ್ಲಲು ಅನುಮತಿ ನೀಡಬೇಕು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ…
ರಾಜ್ಯಸಭೆಯ ಕಲಾಪದ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡುವ ಭರದಲ್ಲಿ ಕೆಲವರು ಅಂಬೇಡ್ಕರ್ ಎನ್ನುವುದನ್ನು ಈಗ ಫ್ಯಾಷನ್…
ದಾ.ರಾ. ಮಹೇಶ್ ವೀರನಹೊಸಹಳ್ಳಿ: ತಾಲ್ಲೂಕಿನ ಬನ್ನಿಕುಪ್ಪೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ಅವರೆಕಾಯಿ ಮಾರಾಟದಿಂದಾಗಿ ಟ್ರಾಫಿಕ್ ಜಾಮ್ ಆಗುತ್ತಿದ್ದು, ವಾಹನಗಳ ಸಂಚಾರಕ್ಕೆ…
ಮಂಡ್ಯ: ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20,21 ಮತ್ತು 22ರಂದು ಮೂರು ದಿನಗಳ ಕಾಲ ಜರುಗಲಿರುವ ಕನ್ನಡ ನುಡಿ ಜಾತ್ರೆ…
ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…
ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…