caste census
ದೆಹಲಿ ಕಣ್ಣೋಟ
ಶಿವಾಜಿ ಗಣೇಶನ್
ಅಂತು ಅಳೆದು ಸುರಿದು ಕೊನೆಗೂ ಬಿಜೆಪಿ ನೇತೃತ್ವದ ಕೇಂದ್ರದಲ್ಲಿನ “ಎನ್‌ಡಿಎ ಸರ್ಕಾರ ಜನಗಣತಿ ಮತ್ತು ಜಾತಿಗಣತಿ ನಡೆಸುವ ತೀರ್ಮಾನ ಮಾಡಿದೆ. 2021ರಲ್ಲಿ ನಡೆಯಬೇಕಿದ್ದ ಜನಗಣತಿಯನ್ನು 2019ರಲ್ಲಿ ಕಾಣಿಸಿಕೊಂಡು ಎರಡು ವರ್ಷಗಳ ಕಾಲ ದೇಶವನ್ನು ಕಾಡಿದ ಕೊರೊನಾ ಸಾಂಕ್ರಾಮಿಕ ರೋಗದಿಂದ ಮುಂದೂಡುತ್ತಾ ಬರಲಾಗಿತ್ತು. ಕೊರೊನಾದಿಂದ ದೇಶ ಮುಕ್ತವಾಗಿ ಮೂರು ವರ್ಷಗಳಾದರೂ ಜನಗಣತಿ ಬಗೆಗೆ ಸರ್ಕಾರವಿಳಂಬ ಮಾಡುತ್ತಾ ಬಂದಿತು. ಇದಕ್ಕೆ ಸ್ಪಷ್ಟವಾದಕಾರಣವನ್ನೂ ದೇಶದ ಜನತೆಯ ಮುಂದಿಡಲಿಲ್ಲ. ಈಗ ದೇಶದ ಅಲ್ಲಲ್ಲಿ ಅಲ್ಪ ಪ್ರಮಾಣದಲ್ಲಿ ಕಾಣಿಸಿಕೊಂಡಿರುವ ಕೊರೊನಾ ಹಿಂದಿನಂತೆ ಭೀಕರ ಪರಿಸ್ಥಿತಿಯನ್ನು ಉಂಟು ಮಾಡಲಾರದು ಎನ್ನುವ ನಿರೀಕ್ಷೆ ನಮ್ಮದು.
ಈ ಹಿಂದೆ ಜನಗಣತಿಯನ್ನು 2026ಕ್ಕೆ ಶುರು ಮಾಡುವುದಾಗಿ ಸರ್ಕಾರಿ ವಲಯದಲ್ಲಿ ಸುದ್ದಿ ಹರಿದಾಡಿತು. ಆದರೆ ಅದು ಖಚಿತವಾಗಿರಲಿಲ್ಲ. ಜನಗಣತಿಯ ಉಸ್ತುವಾರಿ ನೋಡಿಕೊಳ್ಳುವ ಗೃಹ ಸಚಿವಾಲಯ ಈ ತಿಂಗಳ 4ರಂದು ಜನಗಣತಿ ಮತ್ತು ಜಾತಿಗಣತಿಯನ್ನು 2027ರ ಮಾರ್ಚ್ 1ರಿಂದ ನಡೆಸುವುದಾಗಿ ಅಧಿಕೃತವಾಗಿ ತಿಳಿಸಿರುವುದು ಮೂರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಸಮಸ್ಯೆ ಬಗೆಹರಿಯುವ ದಿಕ್ಕಿನಲ್ಲಿ ಒಳ್ಳೆಯ ಬೆಳವಣಿಗೆ, ಈ ಸಂಬಂಧ ಜೂನ್ 16ರಂದು ಸರ್ಕಾರದ ಅಧಿಕೃತ ಪತ್ರ ಗೆಜೆಟ್‌ನಲ್ಲಿ ಸವಿವರವಾಗಿ ಪ್ರಕಟಿಸುವ ಭರವಸೆಯನ್ನೂ ಗೃಹ ಸಚಿವಾಲಯ ಪ್ರಕಟಿಸಿದೆ.
2019ರಲ್ಲಿ ಕೇಂದ್ರ ಸರ್ಕಾರದ ಸಂಪುಟ ಸಭೆಯು ರಾಷ್ಟ್ರೀಯ ಜನಗಣತಿ ವೆಚ್ಚಕ್ಕೆಂದು ಸರಿ ಸುಮಾರು 8,754 ಕೋಟಿ ರೂಪಾಯಿಯನ್ನು ಕಾಯ್ದಿರಿಸಲು ನಿರ್ಧರಿಸಿತ್ತು. ಇಂದಿನ ಜನಗಣತಿ ನಡೆಸುವ ಕಾರ್ಯಕ್ಕೆ ಸುಮಾರು 13 ಸಾವಿರ ಕೋಟಿ ರೂ. ಬೇಕಾಗುವುದಾಗಿ ಅಂದಾಜು ಮಾಡಲಾಗಿದೆ. ಆದರೆ ಮುಂದಿನ ದಿನಗಳಲ್ಲಿ ನಡೆಸಲಿರುವ ಜನಗಣತಿಗೆಂದು ಈ ವರ್ಷದ ಕೋಟಿ ಬಜೆಟ್ಟಿನಲ್ಲಿ ಕೇವಲ 575 ರೂಪಾಯಿಯನ್ನು ಕಾಯ್ದಿರಿಸಿದ್ದರಿಂದ ಈ ವರ್ಷವೂ ಜನಗಣತಿ ನಡೆಯುವ ಸೂಚನೆ ಇಲ್ಲ ಎನ್ನುವಂತಾಗಿತ್ತು. ಅಚ್ಚರಿಯ ಬೆಳವಣಿಗೆಯಂತೆ ಈಗ ಕೇಂದ್ರ ಸರ್ಕಾರ ಮುಂದಿನ ವರ್ಷದಿಂದಲೇ ಜನಗಣತಿಯ ಪ್ರಕ್ರಿಯೆ ಆರಂಭಿಸಲು ಮುಂದಾಗಿದೆ. ಮುಂದಿನ ವರ್ಷದ ಬಜೆಟ್ಟಿನಲ್ಲಿ ಬೇಕಾಗುವ ಹಣವನ್ನು ಸರ್ಕಾರ ಕಾಯ್ದಿರಿಸುವುದು ಖಚಿತವಾಗಿದೆ.
ದೇಶದಲ್ಲಿ ಬ್ರಿಟಿಷರ ಆಡಳಿತವು 1872ರಲ್ಲಿ ಜನಗಣತಿಯನ್ನು ಪ್ರತಿ ಹತ್ತು ವರ್ಷಗಳಿಗೊಮ್ಮೆ ಆರಂಭಿಸಿತು. ಅಂದಿನ ವೈಸ್ ರಾಯ್ ಲಾರ್ಡ್ ಮಾಯೋ ಜನಗಣತಿ ಕಾರ್ಯವನ್ನು ಆರಂಭಿಸಿದರು. ನಂತರ ಈ ಗಣತಿ ಕಾರ್ಯವನ್ನು 1949ರಿಂದ ಭಾರತ ಸರ್ಕಾರದ ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಸಂಸ್ಥೆಯು ಕೈಗೆತ್ತಿಕೊಂಡಿತು. ಈ ಜನಗಣತಿಯಲ್ಲಿ ದೇಶದ ಸಂಪತ್ತು, ಜನರ ವೃತ್ತಿ, ಸಾಕ್ಷರತೆಯ ಪ್ರಮಾಣ, ಉದ್ಯೋಗ, ಕೃಷಿ, ಕೈಗಾರಿಕೆಯ ಮಾಹಿತಿ, ಸಾಮಾಜಿಕ ಸ್ಥಿತಿಗತಿ, ಆರ್ಥಿಕ ಪ್ರಗತಿ ಮುಂತಾದ ಅಂಶಗಳ ಜೊತೆಗೆ ಲಿಂಗಾನುಪಾತ, ಜಾತಿಯ ಮಾಹಿತಿಯನ್ನು ಒಳಗೊಳ್ಳಲಾಗಿತ್ತು. 2011ರಲ್ಲಿ ಕೊನೆಯದಾಗಿ ನಡೆಸಿದ ಜನಗಣತಿಯ ಪ್ರಕಾರ ಭಾರತದ ಜನಸಂಖ್ಯೆ ಪ್ರಮಾಣ 121 ಕೋಟಿ ಮುಟ್ಟಿತ್ತು. ಅಂದಿನ ಲಿಂಗಾನುಪಾತವು ಪ್ರತಿಶತ ಒಂದು ಸಾವಿರ ಪುರುಷರಿದ್ದರೆ, ಮಹಿಳೆಯರ ಲಿಂಗಾನುಪಾತ ಸರಾಸರಿ 940 ಇದ್ದಿತು. ಭಾರತೀಯ ಸಾಮಾಜಿಕ ಮತ್ತು ಕುಟುಂಬ ವ್ಯವಸ್ಥೆಯಲ್ಲಿ ಗಂಡಾಳಿಕೆಯ ಪಾತ್ರಕ್ಕೆ ಹೆಚ್ಚಿನ ಆದ್ಯತೆ ಇತ್ತು. ಆಸ್ತಿ ಹಕ್ಕು ಗಂಡು ಮಕ್ಕಳಿಗೆ ಮಾತ್ರ ಎನ್ನುವ ತಿಳಿವಳಿಕೆಯಿಂದ ಕುಟುಂಬ ದಲ್ಲಿಯೇ ಹೆಣ್ಣುಮಕ್ಕಳನ್ನು ನಿರ್ಲಕ್ಷಿಸಲಾಗುತ್ತಿತ್ತು.
ಅದೀಗ ಇನ್ನೂ ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಜಾರಿಯಲ್ಲಿರುವುದನ್ನು ಅಲ್ಲಗಳೆಯಲಾಗದು. ಹಾಗಾಗಿ ಹೆಣ್ಣುಮಕ್ಕಳೆಂದರೆ ಮೂಗುಮುರಿಯುತ್ತಿದ್ದ ಕಾರಣ ಭ್ರೂಣ ಹತ್ಯೆಯಂತಹ ಅಮಾನವೀಯ ಕಾರ್ಯ ನಡೆಯುತ್ತಿದ್ದುದರಿಂದ ಹೆಣ್ಣು ಮಗುವಿನ ಜನನ ಸಂಖ್ಯೆ ಇಳಿಮುಖವಾಗಲು ಕಾರಣವಾಗಿತ್ತು. ಹೆಣ್ಣು ಮತ್ತು ಗಂಡು ಮಕ್ಕಳ ಬಗೆಗೆ ಇದ್ದ ತಾರತಮ್ಯದ ಮನಸ್ಥಿತಿ ಈಗ ಸಾಕಷ್ಟು ಬದಲಾಗಿರುವುದರಿಂದ, ಹುಟ್ಟುವ ಹೆಣ್ಣುಮಕ್ಕಳ ಸಂಖ್ಯೆಯಲ್ಲಿ ಸಾಕಷ್ಟು ಪ್ರಗತಿ ಕಾಣಲಾಗಿದೆ. ಅವರ ಶಿಕ್ಷಣದ ಪ್ರಮಾಣವೂ ಹೆಚ್ಚಿದೆ. ಇದನ್ನು ಹೆಣ್ಣು- ಗಂಡು ನಡುವಣ ಲಿಂಗತಾರತಮ್ಯ ಅಂತ್ಯಗೊಳ್ಳುವ ಸೂಚನೆ ಎಂದೇ ನಂಬಬಹುದು.
ಹಾಗೆಯೇ ಭಾರತೀಯರ ಜೀವಿತಾವಧಿಯ ಮಾಹಿತಿಯು ಈ ಜನಗಣತಿಯಲ್ಲಿ ಲಭ್ಯವಾಗಲಿದೆ. 1970- 75ರ ಅವಧಿಯಲ್ಲಿ ಮೊದಲ ಬಾರಿಗೆ ನಡೆಸಿದ ಜೀವಿತಾವಧಿಯ ಒಂದು ಸಮೀಕ್ಷೆಯ ಪ್ರಕಾರ ಪುರುಷರ ಜೀವಿತ ಅವಧಿಯು 50 ವರ್ಷವಿದ್ದರೆ ಮಹಿಳೆಯರದ್ದು 49 ವರ್ಷವಿತ್ತು. 2010-14ರ ಅವಧಿಯಲ್ಲಿ ಭಾರತೀಯರ ಸರಾಸರಿ ಜೀವಿತಾವಧಿ 67 ವರ್ಷ 11 ತಿಂಗಳು ಎಂದು ಗೊತ್ತುಪಡಿಸಲಾಗಿತ್ತು. ಅಚ್ಚರಿಯ ಸಂಗತಿ ಎಂದರೆ ಈ ಅವಧಿಯಲ್ಲಿ ಪುರುಷರ ಜೀವಿತಾವಧಿ 66 ವರ್ಷವಿದ್ದರೆ ಮಹಿಳೆಯರದ್ದು 69 ವರ್ಷ. 1994ರಲ್ಲಿ ಸಂಸತ್ ಭ್ರೂಣ ಪತ್ತೆ ಕಾರ್ಯವನ್ನು ಸಂಪೂರ್ಣವಾಗಿ ನಿಷೇಧಿಸಿತು. ಆದರೂ ಖಾಸಗಿ ಆಸ್ಪತ್ರೆಗಳಲ್ಲಿ ಕದ್ದು ಮುಚ್ಚಿ ಭ್ರೂಣ ಪತ್ತೆ ನಡೆಯುತ್ತಿದ್ದದ್ದರಿಂದ 2003ರಲ್ಲಿ ಈ ಕಾಯ್ದೆಯನ್ನು ಮತ್ತಷ್ಟು ಬಿಗಿಗೊಳಿಸಲಾಯಿತು. ಇದರ ಪರಿಣಾಮ ಸದ್ಯ ಭ್ರೂಣ ಪತ್ತೆ ಕಾರ್ಯ ನಿಂತಿರುವುದರಿಂದಹೆಣ್ಣುಮಕ್ಕಳಸಂಖ್ಯೆ ಕ್ರಮೇಣ ಹೆಚ್ಚಾಗಲು ಕಾರಣವಾಗಿದೆ.
ಮತ್ತೊಂದು ಅಚ್ಚರಿಯ ಬೆಳವಣಿಗೆಯಂತೆ ಪ್ರಧಾನಿ ನರೇಂದ್ರ ಮೋದಿ ಅವರು ಬಿಹಾರ ವಿಧಾನಸಭೆಗೆ ನವೆಂಬರ್‌ನಲ್ಲಿ ನಡೆಯುವ ಚುನಾವಣೆ ಹಿನ್ನೆಲೆಯಲ್ಲಿ ಜಾತಿ ಜನಗಣತಿಯನ್ನು ನಡೆಸುವುದಾಗಿ ಘೋಷಿಸಿರುವುದು. ಬಿಹಾರದಲ್ಲಿ ಈಗಾಗಲೇ ನಿತೀಶ್ ಕುಮಾರ್ ನೇತೃತ್ವದ ಸಮತಾ ಪಕ್ಷ ಮತ್ತು ಬಿಜೆಪಿ ಸಮ್ಮಿಶ್ರ ಸರ್ಕಾರ ಜಾತಿಗಣತಿಯನ್ನು ನಡೆಸಿ ಅದರ ವಿವರವನ್ನೂ ಪ್ರಕಟಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಜಾತಿ ಜನಗಣತಿಗೆ ಅನಿವಾರ್ಯವಾಗಿ ತಲೆಬಾಗಿರುವುದು ಈಗ ರಹಸ್ಯವಾಗಿ ಉಳಿದಿಲ್ಲ.
ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಜಾತಿಜನಗಣತಿಗೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಾ ಬಂದಿರುವುದು ಕೂಡ ಕೇಂದ್ರ ಸರ್ಕಾರದ ಈ ತೀರ್ಮಾನಕ್ಕೆ ಕಾರಣವಾಗಿರುವುದನ್ನು ತಳ್ಳಿಹಾಕಲಾಗದು. ಈ ವಾದಕ್ಕೆ ಪೂರಕ ಎನ್ನುವಂತೆ ಸುಪ್ರೀಂ ಕೋರ್ಟ್ ಹಿಂದುಳಿದ ವರ್ಗದವರ ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಹಿಂದುಳಿದಿರುವಿಕೆ ಹೆಸರಿನಲ್ಲಿ ಮೀಸಲಾತಿ ಹಾಗೂ ಇತರೆ ಸವಲತ್ತುಗಳನ್ನು ನೀಡುವ ಕಾರ್ಯಕ್ರಮಗಳ ವಿಷಯ ವಿಚಾರಣೆಗೆ ಬಂದಾಗಲೆಲ್ಲ ಜಾತಿ ಜನಸಂಖ್ಯೆ ಮತ್ತು ಅವರ ಹಿಂದುಳಿದಿರುವಿಕೆಗೆ ವಸ್ತುನಿಷ್ಠವಾದ ದತ್ತಾಂಶವನ್ನು ನೀಡಬೇಕೆನ್ನುವ ಎಚ್ಚರಿಕೆಯೂ ಮುಖ್ಯ ಕಾರಣ ಎನ್ನುವುದರಲ್ಲಿ ಎರಡು ಮಾತಿರಲಾರದು.
ಜಾತಿ ಗಣತಿ ನಡೆಸುವುದರಿಂದ ದೇಶದಲ್ಲಿ ಜನರನ್ನು ಜಾತಿ ಹೆಸರಿನಲ್ಲಿ ಎತ್ತಿಕಟ್ಟುವ ಮೂಲಕ ಹಿಂದೂ ಧರ್ಮದಲ್ಲಿ ಒಡಕು ಉಂಟಾಗುವುದಾಗಿ ಬಿಜೆಪಿ ನಾಯಕರು ಜಾತಿಗಣತಿಯನ್ನು ತಾತ್ವಿಕವಾಗಿ ವಿರೋಧಿಸಿಕೊಂಡೇ ಬಂದಿದ್ದರು. ವಿಪರ್ಯಾಸ ಎಂದರೆ ಅಸ್ಪೃಶ್ಯತೆ, ವರ್ಣಾಶ್ರಮ ಧರ್ಮ ಮತ್ತು ಜಾತಿ ಪದ್ಧತಿಯನ್ನು ಆಚರಣೆಗೆ ತಂದಿರುವುದೇ ಹಿಂದೂ ಧರ್ಮದ ತಿರುಳು ಎನ್ನುವ ಇತಿಹಾಸವನ್ನು ಮುಚ್ಚಿಡಲು ಸಾಧ್ಯವಿಲ್ಲ.
ಜಾತಿ ಗಣತಿಯಿಂದ ಹಿಂದೂ ಧರ್ಮದಲ್ಲಿ ಒಡಕು ಉಂಟಾಗಲಿದೆ ಎಂಬ ಟೀಕೆಗಳು ಮೊದಲಿನಿಂದಲೂ ಬರುತ್ತಿರುವುದು ಹೊಸದೇನಲ್ಲ. ನಿಜ ಜಾತ್ಯತೀತ ರಾಷ್ಟ್ರ ಎಂದು ಒಪ್ಪಿಕೊಂಡಿರುವ ದೇಶದಲ್ಲಿ ಜಾತಿ ಗಣತಿ ಸರಿಯೇ ಎನ್ನುವ ವಾದವು ಚಾಲ್ತಿಯಲ್ಲಿದೆ. ವಾಸ್ತವವಾಗಿ ಧರ್ಮ ನಿಂತಿರುವುದೇ ಜನರಲ್ಲಿ ಭೇದ ಭಾವ ಉಂಟು ಮಾಡುವ ಮೂಲಕ ಎನ್ನುವುದು ಬೆಳಕಿನಷ್ಟು ನಿಚ್ಚಳ. ಈ ವಾಸ್ತವವನ್ನು ಹಲವರು ಮೇಲ್ನೋಟಕ್ಕೆ ಒಪ್ಪದಿರುವುದು ವಿಪರ್ಯಾಸ. ಆದರೆ ಈ ಜಾತಿ ಗಣತಿಯಿಂದ ಶೋಷಣೆಗೆ ಒಳಗಾದ ತಳಸಮುದಾಯವನ್ನು ಮೇಲೆತ್ತಲು ವಿಶೇಷ ಕಾರ್ಯಕ್ರಮಗಳನ್ನು ರೂಪಿಸುವುದಕ್ಕೆ ಇದಕ್ಕಿಂತ ಮತ್ತೊಂದು ಮಾನದಂಡ ಇರಲಾರದು ಎನ್ನುವುದು ಆರ್ಥಿಕ ಮತ್ತು ಸಾಮಾಜಿಕ ತಜ್ಞರ ಅಭಿಪ್ರಾಯ.
ಜನಗಣತಿಯಿಂದಾಗಿ ದೇಶದಲ್ಲಿನ ಜನಸಂಖ್ಯೆಯ ಅನುಪಾತದಂತೆ ನಿಖರವಾದ ಮಾಹಿತಿ ಲಭ್ಯವಾಗುವುದರಿಂದ ರಾಜ್ಯ ವಿಧಾನಸಭೆಗಳ ಮತ್ತು ಲೋಕಸಭೆಯ ಪ್ರಾತಿನಿಧ್ಯವೂ ಹೆಚ್ಚಳವಾಗಲಿದೆ. ಮಹಿಳೆಯರಿಗೆ ಸಂಸತ್ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಪ್ರತ್ಯೇಕ ಪ್ರಾತಿನಿಧ್ಯ ನೀಡುವ ಮೀಸಲಾತಿಯನ್ನು ನಿಗದಿಪಡಿಸಲು 2027ರ ಜನಗಣತಿಯು ಹೆಚ್ಚು ಉಪಯೋಗಕ್ಕೆ ಬರಲಿದೆ. ಆಗ ಮಹಿಳಾ ಮೀಸಲಾತಿಯಲ್ಲಿ ಹಿಂದುಳಿದ ವರ್ಗದವರಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಕ್ಷೇತ್ರಗಳನ್ನು ನಿಗದಿಪಡಿಸುವ ಅವಶ್ಯಕತೆಯೂ ಬರಬಹುದು. ಜೊತೆಗೆ ಎಲ್ಲ ರಾಜ್ಯಗಳಲ್ಲಿಯೂ ಇರುವ ಶಾಶ್ವತ ಹಿಂದುಳಿದ ವರ್ಗಗಳ ಆಯೋಗವು ತಮ್ಮ ರಾಜ್ಯಗಳ ಮೀಸಲಾತಿ ಪ್ರಮಾಣದಲ್ಲಿ ಬದಲಾವಣೆ ಮಾಡಿಕೊಳ್ಳಲು ಇದು ಒಳ್ಳೆಯ ಅವಕಾಶ, ಜನಗಣತಿ ನಡೆಸುವ ಸಂಸ್ಥೆಯು ಹತ್ತು ವರ್ಷಗಳಿಗೊಮ್ಮೆ ನಡೆಸುವ ಗಣತಿಯಿಂದ ಹಿಂದುಳಿದ ವರ್ಗದವರ ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಪ್ರತ್ಯೇಕ ಸಮೀಕ್ಷೆ ಕಾರ್ಯದ ಅವಶ್ಯಕತೆಯು ಕಂಡು ಬರುವುದಿಲ್ಲ.
ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಜನಗಣತಿ ಜೊತೆಗೆ ಜಾತಿ ಗಣತಿಯನ್ನು ಕೈಗೆತ್ತಿಕೊಳ್ಳುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ .
ಉಡುಪಿ: ಇಲ್ಲಿನ ಮಲ್ಪೆ ಕೋಡಿಬೆಂಗ್ರೆ ಬೀಷಚ್ ಸಮೀಪ ಪ್ರವಾಸಿ ದೋಣಿ ಮುಗುಚಿದ ಪರಿಣಾಮ ತೀವ್ರ ಅಸ್ವಸ್ಥಗೊಂಡಿದ್ದ ಮೈಸೂರಿನ ಇಬ್ಬರು ಮೃತಪಟ್ಟಿರುವ…
ಹಾಸನ: ನಾನು ಜೆಡಿಎಸ್ ಬಿಟ್ಟು ಹೋದರೆ ದ್ರೋಹ ಹೇಗಾಗುತ್ತದೆ? ನಾನು ಅಲ್ಲಿದ್ದರೆ ಇನ್ನೊಂದು ಸೀಟ್ ಜಾಸ್ತಿ ಆಗೋದು ಅಷ್ಟೇ. ಏನು…
ಬೆಂಗಳೂರು: ವಿಧಾನಮಂಡಲ ವಿಶೇಷ ಜಂಟಿ ಅಧಿವೇಶನದಲ್ಲಿ ಭಾಷಣ ಮಾಡದೇ ತೆರಳುತ್ತಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಕಾಂಗ್ರೆಸ್ ಸದಸ್ಯರು…
ಮಳವಳ್ಳಿ: ಮಳವಳ್ಳಿ ತಾಲ್ಲೂಕಿನ ಹಲಗೂರು ಸಮೀಪದ ಮುತ್ತತ್ತಿ ಕಾವೇರಿ ನದಿಯಲ್ಲಿ ಈಜಾಡುತ್ತಿದ್ದಾಗ ನೀರಿನ ಸೆಳೆತಕ್ಕೆ ಸಿಲುಕಿ ಯುವಕ ಮೃತಪಟ್ಟ ಘಟನೆ…
ಮಂಡ್ಯ: ಮಹಾತ್ಮ ಗಾಂಧೀಜಿ ಅವರ ವಿಚಾರಧಾರೆಗಳನ್ನು ಯುವ ಪೀಳಿಗೆಗೆ ತಲುಪಿಸುವ ಕೆಲಸವನ್ನು ಗಾಂಧಿ ಭವನದಲ್ಲಿ ಮಾಡಲಾಗುವುದು ಎಂದು ಮಂಡ್ಯ ಜಿಲ್ಲಾ…
ಮಂಡ್ಯ: ಮಂಡ್ಯ ಜಿಲ್ಲೆಯ ವ್ಯಾಪ್ತಿಯ ಗ್ರಾಮ ಪಂಚಾಯತ್‌ಗಳಲ್ಲಿ ದಿನಾಂಕ:31-10-2017ಕ್ಕೂ ಪೂರ್ವದಲ್ಲಿ ಗ್ರಾಮ ಪಂಚಾಯತ್ ನಿಂದ ನೇಮಕಗೊಂಡು ನೀರುಗಂಟಿ, ಸ್ವಚ್ಛತಗಾರ, ಅಟೆಂಡರ್…