ಸಂಪಾದಕೀಯ

ಕಂಬಾಲಪಲ್ಲಿಯ ಕತ್ತಲು ಕೊಪ್ಪಳದಲ್ಲಿ ನೀಗಲಿದೆಯೇ?

ಜಾತಿ ಪ್ರಜ್ಞೆಯನ್ನು ಅಣಕಿಸುವ ಮರಕುಂಬಿ ತೀರ್ಪು ಭವಿಷ್ಯದಲ್ಲಿ ಭರವಸೆ ಹುಟ್ಟಿಸಬಹುದೇ?

ನಾ.ದಿವಾಕರ
ಕೊಪ್ಪಳದ ಮರಕುಂಬಿ ಪ್ರಕರಣದ ಚಾರಿತ್ರಿಕ ತೀರ್ಪು ದಲಿತ ಸಮುದಾಯದಲ್ಲಿ ಸಂಚಲನ ಉಂಟುಮಾಡಿದೆ. ಯಾವುದೇ ಘಟನೆಯೊಂದರಲ್ಲಿ ನ್ಯಾಯಾಂಗದ ಒಂದೇ ತೀರ್ಪಿನಲ್ಲಿ 101 ಆರೋಪಿಗಳಿಗೆ ಶಿಕ್ಷೆ ವಿಧಿಸಿರುವ ಉದಾಹರಣೆಗಳು ಇಲ್ಲ. ಈ ಪ್ರಕರಣದಲ್ಲಿ 98 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ, ಮೂವರಿಗೆ ಐದು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿರುವುದು ಕೇವಲ ಚಾರಿತ್ರಿಕವಷ್ಟೇ ಅಲ್ಲ, ಇಂದಿಗೂ ಜಾತಿ ದೌರ್ಜನ್ಯದಿಂದ ನಲುಗುತ್ತಿರುವ ವಿಕಸಿತ ಭಾರತದಲ್ಲಿ ಇದೊಂದು ಮೈಲಿಗಲ್ಲೂ ಆಗಬಹುದು. ಪ್ರತಿ ಆರು ನಿಮಿಷಕ್ಕೊಂದು ದೌರ್ಜನ್ಯ ಎದುರಿಸುತ್ತಿರುವ ದಲಿತ ಸಮುದಾಯಕ್ಕೆ ಈ ತೀರ್ಪಿನಲ್ಲಿ ಒಂದು ಪರಿವರ್ತಕ ಭವಿಷ್ಯದ ಹೊಳಹು ಕಂಡರೂ ಅಚ್ಚರಿಯೇನಿಲ್ಲ.

ಸಾಮಾಜಿಕ ನ್ಯಾಯ ಎನ್ನುವುದು ಕೇವಲ ಸಂವಿಧಾನದ ಹಾಳೆಗಳಲ್ಲಿ, ಕಾಯ್ದೆ-ಕಾನೂನು ಚೌಕಟ್ಟುಗಳಲ್ಲಿ ಕಳೆದುಹೋಗುತ್ತಿರುವ ವಿಕಸಿತ ಭಾರತದ ಸಮಾಜದಲ್ಲಿ ಮಹಿಳೆಯರ ಮೇಲೆ, ಅಶ್ಪಶ್ಯರು-ದಲಿತರ ಮೇಲೆ- ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯವೆಸಗಿದವರಿಗೆ ಶಿಕ್ಷೆಯಾಗುವುದು ಒಂದು ಸಂಭ್ರಮಿಸುವ ವಾತಾವರಣ ಮಾಡಿಸುವುದು ಸಹಜ. ಕಣ್ಣೆದುರಿನಲ್ಲೇ ನಡೆಯುವ ಅಮಾನುಷ ದೌರ್ಜನ್ಯಗಳಿಗೆ ಶಿಕ್ಷೆಯಾಗುವುದು ಅನ್ಯಾಯಕ್ಕೊಳಗಾದವರಲ್ಲಿ ಸಮಾಧಾನದ ನಿಟ್ಟುಸಿರು ಮೂಡಿಸುವುದು ಸ್ವಾಭಾವಿಕ ಎನ್ನಬಹುದು. ಆದರೆ ಅದು ಅಪರೂಪದ ಘಟನೆಯಂತೆ ಸಂಭ್ರಮಿಸುವಂತಾದರೆ ನಮ್ಮ ನಾಗರಿಕತೆಯಲ್ಲಿ ಏನೋ ದೋಷವಿದೆ ಎಂದೇ ಅರ್ಥ ಅಲ್ಲವೇ?

ದಲಿತ ಸಂತ್ರಸ್ತರು ದೇಶಾದ್ಯಂತ ನ್ಯಾಯಕ್ಕಾಗಿ ಎಷ್ಟು ಹಂಬಲಿಸುತ್ತಿದ್ದಾರೆ ಎನ್ನುವುದರ ಸಂಕೇತವಾಗಿ ಈ ಬೆಳವಣಿಗೆಯನ್ನು ನೋಡಬೇಕಿದೆ. ಈ ಪಾಶವೀಕೃತ್ಯದಲ್ಲಿ ತಳಸಮುದಾಯಗಳ ಒಂದು ವರ್ಗವೂ ಇರುವುದು ಅಚ್ಚರಿ ಮೂಡಿಸದಿದ್ದರೂ, ಚಿಂತೆಗೆ ಹಚ್ಚಬೇಕಲ್ಲವೇ? ಇದು ವರ್ತಮಾನದ ಭಾರತದಲ್ಲಿ ನಮ್ಮನ್ನು ಕಾಡಬೇಕಾದ ಗಹನವಾದ ಪ್ರಶ್ನೆ. ಏಕೆಂದರೆ ಇಂದಿಗೂ ಪ್ರಾಚೀನ ಕಾಲದ ಅಮಾನುಷ ದೌರ್ಜನ್ಯಗಳು ನಮ್ಮ ನಡುವೆ ನಡೆಯುತ್ತಲೇ ಇವೆ. ಭಾರತೀಯ ಸಮಾಜ ಪಡೆದಿರುವ ಅತ್ಯುನ್ನತ ಶಿಕ್ಷಣವಾಗಲಿ, ಸಾಂಸ್ಕೃತಿಕ ಅರಿವು ಅಥವಾ ಪ್ರಜ್ಞೆಯಾಗಲಿ ತಳಸಮುದಾಯಗಳ-ಮಹಿಳೆಯರ ಮೇಲಿನ ಅತ್ಯಾಚಾರ, ಹತ್ಯೆ, ದಹನ, ತಾರತಮ್ಯ, ದೌರ್ಜನ್ಯಗಳನ್ನು ತಪ್ಪಿಸಲು ನೆರವಾಗಿಲ್ಲ.

ಇಂತಹ ನಿದರ್ಶನಗಳು ಹೇರಳ 20 ವರ್ಷಗಳ ಹಿಂದೆ ನಡೆದ ಕಂಬಾಲಪಲ್ಲಿ ಘಟನೆ ಇದಕ್ಕೊಂದು ಚಾರಿತ್ರಿಕ ನಿದರ್ಶನ. ಹಾಥಸ್, ಉನ್ನಾವೋ, ಭವಾರಿ ದೇವಿ, ಆಂಧ್ರದ ಕರಮಚೇಡು, ಚುಂಡೂರು, ಬಿಹಾರ ಲಕ್ಷ್ಮಣಪುರ ಬಾತೆ, ಬತಾನಿತೊಲ, ಬೆಲ್ವಿ, ಪಾರಸ್‌ ಗಾ ಹೀಗೆ ಶೋಷಿತ ತಳಸಮುದಾಯಗಳ ಮೇಲೆ ನಡೆದ ಪೈಶಾಚಿಕ ದಾಳಿಗಳಲ್ಲಿ ಕೆಳಹಂತದ ನ್ಯಾಯಾಲಯ ವಿಧಿಸಿದ ಶಿಕ್ಷೆಯನ್ನು ಉನ್ನತ ನ್ಯಾಯಾಲಯಗಳು ಕಡಿಮೆಗೊಳಿಸಿವೆ ಅಥವಾ ಆರೋಪಿಗಳನ್ನು ಸಾಕ್ಷಾಧಾರಗಳ ಕೊರತೆಯಿಂದ ಖುಲಾಸೆ ಮಾಡಿವೆ. ಈ ದೃಷ್ಟಿಯಿಂದ ನೋಡಿದಾಗ ಕೊಪ್ಪಳದ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ಈ ತೀರ್ಪು ಅಂತಿಮ ನ್ಯಾಯ ಅಲ್ಲ ಎಂದೇ ಹೇಳಬಹುದು. ಇಲ್ಲಿ ನ್ಯಾಯಾಂಗವನ್ನು ದೂಷಿಸಲಾಗುವುದಿಲ್ಲ. ಇಂತಹ ಪ್ರಕರಣಗಳನ್ನು ತಾರ್ತಿಕ ಅಂತ್ಯಕ್ಕೆ ಕೊಂಡೊಯ್ಯುವ ಜವಾಬ್ದಾರಿ ಹೊರುವ ಸರ್ಕಾರಿ ಪ್ರಾಸಿಕ್ಯೂಷನ್‌ಗಳ ಕಾರ್ಯನಿರ್ವಹಣೆ ಇಲ್ಲಿ ಮುಖ್ಯವಾಗುತ್ತದೆ.

ಜಾತಿ ಕೂಪದ ಅಪಸವ್ಯಗಳ ನಡುವೆ: ದಲಿತರ, ಅಸ್ಪೃಶ್ಯರ, ಅಲ್ಪಸಂಖ್ಯಾತರ ಹಾಗೂ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳಿಗೆ ನ್ಯಾಯ ದೊರೆಯಬೇಕಾದರೆ ಸಂತ್ರಸ್ತರ ಪರವಾಗಿ ನಿರಂತರವಾಗಿ ಹೋರಾಡುವ ಒಂದು ರಾಜಕೀಯ ಕ್ರಿಯಾಶೀಲತೆ ಬಹಳ ಮುಖ್ಯವಾಗುತ್ತದೆ. ತಮಿಳುನಾಡಿನ ಕೀಳ್ವನ್‌ಮಣಿಘಟನೆಯಲ್ಲಿ ಸಿಪಿಎಂಪಕ್ಷದ ಮುಂದಾಳತ್ವದಲ್ಲಿ ನಡೆದ ಹೋರಾಟ ಅಂತಿಮ ನ್ಯಾಯ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಕೊಪ್ಪಳದಲ್ಲೂ ಇದೇ ಪಕ್ಷದ ಹೋರಾಟದ ಛಾಯೆ ಧ್ವನಿಸಿದೆ. ಮತ್ತೊಂದೆಡೆ ಮರಕುಂಬಿ ತೀರ್ಪನ್ನು ಜಾತಿ ಕ್ರೌರ್ಯದ ವಿರುದ್ಧದ ಹಾಗೂ ಸಾಮಾಜಿಕ ನ್ಯಾಯದ ಪರ ದೊರೆತ ಒಂದು ವಿಜಯ ಎಂದು ಭಾವಿಸುತ್ತಲೇ, ನಾವು ಯೋಚಿಸಬೇಕಾದ್ದು ಒಂದು ಸಣ್ಣ ಗ್ರಾಮದ ತಳಮಟ್ಟದ ಸಮಾಜದಿಂದ ಇಷ್ಟು ದೊಡ್ಡ ಸಂಖ್ಯೆಯ ಅಪರಾಧಿಗಳನ್ನು ಸೃಷ್ಟಿಸಿದ ಆ ಒಂದು ಸಾಮಾಜಿಕ ಪರಿಸರದ ಬಗ್ಗೆ ಈಗ ವಿಧಿಸಿರುವ ಶಿಕ್ಷೆ ಊರ್ಜಿತವಾಗದೆ ಇದ್ದರೂ, ಈ ಸಂಸಾರಗಳಿಗೆ ಅಂಟಿದ ಕಳಂಕವನ್ನು ತೊಡೆದುಹಾಕಲಾಗುವುದಿಲ್ಲ. ಈ ಕಳಂಕಿತ ಅಪರಾಧಿಗಳು ನಮ್ಮ ಸಮಾಜ ಮತ್ತು ಸಂಸ್ಕೃತಿ ಸೃಷ್ಟಿಸಿರುವ ಶ್ರೇಣೀಕೃತ ಜಾತಿ ಕೂಪದ ಶಿಶುಗಳಾಗಿ ಕಾಣುತ್ತಾರಲ್ಲವೇ?

ಶಿಕ್ಷೆಗೊಳಗಾದ ವ್ಯಕ್ತಿಗಳನ್ನೇ ಅವಲಂಬಿಸಿ ಬದುಕು ಸವೆಸುತ್ತಿರುವ ಹತ್ತಾರು ಕುಟುಂಬಗಳು ಬೀದಿಪಾಲಾಗಬಹುದು. ಇವರ ಬದುಕು ಮತ್ತಷ್ಟು ದುಸ್ತರವಾಗಬಹುದು. ವ್ಯಕ್ತಿಗತವಾಗಿ ಇವರಲ್ಲಿ ಹತ್ತು ವರ್ಷಗಳ ನಂತರ ಪಶ್ಚಾತ್ತಾಪವೂ ಮೂಡಬಹುದೇ? ಕೊಪ್ಪಳದ ಸಾಮಾಜಿಕ ವಾತಾವರಣದಲ್ಲಿ ಈ ಪರಿತಾಪದ ಸೋಂಕು ಇಲ್ಲದಿರುವುದು 2022ರಲ್ಲಿ ದಲಿತ ಸಮುದಾಯದ ನಾಲ್ಕು ವರ್ಷದ ಕೂಸು ದೇವಸ್ಥಾನ ಪ್ರವೇಶಿಸಿದ್ದಕ್ಕಾಗಿ ಆ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹೇರಿ, 25,000 ರೂ. ದಂಡ ವಿಧಿಸಿದ ಘಟನೆಯಲ್ಲಿ ಕಾಣುತ್ತದೆ. ಮರಕುಂಬಿ ಘಟನೆಯಲ್ಲಿ ದಲಿತರ ಗುಡಿಸಲುಗಳನ್ನು ಸುಟ್ಟುಹಾಕಿದ ಮನಸ್ಸುಗಳೂ ಇದೇ ಕ್ರೂರ ಮನಸ್ಥಿತಿಯ ಒಂದು ಭಾಗ ಇಂತಹ ಒಂದು ಪ್ರಾಚೀನ ಮನಸ್ಥಿತಿಯ ಸಾಮಾಜಿಕ ಕ್ರೌರ್ಯವನ್ನು ಯಥಾಸ್ಥಿತಿಯಲ್ಲಿ ಕಾಪಾಡಿಕೊಂಡು ಬಂದಿರುವ ಜಾತಿ ಸಮಾಜ ಮತ್ತು ಸಾಮುದಾಯಿಕ ಪ್ರಜ್ಞೆಯಲ್ಲಿ ಈ ಅಮಾನುಷತೆಯನ್ನು ಕಾಣಬೇಕಿದೆ.

ವ್ಯಷ್ಟಿ ಸಮಷ್ಟಿ ಪ್ರಜ್ಞೆಗಳ ನಡುವೆ : ಒಂದು ಸಮಾಜದಲ್ಲಿ ಇಂದಿಗೂ ಊಳಿಗಮಾನ್ಯತೆ, ಮೇಲ್ವಾತಿ ಅಥವಾ ಸವರ್ಣೀಯ ಶ್ರೇಷ್ಠತೆಯ ಧೋರಣೆ, ಅಸ್ಪೃಶ್ಯತೆಯ ಆಚರಣೆ ಮತ್ತು ತಾರತಮ್ಯದ ಮನಸ್ಥಿತಿಗಳು ಜೀವಂತವಾಗಿದೆ ಎಂದರೆ, ಅದನ್ನು ಪೋಷಿಸುವ ರಾಜಕೀಯ-ಸಾಂಸ್ಕೃತಿಕ-ಧಾರ್ಮಿಕ ಹಾಗೂ ಜಾತೀಯ ಶಕ್ತಿಗಳನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಬೇಕಾಗುತ್ತದೆ. ತಳಸಮುದಾಯಗಳ ಒಳಗೇ ಜಾತಿ ತಾರತಮ್ಯದ ಬೀಜಗಳು ಇನ್ನೂ ಬೇಯುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಡಾ.ಬಿ.ಆರ್.ಅಂಬೇಡ್ಕರ್ ಅವರಿಂದ ನಾವು ಕಲಿತಿರುವುದೇನು ಎಂಬ ಪ್ರಶ್ನೆ ನಮ್ಮನ್ನು ಕಾಡಬೇಕಿದೆ. ಸ್ಮಶಾನ ಸದೃಶ ಗ್ರಾಮದಲ್ಲಿ ಶಾಶ್ವತ ಕಳಂಕದೊಂದಿಗೆ ಬದುಕುತ್ತಿರುವ ಆ ಅಪರಾಧಿಗಳ ಕುಟುಂಬಗಳ ನೂರಾರು ಸದಸ್ಯರು. ಇತ್ತ ಈಗಾಗಲೇ ದಾಳಿಗೊಳಗಾಗಿರುವ ದಲಿತ ಕುಟುಂಬಗಳೂ ನಾಳೆ ಏನಾಗಬಹುದು ಎಂಬ
ಆತಂಕದಲ್ಲಿರುತ್ತವೆ. ಏಕೆಂದರೆ ಈ ಶಿಕ್ಷೆಗೊಳಗಾದವರು ಮುಂದೆ ಬಿಡುಗಡೆಯಾದರೆ ಮತ್ತೊಮ್ಮೆ ದಾಳಿ ಮಾಡಬಹುದೇನೋ ಎಂಬ ಭೀತಿಯೂ ದಲಿತ ಸಮುದಾಯಗಳಲ್ಲಿ ಮನೆ ಮಾಡಿರುತ್ತದೆ. ಹಂತಕರನ್ನು, ಅತ್ಯಾಚಾರಿಗಳನ್ನು, ಪಾತಕಿಗಳನ್ನು ಸಾರ್ವಜನಿಕವಾಗಿ ಸನ್ಮಾನಿಸುವ ಸಂಸ್ಥೆ ತಿಯೊಂದು ಗುಜರಾತ್‌ನಿಂದ ಕರ್ನಾಟಕಕ್ಕೆ ಆಮದಾಗಿ ಬಂದಿದೆ. ಈ ಪ್ರಕರಣದ ಅಪರಾಧಿಗಳೂನಾಳೆನಿರಪರಾಧಿಗಳಾದರೆಸನ್ಮಾನಿಸಲ್ಪಡಬಹುದು.
ಈ ಸಮಾಜಕ್ಕೆ ಅಂತಹ ಅಮಾನುಷ ಹಕ್ಕು ನೀಡಿರುವುದು ನಮ್ಮ ಶ್ರೇಣೀಕೃತ ಜಾತಿ ವ್ಯವಸ್ಥೆ ಮತ್ತು ಅದನ್ನು ಇಂದಿಗೂ ನಿರ್ದೇಶಿಸಿ, ಪೋಷಿಸುವ ಧರ್ಮ ಸಂಹಿತೆಗಳು ಹಾಗೂ ಅದನ್ನು ಸಂರಕ್ಷಿಸುವ ಸಾಂಸ್ಕೃತಿಕ ಜಗತ್ತು. ಭಾರತದ ಉದ್ದಗಲಕ್ಕೂ ನಡೆಯುತ್ತಿರುವ ಜಾತಿ-ಮಹಿಳಾ ದೌರ್ಜನ್ಯಗಳು ಮತ್ತು ಅಸ್ಪೃಶ್ಯತೆಯ ಪ್ರಕರಣಗಳು ಇದನ್ನು ಮತ್ತೆ ಮತ್ತೆ ಸಾಬೀತುಪಡಿಸುತ್ತಲೇ ಇವೆ. ಈ ಕ್ರೌರ್ಯ ಮತ್ತು ಅಮಾನುಷ ಅನಾಚಾರವನ್ನು ಕಾಪಾಡುವ ವಿಶಾಲ ಸಮಾಜವೊಂದು ಸಕ್ರಿಯವಾಗಿದೆ. ಇದನ್ನು ಸಾಂಸ್ಕೃತಿಕ ರಾಜಕಾರಣದ ಶಕ್ತಿಗಳು ನಿರ್ದೇಶಿಸುತ್ತವೆ.

ಮರಕುಂಬಿ ತೀರ್ಪನ್ನು ಸ್ವಾಗತಿಸಿ, ಸಂಭ್ರಮಿಸುತ್ತಲೇ ಒಂದು ಕ್ಷಣ ಕಣ್ಮುಚ್ಚಿದರೆ ನಮ್ಮ ಮುಂದೆ ಕೈಮುಗಿದು ನಿಂತಕಂಬಾಲಪಲ್ಲಿಯ ಅಸಹಾಯಕ ಅಜ್ಜ, ಖೈರ್ಲಾಂಜಿಯ ಭೂತಮಾಂಗೆ ಕುಟುಂಬ, ಹಾಥ್‌ಸ್‌ನಲ್ಲಿ ಸುಟ್ಟುಹೋದ ಅಮಾಯಕ ಬಾಲೆಯ ಚಿತ್ರ ಹಾದು ಹೋಗುತ್ತದೆ. ಈ ಘಟನೆಗಳಲ್ಲಿ ಆವರಿಸಿದ್ದ ಕಾರ್ಗತ್ತಲ ಮಾರ್ಗದಲ್ಲಿ ಬೆಳಕಿನ ಒಂದು ಸೀಳುಹಾದಿ ಕಾಣಿಸುವ ಹಾಗೆ ಮರಕುಂಬಿ ತೀರ್ಪು ನಮಗೆ ಕಾಣಬೇಕಿದೆ. ತುಳಿತಕ್ಕೊಳಗಾದ ಶೋಷಿತ ಸಮುದಾಯಗಳಿಗೆ ಸಂವಿಧಾನದ ರಕ್ಷಣೆ ಮತ್ತು ಸಾಂತ್ವನ ಇರುವುದನ್ನು ಭಾರತದನ್ಯಾಯಾಂಗ ಪದೇಪದೇಖಚಿತಪಡಿಸುತ್ತಲೇ ಇದೆ. ಆದರೆ ಈ ಸಾಂತ್ವನದ ವಾತಾವರಣವನ್ನು ಕಲುಷಿತಗೊಳಿಸುವ ಒಂದು ವಿಕೃತ ಸಮಾಜವೂ ತನ್ನ ಅಮಾನುಷತೆಯನ್ನು ಮತ್ತೆಮತ್ತೆ ಪ್ರದರ್ಶಿಸುತ್ತಲೇ ಇದೆ.

ಇದೊಂದು ಸಾಮಾಜಿಕ ವ್ಯಾಧಿ, ಸಾಂಸ್ಕೃತಿಕ ವ್ಯಸನ. ಅಂಬೇಡ್ಕರ್ ಅವರಂತಹ ಚಿಕಿತ್ಸಕ ಗುಣದ ವ್ಯಕ್ತಿತ್ವಗಳಿಂದ ವಂಚಿತವಾಗಿರುವ 21ನೆಯ ಶತಮಾನದ ಭಾರತ ಈ ವ್ಯಸನದ ವಿರುದ್ಧ ಹೋರಾಡಲು ಅದೇ ಸಾಮಾಜಿಕ ವೈದ್ಯನನ್ನೇ ಮತ್ತೆಮತ್ತೆ ಆಶ್ರಯಿಸಬೇಕಿದೆ. ಈ ಹಾದಿಯನ್ನು ಸುಗಮಗೊಳಿಸಬೇಕಾದ ಜವಾಬ್ದಾರಿ ನಾಗರಿಕರ ಮೇಲಿದೆ. ಈ ನೊಗವನ್ನು ಹೊರಬೇಕಾದ ನೈತಿಕ ಹೊಣೆಗಾರಿಕೆ ಮಾರ್ಕ್ಸ್, ಅಂಬೇಡ್ಕರ್, ಲೋಹಿಯಾ, ಗಾಂಧಿ, ಫುಲೆ ಮುಂತಾದವರನ್ನು ಅನುಸರಿಸುವ ಪ್ರಜ್ಞಾವಂತ ನಾಗರಿಕರ ಮೇಲಿದೆ. ಮರಕುಂಬಿಯ ತೀರ್ಪನ್ನು ಸ್ವಾಗತಿಸೋಣ, ಕೊಪ್ಪಳವನ್ನು ಸರಿಸುತ್ತಿರೋಣ ಆದರೆ ಕಂಬಾಲಪಲ್ಲಿಯನ್ನು ಮರೆಯದಿರೋಣ.

 

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ಮೈಸೂರಿನಲ್ಲಿ ಮಾಗಿ ಉತ್ಸವ: ಸಂಗೀತದ ಹೊನಲು ಹರಿಸಿದ ವಿಜಯ್‌ ಪ್ರಕಾಶ್‌

ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್‌ ಪ್ರಕಾಶ್‌ ಅವರು…

6 hours ago

ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ

ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…

7 hours ago

ರೈತರಿಗೆ ಮತ್ತೊಂದು ಸಂಕಷ್ಟ: ಈ ಬಾರಿ ಮಾವಿನ ಇಳುವರಿ ಭಾರೀ ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…

7 hours ago

ಬಂಡೀಪುರದಲ್ಲಿ ಮತ್ತೊಂದು ಕಾಡಾನೆ ಸಾವು

ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…

8 hours ago

ಪ್ರಮುಖ ಆಕರ್ಷಣೀಯ ಕೇಂದ್ರವಾಗಿ ಹೊರಹೊಮ್ಮಿದ ಅಯೋಧ್ಯೆ ರಾಮಮಂದಿರ

ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್‌ ಒನ್‌ ಪಟ್ಟ ಪಡೆದಿದೆ. ಈ ಮೂಲಕ ಈಗ…

8 hours ago

ಪ್ರವಾಸಿಗರಿಗೆ ಬಿಗ್‌ ಶಾಕ್: ನಂದಿಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್‌

ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್‌ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್‌ ಶಾಕ್‌ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…

8 hours ago