ಕೇರಳ ರಾಜ್ಯದ ವಯನಾಡು ಜಿಲ್ಲೆಯಲ್ಲಿ ಭಾರಿ ಮಳೆ, ಪ್ರವಾಹ, ಭೂಕುಸಿತ ಸಂಭವಿಸಿ ನಾಲ್ಕು ಗ್ರಾಮಗಳು ಕೊಚ್ಚಿಹೋಗಿ ಹೇಳ ಹೆಸರಿಲ್ಲದಂತಾಗಿವೆ.
ಸಾವು- ನೋವುಗಳ ಸಂಖ್ಯೆಯ ಗತಿ ಏರುತ್ತಲೇ ಇದೆ. ಈ ಊಹೆಗೂ ನಿಲುಕದ ಜಲಾಘಾತದ ಒಳಸುಳಿಯನ್ನು ಅರಿಯುವ ಪ್ರಯತ್ನಕ್ಕೆ ಪೂರಕವಾಗಿ ವಿಜ್ಞಾನ ಲೇಖಕ, ಪರಿಸರ ತಜ್ಞ ನಾಗೇಶ ಹೆಗಡೆ ಅವರು ‘ಆಂದೋಲನ’ದಿನಪತ್ರಿಕೆಗೆ ನೀಡಿದ ಸಂದರ್ಶನದ ಕೊನೆಯ ಭಾಗ
ಪ್ರಶ್ನೆ: ಪಶ್ಚಿಮಘಟ್ಟದ ಸೂಕ್ಷ್ಮ ಪ್ರದೇಶಗಳಲ್ಲಿ ಹಸ್ತಕ್ಷೇಪ ಸಲ್ಲದೆಂದು ಇದೀಗ ಕೇಂದ್ರ ಸರ್ಕಾರ ಅದರ ರಕ್ಷಣೆಗೆ ಅಧಿಸೂಚನೆ ಹೊರಡಿಸಿದೆಯಲ್ಲ? ನಮ್ಮ ಅರಣ್ಯ ಸಚಿವ ಖಂಡ್ರೆಯವರೂ ಅನಧಿಕೃತ ಗಣಿ ಕೆಲಸದ ಮರುವಿಮರ್ಶೆ ಮಾಡಿಸುತ್ತೇನೆ ಎಂದಿದ್ದಾರಲ್ಲ?
ನಾಗೇಶ ಹೆಗಡೆ: ಅವೆಲ್ಲ ತಾತ್ಕಾಲಿಕವಾಗಿ ಕಣ್ಣೂರೆಸುವ ಕ್ರಮಗಳು, ಕೇಂದ್ರ ಸರ್ಕಾರ ಇದೀಗ ಹೊರಡಿಸಿದ ಅಧಿಸೂಚನೆಯನ್ನೇ ನೋಡಿ, ಇದು ‘ಕರಡು’ ಅಧಿಸೂಚನೆ. ಪಶ್ಚಿಮ ಘಟ್ಟದಲ್ಲಿ ಬರುವ ರಾಜ್ಯಗಳು ಅನುಮೋದನೆ ನೀಡಿದರೆ ಮಾತ್ರ ಜಾರಿಗೆ ಬರುವಂಥದ್ದು. 2014ರಿಂದ ಕೇಂದ್ರ ಸರ್ಕಾರ ಪದೇ ಪದೇ ಅದೇ ಅಧಿಸೂಚನೆಗಳನ್ನು ಹೊರಡಿಸುತ್ತಿದೆ. ಇದು ಆರನೆಯದು! ಯಾವ ರಾಜ್ಯವೂ ಕ್ಯಾರೇ ಅನ್ನುವುದಿಲ್ಲ. ಖಂಡ್ರೆಯವರ ಘೋಷಣೆಯ ಫಲವನ್ನೂ ಕಾದು ನೋಡಿ, ಮುಂದಿನ ವರ್ಷ ಯಾರಿಗೂ ನೆನಪಿರುವುದಿಲ್ಲ. ಇವರ ಎಚ್ಚರಿಕೆ ಕಡತದಲ್ಲಿ ಸೇರಿಕೊಳ್ಳುತ್ತದೆ. ಕೇರಳದಲ್ಲಿ ಬಹುತೇಕ ಕ್ವಾರಿಗಳೆಲ್ಲ ಅನಧಿಕೃತವಾಗಿದ್ದು, ಅವೆಲ್ಲ ಬೇನಾಮಿ ಹೆಸರಿನಲ್ಲಿ ಸಿಪಿಎಮ್, ಕಾಂಗ್ರೆಸ್ ಮತ್ತು ಭಾಜಪಾ ಧುರೀಣರೇ ನಡೆಸುತ್ತಿದ್ದಾರೆ ಎಂದು ಅಲ್ಲಿನ ಬಿಷಪ್ ಒಬ್ಬರು ಹೇಳಿದ್ದನ್ನು ಡಾ.ಮಾಧವ ಗಾಡೀಲ್ ಪುನರುಚ್ಚರಿಸಿದ್ದಾರೆ. ಗೋವಾದಲ್ಲಿ ಇಂಥ ಅನಧಿಕೃತ ಗಣಿಗಾರಿಕೆಯ ತನಿಖೆಗೆಂದೇ ಶಾ ಆಯೋಗ ನೇಮಕವಾಗಿತ್ತು. ಅದರ ವರದಿಯ ಪ್ರಕಾರ (ಐದು ವರ್ಷಗಳ ಹಿಂದೆ) ಈ ಗಣಿಗಳ ಮಾಲೀಕರು ಅಂದಾಜು 34 ಸಾವಿರ ಕೋಟಿ ರೂಪಾಯಿಗಳನ್ನು ಬಾಚಿಕೊಂಡಿದ್ದಾರೆ. ಇದು ಕೂಡ ಡಾ.ಗಾಡ್ಗಳರ ಆತ್ಮಕಥೆಯಲ್ಲಿ ಕೂಡ ಡಾ.ಗಾಡ್ಗಳರ ಆತ್ಮಕಥೆಯಲ್ಲಿ ದಾಖಲಾಗಿದೆ. ಇಂಥ ಗಣಿಧಣಿಗಳನ್ನು ಬಗ್ಗಿಸುವುದು ಸುಲಭವೆ? ಅವರ ಚಟುವಟಿಕೆಗಳಿಗೆ ಮುಟ್ಟುಗೋಲು ಹಾಕುವುದು ಸಾಧ್ಯವೆ?
ಪ್ರಶ್ನೆ: ಇಂಥ ದುರಂತಗಳು ಹೆಚ್ಚುತ್ತಲೇ ಹೋದರೆ ಪಶ್ಚಿಮ ಘಟ್ಟಗಳ
ನಿವಾಸಿಗಳಿಗೆ ದಾರಿ ಏನು?
ನಾಗೇಶ ಹೆಗಡೆ: ಮುನ್ಸೂಚನೆಯ ತಂತ್ರಜ್ಞಾನ ಇನ್ನಷ್ಟು ನಿಖರವಾಗಬೇಕು. ಈಗಿನ ತಂತ್ರಜ್ಞಾನ ಇಡೀ ಜಿಲ್ಲೆಯ ನಾಳಿನ ಮಳೆಯ ಬಗ್ಗೆ ಕಣಿ ಹೇಳುತ್ತದೆ. ಅಮೆರಿಕದಲ್ಲಿ ಹೋಬಳಿ ಮಟ್ಟದಲ್ಲಿ ಮುನ್ಸೂಚನೆ ನೀಡುವ ವ್ಯವಸ್ಥೆ ಇದೆ.
ಪ್ರಶ್ನೆ: ಭಾರತ ಸರ್ಕಾರ ಬಿಸಿ ಪ್ರಳಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯಯೋಜನೆಗಳನ್ನು ಹಮ್ಮಿಕೊಂಡಿದೆ ಎಂದಿರಿ. ಏನೇನು ಕ್ರಮಗಳು?
ನಾಗೇಶ ಹೆಗಡೆ: ಈ ನಿಟ್ಟಿನಲ್ಲಿ ಎಂಟು ‘ಮಿಶನ್’ಗಳು ಕಳೆದ 12 ವರ್ಷಗಳಿಂದ ಜಾರಿಯಲ್ಲಿವೆ. ಈಚೆಗೆ ಸೂರ್ಯನ ಬಿಸಿಲಿನಿಂದ ವಿದ್ಯುತ್ ಮತ್ತು ಜಲಜನಕದ ಉತ್ಪಾದನೆ ಮಾಡುವಲ್ಲಿ ನಮ್ಮ ದೇಶ ಭಾರೀ ದೊಡ್ಡ ಹೆಜ್ಜೆ ಇಟ್ಟಿದೆ. ಆದರೆ ಅದರ ಬಹುದೊಡ್ಡ ಪಾಲನ್ನು ಅದಾನಿಯವರಿಗೆ ಗುತ್ತಿಗೆ ಕೊಟ್ಟಿದೆಯೇ ವಿನಾ, ನಮ್ಮ ಬಿಸಿಲುನಾಡಿನ ರೈತರಿಗೆ ಕೊಟ್ಟಿಲ್ಲ. ಗಿಡಮರಗಳನ್ನು ಬೆಳೆಸುವ, ನೀರಿಂಗಿಸುವ, ಪ್ರಳಯ ನಿರೋಧಕ ಕೃಷಿ ಕ್ರಮಗಳನ್ನು ಕೈಗೊಳ್ಳುವ ಮತ್ತು ಹೊಸ ತಂತ್ರಜ್ಞಾನವನ್ನು ರೂಪಿಸುವ ಉದ್ದೇಶವೇನೊ ಇದೆ. ಆದರೆ ಅದಕ್ಕೆ ಸಾಕಷ್ಟು ಅನುದಾನ ಸಿಗುತ್ತಿಲ್ಲ. ಆ ಯಾವ ಕಾರ್ಯಯೋಜನೆಗಳೂ ಗ್ರಾಮ ಪಂಚಾಯಿತಿ ಮಟ್ಟಕ್ಕೆ ತಲುಪಲೇ ಇಲ್ಲ.
ಅದಕ್ಕೆ ಬೇಕಿದ್ದ ಡಾಪ್ಲರ್ ರೆಡಾರ್‌ಗಳು ನಮ್ಮಲ್ಲಿ ತೀರಾ ಕಡಿಮೆ ಇವೆ. ಪ್ರತಿ 10-15 ಕಿಲೋಮೀಟರ್ ಅಂತರದಲ್ಲಿ ಹವಾ ಮುನ್ಸೂಚನೆ ಮತ್ತು ಭೂವೈಜ್ಞಾನಿಕ ಸ್ಥಿತಿಗತಿ ಕುರಿತ ವಿಶ್ಲೇಷಣೆ ಮಾಡುವ ತಂತ್ರಜ್ಞಾನ ನಮ್ಮಲ್ಲಿಗೂ ಬರುತ್ತದೆ, ಮೆಚ್ಚಿಕೊಳ್ಳೋಣ. ಆದರೆ ಸಂಕಷ್ಟಗಳನ್ನು ತಡೆಯುವ ವ್ಯವಸ್ಥೆ ಬರಬೇಕು. ಅದಕ್ಕೆ ಆದ್ಯತೆ ಕೊಡಬೇಕಾದ ರಾಜಕೀಯ ನಾಯಕತ್ವ ನಮಗೆ ಬೇಕು.
ಪ್ರಶ್ನೆ: ಅಭಿವೃದ್ಧಿಯ ಪರಿಕಲ್ಪನೆಯನ್ನೇ ಬದಲಿಸಲು ಸಾಧ್ಯವಿಲ್ಲವೆ?
ನಾಗೇಶ ಹೆಗಡೆ: ಇದೆ. ನಿಸರ್ಗವನ್ನು ಬಗ್ಗು ಬಡಿದು ಪ್ರಗತಿಯನ್ನು ಸಾಧಿಸುವ ಪಾಶ್ಚಾತ್ಯ ಮಾದರಿಗಳನ್ನು ಬದಿಗಿಡಬೇಕು. ನಿಸರ್ಗವನ್ನು ಪೊರೆಯುವ ಅದೆಷ್ಟು ಹೊಸ ಸಾಧ್ಯತೆಗಳು ನಮ್ಮಲ್ಲಿವೆ. ಅರ್ಧ ಕರ್ನಾಟಕವೇ ಬರಗಾಲಕ್ಕೆ ತುತ್ತಾಗುತ್ತಿದೆ. ಗಿಡಮರಗಳಿಲ್ಲದೆ ಬರಡಾಗಿದೆ. ಅಲ್ಲೆಲ್ಲ ಗಿಡಮರಗಳನ್ನು ಬೆಳೆಸುವ, ಸೌರ ವಿದ್ಯುತ್ ಉತ್ಪಾದಿಸುವ, ಕೆರೆಗಳ ಹೂಳೆತ್ತುವ, ಮಳೆನೀರನ್ನು ಇಂಗಿಸುವ, ಸಾವಯವ ಫಸಲನ್ನು ಬೆಳೆಸುವ ಮೂಲಕ ಉದ್ಯೋಗ ಸೃಷ್ಟಿಯ ಬದಲಿ ಅಭಿವೃದ್ಧಿ ಸೂತ್ರಗಳು ಜಾರಿಗೆ ಬರಬೇಕು. ಜನರು ನಗರಗಳಿಗೆ ಗುಳೆ ಹೋಗುವ ಬದಲು ಗ್ರಾಮಗಳನ್ನು ಸಮೃದ್ಧಗೊಳಿಸುವ ಕೆಲಸಗಳಿಗೆ ಆದ್ಯತೆ ಸಿಗಬೇಕು.
ಪಶ್ಚಿಮಘಟ್ಟಗಳಲ್ಲಿ ಗಣಿಗಾರಿಕೆ ಮತ್ತು ಜಲವಿದ್ಯುತ್ ಯೋಜನೆಗಳನ್ನು ಮತ್ತು ವಿಲಾಸೀ ಸವಲತ್ತುಗಳನ್ನು ಸ್ಥಗಿತಗೊಳಿಸಿ, ಅಲ್ಲಿ ಹಸಿರು ಸಂವರ್ಧನೆಗೆ ಮಾತ್ರ ಉತ್ತೇಜನ ನೀಡಬೇಕು. ಅಲ್ಲಿ ವಾಸಿಸುವ ಕೃಷಿಕರು ಮತ್ತು ಕೃಷಿ ಕಾರ್ಮಿಕರು ಇಡೀ ನಾಡಿಗೆ ಆಮ್ಲಜನಕವನ್ನು ಮತ್ತು ನೀರನ್ನು ಒದಗಿಸುವ ಕೆಲಸ ಮಾಡುವುದರಿಂದ ಅಲ್ಲಿ ನೆಲೆ ನಿಂತವರಿಗೆ ವಿಶೇಷ ಅನುದಾನ, ನಷ್ಟ ಪರಿಹಾರದ ವ್ಯವಸ್ಥೆ ಬರಬೇಕು. ಇಷ್ಟಕ್ಕೂ ಪಶ್ಚಿಮ ಘಟ್ಟಗಳೆಂದರೆ ಪ್ರಕೃತಿ ನಿರ್ಮಿತ ಜೈವಿಕ ದೇಗುಲದ ಗರ್ಭಗುಡಿ ಇದ್ದ ಹಾಗೆ. ಅದನ್ನು ರಕ್ಷಿಸಿಕೊಳ್ಳಬಲ್ಲ ಜನರಿಗಷ್ಟೇ ಅಲ್ಲಿ ಅವಕಾಶ ಇರಬೇಕೆ ವಿನಾ ಮೋಜು ಮಾಡಿ ಅದನ್ನು ಅಪವಿತ್ರಗೊಳಿಸುವ ವಿಲಾಸಿಗಳಿಗೆ ಅವಕಾಶ ಇರಕೂಡದು. ಆ ಬಗೆಯ ಸುಸ್ಥಿರ ಅಭಿವೃದ್ಧಿಯ ನೀಲನಕ್ಷೆ ನಮ್ಮಲ್ಲಿ ಸದ್ಯಕ್ಕಂತೂ ಸಿದ್ಧವಾಗುವ ಸೂಚನೆಗಳಿಲ್ಲ.
ಆದರೆ ಪ್ರಾಯಶಃ ವರ್ಷ ವರ್ಷವೂ ಇಂಥ ದುರಂತಗಳು ಹೆಚ್ಚುತ್ತ ಹೋದಾಗ ಕ್ರಮೇಣ ನಮ್ಮ ಧೋರಣೆ ಬದಲಾಗುತ್ತದೇನೊ.
(ಮುಗಿಯಿತು)
ಮೈಸೂರು: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ (ಡಿ.20) 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗಿದೆ. ಆದರೆ ಈ ಸಮ್ಮೇಳನವನ್ನು ಯಾವ…
ಮಂಡ್ಯ: ಹಾಸ್ಯ ಸಾಹಿತ್ಯ ಆಧುನಿಕ ಬದುಕಿನಗೆ ಔಷಧಿಯಾಗಿದೆ ಎಂದು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು. 87ಅಖಿಲ ಭಾರತ ಕನ್ನಡ ಸಾಹಿತ್ಯ…
ಮಡಿಕೇರಿ: ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದು, ಸಮಸ್ಯೆ ಪರಿಹಾರವಾಗಲಿ…
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪದ ಮೇಲೆ ಎಂಎಲ್ಸಿ ಸಿ.ಟಿ.ರವಿಯವರನ್ನು ಪೊಲೀಸರೇ ಕೊಲೆ…
ವಿರಾಜಪೇಟೆ: ಗೋಣಿಕೊಪ್ಪ-ಕೇರಳ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಬಳಿ ಚಿರತೆ ಬೆಕ್ಕೊಂದು ಅಪಘಾತಕೀಡಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ 9…
ಮೈಸೂರು: ನಟ ದರ್ಶನ್ ಅವರು ಮೈಸೂರಿನ ತಿ.ನರಸೀಪುರ ಮುಖ್ಯರಸ್ತೆಯಲ್ಲಿರುವ ಕೆಂಪಯ್ಯನಹುಂಡಿ ಬಳಿಯ ತಮ್ಮ ಫಾರ್ಮ್ಹೌಸ್ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶುಕ್ರವಾರ ಇಲ್ಲಿಗ…