ಟ್ರಂಪ್-ನಡೆದದ್ದೇ ದಾರಿ, ಹಿಂಬಾಲಕರಿಗೆ ಅಧಿಕಾರ

ಅಮೆರಿಕದಲ್ಲಿ ಈಗ ಡೊನಾಲ್ಡ್ ಟ್ರಂಪ್ ಗಾಳಿ ಬೀಸುತ್ತಿದೆ. ಅಧ್ಯಕ್ಷೀಯ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಟ್ರಂಪ್ ವಿಶ್ವದ ರಾಜಕೀಯ ವಲಯದಲ್ಲಿ ಕೋಲಾಹಲ ಎಬ್ಬಿಸಿದ್ದಾರೆ. ರಿಪಬ್ಲಿಕನ್ ಪಕ್ಷ ಸೆನೆಟ್‌ನಲ್ಲಿ ಬಹುಮತ ಗಳಿಸಿರುವುದರ ಜೊತೆಗೆ ಜನಪ್ರತಿನಿಧಿ ಸಭೆಯಲ್ಲಿಯೂ ಬಹುಮತಗಳಿಸುವುದು ನಿಚ್ಚಳ ವಾಗಿದೆ. ಹೀಗಾಗಿ ಟ್ರಂಪ್ ಸರ್ಕಾರಕ್ಕೆ ಯಾವುದೇ ಅಡೆ-ತಡೆಯೂ ಇಲ್ಲ. ಎಂಥ ಕಾನೂನು ರೂಪಿಸಿದರೂ, ಯಾರನ್ನೇ ಅಧಿಕಾರಕ್ಕೇರಿಸಿದರೂ ಅದಕ್ಕೆ ಒಪ್ಪಿಗೆ ಸಿಗುವುದು ಖಚಿತ. ಹೀಗಾಗಿ ಟ್ರಂಪ್ ತಮ್ಮ ನೀತಿ, ಕಾರ್ಯಕ್ರಮವನ್ನು ಜಾರಿಗೊಳಿಸಲು ಯಾವುದೇ ಅಡ್ಡಿ ಇಲ್ಲ. ಟ್ರಂಪ್ ಹೆಚ್ಚು ಸಂಖ್ಯೆಯ ಜನಪ್ರತಿನಿಧಿಗಳ ಬೆಂಬಲ ಪಡೆದು ಗೆಲುವು ಸಾಧಿಸಿದ್ದಾರಷ್ಟೇ ಅಲ್ಲ, ಅತಿ ಹೆಚ್ಚು ಮತಗಳಿಸಿ ಜನಪ್ರಿಯತೆಯಲ್ಲಿಯೂ ಮೇಲುಗೈ ಸಾಧಿಸಿದ್ದಾರೆ.

ಸರ್ಕಾರ ರಚನೆಗೆ ಬೇಕಾದ ಸಿದ್ಧತೆಯನ್ನು ಟ್ರಂಪ್ ಮಾಡಿಕೊಳ್ಳುತ್ತಿದ್ದಾರೆ. ಚುನಾವಣೆ ಪ್ರಚಾರ ಕಾಲದಲ್ಲಿ ಅವರು ಸಾರ್ವಜನಿಕರ ಮುಂದಿಟ್ಟ ವಿಷಯಗಳನ್ನು ಮತ್ತೆ ಮತ್ತೆ ಪ್ರಸ್ತಾಪಿಸುವ ಮೂಲಕ ಅವುಗಳನ್ನು ಜೀವಂತವಾಗಿ ಇರಿಸಿದ್ದಾರೆ. ಕೊಟ್ಟ ಮಾತನ್ನು ಈಡೇರಿಸುತ್ತೇನೆ ಎಂದು ಅವರು ತಮ್ಮ ಭಾಷಣಗಳಲ್ಲಿ ಪ್ರಸ್ತಾಪಿಸುತ್ತಿದ್ದಾರೆ. ಮುಖ್ಯವಾಗಿ ಅಕ್ರಮ ವಲಸೆಗೆ ಸಂಬಂಧಿಸಿದಂತೆ ಅವರ ನಿಲುವಿನಲ್ಲಿ ಯಾವುದೇ ಬದಲಾವಣೆ ಕಾಣುತ್ತಿಲ್ಲ. ಕಾನೂನು ಬದ್ದ ವಲಸೆಗೆ ಅವರ ಆಕ್ಷೇಪ ಇಲ್ಲ. ಆದರೆ ಅಕ್ರಮವಾಗಿ ಅಮೆರಿಕದಲ್ಲಿದ್ದರೆ ಅವರನ್ನು ಮುಲಾಜಿಲ್ಲದೆ ಅವರ ದೇಶಕ್ಕೆ ವಾಪಸ್ ಕಳುಹಿಸಲಾಗುವುದು ಎಂದು ಅವರು ಹೇಳುತ್ತಲೇ ಇದ್ದಾರೆ. ಕಳೆದ ವರ್ಷದ ಅಕ್ಟೋಬರ್‌ನಿಂದ ಈ ವರ್ಷದ ಸೆಪ್ಟೆಂಬರ್‌ವರೆಗೆ ಬಂಧಿಸಿ ಅಮೆರಿಕದಿಂದ ವಾಪಸ್ ಕಳುಹಿಸಲಾದ ಅಕ್ರಮ ವಲಸಿಗರ ಸಂಖ್ಯೆ ಸುಮಾರು 29 ಲಕ್ಷ. ಈ ಪೈಕಿ 90,415 ಮಂದಿ ಭಾರತೀಯರು. ಸುಮಾರು 60 ಸಾವಿರ ಮಂದಿ ಚೀನಾದವರು. ಇನ್ನು ಆಫ್ರಿಕಾ ಮತ್ತಿತರ ಬಡ ದೇಶಗಳಿಂದ ವಲಸೆ ಬರುವವರ ಸಂಖ್ಯೆಯೂ ಸಾಕ ಷ್ಟಿದೆ. ಈ ಅಂಕಿ-ಸಂಖ್ಯೆ ನೋಡಿದರೆ ಸಮಸ್ಯೆ ಎಷ್ಟು ದೊಡ್ಡದು ಎನ್ನುವುದು ಸ್ಪಷ್ಟವಾಗುತ್ತದೆ. ಕಾನೂನುಬದ್ಧವಾಗಿ ವಲಸೆ ಬರುವುದಕ್ಕೆ ಟ್ರಂಪ್ ಆಕ್ಷೇಪ ಇಲ್ಲ. ಅಕ್ರಮ ವಲಸೆಗೆ ಮಾತ್ರ ಅವರ ಆಕ್ಷೇಪ ಅಮೆರಿಕದಲ್ಲಿ ಅಮೆರಿಕದವರಿಗೆ ಆದ್ಯತೆ ನಿಯಮವನ್ನು ಟ್ರಂಪ್ ಬಿಗಿಯಾಗಿ ಜಾರಿಗೊಳಿಸುವ ಸಾಧ್ಯತೆ ಇದ್ದು, ಈ ನಿಯಮ ಭಾರತದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ. ವಿದ್ಯಾವಂತ ಯುವಕರಿಗೆ ಅನುಕೂಲವಾಗುವ ರೀತಿಯಲ್ಲಿ ನಿಯಮಗಳನ್ನು ರೂಪಿಸಿದರೆ ಮಾತ್ರ ಭಾರತಕ್ಕೆ ಅನುಕೂಲವಾಗಬಹುದು. ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಟ್ರಂಪ್ ಅವರ ನಡುವಣ ಸ್ನೇಹ ಈ ವಿಚಾರದಲ್ಲಿ ಹೇಗೆ ಕೆಲಸಮಾಡಲಿದೆ ಎಂಬುದು ಕುತೂಹಲಕಾರಿ.

ಈ ಸಮಸ್ಯೆಯ ಜೊತೆಗೆ ಟ್ರಂಪ್ ಮತ್ತೆ ಮತ್ತೆ ಪ್ರಸ್ತಾಪಿಸುತ್ತಿರುವ ವಿಷಯ ಇಸ್ರೇಲ್-ಗಾಜಾ ಯುದ್ಧಕ್ಕೆ ಸಂಬಂಧಿಸಿದ್ದು. ಇಸ್ರೇಲ್ ವಿರುದ್ಧ ದನಿ ಎತ್ತಲು ಅಮೆರಿಕದಲ್ಲಿ ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಟ್ರಂಪ್ ಘೋಷಿಸಿ ದ್ದಾರೆ. ಅದರಲ್ಲಿಯೂ ವಿಶ್ವವಿದ್ಯಾನಿಲಯಗಳು ಪ್ಯಾಲೆಸ್ಟೇನ್ ಪ್ರತಿಭಟನಾ ಕಾರರಿಗೆ ನೆಲೆ ಒದಗಿಸಿರುವುದು ಅವರ ಕೋಪಕ್ಕೆ ಕಾರಣವಾಗಿದೆ. ಪ್ರತಿಭಟನಾ ಕಾರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಪ್ರಕಟಿಸಿದ್ದಾರೆ. ಟ್ರಂಪ್ ಸಂಪೂರ್ಣವಾಗಿ ಇಸ್ರೇಲ್ ಪರ ಇರುವುದರಿಂದ ಅವರು ಗಾಜಾ ಸಮಸ್ಯೆಯನ್ನು ಪರಿಹರಿಸುವ ಬಗ್ಗೆ ಸಂಶಯ ವ್ಯಕ್ತವಾಗಿದೆ.

ಉಕ್ರೇನ್-ರಷ್ಯಾ ಯುದ್ಧ ನಿಲ್ಲಿಸುವ ವಿಚಾರದಲ್ಲಿ ನಿಖರ ಯೋಜನೆಯನ್ನು ಅವರಿನ್ನೂ ಪ್ರಕಟಿಸಿಲ್ಲ. ಎರಡೂ ದೇಶಗಳ ಮಧ್ಯೆ ಯಾರಿಗೂ ಸೇರದ ಪ್ರದೇಶ ಎಂದು ಗುರುತಿಸಿ ಯುದ್ಧ ನಿಲ್ಲಿಸಲು ಅವರು ಯೋಚಿಸುತ್ತಿರಬಹುದು ಎಂದು ಅವರ ಸಮೀಪ ವರ್ತಿಗಳು ಹೇಳುತ್ತಿದ್ದಾರೆ. ಆದರೆ ಈ ರಾಜಿಯನ್ನು ರಷ್ಯಾ ಒಪ್ಪುವ ಸಾಧ್ಯತೆ ಇಲ್ಲ.

ಚುನಾವಣೆ ಪ್ರಚಾರ ಕಾಲದಲ್ಲಿ ಇಸ್ರೇಲ್-ಗಾಜಾ ಯುದ್ಧ ಮತ್ತು ರಷ್ಯಾ-ಉಕ್ರೇನ್ ಯುದ್ಧ ಮುಖ್ಯ ಚರ್ಚೆಯ ವಿಷಯವಾಗಿದ್ದವು. ಅಧ್ಯಕ್ಷ ಬೈಡನ್ ಈ ಯುದ್ಧ ತಡೆಯುವಲ್ಲಿ ವಿಫಲವಾದ ಬಗ್ಗೆ ಜನರಲ್ಲಿ ಆಕ್ರೋಶ ಕಂಡುಬಂದಿತ್ತು. ಹೀಗೆಂದೇ ಜನರು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರನ್ನು ತಿರಸ್ಕರಿಸಿದರು. ತಾವು ಅಧಿಕಾರಕ್ಕೆ ಬಂದ 24ಗಂಟೆಗಳೊ ಳಗೆ ಈ ಯುದ್ಧ ನಿಲ್ಲಿಸುವುದಾಗಿ ಹೇಳಿದ ಟ್ರಂಪ್ ಅವರನ್ನು ಜನರು ಗೆಲ್ಲಿಸಿ ದರು. ಆದರೆ ಈಗಯುದ್ಧಗಳನ್ನು ನಿಲ್ಲಿಸುವುದು ಅಷ್ಟು ಸುಲಭಎನ್ನಿಸುವುದಿಲ್ಲ.

ಇನ್ನು ನ್ಯಾಟೋಕ್ಕೆ ಸಂಬಂಧಿಸಿದಂತೆ ಟ್ರಂಪ್ ತಮ್ಮ ಯೋಜನೆಯನ್ನು ಪ್ರಕಟಿಸಿಲ್ಲ. ನ್ಯಾಟೋ ನಿರ್ವಹಣೆಯ ವೆಚ್ಚ ಸಮನಾಗಿ ಸದಸ್ಯ ದೇಶಗಳ ನಡುವೆ ಹಂಚಿಕೆಯಾಗಬೇಕು ಎಂಬುದು ಟ್ರಂಪ್ ನಿಲುವು. ಈ ನಿಲುವಿಗೆ ಯೂರೋಪ್ ದೇಶಗಳ ಬೆಂಬಲ ಇಲ್ಲ. ಹೀಗಾಗಿ ಇದೊಂದು ದೊಡ್ಡ ವಿವಾದದ ವಿಷಯವಾಗುವ ಸಾಧ್ಯತೆ ಕಾಣುತ್ತಿದೆ. ಅಮೆರಿಕದ ಮುಂದಿನ ಅಧ್ಯಕ್ಷರಾಗಿ ಟ್ರಂಪ್ ಆಯ್ಕೆಯಾದ ನಂತರ ಯೂರೋಪ್ ಒಕ್ಕೂಟದ ನಾಯಕರು ಸಭೆ ಸೇರಿ ಪರಿಣಾಮಗಳ ಬಗ್ಗೆ ಯೋಚಿಸಿದ್ದಾರೆ. ನ್ಯಾಟೋ ಹಾಗೆಯೇ ಉಕ್ರೇನ್‌ನ ಭವಿಷ್ಯ ಕುರಿತಂತೆ ಚರ್ಚೆ ನಡೆದಿದೆ. ಆದರೆ ಯಾವುದೇ ತೀರ್ಮಾನ ಆಗಿಲ್ಲ. ಈ ಎಲ್ಲ ಪ್ರಮುಖ ವಿಷಯಗಳು ಮುಂಚೂಣಿಗೆ ಬರುವುದು ಟ್ರಂಪ್ ಅಧಿಕಾರ ವಹಿಸಿಕೊಂಡ ನಂತರವೇ (ಜನವರಿ 20).

ಟ್ರಂಪ್ ವೃತ್ತಿಪರ ರಾಜಕಾರಣಿ ಅಲ್ಲ. ಅವರೊಬ್ಬ ಉದ್ಯಮಿ. ವ್ಯಾಪಾರಗಾರ. ಅವರ ಎಲ್ಲ ನಡೆಗಳ ಹಿಂದೆ ಇರುವುದು ಲಾಭ-ನಷ್ಟಗಳ ವಿಚಾರ. ಸಹಜ ವಾಗಿಯೇ ಸಾಂಪ್ರದಾಯಿಕ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆಯನ್ನು ಬಯಸುತ್ತಾರೆ. ಟ್ರಂಪ್ ಮೂಲಭೂತವಾಗಿ ಸರ್ವಾಧಿಕಾರಿ ಮನೋಭಾವ ದವರು. ಬಲಪಂಥೀಯ ರಾಷ್ಟ್ರೀಯವಾದಿ, ‘ಅಮೆರಿಕ ಫಸ್ಟ್’ ಎಂದು ಹೇಳುವವರು. ಅವರ ಎಲ್ಲ ಆಲೋಚನೆಗಳಲ್ಲಿಯೂ ಇದೇ ನೀತಿ ಅನುಸರಿಸಲು ಬಯಸುತ್ತಾರೆ. ಸ್ವಭಾವಕ್ಕೆ ತಕ್ಕಂತೆ ಅವರು ತಮ್ಮ ಸಚಿವ ಸಂಪುಟ ರಚನೆಯ ಕಸರತ್ತು ಆರಂಭಿಸಿದ್ದಾರೆ. ತಮ್ಮ ಮಾತನ್ನು ಚಾಚೂ ತಪ್ಪದೆ ಕೇಳುವವರನ್ನು ಮತ್ತು ಹೇಳಿದಂತೆ ಮಾಡುವವರನ್ನು ತಮ್ಮ ಸಂಪುಟಕ್ಕೆ ಸೇರಿಸಿಕೊಳ್ಳಲು ಅವರು ಆರಂಭಿಸಿದ್ದಾರೆ. ಈ ಆಯ್ಕೆ ಸಾಕಷ್ಟು ವಿವಾದವನ್ನೂ ಎಬ್ಬಿಸಿದೆ. ಪಕ್ಷದ ವರಿಷ್ಠರು ಅವರ ಆಯ್ಕೆಯನ್ನು ಪ್ರಶ್ನಿಸುತ್ತಿದ್ದಾರೆ. ಏನೋ ಅವಾಂತರ ಕಾದಿದೆ ಎಂಬ ಎಚ್ಚರಿಕೆಯನ್ನೂ ಕೆಲವರು ನೀಡಿದ್ದಾರೆ. ಮೊದಲ ವಿವಾದ ಆರಂಭವಾಗಿರುವುದು ಅಟಾರ್ನಿ ಜನರಲ್ ಆಗಿ ಮ್ಯಾಟ್ ಗೆಟ್ಸ್ ಅವರ ನೇಮಕದಿಂದ ಗೆಟ್ಸ್ ಅವರ ಮೇಲೆ ಹಿಂದೆ ಅನೇಕ ಆರೋಪಗಳಿವೆ. ಅಕ್ರಮವಾಗಿ ಮಾದಕ ವಸ್ತು ಸೇವಿಸಿದ ಮತ್ತು ಉಡುಗೊರೆ ಸ್ವೀಕರಿಸಿದ ಆರೋಪ ಮೊದಲನೆಯದ್ದು. ಅಪ್ರಾಪ್ತ ಬಾಲಕಿಯ ಜೊತೆ ಲೈಂಗಿಕ ಸಂಬಂಧ ಹೊಂದಿದ ಮತ್ತು ಅದಕ್ಕಾಗಿ ಹಣ ನೀಡಿದ ಎರಡನೆಯ ಆರೋಪ ಗಂಭೀರ ವಾದುದು. (ಈಗ ಈ ಆರೋಪ ಕೈಬಿಡಲಾಗಿದೆ) ಈ ಆರೋಪಗಳಿಗೆ ಸಂಬಂಧಿಸಿದಂತೆ ಸೆನೆಟ್‌ನ ನೈತಿಕ ಸಮಿತಿ ವಿಚಾರಣೆ ನಡೆಸಿದೆ. ಈ ವಿಚಾರಣೆಯಿಂದಾಗಿ ಗೆಟ್ಸ್ ಸೆನೆಟ್‌ನ ಸದಸ್ಯತ್ವಕ್ಕೆ ರಾಜೀನಾಮೆ ಕೊಡಬೇಕಾಗಿ ಬಂದಿತ್ತು. ಇಂದು ಅಥವಾ ನಾಳೆ ರಾಜೀನಾಮೆ ಕೊಡುತ್ತಾರೆ ಎನ್ನುವಾಗ ಅವರನ್ನು ಅಟಾರ್ನಿ ಜನರಲ್ ಆಗಿ ಟ್ರಂಪ್ ನೇಮಕ ಮಾಡಿರುವುದು ಅವ ರಿಗೆ ಜೀವದಾನ ಒದಗಿಸಿದೆ. ಇಂಥ ಕೆಟ್ಟ ನಡತೆಯ ವ್ಯಕ್ತಿಗೆ ಅಟಾರ್ನಿ ಜನರಲ್ ಹುದ್ದೆ ನೀಡುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆಯನ್ನು ಸೆನೆಟ್‌ನ ಹಿರಿಯ ಸದಸ್ಯರು ಎತ್ತಿದ್ದಾರೆ.

ಪೀಟ್ ಹೆಗ್ಡೆತ್ ಒಬ್ಬ ಪತ್ರಕರ್ತ. ಫಾಕ್ಸ್ ನ್ಯೂಸ್ ಚಾನಲ್‌ನಲ್ಲಿ ಗಣ್ಯ ವ್ಯಕ್ತಿಗಳ ಸಂದರ್ಶನಕಾರ. ಕಳೆದ ಚುನಾವಣೆ ಪ್ರಚಾರ ಕಾಲದಲ್ಲಿ ಟ್ರಂಪ್ ಅವರನ್ನು ಹಲವು ಬಾರಿ ಸಂದರ್ಶಿಸಿದ ವ್ಯಕ್ತಿ. ಈ ಕಾರಣದಿಂದಾಗಿಯೇ ಟ್ರಂಪ್‌ಗೆ ಹತ್ತಿರದವರಾಗಿದ್ದರು. ಆಫ್ಘಾನಿಸ್ತಾನ ಮತ್ತು ಇರಾಕ್ ಯುದ್ಧದ ಸಂದರ್ಭದಲ್ಲಿ ಸೈನ್ಯದಲ್ಲಿ ಸೇವೆಸಲ್ಲಿಸಿದ ಅನುಭವ ಪಡೆದಿದ್ದಾರೆ ಹೆಗ್ಗೇಶ್. ಇವರನ್ನು ದೇಶದ ರಕ್ಷಣಾ ಕಾರ್ಯದರ್ಶಿಯಾಗಿ ಟ್ರಂಪ್ ನೇಮಕಮಾಡಿರುವುದು ಸೆನೆಟ್‌ನ ಹಿರಿಯ ಸದಸ್ಯರಿಗೆ ಇರಿಸು-ಮುರಿಸು ಉಂಟುಮಾಡಿದೆ.

ಡೆಮಾಕ್ರಟಿಕ್ ಪಕ್ಷ ತೊರೆದು ಕಳೆದ ವರ್ಷವಷ್ಟೇ ರಿಪಬ್ಲಿಕನ್ ಪಕ್ಷ ಸೇರಿದ್ದ ತುಳಸಿ ಗಬ್ಬರ್ಡ್ ಅವರನ್ನು ಡೈರೆಕ್ಟರ್್ರ ಆಫ್ ಇಂಟಲಿಜನ್ಸ್ ಆಗಿ ಟ್ರಂಪ್ ನೇಮಿಸಿರುವುದು ಎಲ್ಲರಲ್ಲಿ ಆಶ್ಚರ್ಯ ಹುಟ್ಟಿಸಿದೆ. ಗುಪ್ತಚರ ಸಂಸ್ಥೆಗೆ ಅಮೆರಿಕದಲ್ಲಿ ವಿಶೇಷ ಮಹತ್ವವಿದೆ. ಅಂಥ ಪ್ರತಿಷ್ಠಿತ ಸಂಸ್ಥೆಗೆ ತುಳಸಿ ಅವರನ್ನು ನೇಮಿಸಿರುವುದನ್ನು ಸೆನೆಟ್‌ ಸದಸ್ಯರು ಇನ್ನೂ ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ. ತುಳಸಿ ಭಾರತ ಮೂಲದವರೆಂಬ ಅಭಿಪ್ರಾಯ ಭಾರತದಲ್ಲಿದೆ. ತಾವು ಭಾರತ ಮೂಲದವರಲ್ಲ ಎಂದು ಅವರೇ ಹಿಂದೆ ಸ್ಪಷ್ಟ ಪಡಿಸಿದ್ದಾರೆ. ಅಮೆರಿಕದ ನಿವಾಸಿಯಾದ ತಮ್ಮ ತಾಯಿಯ ಮೇಲೆ ಹಿಂದೂ ಧರ್ಮದ ಆಚರಣೆಗಳು ಪ್ರಭಾವ ಬೀರಿದ್ದವು. ಹೀಗಾಗಿ ಮಕ್ಕಳಿಗೆ ಹಿಂದೂ ಹೆಸರಿಟ್ಟಿದ್ದಾರೆ. ಹಿಂದೂ ಧರ್ಮದಲ್ಲಿ ತಮಗೆ ನಂಬಿಕೆ ಇರುವುದು ನಿಜ ಎಂದು ಅವರು ಒಪ್ಪಿಕೊಂಡಿದ್ದಾರೆ.

ಇನ್ನು ಉದ್ಯಮಿ ವಿವೇಕ್ ರಾಮಸ್ವಾಮಿ (ಅವರ ತಂದೆ ಕೇರಳದವರು, ವಲಸೆ ಹೋಗಿ ಅಮೆರಿಕದಲ್ಲಿ ನೆಲೆಸಿದವರು) ಮತ್ತು ಟೆಸ್ಲಾ ಮಾಲೀಕ ಉದ್ಯಮಿ ಎಲನ್ ಮಾಸ್ ಅವರನ್ನು ಸರ್ಕಾರ ದಕ್ಷತೆ ಅಂದರೆ ಸರ್ಕಾರದಲ್ಲಿ ಕೆಲಸಮಾಡುವ ಸಿಬ್ಬಂದಿ ಎಷ್ಟರ ಮಟ್ಟಿಗೆ ದಕ್ಷತೆಯಿಂದ ಕೆಲಸಮಾಡುತ್ತಾರೆ, ಯಾವ ಕಾರ್ಯಕ್ರಮ ಎಷ್ಟರ ಮಟ್ಟಿಗೆ ಜಾರಿಯಾಗುತ್ತಿದೆ, ಮಾಡುತ್ತಿರುವ ವೆಚ್ಚಸರಿಯಾಗಿದೆಯೇ ಮುಂತಾದ ವಿಚಾರಗಳನ್ನು ಪರಿಶೀಲಿಸುವ ವಿಭಾಗದ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ವಾಸ್ತವವಾಗಿ ವಿವೇಕ್ ಅವರಿಗೆ ಮಸ್ಟ್ ನೆರವಾಗುತ್ತಾರೆ. ಸರ್ಕಾರದ ವೆಚ್ಚಕ್ಕೆ ಕಡಿವಾಣ ಹಾಕುವ ಸಂಬಂಧವಾದ ಸಲಹೆಗಳನ್ನು ನೀಡುವ ಜವಾಬ್ದಾರಿಯನ್ನೂ ಈ ಇಬ್ಬರಿಗೆ ನೀಡಲಾಗಿದೆ. ಈ ಇಬ್ಬರೂ ಟ್ರಂಪ್‌ಗೆ ತೀರಾ ಹತ್ತಿರವಾಗಿರುವುದು ಪಕ್ಷದ ಹಿರಿಯ ಸದಸ್ಯರಿಗೆ ಇಷ್ಟವಾಗಿಲ್ಲ. ಈ ಇಬ್ಬರೂ ತಮ್ಮ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳಲು ತಮ್ಮ ಸ್ಥಾನ ಮಾನ ಬಳಸಬಹುದು ಎಂಬ ಸಂಶಯ ವ್ಯಕ್ತಮಾಡಲಾಗಿದೆ.

ಅಧ್ಯಕ್ಷರಾಗಿ ಆಯ್ಕೆಯಾದ ಮೊದಲವಾರದಲ್ಲಿಯೇ ಟ್ರಂಪ್ ಸಾಂಪ್ರದಾಯಿಕ ಆಡಳಿತ ವ್ಯವಸ್ಥೆಯನ್ನು ಛಿದ್ರಮಾಡುವ ಮತ್ತು ತಮ್ಮ ಹಿಂಬಾಲಕರುಳ್ಳ ವ್ಯವಸ್ಥೆ ರೂಪಿಸುವ ಸೂಚನೆ ನೀಡಿದ್ದಾರೆ. ಇನ್ನೂ ಹಲವು ಪ್ರಮುಖ ನೇಮಕಾತಿಗಳು ಪ್ರಕಟವಾಗಬೇಕಿದೆ. ಮತ್ತೆ ಎಂಥ ಆಘಾತ ನೀಡುತ್ತಾರೋ ಕಾದು ನೋಡಬೇಕು.

 

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ಸಿಲಿಕಾನ್‌ ಸಿಟಿಯಲ್ಲಿ ಮೊಟ್ಟಮೊದಲ ಇಂಟರ್-ಸಿಟಿ ಫುಟ್ಬಾಲ್ ಪಂದ್ಯಾವಳಿ ಆಯೋಜನೆ

ಬೆಂಗಳೂರು: ಸೌತ್‌ ಯುನೈಟೆಡ್‌ ಫುಟ್ಬಾಲ್‌ ಕ್ಲಬ್‌ (SUFC) ವತಿಯಿಂದ ಪ್ರಥಮ ಆವೃತ್ತಿಯ ಇಂಟರ್‌-ಸಿಟಿ ಫುಟ್ಬಾಲ್‌ ಟೂರ್ನಮೆಂಟನ್ನು ಇದೇ ತಿಂಗಳ ಜ.11…

20 mins ago

ತಿರುಪತಿ ಕಾಲ್ತುಳಿತ ದುರಂತ: ಮೃತರ ಕುಟುಂಬಕ್ಕೆ 25ಲಕ್ಷ ಪರಿಹಾರ ಘೋಷಣೆ

ತಿರುಪತಿ: ತಿರುಪತಿ ದೇವಸ್ಥಾನದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟ 6 ಮಂದಿ ಭಕ್ತರ ಕುಟುಂಬಕ್ಕೆ ತಲಾ ರೂ.25 ಲಕ್ಷ ಪರಿಹಾರ…

1 hour ago

ದೇಸಿ ತಿನಿಸುಗಳ ಬೇಡಿಕೆ ಹೆಚ್ಚಸಲು ಕ್ರಮ : ಎನ್ ಚಲುವರಾಯಸ್ವಾಮಿ

ಬೆಂಗಳೂರು: ಮರೆತು ಹೋದ ಭಾರತೀಯ ಆಹಾರ ಪದ್ದತಿಗಳನ್ನು ಪುನರ್ ಪರಿಚಯಿಸಿ ದೇಸಿ ಕೃಷಿ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿಸಲು ರಾಜ್ಯ ಸರ್ಕಾರ…

1 hour ago

ಶಾಲಾ-ಕಾಲೇಜು ಬಳಿ ತಂಬಾಕು ಮಾರಾಟ ಮಾಡದಂತೆ ಎಚ್ಚರವಹಿಸಿ: ಎಡಿಸಿ ಶಿವರಾಜು ಸೂಚನೆ

ಮೈಸೂರು : ಶಾಲಾ ಕಾಲೇಜುಗಳ 100 ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಬಳಕೆ ಹಾಗೂ ಮಾರಾಟ ನಿಷೇಧ ಮಾಡಲಾಗಿದ್ದು, ಈ…

2 hours ago

ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನೆ ; ಮೂಲ ಸೌಲಭ್ಯ, ನೇಮಕಾತಿಗೆ ಸಿಎಂ ಸೂಚನೆ

ಬೆಂಗಳೂರು:  ರಾಜೀವ್‌ ಗಾಂಧಿ ವೈದ್ಯಕೀಯ ವಿವಿಯಲ್ಲಿ ಹೆಚ್ಚುವರಿಯಾಗಿ ಸಂಗ್ರಹವಾಗಿರುವ ಮೊತ್ತವನ್ನು ಸರ್ಕಾರಿ ವೈದ್ಯಕೀಯ ಕಾಲೇಜುಗಳ ಮೂಲಸೌಲಭ್ಯಗಳಿಗಾಗಿ ಒದಗಿಸಿ ಎಂದು  ಮುಖ್ಯಮಂತ್ರಿ…

2 hours ago

ಮಂಡ್ಯ :ರೆಕಾರ್ಡ್‌ ರೂಮ್‌ ಡಿಜಿಟಲೀಕರಣಕ್ಕೆ ಚಾಲನೆ

ಮಂಡ್ಯ:  ಇಲ್ಲಿನ ತಾಲ್ಲೂಕು ಕಚೇರಿಯ ರೆಕಾರ್ಡ್ ರೂಮ್, ಸರ್ವೆ ದಾಖಲೆಗಳ ಡಿಜಿಟಲೀಕರಣ ಹಾಗೂ ಭೂ ಸುರಕ್ಷಾ ಯೋಜನೆಗೆ  ಶಾಸಕ ಪಿ…

2 hours ago