ಇಡೀ ವಿಶ್ವ ಗಾಜಾ, ಲೆಬನಾನ್ ಮತ್ತು ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧದ ಬಗ್ಗೆ ಗಮನಕೊಟ್ಟಿರುವ ಈ ಸಂದರ್ಭದಲ್ಲಿ ಸಿರಿಯಾದಲ್ಲಿ ಸಶಸ್ತ್ರ ಬಂಡಾಯಗಾರರು ಪ್ರಮುಖ ನಗರಗಳಾದ ಅಲೆಪ್ಪೋ ಮತ್ತು ಹಮಾ ನಗರಗಳನ್ನು ವಶಪಡಿಸಿಕೊಂಡು ಮಧ್ಯಪ್ರಾಚ್ಯದ ಬಿಕ್ಕಟ್ಟಿಗೆ ಹೊಸ ತಿರುವು ನೀಡಿದ್ದಾರೆ.
ಈ ಅನಿರೀಕ್ಷಿತ ಬೆಳವಣಿಗೆಯಿಂದ ಆಘಾತಕ್ಕೆ ಒಳಗಾಗಿರುವ ಸಿರಿಯಾ ಅಧ್ಯಕ್ಷ ಬಷರ್ ಅಲ್ ಅಸ್ಸಾದ್, ರಷ್ಯಾ ಮತ್ತು ಇರಾನ್ ಬೆಂಬಲದೊಂದಿಗೆ ಮತ್ತೆ ಬಂಡಾಯಗಾರರನ್ನು ಹತ್ತಿಕ್ಕುವ ದಿಕ್ಕಿನಲ್ಲಿ ಸಿದ್ಧತೆ ನಡೆಸಿದ್ದಾರೆ. ಒಂದು ಕಡೆ ರಷ್ಯಾ ದೇಶ ಉಕ್ರೇನ್ ಜೊತೆಗೆ ಯುದ್ಧದಲ್ಲಿ ತೊಡಗಿದ್ದರೆ ಮತ್ತೊಂದು ಕಡೆ ಇರಾನ್ ದೇಶ ಲೆಬನಾನ್ ಮತ್ತು ಗಾಜಾದಲ್ಲಿ ಇಸ್ರೇಲ್ ದಾಳಿಯಿಂದ ತಾನು ಬೆಂಬಲಿಸುತ್ತಿದ್ದ ಹೆಜಬುಲ್ಲಾ ಮತ್ತು ಹಮಾಸ್ ಉಗ್ರಗಾಮಿಗಳ ನಿರ್ನಾಮವನ್ನು ಎದುರಿಸುತ್ತಿದೆ. ಉಕ್ರೇನ್ ಯುದ್ಧದಲ್ಲಿ ರಷ್ಯಾ ಏಕಾಂಗಿ ಯಾದಂತೆ ಗಾಜಾ ಮತ್ತು ಲೆಬನಾನ್ ಯುದ್ಧದಲ್ಲಿ ಇರಾನ್ ಒಂಟಿಯಾಗಿದೆ. ಈ ಯುದ್ಧಗಳನ್ನು ನಿಭಾಯಿಸುವುದೇ ಈ ದೇಶಗಳಿಗೆ ಕಷ್ಟ ಎನ್ನುವ ಸ್ಥಿತಿಯಲ್ಲಿ ಸಿರಿಯಾದಲ್ಲಿ ಅಸ್ಸಾದ್ ಅಧಿಕಾರಕ್ಕೆ ಕುತ್ತು ಬಂದಿದೆ. ಹಲವಾರು ದಶಕಗಳಿಂದ ಅಸ್ಸಾದ್ ಬೆಂಬಲಿಸುತ್ತ ಬಂದಿರುವ ಈ ದೇಶಗಳಿಗೆ ಈಗ ಬಂದಿರುವ ಸ್ಥಿತಿ ಸವಾಲಿನದಾಗಿದೆ. ಮಧ್ಯ ಪ್ರಾಚ್ಯದ ಬಿಕ್ಕಟ್ಟು ಗಾಜಾದಿಂದ ಆರಂಭವಾಗಿ ಲೆಬನಾನ್‌ಗೆ ವಿಸ್ತರಿಸಿ ಇನ್ನೇನು ಮುಗಿಯುವ ಹಂತಕ್ಕೆ ಬಂದಿದೆ ಎನ್ನುವಾಗ ಸಿರಿಯಾಕ್ಕೂ ವಿಸ್ತರಣೆಯಾಗಿರುವುದರಿಂದ ಪರಿಸ್ಥಿತಿ ಜಟಿಲಗೊಂಡಿದೆ. ಇಸ್ರೇಲ್ ಮತ್ತು ಲೆಬನಾನ್‌ನ ಉಗ್ರವಾದಿ ಸಂಘಟನೆ ಹೆಜಬುಲ್ಲಾ ನಡುವೆ ಕದನವಿರಾಮ ಒಪ್ಪಂದವಾದ ನಂತರದ ಎರಡೇ ದಿನಗಳಲ್ಲಿ ಸಿರಿಯಾದ ಬಂಡಾಯಗಾರರು ಪ್ರಮುಖ ನಗರಗಳನ್ನು ವಶಕ್ಕೆ ಪಡೆಯುವಲ್ಲಿ ಸಫಲವಾಗಿರುವುದು ಅನೇಕ ರೀತಿಯ ಲೆಕ್ಕಾಚಾರಗಳಿಗೆ ಆವಕಾಶ ಕಲ್ಪಿಸಿದೆ.
ಈ ಹಿಂದೆ ಅಸ್ಸಾದ್ ವಿರೋಧಿ ಬಂಡಾಯಗಾರರಲ್ಲಿ ಒಗ್ಗಟ್ಟಿರಲಿಲ್ಲ. ಈ ಬಾರಿ ಅವರಲ್ಲಿ ಒಗ್ಗಟ್ಟು ಮೂಡಿದೆ. ಅಲ್ ಖೈದಾ ಸಂಘಟನೆಯ ಬೆಂಬಲಿಗರಾಗಿದ್ದವರು ಹಯಾತ್ ತೆಹರೀರ್ ವ ಅಲ್ ಶಾಮ್ ನಾಯಕ ಅಬು ಮಹಮದ್ ಅಲ್ ಜವಲಾನಿ. ಈಗ ಅವರು ಅಲ್ ಖೈದಾ ಸಂಘಟನೆಯ ಸಂಬಂಧ ಕಡಿದುಕೊಂಡಿದ್ದು ವಿವಿಧ ಬಂಡಾಯ ಸಂಘಟನೆಗಳನ್ನು ಒಗ್ಗೂಡಿಸುವಲ್ಲಿ ಸಫಲವಾಗಿದ್ದಾರೆ. ಹೀಗಾಗಿ ಯಶಸ್ವಿ ದಾಳಿ ನಡೆಸಲು ಸಾಧ್ಯವಾಗಿದೆ. ಈ ಒಗ್ಗಟ್ಟು ಎಷ್ಟು ದಿನ ಗೊತ್ತಿಲ್ಲ. ಸಿರಿಯಾ ಅರಬ್ ರಿಪಬ್ಲಿಕ್, ಸಿರಿಯಾ ವಿರೋಧಿ ಮೈತ್ರಿಕೂಟ, ಅಲ್ ಖೈದಾ, ಇಸ್ಲಾಮಿಕ್ ಸ್ಟೇಟ್, ಕುರ್ದಿಷ್ ಸಿರಿಯಾ ಡೆಮಾಕ್ರಟಿಕ್ ಫೋರಮ್ ಮುಂತಾದ ಸಂಘಟನೆಗಳು ಈಗ ಒಂದು ವೇದಿಕೆ ರಚಿಸಿಕೊಂಡು ಅಸ್ಸಾದ್ ವಿರುದ್ಧ ಬಂಡಾಯ ಹೋರಾಟ ಆರಂಭಿಸಿವೆ. ಬಂಡಾಯಗಾರರು ನಡೆಸಿದ ಸಶಸ್ತ್ರ ದಾಳಿ ಮತ್ತು ಅಸ್ಸಾದ್ ಬೆಂಬಲಿಗ ಪಡೆಗಳು ನಡೆಸಿದ ಪ್ರತಿದಾಳಿಯಲ್ಲಿ ಕಳೆದ ಒಂದು ವಾರದಲ್ಲಿ ಸುಮಾರು ಎರಡು ಸಾವಿರ ಜನರು ಸತ್ತಿದ್ದಾರೆ. ಸುಮಾರು ಮೂರು ಲಕ್ಷ ಜನರು ನೆರೆಯ ಲೆಬನಾನ್, ಟರ್ಕಿ, ಇರಾಕ್, ಜೋರ್ಡಾನ್‌ಗೆ ವಲಸೆಹೋಗಿದ್ದಾರೆ.
ಬಂಡಾಯಗಾರರ ದಾಳಿ ನಂತರ ಅಲ್ಲಿದ್ದ ಸರ್ಕಾರಿ ಪಡೆಗಳನ್ನು ಅಸ್ಸಾದ್ ಸರ್ಕಾರ ವಾಪಸ್ ಪಡೆದಿರುವುದು ಸೋಲಿನ ಸೂಚನೆಯೋ ಅಥವಾ ಸಿದ್ಧತೆಗೆ ತೆಗೆದುಕೊಂಡಿರುವ ಕಾಲಾವಕಾಶವೋ ತಿಳಿಯುತ್ತಿಲ್ಲ. ರಷ್ಯಾ ಈಗಾಗಲೇ ಸಿರಿಯಾದಲ್ಲಿರುವ ತನ್ನ ವಾಯು ನೆಲೆಯಿಂದ ಬಂಡಾಯಗಾರರ ಮೇಲೆ ವೈಮಾನಿಕ ಬಾಂಬ್ ದಾಳಿ ನಡೆಸಿದೆ. ಇರಾನ್ ಕೂಡ ಸಿರಿಯಾದ ಬೇರೆ ಬೇರೆ ಭಾಗಗಳಲ್ಲಿದ್ದ ತನ್ನ ಬೆಂಬಲದ ಸಶಸ್ತ್ರ ಗುಂಪುಗಳನ್ನು ರಾಜಧಾನಿ ಡಮಾಸ್ಕಸ್ ಕಡೆಗೆ ಕಳುಹಿಸಿದೆ ಎನ್ನಲಾಗಿದೆ. ಹೆಜಬುಲ್ಲಾ ಕೂಡ ಅಸ್ಸಾದ್‌ಗೆ ಬೆಂಬಲ ಘೋಷಿಸಿದೆ. ಬಂಡಾಯಗಾರರನ್ನು ಶೀಘ್ರದಲ್ಲಿ ಮುಗಿಸುವ ಮಾತನ್ನು ಅಸ್ಸಾದ್ ಆಡಿದ್ದಾರೆ. ಆದರೆ ಈ ಸ್ಥಿತಿಯಲ್ಲಿ ಅದು ಸಾಧ್ಯವೇ ಎಂಬುದು ಈಗ ಚರ್ಚೆಯ ವಿಷಯವಾಗಿದೆ. ರಷ್ಯಾ ಮತ್ತು ಇರಾನ್ ಪೂರ್ಣಪ್ರಮಾಣದಲ್ಲಿ ಅಸ್ಸಾದ್‌ಗೆ ಬೆಂಬಲ ಕೊಡುವ ಸ್ಥಿತಿಯಲ್ಲಿ ಇಲ್ಲ. ಜೊತೆಗೆ ಅಸ್ಸಾದ್‌ಗೆ ಪೂರ್ಣವಾಗಿ ಮಿಲಿಟರಿ ಬೆಂಬಲ ಸಿಗುವ ಗ್ಯಾರಂಟಿಯೂ ಕಾಣುತ್ತಿಲ್ಲ. ಈ ಸ್ಥಿತಿಯಲ್ಲಿ ಅಸ್ಸಾದ್ ಪಲಾಯನ ಮಾಡಬಹುದು ಎಂಬ ವದಂತಿಗಳೂ ಹಬ್ಬಿವೆ. ಈ ಸಂದರ್ಭ ತನಗೆ ಅನುಕೂಲಕರವಾಗಿದೆ ಎಂದು ಅಮೆರಿಕ ಭಾವಿಸಿ ಪರೋಕ್ಷವಾಗಿ ಅಸ್ಸಾದ್ ವಿರುದ್ಧ ದಾಳಿಗೆ ಇಸ್ರೇಲ್‌ಗೆ ಕುಮ್ಮಕ್ಕು ನೀಡಬಹುದಾದ ಸಾಧ್ಯತೆ ಇದೆ.
ಲೆಬನಾನ್‌ನ ಹೆಜಬುಲ್ಲಾ ಉಗ್ರರ ನೆಲೆಗಳ ಮೇಲೆ ಇಸ್ರೇಲ್ ಸೇನೆ ದಾಳಿ ಆರಂಭಿಸಿದ ನಂತರ ಹೆಜಬುಲ್ಲಾ ಸಂಘಟನೆಯ ಕೆಲವು ಉಗ್ರರು ಸಿರಿಯಾದಲ್ಲಿ ನೆಲೆಸಿದ್ದಾರೆ. ಆ ನೆಲೆಗಳ ಮೇಲೆ ಈಗಾಗಲೇ ಇಸ್ರೇಲ್ ಹಲವು ಬಾರಿ ಬಾಂಬ್ ದಾಳಿ ನಡೆಸಿದೆ. ಈಗ ಸಿರಿಯಾ ಸರ್ಕಾರ ದುರ್ಬಲವಾಗಿರುವುದರಿಂದ ಇಸ್ರೇಲ್ ಸೇನೆ ಮತ್ತಷ್ಟು ಬಾಂಬ್ ದಾಳಿ ನಡೆಸಬಹುದಾದ ಸಾಧ್ಯತೆ ಇದೆ. ಅದಕ್ಕೆ ಅಮೆರಿಕ ಗುಟ್ಟಾಗಿ ಬೆಂಬಲ ನೀಡುವ ಸಾಧ್ಯತೆಯೂ ಇದೆ. ಅಷ್ಟೇ ಏಕೆ ಇರಾಕ್ ಗಡಿಯಲ್ಲಿ ಅಮೆರಿಕದ ಸೇನಾ ನೆಲೆಯೇ ಇದೆ. ಅಲ್ಲಿಂದ ಕೂಡ ಬಂಡಾಯಗಾರರಿಗೆ ಅಮೆರಿಕ ನೆರವಾಗುವ ಸಾಧ್ಯತೆ ಇದೆ. ತನ್ನ ಮಿತ್ರ ದೇಶ ಇಸ್ರೇಲ್‌ಗೆ ನೆರವಾಗುವ ದೃಷ್ಟಿಯಿಂದ ಬಂಡಾಯಗಾರರಿಗೆ ನೆರವಾಗುವ ಸಾಧ್ಯತೆ ಇದೆ. ಜೊತೆಗೆ ಸಿರಿಯಾಕ್ಕೆ ಬೆಂಬಲ ನೀಡುತ್ತಿರುವ ಇರಾನ್‌ಗೆ ಹಿನ್ನಡೆ ಉಂಟುಮಾಡುವ ಅವಕಾಶವೂ ಅಮೆರಿಕಕ್ಕೆ ಸಿಗಲಿದೆ. ಆದರೆ ಅಮೆರಿಕದ ಈ ಲೆಕ್ಕಾಚಾರ ಅಷ್ಟು ಸುಲಭವಾಗಿ ಕಾರ್ಯಗತವಾಗುವ ಸಂಭವವಿಲ್ಲ. ಏಕೆಂದರೆ ರಷ್ಯಾ ಮೊದಲಿನಿಂದಲೂ ಸಿರಿಯಾದ ಬೆಂಬಲಿಗ ದೇಶವಾಗಿದೆ. ಸಿರಿಯಾದಲ್ಲಿ ರಷ್ಯಾದ ವಾಯು ನೆಲೆಯೂ ಇದೆ. ಈಗಾಗಲೇ ಅಸ್ಸಾದ್‌ಗೆ ಬೆಂಬಲವಾಗಿ ರಷ್ಯಾ ವಾಯು ಸೇನೆ ಬಂಡಾಯಗಾರರ ನೆಲೆಗಳ ಮೇಲೆ ಬಾಂಬ್ ದಾಳಿ ನಡೆಸುತ್ತಿದೆ. ಸಿರಿಯಾ ವಿಚಾರದಲ್ಲಿ ಅಮೆರಿಕ ಯುದ್ಧದ ಕಣಕ್ಕೆ ಇಳಿದರೆ ರಷ್ಯಾ ಕೂಡ ಯುದ್ಧರಂಗಕ್ಕೆ ಇಳಿಯಬಹುದಾದ ಸಾಧ್ಯತೆ ಇದೆ. ಇಂಥ ನೇರ ಸಂಘರ್ಷಕ್ಕೆ ಕಾರಣ ವಾಗುವಂಥ ಸನ್ನಿವೇಶವನ್ನು ಆ ಎರಡೂ ದೇಶಗಳು ಸೃಷ್ಟಿಸಿಕೊಳ್ಳಲಾರವು ಎಂಬುದು ಸಿರಿಯಾ ತಜ್ಞರ ನಂಬಿಕೆ. ಹಾಗೆ ನೋಡಿದರೆ ಇರಾಕ್ ಯುದ್ಧದ ನಂತರ ಸಿರಿಯಾ ಮತ್ತು ಇರಾಕ್ ಗಡಿಯಲ್ಲಿ ಇಸ್ಲಾಮಿಕ್ ಉಗ್ರರು (ಐಎಸ್‌ಐ) ಒಂದು ದೇಶವನ್ನೇ ಘೋಷಿಸಿ ಕೊಂಡಿದ್ದರು. ಇಸ್ಲಾಮಿಕ್ ಉಗ್ರರು ವ್ಯಾಪಕವಾಗಿ ಬೆಳೆಯುತ್ತಿರುವ ಮತ್ತು ಒಂದು ದೇಶ ಘೋಷಿಸಿಕೊಂಡಿರುವ ಹಿನ್ನೆಲೆಯಲ್ಲಿ ಐಎಸ್‌ಐ ಉಗ್ರರನ್ನು ಮುಗಿಸುವ ಬಗ್ಗೆ ಅಮೆರಿಕ ಮತ್ತು ರಷ್ಯಾ ನಡುವೆ ಒಪ್ಪಂದವಾಗಿತ್ತು.
ಎರಡೂ ದೇಶಗಳು ಸತತವಾಗಿ ಬಾಂಬ್ ದಾಳಿ ನಡೆಸುವ ಮೂಲಕ ಐಸಿಸ್ ಸಂಘಟನೆಯನ್ನು ಆ ಪ್ರದೇಶದಲ್ಲಿ ನಿರ್ನಾಮ ಮಾಡಲಾಯಿತು. ಸಿರಿಯಾ ಸಮಸ್ಯೆ ನಿವಾರಣೆಗೆ ಇಂಥ ಒಂದು ಹೊಂದಾಣಿಕೆ ಸಾಧ್ಯತೆ ಇಲ್ಲದಿಲ್ಲ. ಆದರೆ ಎರಡೂ ದೇಶಗಳು ಈ ವಲಯದಲ್ಲಿ ಮೇಲುಗೈ ಸಾಽಸಲು ಸದಾ ಯೋಚಿಸುತ್ತಿರುವುದರಿಂದ ಹೊಂದಾಣಿಕೆ ಸಾಧ್ಯತೆ ಕಡಿಮೆ. ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಅಽಕಾರ ವಹಿಸಿಕೊಂಡ ನಂತರ ಮಧ್ಯಪ್ರಾಚ್ಯಕ್ಕೆ ಸಂಬಂಽಸಿದಂತೆ ಪ್ರಮುಖ ಬದಲಾವಣೆಗಳಾಗುವ ಸಾಧ್ಯತೆ ಇದೆ. ಟ್ರಂಪ್ ಅವರು ಯುದ್ಧಗಳನ್ನು ಬಯಸುವುದಿಲ್ಲ. ರಷ್ಯಾ ಅಧ್ಯಕ್ಷ ವ್ಲಾಡಮಿನ್ ಪುಟಿನ್ ಜೊತೆ ಮಾತನಾಡಿ ಸಿರಿಯಾ ಮತ್ತು ಉಕ್ರೇನ್ ಯುದ್ಧ ಮುಕ್ತಾಯಕ್ಕೆ ಒಂದು ಸೂತ್ರ ರೂಪಿಸುವ ಸಾಧ್ಯತೆ ಇದೆ. ಮಧ್ಯಪ್ರಾಚ್ಯದಲ್ಲಿ ಸಿರಿಯಾ ಬಹಳ ಪ್ರಮುಖವಾದ ದೇಶ. ಅಧ್ಯಕ್ಷ ಬಷರ್ ಅಲ್ ಅಸ್ಸಾದ್ ಶಿಯಾ ಉಪಪಂಗಡವಾದ ಅಲಾವಿ ಸಮುದಾಯಕ್ಕೆ ಸೇರಿದವರು. ದೇಶದಲ್ಲಿ ಸುನ್ನಿಗಳು ಬಹುಸಂಖ್ಯಾತರು.
ಅಲ್ಪಸಂಖ್ಯಾತ ಅಲಾವಿಗಳೆ ಬಹಳ ಕಾಲದಿಂದ ಅಧಿಕಾರದಲ್ಲಿ ಇದ್ದಾರೆ. ಶಿಯಾ ಪ್ರಾಬಲ್ಯದ ಇರಾನ್, ಇರಾಕ್, ಲೆಬನಾನ್ ಅಸ್ಸಾದ್‌ಗೆ ಬೆಂಬಲ ನೀಡುತ್ತ ಬಂದಿವೆ. ಪ್ಯಾಲೆಸ್ಟೇನ್‌ನ ಹಮಾಸ್ ಮತ್ತು ಲೆಬನಾನ್‌ನ ಹೆಜಬುಲ್ಲಾ ಉಗ್ರರು ಅಸ್ಸಾದ್ ಪರ ಇರುವುದರಿಂದ ಸಿರಿಯಾಕ್ಕೆ ಸಂಬಂಽಸಿದ ಯಾವುದೇ ಬೆಳವಣಿಗೆ ಇಸ್ರೇಲ್ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಅಮೆರಿಕ ಮೊದಲಿನಿಂದಲೂ ಅಸ್ಸಾದ್ ವಿರೋಽ ಬಣದ ನಾಯಕ ಸ್ಥಾನದಲ್ಲಿದೆ. ಹಿಂದಿನ ಸೋವಿಯತ್ ಒಕ್ಕೂಟದ ಕಾಲದಿಂದಲೂ ರಷ್ಯಾ ದೇಶ ಅಸ್ಸಾದ್‌ಗೆ ಬೆಂಬಲವಾಗಿ ನಿಂತಿದೆ. ಎರಡೂ ದೇಶಗಳ ನಡುವೆ ಗಟ್ಟಿಯಾದ ಮಿಲಿಟರಿ ಸಂಬಂಧವಿದೆ. ಇದನ್ನು ಮುರಿಯಲು ಅಮೆರಿಕ ಪ್ರಯತ್ನಿಸುತ್ತಲೇ ಇದೆ. ಮಿಲಿಟರಿ ಹಸ್ತಕ್ಷೇಪದ ಮೂಲಕ ಸಿರಿಯಾ ಸಮಸ್ಯೆನ್ನು ಬಗೆಹರಿಸುವ ಮಾರ್ಗವನ್ನು ರಷ್ಯಾ ಮತ್ತು ಚೀನಾ ವಿರೋಽಸುತ್ತಿವೆ. ಆದರೆ ಸಂಧಾನದ ಮೂಲಕ ಸಿರಿಯಾ ಸಮಸ್ಯೆ ಬಗೆಹರಿಸಲು ರಷ್ಯಾ ಸಿದ್ಧವಿದೆ. ಆದರೆ ಅಂಥ ಸನ್ನಿವೇಶವೇ ಸೃಷ್ಟಿಯಾಗುತ್ತಿಲ್ಲ. ಸಂಘರ್ಷದ ಸನ್ನಿವೇಶಗಳೇ ಸೃಷ್ಟಿಯಾಗುತ್ತ ಬಂದಿವೆ. ಅರಬ್ ವಲಯದಲ್ಲಿ ಕಂಡುಬಂದ ಸ್ವಾತಂತ್ರದ (ಅರಬ್ ಸ್ಪ್ರಿಂಗ್) ಅಲೆಯ (೨೦೧೧) ಪ್ರತಿಧ್ವನಿ ಸಿರಿಯಾದಲ್ಲಿಯೂ ಕಾಣಿಸಿಕೊಂಡಿತು. ಅಸ್ಸಾದ್ ಆಡಳಿತದ ವಿರುದ್ಧ ಹೋರಾಟ ಆರಂಭವಾಯಿತು. ಸುನ್ನಿಗಳೂ ಸೇರಿದಂತೆ ವಿರೋಽಗಳೆಲ್ಲಾ ಒಂದಾಗಿ ಹೋರಾಟ ಆರಂಭಿಸಿದರು. (ಷಿಯಾ ಮತ್ತು ಸುನ್ನಿಗಳ ನಡುವೆ ಬದ್ಧ ದ್ವೇಷ ಹಳೆಯದು) ಈ ಬಂಡಾಯಗಾರರಿಗೆ ಅರಬ್ ವಲಯದ ಸೌದಿ ಅರೇಬಿಯಾ ಸೇರಿದಂತೆ ಸುನ್ನಿ ಪ್ರಾಬಲ್ಯದ ದೇಶಗಳು ಪರೋಕ್ಷ ಬೆಂಬಲ ನೀಡುತ್ತ ಬಂದವು. ಟರ್ಕಿ, ಇರಾಕ್, ಇರಾನ್‌ನಲ್ಲಿ ನೆಲೆಸಿ ಪ್ರತ್ಯೇಕ ದೇಶದ ಕನಸು ಹೊತ್ತು ಹೋರಾಡುತ್ತಿರುವ ಖರ್ದರೂ ಸಿರಿಯಾ ಬಂಡಾಯಗಾರರಿಗೆ ಬೆಂಬಲವಾಗಿ ನಿಂತಿದ್ದಾರೆ.
ಸಿರಿಯಾ ಬಂಡಾಯಗಾರರ ಹೋರಾಟವನ್ನು ಅಸ್ಸಾದ್ ಬಂದೂಕು ಬಲದ ಮೂಲಕ ಹತ್ತಿಕ್ಕುತ್ತ ಬಂದಿದ್ದಾರೆ. ರಷ್ಯಾ ಮತ್ತು ಇರಾನ್ ಈಗ ಯುದ್ಧಾಸ್ತ್ರಗಳನ್ನು ಕೊಡುವ ಸ್ಥಿತಿಯಲ್ಲಿ ಇಲ್ಲ. ಕಳೆದ ಎರಡು ದಶಕಗಳಲ್ಲಿ ಸತ್ತವರ ಸಂಖ್ಯೆ ನಾಲ್ಕು ಲಕ್ಷಕ್ಕೂ ಹೆಚ್ಚು. ಸುಮಾರು ಎಂಟು ಲಕ್ಷ ಜನರು ನೆರೆಯ ದೇಶಗಳಿಗೆ ವಲಸೆಹೋಗಿದ್ದಾರೆ. ಈ ಯುದ್ಧ ನಿಲ್ಲಿಸುವ ಸಂಬಂಧವಾಗಿ ಹಲವು ಕದನ ವಿರಾಮ ಒಪ್ಪಂದಗಳು ಆಗಿವೆ. ಆದರೆ ಯಾವ ಒಪ್ಪಂದವೂ ಯಶಸ್ವಿಯಾಗಿಲ್ಲ. ಹೀಗಾಗಿ ಮತ್ತೆ ಮತ್ತೆ ಬಂಡಾಯ ಸಿಡಿಯುತ್ತಿದೆ. ಆರ್ಥಿಕ ನಿರ್ಬಂಧಗಳಿಗೆ ಒಳಗಾಗಿರುವ ಸಿರಿಯಾ ತೀವ್ರ ಆರ್ಥಿಕ ಸಂಕಷ್ಟದಲ್ಲಿದೆ. ಸಾಮಾನ್ಯ ಜನರನ್ನು ಈ ಸಂಕಷ್ಟದಿಂದ ಹೊರತರಲು ಇರುವ ಒಂದೇ ದಾರಿ ಅಸ್ಸಾದ್ ಪದಚ್ಯುತಿ ಎನ್ನುವುದು ಬಂಡಾಯಗಾರರ ಘೋಷಣೆಯಾಗಿದೆ.
ಕಾಡಾನೆಗಳ ಹಾವಳಿಯಿಂದಾಗಿ ಕಾಡಂಚಿನ ಜನರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಆನೆಗಳನ್ನು ಕೊಲ್ಲಲು ಅನುಮತಿ ನೀಡಬೇಕು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ…
ರಾಜ್ಯಸಭೆಯ ಕಲಾಪದ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡುವ ಭರದಲ್ಲಿ ಕೆಲವರು ಅಂಬೇಡ್ಕರ್ ಎನ್ನುವುದನ್ನು ಈಗ ಫ್ಯಾಷನ್…
ದಾ.ರಾ. ಮಹೇಶ್ ವೀರನಹೊಸಹಳ್ಳಿ: ತಾಲ್ಲೂಕಿನ ಬನ್ನಿಕುಪ್ಪೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ಅವರೆಕಾಯಿ ಮಾರಾಟದಿಂದಾಗಿ ಟ್ರಾಫಿಕ್ ಜಾಮ್ ಆಗುತ್ತಿದ್ದು, ವಾಹನಗಳ ಸಂಚಾರಕ್ಕೆ…
ಮಂಡ್ಯ: ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20,21 ಮತ್ತು 22ರಂದು ಮೂರು ದಿನಗಳ ಕಾಲ ಜರುಗಲಿರುವ ಕನ್ನಡ ನುಡಿ ಜಾತ್ರೆ…
ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…
ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…