ಸಂಪಾದಕೀಯ

ಭರವಸೆಯ ಸಿತಾರ್ ವಾದಕ ಉ.ಮೊಹಸಿನ್ ಖಾನ್

ಮೊಹಸಿನ್ ಖಾನ್‌ರವರಿಗೆ ಸಂದ ಬಸವರಾಜ ರಾಜಗುರು ರಾಷ್ಟ್ರೀಯ ಯುವ ಪುರಸ್ಕಾರ

• ಚಿತ್ರಾ ವೆಂಕಟರಾಜು

2011ರಲ್ಲಿ ರಾಷ್ಟ್ರೀಯ ಮಟ್ಟದ ಯುವಜನೋತ್ಸವ ರಾಜಸ್ತಾನದ ಉದಯಪುರದಲ್ಲಿ ನಡೆದಿತ್ತು. ಸ್ಪರ್ಧೆ ಪ್ರಾರಂಭವಾಗಿ ಸುಮಾರು 10 ರಾಜ್ಯಗಳ ಸ್ಪರ್ಧಿಗಳ ವಾದನ ಮುಗಿದ ನಂತರದ ಸ್ಪರ್ಧಿಯೇ ಕರ್ನಾಟಕದವರು. 15 ನಿಮಿಷಗಳ ಸ್ಪರ್ಧೆಗೆ ಗಡಿಯಾರವನ್ನು ನೋಡಿಕೊಂಡು ತಮ್ಮ ಸಿತಾರ್‌ನಲ್ಲಿ ಆಲಾಪ್ ನುಡಿಸಲು ಪ್ರಾರಂಭಿಸಿದರು.

ಮೊದಲನೆಯ ಸ್ವರ ಸಿತಾರ್‌ನಿಂದ ಹೊರಹೊಮ್ಮುತ್ತಿದ್ದಂತೆ ಇಡೀ ಸಭಾಂಗಣವೇ ಒಂದು ಕ್ಷಣ ನಿಶ್ಯಬ್ದವಾಯಿತು. ಅಷ್ಟು ಹೊತ್ತೂ ಎಲ್ಲರ ವಾದನವನ್ನು ತೀಕ್ಷ್ಮವಾಗಿ ಗಮನಿಸುತ್ತಾ ಕೂತಿದ್ದ ತೀರ್ಪುಗಾರರು, ತಾವು ತೀರ್ಪುಗಾರರು ಎಂಬುದನ್ನೇ ಮರೆತು ಅರೆಕ್ಷಣ ಸಿತಾರ್‌ನ ರಾಗದೊಳಗೆ ಮುಳುಗಿಹೋಗಿದ್ದರು. ಆ ಕ್ಷಣವೇ ಕರ್ನಾಟಕಕ್ಕೆ ಸಿತಾರ್ ವಾದನದಲ್ಲಿ ಬಹುಮಾನ ಸಿಗಲಿದೆ ಎಂಬುದು ಬಹುಶಃ ಎಲ್ಲರಿಗೂ ತಿಳಿದುಹೋಗಿತ್ತು. ಅಂದುಕೊಂಡ ಹಾಗೆಯೇ ರಾಷ್ಟ್ರಮಟ್ಟದಲ್ಲಿ ಪ್ರಥಮ ಬಹುಮಾನ ಪಡೆದ ಸ್ಪರ್ಧಿಯೇ ಧಾರವಾಡದ ಮೊಹಸಿನ್ ಖಾನ್, ಆಗಿನ್ನೂ ಅವರು ಉಸ್ತಾದ್ ಮೊಹಸಿನ್ ಖಾನ್ ಆಗಿರಲಿಲ್ಲ.

ಬಹುಮಾನ ಪಡೆಯುವಾಗ ಯಾವ ಉದ್ವೇಗವಿಲ್ಲದೇ ಆತ್ಮವಿಶ್ವಾಸದಿಂದ ವೇದಿಕೆ ಏರಿದ ಅವರ ವಿನಯದಲ್ಲೇ ಇವರ ಬಗ್ಗೆ ಹೆಚ್ಚು ನಿರೀಕ್ಷೆಗಳಿದ್ದವು. ಸಂಗೀತದ ಆ ಸ್ವರಗಳು, ಆ ಭಾವ ಕೇವಲ ಅಭ್ಯಾಸ ಮಾತ್ರದಿಂದ ಬಂದುದಲ್ಲ. ಅಭ್ಯಾಸದಿಂದ ಕೌಶಲ ಹೆಚ್ಚಬಹುದು ಆದರೆ ರಾಗದ ಭಾವದೊಳಗೆ ಸಭಿಕರನ್ನು ಕರೆದುಕೊಂಡು ಹೋಗುವ ಸಾಮರ್ಥ್ಯ ಕಲಾವಿದನ ಸಂವೇದನೆಯೊಂದಿಗೆ ಬಂದಿರುವುದು.

ಧಾರವಾಡ ಪ್ರಸಿದ್ಧವಾಗಿರುವುದೇ ಸಾಹಿತ್ಯ, ಸಂಗೀತಕ್ಕೆ. ಅಲ್ಲಿಯ ಸ್ಟೇಷನ್ ರೋಡಿನಲ್ಲಿ ಹೋದರೆ ‘ಖಾನ್ ಬಿಲ್ಡಿಂಗ್‌’ನ ಮುಂದೆ ರಸ್ತೆಯ ಗದ್ದಲದ ನಡುವೆ ಸ್ವಲ್ಪ ಗಮನ ಕೊಟ್ಟು ಕೇಳಿದರೆ ಎರಡು ಮೂರು ಮನೆಗಳಿಂದ ಲಾದರೂ ಸಿತಾರ್ ವಾದನದ ತರಂಗಗಳು ಒಂದು ನಿಮಿಷ ನಮ್ಮನ್ನು ನಿಲ್ಲುವಂತೆ ಮಾಡುತ್ತವೆ. ಧಾರವಾಡ ಘರಾನೆಯ ಕೆಲವು ಸಿತಾರ್ ವಾದಕರ ಮನೆಗಳು ಅಲ್ಲಿವೆ. ಅಲ್ಲೇ ಮೊಹಸಿನ್ ಖಾನ್ ಅವರು ತಮ್ಮ ವಿದ್ಯಾರ್ಥಿಗಳಿಗೆ ಸಿತಾರ್ ಕಲಿಸುತ್ತಾರೆ. ಉಸ್ತಾದ್ ಮೊಹಸಿನ್ ಖಾನ್ ಧಾರವಾಡ ಘರಾನೆಯ ಏಳನೇ ತಲೆಮಾರಿನ ಸಿತಾರ್ ವಾದಕರು.

ಸಣ್ಣ ವಯಸ್ಸಿನಲ್ಲೆ ಅಜ್ಜ ಉಸ್ತಾದ್ ಕರೀಂ ಖಾನ್ ಅವರು ಕೊಡುತ್ತಿದ್ದ ಚಾಕಲೇಟಿನ ಆಸೆಗೆ ಸಿತಾರ್‌ನ ಮೊದಲ ಪಾಠಗಳನ್ನು ಕಲಿತರು. ಅವರ ನಂತರ ತಂದೆ ಉಸ್ತಾದ್ ಹಮೀದ್ ಖಾನ್ ಅವರಲ್ಲಿ ಸಿತಾರ್ ಕಲಿಕೆಯನ್ನು ಮುಂದುವರಿಸಿದರು. ಆರು ತಲೆಮಾರಿನ ಸಿತಾರ್ ವಾದನದ ಪರಂಪರೆಯಿರುವ ಮನೆಯಲ್ಲಿ ಯಾವಾಗಲೂ ಸಂಗೀತದ ವಾತಾವರಣವೇ ಇತ್ತು. ಹಾಗಾಗಿ ಇದನ್ನು ಬಿಟ್ಟು ಬೇರೆ ಏನಾದರೂ ಮಾಡುವ ಯೋಚನೆಯೇ ಅವರಿಗೆ ಬರಲಿಲ್ಲ. ಆದರೆ ಕೇವಲ ಪರಂಪರೆ ಮತ್ತು ಹಿನ್ನೆಲೆ ಇದ್ದರೆ ಸಾಲದು.

ಸಾಕಷ್ಟು ಅಭ್ಯಾಸ ಮಾಡಿದರೆ ಮಾತ್ರ ಕಲೆ ಸಿದ್ಧಿಸುತ್ತದೆ’ ಎನ್ನುತ್ತಾರೆ ಮೊಹಸಿನ್ ಖಾನ್, ಮುಂದುವರಿದು, ‘ರಿಯಾಜ್ ಬಹಳ ಮುಖ್ಯ. ಆದರೆ ಯಾಂತ್ರಿಕವಾಗಿ ಸಾವಿರ ಸಲ ಅಭ್ಯಾಸ ಮಾಡಿದರೂ ಉಪಯೋಗ ಆಗುವುದಿಲ್ಲ ಬದಲಾಗಿ ಯಾವುದೇ ರಾಗ ಅಥವಾ ರಾಗದ ನಡೆಯನ್ನು ಯೋಚಿಸಿ, ಅರ್ಥ ಮಾಡಿಕೊಂಡು, ಅಭ್ಯಾಸ ಮಾಡಬೇಕು’ ಎನ್ನುವುದು ಅವರ ಮಾತು.

ಇವರ ಮುತ್ತಜ್ಜ ಸಿತಾರ್ ರತ್ನ ರಹಿಮತ್ ಖಾನ್ ಅವರು ‘ರಿಯಾಜ್ ಹೀ ನಮಾಜ್ ಹೈ’ (ಅಭ್ಯಾಸವೇ ಒಂದು ಪೂಜೆ) ಎನ್ನುತ್ತಿದ್ದರು. ಸಂಗೀತವೇ ದೇವರು ಎಂದು ಭಾವಿಸುತ್ತಿದ್ದರು. ತಂದೆ ಹಮೀದ್ ಖಾನ್ ಅವರ ಸಿತಾರ್ ಕಲಿಸುವ ಕೋಣೆಯಲ್ಲಿ ಶಾರದ ಮಾತೆಯ ಚಿತ್ರ ಇಟ್ಟುಕೊಂಡಿದ್ದರು. ಇಂತಹ ಮಹನೀಯರ ಪರಂಪರೆಯಲ್ಲಿ ಬಂದಿರುವ ಮೊಹಸಿನ್ ಖಾನ್ ಅವರಿಗೆ ಸಹಜವಾಗಿಯೆ ಸಂಗೀತ ಜೀವನಕ್ರಮವೇ ಆಗಿದೆ. ತಮ್ಮ ತಂದೆ ಹಮೀದ್ ಖಾನ್ ಅವರು ಜರ್ಮನಿಯ ಆಡಂ ವುಡ್ಸ್ ಅವರೊಂದಿಗೆ ಸ್ಥಾಪಿಸಿದ ‘ಕಲಕೇರಿ ಸಂಗೀತ ವಿದ್ಯಾನಿಲಯ’ ದಲ್ಲಿ ಮೊಹಸಿನ್ ಖಾನ್ ಅನೇಕ ಮಕ್ಕಳನ್ನು ಸಿತಾರ್ ವಾದನದಲ್ಲಿ ತಯಾರಿ ಮಾಡಿದ್ದಾರೆ. ತಮ್ಮ ತಂದೆ ಉ. ಹಮೀದ್ ಖಾನ್ ಅವರ ನೆನಪಿನಲ್ಲಿ ಪ್ರತಿ ವರ್ಷವೂ ಅವರ ಅನೇಕ ವಿದ್ಯಾರ್ಥಿಗಳು ‘ಸಿತಾರ್ ಮಾಧುರ್ಯ’ ಎಂಬ ಕಾರ್ಯಕ್ರಮ ಮಾಡಿ ಎಲ್ಲರೂ ಸಿತಾರ್ ನುಡಿಸುವ ಮೂಲಕ ಅವರನ್ನು ನೆನಪಿಸಿಕೊಳ್ಳುತ್ತಾರೆ. ಅದರ ಸಂಪೂರ್ಣ ಜವಾಬ್ದಾರಿಯನ್ನು ಸ್ವತಃ ಮೊಹಸಿನ್ ಖಾನ್ ಅವರೇ ವಹಿಸಿಕೊಂಡು ವಿದ್ಯಾರ್ಥಿಗಳನ್ನು ತಯಾರಿ ಮಾಡುತ್ತಾರೆ ಹಾಗೂ ಪ್ರತಿ ವರ್ಷ ಸಂಗೀತದ ಸಾಧಕರೊಬ್ಬರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಾರೆ.

ಧಾರವಾಡದಲ್ಲಿ ನೆಲೆ ನಿಂತು ಇಟಲಿ, ಫ್ರಾನ್ಸ್, ಜರ್ಮನಿ, ಜಪಾನ್, ದಕ್ಷಿಣ ಕೊರಿಯಾ ಮುಂತಾದ ಹಲವಾರು ದೇಶಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾರೆ ಮತ್ತು ವಿದೇಶಗಳಲ್ಲಿಯೂ ಶಿಷ್ಯರನ್ನು ಹೊಂದಿದ್ದಾರೆ. ‘ಕೇವಲ ವಾರಕ್ಕೊಮ್ಮೆ ಅಥವಾ ಎರಡು ಬಾರಿ ಕ್ಲಾಸ್‌ಗೆ ಬಂದು ಕಲಿತು ಹೋದರೆ ಸಂಗೀತದ ಆಳಕ್ಕೆ ಇಳಿಯುವುದು ಕಷ್ಟ. ಸತತ ಅಭ್ಯಾಸದ ಜತೆಗೆ ಸಂಗೀತದ ಗುಂಗು ಇರಬೇಕು… ಸಂಗೀತದ ವಾತಾವರಣ ಇರಬೇಕು’ ಎನ್ನುವುದು ಅವರ ಅಭಿಪ್ರಾಯ.

ಇವರು ತರಗತಿ ನಡೆಸುವ ಮನೆ ಹಲವಾರು ಕಲಾವಿದರಿಗೆ ಕಲಾಸಕ್ತರಿಗೆ ತಮ್ಮದೇ ಮನೆಯಿದ್ದಂತೆ, ಸದಾ ಮನೆಯಲ್ಲಿ ಸಂಗೀತಗಾರರು ಇರುತ್ತಾರೆ, ಸಂಗೀತದ ಅಭ್ಯಾಸಗಳು, ಚರ್ಚೆಗಳು ನಡೆಯುತ್ತಲೇ ಇರುತ್ತವೆ.

ಈಗ ಕಲಿತು ಈಗಲೇ ಜಾಲತಾಣಗಳಲ್ಲಿ ಹಾಕಿ ಅರ್ಧದಿನಗಳೊಳಗೇ ಪ್ರಸಿದ್ಧಿ ದೊರೆಯುವ ಇಂದಿನ ಕಾಲದಲ್ಲಿ 30 ವರ್ಷಗಳ ಕಾಲ ಸಂಗೀತವನ್ನೇ ಧ್ಯಾನಿಸು ತ್ತಿರುವ ಯಾವ ಆಮಿಷಗಳಿಗೂ ಬಗ್ಗದೇ ನಿರಂತರ ಅಭ್ಯಾಸ ಮಾಡುವ ಇಂಥ ಕಲಾವಿದರು ಬಹಳ ಅಪರೂಪ. ಬಹುಶಃ ಇದೇ ಕಾರಣಕ್ಕೆ ಪಂ. ರಾಜೀವ ತಾರಾನಾಥರಿಗೂ ಇವರ ವಾದನದ ಬಗ್ಗೆ ಅಪಾರ ಮೆಚ್ಚುಗೆ ಇತ್ತು.

ದೂರದರ್ಶನ ಮತ್ತು ಆಕಾಶವಾಣಿಯಲ್ಲಿ ಸಿತಾರ್ ವಾದನ ವಿಭಾಗದಲ್ಲಿ 21ನೇ ವಯಸ್ಸಿಗೆ ‘ಎ’ ಶ್ರೇಣಿಯ ಕಲಾವಿದರಾಗಿ ಹಲವಾರು ಕಾರ್ಯಕ್ರಮ ಗಳನ್ನು ನೀಡಿದ್ದಾರೆ. ಶಾಲಾ ದಿನಗಳಿಂದ ಇಲ್ಲಿನವರೆಗೆ ಹಲವಾರು ಪ್ರಶಸ್ತಿಗಳನ್ನು ಪಡೆದು, ಸ್ಪರ್ಧೆಗಳಿಗೂ ಮೀರಿ ಬೆಳೆಯುತ್ತಿದ್ದಾರೆ. ಚಿನ್ನದ ಪದಕದೊಂದಿಗೆ ಎಮ್. ಮ್ಯೂಸಿಕ್ ಪದವಿ ಪಡೆದು, ಕರ್ನಾಟಕ ವಿಶ್ವ ವಿದ್ಯಾಲಯದಿಂದ ‘ಸಂಗೀತ ಪ್ರಪಂಚಕ್ಕೆ ಧಾರವಾಡ ಘರಾನೆಯ ಕೊಡುಗೆ ಎಂಬ ವಿಷಯದಲ್ಲಿ ಸಂಶೋಧನೆ ನಡೆಸಿ ಪಿಎಚ್.ಡಿ. ಪದವಿ ಪಡೆದಿದ್ದಾರೆ.

ಸುತ್ತಲೂ ಹಲವಾರು ಆಕರ್ಷಣೆಗಳು ಅವಕಾಶಗಳು ಇದ್ದರೂ ಧಾರವಾಡದಲ್ಲಿಯೇ ನೆಲೆಸಿ ತಮ್ಮ ಪರಂಪರೆಯಲ್ಲಿಯೇ ಹಲವು ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದಾರೆ. ಇಂತಹ ಮಹಾನ್ ಸಂಗೀತ ಸಾಧಕನಿಗೆ ಈ ವರ್ಷದ ‘ಬಸವರಾಜ ರಾಜಗುರು ರಾಷ್ಟ್ರೀಯ ಯುವ ಪುರಸ್ಕಾರ ದೊರೆತಿರುವುದು ಹೆಮ್ಮೆಯ ವಿಚಾರ.

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ಮೈಸೂರು ಮೃಗಾಲಯದಲ್ಲಿ 9 ಮಂದಿ ಮಾತ್ರ ಖಾಯಂ ನೌಕರರಿದ್ದಾರೆ: ಸಚಿವ ಈಶ್ವರ್‌ ಖಂಡ್ರೆ

ಬೆಳಗಾವಿ: ಮೈಸೂರು ನಗರದಲ್ಲಿರುವ ಚಾಮರಾಜೇಂದ್ರ ಮೃಗಾಲಯದಲ್ಲಿ 356 ನೌಕರರು ಕಾರ್ಯ ನಿರ್ವಹಿಸುತ್ತಿದ್ದು, ಕೇವಲ 9 ಮಂದಿ ಮಾತ್ರ ಖಾಯಂ ನೌಕರರಾಗಿದ್ದಾರೆ…

1 hour ago

ವಿಪಕ್ಷಗಳ ವಿರೋಧದ ಮಧ್ಯೆ ವಿಧಾನಸಭೆಯಲ್ಲಿ ದ್ವೇಷ ಭಾಷಣ ಮಸೂದೆ ಅಂಗೀಕಾರ

ಬೆಂಗಳೂರು: ವಿಧಾನಸಭೆಯಲ್ಲಿ ವಿಪಕ್ಷಗಳ ತೀವ್ರ ವಿರೋಧ ಹಾಗೂ ಗದ್ದಲದ ಮಧ್ಯೆ ಕರ್ನಾಟಕ ದ್ವೇಷಭಾಷಣ ಹಾಗೂ ದ್ವೇಷಾಪರಾಧಗಳ ಪ್ರತಿಬಂಧನ ಮಸೂದೆ 2025ನ್ನು…

1 hour ago

ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ಧ: ಸಚಿವ ಕೃಷ್ಣಭೈರೇಗೌಡ

ಬೆಳಗಾವಿ: ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವ್ಯಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ…

1 hour ago

ಸಾರಿಗೆ ಸಿಬ್ಬಂದಿ ವೇತನ ಪರಿಷ್ಕರಣೆ ವಿಚಾರ: ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಿಷ್ಟು.!

ಬೆಳಗಾವಿ: ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿ ಸಾರಿಗೆ ಸಿಬ್ಬಂದಿ ವೇತನ ಪರಿಷ್ಕರಣೆ ಬಗ್ಗೆ ಪ್ರಸ್ತಾಪವಾಗಿದೆ. ಈ ಬಗ್ಗೆ ಸಾರಿಗೆ ಸಚಿವ…

2 hours ago

ಲೋಕಸಭೆಯಲ್ಲಿ ವಿ-ಬಿಜಿ ರಾಮ್‌ ಜಿ ಮಸೂದೆ ಅಂಗೀಕಾರ

ನವದೆಹಲಿ: ಲೋಕಸಭೆಯಲ್ಲಿ ವಿ-ಬಿಜಿ ರಾಮ್‌ ಜಿ ಮಸೂದೆ ಅಂಗೀಕಾರಗೊಂಡಿದೆ. ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಇಂದು ಲೋಕಸಭೆಯು ರೋಜ್‌ಗಾರ್‌ ಮತ್ತು ಅಜೀವಿಕಾ…

2 hours ago

ಕಳೆದ 3 ವರ್ಷಗಳಲ್ಲಿ 88 ಪೊಲೀಸರು ಅಪರಾಧ ಕೃತ್ಯಗಳಲ್ಲಿ ಭಾಗಿ: ಸಚಿವ ಪರಮೇಶ್ವರ್‌

ಬೆಳಗಾವಿ: ರಾಜ್ಯದಲ್ಲಿ ಪೊಲೀಸ್‌ ಸಿಬ್ಬಂದಿಗಳೇ ದರೋಡೆ, ಕಳ್ಳತನ ಸೇರಿದಂತೆ ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು, ಬೇಲಿಯೇ ಎದ್ದು…

2 hours ago