ಸಂಪಾದಕೀಯ

ನಿಜ್ಜರ್ ಹತ್ಯೆ ಪ್ರತಿಧ್ವನಿ-ಕೆನಡಾ ಭಾರತೀಯರಲ್ಲಿ ಆತಂಕ

ಅಮಿತ್ ಶಾ, ಅಜಿತ್‌ ದೋವಲ್ ಮೇಲೆಯೂ ಆರೋಪ

ಡಿ.ವಿ.ರಾಜಶೇಖರ

ಖಾಲಿಸ್ತಾನ್ ಉಗ್ರವಾದಿ ನಾಯಕ ಹರದೀಪ್‌ ಸಿಂಗ್ ನಿಜ್ಜರ್ ಹತ್ಯೆಯ ನಂತರದ ಬೆಳವಣಿಗೆಗಳು ಭಾರತ ಮತ್ತು ಕೆನಡಾದ ಬಾಂಧವ್ಯ ಹದಗೆಡಲು ಕಾರಣವಾಗಿವೆ. ನಿಜ್ಜರ್ ಹತ್ಯೆಯ ಹಿಂದೆ ಕೆನಡಾದಲ್ಲಿನ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು ಇರುವ ಬಗ್ಗೆ ನಿಖರ ಮಾಹಿತಿಯನ್ನು ಗುಪ್ತಚರ ಇಲಾಖೆ ನೀಡಿದೆ ಎಂದು ಪ್ರಧಾನಿ ಜಸ್ಟಿನ್ ಟೂಡೊ ಒಂದು ವರ್ಷದ ಹಿಂದೆ ಪಾರ್ಲಿಮೆಂಟಿನಲ್ಲಿ ಮಾಡಿದ ತಮ್ಮ ಆರೋಪವನ್ನು ಪುನರುಚ್ಚರಿಸಿದ್ದಾರೆ.

ಖಾಲಿಸ್ತಾನ್ ನಾಯಕ ನಿಜ್ಜರ್ ಮತ್ತಿತರ ಉಗ್ರವಾದಿಗಳ ಹತ್ಯೆಗೆ ಭಾರತದ ಗೃಹಸಚಿವ ಅಮಿತ್ ಶಾ ಮತ್ತು ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಒಪ್ಪಿಗೆ ಇತ್ತು ಎಂಬುದನ್ನು ಸಾಬೀತುಪಡಿಸುವ ಅಧಿಕಾರಿಗಳ ನಡುವಣ ಸಂಭಾಷಣೆಯನ್ನು ಕೆನಡಾ ಗುಪ್ತಚರ ಇಲಾಖೆ ಇತ್ತೀಚೆಗೆ ಭಾರತಕ್ಕೆ ನೀಡಿದೆ ಎಂದು ವಾಷಿಂಗ್ಟನ್ ಪೋಸ್ಟ್ ಪತ್ರಿಕೆ ವರದಿ ಮಾಡಿದೆ. ಈ ಮಾಹಿತಿ ಹಿನ್ನೆಲೆಯಲ್ಲಿ ಟೂಡೊ ಮಾಡಿರುವ ಆರೋಪ ಗಂಭೀರ ಪರಿಣಾಮಗಳಿಗೆ ಕಾರಣವಾಗಿದೆ.

ಟ್ರುಡೊ ಹೇಳಿಕೆಯ ಬೆನ್ನಲ್ಲೇ ನಿಜ್ಜ‌ ಹತ್ಯೆಗೆ ಸಂಬಂಧಿಸಿದಂತೆ ನಾಲ್ವರು ಭಾರತೀಯರನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿರುವುದಾಗಿ ರಾಯಲ್ ಮೌಂಟೆಡ್ ಪೊಲೀಸ್ ಪ್ರಕಟಿಸಿದೆ. ಬೆದರಿಕೆ, ಸುಲಿಗೆ ಮತ್ತು ಕೊಲೆ ಆರೋಪವನ್ನು ಈ ನಾಲ್ವರ ಮೇಲೆ ಹೊರಿಸಲಾಗಿದೆ. ಕೆನಡಾದಲ್ಲಿನ ಭಾರತೀಯ ರಾಯಭಾರ ಕಚೇರಿಯ ಹೈಕಮಿಷನರ್ ಮತ್ತು ಇತರ ಆರು ಮಂದಿ ಈ ಎಲ್ಲ ಕ್ರಿಮಿನಲ್ ಚಟುವಟಿಕೆಯ ಹಿಂದೆ ಇರುವ ಸಂಶಯ ಇದೆ ಎಂದು ಪೊಲೀಸ್ ಕಮಿಷನರ್‌ ಆರೋಪಿಸಿದ್ದಾರೆ. ಈ ಎಲ್ಲರನ್ನೂ ವಿಚಾರಣೆಗೆ ಒಳಪಡಿಸಬೇಕಾಗಿರುವುದರಿಂದ ಅವರಿಗಿರುವ ರಕ್ಷಣೆಯನ್ನು ರದ್ದು ಮಾಡಬೇಕೆಂದು ಪೊಲೀಸರು ಭಾರತವನ್ನು ಕೋರಿದ್ದಾರೆ. ಆದರೆ ಭಾರತ ಇದನ್ನು ನಿರಾಕರಿಸಿದೆ. ಈ ಸುದ್ದಿ ಬಹಿರಂಗವಾಗುತ್ತಿದ್ದಂತೆ ಈ ವಿವಾದ ತೀವ್ರಗೊಂಡಿದೆ.

ಕೆನಡಾದಲ್ಲಿನ ಭಾರತೀಯ ರಾಯಭಾರ ಕಚೇರಿಯ ಹೈಕಮಿಷನರ್ ಸೇರಿದಂತೆ ಆರು ಮಂದಿ ಅಧಿಕಾರಿಗಳನ್ನು ದೇಶಬಿಟ್ಟು ಹೋಗುವಂತೆ ಸರ್ಕಾರ ಸೂಚಿಸಿದ ಬೆನ್ನಲ್ಲೇ ಭಾರತ ಕೂಡ ಕೆನಡಾ ರಾಯಭಾರ ಕಚೇರಿಯ ಹೈಕಮಿಷನರ್ ಸೇರಿದಂತೆ ಆರು ಮಂದಿ ಅಧಿಕಾರಿಗಳನ್ನು ಶನಿವಾರದೊಳಗೆ ದೇಶಬಿಟ್ಟು ಹೋಗುವಂತೆ ಸೂಚಿಸಿದೆ. ಪಾಕಿಸ್ತಾನದ ಜೊತೆ ಬಾಂಧವ್ಯ ಹದಗೆಟ್ಟಾಗ ಭಾರತ ಇಂಥ ಕ್ರಮ ತೆಗೆದುಕೊಂಡದ್ದು ಬಿಟ್ಟರೆ ಬೇರೆ ಯಾವುದೇ ದೇಶದ ವಿಚಾರದಲ್ಲಿ ಹೀಗೆ ನಡೆದುಕೊಂಡಿದ್ದಿಲ್ಲ. ಕೇವಲ ಒಂದು ವರ್ಷದ ಹಿಂದೆ ಕೆನಡಾ ಮತ್ತು ಭಾರತದ ಬಾಂಧವ್ಯ ಅತ್ಯಂತ ನಿಕಟವಾಗಿತ್ತು. ಅದು ಈಗ ತೀವ್ರ ಕೆಳಮಟ್ಟಕ್ಕೆ ಕುಸಿದಿದೆ.

ಕೆನಡಾದಲ್ಲಿ ಸುಮಾರು 20 ಲಕ್ಷ ಮಂದಿ ಭಾರತೀಯರು ವಾಸವಾಗಿದ್ದು, ಈ ಬೆಳವಣಿಗೆಯಿಂದಾಗಿ ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ. ಅದರಲ್ಲಿಯೂ ಉನ್ನತ ವ್ಯಾಸಂಗ ಮಾಡುತ್ತಿರುವ ಸುಮಾರು ಐದು ಲಕ್ಷ ಮಂದಿ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ಅರೆಕಾಲಿಕ ಉದ್ಯೋಗ ಮಾಡಿಕೊಂಡು ಉನ್ನತ ವ್ಯಾಸಂಗ ಮಾಡುವವರ ಸಂಖ್ಯೆ ಹೆಚ್ಚು. ಆದರೆ ಈಗ ಕೆಲಸಗಳು ಸಿಗುತ್ತಿಲ್ಲ. ವಾಸಿಸಲು ಜಾಗ ಸಿಗುತ್ತಿಲ್ಲ. ಹೀಗಾಗಿ ಈಗಾಗಲೇ ಬಿಕ್ಕಟ್ಟು ಎದುರಿಸುತ್ತಿರುವ ವಿದ್ಯಾರ್ಥಿಗಳು ಗೊಂದಲದಲ್ಲಿದ್ದಾರೆ. ಸಾಮಾನ್ಯವಾಗಿ ಉನ್ನತ ವ್ಯಾಸಂಗ ಮುಗಿಸುತ್ತಿದ್ದಂತೆಯೇ ಉತ್ತಮ ವೇತನವಿರುವ ಕೆಲಸ ಅಲ್ಲಿ ಸಿಗುತ್ತಿತ್ತು. ಆದರೆ ಕೆನಡಾದಲ್ಲಿ ಈಗ ಮನೆಗಳ ಅಭಾವ. ಜೊತೆಗೆ ಉದ್ಯೋಗಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಹೀಗಾಗಿ ಹಲವು ರಾಜ್ಯಗಳು ಬಿಗಿಯಾದ ವಲಸೆ ನೀತಿ ಜಾರಿಗೆ ತಂದಿವೆ. ವ್ಯಾಸಂಗ ಮುಗಿಸಿ ಸ್ವದೇಶಕ್ಕೆ ವಾಪಸಾಗಬೇಕಾದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರತೀಯ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ವ್ಯಾಸಂಗ ವಿಸಾ ಸಂಖ್ಯೆಯನ್ನು ಈ ವರ್ಷ ಕಡಿಮೆ ಮಾಡಲಾಗಿದೆ. ಉಭಯ ದೇಶಗಳ ನಡುವಣ ಬಾಂಧವ್ಯ ಕೆಟ್ಟಿರುವುದು ಈ ಸಮಸ್ಯೆ ಬಿಗಡಾಯಿಸಲು ಕಾರಣವಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಕೆನಡಾದಲ್ಲಿ ತಮ್ಮ ಮಕ್ಕಳನ್ನು ಓದಿಸಬೇಕೆಂಬ ಆಸೆ ಇಟ್ಟುಕೊಂಡಿರುವ ಭಾರತೀಯ ಪೋಷಕರೂ ನಿರಾಶರಾಗಿದ್ದಾರೆ.

ಇದು ಸಮಸ್ಯೆಯ ಒಂದು ಮುಖ ಅಷ್ಟೆ. ಉಭಯ ದೇಶಗಳ ಬಾಂಧವ್ಯ ಕೆಟ್ಟರೆ ಅದು ಸಹಜವಾಗಿಯೇ ವಾಣಿಜ್ಯ ಕ್ಷೇತ್ರದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಆಮದು-ರಫ್ತು ವಹಿವಾಟು ಒತ್ತಡಕ್ಕೆ ಒಳಗಾಗಲಿದೆ. ಕೆಲವೇ ವರ್ಷಗಳ ಹಿಂದೆ ಎರಡೂ ದೇಶಗಳ ನಡುವೆ ಮುಕ್ತ ವಾಣಿಜ್ಯ ವಹಿವಾಟು ನಡೆಸಲು ಸಾಧ್ಯವಾಗುವಂತೆ ಒಪ್ಪಂದ ಮಾಡಿಕೊಳ್ಳುವ ತಯಾರಿ ನಡೆದಿತ್ತು. ಆದರೆ ಈಗ ನಿರ್ಬಂಧಗಳ ಬಗ್ಗೆ ಮಾತನಾಡುವಂಥ ಸ್ಥಿತಿ ಬಂದಿರುವುದು ದುರಂತ. ತನಿಖೆಗೆ ಭಾರತ ಸಹಕರಿಸದಿದ್ದರೆ ನಿರ್ಬಂಧಗಳನ್ನು ಹೇರುವ ಬಗ್ಗೆ ಚಿಂತಿಸಲಾಗುವುದು ಎಂದು ಕೆನಡಾ ವಿದೇಶಾಂಗ ಸಚಿವರು ಹೇಳಿರುವುದು ಆಘಾತಕಾರಿ ಬೆಳವಣಿಗೆ, ಹಾಗೆ ನೋಡಿದರೆ ವಾಣಿಜ್ಯ ನಿರ್ಬಂಧಗಳಿಂದ ಕೆನಡಾಕ್ಕೇ ಹೆಚ್ಚು ನಷ್ಟ ಎನ್ನುವುದನ್ನು ಬಹುಶಃ ಕೆನಡಾದ ವಿದೇಶಾಂಗ ಮಂತ್ರಿ ತಿಳಿದಿರಲಾರರು. ಇದೇನೇ ಇದ್ದರೂ ಎರಡೂ ದೇಶಗಳ ನಡುವೆ ಆರೋಪ-ಪ್ರತ್ಯಾರೋಪ ಒಂದೇ ಸಮನೆ ನಡೆಯುತ್ತಿದೆ.

ಭಾರತ ಮೊದಲಿನಿಂದಲೂ ಕೆನಡಾ ಪ್ರಧಾನಿ ಟ್ರೊಡೊ ಅವರ ಆರೋಪಗಳನ್ನು ನಿರಾಕರಿಸುತ್ತ ಬಂದಿದೆ. ಖಾಲಿಸ್ತಾನ್ ಉಗ್ರವಾದಿ ನಾಯಕ ನಿಜ್ಜರ್ ಹತ್ಯೆಯ ಹಿಂದೆ ಭಾರತ ರಾಯಭಾರ ಕಚೇರಿಯ ಅಧಿಕಾರಿಗಳು ಇದ್ದಾರೆ ಎನ್ನುವುದಾದರೆ ಅದಕ್ಕೆ ಸಾಕ್ಷ್ಯ ಒದಗಿಸಿ ಎಂದು ಭಾರತ ಒತ್ತಾಯಿ ಸುತ್ತ ಬಂದಿದೆ. ಆದರೆ ಸಾಕ್ಷ್ಯ ಒದಗಿಸಲು ಟ್ಯೂಡೊ ವಿಫಲರಾಗಿದ್ದಾರೆ. ಖಚಿತ ಸಾಕ್ಷಾಧಾರಗಳು ಇಲ್ಲ. ಆದರೆ ಗುಪ್ತಚರ ಇಲಾಖೆ ಮಾಹಿತಿ ಇದೆ ಎಂದು ಟ್ರೊಡೊ ಹೇಳುತ್ತಿದ್ದಾರೆ. ಗುಪ್ತಚರ ಇಲಾಖೆ ಮಾಹಿತಿ ಆಧರಿಸಿ ಆರೋಪಿಸಿರುವುದು ಘೋರ ತಪ್ಪು ಎಂದು ಭಾರತ ಹೇಳುತ್ತಿದೆ. ತನಿಖೆಗೆ ಸಹಕರಿಸಿದರೆ ನಿಖರ ಮಾಹಿತಿ ಬಹಿರಂಗವಾಗುತ್ತದೆ ಎನ್ನುವುದು ಕೆನಡಾ ವಾದ. ಆದರೆ ನಿಖರ ಸಾಕ್ಷ್ಯಾಧಾರವಿಲ್ಲದೆ ತನಿಖೆ ಏಕೆ ಮಾಡಬೇಕು ಎನ್ನುವುದು ಭಾರತದ ವಿದೇಶಾಂಗ ಸಚಿವರ ವಾದ.

ಈ ವಿವಾದ ಕುರಿತಂತೆ ಎರಡೂ ದೇಶಗಳ ಅಧಿಕಾರಿಗಳ ಮಟ್ಟದ ಸಭೆ ಇತ್ತೀಚೆಗೆ ಸಿಂಗಪುರದಲ್ಲಿ ನಡೆಯಿತು. ಅಲ್ಲಿ ಕೂಡ ಕೆನಡಾ ಅಧಿಕಾರಿಗಳು ಜಾಗೃತದಳದ ಮಾಹಿತಿಯನ್ನು ಬಹಿರಂಗ ಮಾಡಿದರೇ ಹೊರತು ಯಾವುದೇ ಸಾಕ್ಷಾಧಾರ ಒದಗಿಸಲಿಲ್ಲ ಎಂದು ಭಾರತ ಹೇಳುತ್ತಿದೆ. ಇದೇ ಸಭೆಯಲ್ಲಿ ಕೆನಡಾದ ರಹಸ್ಯದಳದ ಅಧಿಕಾರಿಗಳು ಅಮಿತ್ ಶಾ ಮತ್ತು ಅಜಿತ್ ದೋವಲ್ ಅವರ ಜೊತೆಗಿನ ಅಧಿಕಾರಿಗಳ ಸಂಭಾಷಣೆಯ ತುಣಕನ್ನು ಬಹಿರಂಗ ಮಾಡಿದರೆನ್ನಲಾಗಿದೆ.

ನಿಜ್ಜರ್ ಹತ್ಯೆಯ ಹಿಂದೆ ಪಂಜಾಬ್‌ನ ಕುಖ್ಯಾತ ಲಾರೆನ್ಸ್ ಬಿಷ್ಟೊಯ್ ಹಂತಕರ ಗುಂಪು ಇದೆ ಎಂದು ಇದೀಗ ಕೆನಡಾ ಪೊಲೀಸರು ಹೇಳುತ್ತಿದ್ದಾರೆ. ಸದ್ಯ ಲಾರೆನ್ಸ್ ಬಿಪ್ಲೊಯ್ ಗುಜರಾತ್‌ನ ಸಾಬರಮತಿ ಜೈಲಿನಲ್ಲಿದ್ದಾನೆ. ಆದರೆ ಅವನ ಗುಂಪು ಕೆನಡಾದಲ್ಲಿ ಸಕ್ರಿಯವಾಗಿದ್ದು, ಭಾರತದ ಅಧಿಕಾರಿಗಳು ಅವರ ನೆರವು ಪಡೆದಿದ್ದಾರೆ ಎಂದು ಪರೋಕ್ಷವಾಗಿ ಮಾಡುತ್ತಿದ್ದಾರೆ. ವಿಚಿತ್ರ ಎಂದರೆ ಲಾರೆನ್ಸ್ ಬಿಷ್ಟೊಯ್ ಗುಂಪಿನವರನ್ನು ಬಂಧಿಸಿ ತನಗೆ ಒಪ್ಪಿಸಬೇಕೆಂದು ಭಾರತ ಕಳೆದ ಹತ್ತು ವರ್ಷಗಳಿಂದಲೂ ಕೆನಡಾ ಸರ್ಕಾರಕ್ಕೆ ಮನವಿ ಮಾಡುತ್ತ ಬಂದಿದೆ. ಕೆನಡಾ ಆ ಬಗ್ಗೆ ಕಿಂಚಿತ್ತೂ ಗಮನಕೊಡದೆ ಇದೀಗ ಆ ಗುಂಪಿನ ಹೆಸರು ಪ್ರಸ್ತಾಪಿಸುತ್ತಿರುವುದು ವಿಚಿತ್ರ ಎಂದು ಭಾರತದ ವಿದೇಶಾಂಗ ಇಲಾಖೆ ಆಶ್ಚರ್ಯ ವ್ಯಕ್ತಪಡಿಸಿದೆ.

ಟ್ರುಡೊ ಮಾಡುತ್ತಿರುವ ಆರೋಪಗಳಿಗೆ ರಾಜಕೀಯ ಹಿನ್ನೆಲೆಯಿದೆ ಎಂದು ಭಾರತ ಹೇಳುತ್ತಿದೆ. ಮತ ರಾಜಕೀಯ ಈ ಆರೋಪಕ್ಕೆ ಕಾರಣ. ಟೂಡೊ ಪಕ್ಷಕ್ಕೆ ಪಾರ್ಲಿಮೆಂಟಿನಲ್ಲಿ ಬಹುಮತವಿಲ್ಲ. ಸಿಖರ ಪಕ್ಷದ ಬೆಂಬಲ ಪಡೆದು ಟೂಡೊ ಸರ್ಕಾರ ರಚಿಸಿದ್ದಾರೆ. ಮೊದಲಿನಿಂದಲೂ ಇದೇ ಪರಿಸ್ಥಿತಿ. ಇದೇ ಕಾರಣದಿಂದ ಟೂಡೊ ಸಿಬ್ಬರ ಜೊತೆ ಸ್ನೇಹದಿಂದಿದ್ದಾರೆ. ಕೆನಡಾದಲ್ಲಿ ಸುಮಾರು ಎಂಟು ಲಕ್ಷ ಸಿರಿದ್ದು ಅವರಲ್ಲಿ ಎಲ್ಲರೂ ಖಾಲಿಸ್ತಾನ್ ವಾದಿಗಳಲ್ಲ. ಆದರೆ ಖಾಲಿಸ್ತಾನ್ ಪರವಾದ ಒಂದು ಪ್ರಬಲ ಗುಂಪು ಟೂಡೂ ಅವರನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ. ಹೀಗಾಗಿ ಟೂಡೊ ಖಾಲಿಸ್ತಾನಿಗಳ ಪರವಾಗಿದ್ದಾರೆ. ತಾವು ವಾಕ್ ಸ್ವಾತಂತ್ರ್ಯದ ಪರ ಮತ್ತು ದೇಶದ ನೀತಿಯೂ ಅದೇ ಆಗಿದೆ, ಆದ್ದರಿಂದ ಖಾಲಿಸ್ತಾನಿ ಸಿಬ್ಬರ ಪರ ಇರುವುದಾಗಿ ಟ್ಯೂಡೊ ವಾದ ಮಾಡುತ್ತಾರೆ. ವಾಕ್ ಸ್ವಾತಂತ್ರ್ಯದ ಹೆಸರಿನಲ್ಲಿ ಪ್ರತ್ಯೇಕತಾವಾದವನ್ನು ಬೆಂಬಲಿಸುವುದು ತಪ್ಪು ಎನ್ನುವುದು ಅವರಿಗೆ ಮನವರಿಕೆಯಾಗಿಲ್ಲ. ರಾಜಕೀಯ ಕಾರಣಗಳಿಗಾಗಿ ಅವರು ನೀಡುತ್ತಿರುವ ಸಬೂಬು ಅದು ಎಂದು ಭಾರತ ಹೇಳುತ್ತಿರುವುದರಲ್ಲಿ ಅರ್ಥವಿದೆ.

ಕೆನಡಾ ಮತ್ತು ಭಾರತದ ನಡುವಣ ಬಿಕ್ಕಟ್ಟು ಈಗ ಜಾಗತಿಕ ಸ್ವರೂಪ ಪಡೆದುಕೊಳ್ಳುತ್ತಿದೆ. ತನಿಖೆಗೆ ಭಾರತ ಸಹಕರಿಸಬೇಕು ಎಂಬ ಕೆನಡಾ ವಾದವನ್ನು ಅಮೆರಿಕ, ಬ್ರಿಟನ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಬೆಂಬಲಿಸಿವೆ. ಅಮೆರಿಕವಂತೂ ಭಾರತಕ್ಕೆ ಸಂಬಂಧಿಸಿದ ಪ್ರಕರಣವನ್ನು ಉದಾಹರಿಸಿದೆ. ಖಾಲಿಸ್ತಾನ್ ಬೆಂಬಲಿಗ ಮತ್ತು ಅಮೆರಿಕದ ಸಿಖರ ಸಂಘಟನೆಯ ನಾಯಕ ಗುರುಪತ್ವಂತ್ ಸಿಂಗ್ ಪನ್ನುನ್ ಅವರನ್ನು ಹತ್ಯೆ ಮಾಡುವ ಸಂಚೊಂದನ್ನು ಅಮೆರಿಕ ಗುಪ್ತಚರ ಇಲಾಖೆ ಕಳೆದ ವರ್ಷ ನಿಷ್ಪಲಗೊಳಿಸಿತು. ಈ ಸಂಚಿನ ಹಿಂದೆ ಭಾರತ ರಾಯಭಾರ ಕಚೇರಿಯ ಅಧಿಕಾರಿಯೊಬ್ಬರು ಇದ್ದಾರೆ ಎಂದು ಆರೋಪಿಸಲಾಯಿತು. ಜಕ್ ದೇಶದಲ್ಲಿದ್ದ ನಿಖಿಲ್ ಗುಪ್ತಾ ಅವರ ವಿರುದ್ಧ ಮೊಕದ್ದಮೆ ದಾಖಲು ಮಾಡಲಾಯಿತು. ಜಕ್ ಸರ್ಕಾರ ನಿಖಿಲ್ ಗುಪ್ತಾ ಅವರನ್ನು ಉಚ್ಛಾಟಿಸಿ ಅಮೆರಿಕದ ವಶಕ್ಕೆ ನೀಡಿತು. ಪನ್ನುನ್ ಹತ್ಯೆ ಮಾಡಲು ಬಾಡಿಗೆ ಹಂತಕನಿಗೆ ಮೊದಲ ಕಂತಾಗಿ ಒಂದು ಲಕ್ಷ ಡಾಲರ್ ನೀಡಿದ ಮಾಹಿತಿ ದೊರಕಿತ್ತು. (ಆ ಬಾಡಿಗೆ ಹಂತಕ ಅಮೆರಿಕದ ಗುಪ್ತಚರ ಇಲಾಖೆ ಎಫ್‌ಬಿಐ ಏಜೆಂಟನಾಗಿದ್ದ) ಈ ಎಲ್ಲ ಬೆಳವಣಿಗೆಗಳ ಹಿಂದೆ ಭಾರತ ರಾಯಭಾರ ಕಚೇರಿಯ ಭದ್ರತಾ ಅಧಿಕಾರಿಯೊಬ್ಬರು ಇದ್ದಾರೆ ಎಂದು ಗುರುತಿಸಲಾಯಿತು. ಅಮೆರಿಕದ ಅಧಿಕಾರಿಗಳು ರಾಜತಾಂತ್ರಿಕವಾಗಿ ಈ ವಿಷಯವನ್ನು ಭಾರತದೊಂದಿಗೆ ಬಗೆಹರಿಸಲು ಪ್ರಯತ್ನಿಸಿದರು. ಭಾರತ ಕೂಡ ಈ ವಿಚಾರದಲ್ಲಿ ಸಹಕರಿಸಿತು. ಚರ್ಚೆಯ ನಂತರ ಭಾರತ ರಾಯಭಾರ ಕಚೇರಿಯಲ್ಲಿ ‘ರಾ’ ಅಧಿಕಾರಿಯಾಗಿದ್ದ ವಿಕ್ರಮ್ ಯಾದವ್ ಅವರನ್ನು ಕೆಲಸದಿಂದ ತೆಗೆಯಿತು. ಈ ಪ್ರಕರಣ ಈಗ ಯಾವುದೇ ರೀತಿಯ ಬಿಕ್ಕಟ್ಟಿಗೆ ಕಾರಣವಾಗಿಲ್ಲ. ಸ್ಥಳೀಯ ನ್ಯಾಯಾಲಯದಲ್ಲಿ ಪನ್ನುನ್ ಪ್ರಕರಣವೊಂದನ್ನು ದಾಖಲಿಸಿದ್ದು, ವಿಚಾರಣೆ ನಡೆಯುತ್ತಿದೆ.

ಇದೇ ರೀತಿ ಟೂಡೊ ರಾಜತಾಂತ್ರಿಕವಾಗಿ ರಾಜತಾಂತ್ರಿಕವಾಗಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಿತ್ತು. ಬದಲಾಗಿ ಅವರು ಬಹಿರಂಗ ಹೇಳಿಕೆಗಳ ಮೂಲಕ ಆರೋಪ ಮಾಡಿದ್ದರಿಂದಾಗಿ ಪ್ರಕರಣ ಈ ಸ್ವರೂಪ ಪಡೆದಿದೆ. ಅವರಿಗೆ ಅದರಿಂದ ಬರುವ ರಾಜಕೀಯ ಲಾಭವೇ ಮುಖ್ಯವಾಗಿರುವಂತಿದೆ. ಆದರೆ ಟ್ಯೂಡೊ ಈ ಪ್ರಕರಣದಿಂದಾಗಿ ಜನಪ್ರಿಯತೆ ಕಳೆದುಕೊಂಡಿದ್ದಾರೆ. ಅಷ್ಟೇ ಅಲ್ಲ ಉತ್ತಮವಾಗಿದ್ದ ಬಾಂಧವ್ಯ ಹಾಳಾಗಲು ದಾರಿ ಮಾಡಿ ಕೊಟ್ಟಿದ್ದಾರೆ.

ಮುಂದಿನ ವರ್ಷ ಕೆನಡಾದಲ್ಲಿ ಚುನಾವಣೆಗಳು ನಡೆಯಲಿವೆ. ಜನರು ಟ್ಯೂಡೊ ಅವರ ಪಕ್ಷವನ್ನು ಬೆಂಬಲಿಸುತ್ತಾರೋ ಇಲ್ಲವೋ ಕಾದು ನೋಡಬೇಕು. ಸಿಖ್ಯರ ಪಕ್ಷವನ್ನು ಹೊರಗಿಟ್ಟು ಕನ್ಸರ್‌ವೇಟಿವ್‌ ಪಕ್ಷ ಅಧಿಕಾರಕ್ಕೆ ಬರುವ ಸಾಧ್ಯತೆ ಇಲ್ಲ. ಏಕೆಂದರೆ ಸಿಬ್ಬರು ಅಲ್ಲಿ ನಿರ್ಣಾಯಕ. ಹೀಗಾಗಿ ಉಭಯ ದೇಶಗಳ ನಡುವೆ ಬಿಕ್ಕಟ್ಟು ಮುಂದುವರಿಯಲಿದೆ.

 

 

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ಹನೂರು ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ

ಹನೂರು: ಜೀವನದಲ್ಲಿ ಪರಿವರ್ತನೆಗೊಂಡ ಮನುಷ್ಯ ಯಾವ ರೀತಿ ವ್ಯಕ್ತಿಯಾಗಿ ರೂಪಾಂತರಗೊಳ್ಳುತ್ತಾರೆ ಎಂಬುದಕ್ಕೆ ಬೇಡನಾಗಿ, ರತ್ನಾಕರ ವಾಲ್ಮೀಕಿಯಾಗಿ ಬದಲಾಗಿ ರಾಮಾಯಣ ರಚಿಸಿರುವುದೇ…

2 mins ago

ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿದ ಸಂಸದ ಯದುವೀರ್ ಒಡೆಯರ್

ಮೈಸೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲೇಬೇಕು ಎಂದು ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು…

9 mins ago

ಮುಡಾ ಕೇಸನ್ನು ಸಿಬಿಐ ತನಿಖೆಗೆ ಕೊಡಬೇಕು: ಶಾಸಕ ಶ್ರೀವತ್ಸ ಆಗ್ರಹ

ಮೈಸೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಇನ್ನೂ ಹೆಚ್ಚಿನ ದಾಖಲೆ ಪರಿಶೀಲನೆಯ ಅವಶ್ಯಕತೆಯಿದೆ. ಈ ಹಿನ್ನೆಲೆಯಲ್ಲಿ ಈ ಕೇಸನ್ನು ಸಿಬಿಐ ತನಿಖೆಗೆ…

58 mins ago

ಮುಡಾ ಪ್ರಕರಣ ಸಿವಿಲ್ ಮ್ಯಾಟ್ರೂ ಎಂದ ಗೃಹ ಸಚಿವ ಜಿ.ಪರಮೇಶ್ವರ್

ತುಮಕೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಇ.ಡಿ ಅಧಿಕಾರಿಗಳು ಮೈಸೂರು ಮುಡಾ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ಹೀಗಾಗಿ ಈ ವಿಚಾರ…

2 hours ago

ಸಿಎಂ ವಿರುದ್ಧ ಅವಹೇಳನಕಾರಿ ಹೇಳಿಕೆ: ಶಾಸಕ ಯತ್ನಾಳ್ ವಿರುದ್ಧ ಎಫ್ಐಆರ್ ದಾಖಲು

ವಿಜಯಪುರ: ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ಜಮೀರ್‌ ಅಹಮದ್‌ ಖಾನ್‌ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂಬ ಆರೋಪದಡಿ ಬಿಜೆಪಿ…

2 hours ago

ಮುಡಾ ಕಚೇರಿಯಲ್ಲಿ ಇಂದು ಕೂಡ ಸಾರ್ವಜನಿಕರ ಕೆಲಸಗಳಿಗೆ ಬ್ರೇಕ್

ಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ. ಅಧಿಕಾರಿಗಳು ಇಂದು ಕೂಡ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದು, ಸಾರ್ವಜನಿಕರ ಕೆಲಸಗಳಿಗೆ ಬ್ರೇಕ್‌ ಹಾಕಲಾಗಿದೆ.…

2 hours ago