ದೆಹಲಿ ಕಣ್ಣೋಟ
ಪ್ರಧಾನಿ ನರೇಂದ್ರ ಮೋದಿ ಅವರ ಮಾತಿನ ಮೋಡಿ ಲಕ್ಷಾಂತರ ಮತ್ತು ಕೋಟ್ಯಂತರ ಮಂದಿಯನ್ನು ಮಂತ್ರಮುಗ್ಧರನ್ನಾಗಿಸುತ್ತಿದೆ ಅದೀಗಾಗಲೇ ಸಾಬೀತಾಗಿರುವುದರಿಂದ ಅವರ ನಾಯಕತ್ವವನ್ನು ಮೆಚ್ಚಿ ಅಂಧ ಭಕ್ತರಾಗಿ, ಅಭಿಮಾನಿಗಳಾಗಿ ತಲೆದೂಗುವಮಂದಿದೇಶದಾದ್ಯಂತಸಿಗುತ್ತಾರೆ. ಅಂತಹವರು ಮೋದಿ ಅವರು ಏನು ಹೇಳಿದ್ದಾರೆ, ಏನು ಹೇಳುತ್ತಾರೆ ಎಂದು ಚಿಂತನೆ ಮಾಡದೆ ಮೋದಿ ಮೋದಿ ಎಂದು ಹುಚ್ಚಾಬಟ್ಟೆ ಕೂಗಾಡುವುದನ್ನು ನಾವು ನಿತ್ಯವೂ ನೋಡುತ್ತಿದ್ದೇವೆ. ಇಂತಹ ಮಂದಿಯ ಸ್ವಾಮಿನಿಷ್ಠೆಯನ್ನು ಪ್ರಶ್ನಿಸುವುದೂ ಕಷ್ಟ.
ಮೋದಿ ಅವರಿಗೆ ವೇದಿಕೆ ಸಿಕ್ಕರಾಯಿತು, ಕೇಳುವ ಕಿವಿಗಳಿದ್ದರೆ ಅದು ಸಂಸತ್ತಿನ ಸದನವಿರಬಹುದು ಅಥವಾ ಸಾರ್ವಜನಿಕ ಸಭೆಗಳಿರಬಹುದು, ಮಾತಿನಲ್ಲೇ ಮಂಟಪ ಕಟ್ಟಿ ಬಿಡುತ್ತಾರೆ. ಇಂತಹ ಮಾತುಗಾರರಿಗೆ ಯಾವ ಅಡೆತಡೆಯೂ ಇಲ್ಲದ ಕೆಂಪುಕೋಟೆ ಮೇಲೆ ನಿಂತು ಮಾತನಾಡುವ ಅವಕಾಶ ಸಿಕ್ಕಿದಾಗ ಅದನ್ನು ಮುಕ್ತವಾಗಿ ಬಳಸಿಕೊಳ್ಳದೇ ಇರುತ್ತಾರೆಯೇ? ಕೆಂಪುಕೋಟೆಯ ಮೇಲೆ ನಿಂತು ಮಾತನಾಡುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಅಲ್ಲಿ ನಿಂತು ಮಾತನಾಡುವ ಹಕ್ಕು ಮತ್ತು ಅವಕಾಶ ಇರುವುದು ದೇಶದ ಪ್ರಧಾನ ಮಂತ್ರಿಯಾದವರಿಗೆ ವರ್ಷಕ್ಕೆ ಒಮ್ಮೆ ಮಾತ್ರ. ಅದರಲ್ಲೂ ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಸ್ವಾತಂತ್ರ್ಯಕ್ಕಾಗಿ ತಮ್ಮ ಬದುಕನ್ನೇ ತ್ಯಾಗ ಮತ್ತು ಬಲಿದಾನ ಮಾಡಿದ ಸ್ವಾತಂತ್ರ್ಯ ಯೋಧರಿಗೆ ಗೌರವ ಸಲ್ಲಿಸುವುದಕ್ಕಾಗಿ ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರೂ ಅವರು ಕೆಂಪುಕೋಟೆ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಿ ಸ್ವತಂತ್ರ ಭಾರತದ ಭವಿಷ್ಯದ ದಿಕ್ಕು ದಿಸೆ ಹೇಗಿರುತ್ತದೆ ಎನ್ನುವ ಬಗ್ಗೆ ಮಾತನಾಡಿದ್ದು ಒಂದು ಸಂಪ್ರದಾಯವಾಗಿ ಮುಂದುವರಿದುಕೊಂಡು ಬಂದಿದೆ.
ಹಾಗಾಗಿ ಪ್ರಧಾನಿಯಾದವರು ಸ್ವಾತಂತ್ರ್ಯ ದಿನದ ನೆನಪಿನಲ್ಲಿ ಕೆಂಪುಕೋಟೆಯ ಮೇಲೆ ನಿಂತು ಮಾತನಾಡಿದರೆಆಮಾತು ಆಡಳಿತದದಿಕ್ಕುದಿಸೆಯಮುನ್ಸೂಚನೆ ಆಗಿರುತ್ತದೆ. ಪ್ರಧಾನಿ ಅವರು ಇಲ್ಲಿ ಪ್ರಕಟಿಸಿದ ಯೋಜನೆಗಳು ಮತ್ತು ಭರವಸೆಗಳು ಸಹಜ ವಾಗಿಯೇ ಕಾರ್ಯರೂಪಕ್ಕೆ ಬರುತ್ತವೆ. ಬರಲೇಬೇಕು. ಇಲ್ಲಿ ನೀಡಿದ ಭರವಸೆ ಈಡೇರದಿದ್ದರೆ ಪ್ರಧಾನಿ ಅವರ ಕೆಂಪುಕೋಟೆ ಭಾಷಣಕ್ಕೆ ಯಾವ ಕಿಮ್ಮತ್ತೂ ಇರುವುದಿಲ್ಲ. ಪ್ರಧಾನಿ ಮೋದಿ ಅವರು ಕಳೆದ ಹತ್ತು ವರ್ಷಗಳಿಂದ ಅಧಿಕಾರದಲ್ಲಿ ಮುಂದುವರಿದಿದ್ದು, ಈ ಬಾರಿ ಅವರು ಕೆಂಪು ಕೋಟೆಯ ಮೇಲೆ ಮಾಡಿದ ಭಾಷಣ ಹನ್ನೊಂದನೆಯದು. ಮೋದಿ ಅವರು ತಮ್ಮ ಎಲ್ಲ ಭಾಷಣ ಗಳಲ್ಲಿಯೂ ಭ್ರಷ್ಟಾಚಾರದ ವಿರುದ್ಧ ಮತ್ತು ಪ್ರತಿಪಕ್ಷಗಳ ನಡೆ-ನುಡಿಯ ಬಗೆಗೆ ಗುಡುಗುವುದು ಸಾಮಾನ್ಯ. ಜೊತೆಗೆ ಅವರ ಬಹುತೇಕ ಭಾಷಣದಲ್ಲಿ ನೆಹರೂ ಕುಟುಂಬದ ರಾಜಕಾರಣದ ವಿರುದ್ಧ ಒಂದು ಟೀಕೆ ಇದ್ದೇ ಇರುತ್ತದೆ. ಪರಿವಾರರಾಜಕಾರಣದವಿರುದ್ಧಮಾತನಾಡುವುದನ್ನು ಮುಂದುವರಿಸಿರುವ ಅವರು, ರಾಜಕೀಯ ಎಂದರೆ ಮೂಗುಮುರಿಯುವ ಸುಮಾರು ಒಂದು ಲಕ್ಷ ಮಂದಿ ಯುವ ಜನರನ್ನು ರಾಜಕೀಯಕ್ಕೆ ತರುವ ಗುರಿ ಹೊಂದಿದ್ದಾರೆ. ಈ ಹೊಸಪೀಳಿಗೆಯ ಯುವಜನರು ರಾಷ್ಟ್ರವನ್ನು ಸರಿಯಾದ ದಿಕ್ಕಿನಲ್ಲಿ ನಡೆಸಿಕೊಂಡು ಹೋಗಬಲ್ಲರು ಎನ್ನುವ ವಿಶ್ವಾಸ ಅವರದ್ದು. ಈ ಒಂದು ಲಕ್ಷ ಮಂದಿ ಯುವಜನರಿಗೂ ಗ್ರಾಮ ಪಂಚಾಯಿತಿಯಿಂದ ಹಿಡಿದು ಸಂಸತ್ತಿನವರೆಗೂ ವಿವಿಧ ಹಂತಗಳಲ್ಲಿ ಅವಕಾಶ ನೀಡಿ ಶುದ್ಧ ಆಡಳಿತ ವ್ಯವಸ್ಥೆಯನ್ನು ಸೃಷ್ಟಿಸುವ ಬಯಕೆ ತಮ್ಮದೆಂದು ಅವರು ಘೋಷಿಸಿದ್ದಾರೆ.
ಹಳಬರು ಅಧಿಕಾರಕ್ಕೆ ಅಂಟಿ ಕೂತಿದ್ದಾರೆ, ಬಹುತೇಕ ಅವರಿಗೆ ದೇಶ ಮತ್ತು ಸಮಾಜದ ಹಿತಕ್ಕಿಂತ ತಮ್ಮ ಕುಟುಂಬದ ಹಿತಾಸಕ್ತಿಯೇ ಜಾಸ್ತಿ. ಅವರಾದ ನಂತರ ಅವರ ಮಕ್ಕಳು ಮತ್ತು ಮೊಮ್ಮಕ್ಕಳು ಅಧಿಕಾರವನ್ನು ಅನುಭವಿಸಬೇಕೆನ್ನುವ ಆಸೆ ಹಾಗಾಗಿ ಅವರೆಂದೂ ತಮ್ಮ ಸ್ಥಾನಗಳನ್ನು ಬಿಟ್ಟುಕೊಡುವುದಿಲ್ಲ ಎನ್ನುವುದು ತಿಳಿದ ಸಂಗತಿ. ಇಂತಹ ಸ್ವಜನಪಕ್ಷಪಾತಿ ಗಳನ್ನು ಹಿಂದಟ್ಟಬೇಕಾದರೆ ಹೊಸ ಪೀಳಿಗೆ ಮುಂದೆ ಬರಬೇಕೆನ್ನುವುದು ಎಲ್ಲರ ಆಶಯ. ವಾಸ್ತವವಾಗಿ ಇದು ಒಳ್ಳೆಯ ಬೆಳವಣಿಗೆ. ಆದರೆ ಪ್ರಧಾನಿ ಮೋದಿ ಅವರು ಈ ಒಂದು ಲಕ್ಷ ಮಂದಿ ಯುವಕರನ್ನು ಅದರಲ್ಲೂ ರಾಜ ಕಾರಣಕಂಡರೆ ಮೂಗುಮುರಿಯುವವರನ್ನು ಹೇಗೆ ರಾಜಕಾರಣಕ್ಕೆ ಎಳೆದು ತಂದು ಅವರನ್ನು ದುಡಿಸುತ್ತಾರೆ ಎನ್ನುವುದು ಯಕ್ಷ ಪ್ರಶ್ನೆ, ಕಾದು ನೋಡಬೇಕಷ್ಟೆ.
ಭಾರತೀಯ ಜನತಾ ಪಕ್ಷದ ಆಡಳಿತದಲ್ಲಿ ದೇಶದ ಆಡಳಿತ ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕೆಂದು ನಡೆಸಿದ ಹಲವು ಪ್ರಯತ್ನಗಳು ಕೈಗೂಡಿವೆ. ಆದರೆ ಸಾಮಾನ್ಯ ಪೌರತ್ವ ನಾಗರಿಕ ಸಂಹಿತೆ, ಒಂದು ದೇಶ ಒಂದು ಚುನಾವಣೆ ಎನ್ನುವುದು ಇನ್ನೂ ಜಾರಿಗೊಳಿಸಲಾಗದೆ ಇರುವ ಗುರಿಗಳು, ಅವುಗಳನ್ನು ಈ ಬಾರಿ ಜಾರಿಗೆ ತಂದೇ ತರುತ್ತೇವೆ ಎನ್ನುವ ಶಪಥ ಮೋದಿ ಅವರದ್ದು. ಹಾಗಾಗಿ ಅವುಗಳನ್ನು ಮತ್ತೆ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ. ಇನ್ನು ಎರಡು ವಾರಗಳ ಹಿಂದೆ ನೆರೆಯ ಬಾಂಗ್ಲಾ ದೇಶದಲ್ಲಿ ಆಗಿರುವ ರಾಜಕೀಯ ಬದಲಾವಣೆಯಿಂದ ಅಲ್ಲಿ ಹಿಂದೂಗಳ ಮೇಲೆ ನಡೆದಿರುವ ಹಿಂಸಾಚಾರ ಮತ್ತು ಆ ದೇಶದೊಡನೆ ಇರುವ ಬಾಂಧವ್ಯವನ್ನು ಮೋದಿ ಪ್ರಸ್ತಾಪಿಸಿ ಅಲ್ಲಿನ ಆಡಳಿತ ಭಾರತದ ಜೊತೆ ಮೊದಲಿನಂತೆ ಸ್ನೇಹ ಸಂಬಂಧ ಇಟ್ಟುಕೊಳ್ಳುವ ಆಶಯವನ್ನು ವ್ಯಕ್ತಪಡಿಸಿದ್ದಾರೆ.
ಈ ಬಾರಿಯ ಸ್ವಾತಂತ್ರೋತ್ಸವ ಆಚರಣೆಯ ಈ ಸಮಾರಂಭದಲ್ಲಿ ಸಂಸತ್ತಿನ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಐದನೇ ಸಾಲಿನಲ್ಲಿ ಕುಳಿತುಕೊಳ್ಳುವಂತೆ ಆಸನ ವ್ಯವಸ್ಥೆ ಮಾಡಲಾಗಿತ್ತು. ಸಾಮಾನ್ಯವಾಗಿ ಸಂಪುಟ ದರ್ಜೆ ಸಚಿವರು ಮತ್ತು ಪ್ರತಿಪಕ್ಷಗಳ ನಾಯಕರಿಗೆ ಮೊದಲ ಸಾಲಿನಲ್ಲಿಯೇ ಆಸನ ವ್ಯವಸ್ಥೆ ಮಾಡುವ ಸಂಪ್ರದಾಯ ಮುಂದುವರಿದೇ ಬಂದಿತ್ತು. ಈ ಸಲ ಮೋದಿ ಅವರ ಆಡಳಿತ ವ್ಯವಸ್ಥೆ ಈ ಸಂಪ್ರದಾಯವನ್ನು ಉಲ್ಲಂಘಿಸಿದೆ. ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಕ್ರೀಡಾಪಟುಗಳಿಗೆ ಮೊದಲ ಸಾಲಿನಲ್ಲಿ ಅವಕಾಶ ಒದಗಿಸಿದ್ದ ಕಾರಣ ಈ ಬದಲಾವಣೆ ಮಾಡಲಾಗಿತ್ತು ಎನ್ನುವುದು ಆಡಳಿತ ವ್ಯವಸ್ಥೆಯು ನೀಡಿರುವ ಸಬೂಬು, ಮೋದಿ ಅವರು ವಿರೋಧ ಪಕ್ಷದವರನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎನ್ನುವುದು ದೇಶದ ಜನತೆಗೆ ತಿಳಿದ ಸಂಗತಿ, ಪ್ರಧಾನಿ ಮೋದಿ ಅವರ ವ್ಯಕ್ತಿತ್ವದಲ್ಲಿ ಬಲವಾಗಿ ಬೇರೂರಿರುವ ದ್ವೇಷ ರಾಜಕಾರಣವನ್ನು ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ಬಳಸಿಕೊಳ್ಳದೇ ಇರುವುದಿಲ್ಲ. ಈ ದ್ವೇಷ ರಾಜಕಾರಣ ಈಗ ಬಿಜೆಪಿಯ ಸಾಮಾನ್ಯ ಕಾರ್ಯಕರ್ತರಲ್ಲೂ ಕಾಂಗ್ರೆಸ್, ನೆಹರೂ ಅವರಿಂದ ಹಿಡಿದು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರವರೆಗೂ ನಿತ್ಯವೂ ಒಂದಲ್ಲ ಒಂದು ರೀತಿ ಅವಹೇಳನ ಮಾಡುವ ಪ್ರವೃತ್ತಿ ಹೆಚ್ಚಾಗಿರುವುದನ್ನು ಕಾಣಬಹುದಾಗಿದೆ. ಈ ಪೂರ್ವಗ್ರಹ ಪೀಡಿತ ಮನಸ್ಸು ಎಲ್ಲ ಹಂತದಲ್ಲೂ ಹಬ್ಬುತ್ತಿದೆ. ಇದು ನಿಜಕ್ಕೂ ರಾಜಕಾರಣದಲ್ಲಿ ಬೆಳೆದು ಬಂದಿರುವ ಕೆಟ್ಟ ಸಂಪ್ರದಾಯ.
ಸಂಸತ್ ಭವನಕ್ಕೆ ಅಡ್ಡಬಿದ್ದು ಗೌರವ ಸಲ್ಲಿಸುವುದು, ಸಂವಿಧಾನ ಮತ್ತು ಸಂವಿಧಾನ ರಚಿಸಿದ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ತಲೆ ಬಾಗಿ ನಮಸ್ಕರಿಸುತ್ತಾ ಪ್ರಜಾಪ್ರಭುತ್ವದ ಬಗೆಗೆ ಗಂಟೆ ಗಟ್ಟಲೆ ಮಾತನಾಡುವ ಮೋದಿ ಅವರು ಬದಲಾಗಬೇಕಿದೆ. ಆ ಬದಲಾವಣೆಯನ್ನು ತಮ್ಮ ಆಡಳಿತದ ಹೆಜ್ಜೆಯಲ್ಲಿ ತೋರಿಸಬೇಕಿದೆ. ದೊಡ್ಡ ಮನಸ್ಸು, ದೊಡ್ಡತನ ಅವರ ಸ್ಥಾನಮಾನದ ಗೌರವವನ್ನು ಹೆಚ್ಚಿಸುತ್ತದೆಯೇ ಹೊರತು ಕುಬ್ಬಗೊಳಿಸುವು ದಿಲ್ಲ. ಏಕೆಂದರೆ ಜನತಂತ್ರದ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ದೇಶ ಕಾಣುತ್ತಲೇ ಬಂದಿದೆ. ಚುನಾವಣೆ ಪ್ರಕಟ: ಈ ವರ್ಷ ನಾಲ್ಕು ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆ ನಡೆಯಬೇಕಿದೆ. ಆದರೆ ಚುನಾವಣಾ ಆಯೋಗ ಜಮ್ಮು-ಕಾಶ್ಮೀರ ಮತ್ತು ಹರಿಯಾಣಕ್ಕೆ ಮಾತ್ರ ಅಕ್ಟೋಬರ್ 1ಕ್ಕೆ ಚುನಾವಣೆ ನಡೆಸುವುದಾಗಿ ಪ್ರಕಟಿಸಿದೆ. ಮಹಾರಾಷ್ಟ್ರ ಮತ್ತು ಜಾರ್ಖಂಡ್ ರಾಜ್ಯಗಳ ವಿಧಾನಸಭೆಗಳ ಚುನಾವಣೆಯನ್ನು ಈ ಎರಡು ಚುನಾವಣೆ ಬಳಿಕ ಮಾಡುವುದಾಗಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಪ್ರಕಟಿಸಿದ್ದಾರೆ. ಜೊತೆಗೆ ತಮ್ಮ ವಿಧಾನಸಭೆ ಸ್ಥಾನಗಳಿಗೆ ರಾಜೀನಾಮೆ ನೀಡಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದವರಿಂದ ತೆರವಾಗಿರುವ ಕ್ಷೇತ್ರಗಳಿಗೆ ಉಪ ಚುನಾವಣೆಯೂ ನಡೆಯಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಭದ್ರತಾ ಸಿಬ್ಬಂದಿಯ ಕೊರತೆ ಎದುರಾಗಬಹುದೆಂಬ ಕಾರಣ ನೀಡಲಾಗಿದೆ. ಇದು ನಂಬಲಾರದ ನೆಪಗಳು ಎನ್ನುವುದು ಬೆಳಕಿನಷ್ಟೇ ನಿಚ್ಚಳ.
ಎರಡು ವರ್ಷಗಳ ಹಿಂದೆ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ಆರ್ಟಿಕಲ್ 370ಯನ್ನು ರದ್ದುಪಡಿಸಿ ಅಲ್ಲಿನ ಆಡಳಿತವನ್ನು ಕೇಂದ್ರದ ಆಡಳಿತ ವ್ಯಾಪ್ತಿಗೆ ತೆಗೆದುಕೊಳ್ಳಲಾಗಿತ್ತು. ಜೊತೆಗೆ ಜಮ್ಮು ಮತ್ತು ಕಾಶ್ಮೀರವನ್ನು ಮೂರು ಭಾಗಗಳನ್ನಾಗಿ ವಿಂಗಡಿಸಲಾಯಿತು. ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಬಿಜೆಪಿ ಮತ್ತು ಆರ್‌ಎಸ್‌ಎಸ್ ಮೊದಲಿನಿಂದಲೂ ವಿರೋಧಿಸುತ್ತಲೇ ಬಂದಿದ್ದವು. ಎಲ್ಲ ರಾಜ್ಯಗಳನ್ನು ಸಮಾನವಾಗಿ ನೋಡಬೇಕೆನ್ನುವ ವಾದ ಬಿಜೆಪಿಯದ್ದು.
ಜಮ್ಮು ಮತ್ತು ಕಾಶ್ಮೀರಕ್ಕೆ ಚುನಾವಣೆ ನಡೆಸುತ್ತಿರುವ ಬೆಳವಣಿಗೆ ಸ್ವಾಗತಾರ್ಹ, ಇತ್ತೀಚೆಗೆ ಕಾಶ್ಮೀರ ಗಡಿಯಲ್ಲಿ ಪಾಕಿಸ್ತಾನದ ಪ್ರಚೋದಿತ ಉಗ್ರರು ನುಸುಳುವ ಮತ್ತು ಭಾರತದ ಸೈನಿಕರ ಮೇಲೆ ಗುಂಡು ಹಾರಿಸುವ ಘಟನೆಗಳು ಮರುಕಳಿಸುತ್ತಿವೆ. ಈ ಉಗ್ರರಿಗೆ ಅಲ್ಲಿ ಜನತಂತ್ರದ ಆಡಳಿತ ವ್ಯವಸ್ಥೆ ಸ್ಥಾಪನೆ ಆಗುವುದು ಬೇಡ, ಕಾಶ್ಮೀರ ಕಣಿವೆ ಸದಾ ಪ್ರಕ್ಷುಬ್ಧ ಸ್ತಿತಿಯಲ್ಲಿರಬೇಕೆನ್ನುವುದು ಪಾಕಿಸ್ತಾನ ಮತ್ತು ಉಗ್ರ ಸಂಘಟನೆಗಳ ಆಶಯ. ಹಿಂದಿನ ವರ್ಷಗಳ ಉಗ್ರಗಾಮಿ ಸಂಘಟನೆಗಳ ಚಟುವಟಿಕೆಗಳನ್ನು ಗಮನಿಸಿದರೆ ಇದು ಕಡೆಗಣಿಸಬಹುದಾದ ಪ್ರಕರಣಗಳು ಎಂದು ಹೇಳಬಹುದು. ಆದರೆ ಅದನ್ನು ಅಷ್ಟು ಸುಲಭವಾಗಿ ತಳ್ಳಿಹಾಕುವುದು ಮತ್ತು ಮೈಮರೆಯುವುದು ಅಪಾಯವೇ.
ಈ ಹಿನ್ನೆಲೆಯಲ್ಲಿ ಚುನಾವಣೆ ನಡೆದು ಎಲ್ಲ ರಾಜ್ಯಗಳಂತೆ ಯಾವುದೇ ವಿಶೇಷ ಸ್ಥಾನಮಾನಗಳಿಲ್ಲದ ಸರ್ಕಾರ ಅಸ್ತಿತ್ವಕ್ಕೆ ಬರುವುದು ಒಳ್ಳೆಯ ಬೆಳವಣಿಗೆ, ಅಲ್ಲಿ ಈಗ ಮಾಜಿ ಮುಖ್ಯಮಂತ್ರಿ ಫಾರುಖ್ ಅಬ್ದುಲ್ಲಾ ಅವರ ನ್ಯಾಷನಲ್ ಫ್ರೆಂಟ್, ಮೆಹಬೂಬಾ ಮುತ್ತಿ ಅವರ ಪಿಡಿಪಿ, ಎರಡು ವರ್ಷಗಳಿಂದ ಕಾಂಗ್ರೆಸ್ ತೊರೆದು ಕಾಶ್ಮೀರದಲ್ಲಿ ರಾಜಕಾರಣ ಮಾಡುತ್ತಿರುವ ಗುಲಾಮ್ ನಬಿ ಆಜಾದ್ ಅವರ ಹೊಸ ರಾಜಕೀಯ ಪಕ್ಷ ಮತ್ತು ಕಾಂಗ್ರೆಸ್ ಹೆಚ್ಚು ಕಡಿಮೆ ಜನಪ್ರಿಯತೆ ಕಳೆದುಕೊಂಡಿವೆ. ಬಿಜೆಪಿಯೂ ಯಾವ ಪ್ರಭಾವವನ್ನು ಹೊಂದಿರದಿದ್ದರೂ ಜಮ್ಮು ಭಾಗದಲ್ಲಿ ಭಾಗದಲ್ಲಿ ಹಿಂದೂ ಧರ್ಮೀಯರು ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣ ಆ ಪಕ್ಷ ಅಲ್ಲಿನ ಜನರಿಗೆ ಹೊಸ ಆಶಾಭಾವನೆಯಾಗಿ ಕಂಡಿದೆ. ಇಂತಹ ಬಲಿಷ್ಠ ರಾಜಕೀಯ ವ್ಯವಸ್ಥೆ ಇಲ್ಲದ ಈ ಪರಿಸ್ಥಿತಿಯಲ್ಲಿ ಚುನಾವಣೆ ನಡೆಯಲಿದೆ. ಹೀಗಾಗಿ ಹೊಸ ರಾಜಕೀಯ ವ್ಯವಸ್ಥೆ ಮೈದಳೆಯುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಇನ್ನು ಹರಿಯಾಣ ವಿಧಾನಸಭೆಯ ಚುನಾವಣೆ, ಹರಿಯಾಣ ಎಂದರೆ ಪಕ್ಷಾಂತರದ ಪಿತಾಮಹರ ರಾಜ್ಯ ಭಜನ್ ಲಾಲ್ ಅವರ ರಾಜಕಾರಣದ ಕಾಲದಲ್ಲಿ ಅಂದರೆ ಸುಮಾರು ಮೂರು ದಶಕಗಳ ಹಿಂದೆ ಬೆಳಿಗ್ಗೆ ಇದ್ದ ಸರ್ಕಾರ ರಾತ್ರಿ ಇರುತ್ತಿರಲಿಲ್ಲ. ಯಾವ ಶಾಸಕ, ಯಾವ ಪಕ್ಷದ ಗುಂಪು ಯಾರ ಕಡೆ ಇರುತ್ತದೆ ಎಂದು ಖಚಿತವಾಗಿ ಹೇಳಲು ಸಾಧ್ಯವಿರಲಿಲ್ಲ. ಇಲ್ಲಿಯೇ ಹುಟ್ಟಿಕೊಂಡದ್ದು ಆಯಾ ರಾಂ ಗಯಾರಾಂ ಎನ್ನುವ ಪಕ್ಷಾಂತರ ಪಿಡುಗು. ಈ ಪಕ್ಷಾಂತರ ಪಿಡುಗನ್ನು ತೊಲಗಿಸಲೆಂದೇ ಎಂಬತ್ತರ ದಶಕದಲ್ಲಿ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಮೊದಲ ಬಾರಿಗೆ ಪಕ್ಷಾಂತರ ವಿರೋಧಿ ಕಾಯ್ದೆಯನ್ನು ಜಾರಿಗೆ ತಂದರು. ಆದರೂ ಒಂದಲ್ಲ ಒಂದು ಮಾರ್ಗದಲ್ಲಿ ಪಕ್ಷಾಂತರ ಮುಂದುವರಿದ ಕಾರಣ ಆನಂತರ ಬಂದ ಸರ್ಕಾರಗಳು ನೆಪಮಾತ್ರಕ್ಕೆ ಆ ಕಾಯ್ದೆಗೆ ಸಣ್ಣಪುಟ್ಟ ತಿದ್ದುಪಡಿ ತಂದರೂ, ನಮ್ಮ ಪಕ್ಷಾಂತರ ಪ್ರವೀಣರು ಆಪರೇಷನ್ ಬಿಜೆಪಿ ಮುಂತಾದ ಹಲವು ರೂಪದಲ್ಲಿ ಪಕ್ಷಾಂತರವನ್ನು ಉಳಿಸಿ ಕಾಪಾಡಿಕೊಂಡು ಬಂದಿದ್ದಾರೆ.
ಹರಿಯಾಣದಲ್ಲಿ ಹತ್ತು ವರ್ಷಗಳಿಂದ ಬಿಜೆಪಿ ಆಡಳಿತ ನಡೆಸುತ್ತಿದೆ. ಆದರೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ತನ್ನ ಜನಪ್ರಿಯತೆಯನ್ನು ಕಳೆದುಕೊಂಡಿದೆ. ಬಿಜೆಪಿ, ಕಾಂಗ್ರೆಸ್, ಇಂಡಿಯನ್ ನ್ಯಾಷನಲ್ ಲೋಕದಳ, ಜನನಾಯಕ ಜನತಾ ಪಾರ್ಟಿ ಮತ್ತು ರಾಷ್ಟ್ರವಾದಿ ಜನಲೋಕ ಪಾರ್ಟಿ ಈ ರಾಜ್ಯದಲ್ಲಿ ಸಕ್ರಿಯವಾಗಿವೆ. ವಿಧಾನಸಭೆಯ 90 ಸ್ಥಾನಗಳಿಗೆ ನಡೆಯುವ ಈ ಚುನಾವಣೆಯಲ್ಲಿ ನಿಜವಾದ ಪೈಪೋಟಿ ನಡೆಯುವುದು ಕಾಂಗ್ರೆಸ್ ಮತ್ತು ಬಿಜೆಪಿನಡುವೆಎನ್ನುವುದನ್ನು ಕಳೆದ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಎರಡೂ ಪಕ್ಷಗಳು ತಲಾ ಐದು ಸ್ಥಾನಗಳನ್ನು ಗಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಕಾಣಬಹುದಾಗಿದೆ.
ಮೈಸೂರು : ಮೈಸೂರು ಅರಮನೆ ಮುಂಭಾಗ ನಿನ್ನೆ ಸಂಜೆ ನಡೆದಿದ್ದ ಹೀಲಿಯಂ ಸ್ಫೋಟ ಪ್ರಕರಣದಲ್ಲಿ ಸಾವಿನ ಸಂಖ್ಯೆ ಇದೀಗ ಮೂರಕ್ಕೆ…
ಮೈಸೂರು : ಹುಬ್ಬಳ್ಳಿಯಲ್ಲಿ ನಡೆದ ಮರ್ಯಾದಗೇಡು ಹತ್ಯೆ ವಿರೋಧಿಸಿ ಮತ್ತು ಮರ್ಯಾದೆಗೇಡು ಹತ್ಯೆ ತಡೆಗೆ ಕಠಿಣ ಕಾಯಿದೆ ರೂಪಿಸಬೇಕು ಎಂದು…
ಮೈಸೂರು : ಇಲ್ಲಿನ ಕೆ.ಆರ್. ಆಸ್ಪತ್ರೆಯ ಶೆಡ್ ನಲ್ಲಿ ಬೆಂಕಿ ಕಾಣಿಸಿಕೊಂಡು ಆಸ್ಪತ್ರೆಯ ಹಾಸಿಗೆಗಳು ಬೆಂಕಿಗಾಹುತಿಯಾಗಿವೆ. ಆಸ್ಪತ್ರೆಯ ಚೆಲುವಾಂಬ ವಾರ್ಡ್…
ಬೆಂಗಳೂರು : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುರಿತಂತೆ ಪ್ರಶ್ನೆಗಳು ಉದ್ಭವಿಸಿರುವ ಸಂದರ್ಭದಲ್ಲಿ, ಹೊಸ ವರ್ಷಾಚರಣೆಯ ವೇಳೆ ಯಾವುದೇ ಅವಘಡ ನಡೆಯದಂತೆ…
ಮೈಸೂರು : ಮೈಸೂರಿನ ವಿಶ್ವ ವಿಖ್ಯಾತ ಅರಮನೆ ಸಮೀಪ ಸಂಭವಿಸಿದ್ದ ಹೀಲಿಯಂ ಗ್ಯಾಸ್ ಸಿಲೆಂಡರ್ ಸ್ಫೋಟ ದುರಂತದಲ್ಲಿ ಸಾವಿನ ಸಂಖ್ಯೆ…
ತಿರುವನಂತಪುರಂ : ಬಿಜೆಪಿಯಿಂದ ಮೊದಲ ಬಾರಿಗೆ ತಿರುವನಂತಪುರಂ ನಗರ ಮೇಯರ್ ಆಗಿ ಆಯ್ಕೆಯಾಗುವ ಮೂಲಕ ವಿ.ವಿ.ರಾಜೇಶ್ ಇತಿಹಾಸ ನಿರ್ಮಿಸಿದ್ದಾರೆ. 49…