ಸಂಪಾದಕೀಯ

ದಸರಾ ಸರ್ವಜನಾಂಗದ ಶಾಂತಿಯ ತೋಟದ ಬಿಂಬವಾಗಲಿ

ಪ್ರಸಕ್ತ ವರ್ಷದ ನಾಡಹಬ್ಬ ಮೈಸೂರು ದಸರಾಗೆ ಸೋಮವಾರ ಚಾಲನೆ ದೊರೆಯಲಿದ್ದು, ಜನತೆ ಉತ್ಸವದ ಆಚರಣೆಗೆ ಸಿದ್ಧರಾಗಿದ್ದಾರೆ. ಚಾಮುಡಿಬೆಟ್ಟದಲ್ಲಿ ಅಂತಾರಾಷ್ಟ್ರೀಯ ಬುಕರ್ ಪ್ರಶಸ್ತಿ- ೨೦೨೫ ಪುರಸ್ಕೃತರಾದ ಸಾಹಿತಿ ಬಾನು ಮುಷ್ತಾಕ್ ದಸರಾ ಮಹೋತ್ಸವವನ್ನು ಉದ್ಘಾಟಿಸಲಿದ್ದಾರೆ.

ಜಿಲ್ಲಾಡಳಿತ, ಪೊಲೀಸ್ ಸೇರಿದಂತೆ ಎಲ್ಲ ಇಲಾಖೆಗಳ ಅಧಿಕಾರಿಗಳು, ನೌಕರರು ಸಜ್ಜಾಗಿದ್ದಾರೆ. ಅವರವರ ಪಾಲಿನ ಕರ್ತವ್ಯಗಳಲ್ಲಿ ಲೋಪ ಉಂಟಾಗದಂತೆ ಕಟ್ಟೆಚ್ಚರ ವಹಿಸಿದ್ದಾರೆ. ಈ ಬಾರಿ ದಸರಾ ಉದ್ಘಾಟನೆಗೆ ಬಾನು ಅವರನ್ನು ರಾಜ್ಯ ಸರ್ಕಾರ ಆಯ್ಕೆ ಮಾಡುತ್ತಿದ್ದಂತೆ, ಕೆಲ ಹಿಂದೂ ಮೂಲ ಭೂತವಾದಿಗಳಿಂದ ಬಾನು ಅವರು ದಸರಾ ಉದ್ಘಾಟಿಸುವುದು ಸಂಸ್ಕಾರ, ಸಂಸ್ಕೃತಿಗೆ ಅಪಚಾರ ಎಂಬ ಪ್ರತಿರೋಧ ಕೇಳಿಬಂದಿತು. ಬಾನು ಅವರ ಧರ್ಮ ಕೂಡ ಇದನ್ನು ಒಪ್ಪುವುದಿಲ್ಲ ಎಂಬುದಾಗಿ ಬದಲಿ ದಾರಿಯಲ್ಲಿ ತಮ್ಮ ಒತ್ತಾಯವನ್ನು ಮುಂದಿಡುವ ಪ್ರಯತ್ನವನ್ನೂ ನಡೆಸಿದರು. ಆದರೆ, ಬಾನು ಅವರು ದಸರಾವನ್ನು ಹಿಂದೂ ಧರ್ಮವನ್ನು ಗೌರವಿಸಿ ಅತ್ಯಂತ ಖುಷಿಯಿಂದ ಉದ್ಘಾಟಿಸಲು ಸಿದ್ಧ ಎಂದಿದ್ದು, ಹಲವು ಹಿಂದೂ ಪರ ಸಂಘಟನೆಗಳಿಗೆ ಅರಗಿಸಿಕೊಳ್ಳಲು ಆಗಲಿಲ್ಲ.

ಬಾನು ಅವರು ದಸರಾ ಉದ್ಘಾಟಿಸಬಾರದು ಎಂದು ಆಗ್ರಹಿಸಿ ಕೆಲ ಸಂಘಟನೆಗಳು ಚಾಮುಂಡಿಬೆಟ್ಟ ಚಲೋ ಕೂಡ ಹಮ್ಮಿಕೊಳ್ಳಲು ಮುಂದಾಗಿದ್ದು, ಪೊಲೀಸರು ಅನುಮತಿ ನೀಡದ ಹಿನ್ನೆಲೆಯಲ್ಲಿ ಅದು ವಿಫಲವಾಯಿತು. ಯಾವಾಗ ಬಾನು ಅವರನ್ನು ವಿರೋಧಿಸಿ ಪ್ರತಿಭಟನೆಗಳು ಶುರುವಾದವೋ, ಆಗ ಅವರ ಪರ ಕೂಡ ಕೆಲ ಸಂಘಟನೆಗಳು ನಿಂತಿದ್ದು ಸರ್ವವೇದ್ಯ ಸಂಗತಿ. ರಾಜ್ಯ ಸರ್ಕಾರ ಮಾತ್ರ ಈ ವಿಷಯದಲ್ಲಿ ತನ್ನ ನಿಲುವಿನಿಂದ ಹಿಂದೆ ಸರಿಯದಿರುವುದು ಮೆಚ್ಚಬೇಕಾದ ದಿಟ್ಟ ನಿಲುವು.

ಏತನ್ಮಧ್ಯೆ, ಬಾನು ಮುಷ್ತಾಕ್ ಅವರು ದಸರಾ ಉದ್ಘಾಟಿಸಲು ಅವಕಾಶ ನೀಡದಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಹೈ ಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆ ಕೂಡ ಆಗಿತ್ತು. ಆದರೆ, ಎರಡೂ ನ್ಯಾಯಾಲಯಗಳಲ್ಲಿ ಅರ್ಜಿಯನ್ನು ವಜಾಗೊಳಿಸಲಾಯಿತು. ಇದರಿಂದ ಬಾನು ಅವರಿಗೆ ಮತ್ತು ಸರ್ಕಾರದ ನಿರ್ಧಾರಕ್ಕೆ ಆನೆಬಲ ಬಂದಿತು. ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆದ ಸಂದರ್ಭದಲ್ಲಿ ಅರ್ಜಿದಾರರ ಪರ ವಕೀಲರಿಗೆ ನ್ಯಾಯಾಧೀಶರು, ನೀವು ಸಂವಿಧಾದನ ಪ್ರಸ್ತಾವನೆಯನ್ನು ಓದಿದ್ದೀರೋ ಇಲ್ಲವೋ? ಎಂದು ತರಾಟೆಗೆ ತೆಗೆದುಕೊಂಡು ಈ ಅರ್ಜಿ ವಿಚಾರಣೆಗೆ ಯೋಗ್ಯವಲ್ಲ ಎಂದು ತಳ್ಳಿಹಾಕಿದ್ದರು.

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿದ್ದಕ್ಕೆ ಇಷ್ಟೊಂದು ವಿರೋಧ ವ್ಯಕ್ತಪಡಿಸುವ ಅಗತ್ಯ ಇತ್ತೆ ಎಂಬ ಪ್ರಶ್ನೆಯೊಂದಿಗೆ ವಿರೋಧಿಸುತ್ತಿದ್ದವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ದಸರಾ ಸಾಂಸ್ಕೃತಿಕ ಉತ್ಸವ. ಇದು ಸಾಹಿತ್ಯ, ಸಂಗೀತ, ನಾಟ್ಯ, ಜಾನಪದ ಕಲೆ, ನಾಟಕೋತ್ಸವ,ಯುವಜನರ ಎದೆಯಲ್ಲಿ ಹರ್ಷೋಲ್ಲಾಸ ಮೂಡಿಸುವ ಯುವ ಸಂಭ್ರಮ, ಯುವ ದಸರಾ ಇತ್ಯಾದಿ ಕಲಾ ಪ್ರತಿಭೆಗಳ ಸಂಗಮವೂ ಹೌದು. ಇಂತಹ ಜನಪರ ಹಬ್ಬವನ್ನು ಜಾತಿ, ಮತ, ಧರ್ಮ, ವರ್ಗಭೇದ ಇಲ್ಲದೆ ಎಲ್ಲರೂ ಒಟ್ಟಾಗಿ ಆಚರಿಸುವುದರಲ್ಲಿ ನಿಜವಾದ ಪ್ರಜಾತಂತ್ರದ ಸೊಗಡು ಇದೆ. ಮುಖ್ಯವಾಗಿ ಸಂವಿಧಾನದಲ್ಲಿ ಯಾವುದೇ ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮಗಳನ್ನು ಒಂದು ಧರ್ಮಕ್ಕೆ ಸೀಮಿತವಾಗಿ ಮಾಡಬಾರದು ಎಂಬುದನ್ನು ಪ್ರಸ್ತಾಪಿಸಲಾಗಿದೆ. ಹಾಗಾಗಿ ಇದಕ್ಕೆ ವಿರೋಧ ವ್ಯಕ್ತಪಡಿಸುವುದು ಸಂವಿಧಾನವನ್ನು ವಿರೋಧಿಸಿದಂತೆ ಎಂಬುದು ಗಮನಿಸಬೇಕಾದ ಅಂಶ.

ಮೈಸೂರು ಸಂಸ್ಥಾನವನ್ನು ಆಳ್ವಿಕೆ ಮಾಡಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ೧೯೨೭ರಲ್ಲಿ ನಡೆದ ದಸರಾ ಹಬ್ಬದ ಜಂಬೂಸವಾರಿಯಲ್ಲಿ ಅಂದಿನ ದಿವಾನರಾಗಿದ್ದ ಮಿರ್ಜಾ ಮೊಹಮ್ಮದ್ ಇಸ್ಮಾಯಿಲ್ ಅವರನ್ನು ತಮ್ಮ ಜೊತೆಗೆ ಅಂಬಾರಿಯಲ್ಲಿ ಕೂರಿಸಿಕೊಂಡು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಅದಕ್ಕೆ ಕೆಲವರಿಂದ ವಿರೋಧ ವ್ಯಕ್ತವಾಗಿತ್ತು. ಆದರೆ, ನಾಲ್ವಡಿ, ಅದರ ಮುಂದಿನ ವರ್ಷವೂ ಮಿರ್ಜಾ ಅವರನ್ನು ಅಂಬಾರಿಯಲ್ಲಿ ಜೊತೆಗೆ ಕರೆದೊಯ್ದರು. ಹೀಗಿರುವಾಗ ವರ್ಷಕ್ಕೊಮ್ಮೆ ಬರುವ ದಸರಾ ಹಬ್ಬವು ಸೌಹಾರ್ದತೆಯನ್ನು ಇಮ್ಮ ಡಿಸಬೇಕೇ ಹೊರತು , ದ್ವೇಷ, ಸೇಡು, ರಾಜಕೀಯಕ್ಕೆ ವೇದಿಕೆಯಾಗಬಾರದು. ಇದು ಪಕ್ಷಾತೀತವಾಗಿ, ಧರ್ಮಾತೀತವಾಗಿ ಎಲ್ಲ ನಾಯಕರೂ ಒಗ್ಗೂಡಿ ನಡೆಸ ಬೇಕಾದ ಸಾಂಸ್ಕೃತಿಕ ಹಬ್ಬ ಎಂಬುದನ್ನು ಮರೆಯಬಾರದು. ಕವಿ ಕುವೆಂಪು ಅವರು ನಾಡಗೀತೆಯಲ್ಲಿ ಹೇಳಿದಂತೆ ಕರ್ನಾಟಕ ಸರ್ವಜನಾಂಗದ ಶಾಂತಿಯ ತೋಟವಾಗುವ ನಿಟ್ಟಿನಲ್ಲಿ ಪ್ರತಿಯೊಬ್ಬರ ನಾಗರಿಕ, ಎಲ್ಲ ರಾಜಕೀಯ ನಾಯಕರೂ ಚಿಂತಿಸಿ, ಒಗ್ಗಟ್ಟಿನಿಂದ ಹೆಜ್ಜೆ ಹಾಕಬೇಕು.

” ಬಾನು ಮುಷ್ತಾಕ್ ಅವರು ದಸರಾ ಉದ್ಘಾಟಿಸಬಾರದು ಎಂದು ಆಗ್ರಹಿಸಿ ಕೆಲ ಸಂಘಟನೆಗಳು ಚಾಮುಂಡಿಬೆಟ್ಟ ಚಲೋ ಕೂಡ ಹಮ್ಮಿಕೊಳ್ಳಲು ಮುಂದಾಗಿದ್ದು, ಪೊಲೀಸರು ಅನುಮತಿ ನೀಡದ ಹಿನ್ನೆಲೆಯಲ್ಲಿ ಅದು ವಿಫಲ ವಾಯಿತು. ಯಾವಾಗ ಬಾನು ಅವರನ್ನು ವಿರೋಧಿಸಿ ಪ್ರತಿಭಟನೆಗಳು ಶುರುವಾದವೋ, ಆಗ ಅವರ ಪರ ಕೂಡ ಕೆಲ ಸಂಘಟನೆಗಳು ನಿಂತಿದ್ದು ಸರ್ವವೇದ್ಯ ಸಂಗತಿ. ರಾಜ್ಯ ಸರ್ಕಾರ ಮಾತ್ರ ಈ ವಿಷಯದಲ್ಲಿ ತನ್ನ ನಿಲುವಿನಿಂದ ಹಿಂದೆ ಸರಿಯದಿರುವುದು ಮೆಚ್ಚಬೇಕಾದ ದಿಟ್ಟ ನಿಲುವು”

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ಚಾ.ಬೆಟ್ಟದ ತಪ್ಪಲಿನಲ್ಲಿ ಬೆಂಕಿ : ಕಿಡಿಗೇಡಿಗಳ ಕೃತ್ಯಕ್ಕೆ ಸಸ್ಯ ಸಂಕುಲ ಹಾನಿ

ಮೈಸೂರು:  ಕಿಡಿಗೇಡಿಗಳು ಬೆಂಕಿ ಹಚ್ಚಿದ ಕೃತ್ಯಕ್ಕೆ ಚಾಮುಂಡಿಬೆಟ್ಟದ ತಪ್ಪಲಿನ ಕೆಲವು ಪ್ರದೇಶ ಹೊತ್ತಿ‌ಉರಿದಿದ್ದು,ಕೆಲಕಾಲ‌ ಆತಂಕ‌ ನಿರ್ಮಾಣವಾಗಿತ್ತು. ಚಾಮುಂಡಿಬೆಟ್ಟದ ತಪ್ಪಲಿನ ರಿಂಗ್…

2 hours ago

ಮೈಸೂರು | ಅಪೋಲೋ ಆಸ್ಪತ್ರೆಯಲ್ಲಿ ರೋಬೊಟಿಕ್‌ ಶಸ್ತ್ರಚಿಕಿತ್ಸೆ ಸೌಲಭ್ಯ

ಮೈಸೂರು : ನಗರದ ಅಪೋಲೋ ಬಿಜಿಎಸ್ ಆಸ್ಪತ್ರೆಯು ಮೈಸೂರಿನಲ್ಲಿ ಮೊದಲ ಸಮಗ್ರ ರೋಬೋಟಿಕ್ ಶಸ್ತ್ರಚಿಕಿತ್ಸೆಯನ್ನು ಆರಂಭಿಸಿದೆ. ಇದು ಈ ವ್ಯಾಪ್ತಿಯಲ್ಲಿ…

3 hours ago

ಆವಿಷ್ಕಾರ,ವಿಜ್ಞಾನ, ತಂತ್ರಜ್ಞಾನದ ಬಗ್ಗೆ ರೈತರಿಗೆ ಅರಿವು ಮೂಡಿಸಿ : ಎನ್.ಚಲುವರಾಯಸ್ವಾಮಿ

ಬೆಂಗಳೂರು : ಕೃಷಿ ಹಾಗೂ ಜಲಾನಯನ ಇಲಾಖೆ ವತಿಯಿಂದ ಕೈಗೊಳ್ಳಲಾಗಿರುವ ಎಲ್ಲಾ ಕಾಮಗಾರಿಗಳನ್ನು ಗುಣಮಟ್ಟದೊಂದಿಗೆ ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಕೃಷಿ ಸಚಿವರಾದ…

4 hours ago

ಬಜೆಟ್ ಘೋಷಣೆಯಂತೆ ಚಾಲುಕ್ಯ ಉತ್ಸವದ ಆಯೋಜನೆ : ಮುಖ್ಯಮಂತ್ರಿ ಸಿದ್ದರಾಮಯ್ಯ

ಬಾಗಲಕೋಟೆ : 2025-26ರ ಬಜೆಟ್ ನಲ್ಲಿ ಮಾಡಿದ ಘೋಷಣೆಯಂತೆ ಬಾದಾಮಿಯ ಐತಿಹಾಸಿಕ ಪರಂಪರೆಯನ್ನು ಸಾರುವ ಚಾಲುಕ್ಯ ಉತ್ಸವವಕ್ಕೆ ಚಾಲನೇ ನೀಡಲು…

4 hours ago

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್‌ ಅವಿರೋಧ ಆಯ್ಕೆ

ಹೊಸದಿಲ್ಲಿ : ನಿರೀಕ್ಷೆಯಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಬಿಹಾರ ಮೂಲದ ನಿತಿನ್ ನಬಿನ್ ಅವರು ಸೋಮವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ…

4 hours ago

ವಿಡಿಯೋ ವೈರಲ್‌ ಬೆನ್ನಲ್ಲೇ ಡಿಜಿಪಿ ರಾಮಚಂದ್ರರಾವ್‌ ಅಜ್ಞಾತ ಸ್ಥಳಕ್ಕೆ

ಬೆಂಗಳೂರು : ಡಿಜಿಪಿ ರಾಮಚಂದ್ರರಾವ್‌ ಅವರ ರಾಸಲೀಲೆ ವಿಡಿಯೋ ವೈರಲ್ ಆಗಿದೆ. ಈ ಬೆನ್ನಲ್ಲೇ ಡಿಜಿಪಿ ರಾವ್‌ ಅವರು ಹತ್ತು…

5 hours ago