ದೆಹಲಿ ಕಣ್ಣೋಟ
ಶಿವಾಜಿ ಗಣೇಶನ್
ಮನಮೋಹನ್ ಸಿಂಗ್ ಅಧಿಕಾರದ ಹಿನ್ನೋಟ-ಮುನ್ನೋಟ ಎಪ್ಪತ್ತು ಮತ್ತು ಎಂಬತ್ತರ ದಶಕದಲ್ಲಿ ಶ್ರೀಮಂತರನ್ನು ಹೊರತುಪಡಿಸಿದರೆ ಬಹುತೇಕ ಜನರ ಬಳಿ ದುಡಿಮೆಗೆ ತಕ್ಕಂತೆ ಕೈಯಲ್ಲಿ ಕಾಸು ಓಡಾಡುತ್ತಿರಲಿಲ್ಲ. ಎಲ್ಲವೂ ತುಟ್ಟಿ. ಬೇಕಾದುದನ್ನು ಕೊಂಡುಕೊಳ್ಳುವ ಶಕ್ತಿಯೂ ಇರಲಿಲ್ಲ. ಬೇಕೆನಿಸಿದ್ದೆಲ್ಲವೂ ಸಿಗುತ್ತಿರಲಿಲ್ಲ. ನಮ್ಮ ದೇಶದ ಆಂತರಿಕ ಉತ್ಪನ್ನ ಅಷ್ಟಕಷ್ಟೆ ಎನ್ನುವಂತಾಗಿತ್ತು. ಮನೆಗೆ ಅಡುಗೆ ಗ್ಯಾಸ್, ಟೆಲಿಫೋನ್ ಸಂಪರ್ಕ ಪಡೆಯಲು ವರ್ಷಗಟ್ಟಲೆ ಕಾಯಬೇಕಾಗುತ್ತಿತ್ತು. ಹಾಗೆಯೇ ಒಂದು ಮೋಟಾರ್ ಬೈಕ್ ತೆಗೆದುಕೊಳ್ಳುವುದು ಸುಲಭವಿರಲಿಲ್ಲ. ಇನ್ನು ಕಾರು ಕೊಂಡು ಕೊಳ್ಳುವುದು ಕೇವಲ ಶ್ರೀಮಂತರಿಗಷ್ಟೇ ಸಾಧ್ಯವಿದ್ದ ದುರ್ದಿನಗಳು. ಇಷ್ಟೇ ಅಲ್ಲ ಒಂದು ನಿವೇಶನ ಕೊಂಡು ಕೊಳ್ಳುವುದು ಮತ್ತು ಮನೆ ಕಟ್ಟುವುದು ಕೂಡ ಅಷ್ಟೇ ಕಷ್ಟವಾಗಿತ್ತು. ಬ್ಯಾಂಕುಗಳು ನಿವೇಶನ ಕೊಳ್ಳಲು ಮತ್ತು ಮನೆ ಕಟ್ಟಲು ಸಾಲ ಕೊಡುತ್ತಿರಲಿಲ್ಲ. ಅವುಗಳದ್ದನೇನಿದ್ದರೂ ಹಣಕಾಸು ವ್ಯವಹಾರವಷ್ಟೇ. ಗೃಹ ನಿರ್ಮಾಣ ಸಹಕಾರ ಸಂಘಗಳು ಮನೆ ಕಟ್ಟಿಕೊಳ್ಳಲು ಶೇ.೧೫ಕ್ಕಿಂತ ಹೆಚ್ಚಿನ ಬಡ್ಡಿ ದರದಲ್ಲಿ ತನ್ನ ಸದಸ್ಯರಿಗೆ ಮಾತ್ರ ಸಾಲ ನೀಡುತ್ತಿದ್ದವು. ಬಡವರಿಗೆ ಮಾತ್ರವಲ್ಲ ಮಧ್ಯಮ ವರ್ಗದವರಿಗೂ ಮೇಲೆ ಹೇಳಿದ ಎಲ್ಲವನ್ನೂ ತಮ್ಮದನ್ನಾಗಿಸಿಕೊಳ್ಳುವುದು ಕನಸಿನ ಮಾತಾಗಿತ್ತು. ಇದು ಎಂಬತ್ತರ ದಶಕದವರೆಗಿನ ನಮ್ಮ ಆರ್ಥಿಕ ಪರಿಸ್ಥಿತಿ.
ಈಗ ಮನಸ್ಸಿದ್ದರೆ ಮತ್ತು ಆರ್ಥಿಕ ಸಂಪನ್ಮೂಲವಿದ್ದರೆ ಮೇಲೆ ಹೇಳಿದ ಎಲ್ಲವನ್ನೂ ಕ್ಷಣ ಮಾತ್ರದಲ್ಲಿ ಪಡೆಯಬಹುದು. ಇದು ಭಾರತದಲ್ಲಿ ಮಾತ್ರವಲ್ಲ ಮೂರನೇ ವಿಶ್ವದ ದೇಶಗಳಲ್ಲಿನ ಬದಲಾದ ಆರ್ಥಿಕ ಪರಿಸ್ಥಿತಿ. ಈ ಬದಲಾವಣೆಯಿಂದ ಭಾರತದಂತಹ ಜನಬಾಹುಳ್ಯ ರಾಷ್ಟ್ರವು ಕೂಡ ಬಲಿಷ್ಠ ರಾಷ್ಟ್ರಗಳೆನಿಸಿದ ಅಮೆರಿಕ, ರಷ್ಯಾ, ಜಪಾನ್ ಮತ್ತು ಚೀನಾ ದೇಶಗಳೊಡನೆ ವ್ಯಾಪಾರ ವಹಿವಾಟು, ಶಿಕ್ಷಣ, ತಂತ್ರಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಪೈಪೋಟಿ ನೀಡಲು ಸಾಧ್ಯವಿದೆ. ಅಷ್ಟರಮಟ್ಟಿಗೆ ನಮ್ಮ ಆರ್ಥಿಕ ಪರಿಸ್ಥಿತಿ ಬಲಗೊಳ್ಳುತ್ತಿದೆ. ಇನ್ನೂ ನಮ್ಮನ್ನು ಕಾಡುತ್ತಿರುವ ನಿರುದ್ಯೋಗ ಮತ್ತು ಬಡತನದ ನಡುವೆಯೂ ಜನರ ಕೈಯಲ್ಲಿ ಕಾಸು ಓಡಾಡುತ್ತಿದೆ. ಹಳ್ಳಿಗಳು ಸೇರಿದಂತೆ ನಗರಗಳ ಮಧ್ಯಮ ವರ್ಗದ ಜನರ ಮನೆಗಳಲ್ಲಿ ಸ್ಕೂಟರ್, ಬೈಕ್ ಇಲ್ಲದೇ ಇಲ್ಲ. ಕಾರುಗಳನ್ನು ಕೂಡ ಈಗ ಅನೇಕ ಮನೆಗಳಲ್ಲಿ ಕಾಣಬಹುದಾಗಿದೆ. ನಿವೇಶನ ಕೊಳ್ಳಲು ಮತ್ತು ಮನೆಕಟ್ಟಿಕೊಳ್ಳಲು ಬ್ಯಾಂಕುಗಳು ಉದಾರವಾಗಿ ಸಾಲ ನೀಡುತ್ತಿವೆ. ಒಂದು ಕಾಲಕ್ಕೆ ವಿಮಾನ ಆಕಾಶದಲ್ಲಿ ಹಾರಾಡುವುದನ್ನೇ ನೋಡಿ ಖುಷಿ ಪಡುತ್ತಿದ್ದ ಪರಿಸ್ಥಿತಿ ಈಗ ಇಲ್ಲ. ಬಹುತೇಕ ಜನರು ವಿಮಾನ ಪ್ರಯಾಣದ ಅನುಭವವನ್ನು ಪಡೆದಿದ್ದಾರೆ. ವಿಶ್ವಮಟ್ಟದಲ್ಲಾಗುವ ಆರ್ಥಿಕ ನೀತಿಯ ಪ್ರಭಾವ ಎಲ್ಲ ರಾಷ್ಟ್ರಗಳ ಮೇಲಾಗುತ್ತಿದೆ. ಹಾಗಾಗಿಯೇ ಇಂದು ಇಡೀ ವಿಶ್ವವೇ ಒಂದು ಕುಟುಂಬವಾಗಿ ಪರಿವರ್ತನೆ ಆಗುತ್ತಿದೆ. ಈ ಬೆಳವಣಿಗೆಗೆ ಪೂರಕವಾಗಿ ತೊಂಬತ್ತರ ದಶಕದಲ್ಲಿ ದೇಶದಲ್ಲಿ ವಿಶೇಷವಾಗಿ ಕರ್ನಾಟಕ ಮತ್ತು ಆಂಧ್ರ ಪ್ರದೇಶದಲ್ಲಿ ಆದ ಮಾಹಿತಿ ತಂತ್ರಜ್ಞಾನದ ಕೊಡುಗೆ ಅಪಾರವಾಗಿದೆ.
೧೯೯೦ನೇ ವರ್ಷ ದೇಶವನ್ನು ಆರ್ಥಿಕವಾಗಿ ಮತ್ತು ರಾಜಕೀಯವಾಗಿ ದಿವಾಳಿಯತ್ತ ಕೊಂಡೊಯ್ಯುತ್ತಿದ್ದ ದಿನಗಳು. ಆದರೂ ಆ ದಿನಗಳು ನಮ್ಮ ಸಾಮಾಜಿಕ ಬದಲಾವಣೆಯ ದಿಕ್ಸೂಚಿಯೂ ಆಗಿತ್ತು. ೧೯೮೪ರಲ್ಲಿ ಇಂದಿರಾ ಗಾಂಧಿ ಅವರ ಹತ್ಯೆ ನಂತರ ನಡೆದ ಲೋಕಸಭೆ ಚುನಾವಣೆಯಲ್ಲಿ ರಾಜೀವ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ಸಿಗೆ ಹಿಂದೆಂದೂ ಸಿಗದ ಬಹುಮತ ಸಿಕ್ಕಿತ್ತು. ೪೧೪ ಸ್ಥಾನಗಳನ್ನು ಪಡೆದ ರಾಜೀವ್ ಗಾಂಧಿ ಅವರ ಸರ್ಕಾರ ಬೊಫೋರ್ಸ್ ಫಿರಂಗಿ ಖರೀದಿ ಹಗರಣ ಮುಂತಾದ ಆರೋಪಗಳಿಗೆ ಸಿಲುಕಿ ೧೯೮೯ರ ನವೆಂಬರ್ ನಲ್ಲಿ ನಡೆದ ಚುನಾವಣೆಯಲ್ಲಿ ಸೋತಿತು. ರಾಜೀವ್‌ಗಾಂಧಿ ವಿರುದ್ಧ ತೊಡೆತಟ್ಟಿ ಕಾಂಗ್ರೆಸ್ ಬಿಟ್ಟು ಜನಮೋರ್ಚಾ ಪಕ್ಷ ಕಟ್ಟಿ ಚುನಾವಣೆ ಎದುರಿಸಿದ್ದ ವಿಶ್ವನಾಥ್ ಪ್ರತಾಪ್ ಸಿಂಗ್ ಬಿಜೆಪಿ ಬೆಂಬಲದಿಂದ ನ್ಯಾಷನಲ್ ಫ್ರಂಟ್ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿದ್ದರು. ೧೯೭೭ರಲ್ಲಿ ಅಂದಿನ ಜನತಾ ಪಕ್ಷದ ಸರ್ಕಾರದಲ್ಲಿ ನೇಮಕಗೊಂಡಿದ್ದ ಮಂಡಲ್ ಆಯೋಗದ ಮೀಸಲಾತಿ ವರದಿಯನ್ನು ವಿ.ಪಿ.ಸಿಂಗ್ ಸರ್ಕಾರ ೧೯೯೦ರ ಅಗಸ್ಟ್ ೭ರಂದು ಜಾರಿಗೊಳಿಸಿತು. ಹಿಂದುಳಿದ ವರ್ಗಗಳಿಗೆ ನೀಡುವ ಶೇ.೨೭ರಷ್ಟು ಮೀಸಲಾತಿಯನ್ನು ವಿರೋಽಸಿ ಸಂಘ ಪರಿವಾರ ಬೀದಿಗಿಳಿಯಿತು. ಮಂಡಲ್ ವರದಿ ಜಾರಿ ವಿರೋಧಿಸಿ ಅಂದಿನ ಬಿಜೆಪಿಯು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ರಾಮರಥ ಯಾತ್ರೆ ಕೈಗೊಂಡಿತು. ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ರಥಯಾತ್ರೆಯನ್ನು ನ್ಯಾಷನಲ್ ಫ್ರಂಟ್‌ನಲ್ಲಿದ್ದ ಸಮಾಜವಾದಿ ಪಕ್ಷದ ಸರ್ಕಾರ ಉತ್ತರ ಪ್ರದೇಶದಲ್ಲೂ ಮತ್ತು ಜನತಾದಳದ ಸರ್ಕಾರವಿದ್ದ ಬಿಹಾರದಲ್ಲಿ ಲಾಲೂ ಪ್ರಸಾದ್ ಯಾದವ್ ರಥಯಾತ್ರೆ ತಡೆದು ಅಡ್ವಾಣಿ ಮುಂತಾದ ನಾಯಕರನ್ನು ಬಂಧಿಸಲಾಯಿತು.
ಈ ಬಂಧನ ವಿರೋಧಿಸಿ ಬಿಜೆಪಿಯು ಅದೇ ವರ್ಷದ ನವೆಂಬರ್‌ನಲ್ಲಿ ವಿ.ಪಿ.ಸಿಂಗ್ ಸರ್ಕಾರಕ್ಕೆ ನೀಡಿದ್ದ ತನ್ನ ಬೆಂಬಲ ಹಿಂತೆಗೆದುಕೊಂಡಿತು. ಇದರಿಂದ ವಿ.ಪಿ.ಸಿಂಗ್ ಸರ್ಕಾರ ಪತನವಾಯಿತು. ಮತ್ತೆ ಚುನಾವಣೆಗೆ ಹೋಗುವ ಸ್ಥಿತಿ ದೇಶದಲ್ಲಿರಲಿಲ್ಲ. ಆಗ ರಾಷ್ಟ್ರೀಯ ಜನತಾ ಪಕ್ಷದ ನಾಯಕ ಚಂದ್ರಶೇಖರ್ ಅವರಿಗೆ ಬೆಂಬಲ ನೀಡಿದ ಕಾಂಗ್ರೆಸ್ ಮತ್ತೊಂದು ಸರ್ಕಾರವನ್ನು ಅಸ್ತಿತ್ವಕ್ಕೆ ತಂದಿತು. ಮಂಡಲ್ ವರದಿ ಜಾರಿ ವಿರೋಧಿಸಿ ದೇಶದಾದ್ಯಂತ ನಡೆದ ಹೋರಾಟ ಮತ್ತು ರಥ ಯಾತ್ರೆಯಿಂದಾದ ಗಲಭೆಗಳಿಂದ ದೇಶದ ಆರ್ಥ ವ್ಯವಸ್ಥೆ ಕುಸಿದು ಹೋಗಿತ್ತು. ಆಡಳಿತ ನಡೆಸಲು ಆರ್ಥಿಕ ಮುಗ್ಗಟ್ಟನ್ನು ಎದುರಿಸಿದ ಅಂದಿನ ಪ್ರಧಾನಿ ಚಂದ್ರಶೇಖರ್ ಸುಮಾರು ೧೩೦ ಟನ್‌ಗಳಷ್ಟು ಚಿನ್ನವನ್ನು ವಿದೇಶದಲ್ಲಿ ಅಡವಿಟ್ಟು ಆಡಳಿತ ನಡೆಸುವಷ್ಟು ಕಷ್ಟದ ದಿನಗಳಾಗಿತ್ತು. ಕಾಂಗ್ರೆಸ್ ತನ್ನ ರಾಜಕೀಯ ಕಾರಣಕ್ಕಾಗಿ ಕೇವಲ ಏಳು ತಿಂಗಳಲ್ಲಿಯೇ ಚಂದ್ರಶೇಖರ್ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂತೆಗೆದುಕೊಂಡಿದ್ದರಿಂದ ಆ ಸರ್ಕಾರವೂ ಬಿದ್ದು ಹೋಯಿತು.
ಮತ್ತೆ ೧೯೯೧ರಲ್ಲಿ ಲೋಕಸಭೆಗೆ ಚುನಾವಣೆ ಬಂದಿತು. ಚುನಾವಣಾ ಪ್ರಚಾರದ ವೇಳೆ ಮೇ. ೨೧ರಂದು ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಎಲ್‌ಟಿಟಿಇ ಉಗ್ರರಿಂದ ರಾಜೀವ್ ಗಾಂಧಿ ಅವರ ಹತ್ಯೆಯಾಯಿತು. ಆ ಚುನಾವಣೆಯಲ್ಲಿ ಕಾಂಗ್ರೆಸ್ ೨೪೪ ಸ್ಥಾನಗಳನ್ನು ಮಾತ್ರಗಳಿಸಿತು. ಕಾಂಗ್ರೆಸ್ ನೇತೃತ್ವದ ಅಲ್ಪಬಹುಮತದ ಸರ್ಕಾರ ಪಿ.ವಿ.ನರಸಿಂಹರಾವ್ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದಿತು. ಮತ್ತೊಂದು ಚುನಾವಣೆಗೆ ಹೋಗುವ ಸ್ಥಿತಿಯಲ್ಲಿ ದೇಶ ಇರಲಿಲ್ಲ. ಆ ಆರ್ಥಿಕ ದುಸ್ಥಿತಿಯ ದಿನಗಳಲ್ಲಿ ಆರ್ಥಿಕ ವ್ಯವಸ್ಥೆಯನ್ನು ಸರಿದಾರಿಗೆ ತರಲು ಪ್ರಾಮಾಣಿಕ ಮತ್ತು ದಕ್ಷ ಅರ್ಥತಜ್ಞರೇ ಬೇಕಾಗಿತ್ತು. ಆಗ ನರಸಿಂಹರಾವ್ ಅವರ ಕಣ್ಣಿಗೆ ಬಿದ್ದದ್ದು ಡಾ.ಮನಮೋಹನ್ ಸಿಂಗ್. ಹತ್ತಾರು ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದ ಅವರು ಯುಜಿಸಿ ಅಧ್ಯಕ್ಷರಾಗಿದ್ದರು. ಆಗ ನರಸಿಂಹರಾವ್ ಅವರು ಮನಮೋಹನ್ ಸಿಂಗ್ ಅವರನ್ನು ಕರೆದು ಹಣಕಾಸು ಸಚಿವರನ್ನಾಗಿ ಮಾಡಿದರು.
ಈ ನೇಮಕ ರಾಜಕೀಯ ವಲಯದಲ್ಲಿ ವಿಶೇಷವಾಗಿ ಕಾಂಗ್ರೆಸ್ಸಿನಲ್ಲೇ ಅಚ್ಚರಿ ಉಂಟು ಮಾಡಿತು. ಪಕ್ಷದ ಒಳಗೊಳಗೇ ವಿರೋಧವೂ ವ್ಯಕ್ತವಾಗಿತ್ತು. ಪ್ರಧಾನಿ ನರಸಿಂಹರಾವ್ ಹಣಕಾಸು ಸಚಿವರಾದ ಮನಮೋಹನ್ ಸಿಂಗ್ ಅವರಿಗೆ ಮುಕ್ತ ಸ್ವಾತಂತ್ರ್ಯ ನೀಡಿದ್ದರು. ಮನಮೋಹನ್ ಸಿಂಗ್ ಅವರು ಮೊದಲು ಮಾಡಿದ ಕೆಲಸ ಎರಡು ಹಂತದಲ್ಲಿ ರೂಪಾಯಿಯ ಅಪಮೌಲ್ಯ. ನಂತರ ಆ ದಿನಗಳಲ್ಲಿ ವಿಶ್ವ ವಾಣಿಜ್ಯ ಸಂಸ್ಥೆಯ ಜೊತೆ ಮತ್ತು ಗ್ಯಾಟ್ ಒಪ್ಪಂದದ ಚರ್ಚೆ. ರಫ್ತು, ಆಮದು ಮತ್ತು ಉತ್ಪನ್ನಗಳ ಪೇಟೆಂಟ್ ವಿಚಾರ ವ್ಯಾಪಕವಾಗಿ ಚರ್ಚೆ ನಡೆಯುತ್ತಿದ್ದ ದಿನಗಳವು.
ಮುಕ್ತ ಆರ್ಥಿಕ ನೀತಿಯ ಒಪ್ಪಂದಕ್ಕೆ ಸಹಿ ಹಾಕುವ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿತ್ತು. ಇಲ್ಲವಾದರೆ ಭಾರತ ಪ್ರತ್ಯೇಕವಾಗಿ ಉಳಿದುಬಿಡುವ ಸಾಧ್ಯತೆ ಇತ್ತು. ನಷ್ಟದಲ್ಲಿದ್ದ ಸರ್ಕಾರಿ ಉದ್ಯಮಗಳನ್ನು ಸರಿದಾರಿಗೆ ತರಲು ಖಾಸಗಿ ಮತ್ತು ವಿದೇಶಿ ಬಂಡವಾಳವನ್ನು ಆಕರ್ಷಿಸುವ ನೀತಿ ನಿರೂಪಣೆ ಮಾಡಿ ಸಂಬಂಽಸಿದ ಕಾಯ್ದೆಗಳಿಗೆ ತಿದ್ದುಪಡಿ ತಂದು ಸಂಸತ್ತಿನ ಒಪ್ಪಿಗೆ ಪಡೆದರು. ನಷ್ಟದಲ್ಲಿದ್ದ ಸರ್ಕಾರಿ ಉದ್ಯಮಗಳನ್ನು ಗುರುತಿಸಲು ಡಿಸ್ ಇನ್ವೆಸ್ಟ್ ಮೆಂಟ್ ಬೋರ್ಡ್ (ಷೇರು ವಿಕ್ರಯ ಮಂಡಳಿ) ರಚಿಸಲಾಯಿತು. ಅದರ ಶಿಫಾರಸ್ಸಿನಂತೆ ಲಾಭದಲ್ಲಿದ್ದ ಹಲವು ಉದ್ಯಮಗಳನ್ನು ಜಂಟಿ ಒಡೆತನದಿಂದ ನಡೆಸಲು ಮತ್ತು ಕೆಲವನ್ನು ಪೂರ್ಣವಾಗಿ ಖಾಸಗಿ ಒಡೆತನಕ್ಕೆ ನೀಡಲಾಯಿತು. ಸಾವಿರಾರು ಮಂದಿ ಕಾರ್ಮಿಕರು ಕೆಲಸ ಕಳೆದುಕೊಂಡರು . ಗೋಲ್ಡನ್ ಹ್ಯಾಂಡ್ ಶೇಕ್ ಹೆಸರಿನಲ್ಲಿ ನಿರ್ದಿಷ್ಟ ಮೊತ್ತದ ಪರಿಹಾರ ನೀಡಿ ಕಾರ್ಮಿಕರನ್ನು ಅವರವರ ಕೆಲಸದಿಂದ ನಿರ್ಗಮಿಸುವಂತೆ ಮಾಡಲಾಯಿತು. ಬಹುತೇಕ ಕಾರ್ಮಿಕರು ಬೀದಿಪಾಲಾದ ಈ ಕ್ರಮದಿಂದ ನರಸಿಂಹರಾವ್ ಸರ್ಕಾರ ದೇಶದಾದ್ಯಂತ ಪ್ರತಿಭಟನೆ ಎದುರಿಸಬೇಕಾಯಿತು.
ಹಣಕಾಸು ಸಚಿವರ ಈ ನಡೆಯನ್ನು ಕಾಂಗ್ರೆಸ್ ಪಕ್ಷದಲ್ಲಿಯೇ ವಿಶೇಷವಾಗಿ ಸಂಸದರು ಪಕ್ಷದ ವೇದಿಕೆಯಲ್ಲಿ ಪ್ರಬಲವಾಗಿ ವಿರೋಧಿಸಿದರು. ಆಗ ಪ್ರಧಾನಿ ನರಸಿಂಹರಾವ್ ಮತ್ತು ಹಣಕಾಸು ಸಚಿವ ಡಾ. ಮನಮೋಹನ್ ಸಿಂಗ್ ತಂಡ ಪಕ್ಷದ ಸಂಸದರ ಸಭೆ ನಡೆಸಿ ಬದಲಾವಣೆಯ ಕ್ರಮಗಳನ್ನು ವಿವರಿಸಿ ಸಮಾಧಾನ ಮಾಡಬೇಕಾಯಿತು. ಹಣಕಾಸು ಸಚಿವರು ಮಂಡಿಸುತ್ತಾ ಬಂದ ಬಜೆಟ್‌ನಲ್ಲಿ ಮುಕ್ತ ಆರ್ಥಿಕ ನೀತಿಯನ್ನು ನಿರಂತರವಾಗಿ ಜಾರಿ ಮಾಡುವ ಕ್ರಮಗಳನ್ನು ಕೈಗೊಂಡದ್ದು ಈಗ ಇತಿಹಾಸ.
ಆದರೆ ಬಿಜೆಪಿ ನಡೆಸಿದ ಅಯೋಧ್ಯೆ ರಥಯಾತ್ರೆ ತಡೆಯುವಲ್ಲಿ ಮತ್ತು ಬಾಬ್ರಿ ಮಸೀದಿ ನೆಲಸಮವನ್ನು ತಡೆಯುವಲ್ಲಿ ನರಸಿಂಹರಾವ್ ವಿಫಲರಾದರು ಎನ್ನುವುದು ಹೆಚ್ಚು ಪ್ರಚಾರವಾಯಿತು. ಕಾಂಗ್ರೆಸ್ಸಿನ ಬೆಂಬಲಕ್ಕಿದ್ದ ಮುಸ್ಲಿಮರು ಪಕ್ಷದಿಂದ ದೂರ ಸರಿದರು. ಹಾಗಾಗಿ ೧೯೯೬ರ ಚುನಾವಣೆಯಲ್ಲಿ ನರಸಿಂಹರಾವ್ ನೇತೃತ್ವದಲ್ಲಿ ಕಾಂಗ್ರೆಸ್ ಮತ್ತೆ ಬಹುಮತ ಪಡೆಯುವಲ್ಲಿ ವಿಫಲವಾಯಿತು. ಇದು ಪಿ.ವಿ. ನರಸಿಂಹರಾವ್ ಕಾಲದ ಕಥೆ.
೧೯೯೯ರಲ್ಲಿ ಅಧಿಕಾರ ನಡೆಸಿದ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಬಿಜೆಪಿ ಸರ್ಕಾರ ೨೦೦೪ ಲೋಕಸಭೆ ಚುನಾವಣೆಯಲ್ಲಿ ನೆಲ ಕಚ್ಚಿತು. ಆ ವೇಳೆಗಾಗಲೇ ಸೋನಿಯಾ ಗಾಂಧಿ ರಾಜಕೀಯ ಪ್ರವೇಶ ಮಾಡಿ ಕಾಂಗ್ರೆಸ್ ಪಕ್ಷವನ್ನು ತಮ್ಮ ಕೈಗೆ ತೆಗೆದುಕೊಂಡಿದ್ದರು. ೨೦೦೪ರ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಬಹುಮತ ಪಡೆದು ಅಧಿಕಾರ ಹಿಡಿಯಿತು. ಸೋನಿಯಾ ಗಾಂಧಿ ಅವರು ಪ್ರಧಾನಿ ಆಗುವ ದಿನಗಳು ಹತ್ತಿರ ವಾಗುತ್ತಿದ್ದಂತೆ ಬಿಜೆಪಿಯ ಸುಷ್ಮಾ ಸ್ವರಾಜ್ ಮತ್ತು ಕಾಂಗ್ರೆಸ್ಸಿನ ಒಳಗೇ ಶರದ್ ಪವಾರ್, ಪಿ.ಎ. ಸಂಗ್ಮಾ ಮುಂತಾದ ನಾಯಕರು ಸೋನಿಯಾ ಗಾಂಧಿ ವಿದೇಶಿ ಮಹಿಳೆ ಅವರು ಪ್ರಧಾನಿ ಆಗುವುದಕ್ಕೆ ಬಿಡುವುದಿಲ್ಲ ಎಂದು ಬೀದಿ ರಂಪ ಮಾಡಿದರು. ಆಗ ಸೋನಿಯಾ ಅವರಿಗೆ ಯುಪಿಎ ದಲ್ಲಿ ಪೂರ್ಣ ಬೆಂಬಲವಿದ್ದರೂ, ಪ್ರಧಾನಿ ಸ್ಥಾನಕ್ಕೇರುವ ನಿರ್ಧಾರದಿಂದ ಹಿಂದೆ ಸರಿದರು. ಮುಂದೆ ಯಾರನ್ನು ಪ್ರಧಾನಿ ಮಾಡಬೇಕೆನ್ನುವ ತೀರ್ಮಾನವನ್ನು ಸೋನಿಯಾ ಅವರಿಗೇ ಪಕ್ಷ ಬಿಟ್ಟಿತು. ಅವರಿಗೆ ಆಗ ಹೊಳೆದದ್ದು ಡಾ. ಮನಮೋಹನ್ ಸಿಂಗ್.
ಡಾ.ಮನಮೋಹನ್ ಸಿಂಗ್ ಅಕ್ಷಿಡೆಂಟಲ್ ಪ್ರೈಮಿನಿಸ್ಟರ್ ಆದರು. ೨೦೦೪ರ ಮೇ ೨೨ರಂದು ಅವರು ಪ್ರಧಾನಿಯಾಗಿ ಅಧಿಕಾರಕ್ಕೆ ಬಂದರು. ಎಂದಿನಂತೆ ತಮ್ಮ ಮುಕ್ತ ಆರ್ಥಿಕ ನೀತಿಯನ್ನು ಮುಂದುವರಿಸಿದರು. ಆದರೂ, ಅವರು ತಮ್ಮ ಅಧಿಕಾರಾವಧಿಯಲ್ಲಿ ಹಳ್ಳಿಗಳಲ್ಲಿ ದುಡಿಯುವ ಜನರಿಗೆ ವರ್ಷದಲ್ಲಿ ೧೦೦ ದಿನವಾದರೂ ಕೆಲಸ ಸಿಗುವಂತೆ ಮಹಾತ್ಮ ಗಾಂಧಿ ನರೇಗ ಯೋಜನೆ, ಹಸಿವಿನಿಂದ ಯಾರೂ ಸಾಯಬಾರದೆನ್ನುವ ಉದ್ದೇಶದಿಂದ ಆಹಾರ ಭದ್ರತೆ ಕಾಯ್ದೆ, ಬಡಮಕ್ಕಳು ಕೂಡ ಉನ್ನತ ಖಾಸಗಿ ಶಾಲೆಗಳಲ್ಲಿ ವ್ಯಾಸಂಗ ಮಾಡಲು ಅನುಕೂಲವಾಗುವಂತೆ ಶಿಕ್ಷಣ ಹಕ್ಕು, ಸರ್ಕಾರದ ಆಡಳಿತ ಪಾರದರ್ಶಕವಾಗಿರಬೇಕೆನ್ನುವ ಕಾರಣಕ್ಕೆ ಮಾಹಿತಿ ಹಕ್ಕು ಮುಂತಾದ ಜನಪರ ಯೋಜನೆಗಳನ್ನು ಜಾರಿಗೆ ತಂದರು. ಈ ಯೋಜನೆಗಳ ಹಿಂದೆ ಸೋನಿಯಾ ಗಾಂಧಿ ಅವರ ಆಸಕ್ತಿ ಇತ್ತೆನ್ನುವುದು ಬಹಿರಂಗ ಸತ್ಯ.
ಡಾ.ಮನಮೋಹನ್ ಸಿಂಗ್ ಅವರ ಆಡಳಿತವನ್ನು ಮೆಚ್ಚಿ ಜನರು ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಾಗಲೂ ಪುನಃ ಎರಡನೇ ಅವಧಿಗೂ ಅವರನ್ನೇ ಪ್ರಧಾನ ಮಂತ್ರಿಯನ್ನಾಗಿ ಮುಂದುವರಿಸಿದ್ದು ಅವರ ಆಡಳಿತ ಮತ್ತು ಪ್ರಾಮಾಣಿಕತೆ ಹಾಗೂ ದಕ್ಷತೆಗೆ ಸಿಕ್ಕ ಜಯ. ಆದರೆ ಅವರ ಈ ಆಡಳಿತದ ನಡುವೆಯೂ ೨ ಜಿ ಹಗರಣ ಮತ್ತು ಕಾಮನ್ ವೆಲ್ತ್ ಗೇಮ್ಸ್ ಹಗರಣಗಳು ಸರ್ಕಾರದ ಆಡಳಿತಕ್ಕೆ ಕಪ್ಪು ಚುಕ್ಕೆ ತಂದವು.
” ಮನಮೋಹನ್ ಸಿಂಗ್ ಅವರು ಹಣಕಾಸು ಸಚಿವ ಮತ್ತು ಪ್ರಧಾನಿಯಾಗಿ ಆಡಳಿತ ನಡೆಸಿದರೇ ಹೊರತು ಪಕ್ಷ ರಾಜಕಾರಣ ಮಾಡಲಿಲ್ಲ. ಅದನ್ನು ನರಸಿಂಹರಾವ್ ಮತ್ತು ಸೋನಿಯಾ ಗಾಂಧಿ ಅವರಿಗೆ ಬಿಟ್ಟುಕೊಟ್ಟದ್ದರಿಂದ ಕೊನೆಗೂ ಡಾ. ಮನಮೋಹನ್ ಸಿಂಗ್ ಪ್ರಾಮಾಣಿಕ, ದಕ್ಷ ಅರ್ಥತಜ್ಞರಾಗಿ ದೇಶವನ್ನು ಮುನ್ನಡೆಸಿದರೆನ್ನುವ ಕೀರ್ತಿ ಶಾಶ್ವತವಾಗಿ ಉಳಿಯಿತು. ಅಪರೂಪದ ಒಬ್ಬ ಪ್ರಾಮಾಣಿಕ ಮತ್ತು ದೂರದೃಷ್ಟಿಯ ನಾಯಕ ಈಗ ನೆನಪು ಮಾತ್ರ.”
ಮೈಸೂರಿನ ಜಯನಗರದ ಇಸ್ಕಾನ್ ಕೃಷ್ಣ ದೇವಾಲಯ ರಸ್ತೆಯ ಪಕ್ಕದಲ್ಲಿ ತ್ಯಾಜ್ಯ ವಸ್ತುಗಳ ರಾಶಿ ಬಿದ್ದಿದೆ. ಕೆಲವರು ರಸ್ತೆಯಲ್ಲೇ ಮೂತ್ರ ವಿಸರ್ಜನೆ…
ವೈಡ್ ಆಂಗಲ್ ಬಾ.ನಾ.ಸುಬ್ರಹ್ಮಣ್ಯ ವರ್ಷದ ಕೊನೆಯ ವಾರ ತೆರೆಗೆ ಬಂದಿರುವ ಚಿತ್ರಗಳಲ್ಲಿ ಒಂದು ‘ಮಾರ್ಕ್’. ಚಿತ್ರದ ಮುಖ್ಯ ಪಾತ್ರ ಮಾರ್ಕಾಂಡೇಯ…
2025ರಲ್ಲಿ ವಿಧಿವಶರಾದ ಗಣ್ಯರ ಮಾಹಿತಿ ಜನವರಿ... ನಾ.ಡಿಸೋ’ಜಾ: ಕನ್ನಡದ ಪ್ರಸಿದ್ಧ ಬರಹಗಾರ ಮತ್ತು ಕಾದಂಬರಿಕಾರ ನಾ ಡಿ’ಸೋಜಾ ಅವರು ಜನವರಿ…
ಎಚ್.ಎಸ್.ದಿನೇಶ್‌ಕುಮಾರ್ ಮೈಸೂರು: ಸರ್ಕಾರಿ ಕಚೇರಿಯಲ್ಲಿ ಕೆಲಸ ನಿರ್ವಹಿಸುವವರು ಎಚ್ಚರಿಕೆ ವಹಿಸಿದಲ್ಲಿ ನಡೆಯ ಬಹುದಾದ ವಂಚನೆಗಳನ್ನು ಹೇಗೆ ತಪ್ಪಿಸಬಹುದು ಎಂಬುದಕ್ಕೆ ವಿಧಾನಪರಿಷತ್…
ಮೈಸೂರು : ಪ್ರವಾಸಿಗರ ದಂಡೇ ನೆರೆಯುತ್ತಿದ್ದ ಸ್ಥಳದಲ್ಲೇ ಹೀಲಿಯಂ ಬಲೂನ್‌ಗಾಗಿ ಬಳಸುತ್ತಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ,…
ಕೆ.ಆರ್.ಪೇಟೆ : ರಸ್ತೆಯಲ್ಲಿ ರಾಗಿ ಒಕ್ಕಣೆ ಮಾಡುತ್ತಿದ್ದ ಸಂದರ್ಭದಲ್ಲಿ ರಾಗಿಯ ಮೇಲೆ ಕಾರು ಚಲಿಸಿದಾಗ ಕಾರು ಮಗುಚಿ ಬಿದ್ದ ಪರಿಣಾಮ…